೧೮೮೦ ರ ಒಂದು ದಿನ ನ್ಯೂಯಾರ್ಕಿನ ಅಲ್ ಬಾನ್ ಅಂಚೆ ಕಛೇರಿಯಲ್ಲಿ ಓನಿ ಒಳಗೆ ನುಗ್ಗಿಬಿಟ್ಟಿತು. ಅಂಚೆ ಸಿಬ್ಬಂದಿ ಅದಕ್ಕೆ ಆಹಾರ ನೀಡಿ ಉಪಚರಿಸಿದರು.ಅಂದಿನಿಂದ ಅದರ ನಿವಾಸ ಅಂಚೆ ಕಛೇರಿಯೇ ಆಯಿತು. ಮುಂದೆ ಅದೇ ಓನಿ ಎಲ್ಲರ ಪ್ರೀತಿಗೆ ಪಾತ್ರವಾಯಿತು. ಲೇಖಕರಾದ ಶಿವಕುಮಾರ ಅವರು ಓನಿ ಕುರಿತು ಬರೆದ ಲೇಖನವಿದು.ಮುಂದೆ ಓದಿ..
ನಾಯಿ ನಿಯತ್ತಿನ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತು. ನಿಯತ್ತು ಮತ್ತು ಪ್ರಾಮಾಣಿಕತೆಗೆ ಹೆಸರಾದ ಈ ಪ್ರಾಣಿಯ ಅನೇಕ ಕಥೆಗಳು ಪ್ರಚತದಲ್ಲಿವೆ. ಅದರಲ್ಲಿ ಅಮೆರಿಕದ ನ್ಯೂಯಾರ್ಕಿನ “#ಓನಿ” ಎಂಬ ನಾಯಿ ಸಹ ಒಂದು. ಇದೊಂದು ಬೀಡಾಡಿ ನಾಯಿಯಾದರೂ ಗಳಿಸಿದ ಕೀರ್ತಿ ಅಪಾರ.

೧೮೮೦ ರ ಒಂದು ದಿನ ನ್ಯೂಯಾರ್ಕಿನ ಅಲ್ ಬಾನ್ ಅಂಚೆ ಕಛೇರಿಯಲ್ಲಿ ಎಲ್ಲರೂ ಮಗ್ನರಾಗಿದ್ದ ಸಮಯದಲ್ಲಿ, ಈ ನಾಯಿ ಕಛೇರಿ ಒಳಗೆ ನುಗ್ಗಿಬಿಟ್ಟಿತು. ಅದು ಬಹುಶಹ ತುಂಬಾ ದಿನಗಳಿಂದ ಏನೂ ತಿಂದಿರಲಿಲ್ಲವೆಂದು ತೋರುತ್ತದೆ. ನಿತ್ರಾಣಗೊಂಡು ಒಂದೆಡೆ ಸುಮ್ಮನೆ ಮಲಗಿತು. ಅದನ್ನು ನೋಡಿದ ಅಂಚೆ ಸಿಬ್ಬಂದಿ ಅದಕ್ಕೆ ಆಹಾರದ ಅವಶ್ಯಕತೆ ಇದೆಯೆಂದು ಭಾವಿಸಿ ಆಹಾರ ನೀಡಿ ಉಪಚರಿಸಿದರು. ಅದು ಆಹಾರವನ್ನ ತಿಂದು ಕೃತಜ್ಞತೆಯಿಂದ ಬಾಲ ಅಲ್ಲಾಡಿಸುತ್ತ ಅಲ್ಲಿಯೇ ಮಲಗಿತು. ಅಂದಿನಿಂದ ಅದರ ನಿವಾಸ ಅಂಚೆ ಕಛೇರಿಯೇ ಆಯಿತು. ಅಂಚೆ ಪೇದೆಗಳ ಹಿಂದೆ ಓಡಾಡುತ್ತಾ ಆ ಪರಿಸರದ ಎಲ್ಲರನ್ನೂ ಗುರುತು ಮಾಡಿಕೊಂಡಿತು. ಒಮ್ಮೊಮ್ಮೆ ಅಂಚೆ ಗುಮಾಸ್ತ ಓನಿಯ ಬೆನ್ನಿಗೆ ಬ್ಯಾಗ್ ಕಟ್ಟಿ ಅದರೊಳಗೆ ಅಂಚೆ ಪತ್ರಗಳನ್ನಿಟ್ಟು ಕಳುಹಿಸಿದರೆ ಅದು ಎಲ್ಲರ ಮನೆ ಬಾಗಿಲಿಗೆ ಹೋಗಿ ಟಪಾಲುಗಳನ್ನು ಮುಟ್ಟಿಸಿ, ಅವರಿಂದ ಆಹಾರ ಪಡೆಯುತ್ತಿತ್ತು ಮತ್ತು ಪ್ರೀತಿ ಸಂಪಾದಿಸುತ್ತಿತ್ತು.

ಫೋಟೋ ಕೃಪೆ : milwaukeenotebook
ಒಂದು ದಿನ ಓನಿ ರೈಲ್ವೇ ನಿಲ್ದಾಣಕ್ಕೆ ಹೋಗಿ ಅಲ್ಲಿನ #ಅಂಚೆ ಡಬ್ಬಿಯಲ್ಲಿದ್ದ ಅಂಚೆಯವನನ್ನು ಗುರುತಿಸಿ ರೈಲು ಡಬ್ಬಿ ಹತ್ತಿ ಕುಳಿತ್ತಿತ್ತು. ತನ್ನ ಜೀವನದ ೧೭ ವರ್ಷಗಳಲ್ಲಿ ಅದು ಸುತ್ತಿದ್ದು ಬರೋಬ್ಬರಿ ೧.೪೦ ಲಕ್ಷ ಮೈಲುಗಳು. ಓನಿ ಕಳೆದುಹೋಗದಿರಲೆಂದು ಅಂಚೆ ಪೇದೆ ಅದರ ಕೊರಳಿಗೆ ಪಟ್ಟಿ ಕಟ್ಟಿ ಅದರ ಹೆಸರು ವಿಳಾಸ ಬರೆದಿದ್ದ. ಅದು ಯಾರಿಗೂ ತೊಂದರೆ ಕೊಡದೆ, ಪ್ರೀತಿಪಾತ್ರ ನಾಯಿಯಾಗಿದ್ದರಿಂದ ಜನ ಅದನ್ನು ಎತ್ತಿಕೊಂಡು ಮುದ್ದಾಡಿ ತಿನಿಸು ಕೊಟ್ಟು ಕಳಿಸುತ್ತಿದ್ದರು. ಅದಕ್ಕೆ ಪರಿಚಿತರ ಮುಖವಷ್ಟೇ ಅಲ್ಲ, ಅವರ ಹೆಸರೂ ಸಹ ನೆನಪಿನಲ್ಲಿತ್ತು. ಇಂಥವರ ಮನೆಗೆ ಹೋಗಿ ಪತ್ರ ಕೊಟ್ಟು ಬಾ ಎಂದರೆ ಅಲ್ಲಿಗೆ ಹೋಗಿ ಪತ್ರ ಕೊಟ್ಟು ಬರುತ್ತಿತ್ತು. ಹೀಗಾಗಿ ಅದು ಅಂಚೆ ಇಲಾಖೆಯ ಸಿಬ್ಬಂದಿಯಂತೇ ಆಗಿತ್ತು. ಒಮ್ಮೆ ಅದು ಜಪಾನಿಗೆ ಹೋಗುವ ಹಡಗು ಹತ್ತಿ ಜಪಾನಿಗೆ ಬಂದಿಳಿದಾಗ, ಅದರ ಕೀರ್ತಿಯನ್ನು ಕೇಳಿದ್ದ ಜಪಾನಿನ ರಾಜ ಸ್ವತಹ ಬಂದು ಅದನ್ನು ಬರಮಾಡಿಕೊಂಡು ಅದಕ್ಕೆ ವೀಸಾ ನೀಡಿದ. ಹೀಗೆ ಹಲವು ದೇಶಗಳನ್ನು ಸುತ್ತಿ ಅಮೆರಿಕಾಕ್ಕೆ ಬಂದಾಗ ಸ್ಯಾನ್ ಫ್ರ್ಯಾನ್ಸಿಸ್ಕೋ ಅಂಚೆ ಅಕಾಡೆಮಿಯು ಅದಕ್ಕೆ ಅಂಚೆ ಸಮವಸ್ತ್ರ ಹಾಕಿ ಸನ್ಮಾನಿಸಿತು.
ಕೊನೆಯ ದಿನಗಳಲ್ಲಿ ಅದಕ್ಕೆ ಅಸಹನೆ ಬೆಳೆಯಿತು. ಜನರನ್ನು ನೋಡಿದರೆ ಸಿಡುಕುತ್ತಿತ್ತು. ಕೊಲೆರಾಡೋ ದಲ್ಲಿ ಒಮ್ಮೆ ಅಂಚೆ ಗುಮಾಸ್ತನನ್ನೇ ಕಚ್ಚಿತು. ದಾರಿಯಲ್ಲಿ ಸಾಗುವ ಕೆಲವರನ್ನು ಕಚ್ಚಲು ಹೋಗುತ್ತಿತ್ತು. ಕೊನೆಗೆ ಪೋಲೀಸರು ಅದನ್ನು ಗುಂಡಿಕ್ಕಿ ಕೊಂದಾಗ ಅನೇಕರು ಕಣ್ಣೀರಿಟ್ಟರು. ಅದರ ಮೃತ ದೇಹಕ್ಕೆ ಹೊಟ್ಟು ತುಂಬಿ ೧೯೨೬ ರಲ್ಲಿ ನಡೆದ ಸಮಾರಂಭವೊಂದರಲ್ಲಿ ಪ್ರದರ್ಶಿಸಲಾಯಿತು. ಅಮೆರಿಕ ಈ ನಾಯಿಯ ಸ್ಮರಣಾರ್ಥ ಅಂಚೆ ಚೀಟಿಯನ್ನು ಹೊರತಂದು ಓನಿಗೆ ಗೌರವ ಸಲ್ಲಿಸಿದೆ ಎಂದರೆ ಅದರ ಪ್ರಾಮುಖ್ಯತೆ ಎಷ್ಟಿತ್ತು ಎಂದು ತಿಳಿಯಬಹುದು.
- ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು )
