‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕವನ ಸಂಕಲನ



ಎಸ್ ದಿವಾಕರ್ ಅವರ “ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ” ಕವನ ಸಂಕಲನದ ಬಗ್ಗೆ ಲೇಖಕ ಪ್ರಸನ್ನ ಸಂತೇಕಡೂರು ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ, ಮುಂದೆ ಓದಿ…

ವಿಶ್ವಸಾಹಿತ್ಯವನ್ನೆಲ್ಲಾ ಅರೆದು ಕುಡಿದಂತಿರುವ ದಿವಾಕರ್ ಸರ್ ನನಗೊಂದು ಬಹು ದೊಡ್ಡ ವಿಸ್ಮಯ. ಇವರು ನವ್ಯ ಚಳುವಳಿಯ ಕಾಲದಿಂದ ಬಂದವರಾದರೂ ಹಲವಾರು ನವ್ಯ ಸಾಹಿತಿಗಳ ಜೊತೆ ಒಡನಾಟವಿದ್ದರೂ ಕೂಡ ಇಂದಿಗೂ ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ನನ್ನಂತಹ ಹಲವು ಹೊಸ ಬರಹಗಾರರಿಗೆ ಸದಾ ಪ್ರೋತ್ಸಾಹಿಸುವ ಮಾರ್ಗದರ್ಶಕರಾಗಿದ್ದಾರೆ. ಇವರು ವಿಶ್ವ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪುರಸ್ಕೃತರ ಐವತ್ತು ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವದಲ್ಲದೇ ಹಲವಾರು ಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸ್ವತಃ ತಾವೇ ಹಲವಾರು ಕಥೆಗಳನ್ನು, ವಿಮರ್ಶಾ ಕೃತಿಗಳನ್ನು, ಪ್ರಬಂಧ ಸಂಕಲನಗಳನ್ನು, ಅಂಕಣ ಬರಹಗಳನ್ನು ಬರೆದಿದ್ದಾರೆ. ಸಣ್ಣ ಮತ್ತು ಅತೀ ಸಣ್ಣ ಕಥಾಸಂಗ್ರಹಗಳು, ಲೇಖನ ಸಂಗ್ರಹಗಳು ಒಂದೇ ಎರಡೇ ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವರ ಇತಿಹಾಸ ಕಥಾಸಂಕಲನ ಇತ್ತೀಚೆಗೆ ತಮಿಳಿಗೂ ಮತ್ತು ಹಲವು ಕಥೆಗಳು ಒಂದು ಸಂಕಲನದ ರೂಪದಲ್ಲಿ ಇಂಗ್ಲೀಷ್ ಭಾಷೆಗೂ ಅನುವಾದವಾಗಿದೆ (Hundreds of Streets to the Palace of Lights).

ಹಲವಾರು ಕವನಗಳನ್ನು ಬರೆದಿರುವ ಇವರು ಈಗ ಮತ್ತೊಂದು ಕವನ ಸಂಕಲನ “ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ” ನೆನ್ನೆ ತಾನೇ ಹೊರತಂದಿದ್ದಾರೆ. ಈ ಹೊಸ ಕವನಸಂಕಲನದ ಮೂರು ಕವನಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ.

೧) ಜಿರಾಫೆ

ಜಿರಾಫೆಯನ್ನು ನಾವೆಲ್ಲ ಪ್ರಾಣಿ ಸಂಗ್ರಹಾಲಯದಲ್ಲೋ ಅಥವಾ ಸಫಾರಿಗಳಲ್ಲೊ ನೋಡಿರುತ್ತೇವೆ. ಆದರೆ ಇಲ್ಲಿ ಕವಿ ನೋಡುವ ದೃಷ್ಟಿ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಈ ಸೃಷ್ಟಿಯಲ್ಲಿ ಜಿರಾಫೆಯನ್ನೂ ಒಳಗೊಂಡು ಎಲ್ಲಾ ಪ್ರಾಣಿಗಳ ರಚನೆಯಲ್ಲೂ ಒಂದು ಕಾರಣವಿರುತ್ತದೆ. ಅದರ ಹಿಂದೆ ಪ್ರಾಣಿಗಳ ವಿಕಾಸ ಕೆಲಸ ಮಾಡುತ್ತಿರುತ್ತದೆ. ವಿಕಾಸವಾದದಲ್ಲಿ ಜಿರಾಫೆಗೆ ಅತೀ ದೊಡ್ಡ ಸ್ಥಾನವಿದೆ. ಜೀನ್ ಬ್ಯಾಪ್ಟಿಸ್ಟ್ ಲಮಾರ್ಕ್ ಎಂಬ ವಿಕಾಸವಾದದ ವಿಜ್ಞಾನಿ ಜಿರಾಫೆ ಎತ್ತರದಲ್ಲಿರುವ ಆಹಾರವನ್ನು ತಿನ್ನಲು ತನ್ನ ಕುತ್ತಿಗೆಯನ್ನು ಅತೀ ಹೆಚ್ಚು ಬಳಸುತ್ತ ಬಳಸುತ್ತ ತನ್ನ ಉದ್ದನೆಯ ಕುತ್ತಿಗೆಯನ್ನು ಪಡೆಯಿತು ಎಂದು ತನ್ನ use and disuse (ಬಳಕೆ ಮತ್ತು ನಿರ್ಬಳಕೆ) ಸಿದ್ಧಾಂತದಲ್ಲಿ ಹೇಳುತ್ತಾನೆ. ಡಾರ್ವಿನ್ನನ ಸಿದ್ದಾಂತದ ಪ್ರಕಾರ ತೆಗೆದುಕೊಂಡರು ವಾತಾವಾರಣಕ್ಕೆ ಹೊಂದಿಕೊಂಡು ಬದುಕುವ ಪ್ರಾಣಿ ಮಾತ್ರ ಬದುಕುಳಿಯುತ್ತದೆ ಎಂಬ ಮಾತು ಕೂಡ ಜಿರಾಫೆಗೆ ಒಪ್ಪುತ್ತದೆ.

ಆದರೆ, ಇಲ್ಲಿ ಕವಿ ದೇವರು ಜಿರಾಫೆಯನ್ನು ಸೃಷ್ಟಿಸುವಾಗ ಕೆಲವು ತಪ್ಪುಗಳನ್ನು ಮಾಡಿದ್ದಾನೆ ಎಂಬ ಅರ್ಥದಲ್ಲಿ ಹೇಳುತ್ತಾರೆ. ಈಗ ಜಿರಾಫೆಯನ್ನು ಕಲ್ಪಿಸಿಕೊಳ್ಳಿ. ಎತ್ತರದಲ್ಲಿರುವ ಆಹಾರವನ್ನು ಜಿರಾಫೆ ಸರಾಗವಾಗಿ ತಿನ್ನುತ್ತದೆ. ಆದರೆ ನೆಲದಲ್ಲಿರುವ ಹುಲ್ಲನ್ನು ತಿನ್ನಲು ಅದು ತುಂಬಾ ಶ್ರಮಪಡಬೇಕು. ಇನ್ನು ನದಿಯಲ್ಲೋ, ಕೆರೆಯಲ್ಲೋ ನೀರನ್ನು ಕುಡಿಯುವಾಗ ಅದು ಯಮಯಾತನೆ ಪಡುತ್ತದೆ. ಅದು ತನ್ನ ಉದ್ದವಾದ ಕಾಲುಗಳನ್ನು ಎರಡು ಪಕ್ಕಕ್ಕೆ ಅಗಲಿಸಿ ಒದ್ದಾಡುತ್ತದೆ. ಜೀವ ಜಲವಾದ ನೀರನ್ನು ಕುಡಿಯಲು ಸೃಷ್ಟಿಯಲ್ಲಿ ಯಾವೊಂದು ಪ್ರಾಣಿಯೂ ಇಷ್ಟು ಶ್ರಮಪಡುವುದಿಲ್ಲ ಎಂದು ಅನಿಸುತ್ತದೆ. ಆ ರೀತಿ ನರಳುವ ಜೀವಿಯನ್ನು ನೋಡಿದ ಕವಿಗೆ ದೇವರು ಜಿರಾಫೆಯನ್ನು ರಚಿಸುವಾಗ ಮಹಾಪ್ರಮಾದವೆಸಗಿದ್ದಾನೆ ಎಂದು ಅನಿಸಿರಬಹುದು. ನೀವು ಕುಂಬಳ ಕಾಯಿಯನ್ನು ಬಳ್ಳಿಯಲ್ಲಿ ನೆಲ್ಲಿಕಾಯಿಯನ್ನು ಮರದಲ್ಲಿ ಏಕೆ ಇಟ್ಟಿರಬಹುದು ಎಂದು ಕೂಡ ಇಲ್ಲಿ ಯೋಚಿಸಬಹುದು.

ಅದೇ ರೀತಿ ಒಂದು ಸಾಮ್ರಾಜ್ಯದಲ್ಲಿ ಯಾವುದು ಎಲ್ಲಿರಬೇಕೋ ಅದೆಲ್ಲಾ ಸರಿಯಾಗಿ ಇದ್ದರೆ ಚೆನ್ನಾಗಿರುತ್ತದೆ, ಸಾಮರಸ್ಯವೇ ಇಲ್ಲದಿದ್ದರೆ ಹೇಗಾಗುತ್ತದೆ. ವಿಜಯನಗರ ಸಾಮ್ರಾಜ್ಯ ಪಥನವಾಗುವಾಗ ಶ್ರೀಕೃಷ್ಣದೇವರಾಯನ ಸ್ಥಿತಿಯೂ ಜಿರಾಫೆಯ ಸ್ಥಿತಿಯಾಗಿತ್ತು. ಒಂದು ಕಡೆ ಅವನು ಮಹತ್ತರವಾದ ಯುದ್ದಗಳನ್ನು ಗೆಲ್ಲುತ್ತಾ ಎತ್ತರ ಬೆಳೆಯುತ್ತ ಹೋದ ಹಾಗೆ ಅವನ ಕೈಕೆಳಗಿನ ಸಾಮ್ರಾಜ್ಯದ ಆಡಳಿತ ಅವನ ಕೈಯಿಂದ ತಪ್ಪಿಸಿಕೊಳ್ಳುತಿತ್ತು. ಅವನು ಅತೀ ಎತ್ತರದಲ್ಲಿದ್ದರೂ ಸಾಮ್ರಾಜ್ಯದ ಕೆಳಮಟ್ಟದಲ್ಲಿ ಏನಾಗುತ್ತಿದೆ ಎಂದೇ ಗೊತ್ತಾಗುತ್ತಿರಲಿಲ್ಲ. ಇದನ್ನು ಇಂದಿನ ಭಾರತಕ್ಕೂ ಅನ್ವಯಿಸಿಕೊಳ್ಳಬಹುದು. ಬುದ್ದಿಗೆ ಹೆಚ್ಚು ಬೆಲೆ ಕೊಟ್ಟು ಹೃದಯ ತನ್ನ ಗುರುತ್ವಾಕರ್ಷಣ ಶಕ್ತಿಯನ್ನೇ ಕಳೆದುಕೊಳ್ಳುತ್ತಿದೆ. ಹಾಗಾದರೆ ಹೃದಯಕ್ಕಿರುವ ಆ ಆಕರ್ಷಕ ಶಕ್ತಿ ಯಾವುದು ? ಅದು ಮನುಷ್ಯ ಮನುಷ್ಯನ ನಡುವಿನ ಪ್ರೀತಿಯೇ ? ಜಿರಾಫೆಯ ಕುತ್ತಿಗೆಗೂ ಕಾಲಿಗೂ ಸಾಮರಸ್ಯವಿದೆಯೇ?

ಕವಿಗೆ ಜಿರಾಫೆ ನೀರು ಕುಡಿಯಲು ಪಡುವ ಶ್ರಮ ಒಂದು ರೀತಿಯ ದೊಂಬರಾಟದ ಹಾಗೆ ಕಾಣುತ್ತದೆ. ತಂತಿಯ ಮೇಲೆ ನಡೆಯುವ ದೊಂಬರ ಹುಡುಗಿ ಪಡುವ ಶ್ರಮವನ್ನು ಇಲ್ಲಿ ನಾವು ಯೋಚಿಸಬೇಕು. ಇದು ಇಂದಿನ ಭಾರತ ಅಥವಾ ಕರ್ನಾಟಕದ ರಾಜಕೀಯಕ್ಕೂ ಅನ್ವಯಿಸಿಕೊಳ್ಳಬಹುದು. ಎತ್ತರದಿಲ್ಲಿರುವ ರಾಜಕೀಯ ವ್ಯಕ್ತಿಯೊಬ್ಬ ಕೆಳಗಿರುವ ಸಾಮಾನ್ಯರ ಜೊತೆ ಒಡನಾಡಲು ಸಾಧ್ಯವೇ? ಕೆಲವೊಮ್ಮೆ ಆ ವ್ಯಕ್ತಿ ಕೆಳಗೆ ಬಿದ್ದರೆ ಮತ್ತೇ ಏಳಲು ಸಾಧ್ಯವೇ? ಅದು ಜಿರಾಫೆಯ ಯತ್ನದ ರೀತಿಯೇ ಕಾಣಬಹುದು.

ಕವನವೊಂದು ಓದುಗರ ಓದಿಗೆ ತಕ್ಕಂತೆ ಅದರ ಅರ್ಥವೂ ಬದಲಾಗಬಹುದು. ಬೇರೆ ಬೇರೆ ಅರ್ಥಕೊಡಬಹುದು ಓದುಗನಿಗೆ ಜಿರಾಫೆಯ ಜಾಗದಲ್ಲಿ ಬೇರೊಬ್ಬ ವ್ಯಕ್ತಿ ಕಾಣಬಹುದು. ಅತಿ ಎತ್ತರವಿರುವ ನಟನೊಬ್ಬನಿಗೆ ಅತೀ ಕುಳ್ಳ ಹೆಂಡತಿ ಇರುವ ಸಾಧ್ಯತೆಯನ್ನು ಕಾಣಬಹುದು. ಆ ನಟನ ಪರಿಸ್ಥಿತಿಯೂ ಜಿರಾಫೆಯ ಪರಿಸ್ಥಿತಿಯಾಗಿಯೂ ಕಾಣಬಹುದು.



೨) ಒಬ್ಬನೊಳಗಿನ್ನೊಬ್ಬ

ಈ ಕವಿತೆ ಶೀರ್ಷಿಕೆಯೇ ವಿಚಿತ್ರ ಅನಿಸಬಹುದು. ಒಬ್ಬನೊಳಗೆ ಇನ್ನೊಬ್ಬ ಇರಲು ಸಾಧ್ಯವೇ? ಎಂದು ಕೇಳಬಹುದು. ಕವಿತೆ ಓದಿದವರಿಗೆ ಸಯಾಮಿ ಅವಳಿಗಳು ಜ್ಞಾಪಕ ಬರಬಹುದು. ಒಬ್ಬ ಒಳ್ಳೆಯ ವ್ಯಕ್ತಿಯೊಳಗೆ ಕೆಟ್ಟ ಮನಸ್ಸಿನ ಇನ್ನೊಬ್ಬ ವ್ಯಕ್ತಿ ಇರಬಹುದು ಅಥವಾ ಒಬ್ಬ ಕೆಟ್ಟ ವ್ಯಕ್ತಿಯೊಳಗೆ ಒಳ್ಳೆಯ ಮನಸ್ಸಿನ ಇನ್ನೊಬ್ಬ ವ್ಯಕ್ತಿ ಕೂಡ ಇರಬಹುದು. ಇದು ಅವರ ತೀರ ಹತ್ತಿರದ ಒಡನಾಡಿಗಳಿಗೆ ಮಾತ್ರ ಆ ವ್ಯಕ್ತಿಯೊಳಗಿರುವ ಇನ್ನೊಬ್ಬ ವ್ಯಕ್ತಿ ಕಾಣಬಹುದು. ಒಬ್ಬನೇ ವ್ಯಕ್ತಿಯೊಳಗಿರುವ ಎರಡು ಗುಣಗಳು ಅವನನ್ನು ಎರಡು ವಿರುದ್ದ ದಿಕ್ಕುಗಳಿಗೆ ಎಳೆಯಬಹುದು. ಸಯಾಮಿ ಅವಳಿಗಳು ಎರಡು ಬೇರೆ ಬೇರೆ ದಿಕ್ಕುಗಳಿಗೆ ಎಳೆದಂತೆ ಕಾಣಬಹುದು.

ಒಬ್ಬನೇ ವ್ಯಕ್ತಿಯೂ ಎರಡು ಬೇರೆ ಬೇರೆ ಸಿದ್ದಾಂತಗಳ ವಿಷಯಗಳ ಬಗ್ಗೆ ಆಸಕ್ತನಾಗಿರಬಹುದು, ಇಷ್ಟಪಡಲೂ ಬಹುದು. ಅಥವಾ ಹಗಲು ಒಳ್ಳೆಯ ವ್ಯಕ್ತಿಯ ವೇಷ ಹಾಕಿ ರಾತ್ರಿ ಕೆಟ್ಟ ವ್ಯಕ್ತಿಯಾಗಿರಬಹುದು. ಅಥವಾ ಹಗಲು ಕೆಟ್ಟವನಾಗಿ ರಾತ್ರಿ ಒಳ್ಳೆಯವನಾಗಿರಬಹುದು. ಕೆಲವೊಮ್ಮೆ ಒಬ್ಬನೇ ವ್ಯಕ್ತಿಯಲ್ಲಿನ ಒಳ್ಳೆಯ ಮತ್ತು ಕೆಟ್ಟ ಮನಸ್ಸಿನ ನಡುವೆ ಯುದ್ಧವಾಗಬಹುದು. ಒಬ್ಬನೇ ವ್ಯಕ್ತಿಯ ಮನಸಿನಲ್ಲಿ ದುರ್ಜನ ಸಜ್ಜನರ ನಡುವೆ ಹೋರಾಟಾವಾಗಬಹುದು ಅಥವಾ ವ್ಯಕ್ತಿಯೊಬ್ಬ ದ್ವಂದ್ವ ಸ್ಥಿತಿಯಲ್ಲಿ ಸಿಕ್ಕಿ ನರಳಲೂಬಹುದು. ಇಲ್ಲಿ ನಾವು ಜಗದ್ವಿಖ್ಯಾತ ಲೇಖಕ ಫ್ಯೊಡರ್ ದೊಸ್ತೋವಸ್ಕಿಯ Crime and Punishment ಕಾದಂಬರಿಯ Rodion Raskolnikov ರಾಸ್ಕೊಲ್ನಿಕೋವನ್ನು ಜ್ಞಾಪಕ ಮಾಡಿಕೊಳ್ಳಬಹುದು. ಇದು ಕನ್ನಡದಲ್ಲಿ ಏಳು ಸುತ್ತಿನ ಕೋಟೆ ಎಂಬ ಚಲನಚಿತ್ರವಾಗಿದೆ.

ಒಬ್ಬನೇ ವ್ಯಕ್ತಿಯಲ್ಲಿರುವ ಇನ್ನೊಬ್ಬ ವ್ಯಕ್ತಿಗೆ ದಾರಿಯಲ್ಲಿ ಸಾಗುವಾಗ ಕವಲೊಡೆದ ದಾರಿಯಲ್ಲಿ ಯಾವ ದಾರಿಯಲ್ಲಿ ಸಾಗಬೇಕು ಎಂದು ತಿಳಿಯದೇ ಒದ್ದಾಡಬಹುದು. ಇಬ್ಬರು ದಾರಿಕಾಣದೇ ದ್ವಂದ್ವಕ್ಕೆ ಸಿಲುಕಬಹುದು. ಇಲ್ಲಿ ನಮಗೆ ರಾಬರ್ಟ್ ಫ್ರಾಸ್ಟ್ ಕವಿಯ The Road Not Taken ಜ್ಞಾಪಕ ಬರಬಹುದು. Two roads diverged in a yellow wood, And sorry I could not travel both And be one traveler, long I stood And looked down one as far as I could To where it bent in the undergrowth; ಆದರೆ, ನದಿ ದಾಟಬೇಕಾದರೆ ಇಬ್ಬರಿಗೂ ಬೇಕಾಗಿರುವುದು ದೋಣಿ ಮಾತ್ರ. ಆಗ ಇಬ್ಬರೂ ತಮ್ಮ ತಮ್ಮ ಸಿದ್ಧಾಂತಗಳನ್ನೆಲ್ಲಾ ಕಟ್ಟಿಟ್ಟು ಜೊತೆಯಲ್ಲಿ ಆತ್ಮೀಯತೆಯಿಂದ ಕುಳಿತು ಸಾಗಬೇಕಾಗುತ್ತದೆ. ಇಲ್ಲವಾದರೆ ಬೇಂದ್ರೆ ಹೇಳುವ ಹಾಗೆ ಜೀವನವೇ ಸಾವಾಗುತ್ತದೆ.

ಇದು ಆಧುನಿಕ ಮನುಷ್ಯನೊಬ್ಬನ ಮನಸ್ಸಿನಲ್ಲಾಗುವ ತಲ್ಲಣಗಳನ್ನು ಚೆನ್ನಾಗಿ ಸೆರೆಯಿಡಿದ ಕವನ ಎಂದು ಖಂಡಿತವಾಗಿಯೂ ಹೇಳಬಹುದು.



೩) ಎಲ್ಲಿಹೋಯಿತು ರುಂಡ?

ಈ ಕವಿತೆ ಓದಿದವರಿಗೆಲ್ಲಾ ಬೇರೆ ಬೇರೆ ಅರ್ಥಗಳನ್ನು ಖಂಡಿತ ಕೊಡುತ್ತದೆ.

ಮುಸ್ಸಂಜೆಯ ಕೆಂಪಿನಲಿ ಬಿಕೋ ಎನ್ನುವ ಬೀದಿಯಲ್ಲಿ
ನಿಂತಿದೆಯೊಂದು ಮುಂಡ
ಪ್ಯಾಂಟು ಷರ್ಟು ತೊಟ್ಟುಕೊಂಡು
ಗೋಡೆಗೊರಗಿಕೊಂಡು
ಎಲ್ಲಿಹೋಯಿತು ಅದರ ರುಂಡ?
ಊಳಿಡುತ್ತಿವೆ ಯಾಕೆ ನಾಯಿಗಳಿಲ್ಲಿ?

ಎಂದು ಆರಂಭವಾಗುತ್ತದೆ ಈ ಕವನ. ಇಲ್ಲಿ ಓದುಗನು ನಿಜವಾಗಲೂ ವಾಸ್ತವದಲ್ಲಿ ತಲೆಯನ್ನು ಕತ್ತರಿಸಿ ತೆಗೆದಿರುವ ಮನುಷ್ಯನೊಬ್ಬನ ಮುಂಡವನ್ನು ಕಲ್ಪಿಸಿಕೊಳ್ಳಬಹುದು. ಹಾಗಾದರೆ ಆ ತಲೆಯನ್ನು ಕತ್ತರಿಸಿದವರು ಯಾರು? ಎಂದು ಪ್ರಶ್ನಿಸಬಹುದು. ಎಲ್ಲಿ ಹೋಯಿತು ಅದರ ರುಂಡ? ಎಂದು ಕೇಳಬಹುದು. ಪೋಲಿಸರು ಅದನ್ನು ಹುಡುಕಲು ಪ್ರಯತ್ನ ಕೂಡ ಮಾಡಬಹುದು.
ಇನ್ನೊಂದು ರೀತಿಯಲ್ಲಿ ವಾಸ್ತವದ ಗೋಡೆ ಕಲ್ಪಿಸಿಕೊಳ್ಳಬಹುದು. ಆ ಗೋಡೆಯ ಮೇಲೆ ಯಾರೋ ಚಿತ್ರಕಾರ ಮುಂಡದ ಚಿತ್ರ ಬರೆದಿರುವುದನ್ನು ಕಾಣಬಹುದು. ಹಾಗಾದರೆ ಆ ಚಿತ್ರ ಬರೆದವರು ಯಾರು? ಅದು ಮುಸ್ಸಂಜೆಯ ಗೋಧೂಳಿ ಸಮಯ. ಆ ಸೂರ್ಯನ ಕಿರಣಗಳು ಆ ರುಂಡವಿಲ್ಲದ ಮುಂಡದ ಮೇಲೆ ಬಿದ್ದಿರುವುದನ್ನು ಕಾಣಬಹುದು.

ಇವೆರಡು ಅಲ್ಲದೇ ರಸ್ತೆಯಲ್ಲಿ ಒಬ್ಬ ವ್ಯಕ್ತಿ ನಿಂತಿದ್ದಾನೆ ಅವನಿಗೆ ತನ್ನ ಗುರುತು ತೋರಿಸಲು ಏನು ಆಧಾರ ಅವನ ಹತ್ತಿರ ಇರದೇ ಇರಬಹುದು( ಇದನ್ನು ಬೆನ್ನುಡಿ ಬರೆದಿರುವ ನರೇಂದ್ರ ಪೈ ಅವರು ತಮ್ಮ ಬ್ಲಾಗ್ನಲ್ಲಿ ಬರೆದಿದ್ದಾರೆ). ಅವನೊಬ್ಬ ನಿರಾಶ್ರಿತನಿರಬಹುದು ಅಥವಾ ವಲಸೆ ಬಂದಿರುವ ವ್ಯಕ್ತಿ ಇರಬಹುದು. ಜನರೇ ಇಲ್ಲದ ಬೀದಿಗಳು ಅಮೆರಿಕಾದಲ್ಲಿ ಲ್ಯಾಟೀನ್ ಅಮೆರಿಕಾದಲ್ಲಿ ಹೆಚ್ಚು ಕಾಣುತ್ತವೆ. ಅಮೆರಿಕಾದಲ್ಲಿ ಬಹಳಷ್ಟು ಮೆಕ್ಸಿಕೋ ಮೂಲದವರಿಗೆ ಗುರುತಿನ ಚೀಟಿಯೇ ಇರುವುದಿಲ್ಲ. ಭಾರತದಲ್ಲಿ ಬಾಂಗ್ಲಾ ಅಥವಾ ರೋಹಿಂಗ್ಯಾ ವಲಸೆಗಾರರನ್ನು ಕಲ್ಪಿಸಕೊಳ್ಳಬಹುದು. ಇಲ್ಲಿ ರುಂಡ ಅಂದರೆ ತಲೆ. ತಲೆಯೊಳಗೆ ಮೆದುಳು ಮತ್ತು ಬುದ್ಧಿಶಕ್ತಿ ಇಲ್ಲ ಎಂಬುದನ್ನು ಕೂಡ ಕಲ್ಪಿಸಿಕೊಳ್ಳಬೇಕು. ಮೇಷ್ಟ್ರುಗಳು ಪಾಠಮಾಡುವಾಗ ದಡ್ಡ ವಿದ್ಯಾರ್ಥಿಗೆ ತಲೆ ಇಲ್ಲವೇನೋ ನಿನಗೆ? ನಿನ್ನ ತಲೆಯಲ್ಲಿ ಸಗಣಿ ತುಂಬಿಕೊಂಡಿದ್ದೀಯೇನೋ ಎಂದು ಕೂಡ ಹೇಳುವುದನ್ನು ನಾವು ನೋಡಿರುತ್ತೇವೆ. ಇಲ್ಲಿ ಆ ಅರ್ಥದಲ್ಲಿ ಕೂಡ ತೆಗೆದುಕೊಳ್ಳಬಹುದು.

ಇನ್ನೊಂದು ಅರ್ಥದಲ್ಲಿ ಕೂಡ ತೆಗೆದುಕೊಳ್ಳಬಹುದು. ನಮ್ಮ ಕಾಲ ಸಾಮಾಜಿಕ ತಾಣಗಳ ಕಾಲ. ಇಲ್ಲಿ ಯಾವುದೋ ಒಂದು ಚಿಕ್ಕ ವಿಷಯ ಕೆಲವೇ ಕ್ಷಣಗಳಲ್ಲಿ ಕಾಡ್ಗಿಚ್ಚಿನ ರೀತಿ ಹಬ್ಬಿ ಯಾವುದೋ ದೊಡ್ಡ ಅನಾಹುತವನ್ನೇ ಸೃಷ್ಟಿಸಬಹುದು. ಇಲ್ಲಿನ ಬಹಳಷ್ಟು ಮಂದಿಗಳು ತಮ್ಮ ಬುದ್ದಿ ಶಕ್ತಿಯನ್ನ ಅಥವಾ ತಮ್ಮ ತಲೆ(ರುಂಡ) ದಿಂದ ಯೋಚಿಸದೆ ಯಾವುದೋ ಸಮೂಹಸನ್ನಿಗೆ ಸಿಲುಕಿ ಜಗಳ ಹಾಡುವವರನ್ನು ನೋಡಿರುತ್ತೇವೆ. ಕೆಲವೊಮ್ಮೆ ಆತ್ಮೀಯ ಸಂಬಂಧಗಳನ್ನು ಚಿಕ್ಕ ಕಾರಣಕ್ಕೆ ಕಳೆದುಕೊಳ್ಳುತ್ತಾರೆ. ಅಂತಹ ಜನರಿಗೆ ಮುಂಡಗಳಿವೆ ಆದರೆ ಅವರು ರುಂಡವನ್ನು ಕಳೆದುಕೊಡು ಫೇಸ್ಬುಕ್ ಗೋಡೆಯ ಪಕ್ಕದಲ್ಲಿ ನಿಂತಿದ್ದಾರೆ ಎಂದು ಕಲ್ಪಿಸಿಕೊಳ್ಳಲು ಅವಕಾಶ ಕೂಡ ಇದೆ.

ಇಷ್ಟಲ್ಲದೇ ನನಗೇ ಪ್ರಖ್ಯಾತ ಮೆಕ್ಸಿಕನ್ ಲೇಖಕ ಯಾನ್ ರೂಲ್ಫೋ(Juan Rulfo) ಬರೆದ ಪೆಡ್ರೋ ಪರಮೋ ಕಾದಂಬರಿ ಜ್ಞಾಪಕ ಬಂತು. ಆ ಕಾದಂಬರಿಯ ಆರಂಭದಲ್ಲಿ ಪಾತ್ರವೊಂದು ತನ್ನ ಹಳ್ಳಿಗೆ ಬಂದಾಗ ಆ ಹಳ್ಳಿ ಸಂಪೂರ್ಣ ನಾಶವಾಗಿರುತ್ತದೆ. ಯಾರು ಇಲ್ಲದ ಆಂತಹ ಊರಿನ ಬೀದಿಯ ಗೋಡೆಯ ಪಕ್ಕ ನಿಂತಿರುವ ರುಂಡ ನನ್ನ ಕಲ್ಪನೆಗೆ ಬಂತು. ಇದು ಓದುಗನ ಅರಿವಿಗೆ ಬೇರೆ ಬೇರೆ ರೀತಿಯಲ್ಲಿ ಅರ್ಥವಾಗುವ ಕವಿತೆ. ಹಾಗಾಗಿ ಇಲ್ಲಿರುವ ಎಲ್ಲಾ ಕವಿತೆಗಳನ್ನು ಓದುಗ ಮುಕ್ತವಾಗಿ ಚಿಂತಿಸುವ ಹಾಗೆ ಮಾಡುತ್ತವೆ.

ಸಾಮಾನ್ಯವಾಗಿ ಕವಿತೆಗಳೆಂದರೆ ದೂರ ನಿಲ್ಲುವ ನಾನು ಕೆಲವೇ ಗಂಟೆಗಳಲ್ಲಿ ಈ ಕವನ ಸಂಕಲನವನ್ನು ಒಂದೇ ಉಸಿರಿಗೆ ಓದಿ ಮುಗಿಸಿದ್ದೇನೆ. ಕೆಲವು ಕವನಗಳನ್ನು ಐದಾರು ಸಲ ಓದಿದ್ದೇನೆ. ಓದಿದಾಗಲೆಲ್ಲಾ ಬೇರೆ ಬೇರೆ ಅರ್ಥಗಳು ಹೊಳೆಯುತ್ತಿವೆ. ನಿಮಗೂ ಕೂಡ ಹೀಗೆ ಹಾಗಬಹುದು.

ದಿವಾಕರ್ ಸರ್ ಇಂತಹ ಉತ್ತಮ ಕವನಸಂಕಲನಕ್ಕಾಗಿ ನಿಮಗೆ ಮತ್ತು ಪ್ರಕಟಿಸಿರುವ ಬಹುರೂಪಿ ಪ್ರಕಾಶನದವರಿಗೂ ಅಭಿನಂದನೆಗಳು.


  • ಪ್ರಸನ್ನ ಸಂತೇಕಡೂರು  (ವಿಜ್ಞಾನಿಯಾಗಿ ಮ್ಯಾಸ್ಸಿ ಕ್ಯಾನ್ಸರ್ ಸೆಂಟರಿನಿಂದ ಎಕ್ಸೆಲೆನ್ಸ್ ಇನ್ ಕ್ಯಾನ್ಸರ್ ರಿಸರ್ಚ್ ಅವಾರ್ಡ್ ಪಡೆದಿದ್ದಾರೆ, ಸಾಹಿತಿಯಾಗಿ ವಿಜಯ ಕರ್ನಾಟಕ ಪತ್ರಿಕೆಯ 2021ನೇ ಅವ್ವ ಪ್ರಶಸ್ತಿ ಪುರಸ್ಕೃತರು ಆಗಿದ್ದಾರೆ)

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW