ಕ್ಷಮೆ ಎಂಬುದು ಕೇಳುವುದಕ್ಕೆ, ತಿಳಿಸುವುದಕ್ಕೆ ಎಷ್ಟು ಸುಲಭವೆನಿಸಿದರೂ ಅದು ತುಟಿಗಳ ಕೊನೆಯಿಂದ ಬರುವ ಮಾತುಗಳಂಥಲ್ಲಾ, ಹೃದಯಾಂತರಾಳದಿಂದ ಬರಬೇಕು, ಕ್ಷಮೆಯ ಮಹತ್ವದ ಕುರಿತು ಪವಿತ್ರ. ಹೆಚ್. ಆರ್ ಅವರು ಬರೆದಿರುವ ಲೇಖನವನ್ನು ತಪ್ಪದೆ ಮುಂದೆ ಓದಿ…
ಒಂದು ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಓರ್ವ ಯುವಕ ತಂದೆಯೊಂದಿಗೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿದನು, ಮಾತನಾಡುವುದನ್ನು ಸಹ ನಿಲ್ಲಿಸಿದನು, ಇದಾಗಿ ಎರಡು ವರ್ಷಗಳೇ ಕಳೆದರೂ ಆತನ ನಿರ್ಧಾರದಲ್ಲಿ ಬದಲಾವಣೆ ಕಂಡು ಬರದಿದ್ದಾಗ ತಂದೆಯೇ ಮಗನ ಕೈಗಳನ್ನು ಹಿಡಿದು ಕೊಂಡು ಬೇಡಿಕೊಂಡರು, ಆದರೂ ಮಗನ ಮನಸ್ಸು ಕರಗಲೇ ಇಲ್ಲ. ತಾಯಿಯು ಸಹ ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದರು ಆಗ ಆ ಯುವಕ ತಂದೆಯ ಹತ್ತಿರ ಒಲ್ಲದ ಮನಸ್ಸಿನಿಂದ ಒಂದೇರಡು ಮಾತನಾಡುತ್ತಿದ್ದಾ. ಅನಂತರ ಒಂದು ವಾರದಲ್ಲೇ ಮಗ ವಿದೇಶಕ್ಕೆ ಹೊರಟು ಹೋದನು. ಮನೆಯಿಂದ ದೂರ ಇದ್ದಾಗ ಮೇಲಿಂದ ಮೇಲೆ ಹೆತ್ತವರ ವಿಷಯ ನೆನಪಾಗುತ್ತಿತ್ತು. ತಂದೆಯ ಬಗ್ಗೆ ತಾನೆಷ್ಟು ನಿರ್ದಾಕ್ಷಿಣ್ಯವಾಗಿ ವರ್ತಿಸಿದೆ ಎಂಬುದನ್ನು ನೆನದು ಬೇಸರಪಟ್ಟು ಕೊಳ್ಳುತ್ತಿದ್ದನು, ಈ ಸಾರಿ ಊರಿಗೆ ಹೋದಾಗ ತಂದೆಯಲ್ಲಿ “ಸಾರಿ” ಕೇಳಬೇಕೆಂದುಕೊಂಡನು ಹೋದಾಗ ಮತ್ತೆ ಅಹಂ ಅಡ್ಡ ಬರುತ್ತಿತ್ತು. ಕ್ಷಮೆ ಕೇಳದೆ ವಾಪಸ್ಸು ಮತ್ತೆ ವಿದೇಶಕ್ಕೆ ಹಿಂತಿರುಗುತ್ತಿದ್ದನು ಇದೆ ರೀತಿ ಹನ್ನೆರಡು ವರ್ಷಗಳು ಕಳೆದವು. ಒಂದು ದಿನ ತಂದೆ ನಿಧನರಾದರೆಂಬ ಫೋನ್ ಕರೆಬಂತು ಆಗ ತಂದೆಯ ಅಂತಿಮ ಕಾರ್ಯಕೆ ಸ್ವಗ್ರಾಮಕ್ಕೆ ಬಂದ ಆ ಯುವಕ ತಂದೆಯ ಪಾದದ ಬಳಿ ತಲೆಯಿಟ್ಟು ಕ್ಷಮಿಸುವಂತೆ ಬಿಕ್ಕಿ ಬಿಕ್ಕಿ ಅಳತೊಡಗಿದನು. ಆದರೆ ಏನು ಪ್ರಯೋಜನ ಕ್ಷಮಿಸಿದ್ದೇನೆ ಎಂದು ತಲೆನೆವರಿಸಿ ಹತ್ತಿರ ಸೆಳೆದುಕೊಳ್ಳಲು ಅಲ್ಲಿ ತಂದೆಯೇ ಇಲ್ಲ, ಆತನ ನಿರ್ಜೀವ ದೇಹ ಮಾತ್ರ ಇದೆ. ಅದು ಇನ್ನೆಂದು ಸರಿಪಡಿಸಿಕೊಳ್ಳಲಾಗದ ತಪ್ಪು ಎಂದು ಮಾಡಿದ ತಪ್ಪನ್ನು ಪ್ರಪಂಚಕ್ಕೆ ಪಾಠವಾಗಿ ಹೇಳಿದ ಅಂದಿನ ಯುವಕನೇ ಪ್ರಸ್ತುತ ಅಂತರಾಷ್ಟ್ರೀಯ ಖ್ಯಾತಿಯ ಜೀವನ ಕೌಶಲ ತರಬೇತುದಾರ, ವ್ಯಕ್ತಿತ್ವ ವಿಕಾಸದ ಗುರು, ಆಧ್ಯಾತ್ಮಿಕ ಚಿಂತಕ “ಗೌರ್ ಗೋಪಾಲದಾಸ್ ” ರವರು. ಇವರ ಹಿಂದೆ ಅದೆಷ್ಟು ಖ್ಯಾತಿ ಪ್ರಸಿದ್ದಿ ಇದ್ದರೂ ಅವರಿಗೆ ತನ್ನ ತಂದೆ ಜೀವಂತವಾಗಿ ಇದ್ದಾಗ ಕ್ಷಮೆ ಕೇಳದೆಯೇ ಹೋದೆ ಎಂಬ ನೋವಿನ ಪಶ್ಚಾತ್ತಾಪದಿಂದ ಇಂದಿಗೂ ತಮ್ಮ ತಪ್ಪುನ್ನು ಮತ್ಯಾರು ಮಾಡಬೇಡಿ ಎಂಬ ಕಿವಿಮಾತನ್ನು ಹೇಳುತ್ತಲೇ ಬರುತ್ತಿದ್ದಾರೆ, ಒಂದು ವೇಳೆ ತಂದೆ ಬದುಕಿದಾಗ ಪ್ರೀತಿಯಿಂದ ಮಾತಾಡಿ ಅವರಲ್ಲಿ ಕ್ಷಮೆ ಕೇಳಿಬಿಟ್ಟಿದ್ದರೇ..ಅವರಷ್ಟು ಹೃದಯ ಶ್ರೀಮಂತ ಯಾರು ಇರುತ್ತಿರಲಿಲ್ಲ ಅನಿಸುತ್ತೆ.

ಫೋಟೋ ಕೃಪೆ : google
ಹೀಗೆ ಅಲ್ವಾ ನಾವು ನೀವು ಎಲ್ಲಾ…??
ಎಲ್ಲಿ ಸಾರಿ ಕೇಳಬೇಕು, ಯಾವಾಗ ಕೇಳಬೇಕು ?? ಯಾರಿಗೆ ಕೇಳಬೇಕು??? ಎಂಬುದನ್ನು ತಿಳಿಯದೆ ಸಣ್ಣಪುಟ್ಟ ಬಿಕ್ಕಟ್ಟಗಳಿಗೆ ದೊಡ್ಡ ಕಂದಕ ತೊಡುವುದರ ಮೂಲಕ ಚಂದದ ಸಂಬಂಧಗಳನ್ನೂ ಅಹಂ ಎಂಬ ಮಣ್ಣಿನಡಿಯಲ್ಲಿ ಹೊತು ಬಿಡುತ್ತಿವಿ. ಹೀಗೆ ಆಗದಂತೆ ಅಗತ್ಯವಿರುವ ಕಡೆ ಕ್ಷಮೆ ಕೇಳುವುದು ಅನಾವಶ್ಯಕ ಎಂದು ಕೈ ಬಿಡುವುದು ಎಷ್ಟು ಮುಖ್ಯವೋ ..
ಅಗತ್ಯವಿರುವ ಕಡೆ ಕ್ಷಮೆ ಕೇಳುವುದು ಸಹ ಅಷ್ಟೆ ಮುಖ್ಯ, ತಪ್ಪು ಮಾಡುವುದು ಮಾನವನ ಸಹಜಗುಣ. ಅದನ್ನು ತಿದ್ದಿ ಕೊಳ್ಳುವ ಭಾಗವಾಗಿ ಕ್ಷಮಿಸಿರಿ ಎಂದು ಕೇಳುವುದರಲ್ಲೂ ಮತ್ತೆ ಮತ್ತೆ ತಪ್ಪನ್ನೆಸಗಾಬಾರದು .
ಕ್ಷಮೆ ಎಂಬುದು ಕೇಳುವುದಕ್ಕೆ, ತಿಳಿಸುವುದಕ್ಕೆ ಎಷ್ಟು ಸುಲಭವೆನಿಸಿದರೂ ಅದು ತುಟಿಗಳ ಕೊನೆಯಿಂದ ಬರುವ ಮಾತುಗಳಂಥಲ್ಲಾ,ಹೃದಯಾಂತರಾಳದಿಂದ ಬರಬೇಕು, ಅದರಲ್ಲಿ ತಪ್ಪು ನನ್ನದೇ ಅದಕ್ಕಾಗಿ ಪಶ್ಚಾತ್ತಾಪವಿದೆ ಆ ತಪ್ಪನ್ನು ಮತ್ತೆ ಮಾಡುವುದಿಲ್ಲ. ನನ್ನ ತಪ್ಪನ್ನು ತಿದ್ದಿಕೊಳ್ಳುವೆ ಮುಂದೆಂದೂ ಹೀಗೆ ಆಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂಬ ಸಂಗತಿಯು ವ್ಯಕ್ತವಾಗಬೇಕು,ಇದರಲ್ಲಿ ಯಾವ ಸಂಗತಿಗೂ ಲೋಪವಾದರೆ ಕ್ಷಮೆಯು ಸಾರ್ಥಕತೆಯನ್ನು ಹೊಂದುವುದಿಲ್ಲ, ಅದಕ್ಕಾಗಿ ಕ್ಷಮೆ ಕೇಳುವಾಗ ಜಾಗ್ರತೆ,ಜವಾಬ್ದಾರಿ ಇರಬೇಕು…. ಆದರೆ… ಬೇಡ..! ಕ್ಷಮೆ ಕೇಳಿದ ನಂತರ “ಆದರೆ” ಎಂಬ ಪದ ಬಳಸಿದರೆ ಮಾತ್ರ ಎಲ್ಲವೂ ವ್ಯರ್ಥವೆ.
ಇನ್ನೂ ಕ್ಷಮೆ ಕೇಳಿದ ತಕ್ಷಣವೇ ತಪ್ಪು ಮಾಡಿದರನ್ನು ಒಪ್ಪಿಕೊಳ್ಳಬೇಕು ಎಂದು ಬಯಸುವುದು ತಪ್ಪು, ಸ್ವಿಚ್ ಒತ್ತಿದ ತಕ್ಷಣವೆ ಲೈಟ್ ಹತ್ತಿದ್ರೆ. ಅದು ಮತ್ತೆ ಒಂದಲ್ಲಾ ಒಂದು ದಿನ ಬ್ಲಾಸ್ಟ್ ಆಗುವ ಸಂಭವ ಇರುತ್ತದೆ. ಏಕೆಂದರೆ ಕ್ಷಮೆ ಕೇಳಿದ ತಕ್ಷಣ ನೋವನ್ನು ಮರೆತು ಆನಂದದಿಂದ ಖುಷಿ ಪಡುವುದು ಯಾರಿಗೂ ಸಾಧ್ಯವಾಗುವುದಿಲ್ಲ, ಬದಲಿಗೆ ಸ್ವಿಚ್ ಆನ್ ಮಾಡಿದಾಗ ಟೂಬ್ಲೈಟ್ ನಂತೆ ನಿಧಾನವಾಗಿ ಹತ್ತಿದ್ರೆ ಘಾಸಿಗೊಳಗಾದ ಮನಸ್ಸು ತಿಳಿಯಾಗಲು ಸ್ವಲ್ಪ ಸಮಯಬೇಕಾಗುತ್ತದೆ. ಅಲ್ಲಿಯವರೆಗೆ ಎದುರಿನವರ ಕೋಪ, ಅಸಹನೆಯನ್ನು ಸಹಿಸಿಕೊಳ್ಳಬೇಕಾದುದು ಅನಿವಾರ್ಯ. ಹೀಗೆ ಸಹಿಸಿಕೊಂಡಾಗ ತಪ್ಪು ಮಾಡಿದ್ದಕ್ಕಾಗಿ ನಿಜವಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆಂದು ಸ್ವಯಂ ಸ್ಪೂರ್ತಿಯಿಂದಲೆ ಕ್ಷಮೆ ಕೇಳಿದ್ದಾರೆಂದು ಎದುರಿನವರು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯದ ಅಗತ್ಯವಿದೆ.

ಫೋಟೋ ಕೃಪೆ : google
ಇಬ್ಬರು ಉತ್ತಮ ಸ್ನೇಹಿತರ ಮಧ್ಯೆ ಸಂಗಾತಿಗಳ ಮಧ್ಯೆ ಸಾರಿ ಹೇಳುವ ಪರಿಸ್ಥಿತಿ ಎದುರಾದರೆ ಈ ಪಂಚ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಕೇಳಬೇಕು ಕ್ಷಮಾಪಣೆಯಲ್ಲಿ ಪಶ್ಚಾತ್ತಾಪ ವ್ಯಕ್ತವಾಗಬೇಕು. ನಡೆದಿರೋದಕೆ ಹೊಣೆಗಾರಿಕೆ ಕಂಡು ಬರಬೇಕು, ಇಬ್ಬರ ಮಧ್ಯೆ ಯಥಾ ಸ್ಥಿತಿಯ ಸಂಬಂಧ ಮುಂದುವರಿಯುತ್ತದೆ ಎಂಬ ನಂಬಿಕೆ ಗಟ್ಟಿಯಾಬೇಕು, ಮತ್ತೊಮ್ಮೆ ಈ ರೀತಿ ನಡೆಯೋದಿಲ್ಲಾ ಎಂಬ ವಿಶ್ವಾಸ ಬರಬೇಕು, ತಪ್ಪನ್ನು ಒಪ್ಪಿ ತಿದ್ದಿಕೊಂಡು ಕ್ಷಮಿಸುವಂತೆ ಕೇಳಬೇಕು, ಹೀಗೆ ಮಾಡಿದಾಗ ಹರಿದು ಹೋಗುವ ಸಂಬಂಧಗಳನ್ನೂ ಬಂಧನವನ್ನು ಬಿಗಿಯಾಗಿಸಬಹುದು.
ಸನಿಹಕ್ಕೆ ಸೇರಿಸಿಕೊಂಡು ಕ್ಷಮಾಪಣೆ ಕೇಳುವವರು ತಮ್ಮ ಬಾಡಿಲಾಂಗ್ವೇಜನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು. ಎದುರಿನ ವ್ಯಕ್ತಿಯ ಕಣ್ಣಿನೊಳಗೆ ದೃಷ್ಟಿ ಹಾಯಿಸಿ ಮನಸಾರೆ ಹೇಳಬೇಕು, ಎಲ್ಲಿಯೂ ನೋಡುತ್ತಾ ಅನಿವಾರ್ಯ ಎಂಬಂತೆ ಹೇಳಿದರೆ ಪರಿಣಾಮ ಬೀರುವುದಿಲ್ಲ, ಗಂಡಹೆಂಡತಿ, ಪ್ರೇಮಿಗಳು, ಒಡಹುಟ್ಟಿದವರು ,ಸ್ನೇಹಿತರು ಆಗಿದ್ದರೆ ಒಂದು ಕಾರ್ಡ, ಸಣ್ಣಪುಟ್ಟ ಗೀಫ್ಟ್ ,ಕ್ಷಮಾಪಣೆಯನ್ನು ಹೇಳುವ ಪತ್ರ ಹೀಗೆ ಯಾವುದಾದರೂ ಕೊಟ್ಟು ಸಾರಿ ಕೇಳಬಹುದು, ಇನ್ನೂ ಗಂಡ ಹೆಂಡತಿ, ಪ್ರೇಮಿಗಳಾಗಿದ್ದಲ್ಲಿ…ಸಾರಿಹೇಳಿ ಬಾಹುಬಂಧನದಲ್ಲಿ ಬಂಧಿಸಿ ಬಿಟ್ಟರೆ ಕ್ಷಮಿಸುವುದಕ್ಕೆ ಕ್ಷಣವೂ ಬೇಕಾಗಿಲ್ಲ !! ಗೆಳತಿಯನ್ನು ಹತ್ತಿರ ಕರೆದು ಭುಜತಟ್ಟಬಹುದು,ಸಲಿಗೆ ಇಲ್ಲದವರಿಗೆ ಕೈಮುಗಿದು, ಇಲ್ಲ ಅಭಿಮಾನದಿಂದ ಕೈ ಹಿಡಿದು ಕ್ಷಮೆ ಕೇಳಬಹುದು.
ಬೀಸುವ ದೊಣ್ಣೆ ತಪ್ಪಿದರೆ ಸಾಕು ಎಂಬ ಉದ್ದೇಶದಿಂದ ಸಾರಿ ಕೇಳಿದರೆ ಅದು ನಂಬಿಕೆಯನ್ನು ಹುಟ್ಟು ಹಾಕುವುದರಲಿ ವಿಫಲವಾಗುತ್ತದೆ. ಕ್ಷಮಿಸುವಂತೆ ಕೇಳುವುದು ಸುಲಭವೆನ್ನಲಾಗದು, ಅದಾಗ್ಯೂ ಕ್ಷಮೆ ಕೇಳಿದರೆ ಮನಸ್ಸಿಗೆ ಒಂದು ನೆಮ್ಮದಿ ಸಿಗುತ್ತದೆ.
ಕ್ಷಮೆ ಎಂಬ ಚಿಕ್ಕ ಮಾತು ಹೇಳುತ್ತಿದ್ದಂತೆ ಹೇಳುತ್ತಿರುವವರೊಂದಿಗೆ ಸಹಾನುಭೂತಿ ಏರ್ಪಡುತ್ತದೆ. ಆದರಿಂದ ಮನಸ್ಸು ದುಗುಡವಾಗುತ್ತದೆ,ಕ್ಷಮಿಸಲು ಸಿದ್ದರಾಗುತ್ತಾರೆ, ಮನಃ ಪೂರ್ವಕವಾಗಿ ಕ್ಷಮೆ ಕೇಳಿದರೆ ಮನಸ್ಸಿಗೆ ಆದ ಗಾಯ ವಾಸಿಯಾಗಲು ಸಹಕಾರಿ ಆಗುತ್ತದೆ. ಕಳೆದುಕೊಂಡ ವಿಶ್ವಾಸವನ್ನು ಮತ್ತೆ ಗಟ್ಟಿಗೊಳಿಸುತ್ತದೆ,ಇದರಿಂದ ತಪ್ಪು ಮಾಡಿದವರಿಗೆ ಮನಸ್ಸು. ನಿರಾಳಗೊಂಡು ಸಂತೃಪ್ತಿ ಭಾವ ನೆಲಸುತ್ತೆ.
- ಪವಿತ್ರ. ಹೆಚ್. ಆರ್
