“ಇದು ಮಾತಿನ ಕವಿತೆ. ಮಾತಿನ ಕಥೆ. ಮಾತಿನ ಭಾವ-ಭಾಷ್ಯಗಳ ನಿತ್ಯ ಸತ್ಯಗೀತೆ. ದುರ್ಯೋಧನನ ಕಟು ಮಾತುಗಳಿಂದ ಮಹಾಭಾರತ. ಮಂಥರೆಯ ಕಹಿ ಮಾತಿನಿಂದ ರಾಮಾಯಣ. ಬದುಕು-ಬೆಳಕು-ಬಂಧ-ಆನಂದ-ಆಕ್ರಂದ ಎಲ್ಲಕೂ ಮಾತೇ ಕಾರಣ. ಮಾತೇ ಪ್ರೇರಣ. ಮಾತು-ಮೌನಗಳ ಸೂಕ್ತ ಸಮಯೋಚಿತ ಬಳಕೆ ಅರಿತರಷ್ಟೇ ಬಾಳು ನಂದನ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಸಿಹಿಯಿದ್ದರೆ ಮಾತುಗಳಿಂದ ಸಂವಹನ
ಕಹಿಯಿದ್ದರೆ ಮಾತುಗಳಿಂದಲೇ ದಹನ
ಮಾತುಗಳಿಂದ ಜೀವಜೀವದಾಕರ್ಷಣೆ
ಮಾತುಗಳಿಂದಲೇ ಭಾವಬಂಧ ವಿಕರ್ಷಣೆ.!
ಮಾತುಗಳಿಂದ ವಾದ ಸಂವಾದ ಹಾಸ
ಮಾತುಗಳಿಂದಲೇ ವಾಗ್ವಾದ ವಿವಾದ ತ್ರಾಸ
ಮಾತುಗಳಿಂದ ಮುಕ್ತ ಸಮಾಲೋಚನೆ
ಮಾತುಗಳಿಂದಲೇ ಗುಪ್ತ ಸಂಘರ್ಷಣೆ.!
ಮಾತುಗಳೇ ಮೌನ ಮುನಿಸಿಗೆ ಕಾರಣ
ಮಾತುಗಳಿಂದಲೇ ಮೌನ ಮುನಿಸ ಹರಣ
ಮಾತುಗಳಿಂದ ಬಂಧ ಬಾಂಧವ್ಯ ಬಂಧನ
ಮಾತುಗಳಿಂದಲೇ ಸಂಭಂದಗಳ ಛೇದನ.!
ಮಾತುಗಳಿಂದ ಸಂತಸ ಸಂಭ್ರಮ ಮಾಯೆ
ಮಾತುಗಳಿಂದಲೇ ಸಂಕಟ ಸೂತಕ ಛಾಯೆ
ಮಾತುಗಳಿಂದ ಸ್ಫೂರ್ತಿ ದೀಪ್ತಿ ಕೀರ್ತಿ
ಮಾತುಗಳಿಂದಲೇ ಭುಕ್ತಿ ನಿಯುಕ್ತಿ ಅಪಕೀರ್ತಿ.!
ಮಾತಿನಿಂದಲೇ ಅರಳುವುದು ಒಳಬೆಳಕು
ಮಾತಿನಿಂದಲೇ ನರಳುವುದು ಹೊರಬದುಕು
ನುಡಿವ ಮೊದಲು ಯೋಚಿಸಬೇಕು ಎದಕು
ಬೆಲೆಯಿಹುದು ಬಳಸುವ ಪ್ರತಿ ಪದ ಪದಕು.!
ಹಿತ ಮಿತ ಪಥ್ಯ ಮಾತು ಆನಂದಮಯ
ಅನವಶ್ಯ ಅನಗತ್ಯ ಅಪಥ್ಯ ಮಾತು ಅಪಾಯ
ಅರಿಯಬೇಕು ಮಾತು ಮೌನಗಳ ಮೌಲ್ಯ
ಅಲ್ಪವಿರಾಮ, ಪೂರ್ಣವಿರಾಮಗಳ ಸಮಯ.!
ಕಾಲ ಸರಿದರೂ ನಿಲ್ಲುವುದು ಆಡಿದ ಮಾತು
ಸರಿ ಹೋಗದು ಹರಿದರೊಮ್ಮೆ ಭಾವತಂತು.!
ಮಾತಿನೀಟಿ ಮಾಡಿದರೊಮ್ಮೆ ಎದೆಯ ತೂತು
ವಾಸಿಯಾಗದು ಸಂಜೀವಿನಿ ತಂದರೂ ಹೊತ್ತು.!
- ಎ.ಎನ್.ರಮೇಶ್. ಗುಬ್ಬಿ- ನಾಟಕಕಾರರು, ಲೇಖಕರು, ಕವಿಗಳು, ಕೈಗಾ.
