ಶ್ರೀಮಂತ ವ್ಯಕ್ತಿಯೊಬ್ಬ ಸಾಕಿದ ನಾಯಿಯ ಅನಾರೋಗ್ಯದ ಕಾರಣ ಜೀವನದ ಅತಿ ದೊಡ್ಡ ಅವಾರ್ಡ್ ನ್ನು ಸ್ವೀಕರಿಸಲು ಹೋಗಲಾರ ಎಂದರೆ ಅವನಲ್ಲಿನ ಮಾನವೀಯ ಮೌಲ್ಯಗಳು ಎಷ್ಟಿರಬೇಕು. ಈ ರೀತಿಯ ಮಾನವೀಯ ಮೌಲ್ಯ ತುಂಬುವ ಲೇಖನಗಳನ್ನು ಡಾ ರಾಜಶೇಖರ ನಾಗೂರ ಅವರ ‘ಸ್ಪಾರ್ಕ್ – 1’ ಕೃತಿಯಲ್ಲಿ ಓದಬಹುದು, ಕೃತಿಯ ಕುರಿತು ತಪ್ಪದೆ ಓದಿ…
ಪುಸ್ತಕ : ಸ್ಪಾರ್ಕ್-1
ಲೇಖಕರು: ಡಾ ರಾಜಶೇಖರ ನಾಗೂರ
ಪ್ರಕಾಶನ: ಆಪ್ಸರ ಪ್ರಕಾಶನ
ಬೆಲೆ: 175.00
ಖರೀದಿಗಾಗಿ: 89042 64284
ಡಾ ರಾಜಶೇಖರ್ ನಾಗೂರ್ ಅವರು ವೃತ್ತಿಯಲ್ಲಿ ಪಶು ಪಾಲನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ತಾಂತ್ರಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಅತ್ಯುತ್ತಮ ಲೇಖಕರು ಹೌದು.
ಪ್ರತಿದಿನ ಹೊಸತನ್ನು ನೋಡುತ್ತಿದ್ದೇವೆ, ತಂತ್ರಜ್ಞಾನ ಬೆಳೆದಂತೆ ಮನುಷ್ಯ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಜಾರುತ್ತಿದ್ದಾನೆ. ಬದುಕಿನ ಸವಾಲನ್ನು ಸ್ವೀಕರಿಸಲಾಗದೆ ಆತ್ಮಹತ್ಯೆ ಸಂಖ್ಯೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಮನಸ್ಸುಗಳನ್ನು ಅಪ್ಪಿಕೊಳ್ಳುವ ಮತ್ತೊಂದು ಮನಸ್ಸುಗಳು ಇಲ್ಲವಾಗಿದೆ. ಅವಿಭಕ್ತ ಕುಟುಂಬಗಳು ದೂರವಾಗಿವೆ. ಎಲ್ಲೆಡೆ ನಕಾರಾತ್ಮಕಗಳು ತುಂಬಿವೆ. ಆ ಕತ್ತಲಿಗೆ “ಸ್ಪಾರ್ಕ್” ತುಂಬುವ ಪ್ರಯತ್ನವನ್ನು ಡಾ.ರಾಜಶೇಖರ್ ನಾಗೂರ ಅವರು ಮಾಡುತ್ತಿದ್ದಾರೆ.
ಇತ್ತೀಚಿಗೆ ರಾಜಶೇಖರ್ ಅವರ ಅರಿವಿನ ಜ್ವಾಲೆಯನ್ನು ಹೊತ್ತಿಸುವ ಕಿಡಿ ಅಂದರೆ “ಸ್ಪಾರ್ಕ್ -1” ಕೃತಿ ಬಿಡುಗಡೆಯಾಯಿತು. ಈ ಕೃತಿಯಲ್ಲಿ 41 ಸ್ಫೂರ್ತಿಯ ಸೆಲೆಗಳಿದ್ದು, ಇದನ್ನು ಓದುವಾಗ ಸ್ಫೂರ್ತಿ ತುಂಬುವುದಷ್ಟೇ ಅಲ್ಲ, ಒಳಗಿನ ಅಂಧಕಾರವನ್ನು ತೊಡೆದುಹಾಕುವ ಶಕ್ತಿ ಈ ಕೃತಿಗೆ ಇದೆ.

ಜನ್ಮ ತಳೆದ ಪ್ರತಿ ಜೀವಕ್ಕೂ ಅಂತ್ಯವಿದೆ. ಮರಣವು ಬದುಕಲು ಕಲಿಸುತ್ತದೆ ಎನ್ನುತ್ತಾರೆ ಲೇಖಕರು. ಸಾವು ಎಂದರೆಯೇ ಭಯ. ಅದರಲ್ಲಿ ಕಲಿಯುವಂತದ್ದು ಏನಿದೆ ಎನ್ನುವ ಕುತೂಹಲಕ್ಕೆ ಓದುತ್ತಾ ಹೋದೆ. ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಸಾಯುವ ಮೊದಲು ನನ್ನ ಕೈಯನ್ನು ಶವದ ಪೆಟ್ಟಿಗೆಯಿಂದ ಹೊರಕ್ಕೆ ಇಡಿ ಎಂದಿದ್ದನಂತೆ, ಕಾರಣವಿಷ್ಟೇ ಸತ್ತಾಗ ಯಾವ ವ್ಯಕ್ತಿಯೂ ತನ್ನ ಆಸ್ತಿ ಅಂತಸ್ತನ್ನು ಹೊತ್ತು ಒಯ್ಯಲಾರ. ಬರೀ ಕೈಯಲ್ಲಿ ಹೊರಡಬೇಕು. ಈ ಮಧ್ಯೆ ಅಹಂಕಾರ, ಸಿಟ್ಟು, ಮತ್ಸರ ಯಾಕೆ?…ಇರುವಷ್ಟು ದಿನ ಮನುಷ್ಯ ನಾಲ್ಕು ಜನರ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿಯಬೇಕು. ಆಗ ಬದುಕು ಸಾರ್ಥಕವಾಗುತ್ತದೆ ಉದಾಹರಣೆಯೊಂದಿಗೆ ಲೇಖಕರು ವಿವರಿಸಿದ್ದಾರೆ.
ಹೆಣ್ಣನ್ನು ಮಾಯೆ ಎನ್ನುತ್ತಾರೆ. ಆದರೆ ಅದೇ ಹೆಣ್ಣನ್ನು ಬಯಸುವವನು ಯಾಕೆ ಮಾಯೆಯಾಗಲಾರ ಎನ್ನುವ ಪ್ರಶ್ನೆ ಕೇಳುವ ಮೂಲಕ ಮನುಷ್ಯನಲ್ಲಿರುವ ತಾರತಮ್ಯ ಸ್ವಭಾವವನ್ನು ಲೇಖಕರು ಎತ್ತಿ ಹಿಡಿದ್ದಿದ್ದಾರೆ. ಮಾಯೆ ಎನ್ನುವುದು ಹೆಣ್ಣಲ್ಲ. ಮನುಷ್ಯನ ಮನಸ್ಸಿನೊಳಗಿನ ಅಸದೃಶ್ಯ ಆಸೆ ಎಂದಿದ್ದಾರೆ. “ಹೆಣ್ಣು ಮಾಯೆ ಎಂಬುವರು” ಲೇಖನದಲ್ಲಿ ಓದಬಹುದು.
ಅಪ್ಪ ಎಂದರೆ ಆಕಾಶ, ಅಪ್ಪ ಎಂದರೆ ಭರವಸೆ. 1988 ರಲ್ಲಿ ಅರ್ಮೆನಿಯಾದಲ್ಲಿ ನಡೆದ ನೈಜ ಘಟನೆಯನ್ನು ವಿವರಿಸುವ ಮೂಲಕ ಮಗುವಿನ ದೃಷ್ಠಿಯಲ್ಲಿ ಅಪ್ಪ ಹೇಗೆ ಹೀರೋ ಆಗಿ ಕಾಣುತ್ತಾನೆ “ಬಂದೇ ಬರುತ್ತೇನೆ ” ಲೇಖನದಲ್ಲಿ ಓದಬಹುದು.

ಖಿನ್ನತೆಯು ಶ್ರೀಮಂತ, ಬಡವ, ಹೆಣ್ಣು, ಗಂಡು ಎನ್ನದೆ ಪ್ರತಿಯೊಬ್ಬರಿಗೂ ಕಾಡುತ್ತದೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ಶಕ್ತಿಶಾಲಿ ಹನುಮಾನ್ ನಿಗೂ ಖಿನ್ನತೆ ಕಾಡಿತ್ತು, ಹನುಮಾನ್ ಆತ್ಮಹತ್ಯೆ ಆಲೋಚನೆ ಕೂಡಾ ಮಾಡಿದ್ದ ಎಂದಿದ್ದಾರೆ. ಆದರೆ ಹನುಮಾನ್ ಆತ್ಮಹತ್ಯೆ ಯೋಚನೆ ಯಾಕೆ ಬಂತು ಮತ್ತು ಅದರಿಂದ ಯಾಕೆ ಹಿಂದೆ ಸರಿದ ಎನ್ನುವುದಕ್ಕೆ ಈ ಕೃತಿ ಓದಬೇಕು. ಖಿನ್ನತೆಗೆ ಆತ್ಮಹತ್ಯೆಯೇ ಪರಿಹಾರವಲ್ಲ. ಮನುಷ್ಯ “ಆತ್ಮಹತ್ಯೆಯ ಮುನ್ನ ಆತ್ಮಾವಲೋಕನ” ಮಾಡಿಕೊಳ್ಳಬೇಕು. ಈ ಲೇಖನ ಓದುಗರ ಕಣ್ಣು ತೆರೆಸುತ್ತದೆ.
ಡಾ ರಾಜಶೇಖರ ನಾಗೂರ ಅವರು ಆಕೃತಿ ಕನ್ನಡಕ್ಕೆ ಅಂಕಣ ಬರೆಯುತ್ತಿದ್ದಾಗ ಅವರ ಅಂಕಣವನ್ನು ನಿರಂತರವಾಗಿ ಓದುತ್ತಿದ್ದ ಓದುಗರಲ್ಲಿ ನಾನು ಕೂಡಾ ಒಬ್ಬಳಾಗಿದ್ದೆ. ಅವರ ಲೇಖನಗಳು ಕುಗ್ಗಿದ ಮನಸ್ಸುಗಳಿಗೆ ಸ್ಫೂರ್ತಿ ತುಂಬುತ್ತದೆ. ಸಾಕಷ್ಟು ಓದುಗರ ಬಳಗವನ್ನು ಸಂಪಾದಿಸಿದ್ದಾರೆ. “ಸ್ಪಾರ್ಕ್ -1” ಕೃತಿ ಓದುಗರಲ್ಲಿ ನಿಜಕ್ಕೂ ಒಂದು ಸಕಾರಾತ್ಮಕ ಸ್ಪಾರ್ಕ್ ಹಚ್ಚುತ್ತದೆ. ಸ್ಫೂರ್ತಿ ತುಂಬುವ ಲೇಖನಗಳ ಗುಚ್ಛ ಇದರಲ್ಲಿದ್ದು, ಎಲ್ಲರೂ ಓದಲೇ ಬೇಕಿರುವ ಕೃತಿ ಇದಾಗಿದೆ.
ಡಾ ರಾಜಶೇಖರ ನಾಗೂರ ಅವರಿಂದ ಇನ್ನಷ್ಟು ಕೃತಿಗಳು ಬರಲಿ ಎಂದು ಶುಭ ಆಶಿಸುತ್ತೇನೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಆನ್ಲೈನ್ ಪತ್ರಿಕೆಯ ಸಂಪಾದಕಿ, ಬೆಂಗಳೂರು.
