ಮಕ್ಕಳು ಎಷ್ಟೇ ದೊಡ್ಡವರಾದ್ರೂ ತಂದೆ ತಾಯಿಯ ದೃಷ್ಠಿಯಲ್ಲಿ ಅವರು ಸಣ್ಣಮಕ್ಕಳಿದ್ದಂತೆ. ತಮ್ಮ ಮಕ್ಕಳ ಬಾಳು ಚೆನ್ನಾಗಿರಲಿ ಎನ್ನುವ ಕಾಳಜಿಗೆ ಪಾಲಕರು ಮಕ್ಕಳಿಗೆ ಬುದ್ದಿಹೇಳಲು ಹೋಗುತ್ತಾರೆ ಅದು ಮಕ್ಕಳಿಗೆ ಅರ್ಥವಾಗದೆ ಅವರ ಜೀವನವನ್ನ ಹೇಗೆ ಅತಂತ್ರವನ್ನಾಗಿ ಮಾಡಿಕೊಳ್ಳುತ್ತಾರೆ ಈ ಕತೆಯ ಸಾರಾಂಶವಾಗಿದೆ. ತಪ್ಪದೆ ಓದಿ…
“ಏನ್ ಸುಶೀಲಾ, ಸೊಸೆ ಮನೆಯಲ್ಲಿ ಕಾಣ್ತಿಲ್ಲಾ…ಏನಾದ್ರೂ good ನ್ಯೂಸ್?…ಎಂದು ಹಲ್ಲು ಕಿರಿಯುತ್ತಾ ಪಕ್ಕದ್ಮನೆ ಮಂದಾಕಿನಿ ಕೇಳಿದಳು. ತಮ್ಮ ಸೊಸೆಗಿಂತ ಅಕ್ಕಪಕ್ಕದವರ ಸೊಸೆ ಎಲ್ಲಿ ಹೋದ್ರು , ಬಂದ್ರು ವಿಷಯ ತಿಳಿದುಕೊಳ್ಳುವ ಕುತೂಹಲ ಪಕ್ಕದ್ಮನೆ ಮಂದಾಕಿನಿಗೆ.
“ಇಲ್ಲಾ ರೀ, ಗುಡ್ ನ್ಯೂಸ್…ಇಗ್ತಾನೆ… ಅವಳ ಗೆಳತಿ ಬಂದಿದ್ಲು, ಕಿಟಿ ಪಾರ್ಟಿ ತಯಾರಿ ಮಾಡೋಕೆ ಶಾಪಿಂಗ್ ಗೆ ಹೋದ್ಲು” ಎಂದಳು ಸುಶೀಲಮ್ಮ.
“ಅದೇನದು ಕಿಟಿ ಪಾರ್ಟಿ?… ಅಲ್ಲಿ ಕುಡಿಯೋದು ಏನಾದ್ರು ಇರುತ್ತಾ?”… ಅಂತ ಗುಸು ಗುಸು ಮಾಡುತ್ತಾ ಕುತೂಹಲದಿಂದ ಕೇಳಿದ್ಲು ಮಂದಾಕಿನಿ.
“ಛೇ… ಛೇ… ನಮ್ಮ ಸೊಸೆ ಹಾಗೆಲ್ಲ ಮಾಡೋಲ್ಲ… ಕಿಟಿ ಪಾರ್ಟಿ ಅಂದ್ರೆ ಎಲ್ಲರೂ ಸೇರಕೊಂಡು ತಿಂತಾರೆ, ಸುಮ್ನೆ ಜ್ಯೂಸು ಕುಡಿತಾ ಹರಟೆ ಹೊಡೆಯೋದು, ಎಂಜಾಯ್ ಮಾಡೋದು ಅಷ್ಟೇ ರೀ “..ಎಂದಳು ಸುಶೀಲಮ್ಮ.
” ಈ ಹಾಳು ಪಾರ್ಟಿಗಳು ಗಂಡ್ಮಕ್ಕಳ್ಳನ್ನೇ ಬಿಡಲ್ಲ, ಇನ್ನೂ ಹೆಣ್ಮಕ್ಕಳನ್ನ ಹಾಳು ಮಾಡದೆ ಬಿಡ್ತಾವಾ?…ಏನೇ ಹೇಳ್ರಿ ಸುಶೀಲಮ್ಮ ಸೊಸೆಯನ್ನ ಈ ಪಾರ್ಟಿಯಿಂದ ದೂರಾನೇ ಇಡೀ”…. ಎಂದಳು ಮಂದಾಕಿನಿ.
ಅಸಲಿಗೆ ಸುಶೀಲಮ್ಮಳಿಗೂ ಸೊಸೆ ಪಾರ್ಟಿ, ಫ್ರೆಂಡ್ಸ್ ಅಂತ ಸುತ್ತೋದು ಸ್ವಲ್ಪವೂ ಇಷ್ಟವೇ ಇರಲಿಲ್ಲ, ಆದರೆ ಸೊಸೆಗೆ ನಿರ್ಬಂಧ ಹೇರಿದರೆ ಒಂದು ಹೋಗಿ ಇನ್ನೊಂದು ಆಗುತ್ತೆ ಅನ್ನುವ ಭಯಕ್ಕೆ ಸುಮ್ಮನಿದ್ದಳು. ಆದರೆ ಮಂದಾಕಿನಿ ಬಿಟ್ಟ ಹುಳ ಮಾತ್ರ ಸುಶೀಲಮ್ಮನಿಗೆ ಆಗಾಗ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಒಂದು ದಿನ ಮಗನ ಮುಂದೆ “ರವಿ… ನಿನ್ನ ಹೆಂಡತಿ ಕಿಟಿ ಪಾರ್ಟಿ ಅಂತ ತುಂಬಾ ಓಡಾಡ್ತಾಳೆ… ಸ್ವಲ್ಪ ಬುದ್ದಿ ಹೇಳಪ್ಪಾ…ಅಕ್ಕ ಪಕ್ಕ ನೋಡಿದವರು ಏನ್ ಅನ್ಕೋತ್ತಾರೆ”…ಎಂದಳು ಸುಶೀಲಮ್ಮ.
ರವಿಗೆ ತನ್ನ ಹೆಂಡತಿ ಪಾರ್ಟಿ ಹೋಗುವುದರಲ್ಲಿ ಅಭ್ಯಂತರವಿರಲಿಲ್ಲ. ಹಾಗಾಗಿ “ಅಮ್ಮ, ನೀನು ಬೇರೆಯವರ ಮಾತು ಕೇಳ್ಕೊಂಡು ಬಂದು ಹೀಗೆಲ್ಲಾ ಹೇಳ್ಬೇಡಾ, ಅಷ್ಟಾಗಿಯೂ ನಿನ್ನ ಸೊಸೆ ಒಂದು ಕಡೆ ಕಟ್ಟಿ ಹಾಕೋಕೆ ನಾಯಿ ಮರಿಯಲ್ಲ ….ಮಾಡ್ರನ್ ಸೊಸೆ. ಅವಳಿಗೆ ಬುದ್ದಿ ಹೇಳೋದು ಇಷ್ಟಾಗೋಲ್ಲ… ಅವಳಿಗೂ ಜವಾಬ್ದಾರಿ ಇದೆ” ಎಂದ.
ಮಗನೇ ಹೆಂಡತಿ ಪರವಾಗಿದ್ದಾಗ ನಾನು ಕಾಳಜಿಗೆ ಒಂದು ಮಾತು ಮಾತಾಡಿದ್ರೂ ತಪ್ಪಾಗುತ್ತೆ ಅಂತ ಸುಶೀಲಮ್ಮ ಏನೂ ಹೇಳದೆ ಅಲ್ಲಿಗೆ ಸುಮ್ಮನಾದಳು. ಆದರೂ ಸೊಸೆ ಪಾರ್ಟಿ ಬಗ್ಗೆ ಸುಶೀಲಮ್ಮನಿಗೆ ಅಸಮಾಧಾನವಿತ್ತು. ಕೊನೆಗೆ ತನ್ನ ಗಂಡ ಭಾಸ್ಕರ್ ನ ಬಳಿ ಹೋಗಿ “ರೀ… ಸೊಸೆ ಹೀಗೆ ಆಗಾಗ ಪಾರ್ಟಿ, ಫ್ರೆಂಡ್ಸ್ ಅಂತಿದ್ರೆ ಹೇಗೆ ರೀ?… ಮದುವೆ ಆಗಿ 5 ವರ್ಷ ಆಯ್ತು. ಮಕ್ಳು ಮರಿ ಬಗ್ಗೆ ಆಲೋಚನೆನೂ ಇಲ್ಲಾ. ಅತ್ತೆ ಬುದ್ದಿ ಹೇಳಿದ್ರೆ ಮಾತಿಗೆ ಮಾತು ಬೆಳಿಯುತ್ತೆ.ಸ್ವಲ್ಪ ನೀವೇ ಅವಳಿಗೆ ಕರೆದು ಬುದ್ದಿ ಹೇಳಿ.”… ಎಂದು ಮಗ ಸೊಸೆ ಮೇಲಿನ ಕಾಳಜಿಯನ್ನು ಗಂಡನ ಮುಂದಿಟ್ಟಳು. ಗಂಡ ಭಾಸ್ಕರ್ “ನೋಡು ಸುಶೀ… ಮಗ ಸೊಸೆ ನಮ್ಮ ಕಾಲದವರಲ್ಲ, ಈಗಿನ ಕಾಲದವರು. ನಾವು ಏನೇ ಹೇಳಿದ್ರು ತಪ್ಪಾಗುತ್ತೆ… ಮಗನೇ ನಮ್ಮ ಮಾತು ಕೇಳೋಲ್ಲ… ಇನ್ನೂ ಸೊಸೆ ಕೇಳ್ತಳಾ?. ಸುಮ್ನೆ ತಲೆಗೆ ಹಚ್ಚಕೋಬೇಡ ಬಿಟ್ಟು ಬಿಡು “…ಎಂದು ಸುಧಾರಿಸಲು ನೋಡಿದ.
ಸುಶೀಲಮ್ಮ ಅಷ್ಟಕ್ಕೇ ಬಿಡಲಿಲ್ಲ “ಮನೆಯಲ್ಲಿ ಹಿರಿಯರಾಗಿ ಬುದ್ದಿ ಮಾತು ಹೇಳದಿದ್ದರೆ ತಪ್ಪಾಗುತ್ತೆ.. ಒಂದೇ ಒಂದು ಸರಿ ಸಮಯ ನೋಡಿ ಬುದ್ದಿ ಹೇಳಿ” ಅಂದಳು. ಭಾಸ್ಕರ್ ಹೆಂಡತಿ ಮಾತಿಗೆ ಕಟ್ಟು ಬಿದ್ದು “ಆಯ್ತು ಮಾರಾಯ್ತಿ, ಸಮಯ ನೋಡಿ ಹೇಳ್ತಿನಿ” ಈಗ ಮಲ್ಕೋ ಎಂದ. ಇಬ್ಬರೂ ಮಲಗಿಕೊಂಡರು.
ಬೆಳಗ್ಗೆ ಭಾಸ್ಕರ್ ಪೇಪರ್ ಓದುತ್ತಾ ಹಾಲ್ ನಲ್ಲಿ ಕೂತಿದ್ದರು. ಸುಶೀಲಮ್ಮ ಗಂಡನಿಗೆ ಕಣ್ಣ ಸನ್ನೆ ಮಾಡಿ ಸೊಸೆಗೆ ಬುದ್ದಿ ಹೇಳುವಂತೆ ಹೇಳಿದಳು. ಸೊಸೆ ಆಫೀಸ್ ಗೆ ಟಿಫಿನ್ ಬ್ಯಾಗ್ ತಯಾರಿ ಮಾಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಳು. ಭಾಸ್ಕರ್ ಸೊಸೆಯನ್ನು ಮಾತಾಡಿಸಲು ಮುಂದಾದ ” ತಿಂಡಿ ತಿಂದು ಆಯ್ತಾಮ್ಮ…ಆಫೀಸ್ ನಿಂದ ಎಷ್ಟೋತ್ತಿಗೆ ಬರತೀಯಾ?… ಬೇಗ ಬಂದು ಬಿಡಮ್ಮಾ”…ಅಂದ. ಸೊಸೆ “ಇವತ್ತು ತಡವಾಗುತ್ತೆ ಮಾವ, ಆಫೀಸ್ ಲ್ಲಿ ಫ್ರೆಂಡ್ ಒಬ್ಬರು ಜಾಬ್ ಬಿಡ್ತಿದ್ದಾರೆ ಅವರಿಗೆ send off ಪಾರ್ಟಿ ಇದೆ”….ಎಂದು ಯಾವುದೇ ಅಳುಕಿಲ್ಲದೆ ಮಾವನಿಗೆ ನೇರವಾಗಿ ಹೇಳಿ ಆಫೀಸ್ ಗೆ ಹೊರಟು ಹೋದಳು. ಭಾಸ್ಕರ್ ಹೆಂಡತಿಯತ್ತ ಮುಖ ನೋಡಿ ಬುದ್ದಿ ಹೇಳೋ ಕಾಲ ಅಲ್ಲ ಅಂದ್ರು ನೀನು ಕೇಳೋಲ್ಲ ..ಎಂದು ಅಸಮಾಧಾನದಿಂದ ಪೇಪರ್ ಓದುತ್ತಾ ಕೂತ.
ಕೋಣೆಯೋಳಗಿದ್ದ ರವಿ ಆಫೀಸ್ ಗೆ ಹೊರಟು ನಿಂತ. ತಂದೆ ಭಾಸ್ಕರ್ ಮಗನಿಗಾದರೂ ಕರೆದು ನಾಲ್ಕು ಒಳ್ಳೆ ಮಾತು ಹೇಳೋಣ ಅಂದುಕೊಂಡು “ರವಿ…ಮದುವೆ ಆಗಿ ಐದು ವರ್ಷ ಆಯ್ತು… ಮಕ್ಳು ಬಗ್ಗೆ ಯೋಚನೆ ಮಾಡ್ರಪ್ಪಾ. ತುಂಬಾ ತಡ ಆದ್ರೆ ಕಷ್ಟ ಆಗುತ್ತೆ. ಒಂದು ಮಗು ಆದ್ರೆ ಸೊಸೆನೂ ಮಗುಗೋಸ್ಕರ ಬೇಗ ಮನೆಗೆ ಬರತ್ತಾಳೆ ಇಲ್ಲಾದ್ರೆ ಅವಳ ಪಾಡಿಗೆ ಪಾರ್ಟಿ, ಫ್ರೆಂಡ್ಸ್ ಅಂತ ಹೋಗ್ತಾಳೆ. ನೀನು ನಿನ್ನ ಪಾಡಿಗೆ ಇರತಿಯಾ ಸ್ವಲ್ಪ ವಿಚಾರ ಮಾಡ್ರಿ ಇಬ್ಬರು”…ಎಂದರು ಭಾಸ್ಕರ್ ಅವರು.
ಅಪ್ಪನ ಮಾತಿಗೆ ರವಿ ಸಿಟ್ಟಾದ. ” ಅದೆಲ್ಲಾ ಆಗೋಲ್ಲಪ್ಪಾ…ಹೆಂಡತಿಗೆ ನಾನು ಏನು ಬುದ್ದಿ ಹೇಳೋಲ್ಲ. ಅವಳಿಗೆ ಎಲ್ಲ ಜವಾಬ್ದಾರಿ ಇದೆ. ನೀವು ಅವರಿವರ ಮಾತು ಕೇಳಿ ನನ್ನ ಹೆಂಡತಿಯನ್ನ ದೂರತ್ತಾ ಕೂಡಬೇಡಿ. ನಿಮ್ಮ ಕಾಲ ಅಲ್ಲ”…. ಎಂದು ಸಿಟ್ಟಿನಲ್ಲಿಯೇ ಆಫೀಸ್ ಬ್ಯಾಗ್ ಹಿಡಿದು ಹೊರಟೆ ಹೋದ. ಭಾಸ್ಕರ್ ಮತ್ತು ಸುಶೀಲ ಬದುಕಿನ ಏಳು ಬೀಳನ್ನು ಹತ್ತಿರದಿಂದ ಕಂಡವರು, ಸೊಸೆ ಹೀಗೆ ಪಾರ್ಟಿ ಅಂತ ಓಡಾಡ್ತೀದ್ರೆ ಗಂಡನ ಮೇಲೆ, ಮನೆ ಮೇಲೆ ಆಸಕ್ತಿ ಕಮ್ಮಿ ಆಗುತ್ತೆ ಎನ್ನುವ ಕಾಳಜಿಗೆ ಮಗನಿಗೆ ಬುದ್ದಿ ಹೇಳಲು ಹೋದರು. ಆದರೆ ಅವನಿಗೆ ಅರ್ಥವೆ ಆಗಲಿಲ್ಲ. ಮುದಿ ಜೀವಗಳ ಹಿತೋಪದೇಶಗಳು ಬೇಕಿರಲಿಲ್ಲ. ನಾವೇ ಬುದ್ದಿವಂತರು ಎನ್ನುವ ಅಹಂ ಇಬ್ಬರಲ್ಲೂ ಇತ್ತು. ಭಾಸ್ಕರ್ ಮತ್ತು ಸುಶೀಲಾಳಿಗೆ ಮಗನ ವರ್ತನೆ ಬೇಸರ ತಂದಿತು ಏನೂ ಮಾತನಾಡದೆ ಸುಮ್ಮನಾದರು.
ಸುಶೀಲಾ ಅಡುಗೆ ಮನೆಯಲ್ಲಿ ತಿಂಡಿಗೆ ರೆಡಿ ಮಾಡುತ್ತಿದ್ದಳು. ಅಷ್ಟೋತ್ತಿಗೆ ಸೊಸೆ “ತಿಂಡಿ ಲೇಟ್ ಆದ್ರೆ ಆಫೀಸ್ ಲ್ಲೇ ತಿಂತೀನಿ ಅತ್ತೆ… ನನಗೆ ಮಾಡೋದು ಬೇಡ” ಅಂದಳು.
ಸುಶೀಲಾ ” ಒಗ್ಗರಣೆ ಹಾಕಿದ್ರೆ ಅವಲಕ್ಕಿ ರೆಡಿ ಆಗುತ್ತೆ ಇರಮ್ಮಾ…ಹೊರಗಿನದೆಲ್ಲ ಒಳ್ಳೇದಲ್ಲ, ಬೇಡ. ಆದಷ್ಟು ಮನೆದೇ ತಿನ್ನಮ್ಮ”…. ಅದ್ದಿದಷ್ಟೇ ಸೊಸೆ ಮುಖ ಊದಿಕೊಂಡಿತು. ಮರು ಮಾತಾಡಲಿಲ್ಲ. ಸುಶೀಲಾ ಸೊಸೆ ಹೇಗೂ ಇವತ್ತು ಕೈಗೆ ಸಿಕ್ಕಿದ್ದಾಳೆ ನಾಲ್ಕು ಬುದ್ದಿಮಾತು ಹೇಳಿಯೇ ಬಿಡೋಣ ಅಂತ ಮಾತು ಮುಂದೆವರೆಸಿ “ನೋಡಮ್ಮ… ನೀನು, ರವಿ ಆಫೀಸ್ ಅಂತ ಬೆಳಗ್ಗೆನೇ ಮನೆ ಬಿಟ್ಟುಬಿಡ್ತೀರಾ…ಇಬ್ಬರೂ ರಾತ್ರಿ ಒಂದೊಂದು ಟೈಮ್ ಗೆ ಬರತೀರಾ … ಬಂದಾಗ ಒಬ್ಬರಲ್ಲೂ ಮಾತಾಡೋ ಶಕ್ತಿ ಇರೋಲ್ಲ, ಸುಸ್ತಾಗಿತ್ತಿರಾ…ನಿಮಗೆ ಮಾತಾಡೋಕೆ ಅಂತ ಸಿಗೋದೇ ಶನಿವಾರ, ಭಾನುವಾರ. ಅದರಲ್ಲಿಯೂ ನೀನು ಫ್ರೆಂಡ್ಸ್, ಪಾರ್ಟಿ ಅಂತ ಹೋದ್ರೆ ಹೇಗಮ್ಮಾ “. ಸುಶೀಲಾಳಿಗೆ ಮಗ ಮತ್ತು ಸೊಸೆ ರಜೆಯಿದ್ದಾಗ ಜೊತೆಗೆ ಕಾಲ ಕಳೆಯಲಿ…. ಆದಷ್ಟು ಬೇಗ ಮುದ್ದಾದ ಮೊಮ್ಮಗ ಅಥವಾ ಮೊಮ್ಮಗಳೋ ಬರಲಿ ಎನ್ನುವ ಒಳ್ಳೆ ಉದ್ದೇಶವಿತ್ತು. ಆದರೆ ತುಂಬಾ ಬುದ್ದಿವಂತೆ ಸೊಸೆಗೆ ಅದೆಲ್ಲಾ ಎಲ್ಲಿ ಅರ್ಥ ಆಗಬೇಕು… “ನೋಡಿ ಅತ್ತೆ, ನಾವು ವಾರ ಪೂರ್ತಿ ದುಡೀತೀವಿ, stress ಆಗಿರುತ್ತೆ. ನಮಗೂ ಎಂಜೋಯ್ಮೆಂಟ್ ಬೇಕು. ಮನೆಯಲ್ಲಿ ಕೂತ್ರೆ ಮನಸ್ಸು ಹಗುರ ಆಗೋಲ್ಲ. ಅಲ್ದೆ ರವಿ ಜೊತೆಗೆ ಮಾತಾಡೋಕೆ ಮನೆಯಲ್ಲಿಯೇ ಕೂರಬೇಕಾಗಿಲ್ಲ. ಮೊಬೈಲ್ ಇದೆ. ಏನಾದ್ರೂ ಬೇಕಾದ್ರೆ ಫೋನ್ ಲ್ಲೇ ಮಾತಾಡ್ಕೊತೀವಿ. ನೀವು ನಮ್ಮ ವಿಷಯದಲ್ಲಿ ತಲೆ ಹಾಕ್ಬೇಡಿ”… ಅಂತ ಖಡಕ್ ಆಗಿ ನೇರವಾಗಿ ಹೇಳಿ ಅಲ್ಲಿಂದ ಕೆಂಪು ಮೂತಿ ಮಾಡ್ಕೊಂಡು ಹಾಲ್ ನಲ್ಲಿದ್ದ ತನ್ನ ವೈನಟಿ ಬ್ಯಾಗ್ ಬಗಲಿಗೆ ಹಾಕ್ಕೊಂಡು ಆಫೀಸ್ ಗೆ ಹೊರಟು ಹೋದಳು.
ಇಬ್ಬರ ಮಾತು ಕೇಳಿಸಿಕೊಳ್ಳುತ್ತಿದ್ದ ಸುಶೀಲಾಳ ಗಂಡ ಭಾಸ್ಕರ್ “ಯಾಕೆ ಸುಶೀ, ಬುದ್ದಿಹೇಳೋಕೆ ಹೋದೆ. ಈಗಿನ ಕಾಲದವರು ಬುದ್ದಿ ಹೇಳೋಕೆ ಹೋದ್ರೆ ಇಷ್ಟಾಗೋಲ್ಲ ಅಂದ್ರು ಮತ್ತೆ ಮತ್ತೆ ಬುದ್ದಿ ಹೇಳೋಕೆ ಹೋಗ್ತಿಯಾ. ಇದರಿಂದ ಮತ್ತೆ ಮನೆಯಲ್ಲಿ ಏನು ರಾಮಾಯಣ ಆಗುತ್ತೋ”..ಅಂತ ಲೋಚ ಗುಟ್ಟಿದ. ಸುಶೀಲಾ ನಾನು ಅನ್ನಬಾರದು ಏನಂದೆ ಅಂತ ಸೊಸೆ ಹೀಗೆ ಸಿಟ್ಟಾದ್ಲು ಅಂತ ಕಣ್ಣಲ್ಲಿ ನೀರು ತುಂಬಿತು.
ಸಾಯಂಕಾಲ ರವಿ ಮನೆಗೆ ಬಂದಾಗ ಮುಖ ಉಬ್ಬಿತ್ತು. ಸುಶೀಲಾ, ಭಾಸ್ಕರ್ ಗೆ ಸೊಸೆ ಮಗನಿಗೆ ಫೋನ್ ನಲ್ಲಿಯೇ ಎಲ್ಲ ವಿಷಯ ಕಿವಿ ತುಂಬಿದ್ದಾಳೆ ಅಂತ ತಿಳಿಯಿತು. ಸುಶೀಲಾ ವಿಷಯ ತಿಳಿ ಮಾಡಲು ಮಗನಿಗೆ ಕಾಫಿ ಕೊಡ್ಲಾ ರವಿ…ಎಂದು ಹಿಂದಿಂದೆ ಹೋಗಿ ಮಾತಾಡಿಸಿದಳು. ರವಿ ಮಾತ್ರ ಗರಂ ಆಗಿಯೇ ಇದ್ದ. ಸುಶೀಲಾ ಮಗನಿಗೆ ಕಾಫಿ ಮಾಡಿ ಅವನ ರೂಮ್ ಗೆ ಒಯ್ಯದಳು. ರವಿ ಕಾಫಿ ತಗೋ ಅಂದಳು. ರವಿ ಬೇಡ ಅಂತ ಒಂದೇ ಮಾತಲ್ಲಿ ಮುಗಿಸಿದ. ಸುಶೀಲಾಳಿಗೆ ಮನಸ್ಸಿಗೆ ನೋವಾದರೂ ರವಿ ಯಾಕೆ ಸಿಟ್ಟಾಗಿದ್ದಿಯಾ ಅಂತ ನೇರವಾಗಿ ಹೇಳಪ್ಪಾ … ಎಂದೇ ಬಿಟ್ಟಳು. ಮುಖ ತೊಳೆದು ನಿಂತಿದ್ದ ರವಿ ಕೈಯಲ್ಲಿದ್ದ ಟಾವೆಲ್ ನ್ನು ಎತ್ತಿ ಬೆಡ್ ಮೇಲೆ ಕೋಪದಿಂದ ಬಿಸಾಕಿ “ಅಮ್ಮಾ… ನಿನಗೆ ಅಪ್ಪನಿಗೆ ಏನಾಗಿದೆ… ಅವಳು ಪಾರ್ಟಿ, ಫ್ರೆಂಡ್ಸ್ meet ಮಾಡಿದ್ರೆ ನನಗೇನೇ ಸಮಸ್ಯೆ ಇಲ್ಲಾ. ನಿಮಗ್ಯಾಕೆ ಸಮಸ್ಯೆ ಆಗ್ತಿದೆ. ಎಷ್ಟು ಸಾರಿ ಹೇಳಿದ್ದೀನಿ ಇದು ನಿಮ್ಮ ಕಾಲ ಅಲ್ಲ. ಈಗಿನ ಹೆಣ್ಮಕ್ಕಳಿಗೆ ಅವರದೇ ಫ್ರೀಡಂ ಇದೆ. ಹಳೆ ಕಾಲದವರ ತರ ಪಿರಿ ಪಿರಿ ಮಾಡ್ತೀರಾ… ನಿಮ್ಮಿಂದ ನೆಮ್ಮದಿನೇ ಹೋಗಿದೆ”…ಅಂತ ಸುಶೀಲಾಳಿಗೆ ಹೇಳಿದಾಗ ದುಃಖ ತಡೆಯಲಾಗಲಿಲ್ಲ.. ಸುಶೀಲಾ ದುಃಖ ತಡೆಯಲಾಗದೆ ರವಿ ರೂಮ್ ನಿಂದ ಅಳುತ್ತಲೇ ಹೊರಗೆ ಬಂದಳು. ಹಾಲ್ ನಲ್ಲಿದ್ದ ಭಾಸ್ಕರ್ ಹೆಂಡತಿಯ ಮುಖ ನೋಡಿ ಅರ್ಥ ಮಾಡಿಕೊಂಡು ಸುಶೀಲಾಳ ಬಳಿ ಬಂದು ಹೆಗಲು ಸವರಿ ಸಮಾಧಾನ ಮಾಡಲು ಪ್ರಯತ್ನಿಸಿದ. ಸುಶೀಲಾ ಅವತ್ತು ರಾತ್ರಿ ಪೂರ್ತಿ ಮಗನ ಮಾತಿನಿಂದ ನಿದ್ದೆ ಬಾರದೆ ಕಣ್ಣೀರು ಹಾಕುತ್ತಾ ಒದ್ದಾಡಿದಳು, ಭಾಸ್ಕರ್ ಮನಸ್ಸಲ್ಲೇ ಸಾಕಷ್ಟು ನೊಂದಿದ್ದರು. ಇಬ್ಬರೂ ಮಾತಿಲ್ಲದೆ ಹಾಸಿಗೆ ಮೇಲೆ ಮೌನವಾಗಿಯೇ ರೋಧಿಸಿದರು.
ಬೆಳಿಗ್ಗೆ ಎಂದಿನಂತೆ ಸುಶೀಲಾ ಅಡುಗೆ ಮನೆಯಲ್ಲಿ ಮಗ ಸೊಸೆಗೆ ತಿಂಡಿ ರೆಡಿ ಮಾಡುತ್ತಿದ್ದಳು. ಸೊಸೆ ಬಂದವಳೇ “ನನಗೆ ತಿಂಡಿ ಬೇಡಾ ಅತ್ತೆ”…. ಅಂತ ಹೇಳಿ ಅವರ ಮರು ಉತ್ತರಕ್ಕೂ ಕಾಯದೆ ಆಫೀಸ್ ಗೆ ಹೊರಟೆ ಹೋದಳು. ಸುಶೀಲಾಳಿಗೆ ಮತ್ತೆ ದುಃಖ ಆವರಿಸಿತು. ಭಾಸ್ಕರ್ ಅವರು ಹೆಂಡತಿಗೆ ಕಣ್ಣ ಸನ್ನೆಯಲ್ಲಿಯೇ ಸುಮ್ಮನಾಗು ಎಂದರು.
ರವಿ ರೂಮ್ ನಿಂದ ಹೊರಗೆ ಬಂದವನೇ ಅಮ್ಮಾ ಇಲ್ಲಿ ಬಾ ಎಂದು ಭಾಸ್ಕರ್ ಅವರು ಕೂತಲ್ಲಿಗೆ ಕರೆದ. ಸುಶೀಲಾಳಿಗೆ ಮಗ ಗಾಂಭೀರ್ಯದಿಂದ ಕರೆಯುವುದು ನೋಡಿ ಗಾಬರಿಯಲ್ಲಿಯೇ ಹಾಲ್ ನಲ್ಲಿ ಬಂದು ಕೂತಳು.
“ನೋಡಿ ಅಪ್ಪಾ…..ಅಮ್ಮ….ಯಾಕೋ ನಮ್ಮ ನಡುವೆ ಸರಿ ಬರ್ತಿಲ್ಲ. ದಿನ ಬೆಳಗ್ಗೆಯಾದ್ರೆ ನೀವು ಅವಳಿಗೆ ಒಂದೊಂದು ಮಾತು ಹೇಳ್ತಿದ್ರೆ ನೆಮ್ಮದಿ ಹಾಳಾಗುತ್ತೆ. ಅವಳು ಆಫೀಸ್ ಲ್ಲಿ ಕೆಲಸ ಮಾಡೋಳು. ಮೂಡ್ ಆಫ್ ಮಾಡ್ಕೊಂಡು ಕೆಲಸ ಮಾಡೋಕೆ ಆಗೋಲ್ಲ. ಅವಳಿಗೂ ದುಃಖ ಆಗುತ್ತೆ. ಅದಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದೀನಿ “….
ಸುಶೀಲಾ ಮತ್ತು ಭಾಸ್ಕರ್ ಮಗನ ಮಾತು ಕೇಳಿ ಆತಂಕವಾಯಿತು. ಮಗ ಏನು ನಿರ್ಧಾರ ತಗೆದುಕೊಂಡಿದ್ದಾನೋ ಏನೋ ಎಂದು ಭಯದಲ್ಲಿಯೇ ಅವನ ಮುಖ ನೋಡುತ್ತಿದ್ದರು.
ಮುಂದುವರೆಯುತ್ತದೆ…
(ಸೂಚನೆ : ಇದು ಯಾರ ವೈಯಕ್ತಿಕ ಕತೆಯಲ್ಲ, ವಾಸ್ತವಕ್ಕೆ ಹತ್ತಿರವಾದ ಕತೆ )
- ಶಾಲಿನಿ ಹೂಲಿ ಪ್ರದೀಪ್
