ಹೆಸರು ಬರೆಯದ ವೀರರಿದ್ದಾರೆ ಇತಿಹಾಸದ ಪುಟದಾಚೆ…ಕೋಟಿ ಬಲಿದಾನಗಳ ನಂತರ ತ್ರಿವರ್ಣ ಧ್ವಜ ಹಾರಿತು…ಕವಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಪೂರ್ತಿಯಾಗಿ ಓದಿ…
ಭಾರತ ಮಾತೆಯ ಮಡಿಲಲ್ಲಿ
ಸ್ವಾತಂತ್ರ್ಯದ ಸೂರ್ಯೋದಯ!
ತ್ಯಾಗಿಗಳ ರಕ್ತದ ಹನಿಹನಿಯಲ್ಲಿ
ಅರಳಿತು ನವೋದಯ!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ಗಾಂಧಿಯ ಸತ್ಯದ ದಾರಿಯಲ್ಲಿ
ಅಹಿಂಸೆಯೇ ಅಸ್ತ್ರವಾಯಿತು!
ನೆಹರು ಕಂಡ ನವಭಾರತದ
ಕನಸದು ಬೆಳಕಾಯಿತು!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ಸುಭಾಷರ ಘರ್ಜನೆಯಲ್ಲಿ
ಸ್ವಾತಂತ್ರ್ಯದ ಕಹಳೆ ಮೊಳಗಿತು!
ಭಗತನ ಎದೆಯ ಧೈರ್ಯದಿಂದ
ಯುವ ರಕ್ತ ಕುದಿಯಿತು!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ಶಿವಾಜಿಯ ಶೌರ್ಯ ಜ್ವಾಲೆ
ಲಕ್ಷ್ಮೀಬಾಯಿಯ ವೀರ ನಡೆ!
ಮಾತೃಭೂಮಿಯ ಮುಕ್ತಿಗಾಗಿ
ನಿಂತವು ಸಾವಿರ ಪಡೆ!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ಹೆಸರು ಬರೆಯದ ವೀರರಿದ್ದಾರೆ
ಇತಿಹಾಸದ ಪುಟದಾಚೆ!
ಹಳ್ಳಿ ಹಳ್ಳಿಯ ಜನರಿದ್ದಾರೆ!
ಸ್ವಾತಂತ್ರ್ಯದ ಹಾದಿಯಾಚೆ!
ತಾಯಿಯ ಕಣ್ಣೀರ ಧಾರೆಯಲ್ಲಿ
ತಂದೆಯ ಬೆವರಿನ ಶ್ರಮದಲ್ಲಿ
ಅವರ ಕನಸು, ಅವರ ತ್ಯಾಗ
ಇಂದಿನ ನಮ್ಮ ಉಸಿರಿನಲ್ಲಿ!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ರೈತರ ನೇಗಿಲು ಸಾಕ್ಷಿಯಾಯಿತು
ಕಾರ್ಮಿಕರ ಬೆವರದು ಸಿಡಿಲು!
ವಿದ್ಯಾರ್ಥಿಗಳ ಹೆಜ್ಜೆಯಾಯಿತು
ಸ್ವಾತಂತ್ರ್ಯಕ್ಕೆ ರಣವೀಳ್ಯವು!
ಮಹಿಳೆಯರ ಮಕ್ಕಳ ಕನಸು
ಕೋಟಿ ಜನರ ಒಂದೇ ಮನಸು
ಭಾರತವೇ ನಮ್ಮ ಉಸಿರು!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ಬ್ರಿಟಿಷರ ಕತ್ತಲೆ ಕೋಳದ ನಡುವೆ
ಭಾರತದ ದೀಪ ಬೆಳಗಿತು!
ಕೋಟಿ ಬಲಿದಾನಗಳ ನಂತರ
ತ್ರಿವರ್ಣ ಧ್ವಜ ಹಾರಿತು!
ಆಗಸ್ಟ್ ಹದಿನೈದರ ಬೆಳಗಿನಲ್ಲಿ
ಹೊಸ ಇತಿಹಾಸ ಹುಟ್ಟಿತು!
ಸ್ವಾತಂತ್ರ್ಯದ ಅಮೃತಧಾರೆಯಲಿ
ಭಾರತ ಕೀರ್ತಿ ಪ್ರಜ್ವಲಿಸಿತು!
ಜೈ ಜೈ ಭಾರತ! ಜೈ ಜೈ ಭಾರತ!
ವಂದೇ ಮಾತರಂ!
ಇಂದು ನಾವು ಸ್ವತಂತ್ರರು
ನಮ್ಮ ದೇಶದ ಹೊಣೆ ನಮ್ಮದು!
ತ್ಯಾಗಿಗಳ ಕನಸಿನ ಭಾರತ
ಕಟ್ಟುವ ಸಂಕಲ್ಪ ಎಲ್ಲರದು!
ಜಾತಿ ಮತ ಭಾಷೆಗಳ ಗಡಿ ಮರೆತು
ಒಗ್ಗಟ್ಟಾಗಿ ಕೈ ಜೋಡಿಸೋಣ
ಶಾಂತಿ ಸೇವೆ ಸತ್ಯದ ದಾರಿಯಲ್ಲಿ
ಭಾರತವನ್ನು ವಿಶ್ವಗುರುವಾಗಿಸೋಣ!
ತ್ರಿವರ್ಣವೇ ನಮ್ಮ ಹೆಮ್ಮೆ!
ಭಾರತವೇ ನಮ್ಮ ಉಸಿರು!
ಸ್ವಾತಂತ್ರ್ಯವೇ ನಮ್ಮ ಶಕ್ತಿ!
ದೇಶಪ್ರೇಮವೇ ನಮ್ಮ ಜೀವ!
ಜೈ ಹಿಂದ್! ಜೈ ಭಾರತ! ಜೈಜೈಭಾರತ!
ವಂದೇ ಮಾತರಂ! ವಂದೇ ಮಾತರಂ!!
- ಟಿ.ಪಿ.ಉಮೇಶ್ – ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು, ಅಮೃತಾಪುರ, ಹೊಳಲ್ಕೆರೆ.
