“ಕಾವ್ಯಧಾರೆ” ಕೃತಿ ಪರಿಚಯ

ಕನ್ನಡಕ್ಕೆ ಬಂದ ಮೊದಲ ಚೋಕಾ ಕವನ ಸಂಕಲನ ಡಾ. ಮಲ್ಲಿಕಾರ್ಜುನ ಅಲಮೇಲ ಅವರ “ಕಾವ್ಯಧಾರೆ”. ಕಲಬುರ್ಗಿ ಜಿಲ್ಲೆಯ ಯಡ್ರಾಮಿಯವರಾದ ಇವರು “ಕನ್ನಡದ ಕಂದ” ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ. ಅವರ ಕೃತಿಯ ಕುರಿತು  ಕವಿಗಳು, ವಿಮರ್ಶಕರಾದ ಡಾ.ವೈ ಎಂ.ಯಾಕೊಳ್ಳಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕನ್ನಡ ಕಾವ್ಯಲೋಕ ಎಲ್ಲ ರೀತಿಯಿಂದಲೂ ಈಗ ಮುಕ್ತವಾಗಿದೆ.ಅಂದರೆ ಹೊಸ ಹೊಸ ಕಾವ್ಯ ಪ್ರಕಾರಗಳಿಗೆ ತೆರೆದುಕೊಂಡಿದೆ. ಇದು ಇವತ್ತಿನ ವಿಚಾರವೇನಲ್ಲ ಮೊದಲಿನಿಂದಲೂ ಕನ್ನಡಕ್ಕೆ ಬೇರೆಬೇರೆ ಪ್ರಕಾರ ಸಾವಿರಾರು ವರ್ಷಗಳ ಹಿಂದಿನಿಂದಲೇ ಬಂದಿವೆ. ಆದರೆ ಈಗ, ಬೇರೆ ದೇಶಗಳ ಬೇರೆಬೇರೆ ಕಾವ್ಯಪ್ರಕಾರಗಳು ಒಂದಾದ ಮೇಲೊಂದರಂತೆ ಬರುತ್ತಿವೆ ಫಿಲಿಪೈನ್ಸ ದೇಶದ ತನಗ, ಜಪಾನಿ ದೇಶದ ಹೈಕು, ಇನ್ನೂ ಬೇರೆ ಬೇರೆ ಕಾವ್ಯ ಪ್ರಕಾಗಳದ ಅಬಾಬಿ , ಟಂಕಾ ಮೊದಲಾದವು ಬಂದಿವೆ ಇನ್ನೂ ಹೊಸವು ಬರುತ್ತಲೇ ಇವೆ. ಅಂಥವುಗಳಲ್ಲಿ ತೀರಾ ಇತ್ತೀಚೆಗೆ ಕನ್ನಡಕ್ಕೆ ಬಂದಿರುವ ಕಾವ್ಯಪ್ರಕಾರವೆಂದರೆ ಚೋಕಾ ಕಾವ್ಯಪ್ರಕಾರ. ಇದೂ ಕೂಡಾ ಹೈಕಿನಂತೆ ಜಪಾನಿ ದೇಶದಿಂದ ಬಂದ ಕಾವ್ಯಕನ್ನಿಕೆ .ಹೈಕುವಿನಂತೆಯೆ ಸಿಲೆಬಲ್ ಗಳ ಲೆಕ್ಕದಲ್ಲಿ ಬರೆಯಲ್ಪಡುವ ಕಾವ್ಯ ಪ್ರಕಾರವಿದು . ಜಪಾನಿ ದೇಶದಿಂದ ಬಂದ ಹೈಕು ೫/೭/೫ ಸಿಲೆಬಲ್ ಗಳ ಮೂರು ಸಾಲಿನ ಪದ್ಯಪ್ರಕಾರವಾದರೆ , ಟಂಕಾ ೫/೭/೫/೭/೭ ಹೀಗೆ ಹೈಕಿನ ದೀರ್ಘೀಕೃತ ರೂಪದಂತೆ ಕಾಣಿಸುತ್ತದೆ. ಆದರೆ ಇವೆರಡನ್ನೂ ಅಕ್ಷರಗಳ ಮತ್ತು ಸಾಲುಗಳ ವ್ಯಾಪ್ತಿ ದೃಷ್ಟಿಯಿಂದ ಮೀರಿಸಿದ್ದು ಚೋಕಾ ಪ್ರಕಾರ. ಹ್ಯಕುವಿನಲ್ಲಿ ೧೭ ಅಕ್ಷರಗಳು ಮೂರು ಸಾಲುಗಳು ಇದ್ದರೆ , ಟಾಂಕ ದಲ್ಲಿ ಐದು ಸಾಲುಗಳು ೩೧ ಅಕ್ಷರಗಳು ಇರುತ್ತವೆ. ಆದರೆ ಚೋಕಾದಲ್ಲಿ ಒಂಬತ್ತು ಸಾಲುಗಳು ಇದ್ದು ಐವತ್ತೈದು ಅಕ್ಷರಗಳ ಕವಿತೆಯಾಗಿರುತ್ತದೆ. ಅಂದರೆ ೫/೭/೫/೭/೫/೭/೫/೭/೭ ಹೀಗೆ ಅಕ್ಷರವಿನ್ಯಾಸ ವಿರುತ್ತದೆ. ಟಂಕಾ, ಹೈಕುಗಳಿಗಿಂತ ಅಕ್ಷರ ವ್ಯಾಪ್ತಿ ದೊಡ್ಡದಿರುವದರಿಂದ ಹೆಚ್ಚಿನ ವಿಷಯ ಹೇಳಬಹುದು.

ಕನ್ನಡದಲ್ಲಿ ಮೊದಲ ಬಾರಿಗೆ ಚೋಕಾ ಸಂಕಲನ ತಂದವರು ಡಾ.ಮಲ್ಲಿಕಾರ್ಜುನ ಎಸ್. ಆಲಮೇಲರವರು.. ಕಲಬುರ್ಗಿ ಜಿಲ್ಲೆಯ ಯಡ್ರಾಮಿಯವರಾದ ಇವರು “ಕನ್ನಡದ ಕಂದ” ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದಾರೆ. ವೃತ್ತಿಯಿಂದ ವ್ಯಾಪಾರಸ್ತರಾಗಿರುವ ಅವರು ಪೃವೃತ್ತಿಯಿಂದ ಕವಿಗಳು, ನಾಟಕಕಾರರಾಗಿ ಅನೇಕ ನಾಟಕಗಳನ್ನು ರಚಿಸಿ, ಆಡಿಸಿದವರು. ,ಎರಡು ಕವನ ಸಂಕಲನಗಳನ್ನು ಬರೆದ ಅವರು ಇತ್ತೀಚೆಗೆ ಚೋಕಾ ಮತ್ತು ತನಗಗಳ ಎರಡು ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಚೋಕಾ- ಕಾವ್ಯಧಾರೆ’ ಎಂಬ ಹೆಸರಿನ ಈ ಕವನ ಸಂಕಲನಕ್ಕೆ ಕನ್ನಡ ನಾಡಿನ ಪ್ರಥಮ ಚೋಕಾ ಸಂಕಲನವೆಂದೂ, ಜಪಾನಿ ಕಾವ್ಯ ಕನ್ನಿಕೆ ಎಂದೂ ಉಪಶೀಷಿಕೆಗಳನ್ನೂ ಇರಿಸಿದ್ದಾರೆ. ೨೦೨೬ ರಲ್ಲಿ ಸಂಕಲನ ಹೊರ ಬಂದಿದ್ದು ಇದರೊಂದಿಗೆ ‘ಅಂತರಂಗದ ಪ್ರಣತಿ’ ಎಂಬ ತನಗಗಳ ಸಂಕಲನ ಕೂಡ ಪ್ರಕಟಿತವಾಗಿದೆ.

ಇದು ಕನ್ನಡದ ಮೊದಲ ಚೋಕಾ ಸಂಕಲನ ಪ್ರಯೋಗವಾದ್ದರಿಂದ ತನ್ನದೇ ಆದ ಐತಿಹಾಸಿಕ ಮಹತ್ವವೂ ಈ ಸಂಕಲನಕ್ಕಿದೆ. ಮೇಲೆ ಹೇಳಿದಂತೆ ಒಂಬತ್ತು ಸಾಲಿನ ಈ ಕಾವ್ಯ ಪ್ರಕಾರ ಅಕ್ಷರಗಳ ಲೆಕ್ಕಾಚಾರ ಹೊಂದಿರುವಂಥದು . ಮೊದಲ ಚೋಕಾದಲ್ಲಿ ಗುರುವಿನ ಸ್ತುತಿಯನ್ನು ಕವಿ ಮಾಡುತ್ತಾರೆ. ‘ಹರ ಮುನಿದರೆ ಗುರು ಕಾಯ್ವನು ಗುರುಮುನಿದರೆ ಕಾಯುವವರಾರು’ ಎಂಬುದ ನಮ್ಮ ಪ್ರಾಚೀನ ನಂಬಿಕೆ ಅದೇ ವಿಚಾರವನ್ನೇ ಇನ್ನಷ್ಟು ವಿಸ್ತರಿಸುವ ಈ ಚೋಕಾ ಹೀಗಿದೆ.

ಮುನಿದರೇನು -೫ ಅಕ್ಷರ
ದೇವಗಣ: ಗುರುವು -೭ ಅಕ್ಷರ
ಕಾಯುವವನು – ೫ ಅಕ್ಷರ
ಗುರುವೇ ಮುನಿದರೆ -೭ ಅಕ್ಷರ
ನರಮಾನವ -೫ ಅಕ್ಷರ
ನಿನ್ನಾರು ಕಾಯುವರು – ೭ ಅಕ್ಷರ
ಗುರುಚರಣ -೫ ಅಕ್ಷರ
ಅನುದಿನ ಪೂಜಿಸು -೭ ಅಕ್ಷರ
ನೀನೇ ಶ್ರೇಷ್ಠನಾಗುವೆ -೭ ಅಕ್ಷರ

ಹೀಗೆ ಪ್ರತಿ ಚೋಕಾ ೫/೭/೫/೭/೫/೭/೭/೭ ಅಕ್ಷರಗಳಿಂದ (ಜಪಾನಿನಲ್ಲಿ ಸಿಲೆಬಲ್ ಎನ್ನುವದನ್ನು ಅಕ್ಷರ ಎಂದು ಸಮಾನವಾಗಿ ಸ್ವೀಕರಿಸಲಾಗುತ್ತದೆ. ಇದು ಹೈಕು ಮತ್ತು ಟಾಂಕ ಕಾವ್ಯಗಳಿಗೂ ಅನ್ವಯಿಸುತ್ತದೆ.)ಕೂಡಿ ಒಂಬತ್ತು ಸಾಲುಗಳಲ್ಲಿ ಈ ಕಾವ್ಯ ಪ್ರವಹಿಸುತ್ತದೆ. ಈ ನಿಯಮವನ್ನೇ ಚಾಚೂ ತಪ್ಪದ ಡಾ ಆಲಮೇಲ ಅವರು ಅಂಥ ನಿಯಮವನ್ನು ಪಾಲಿಸಿದ ಸು.೨೦೦ ರಷ್ಟು ‘ಚೋಕಾ’ಗಳನ್ನು ಈ ಸಂಕಲನದಲ್ಲಿ ಸಂಕಲಿಸಿದ್ದಾರೆ. ಪ್ರತಿಯೊಂದು ಚೋಕಾ ವಿಗೂ ಅವರು ಶೀರ್ಷಿಕೆಯನ್ನು ಇರಿಸಿದ್ದು ವಿಶೇಷವಾಗಿದೆ.
ವಿಷಯ ವಸ್ತುವಿನ ದೃಷ್ಟಿಯಿಂದ ಇಲ್ಲಿ ಇಂಥದೇ ವಸ್ತು ವೆಂದಿಲ್ಲ . ಸುತ್ತಲಿನ ಜಗತ್ತಿನ ಎಲ್ಲ ವಿಷಯಗಳೂ ಕವಿತೆಯ ರೂಪ ಪಡೆದಿವೆ. ಧರ್ಮ, ದೇವರು, ಸುತ್ತಲಿನ ಸಮಾಜ, ರೈತನ ಬವಣೆ ,ಪ್ರೇಮ ..ಹೀಗೆ ಎಲ್ಲ ವಿಷಯಗಳೂ ಇಲ್ಲಿ ಕವಿತೆಯಾಗಿವೆ.
ಪ್ರೇಮದ ಮಹಿಮೆಯನ್ನು ಹೇಳುತ್ತ ಕವಿ

ಪ್ರೇಮ ಚಿಲುಮೆ
ಮನದಿ ಚಿಮ್ಮಿದಾಗ
ಧರೆಯೆಲ್ಲವೂ
ಪ್ರೇಮ ಲೋಕವಾಯಿತು
ಹೃದಯದಲ್ಲಿ
ಒಲವಿನ ಮಧುರ
ಮೋಹನರಾಗ
ಲಹರಿ ಹರಿದಾಗ
ಭುವಿ ಸ್ವರ್ಗವಾಯಿತು

ಹೀಗೆ ಪ್ರೀತಿಯನ್ನುವದು ಒಳಗೂ ಹೊರಗೂ ಹರಿಯುವ ಸಂತಸದ ಊಟೆ ಚಿಮ್ಮಿಸುವ , ಬದುಕನ್ನೆ ಸಂತಸಗೊಳಿಸುವ ಮದುರವಾದ ಭಾವನೆ ಎನ್ನುವದನ್ನು ಕವಿ ಕಂಡುಕೊಂಡಿದ್ದಾನೆ. ಮನುಷ್ಯನ ಬಾಳಿಗೆ ಕಳೆ(ಒಳಗಿನ ಶಕ್ತಿ-ಕಾಂತಿ ) ಮುಖ್ಯ ಜಾತಿ-ಮತಗಳಲ್ಲ. ಜಾತಿ ಮತಗಳ ಬಗ್ಗೆ ಅತಿಯಾಗಿ ಚಿಂತಿಸಿಬೇಕಾದ ಅಗತ್ಯ ಇಲ್ಲ ಎನ್ನುವ ಕವಿ

ಕುಲ ಹೀನಾದ್ರೂ
ಕಳೆಗುಂದಬೇಡಿರಿ
ಕುಲವೆಂಬುದು
ವೃತ್ತಿ ಆಧಾರಿತವು
ಕಳೆಯಂಬುದು
ನಿನ್ನ ಜೀವಚೈತನ್ಯ
ಅದನ್ಯಾವತ್ತೂ
ಕಳೆದುಕೊಳ್ಳದಿರಿ
ಅದು ಬಾಳ ಶಕ್ತಿಯು

ಕೀಳು ಕುಲದವ ಎನ್ನುವ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಮೇಲು ಕುಲದವರು ಕೀಳಾಗಿ ಕಾಣುವದನ್ನು ಕವಿ ಒಪ್ಪುವದಿಲ್ಲ ದಾಸರು,ಶರಣರು, ಸರ್ವಜ್ಞ ಕವಿ ಎಲ್ಲರೂ ಸಾರಿದ್ದು ‘ಕುಲವ್ಯಾವುದು ಸತ್ಯ ಶರಣರಿಗೆ ‘ ಎಂಬುದೇ ಆಗಿದೆ. ಅದನ್ನು ಕವಿ ಇಲ್ಲಿ ವಿವರಿಸಿದ್ದಾನೆ, ವ್ಯಕ್ತಿಯ ಕುಲ ಮುಖ್ಯವಲ್ಲ ಅವನೊಳಗಿರುವ ಕಳೆ (ಕಾಂತಿ- ಪ್ರತಿಭೆ) ಅವನಿಗೆ ಗೌರವ ತರುತ್ತದೆ ಎನ್ನುತ್ತಾರೆ. ಕುಲ ಬಂದದ್ದೇ ಮಾಡುವ ವೃತ್ತಿಯಿಂದ ಎಂದು ಶರಣರು ಸಾರಿದ್ದರು ‘ಕಾಸಿ ಕಮ್ಮಾರನಾದ ‘ ಎನ್ನುವ ಬಸವಣ್ಣಣವರ ವಚನ ಇದನ್ನೇ ಸಾರುತ್ತದೆ. ವ್ಯಕ್ತಿಗೆ ಗೌರವ ಸಿಗುವದು ಅವನೊಳಗಿನ ಆಂತರಂಗಿಕ ಶಕ್ತಿಯಿಂದಲೇ ಹೊರತು ಅವನು ಯಾವ ಕುಲದವನು ಎಂಬುದರಿಂದ ಅಲ್ಲ ಎಂಬುದನ್ನು ಕವಿ ಸಾರುತ್ತಾರೆ.

ನಮ್ಮ ಸುತ್ತಲಿನ ಸಮಕಾಲೀನ ಜಗತ್ತಿನ ಆಗು ಹೋಗುಗಳನ್ನು ಈ ಕವಿ ಗಮನಿಸದೇ ಹೋಗಿಲ್ಲ, ಇಂದು ಅಮೇರಿಕ ಮತ್ತು ಇರಾನ್ ಗಳ ನಡುವೆ, ರಷ್ಯಾ ಮತ್ತು ಉಕ್ರೇನಗಳ ನಡುವೆ
ನಡೆದಿರುವ ಯುದ್ದ ಕವಿಯನ್ನು ಕಾಡಿದೆ. ಈ ಯುದ್ಧದ ಹಿಂದಿರುವದು ತೈಲ ಜಗತ್ತಿನ ಯಜಮಾನಿಕೆ ಯಾರಿಗೆ ದೊರಕಬೇಕು? ಎಂಬ ಪ್ರಶ್ನೆಯೇ ಆಗಿದೆ. ಇದನ್ನೆ ಸಂಗ್ರಾಮ ಎಂಬ

ಚೋಕಾ

ತೈಲದ ದಾಹ
ತೀರದಾಗಿದೆಯಲ್ಲ
ಅದಕ್ಕಗಿಯೇ
ನಡೆಯುತ್ತಿದೆಯಲ್ಲ
ರಣಭೀಕರ
ಕದನ ಸಂಗ್ರಾಮವು
ಅನುದಿನವು
ಘರ್ಜಿಸುತ್ತಿದೆಯಲ್ಲ
ಮರಣ ಮೃದಂಗವು

ಜಗತ್ತಿನ ಪ್ರಬಲ ರಾಷ್ಟ್ರಗಳು ತೈಲದ ಯಜಮಾನಿಕೆ ನನಗೆ ತನಗೆ ಎಂಬುದನ್ನು ಸಾಧಿಸಲು ಯುದ್ಧ ಮಾಡುತ್ತಿವೆ. ಆದರೆ ಅದು ಏನೂ ತಪ್ಪೇ ಮಾಡದಿರುವ ಸಾಮಾನ್ಯ ಜನರ ಜೀವಹಾನಿಗೆ ಕಾರಣವಾಗುತ್ತಿರುವದು ಕವಿಗೆ ಅತಂಕ ತರಿಸಿದೆ.

ಪುರಾಣ ಕಾಲದ ಪ್ರತಿಮೆಗಳನ್ನು ಇರಿಸಿಕೊಂಡು ಅಧುನಿಕರಾದ ನಮಗೆ,ಮೌಲ್ಯಗಳನ್ನು ಬಿತ್ತರಿಸುವ ಅವರ ಶೈಲಿಗೆ ಉದಾಹರಣೆಯಾಗಿ ‘ಅಪ್ರತಿಮ ಅನುಜ’ ದಂತಹ ಕವಿತೆಯನ್ನು ಉದಾಹರಣೆಯಾಗಿ ತಗೆದುಕೊಳ್ಳಬಹುದು. ಶ್ರೀರಾಮಚಂದ್ರ ಕಾಡಿಗೆ ಹೋದಾಗ ಅವನ ಹೆಸರಿನಲ್ಲಿ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು, ಅಗ್ರಜನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷ ಆಡಳಿತ ಮಾಡಿದ ಭರತನ ಸಹೋದರ ಪ್ರೀತಿ, ಭಕ್ತಿ ,ಇವು ಕವಿಯ ಗಮನ ಸೆಳೆದಿವೆ.

ಅಂತೆಯೇ ಅವರು

ಅಧಿಕಾರಾಸೆ
ಪಡದೆ ಅಗ್ರಜನ
ಪಾದರಕ್ಷೆಯ
ಸಿಂಹಾಸನ ಮೇಲಿಟ್ಟು
ತಪಸ್ವಿಯಂತೆ
ಸುಖ ಭೋಗ ತ್ಯಜಿಸಿ
ರಾಜ್ಯಭಾರವು
ನಡೆಸಿದ ಭರತ
ಅಪ್ರತಿಮ ಅನುಜ

ಇಡೀ ರಾಮಾಯಣದ ಒಂದು ಆದರ್ಶವನ್ನೆ ನಮ್ಮ ಮುಂದೆ ಕವಿತೆಯಾಗಿ ಕಟ್ಟಿಕೊಡುವ ಡಾ ಮಲ್ಲಿಕಾರ್ಜುನ ಅವರ ಕಾವ್ಯಶೈಲಿ ಗಮನ ಸೆಳೆಯುತ್ತದೆ. ಕವಿತೆ ಕೊಡುವ ಸಂದೇಶ ಮುಖ್ಯವಾಗುತ್ತದೆ. ಹೆಸರಿನಲ್ಲಿಯೇ ಕನ್ನಡದ ಕಂದ ಎಂಬ ವಿಶಿಷ್ಟತೆಯನ್ನು ಹೊಂದಿರುವ ಡಾ.ಆಲಮೇಲ ಅವರು ಕನ್ನಡ ನಾಡನ್ನು ಕುರಿತು ಅನೇಕ ಚೋಕಾಗಳನ್ನು ಬರೆದಿದ್ದಾರೆ ‘ಪುಣ್ಯವಂತರು’ ಎಂಬ ಕವಿತೆಯಲ್ಲಿ

ಕನ್ನಡ ನಾಡು
ಚಿನ್ನದ ಬೀಡಾಗಿದೆ.
ಕನ್ನಡ ನುಡಿ
ಜೇನಿನ ಸವಿಯಿದೆ
ಕಲೆ ಸಾಹಿತ್ಯ
ಸಂಸ್ಕೃತಿ ತವರೂರು
ನಮ್ಮ ಹೆಮ್ಮೆಯ
ನಾಡಲ್ಲಿ ಹುಟ್ಟಿದೌರೇ
ಬಲು ಪುಣ್ಯವಂತರು

ಕನ್ನಡ ನಾಡಿನ ವರ್ಣನೆಯೇನೋ ಸುಂದರವಾಗಿದೆ. ಆದರೆ ಒಂಬತ್ತು ಸಾಲುಗಳನ್ನು ಪೂರೈಸಬೇಕಾಗಿರುವ ಕವಿ ಗದ್ಯದತ್ತ ವಾಲಿರುವದು ಸ್ಪಷ್ಟ. ಕವಿತೆ ಕವಿತೆಯಾಗದೇ ವರ್ಣನೆ ಯಾದರೆ ಅದು ಸೋಲುತ್ತದೆ ಎನ್ನವುದನ್ನು ನಾವು ಅರಿಯಬೇಕು. ಇಂಥ ಕೆಲವು ರಚನೆಗಳನ್ನು ಇನ್ನಷ್ಟು ಪದ್ಯವಾಗಿಸುವತ್ತ ಕವಿ ಗಮನ ಹರಿಸಬೇಕಾದುದು ಅಗತ್ಯ ಎಂಬ ಭಾವನೆಯೂ ಬರದಿರದು.

ಇಂಥ ಸಣ್ಣಪುಟ್ಟ ವಿಚಾರಗಳು ಏನೇ ಇರಲಿ, ಕವಿ ಡಾ.ಮಲ್ಲಿಕಾರ್ಜುನ ಅಲಮೇಲ ಅವರು ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಜಪಾನಿ ಕಾವ್ಯಪ್ರಕಾರದಲ್ಲಿ ಹೆಸರಾಗಿರುವ ‘ಚೋಕಾ’ ಎಂಬ ಕಾವ್ಯಪ್ರಕಾರವನ್ನು ತರುವ ಮೂಲಕ ಹೊಸತೊಂದು ವಿಕ್ರಮವನ್ನು ಸಾಧಿಸಿದ್ದಾರೆ ಎಂಬುದು ಅಭಿನಂದನಾರ್ಹವಾಗಿದೆ.

ಎಂದಿನಂತೆ ಹೊಸಬರನ್ನು, ಹೊಸ ಕಾವ್ಯ ಪ್ರಕಾರಗಳನ್ನು ಮೆಚ್ಚುವ, ಪ್ರೋತ್ಸಾಹಿಸುವ ಹಿರಿಯರಾದ ಶ್ರೀ ಹರಿನರಸಿಂಹ ಉಪಾದ್ಯಾಯ ಅವರು ಮುನ್ನುಡಿಯಲ್ಲಿ “ಚೋಕಾ ಕಾವ್ಯಧಾರೆ’ ಕೃತಿಯು ತನ್ನ ಪ್ರತಿ ಪುಟದಲ್ಲಿ ಓದುಗನ ಹೃದಯಕ್ಕೆ ನಾಟುವಂತಹ ವಿಶಿಷ್ಟ ಜಪಾನಿ ಸಾಹಿತ್ಯದ ಕನ್ನಡ ಪ್ರಕಾರದಿಂದ ಪ್ರಕಾಶಿತ ಗೊಳ್ಳುತ್ತಿರುವದು ಕನ್ನಡ ಸಾಹಿತ್ಯ ಕಿರೀಟಕ್ಕೆ ಮತ್ತೊಂದು ಗರಿ ಇಟ್ಟಂತೆ” ಎಂದು ಬಣ್ಣಿಸಿರುವದು ಸೂಕ್ತವಾದುದೇ ಆಗಿದೆ. ಇನ್ನೋರ್ವ ಹಿರಿಯ ಸಾಹಿತಿಗಳೂ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿರುವ ಡಾ. ಸಿದ್ಧರಾಮ ಹೊನ್ಕಲ್ ಅವರು “ಜಪಾನಿ ಕಾವ್ಯ ಪ್ರಕಾರದ ‘ಚೋಕಾ ಕಾವ್ಯಧಾರೆ’ ಪ್ರಕಟಿಸಿದ ಮೊದಲ ಕನ್ನಡಿಗ” ಎಂದು ಅವರು ಬೆನ್ನುಡಿಯಲ್ಲಿ ಕವಿಯನ್ನು ಬೆನ್ನು ತಟ್ಟಿರುವದು ಮಹತ್ವದ್ದಾಗಿದೆ. ಸದಾ ಉತ್ಸಾಹಿಯಾಗಿ ಹೊಸದರತ್ತ ತುಡಿಯುವ ಡಾ. ಮಲ್ಲಿಕಾರ್ಜುನ ಆಲಮೇಲ ‘ಕನ್ನಡದ ಕಂದ’ ಇವರ ಕಾವ್ಯ ರಚನೆ ನಿರಂತರವಾಗಿರಲಿ ಎಂದು ಹಾರೈಸುತ್ತೇನೆ.


  • ಡಾ.ವೈ ಎಂ.ಯಾಕೊಳ್ಳಿ – ಸವದತ್ತಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading