ಕೃತಕ ಸ್ವಾತಂತ್ರ್ಯದ ಕಾಲದಲ್ಲಿ ಆಂತರಿಕ ಸ್ವಾತಂತ್ರ್ಯದ ಹುಡುಕಾಟ. ಇಂದಿನ ಆಧುನಿಕ ಜಗತ್ತಿನಲ್ಲಿ ‘ಸ್ವಾತಂತ್ರ್ಯ’ ಎಂಬ ಪದದ ಅರ್ಥವೇ ಬದಲಾಗಿದೆ. ೧೯೪೭ ಆಗಸ್ಟ ೧೫ ರಲ್ಲಿ ಬ್ರಿಟಿಷರ ಆಡಳಿತದಿಂದ ನಮಗೆ ಸ್ವಾತಂತ್ರ್ಯ ದೊರೆತರೂ ಅದು ಬಾಹ್ಯ ಅಥವಾ ಭೌತಿಕ ಸ್ವಾತಂತ್ರ್ಯ. ಲೇಖಕರಾದ ಓಂಕಾರ ಪಾಟೀಲ ಅವರ ಲೇಖನಗಳು ಪೂರ್ತಿಯಾಗಿ ಓದಿ…
ಇಂದು ನಾವು ನಮ್ಮಿಷ್ಟದ ಉದ್ಯೋಗ ಮಾಡಬಹುದು, ಜಗತ್ತಿನ ಯಾವುದೇ ಮೂಲೆಗೆ ಪ್ರಯಾಣಿಸಬಹುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತವಾಗಿ ಮಾತನಾಡಬಹುದು. ಆದರೆ, ಈ ಎಲ್ಲ ಸೌಲಭ್ಯಗಳ ನಡುವೆಯೂ ಮನುಷ್ಯ ನೆಮ್ಮದಿಯಿಂದ ಇದ್ದಾನೆಯೇ? ಖಂಡಿತ ಇಲ್ಲ. ಇಂದು ನಾವು ಅನುಭವಿಸುತ್ತಿರುವುದು ಕೇವಲ ಬಾಹ್ಯ ಅಥವಾ ಕೃತಕ ಸ್ವಾತಂತ್ರ್ಯ. ನಿಜವಾದ ನೆಮ್ಮದಿಗಾಗಿ ನಾವು ‘ಆಂತರಿಕ ಸ್ವಾತಂತ್ರ್ಯ’ ಅಂದರೆ ಮನಸ್ಸಿನ ಮುಕ್ತಿಯನ್ನು ಹುಡುಕಬೇಕಾಗಿದೆ.
ಕೃತಕ ಸ್ವಾತಂತ್ರ್ಯ: ಕೃತಕ ಸ್ವಾತಂತ್ರ್ಯ ಎಂದರೆ ನಮಗೆ ಆಯ್ಕೆಗಳ ಸ್ವಾತಂತ್ರ್ಯವಿರುತ್ತದೆ, ಆದರೆ ನಮ್ಮ ಮನಸ್ಸು ಬೇರೆ ಯಾವುದೋ ಶಕ್ತಿಗೆ ಗುಲಾಮವಾಗಿರುತ್ತದೆ ಅಂತ ಅರ್ಥ.
ಇಂದಿನ ದಿನಗಳಲ್ಲಿ ನಾವು ಕಾಣಬಹುದಾದ ಪ್ರಮುಖ ಉದಾಹರಣೆಗಳು ಇಲ್ಲಿವೆ: ಒಬ್ಬ ವ್ಯಕ್ತಿ ಪ್ರಕೃತಿಯ ಸುಂದರ ತಾಣಕ್ಕೆ ಪ್ರವಾಸ ಹೋಗುತ್ತಾನೆ. ಅಲ್ಲಿನ ಪ್ರಕೃತಿಯನ್ನು ಕಣ್ಣಾರೆ ನೋಡಿ ಆನಂದಿಸುವ ಬದಲು, ಮೊಬೈಲ್‌ನಲ್ಲಿ ಫೋಟೋ ತೆಗೆದು ಇನ್‌ಸ್ಟಾಗ್ರಾಮ್ (Instagram) ಅಥವಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲು ತವಕಿಸುತ್ತಾನೆ. ಆ ಪೋಸ್ಟ್‌ಗೆ ಎಷ್ಟು ‘ಲೈಕ್ಸ್’ (Likes) ಬಂದವು ಎಂದು ಪ್ರತಿ ಐದು ನಿಮಿಷಕ್ಕೆ ಒಮ್ಮೆ ಫೋನ್ ವೀಕ್ಷಿಸುತ್ತಾನೆ. ಲೈಕ್ಸ್ ಕಡಿಮೆ ಬಂದರೆ ಆತನ ದಿನವೇ ಹಾಳಾಗುತ್ತದೆ. ಇಲ್ಲಿ ವ್ಯಕ್ತಿಗೆ ಪ್ರವಾಸ ಹೋಗುವ ಸ್ವಾತಂತ್ರ್ಯವಿದೆ, ಆದರೆ ಸಂತೋಷ ಪಡಲು ಆತ ಇತರರ ‘ಲೈಕ್ಸ್’ ಮೇಲೆ ಅವಲಂಬಿತನಾಗಿದ್ದಾನೆ. ಇದು ಕೃತಕ ಸ್ವಾತಂತ್ರ್ಯ.
ಸಮಾಜ ಅಥವಾ ನೆರೆಹೊರೆಯವರು ಏನು ಅಂದುಕೊಳ್ಳುತ್ತಾರೋ ಎಂಬ ಹೆದರಿಕೆಯಿಂದಲೇ ಅನೇಕರು ತಮ್ಮಿಷ್ಟದ ವೃತ್ತಿ ಅಥವಾ ಹವ್ಯಾಸಗಳನ್ನು ಬಿಟ್ಟುಬಿಡುತ್ತಾರೆ. ತಮಗೆ ಇಷ್ಟವಿಲ್ಲದಿದ್ದರೂ ಸಮಾಜದ ಮೆಚ್ಚುಗೆಗಾಗಿ ಬದುಕುವುದು ಕೃತಕ ಸ್ವಾತಂತ್ರ್ಯದ ಲಕ್ಷಣವಾಗಿರುತ್ತದೆ.

ಆಂತರಿಕ ಸ್ವಾತಂತ್ರ್ಯ
ಆಂತರಿಕ ಸ್ವಾತಂತ್ರ್ಯ ಎಂದರೆ ಯಾವುದೇ ಬಾಹ್ಯ ಪರಿಸ್ಥಿತಿ, ವ್ಯಕ್ತಿ ಅಥವಾ ವಸ್ತುಗಳ ಮೇಲೆ ನಮ್ಮ ಮನಸ್ಸಿನ ಸಂತೋಷ ಆಧಾರಿತವಾಗಿರದೆ ಇರುವುದು. ಹೊರಗಿನ ಜಗತ್ತು ಎಷ್ಟೇ ಗೊಂದಲಮಯವಾಗಿದ್ದರೂ, ಒಳಗಿನಿಂದ ಪ್ರಶಾಂತವಾಗಿರುವುದೇ ನಿಜವಾದ ಸ್ವಾತಂತ್ರ್ಯ.
ಉದಾಹರಣೆಗಾಗಿ ಹೇಳುವದಾದರೆ ಮಹಾತ್ಮ ಗಾಂಧೀಜಿ ಅಥವಾ ನೆಲ್ಸನ್ ಮಂಡೇಲಾ ಅವರನ್ನೇ ತೆಗೆದುಕೊಳ್ಳಿ. ಅವರನ್ನು ಬ್ರಿಟಿಷರು ಅಥವಾ ಅಲ್ಲಿನ ಸರ್ಕಾರ ಜೈಲಿನಲ್ಲಿ ಇಟ್ಟಿದ್ದರೂ, ಅವರ ಆಲೋಚನೆ ಮತ್ತು ಸಿದ್ಧಾಂತಗಳನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಅವರು ಕತ್ತಲೆಯ ಕೋಣೆಯಲ್ಲೂ ಆಂತರಿಕವಾಗಿ ಸ್ವತಂತ್ರರಾಗಿದ್ದರು ಮತ್ತು ಶಾಂತರಾಗಿದ್ದರು.
ಆಂತರಿಕ ಸ್ವಾತಂತ್ರ್ಯದ ಹುಡುಕಾಟದ ಹಂತಗಳು:
೧.ದಿನದಲ್ಲಿ ಕನಿಷ್ಠ ಅರ್ಧ ಗಂಟೆಯಾದರೂ ಇಂಟರ್ನೆಟ್‌ನಿಂದ ದೂರವಿರಬೇಕು. ಯಾವುದೇ ಗ್ಯಾಜೆಟ್‌ಗಳಿಲ್ಲದೆ ಶಾಂತವಾಗಿ ಕುಳಿತುಕೊಂಡು ನಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸುವುದು.
೨.ನಮ್ಮ ಆಸೆಗಳನ್ನು ಮತ್ತು ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳುವುದು ವಸ್ತುಗಳ ಹಿಂದೆ ಓಡುವುದನ್ನು ನಿಲ್ಲಿಸಿದಾಗ ಮನಸ್ಸಿಗೆ ದೊಡ್ಡ ಬಿಡುಗಡೆ ಸಿಗುವಿದರಿಂದ
೩.ನಾಳೆ ಏನಾಗುವುದೋ ಎಂಬ ಅನಗತ್ಯ ಆತಂಕ (Anxiety) ಮತ್ತು ನಿನ್ನೆ ನಡೆದುಹೋದ ಘಟನೆಗಳ ಪಶ್ಚಾತ್ತಾಪವನ್ನು ಬಿಟ್ಟು, ಇಂದಿನ ಕ್ಷಣವನ್ನು ಆನಂದಿಸುವುದು
೪.ಧ್ಯಾನವು ಮನಸ್ಸಿನ ಕಸವನ್ನು ಹೊರಹಾಕಲು ಇರುವ ಅತ್ಯುತ್ತಮ ಮಾರ್ಗ. ಇದು ನಮ್ಮ ಕೋಪ, ದ್ವೇಷ ಮತ್ತು ಅಹಂಕಾರವನ್ನು ಕಡಿಮೆ ಮಾಡಿ ಒಳಗಿನ ಶಾಂತಿಯನ್ನು ಪರಿಚಯಿಸುವುದು ಆಂತರಿಕ ಸ್ವಾತಂತ್ರ್ಯ ಹುಡುಕಾಟದ ಹಂತಗಳಾಗಿವೆ.
ಬಾಹ್ಯ ಜಗತ್ತಿನ ಕೃತಕ ಆಕರ್ಷಣೆಗಳು ಮತ್ತು ಸೌಕರ್ಯಗಳು ನಮಗೆ ತಾತ್ಕಾಲಿಕ ಸುಖ ನೀಡಬಹುದು, ಆದರೆ ಶಾಶ್ವತ ಆನಂದವನ್ನು ನೀಡಲಾರವು. ಹೊರಗಿನ ಸರಪಳಿಗಳನ್ನು ಮುರಿಯುವುದು ಸುಲಭ, ಆದರೆ ಮನಸ್ಸಿನ ಒಳಗಿರುವ ಅದೃಶ್ಯ ಸರಪಳಿಗಳನ್ನು ಮುರಿಯುವುದೇ ಇಂದಿನ ಕಾಲದ ದೊಡ್ಡ ಸವಾಲು.
ಹಾಗಾಗಿ ೮೦ನೇ ಸ್ವಾತಂತ್ರ್ಯೋತ್ಸವ ದ ಸಂಭ್ರಮಾಚರಣೆಯ ಸಂಧರ್ಭದಲ್ಲಿ ಅರಿವು, ಮತ್ತು ಕಾಯಕ ನಿಷ್ಠೆಯಿಂದ ನಮ್ಮ ಒಳಗಿನ ಪ್ರಭುದ್ಧತೆಯನ್ನು ಜಾಗೃತಗೊಳಿಸಿ ಮನಸ್ಸನ್ನು ಹತೋಟಿಗೆ ತಂದುಕೊಂಡು, ನಮ್ಮ ಆತ್ಮದ ಧ್ವನಿಗೆ ಕಿವಿಯಾಗುವುದೇ ನಿಜವಾದ ಆಂತರಿಕ ಸ್ವಾತಂತ್ರ್ಯ.
- ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.
