ತೃಪ್ತಿ ಇಲ್ಲದ ಬದುಕು..ಇನ್ನಷ್ಟು ಬೇಕು ಎನ್ನುವ ಹಂಬಲ …ದ್ವೇಷ ಅಸೂಹೆಗಳನ್ನೂಹೊತ್ತ ಮನುಷ್ಯ ಕೊನೆಗೆ ಮಣ್ಣಾಗುತ್ತಾನೆ. ಉತ್ತಮ ಸಂದೇಶವನ್ನು ಹೊತ್ತ ಈ ಕವನವನ್ನುಕವಿ ಖಾದರ್ ಅವರು ಬರೆದಿದ್ದಾರೆ…ಕವನವನೊಮ್ಮೆ ಓದಿ…
ತೃಪ್ತಿ ಇಲ್ಲದ ಜೀವನವು
ತತ್ತರಿಸುತಿಹುದು ತರತರದಿ
ತಾಳಕ್ಕೆ ನಿಲುಕದು
ಕೈಯೊಳು ಸಿಗಲೊಲ್ಲದು
ಬೇಡುವುದು ಬಗೆಬಗೆಯ
ಕಂಡದ್ದೆಲ್ಲಕು ತಣಿಯುತಿಹುದು
ಸನಿಹವ ಸವಿಯಲೊಲ್ಲದು
ದೂರಕ್ಕೆ ಚಾಚುತಿಹುದು
ಹರಿಯುತಿಹುದು ದಡವಿಲ್ಲದೇ
ಅರಿವ ಪಡೆಯಲೊಲ್ಲದು
ಭೂಮ್ಯಾಕಾಶ ಸುತ್ತುತಿಹುದು
ತನ್ನೊಳು ತಾ ತಿಳಿಯಲೊಲ್ಲದು
ದ್ವೇಷ ಅಸೂಯೆ ಕಕ್ಕುತಿಹುದು
ಪ್ರೀತಿಪ್ರೇಮವ ಕಿತ್ತುತಿಹುದು
ಹೆಚ್ಚಿದ್ದು ನೀಡಲೊಲ್ಲದು
ಗಂಟಕಟ್ಟಿ ಗೋಲ್ಯಡುತಿಹುದು
ಸಾವ ನೋಡಿಯು ಸುಧಾರಿಸದು
ಬದುಕಬೇಕೆಂದು ಬವಣಿಸುತಿಹುದು
ಇರುವುದೆಲ್ಲವ ತನಗೆನುತಿಹುದು
ಮಣ್ಣೊಳಗೆ ತಾ ಮಲಗುತಿಹುದು
- ಎ ಕೆ ಖಾದರ್ (ಯುವ ಕವಿ, ಲೇಖಕರು)
