“ಅನನ್ಯ ಅಪ್ರತಿಮ ಕಥೆಗಾರನ ಮೇಲೊಂದು ಕವಿತೆ. ಅವಿರತ ಅನವರತ ಅನಂತ ಬರವಣಿಗೆಯ ಅಗೋಚರನ ಕಥನ ಗೀತೆ. ಯುಗಯುಗಗಳಿಂದ ಸಾವಿರದ ಸಾವಿರಾರು ಕೋಟಿ ಜೀವಕಥೆಗಳ ಬರೆಯುತ್ತಲೇ, ಬದುಕುಗಳ ಪ್ರತಿ ಪುಟ, ಪ್ರತಿ ಸಾಲು, ಪ್ರತಿ ಪದಗಳಲ್ಲೂ ಅನೂಹ್ಯ ಮರ್ಮಗಳಿಟ್ಟು ಅಚ್ಚರಿಗೊಳಿಸುವ ಆ ವಿಧಾತನಿಗಿಂತ ವಿರಾಟ್ ಕಥೆಗಾರ ಮತ್ತೊಬ್ಬರು ಇರಲು ಸಾಧ್ಯವೆ? ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಬರೆದೆ.. ಬರೆದೆನೆಂದು ಬಡಬಡಿಸುವವರಿಗೆ
ತಾವೇ ಕೌತುಕ, ರೋಚಕ, ಲೇಖಕರೆಂದು
ಗರ್ವದಿ ಬಡಾಯಿ ಕೊಚ್ಚಿ ಕೊಳ್ಳುವವರಿಗೆ
ನೀನೇಕೆ ಗೋಚರಿಸುವುದಿಲ್ಲವೋ ವಿಧಾತ.?
ಪುಟ ಪುಟದಿ ಸೋಜಿಗವಿಟ್ಟು ಬರೆವೆವೆಂದು
ಆತ್ಮರತಿ ಅಹಮ್ಮಿನಲಿ ಆರ್ಭಟಿಸುವವರಿಗೆ
ಕಲ್ಪನಾತೀತ ಬರಹಗಳೆಂದು ಮೆರೆವವರಿಗೆ
ನೀನೇಕೆ ಕಾಣುವುದಿಲ್ಲವೋ ಭಗವಂತ.?
ನಿನಗಿಂತ ಅನನ್ಯ ಬರಹಗಾರರುಂಟೆ ಜಗದಿ?
ನಿನಗಿಂತ ಅನೂಹ್ಯ ಲೇಖಕರುಂಟೆ ಲೋಕದಿ?
ಪ್ರತಿಬದುಕಿನೊಳಗೊಂದು ವಿಶಿಷ್ಟ ಕಥೆಯಿಟ್ಟಿಹೆ
ಪ್ರತಿಯೆದೆಯೊಳಗೊಂದು ವಿಭಿನ್ನ ವ್ಯಥೆಯಿಟ್ಟಿಹೆ.!
ಜೀವದ ಅಡಿಗಡಿಗೂ ಎಣಿಸದ ಅನಿರೀಕ್ಷಿತತೆ
ಬದುಕಿನ ಪುಟಪುಟದಿ ಅಂದಾಜಿಸದ ಕೌತುಕತೆ
ಕ್ಷಣಕ್ಷಣವೂ ಸತತ ಊಹಾತೀತ ರೋಚಕತೆ
ಅಸಂಖ್ಯ ಏರು ಜಾರು ತಿರುವುಗಳ ವಿಸ್ಮಯತೆ.!
ಆದ್ಯಂತಗಳಿಲ್ಲದ ಅಖಂಡ ಬರವಣಿಗೆ ನಿನ್ನದು
ಅನಂತ ಜೀವ-ಭಾವಗಳ ಮೆರವಣಿಗೆ ನಿನ್ನದು
ಅರಿವಿಗೂ ನಿಲುಕದ ಅನಂತ ಕಾವ್ಯಬಗೆ ನಿನ್ನದು
ಅಂದಾಜಿಸಲಾಗದ ಬಾಳಗಾತೆಗಳ ಭಾಷ್ಯ ನಿನ್ನದು.!
ಪ್ರತಿ ಹಣೆಬರಹವೂ ಅದೆಂತ ವಿಶೇಷ ವಿಸ್ಮಯ
ಪ್ರತಿ ಬಾಳಕಥೆಯೂ ಅದೆಷ್ಟು ವಿಭಿನ್ನ ವೈವಿಧ್ಯ
ಓ ಅವಿರತ ಅನವರತ ಬರವಣಿಗೆಯ ಲೇಖಕ
ಬಲ್ಲವರುಂಟೆ ನಿನ್ನ ಕಥನ ಶೈಲಿಯ ಬಗೆ ಬಗೆ.?
ಬರೆವೆವೆಂದು ಮೆರೆವವರ ಮರುಕ್ಷಣದ ಭವಿಷ್ಯ
ಆಯುಷ್ಯವನೆ ಬದಲಿಸಬಲ್ಲ ಮಹಾನ್ ಲಿಪಿಗಾರ
ಓ ಅದೃಶ್ಯ ಅಗೋಚರ ಅದ್ವಿತೀಯ ಕಥೆಗಾರ
ಯುಗಯುಗದಿಂದ ಸಮನಾರು ಜಗದಿ ನಿನಗೆ.?
- ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ.
