ಈ ನಮ್ಮ ಹೆಮ್ಮೆಯ ಭಾರತ ದೇಶವು ಇಂದು 2026ರ ಆಗಸ್ಟ್ 15ಕ್ಕೆ 79 ವರ್ಷಗಳು ಪೂರ್ಣಗೊಂಡು 80ನೇ ಸ್ವಾತಂತ್ರ್ಯೋತ್ಸವದ ಐತಿಹಾಸಿಕ ಮೈಲಿಗಲ್ಲನ್ನು ತಲುಪಿ, ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಬಹಳ ಹೆಮ್ಮೆಯಿಂದ ಆಚರಿಸಿಕೊಳ್ಳುತ್ತಿದೆ. ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು, ಇಂದಿನ ವಿಶೇಷತೆಯ ಕುರಿತು ಲೇಖಕರಾದ ಗೀತಾಂಜಲಿ ಎನ್.ಎಮ್ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಜಾಗತಿಕ ಮಟ್ಟದಲ್ಲಿ ನಮ್ಮ ಭಾರತವು ಜ್ಞಾನ, ವಿಜ್ಞಾನ, ಆಚಾರ-ವಿಚಾರ, ಸಂಸ್ಕಾರ ಮತ್ತು ಸಂಸ್ಕೃತಿಯ ತವರೂರಾಗಿ ವಿಶಿಷ್ಟ ಸ್ಥಾನ ಪಡೆದು ದಿನದಿಂದ ದಿನಕ್ಕೆಅಭಿವೃದ್ಧಿಯತ್ತ ಮುನ್ನಡೆಯುತ್ತಿರುವುದು ನಮ್ಮ ಹೆಮ್ಮೆ.
ನೂರಾರು ವರ್ಷಗಳ ಬ್ರಿಟಿಷರ ದಾಸ್ಯದ ಸರಪಳಿಯನ್ನು ಮುರಿದು, ತಾಯಿ ಭಾರತಾಂಬೆಯನ್ನು ಮುಕ್ತಗೊಳಿಸಲು ಅಸಂಖ್ಯಾತ ಮಹನೀಯರು ವೀರರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಅಂತಹ ದಿಟ್ಟ ಕ್ರಾಂತಿಕಾರಿಗಳ ಮತ್ತು ದೇಶಭಕ್ತರ ಹೋರಾಟದ ಫಲವಾಗಿ 1947ರ ಆಗಸ್ಟ್ 15ರಂದು ನಮಗೆ ಈ ಸ್ವಾತಂತ್ರ್ಯ ಲಭಿಸಿ ಇಂದು ನಮ್ಮ ದೇಶವು ಜಗತ್ತಿನಲ್ಲೇ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದು ನಿಂತಿದೆ. ಈ ಅಮೃತ ಘಳಿಗೆಯಲ್ಲಿ ದೇಶದ ಏಕತೆ ಮತ್ತು ಪ್ರಗತಿಗಾಗಿ ಶ್ರಮಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯರ ಮೇಲಿದೆ.
ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸೋಣ. ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಒಂದು ದಿನದ ಹಬ್ಬವಾಗಿ ಮಾತ್ರ ನೋಡಬೇಕೇ? ಅಥವಾ ಪ್ರತಿದಿನ ನಮ್ಮ ಬದುಕಿನಲ್ಲಿ ತೋರಿಸಬೇಕಾದ ಜವಾಬ್ದಾರಿಯಾಗಿ ನೋಡಬೇಕೇ? ಎಂದು. ಕಾರಣ, ಸ್ವತಂತ್ರ ಭಾರತದ ಪ್ರಸ್ತುತದ ಪರಿಸ್ಥಿತಿ ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ.
ಇಂದಿನ ಸಮಾಜದ ಆಗು ಹೋಗುಗಳನ್ನು ನೋಡುತ್ತಿದ್ದರೆ, ಈ ಪ್ರಶ್ನೆ ಸಹಜವಾಗಿ ಬರುತ್ತದೆ. ಏಕೆಂದರೆ ಹಕ್ಕುಗಳ ಬಗ್ಗೆ ಮಾತನಾಡುವ ನಾವು ಕರ್ತವ್ಯವನ್ನು ಸರಿಯಾಗಿ ಪಾಲಿಸುತ್ತಿದ್ದೇವೆಯೇ ಎಂದು ಆತ್ಮವಲೋಕನ ಮಾಡಿಕೊಳ್ಳಬೇಕಾಗಿದೆ.
1947ರ ಆಗಸ್ಟ್ 15ರಂದು ಭಾರತ ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆಯಾಯಿತು ಸರಿ, ಆದರೆ ಆ ದಿನ ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರ ದೊರೆಯಲಿಲ್ಲ, ಜೊತೆಗೆ ನ್ಯಾಯ, ಸಮಾನತೆ, ಸ್ವಾಭಿಮಾನ ಮತ್ತು ಪ್ರಜಾಪ್ರಭುತ್ವದ ಹೊಸ ಪಯಣವೂ ಆರಂಭವಾಯಿತು. ಇದಕ್ಕಾಗಿ ಲಕ್ಷಾಂತರ ಜನರು ತಮ್ಮ ಜೀವವನ್ನೇ ತ್ಯಾಗ ಮಾಡಿದರು. ಕೆಲವರು ನೇಣುಗಂಬ ಏರಿದರೆ, ಕೆಲವರು ಗುಂಡಿನ ದಾಳಿಗೆ ಬಲಿಯಾದರು, ಇನ್ನೂ ಕೆಲವರು ಜೈಲಿನಲ್ಲಿ ಕೊನೆಯುಸಿರೆಳೆದರು. ಹೀಗೆ ವೀರ ಮರಣ, ಉಪವಾಸ ಮತ್ತು ಸತ್ಯಾಗ್ರಹಗಳಿಂದ ಹಲವಾರು ಮಹಾತ್ಮರು ಕೊನೆಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ. ಆದರೆ ಅವರು ಬಯಸಿದ್ದು ಕೇವಲ ಆಡಳಿತದ ಸ್ವತಂತ್ರ ಭಾರತವನ್ನಲ್ಲ, ನ್ಯಾಯ, ಮಾನವೀಯತೆ, ಶಿಕ್ಷಣ, ಸಮಾನ ಅವಕಾಶಗಳು ಮತ್ತು ಗೌರವದಿಂದ ಬದುಕುವ ಭಾರತವನ್ನು. ಹಾಗಾಗಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ ಏನೆಂದರೆ, ದೇಶ ಎಷ್ಟು ಬದಲಾಗಿದೆ? ಎನ್ನುವುದಕ್ಕಿಂತ “ದೇಶ ಬದಲಾಗಲು ನಾನು ಏನು ಮಾಡಿದ್ದೇನೆ?” ಎನ್ನುವ ಆತ್ಮಾವಲೋಕನವನ್ನು.

ಸ್ವಾತಂತ್ರ್ಯವು ನಮಗೆ ಹಕ್ಕುಗಳನ್ನು ಮಾತ್ರವಲ್ಲ ಅದರ ಜೊತೆಗೆ ಕರ್ತವ್ಯಗಳನ್ನೂ ನೀಡಿದೆ. ಹಾಗಾಗಿ ಆ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವ ಹೊಣೆಗಾರಿಕೆ ನಮ್ಮದು. ಹಾಗೆಯೇ ಸಂವಿಧಾನವು ನಮಗೆ ಸಮಾನತೆಯ ಭರವಸೆ ನೀಡಿದೆ, ಹಾಗಾಗಿ ಅದನ್ನು ನಮ್ಮ ನಡೆ-ನುಡಿಯಲ್ಲಿ ತೋರಿಸುವ ಜವಾಬ್ದಾರಿ ನಮ್ಮದು. ಪ್ರಜಾಪ್ರಭುತ್ವವು ನಮಗೆ ಮತದಾನದ ಹಕ್ಕು ನೀಡಿದೆ, ಹಾಗಾಗಿ ಅದನ್ನು ವಿವೇಕದಿಂದ ಬಳಸುವ ಕರ್ತವ್ಯ ನಮ್ಮದು. ಪ್ರಕೃತಿ ನಮಗೆ ಸಂಪನ್ಮೂಲಗಳನ್ನು ನೀಡಿದೆ, ಹಾಗಾಗಿ ಅವುಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಮಹತ್ತರ ಸಂಕಲ್ಪ ನಮ್ಮದು. ಅಲ್ಲವೇ? ಹಾಗಾಗಿಯೇ ಇದನ್ನ ಎಷ್ಟರ ಮಟ್ಟಿಗೆ ನಾವು ಪಾಲಿಸುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ಪಡೆದ 80 ವರ್ಷಗಳ ಪಯಣದಲ್ಲಿ ಸ್ವಾತಂತ್ರ್ಯೋತ್ಸವದಂದು ದೇಶಭಕ್ತಿಯ ಮಾತುಗಳನ್ನು ಮಾತ್ರ ಹೇಳಿದರೆ ಸಾಕೆ? ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿದರೆ ಸಾಕೆ? ಅಲ್ಲಿಗೆ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ ಮುಗಿಯಿತೆ? ಖಂಡಿತ ಇಲ್ಲ. ಧ್ವಜ ಹಾರಿಸುವ ನಮ್ಮ ಕೈಗಳು ದೇಶದ ನೆಲವನ್ನು ಕಾಪಾಡುವ ಕೈಗಳಾಗಬೇಕು. ರಾಷ್ಟ್ರಗೀತೆ ಹಾಡುವ ನಮ್ಮ ಕಂಠ ದೇಶದ ಹಿತಕ್ಕಾಗಿ ಧ್ವನಿಯಾಗಬೇಕು. ದೇಶದ ಬಗ್ಗೆ ಹೆಮ್ಮೆಪಡುವ ನಮ್ಮ ಮನಸ್ಸು ನಿಸ್ವಾರ್ಥತೆ ಮತ್ತು ಜವಾಬ್ದಾರಿಯ ಸಂಕಲ್ಪದಿಂದ ತುಂಬಿರಬೇಕಾದ ಅತ್ಯವಶ್ಯಕತೆ ಇಂದು ಇದೆ. ಇದು ನನ್ನ ದೇಶ, ಇದು ನನ್ನ ಸಂವಿಧಾನ ಎಂಬ ಭಾವನೆ ಕೇವಲ ಘೋಷಣೆಯಾಗದೆ ನಮ್ಮ ಬದುಕಿನ ನಡವಳಿಕೆಯಾಗಬೇಕು.
ಸಂವಿಧಾನ ನೀಡಿರುವ ಹಕ್ಕುಗಳು ಮಾತ್ರ ನನ್ನವು ಎಂದು ಭಾವಿಸುವುದಕ್ಕಿಂತ, ದೇಶದ ರಕ್ಷಣೆ ನನ್ನ ಜವಾಬ್ದಾರಿ, ಕಾನೂನು ಪಾಲನೆ ನನ್ನ ಜವಾಬ್ದಾರಿ, ಸಾರ್ವಜನಿಕ ಆಸ್ತಿ ಸಂರಕ್ಷಣೆ ನನ್ನ ಜವಾಬ್ದಾರಿ, ಪರಿಸರ–ನೆಲ–ಜಲದ ಕಾಳಜಿ ನನ್ನ ಜವಾಬ್ದಾರಿ ಎಂಬ ಕರ್ತವ್ಯ ಪ್ರಜ್ಞೆ ನಮ್ಮೊಳಗೆ ಮೂಡಬೇಕು. ಸಂವಿಧಾನ ನಮ್ಮ ಹೆಮ್ಮೆ ಮಾತ್ರವಲ್ಲ, ಅದು ನಮ್ಮ ನಡೆಗೆ ದಾರಿದೀಪವೂ ಆಗಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯದ ಅರ್ಥ ಪೂರ್ಣವಾಗುತ್ತದೆ.
ನಾವು ಬದುಕುವ ರೀತಿಯಲ್ಲೇ ದೇಶದ ಮೇಲಿನ ನಮ್ಮ ಪ್ರೀತಿ ಕಾಣಿಸಬೇಕು. ರಸ್ತೆ ಮೇಲೆ ಎಲ್ಲೆಂದರಲ್ಲಿ ಕಸವನ್ನು ಎಸೆಯದಿರುವುದರಿಂದ ಹಿಡಿದು ಸಾರ್ವಜನಿಕ ಆಸ್ತಿಯನ್ನು ಕಾಪಾಡುವವರೆಗೆ, ಕಾನೂನು ಪಾಲಿಸುವುದರಿಂದ ಹಿಡಿದು ಅನ್ಯಾಯದ ವಿರುದ್ಧ ಧ್ವನಿ ಎತ್ತುವವರೆಗೆ ಪ್ರತಿಯೊಂದು ಸಣ್ಣ ಜವಾಬ್ದಾರಿಯೂ ರಾಷ್ಟ್ರ ನಿರ್ಮಾಣದ ಒಂದು ಉತ್ತಮ ಹೆಜ್ಜೆಯೇ. ಸ್ವಾತಂತ್ರ್ಯ ಎಂದರೆ ಜವಾಬ್ದಾರಿಯಿಂದ ಬದುಕುವುದು, ಸ್ವಾತಂತ್ರ್ಯ ಎಂದರೆ ಹಕ್ಕುಗಳನ್ನು ಕೇಳುವ ಮೊದಲು ಕರ್ತವ್ಯಗಳನ್ನು ಪಾಲಿಸುವುದು, ಸ್ವಾತಂತ್ರ್ಯ ಎಂದರೆ ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ, ಅಜ್ಞಾನ, ಮೂಢನಂಬಿಕೆ ಮತ್ತು ದ್ವೇಷದಿಂದ ಸಮಾಜವನ್ನು ಮುಕ್ತಗೊಳಿಸುವ ಸಂಕಲ್ಪವೇ ನಿಜವಾದ ಸ್ವಾತಂತ್ರ್ಯ. ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತವನ್ನು ನಿರ್ಮಿಸುವ ದಾರಿಯಲ್ಲಿ ಎಷ್ಟರ ಮಟ್ಟಿಗೆ ನಾವು ಸಾಗಿದ್ದೇವೆ ಎಂದು ಪ್ರತೀ ಸ್ವಾತಂತ್ರ್ಯದಿನ ನಮ್ಮ ಮುಂದೆ ಒಂದು ಪ್ರಶ್ನೆಯನ್ನು ತಂದಿಡುತ್ತದೆ.
ಕಾರಣ ಸ್ವಾತಂತ್ರ್ಯ ಸುಮ್ಮನೆ ಸಿಕ್ಕಿಲ್ಲ. ಅದನ್ನು ಹಲವಾರು ಮಹಾತ್ಮರ ಉಪವಾಸ ಸತ್ಯಾಗ್ರಹಗಳಿಂದ, ರಕ್ತ ಸಿಕ್ತ ಹೋರಾಟಗಳಿಂದ, ತ್ಯಾಗ, ಬಲಿದಾನಗಳಿಂದ ಗಳಿಸಿಕೊಂಡಿರುವುದು ಕಣ್ಣ ಮುಂದೆಯೇ ಇದೆ ಹಾಗಾಗಿ ಸ್ವಾತಂತ್ರ್ಯದ ಬೆಲೆ ಅರಿಯುವುದು ಎಂದರೆ ಕೇವಲ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದಲ್ಲ, ಧ್ವಜಾರೋಹಣ ಮಾಡುವುದಲ್ಲ, ರಾಷ್ಟ್ರಗೀತೆಯನ್ನು ಹಾಡುವುದಲ್ಲ. ಸ್ವಾತಂತ್ರ್ಯ ಪಡೆಯುವಲ್ಲಿ ಹೋರಾಟಗಾರರು ಕಂಡ ಕನಸಿನ ಭಾರತವನ್ನು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯ ಮೂಲಕ ಕಟ್ಟುವುದು ನಮ್ಮ ಪ್ರತಿಜ್ಞೆಯಾಗಬೇಕು. ನಮ್ಮ ಹಕ್ಕುಗಳ ಅರಿವಿನಷ್ಟೇ ನಮ್ಮ ಕರ್ತವ್ಯಗಳ ಅರಿವು ಗಟ್ಟಿಯಾದಾಗ, ಸ್ವಾತಂತ್ರ್ಯ ಕೇವಲ ಇತಿಹಾಸದ ಘಟನೆಯಾಗಿ ಉಳಿಯದೆ ಪ್ರತಿಯೊಬ್ಬ ಪ್ರಜೆಯ ಬದುಕಿನ ಸಾರ್ಥಕತೆಯಾಗುತ್ತದೆ.
ಸ್ವಾತಂತ್ರ್ಯ ನಮಗೆ ಕೇವಲ ಪರಕೀಯ ಆಳ್ವಿಕೆಯಿಂದ ಮುಕ್ತಿಯನ್ನು ನೀಡಲಿಲ್ಲ, ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳುವ ಮಹತ್ತರ ಅವಕಾಶವನ್ನೂ ನೀಡಿದೆ. ಆದರೆ ನಾವು ಆ ಅವಕಾಶವನ್ನು ಎಷ್ಟು ಜವಾಬ್ದಾರಿಯಿಂದ ಬಳಸಿಕೊಂಡಿದ್ದೇವೆ ಎಂಬ ಪ್ರಶ್ನೆಯೇ ನಿಜವಾದ ಸ್ವಾತಂತ್ರ್ಯೋತ್ಸವದ ಅರ್ಥವನ್ನು ತೆರೆದಿಡುತ್ತದೆ.
ಆದ್ದರಿಂದ ಆಗಸ್ಟ್ 15ರ ಸಂಭ್ರಮದ ನಡುವೆ ಸ್ವಾತಂತ್ರ್ಯೋತ್ಸವದ ಹೊರಗಿನ ಜಗತ್ತನ್ನು ನೋಡುವುದಕ್ಕಿಂತ ನಮ್ಮೊಳಗೆ ಇಣುಕಿ ನಾವು ನೋಡುವ ಅಗತ್ಯವಿದೆ. ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ, ಆದರೆ ಸ್ವಾತಂತ್ರ್ಯದ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಎಷ್ಟು ಗಳಿಸಿಕೊಂಡಿದ್ದೇವೆ? ಎಂಬ ಪ್ರಶ್ನೆಯಲ್ಲೇ ಈ ಸ್ವಾತಂತ್ರ್ಯೋತ್ಸವದ ನಿಜವಾದ ಆತ್ಮಾವಲೋಕನ ಅಡಗಿದೆ.
ಈ ನಿಟ್ಟಿನಲ್ಲಿ ನೋಡಿದಾಗ ನಮ್ಮ ದೇಶ ಇಂದು ಸ್ವತಂತ್ರವಾಗಿದೆ. ಆದರೆ ಎಲ್ಲೆಲ್ಲೂ ಭ್ರಷ್ಟಾಚಾರ ತುಂಬಿದೆ, ಅನೇಕ ಮನಸ್ಸುಗಳು ಇನ್ನೂ ದ್ವೇಷದ ಬಂಧನದಲ್ಲಿವೆ, ರಾಜಕೀಯ ದ್ವೇಷ ದಿನ ದಿನಕ್ಕೆ ಹೆಚ್ಚುತ್ತಿದೆ, ಅನೇಕ ಕುಟುಂಬಗಳು ಬಡತನದ ಬಂಧನದಲ್ಲಿವೆ, ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅನೇಕ ಮಹಿಳೆಯರು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ. ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಅಸಮಾನತೆ, ಮೂಲಭೂತ ಸೌಲಭ್ಯಗಳ ಕೊರತೆ ತಾಂಡವವಾಡುತ್ತಿದೆ. ಆದ್ದರಿಂದ ಸ್ವಾತಂತ್ರ್ಯದ ಹೋರಾಟ ಇನ್ನೂ ಮುಗಿದಿಲ್ಲ, ಬದಲಿಗೆ ಅದರ ರೂಪ ಮಾತ್ರ ಬದಲಾಗಿದೆ ಎನ್ನಬಹುದು.

ಸ್ವಾತಂತ್ರ್ಯ ಹೋರಾಟಗಾರರು ನಮಗೆ ಕೇವಲ ದೇಶವನ್ನು ಕೊಟ್ಟಿಲ್ಲ, ಜೊತೆಗೆ ನೈತಿಕ ಸಂದೇಶ ಮತ್ತು ಮೌಲ್ಯಗಳನ್ನೂ ಕೊಟ್ಟಿದ್ದಾರೆ. ತ್ಯಾಗ, ಏಕತೆ, ಸ್ವಾಭಿಮಾನ, ಪ್ರಾಮಾಣಿಕತೆ, ಸತ್ಯ ಮತ್ತು ಅಹಿಂಸೆಯ ಶಕ್ತಿಯನ್ನು ತೋರಿಸಿದ್ದಾರೆ. ಆದರೆ ಇಂದಿನ ಸಮಾಜ ಆ ಮೌಲ್ಯಗಳನ್ನು ಗಾಳಿಗೆ ತೂರಿ ಸ್ವಾತಂತ್ರ್ಯದ ಆತ್ಮವನ್ನೇ ಉಸಿರುಗಟ್ಟಿಸುತ್ತಿದೆ.
ದೇಶವನ್ನು ಬದಲಿಸುವ ದೊಡ್ಡ ಕ್ರಾಂತಿ ಚುನಾವಣೆಯ ಮತದಿಂದ, ಶಿಕ್ಷಣದಿಂದ, ವಿಜ್ಞಾನದಿಂದ, ಪರಿಸರ ಸಂರಕ್ಷಣೆಯಿಂದ, ಮಹಿಳಾ ಗೌರವದಿಂದ, ತೆರಿಗೆ ಪ್ರಾಮಾಣಿಕವಾಗಿ ಪಾವತಿಸುವುದರಿಂದ, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದರಿಂದ ಆರಂಭವಾಗುತ್ತದೆ. ಸ್ವಾತಂತ್ರ್ಯ ಮತ್ತು ಸಂವಿಧಾನ ನಮ್ಮ ಸ್ವಾತಂತ್ರ್ಯದ ಬುನಾದಿ ಭಾರತದ ಸಂವಿಧಾನ. ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ನೀಡಿದೆ. ಆ ಹಕ್ಕುಗಳನ್ನು ಅನುಭವಿಸುವಷ್ಟೇ ಕರ್ತವ್ಯಗಳನ್ನು ಪಾಲಿಸಿದಾಗ ಮಾತ್ರವೇ ಸಂವಿಧಾನದ ಆತ್ಮ ಜೀವಂತವಾಗಿರುತ್ತದೆ.
ಅಂದು ನಮ್ಮ ಪೂರ್ವಿಕರು ಬ್ರಿಟಿಷರ ದಾಸ್ಯದಲ್ಲಿ ಸಿಲುಕಿ ಗುಲಾಮಗಿರಿ ಅನುಭವಿಸುತ್ತಿದ್ದರೆ, ಇಂದಿನ ತಂತ್ರಜ್ಞಾನ ಯುಗದ ಸ್ವಾತಂತ್ರ್ಯದ ಸಮಾಜ ಮೊಬೈಲ್ ವ್ಯಸನ, ಸುಳ್ಳು ಸುದ್ದಿಗಳು, ಡ್ರಗ್ಸ್, ದ್ವೇಷದ ಅಪ್ರಚಾರ, ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆ ಎಂಬ ದಾಸ್ಯದಲ್ಲಿ ಮತ್ತೊಂದು ರೀತಿಯ ಗುಲಾಮಗಿರಿಯಲ್ಲಿ ಸಿಲುಕಿದ್ದೇವೆ. ಹಾಗಾಗಿ ಇವುಗಳಿಂದ ಮುಕ್ತರಾಗುವುದು ಆಧುನಿಕ ಸ್ವಾತಂತ್ರ್ಯದ ಒಂದು ಭಾಗವಾಗಿದೆ.
ದೇಶದ ಭವಿಷ್ಯವನ್ನು ರಾಜಕಾರಣಿಗಳು ಮಾತ್ರ ನಿರ್ಧರಿಸುವುದಿಲ್ಲ. ಒಬ್ಬ ಶಿಕ್ಷಕನ ತರಗತಿ, ಒಬ್ಬ ರೈತನ ಹೊಲ, ಒಬ್ಬ ಸೈನಿಕನ ಗಡಿ, ಒಬ್ಬ ವೈದ್ಯನ ಆಸ್ಪತ್ರೆ, ಒಬ್ಬ ವಿಜ್ಞಾನಿಯ ಪ್ರಯೋಗಾಲಯ, ಒಬ್ಬ ವಿದ್ಯಾರ್ಥಿಯ ಪುಸ್ತಕ, ಒಬ್ಬ ಸಾಮಾನ್ಯ ನಾಗರಿಕನ ಪ್ರಾಮಾಣಿಕ ಬದುಕು, ಇವೆಲ್ಲ ಸೇರಿ ಭಾರತದ ಭವಿಷ್ಯವನ್ನು ರೂಪಿಸುತ್ತವೆ. ಹಾಗಾಗಿ ಎಲ್ಲವೂ ಅವಶ್ಯವಾಗಿ ಆರೋಗ್ಯಕರವಾಗಿ ಬೆಳೆಯಬೇಕು.
ಸ್ವಾತಂತ್ರ್ಯ ದಿನಾಚರಣೆ ವರ್ಷಕ್ಕೊಮ್ಮೆ ಬರುತ್ತದೆ. ಆದರೆ ಸ್ವಾತಂತ್ರ್ಯದ ಮೌಲ್ಯ ಪ್ರತಿದಿನ ಇರಬೇಕು. ರಾಷ್ಟ್ರಗೀತೆ ಹಾಡಿದರೆ ಮಾತ್ರ ದೇಶಭಕ್ತಿ ಪೂರ್ಣವಾಗುವುದಿಲ್ಲ, ರಾಷ್ಟ್ರದ ಗೌರವ ಕಾಪಾಡಿದಾಗ ದೇಶಭಕ್ತಿ ಅರ್ಥಪೂರ್ಣವಾಗುತ್ತದೆ. ಆದ್ದರಿಂದ ಈ ಆಗಸ್ಟ್ 15ರಂದು ಧ್ವಜಕ್ಕೆ ಸಲಾಂ ಮಾಡುವುದಷ್ಟೇ ಅಲ್ಲ, ನಮ್ಮೊಳಗಿನ ಬೇಜವಾಬ್ದಾರಿ, ಭ್ರಷ್ಟತೆ, ದ್ವೇಷ, ಅಸಹಿಷ್ಣುತೆ ಮತ್ತು ನಿರ್ಲಕ್ಷ್ಯಕ್ಕೆ ವಿದಾಯ ಹೇಳುವ ಸಂಕಲ್ಪ ಹುಟ್ಟಬೇಕು. ಆಗ ಮಾತ್ರ ಸ್ವಾತಂತ್ರ್ಯದ ಉದ್ದೇಶ ಸಾರ್ಥಕವಾಗುತ್ತದೆ.
“ದೇಶವನ್ನು ಸ್ವತಂತ್ರಗೊಳಿಸಿದ್ದು ನಮ್ಮ ಪೂರ್ವಜರು, ಆದರೆ ಅದನ್ನು ಶ್ರೇಷ್ಠ ರಾಷ್ಟ್ರವನ್ನಾಗಿಸುವ ಹೊಣೆ ನಮ್ಮದು.”
“ಧ್ವಜವನ್ನು ಹಾರಿಸುವುದು ಒಂದು ಸಂಪ್ರದಾಯ, ಅದರ ಗೌರವವನ್ನು ಎತ್ತರದಲ್ಲೇ ಉಳಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ.”
ಸ್ವಾತಂತ್ರ್ಯ ನಮಗೆ ಉಡುಗೊರೆಯಾಗಿ ಸಿಕ್ಕಿಲ್ಲ ಅಲ್ಲವೇ? ಬಲಿದಾನ, ವೀರಮರಣ, ತ್ಯಾಗದ ಬೆಲೆಗೆ ಹಾಗೂ ಉಪವಾಸ ಸತ್ಯಾಗ್ರಹಗಳಿಂದ ದೊರಕಿದ ಈ ಅಮೂಲ್ಯ ಕೊಡುಗೆಯ ಮೌಲ್ಯವನ್ನು ಉಳಿಸುವುದೇ ನಿಜವಾದ ದೇಶಭಕ್ತಿ ಹಾಗೂ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿ. ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು, ಕಾನೂನನ್ನು ಗೌರವಿಸುವುದು, ತೆರಿಗೆ ಪಾವತಿಸುವುದು, ಪರಿಸರವನ್ನು ಸಂರಕ್ಷಿಸುವುದು, ಮತದಾನದ ಹಕ್ಕನ್ನು ಚಲಾಯಿಸುವುದು ಮತ್ತು ಸಾಮಾಜಿಕ ಸೌಹಾರ್ದವನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯನ ರಾಷ್ಟ್ರೀಯ ಕರ್ತವ್ಯ. ಇದು ಜಾಗೃತ ನಾಗರಿಕರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತ ಪ್ರಜೆಗಳಾಗೋಣ.
ಸ್ವಾತಂತ್ರ್ಯ ದಿನಾಚರಣೆ ಕೇವಲ ಸಂಭ್ರಮದ ವೇದಿಕೆಯಾಗಿರದೆ, ಆತ್ಮಾವಲೋಕನದ ದಿನವಾಗಬೇಕು. “ನಾನು ದೇಶದಿಂದ ಏನು ಪಡೆದಿದ್ದೇನೆ?” ಎಂಬ ಪ್ರಶ್ನೆಯ ಜೊತೆಗೆ “ನಾನು ದೇಶಕ್ಕೆ ಏನು ಕೊಟ್ಟಿದ್ದೇನೆ?” ಎಂಬ ಪ್ರಶ್ನೆಯೂ ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಮೂಡಿದಾಗ ಮಾತ್ರ ಸ್ವಾತಂತ್ರ್ಯದ ನಿಜವಾದ ಅರ್ಥ ಸಾರ್ಥಕವಾಗುತ್ತದೆ.
ಸ್ವಾತಂತ್ರ್ಯ ಕೇವಲ ಹಕ್ಕುಗಳ ಹಬ್ಬವಲ್ಲ, ಹೊಣೆಗಾರಿಕೆಯ ಪ್ರತಿಜ್ಞೆ. ಈ ಪ್ರತಿಜ್ಞೆಯನ್ನು ನಮ್ಮ ಬದುಕಿನ ಭಾಗವಾಗಿಸಿಕೊಂಡು, ಸ್ವಾತಂತ್ರ್ಯದ ಮೌಲ್ಯವನ್ನು ಸಾರ್ಥಕಗೊಳಿಸಿ ದೇಶದ ಹಿತವನ್ನು ಮೊದಲ ಆದ್ಯತೆಯನ್ನಾಗಿಸಿಕೊಂಡು, ಜವಾಬ್ದಾರಿಯುತ ನಾಗರಿಕರಾದಾಗ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸೋಣ.
ಅಂದು ಅವರು ದೇಶಕ್ಕಾಗಿ ಬದುಕನ್ನೇ ತ್ಯಾಗ ಮಾಡಿದರು, ಇಂದು ನಾವು ದೇಶಕ್ಕಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನಾದರೂ ಸರಿಯಾಗಿ ನಿಭಾಯಿಸೋಣ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಸ್ವಾತಂತ್ರ್ಯವನ್ನು ಗಳಿಸಿದ ನಮ್ಮ ಹಿಂದಿನ ಪೀಳಿಗೆ ಇತಿಹಾಸವಾಯಿತು, ಅದನ್ನು ಉಳಿಸಿ, ಸಾರ್ಥಕಗೊಳಿಸುವ ಪೀಳಿಗೆಯಾಗಿ ನಾವು ಇತಿಹಾಸ ನಿರ್ಮಿಸೋಣ.
- ಗೀತಾಂಜಲಿ ಎನ್.ಎಮ್ – ಕೊಡಗು.
