ಮಕ್ಕಳು ಎಷ್ಟೇ ದೊಡ್ಡವರಾದ್ರೂ ತಂದೆ ತಾಯಿಯ ದೃಷ್ಠಿಯಲ್ಲಿ ಅವರು ಸಣ್ಣಮಕ್ಕಳಿದ್ದಂತೆ. ತಮ್ಮ ಮಕ್ಕಳ ಬಾಳು ಚೆನ್ನಾಗಿರಲಿ ಎನ್ನುವ ಕಾಳಜಿಗೆ ಪಾಲಕರು ಮಕ್ಕಳಿಗೆ ಬುದ್ದಿಹೇಳಲು ಹೋಗುತ್ತಾರೆ ಅದು ಮಕ್ಕಳಿಗೆ ಅರ್ಥವಾಗದೆ ಅವರ ಜೀವನವನ್ನ ಹೇಗೆ ಅತಂತ್ರವನ್ನಾಗಿ ಮಾಡಿಕೊಳ್ಳುತ್ತಾರೆ ಈ ಕತೆಯ ಸಾರಾಂಶವಾಗಿದೆ. ತಪ್ಪದೆ ಓದಿ…
ಹಾಲ್ ನಲ್ಲಿ ಕೂತಿದ್ದ ಸುಶೀಲಾ ಮತ್ತು ಭಾಸ್ಕರ್ ಆತಂಕದಿಂದ ಮಗ ರವಿಯ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದರು. ರವಿ ಅಪ್ಪ – ಅಮ್ಮನ ಕಣ್ಣಿಲ್ಲಿ ಕಣ್ಣಿಟ್ಟು ನೋಡಲಾಗದೆ ತನ್ನ ಮುಂದಿದ್ದ ಟಿಪಾಯಿಯನ್ನೇ ನೋಡುತ್ತಾ “ನೋಡಿ… ನಾನು ಮತ್ತು ನನ್ನ ಹೆಂಡತಿ ಈ ಮನೆಯಲ್ಲಿ ನಿಮ್ಮ ಜೊತೆಗೆ ಒಟ್ಟಿಗೆ ಇರೋಕೆ ಆಗ್ತಿಲ್ಲ. ದಿನ ಬೆಳಗ್ಗೆಯಾದ್ರೆ ಕಿತ್ತಾಟ, ಮನಸ್ತಾಪ ಸಾಕಾಗಿ ಹೋಗಿದೆ. ಇದರಿಂದ ನಾವ್ಯಾರು ನೆಮ್ಮದಿಯಿಂದ ಇರೋಕೆ ಆಗ್ತಿಲ್ಲ. ಅದಕ್ಕೆ”… ರವಿ ತನ್ನ ಮಾತಿಗೆ ಅಲ್ಪ ವಿರಾಮ ಹಾಕಿದ. ಅವನ ಅರ್ಧoಬರ್ಧ ಮಾತಿನಿಂದ ಭಾಸ್ಕರ್ ಅವರು
“ಹೇಳಪ್ಪಾ ಅದಕ್ಕೆ…. ಏನು? ಮುಂದೇನು?… ಮಾತು ಹೇಳಿ ಮುಗಿಸು” ಎಂದರು. ಸುಶೀಲಾ ಕಣ್ಣುಗಳಲ್ಲಿ ಭಯದ ಜೊತೆಗೆ ದುಃಖ ಮಡುಗಟ್ಟಿತು. ರವಿ ತನ್ನ ಮಾತನ್ನು ಮುಂದುವರೆಸಿದ
“ಅಪ್ಪಾ, ಅಮ್ಮಾ… ಇನ್ಮೇಲೆ ನಾವು ಜೊತೆಗೆ ಇರೋದು ಬೇಡ. ನಾನು, ನನ್ನ ಹೆಂಡತಿ ಬೇರೆ ಮನೆ ಮಾಡೋ ನಿರ್ಧಾರ ಮಾಡಿದ್ದೀವಿ”… ಅಂತ ತನ್ನ ಮನಸ್ಸಿನಲ್ಲಿದ್ದ ವಿಷವನ್ನೆಲ್ಲ ಕಕ್ಕಿದ. ಅವನ ಮಾತು ಕೇಳಿ ಭಾಸ್ಕರ್ ಎದೆಯೇ ನಡುಗಿತ್ತು. ಸುಶೀಲಾ ಅಲ್ಲಿವರೆಗೂ ಅದುಮಿಟ್ಟಿದ್ದ ಕಣ್ಣೀರ ಕೊಡಿ ಹರಿಯ ತೊಡಗಿತು. ಮುಪ್ಪಿನಲ್ಲಿ ಮಕ್ಕಳ ಆಶ್ರಮ ಅತ್ಯವಶ್ಯಕವಾಗಿರುತ್ತೆ. ಮಗ ಹೀಗೆ ಏಕಾಏಕಿ ವಯಸ್ಸಾದ ಅಪ್ಪ ಅಮ್ಮನ ಬಿಟ್ಟು ಹೋಗ್ತಾನೆ ಅಂದಾಗ ಇಬ್ಬರಿಗೂ ಭರ ಸಿಡಿಲು ಬಡೆದಂತೆ ಆಯಿತು. ಸುಶೀಲಾ ಕಣ್ಣಲ್ಲಿ ನೀರು ಹಾಕುತ್ತಾ
“ಇನ್ಮೇಲೆ ನಿನ್ನ, ನಿನ್ನ ಹೆಂಡತಿ ತಂಟೆಗೆ ನಾವಿಬ್ರು ಬರೋಲ್ಲಪ್ಪಾ… ನೀವು ಪಾರ್ಟಿ ಆದ್ರೂ ಮಾಡ್ರಿ, ಹೇಗಾದ್ರೂ ಇರಿ. ಅಪ್ಪನಿಗೆ ಹಾರ್ಟ್ ಪ್ರಾಬ್ಲಮ್ ಇದೆ ರವಿ. ಅರ್ಥ ಮಾಡ್ಕೊಳ್ಳೋ…. ಬೇಕಿದ್ರೆ ನಿನ್ನ ಹೆಂಡತಿ ಮುಂದೆ ಕ್ಷಮೆ ಕೇಳ್ತೀನಿ… ಮನೆ ಮಾತ್ರ ಬಿಟ್ಟು ಹೋಗಬೇಡಪ್ಪಾ” ಅಂತ ಗೂಗರೆದಳು. ಭಾಸ್ಕರ್ ಸುಶೀಲಾಳಿಗೆ ಸಮಾಧಾನ ಮಾಡುತ್ತಾ ತನ್ನನ್ನು ತಾನು ಸುಧಾರಿಸಿಕೊಂಡು “ಯಾವಾಗ ಹೋಗ್ತಿರಪ್ಪಾ”..ಎಂದು ಕೇಳಿದರು.
“ಪಕ್ಕದ ಏರಿಯಾದಲ್ಲಿ ಮನೆ ಸಿಕ್ಕಿದೆ.. ಬರೋವಾರದಲ್ಲಿ…
ಶಿಫ್ಟ್ ಆಗ್ತೀವಿ”… ರವಿ ಆತುರ ಆತುರವಾಗಿ ಮನೆ ಮಾಡಿದ ವಿಷಯವನ್ನ ಹೇಳ್ತಾ ಹೋದ. ಭಾಸ್ಕರ್ ಹಾಗೂ ಸುಶೀಲಾಳಿಗೆ ಮಗ, ಸೊಸೆ ಮೊದಲೇ ಎಲ್ಲ ವ್ಯವಸ್ಥೆ ಮಾಡಿಕೊಂಡದ್ದು ಕೇಳಿ ದುಃಖ ಹೆಚ್ಚಿತು. ಭಾಸ್ಕರ್ “ಆಯ್ತು… ನಿಮಗೆ ಬೇಕಾದ ವಸ್ತುಗಳನ್ನ ತಗೆದುಕೊಂಡು ಹೋಗಿ”… ಎಂದರು.
ರವಿ “ಬೇಸರ ಮಾಡ್ಕೋಬೇಡಿ… ನಾನು ಪಕ್ಕದಲ್ಲೇ ಇರತೀನಿ. ನಿಮಗೆ ಏನೇ ಬೇಕಾದ್ರೂ ಕಾಲ್ ಮಾಡಿ, ತಕ್ಷಣ ಬಂದು ಬಿಡ್ತೀನಿ”… ಅಂತ ಪರಿಸ್ಥಿತಿ ಸುಧಾರಿಸಲು ನೋಡಿದ. ಭಾಸ್ಕರ್ ಅವರ ನೋವಿನ ಎಲ್ಲೇ ದಾಟಿತ್ತು “ಬೇಡಪ್ಪಾ…. ನೀನು, ನಿನ್ನ ಹೆಂಡತಿ ಖುಷಿಯಾಗಿ ಇರಿ.. ಮತ್ತೆ ಮನೆಗೆ ಬರುವ ಯೋಚ್ನೆ ಬೇಡ. ಹೇಗೂ ನನಗೆ ಪೆನ್ಷಶನ್ ಇದೆ. ಇಬ್ಬರೂ ಹೇಗೋ ಬದ್ಕತೀವಿ”… ಎಂದು ಹೇಳಿ ಒಂದು ಕ್ಷಣನೂ ಅಲ್ಲಿ ನಿಲ್ಲದೆ ತನ್ನ ರೂಮ್ ನೊಳಗೆ ಭಾಸ್ಕರ್ ಸೇರಿಕೊಂಡರು, ಭಾಸ್ಕರ್ ನ ಹಿಂದೆ ಸುಶೀಲಾ ಕಣ್ಣಲ್ಲಿ ನೀರು ಹಾಕುತ್ತಲ್ಲೇ ಹೋದಳು.
ರವಿ ತಲೆಯಲ್ಲಿದ್ದ ದೊಡ್ಡ ಭಾರ ಹಗುರವಾಗಿ ಕೆಳಗೆ ಇಳಿಯಿತೆಂದು ಸಮಾಧಾನವಾದ. ಸೀದಾ ತನ್ನ ರೂಮ್ ನತ್ತ ಹೋಗಿ ಹೆಂಡತಿಗೆ ಕಾಲ್ ಮಾಡಿದ “ಎಲ್ಲ ಮಾತು ಹೇಳಿ ಮುಗಿಸಿದೆ. ಇನ್ಮೇಲೆ ನಾವಿಬ್ಬರೇ ಮನೆಯಲ್ಲಿ, ಯಾವ ಕಿರಿಕಿರಿ ಇಲ್ಲಾ “ಎಂದ. ರವಿಯ ಹೆಂಡತಿ ನಗುತ್ತಾ ಲವ್ ಯೂ ಹನಿ ಎನ್ನುತ್ತಾ ಖುಷಿಯಿಂದ ಫೋನ್ ಕೆಳಗೆ ಇಟ್ಟಳು.
ತಾನು ಆಡಿ ಬೆಳೆದ ಮನೆ, ತನ್ನನ್ನು ಆಡಿಸಿ ಬೆಳೆಸಿದ ಅಪ್ಪ ಅಮ್ಮನನ್ನು ರವಿ ತನ್ನ ಹೆಂಡತಿ ಮನೆ ಬಿಟ್ಟು ಹೊರಟಿದ್ದಾನೆ. ಭಾಸ್ಕರ್ ರ ಮನಸ್ಸು ಸಾಕಷ್ಟು ಕುಗ್ಗಿ ಹೋಗಿದೆ. ಒಂದೇ ಮಗುವಿದ್ದರೇ ಪ್ರೀತಿಯನ್ನೇಲ್ಲಾ ಒಬ್ಬನಿಗೆ ಧಾರೆ ಎರೆಯಬಹುದು ಎಂದು ಭಾಸ್ಕರ್ ಮತ್ತು ಸುಶೀಲಾ ಆ ಕಾಲಕ್ಕೆ ರವಿಯೊಬ್ಬನೇ ಸಾಕು ಎಂದು ನಿರ್ಧಾರಿಸಿದ್ದರು. ತುಂಬಾ ಮುದ್ದಿನಿಂದ ಸಾಕಿ, ಬೆಳೆಸಿದ್ದರು. ಬಾಲ್ಯದಿಂದಲೂ ಅವನ ಬೇಕು ಬೇಡಗಳನ್ನು ತಂದೆ, ತಾಯಿ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ಮಗನಿಗೆ ನೀಡುತ್ತಾ ಬಂದಿದ್ದರು. ಮದುವೆ ವಯಸ್ಸಿಗೆ ಬಂದಾಗ ಭಾಸ್ಕರ್ ತನ್ನ ತಂಗಿ ಮಗಳನ್ನು ಸೊಸೆಯಾಗಿ ತರಬೇಕು ಎಂದುಕೊಂಡಾಗ ರವಿ ತನ್ನ ಸಹಪಾಠಿ ಶೃತಿಯ ಜೊತೆಗೆ ಪ್ರೇಮ ಬಂಧನದಲ್ಲಿ ಇದ್ದು, ಅವಳನ್ನೇ ಮದುವೆಯಾಗುವುದಾಗಿ ಹೇಳಿದ್ದ . ಭಾಸ್ಕರ್ ಮತ್ತು ಸುಶೀಲಾ ಮಗನ ಆಸೆಗೆ ನೀರನ್ನೆರಚದೆ ಶೃತಿಯನ್ನು ಸಂತೋಷದಿಂದ ಸೊಸೆಯನ್ನಾಗಿ ಸ್ವೀಕರಿಸಿದ್ದರು. ಆದರೆ ಭಾಸ್ಕರ್ ನ್ನ ತಂಗಿ ತನ್ನ ಮಗಳನ್ನು ರವಿ ಒಪ್ಪದಿದ್ದದ್ದು, ಅಣ್ಣ ತಂಗಿಯ ನಡುವೆ ಬಿರುಕು ಮೂಡಿತ್ತು. ಇದನ್ನೆಲ್ಲಾ ಭಾಸ್ಕರ್ ಮತ್ತು ಸುಶೀಲಾ ತಲೆಗೆ ಹಾಕಿಕೊಳ್ಳದೆ ತಮ್ಮ ಮಗ ಸಂತೋಷ ಮುಖ್ಯ ಎಂದು ಬದುಕುತ್ತಿದ್ದರು.
ಶೃತಿ ಕೂಡಾ ಒಬ್ಬಳೇ ಮಗಳು. ತಾಯಿಯ ಮನೆಯಲ್ಲಿ ಮುದ್ದಾಗಿ ಬೆಳೆದಿದ್ದರಿಂದ ಮನೆ ಕೆಲಸ, ಅಡುಗೆ ಕೆಲಸಗಳು ಅಷ್ಟಾಗಿ ಬರುತ್ತಿರಲಿಲ್ಲ. ಅದನ್ನು ಸೂಕ್ಶ್ಮವಾಗಿ ಅರಿತಿದ್ದ ಸುಶೀಲಾ, ಮಗ, ಸೊಸೆ ಆಫೀಸ್ ಹೋಗುವುದರೊಳಗೆ ತಾನೇ ತಿಂಡಿ ಮಾಡಿ, ಬಾಕ್ಸ್ ಗೂ ಹಾಕಿ ಇಡುತ್ತಿದ್ದಳು. ಇಷ್ಟೆಲ್ಲಾ ಪ್ರೀತಿಕೊಟ್ಟ ಅಪ್ಪ ಅಮ್ಮನಿಗೆ ರವಿ ಹಾಗೂ ಶೃತಿಗೆ ಹಿರಿಯರ ಹಿತೋಪದೇಶಗಳು ಉಸಿರು ಗಟ್ಟಿಸಿತ್ತು.
ಈಗ ಬೇರೆ ಮನೆಗೆ ಹೊರಟು ನಿಂತ ಮಗ- ಸೊಸೆಯನ್ನು ಬೀಳ್ಕೊಡಲು ಭಾಸ್ಕರ್ ಹಾಗೂ ಸುಶೀಲಗೆ ಕಷ್ಟವಾಯಿತು. ಇಬ್ಬರೂ ತಮ್ಮ ಕೋಣೆಯಿಂದ ಹೊರಕ್ಕೆ ಬರಲಿಲ್ಲ. ರವಿ ಮತ್ತು ಶೃತಿ ಅವರ ಕೋಣೆಗೆ ಹೋಗಿ ಬರುವುದಾಗಿ ಹೇಳಿ ಅವರ ಹೊರಟರು. ಇಬ್ಬರಿಗೂ ಹೊಸ ಮನೆ, ಕಿರಿ ಕಿರಿ ಇಲ್ಲದ ಬದುಕು, ಸ್ವಚ್ಛoದವಾಗಿ ಬದುಕು ಕಟ್ಟಿಕೊಳ್ಳೋಣ ಎನ್ನುವ ಸಂತೋಷವಿತ್ತೇ ವಿನಃ ವಯಸ್ಸಾದ ಹಿರಿಯ ಜೀವಗಳ ಭಾವನೆಗಳ ಬಗ್ಗೆ ಕಿಚ್ಚಿತ್ತು ಯೋಚನೆ ಇರಲಿಲ್ಲ. ರವಿ ಮತ್ತು ಶೃತಿ ತಮ್ಮ ಗಂಟು ಮೂಟೆಯನ್ನು ಕಾರಿನಲ್ಲಿ ಹಾಕಿಕೊಂಡು ಹಿಂದಕ್ಕೂ ನೋಡದೆ ಹೊರಟೆ ಹೋದರು.
ಭಾಸ್ಕರ್ ಮತ್ತು ಸುಶೀಲಾ ಕಿಟಕಿಯಲ್ಲಿ ಅವರು ಹೊರಟ ದಾರಿಯನ್ನೇ ನೋಡುತ್ತಾ ಇಬ್ಬರ ಕಣ್ಣುಗಳಲ್ಲಿ ನೀರು ತುಂಬಿದ್ದವು. ನಾಳೆಯ ಭರವಸೆಗಳು ನುಚ್ಚು ನೂರಾಗಿ ಹೋಗಿತ್ತು. ನಾಳೆ ನಮ್ಮ ಬದುಕು ಹೇಗೆ? ಎನ್ನುವ ಯಕ್ಷ ಪ್ರಶ್ನೆಯಲ್ಲಿ ಕಣ್ಣಿಂದ ನೀರು ಹರಿಯಿತು.
ಮನಸ್ಸಿಗೆ ಚೇತರಿಸಿಕೊಳ್ಳುವ ಶಕ್ತಿ ಇರಲಿಲ್ಲ. ಆದರೂ ಸುಶೀಲಾ ಗಂಡನಿಗೆ ಟೀ ಮಾಡಲು ಅಡುಗೆ ಮನೆಗೆ ಹೋದಳು. ಮಾಡಿದ ಅಡುಗೆ ಹಾಗೆಯೇ ಇತ್ತು. ಸುಶೀಲಾ ಟೀ ಮಾಡಿ ಗಂಡನಿಗೆ ಕೊಡಲು ಕೋಣೆಗೆ ಹೋದಳು. ಭಾಸ್ಕರ್ “ಬೇಡಾ ಸುಶೀಲಾ… ಏನು ತಿನ್ನೋಕೆ, ಕುಡಿಯೋಕೆ ಮನಸ್ಸಾಕ್ತಿಲ್ಲ. ನನಗೆ ಏನು ಬೇಡ”… ಅಂದರು. ಆದರೆ ಸುಶೀಲಾ ಬಿಡಲಿಲ್ಲ. ಒತ್ತಾಯ ಮಾಡಿ ಟೀ ಕೊಟ್ಟಳು. “ರೀ… ಇನ್ನೂ ನಮ್ಮಲ್ಲಿ ಶಕ್ತಿ ಇದೆ. ರವಿ ಹೋದ ಅಂತ ನಮ್ಮ ಜೀವನ ಮುಗಿಯೋಲ್ಲ ರೀ…ಪರಿಸ್ಥಿತಿಗೆ ನಾವು ಗಟ್ಟಿಯಾಗಿ ನಿಲ್ಲಬೇಕು ರೀ”… ಎಂದಳು ಸುಶೀಲಾ.
ಸುಶೀಲಾಳ ಮಾತು ಕೇಳಿ ಭಾಸ್ಕರ್ ಆಶ್ಚರ್ಯದಿಂದ “ಸುಶೀ ಈ ಮಾತು ನೀನು ಹೇಳ್ತಿದ್ದೀಯಾ?… ಹೆತ್ತ ಕರಳಿಗೆ ನನಗಿಂತ ಹೆಚ್ಚು ನೋವಾಗಿರುತ್ತೆ ಅಂದುಕೊಂಡಿದ್ದೆ. ನೀನು ಧೈರ್ಯವಾಗಿದ್ದದ್ದು ನೋಡಿ ಖುಷಿ ಆಯ್ತು ಕಣೇ”… ಅಂದ.
“ನಾವು ಹೆತ್ತ ಮಗ ಅನ್ನೋದು ಬಿಟ್ರೆ, ಅವನು ಒಂದು ದಿನಾನೂ ನಮ್ಮೊಂದಿಗೆ ಪ್ರೀತಿಯಿಂದ ಕೂತು ಮಾತನಾಡಲಿಲ್ಲ. ಒಂದು ದಿನಾನೂ ಬಾಯ ಮಾತಿಗೆ ತಿಂಡಿ ಆಯ್ತಾ ಅಪ್ಪಾ, ಊಟ ಆಯ್ತಾ ಅಮ್ಮ… ಅಂತ ಕಾಳಜಿನೂ ತೋರಿಸಲಿಲ್ಲ. ಅವನು ಏನೇ ಬೈದ್ರು, ಅಂದ್ರು ಮಗ ಎನ್ನುವ ಮಮಕಾರದಲ್ಲಿ ಎಲ್ಲವನ್ನು ಮರೆತು ಬಿಡ್ತಿದ್ವಿ. ರೆಕ್ಕೆ ಬಲಿತಿದೆ, ಇನ್ನೂ ಜೊತೆಗೆ ಇರಲಿ ಅನ್ನೋದು ಸರಿ ಅಲ್ಲ….ಸ್ವಾರ್ಥ ಬೇಡ ರೀ… ಹೋಗ್ಲಿ ಅವನು. ಜಗತ್ತು, ಜೀವನ ನೋಡ್ಲಿ”… ಸುಶೀಲಾಳ ಪ್ರಬುದ್ಧತೆಯ ಮಾತು ಕೇಳಿ ಭಾಸ್ಕರ್ ನಿಗೂ ಸತ್ಯ ಅನಿಸಿತು. ಮಕ್ಕಳು ಎಷ್ಟೇ ದೊಡ್ಡವರಾದರೂ ತಂದೆ ತಾಯಿಗೆ ಅವರು ಪುಟ್ಟ ಮಕ್ಕಳು. ಮಕ್ಕಳ ಮೇಲಿನ ಪ್ರೀತಿ, ಕಾಳಜಿಗೆ ಅವರನ್ನು ನಮ್ಮ ಹಿಡಿತದಲ್ಲಿ ಇಡಲು ಪ್ರಯತ್ನಿಸುತ್ತೀವಿ. ಅದು ಮಕ್ಕಳಿಗೆ ಹಿಂಸೆ ಆಗಬಹುದು ಎನ್ನುವ ಅರಿವು ಇಬ್ಬರಲ್ಲೂ ಆಯಿತು. ನಿಧಾನವಾಗಿ ಮಗನ ಚಿಂತೆ ಬಿಡುತ್ತಾ ಭಾಸ್ಕರ್ ಮತ್ತು ಸುಶೀಲಾ ತಮ್ಮಗಾಗಿ ಬದುಕಲು ಶುರು ಮಾಡಿದರು.
ಮುಂದುವರೆಯುವುದು
- ಶಾಲಿನಿ ಹೂಲಿ ಪ್ರದೀಪ್
