ಜಾನಪದ ಶೈಲಿಯ ‘ಸ್ವಾತಂತ್ರ್ಯದ ಕಿಡಿಗಳು’ ಎಂಬ ಈ ಕೃತಿ ‘ಅಮಟೂರು ಬಾಳಪ್ಪ’ ಹಾಗೂ ‘ಹಲಗಲಿ ಬೇಡರ ದಂಗೆ’ ಎಂಬ ಎರಡು ನಾಟಕಗಳನ್ನು ಹೊಂದಿದೆ. ಲೇಖಕಿ ಹೆಚ್ ವಿ ಮೀನ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕ : ಸ್ವಾತಂತ್ರ್ಯದ ಕಿಡಿಗಳು
ಲೇಖಕರು : ಹೂಲಿ ಶೇಖರ್
ಪ್ರಕಾಶನ: ಆಕೃತಿ ಕನ್ನಡ ಪ್ರಕಾಶನ
ಬೆಲೆ: 150/-
ಖರೀದಿಗಾಗಿ :
ಸಾಹಿತ್ಯಲೋಕ – 99459 39436
ಪುಸ್ತಕಗಾರ – 81820 83840
‘ಹಲಗಲಿ ಬೇಡರ ದಂಗೆ’ ಎಂಬ ಕೃತಿಯು 1982ನೇ ಇಸವಿಯಲ್ಲಿ ರಚಿತಗೊಂಡಿದ್ದು ಲಾವಣಿಯು ನಾಟಕ ರೂಪವನ್ನು ಪಡೆದಿದೆ. ಈ ನಾಟಕವು ರಂಗ ಪ್ರಯೋಗದಲ್ಲಿ ರಂಗಪ್ರೇಮಿಗಳ ಮನಸನ್ನು ಗೆಲ್ಲಲು ಯಶಸ್ವಿಗೊಂಡಿದೆ ಹಾಗೂ ‘ಅಮಟೂರು ಬಾಳಪ್ಪ’ ನಾಟಕವನ್ನು ಹೂಲಿ ಶೇಖರ್ ಅವರು 1983 ರಲ್ಲಿ ರಚಿಸಿದ್ದು 1984ರಲ್ಲಿ ಬೆಂಗಳೂರಿನ ‘ರಂಗ ಸಂಪದ’ ಅಜೋಜಿಸಿದ್ದ ರಾಜ್ಯಮಟ್ಟದ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದೆ.
ನಾನು ಸಾಹಿತ್ಯ ಕ್ಷೇತ್ರಕ್ಕೆ ಹೊಸಬಳು ಹಾಗೂ ನಾಟಕಗಳನ್ನು ನೋಡುವ ಆಸೆ ನನಗೆ ಇದ್ದರೂ ಇದುವರೆಗೂ ನಾನು ಕೇವಲ ಒಂದೆರೆಡು ನಾಟಕಗಳನ್ನು ಮಾತ್ರ ರಂಗಭೂಮಿಯಲ್ಲಿ ನೋಡಿ ಆನಂದಿಸಿದ್ದೇನೆ ಹಾಗೂ ನಾಟಕ ಪುಸ್ತಕಗಳನ್ನು ಓದಿದ್ದೇನೆ. ನಾಟಕ ಬದುಕಿನ ಒಂದು ಕನ್ನಡಿ ಎಂಬ ಅನುಭವ ನನಗಾಯಿತು. ಎರೆಡೂ ನಾಟಕಗಳನ್ನು ಓದಿ ವಿಸ್ಮಯಗೊಂಡೆ. ನಮ್ಮ ಇತಿಹಾಸ ವೀರ ಪುರುಷರ ಬಗ್ಗೆ ಅರಿತು ನನಗೆ ನಮ್ಮ ನಾಡಿನ ಬಗ್ಗೆ ಮತ್ತಷ್ಟು ಗೌರವ ಹೆಚ್ಚಿತು. ಶ್ರೀ ಹೂಲಿ ಶೇಖರ್ ಅವರಿಗೆ ನನ್ನ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ.
ಇಂದಿನ ಸಮಾಜದಲ್ಲಿ ಮೊಳಕೆಯಾಗಿ ಹೊರಹೊಮ್ಮತ್ತಿರುವ ದೇಶ ದ್ರೋಹ, ದೇಶ ವಿಭಜನೆಯ ಚಟುವಟಿಕೆಗಳಿಗೆ ಆಕರ್ಷಿತರಾಗುತ್ತಿರುವ ಯುವ ಪೀಳಿಗೆಗೆ ಒಂದು ಸಾಮ್ರಾಜ್ಯ ಕಟ್ಟುವ ಹಿಂದೆ ಅನೇಕ ದೇಶ ಪ್ರೇಮಿಗಳ, ನೋವು, ಸಾವು, ತ್ಯಾಗ, ಸಂಘರ್ಷಗಳು ಇತಿಹಾಸಗಳನ್ನು ಸೃಷ್ಟಿಸಿವೆ ಎಂಬ ಸತ್ಯವನ್ನು ಸಾರಲು ಇಂತಹ ನಾಟಕಗಳ ಮೂಲಕ ಯುವಜನರ ಚಿಂತನೆಗಳಲ್ಲಿ ಬದಲಾವಣೆಯನ್ನು ತರಬೇಕಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ತಿಳಿದಷ್ಟೂ ನಮಗೆ ಹೊಸ ಹೊಸ ವಿಚಾರಗಳು, ಅವರ ಸಾಹಸಮಯ ಹೊರಾಟಗಳು, ನಿಸ್ವಾರ್ಥ ದೇಶ ಸೇವೆ, ವೀರ ಮರಣಗಳ ಸನ್ನಿವೇಶಗಳು ಭಾವನಾತ್ಮಕವಾಗಿ ಆತ್ಮಾವಲೋಕನದ ಜಾಗೃತಿಯನ್ನು ಮೂಡಿಸಿವೆ. ಇಂತಹ ವೀರರಲ್ಲಿ ಅಮಟೂರು ಬಾಳಪ್ಪನವರೂ ಕೂಡ ಒಬ್ಬರು.

ಕಿತ್ತೂರು ರಾಣಿಯ ಹತ್ಯೆಗೆ ಸ್ವತಃ ಸಂಸ್ಥಾನದ ಆಡಳಿತದ ಮಿತ್ರರೇ ಶತ್ರುಗಳಾದಾಗ ಚೆನ್ನಮ್ಮನ ಅಂಗರಕ್ಷಕನಾಗಿದ್ದ ವೀರ ಕೇಸರಿ ಬಾಳಪ್ಪನು ಚೆನ್ನಮ್ಮನ ರಕ್ಷಣೆಗಾಗಿ ನಿಂತರು. ಬಾಳಪ್ಪನವರ ಸ್ನೇಹಿತರಾದ ಚನಬಸಪ್ಪನವರೂ ಕೂಡ ಸಂಸ್ಥಾನದ ರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡರು.
ಬಾಲ್ಯದಲ್ಲಿಯೇ ಶಾಸ್ತ್ರಗಳು, ಪುರಾಣ, ಇತಿಹಾಸ ಹಾಗೂ ಯುದ್ಧ ವಿದ್ಯೆಗಳಲ್ಲಿ ಪರಿಣಿತಳಾಗಿದ್ದ ಚೆನ್ನಮ್ಮಳು ಕಿತ್ತೂರಿನ ಸಂಸ್ಥಾನದ ದೊರೆ ಮಲ್ಲಸರ್ಜಾ ದೇಸಾಯಿಯವರ ಎರಡನೇ
ಪತ್ನಿಯಾಗಿದ್ದು ದೊರೆಯ ಹಿರಿಯ ಪತ್ನಿಯ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ಪತಿ ಮಲ್ಲಸರ್ಜಾ ದೇಸಾಯಿಯವರು ಮರಾಠದ ಪೇಶ್ವೇಗಳ ಕಪಟ ಜಾಲಕ್ಕೆ ಸಿಲುಕಿ ಮೃತಪಟ್ಟರು. ಆಗ ಚೆನ್ನಮ್ಮ ಹಿರಿಯ ರಾಣಿ ರುದ್ರಮ್ಮನ ಮಗನಾದ ಶಿವಲಿಂಗರುದ್ರ ಸರ್ಜರನ್ನು ಪಟ್ಟಕ್ಕೆ ಕೂಡಿಸಿ ರಾಜ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದಳು. ಶಿವಲಿಂಗರುದ್ರ ಸರ್ಜರು ಕೂಡ ಅನಾರೋಗ್ಯದಿಂದ ಬಳಲಿ ಮರಣ ಹೊಂದಿದರು. ಇಂತಹ ಪರಿಸ್ಥಿಯಲ್ಲಿಯೂ ಕೂಡ ಚೆನ್ನಮ್ಮ ಆಕ್ರಮಣಕಾರರಿಗೆ ಹೆದರದೆ ತನ್ನ ಸಂಸ್ಥಾನದ ರಕ್ಷಣೆಗಾಗಿ ಅಪ್ಪಾ ಸಾಹೇಬ ಎಂಬ ಹುಡುಗನನ್ನು ದತ್ತು ತೆಗೆದುಕೊಂಡು ಅವನನ್ನು ಸಿಂಹಾಸದನದಲ್ಲಿ ಕೂರಿಸಿ ರಾಜ್ಯದ ಆಡಳಿತ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಳು.
ನಾಟಕದ ಪ್ರಾರಂಭದಲ್ಲಿ…
ಪೇಶ್ವೇಗಳ ಮೋಸದ ಆಮಂತ್ರಣವನ್ನು ಸ್ವೀಕರಿಸಿ ಕಿತ್ತೂರಿನ ರಾಜ ಮಲ್ಲಸರ್ಜಾ ದೇಸಾಯಿಯವರು ಎಡೂರಿಗೆ ಹೋಗಿರುತ್ತಾರೆ. ಇತ್ತ ಅಮಟೂರು ಬಾಳಪ್ಪ ತನ್ನ ರಾಜನ ಕ್ಷೇಮದ ಬಗ್ಗೆ ಚಿಂತೆಗೊಳಗಾಗಿ ಚಡಪಡಿಸುತ್ತಿದ್ದಾಗ ಅದೇ ಸಮಯಕ್ಕೆ ಸರಿಯಾಗಿ ಚನಬಸಪ್ಪ ಅಲ್ಲಿಗೆ ಬರುತ್ತಾರೆ. ಚನಬಸಪ್ಪನನ್ನು ನೋಡಿದಾಕ್ಷಣ ಬಾಳಪ್ಪನವರು ಆತಂಕಗೊಳ್ಳುವ ಸನ್ನಿವೇಶದಿಂದ ಈ ನಾಟಕ ಪ್ರಾರಂಭವಾಗುವುದು. ಸಂಭಾಷಣೆಗಳ ನಡುವೆ ಜಾನಪದ ಗೀತೆಗಳು ಓದುಗರಿಗೆ ಘಟನೆಗಳನ್ನು ದೃಶ್ಯದ ಮೂಲಕ ಕಣ್ಣಿಗೆ ಕಟ್ಟುವಂತೆ ಲೇಖಕರು ಅದ್ಭುತವಾಗಿ ಬಿಡಿಸಿದ್ದಾರೆ.
ಬಿಚ್ಚುಗತ್ತಿ ಹಿಡಿದು ಬಂದ ಚನಬಸಪ್ಪನ ಬಾಡಿದ ಮುಖವನ್ನು ನೋಡಿದಾಕ್ಷಣ ಬಾಳಪ್ಪ ಆತಂಕದಿಂದ ಪ್ರಶ್ನಿಸಿದನು. ಯಾಕ ಗೆಳೆಯಾ ಮಾರಿ ಕಪ್ಪಗಾಗೇತಿ….. ದನಿ ಸಣ್ಣಗಾಗೇತಿ…. ಯಾಕ? ನಮ್ಮ ದೊರೀ ಮಲ್ಲಸರ್ಜನರನ್ನು ಕಂಡು ಬಂದಿದ್ದರ, ಅವರ ವರ್ಣನಾ ಮಾಡುವಂಥವನಾಗು ಗೆಳೆಯಾ… ಇವರಿಬ್ಬರ ಸಂಭಾಷಣೆಯ ನಡುವೆ ವಾದ್ಯ ಮೇಳ ಮೊಳಗುತ್ತದೆ…..
ಗಂಡು ಕಿತ್ತೂರ ನಾಡಿನ ಮ್ಯಾಲ l ಪುಂಡ ಪೇಶ್ವೆ
ಹಾಕ್ಯಾನೋ ವಕ್ಕರಗಣಾ ll
ಅಂವಾ ಮಾಡ್ಯಾನೋ ಮಸಲತ್ತ l ಕೇಳೋ ಬಾಳಣ್ಣಾ
ದೊರಿ ಮಲ್ಲಸರ್ಜರನ ಕರಿಸ್ಯಾನೊ l ಪ್ರೇಮದ ಮಾತ ಹೇಳಿ
ಕರದಾನೋ ಎಡೂರಿಗೆ l
ತಿಳೀಲಿಲ್ಲೋ ಮೋಸದ ಹಿಕಮತ್ತಾ l
ಬೆಳ್ಳಗೆಲ್ಲಾ ಹಾಲೆಂದು ನಂಬಿದರು l ನಮ್ಮ ದೊರೀ
ಅವಸರ ಮಾಡಿ l ಹೊಂಟಾನು ಕುದುರಿಯೇರಿ
ಎಡೂರ ದಿಕ್ಕೀಗೆ l ಪೇಶ್ವರನ ಕಡೀಗೆ
ಮರಾಠಿ ಕಾಣುದಕ l ಗೆಳತೆನ ಬೆಳೆಸೂದಕ್ಕ ll
ಆದರ….! ಪ್ರೇಮ l ಹಾವಾಗಿ ಕುಂತಿತೋ ಅಲ್ಲಿ l ಪೇಶ್ವೆ ಮಾಡ್ಯಾನೋ ಮಸಲತ್ತ ಕೇಳೋ ಬಾಳಣ್ಣಾ….. ll
ಲೇಖಕರು ತಮ್ಮ ನೈಪುನ್ಯತೆಯಿಂದ ಜೋಡಿಸಿದ ಸುಂದರವಾದ ಪದಪುಂಜಗಳು ನಮ್ಮ ಕನ್ನಡ ಭಾಷೆಯ ವೈವಿಧ್ಯಮಯ ವಿಶಿಷ್ಟತೆಯನ್ನು ಸಾರುತ್ತದೆ. ನಾವು ನಮ್ಮ ಶತ್ರುಗಳಿಗಿಂತ ಮಿತ್ರರಿಂದಲೇ ಮೋಸ ಹೋದಾಗ ನಮ್ಮ ಮನೋಧೈರ್ಯ ಕುಗ್ಗುತ್ತದೆ. ಚೆನ್ನಮ್ಮನಿಗೂ ಕೂಡ ಅವಳ ಸಂಸ್ಥಾನದ ಕಾರಭಾರಿಗಳಾದ ವೆಂಕಟರಾಯ ಹಾಗೂ ಮಲ್ಲಪ್ಪಶೆಟ್ಟಿ ಹಿತ ಶತ್ರುಗಳಾಗಿದ್ದರು. ಹೇಗಾದರೂ ಮಾಡಿ ಚೆನ್ನಮ್ಮಳಿಂದ ಕಿತ್ತೂರು ಸಂಸ್ಥಾನವನ್ನು ಕಸಿದುಕೊಳ್ಳಬೇಕೆಂದು ರಾಣಿ ಚೆನ್ನಮ್ಮಳನ್ನು ಕೊಲ್ಲುವ ಅವರ ಪ್ರಯತ್ನಗಳು ವಿಫಲವಾದಾಗ ಅವರು ಧಾರವಾಡದ ಜಾನ್ ಥ್ಯಾಕರೆಯೊಂದಿಗೆ ಕೈಜೋಡಿಸಿದರು. ಧಾರವಾಡದ ಆಂಗ್ಲ ಕಲೆಕ್ಟರ್ ಜಾನ್ ಥ್ಯಾಕರೆ ತನ್ನ ಅಪಾರ ಸೇನೆಯೊಂದಿಗೆ ಕಿತ್ತೂರಿನ ಮೇಲೆ ಧಾಳಿಮಾಡಿದಾಗ ಕಿತ್ತೂರು ರಾಣಿ ಚೆನ್ನಮ್ಮ ಹೆದರಲಿಲ್ಲ. ಈ ಘೋರ ಯುದ್ಧದಲ್ಲಿ ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪನವರು ಜಾನ್ ಥ್ಯಾಕರೆಯನ್ನು ಕೊಂದುಹಾಕಿದರು. ಆದರೇ ಈ ಯುದ್ಧದಲ್ಲಿ ಬಾಳಪ್ಪ, ಚೆನ್ನಮ್ಮಳನ್ನು ರಕ್ಷಿಸುವಾಗ ಚಾಂಪ್ಲಿನ್ ನ ಗುಂಡಿಗೆ ಬಲಿಯಾಗಿ ವೀರ ಮರಣವನ್ನು ಹೊಂದಿ ಇತಿಹಾಸದಲ್ಲಿ ವೀರ ಕೇಸರಿ ಅಮಟೂರು ಬಾಳಪ್ಪನಾಗಿ ಎಲ್ಲರ ಹೃದಯದಲ್ಲಿ ನೆಲಸಿದರು.

“ಹಲಗಲಿ ಬೇಡರ ಲಡಾಯಿ”… ಲಾವಣಿಯ ಆಧಾರಿತ ಈ ನಾಟಕದ ಮೂಲ ವಿಷಯ 1857 ನೇ ಇಸ್ವಿಯಲ್ಲಿ ಬ್ರಿಟಿಷ್ ಸರಕಾರವು ಸಿಪಾಯಿ ದಂಗೆಯ ನಂತರ ಭಾರತೀಯರು ಅಸ್ತ್ರ ಶಸ್ತ್ರ ಗಳನ್ನು ತಮ್ಮಲ್ಲಿ ಇಟ್ಟುಕೊಳ್ಳಬಾರದು ಎಂಬ ಹೊಸ ಕಾಯ್ದೆಯನ್ನು ದೇಶದಾದ್ಯಂತ ಜಾರಿಗೆ ತಂದಿತು. ಯಾರಲ್ಲಾದರೂ ಅಸ್ತ್ರ ಶಸ್ತ್ರಗಳಿದ್ದರೆ ಅದನ್ನು ಕೆಂಪು ಸರಕಾರಕ್ಕೆ ಒಪ್ಪಿಸಬೇಕು ಎಂದು ಕಟ್ಟಪ್ಪಣೆ ಮಾಡಿದರು. ಇದಕ್ಕೆ ವಿರುದ್ಧವಾಗಿ ಹಲಗಲಿ ಬೇಡರು ಬ್ರಿಟಿಷರ ವಿರುದ್ಧ ಸಿಡಿದೆದ್ದಾಗ ಹೋರಾಟವು ದಂಗೆಯಾಗಿ ಮುಧೋಳ ಪ್ರಾಂತ್ಯದಲ್ಲಿ ರಕ್ತಪಾತವಾಗಿ ಹಲಗಲಿ ಬೇಡರ ಗುಡಿಸಲುಗಳು ಸುಟ್ಟು ಬೂದಿಯಾದವು. ಈ ಘಟನೆಯನ್ನು ನೆನಪಿಸಿಕೊಂಡು ಸೃಷ್ಟಿಯಾದ ಲಾವಣಿಯು ಲೋಕ ಪ್ರಸಿದ್ಧಿ ಪಡೆಯಿತು. ಲಾವಣಿಯ ಆಧಾರಿತ ಈ ನಾಟಕ ಓದಲು ಅತೀ ಸುಂದರ.
ನಾಟಕದ ಒಂದು ಸನ್ನಿವೇಶದಲ್ಲಿ ಪಾತ್ರಧಾರಿ ಹಿಮ್ಯಾಳ ಹೀಗೆಂದು ನುಡಿಯುತ್ತಾನೆ.
ನಡಿಯಾವರ ಕಾಲ ಸನಮಾಡೂದು ನಮ್ಮ ಧರ್ಮ. ಆಗ
ಇಂಗ್ರೇಜಿ ಮಂದೀದು ನಡೀತಿತ್ತು ಅವರ ಕಾಲ ಮ್ಯಾಲ ಇರತಿದ್ವಿ,
ಆದರ ಈಗ.
ಹಲಗಲಿ ಅನ್ನೂ ಊರಾಗ ಇದ್ದರು
ಬ್ಯಾಡ ಜಾತೀಯ ಬಹದ್ದೂರರಾ l
ಜಡಗಾ, ಬಾಲ, ಹಣಮ, ರಾಮ l ಅವನ ಹೆಸರಾ l
ನಾಕು ಜನ ಜತನದ ಶೂರರಾ….. Il
ಅವರ ಕಥಿ ಅಂದರ l
ನಮ್ಮ ನಾಡೀನ ಕಣ್ಣ ಇದ್ದಾoಗ l
ಅತ್ತೀಯ ಗಿಡಕ ಹಣ್ಣು ಮೆತ್ತಿದ್ದಾoಗ ll
ದೇಶದ ಮೇಲೆ ಕೆಂಪು ಸರಕಾರ ಹೇರಿದ ಶಾಸನದ ಕುರಿತಾಗಿ ಮತ್ತೊಂದು ಲಾವಣಿ ಹಾಡು ಹೀಗಿದೆ……
ಹಾಕೀಕತ್ತ ಬಂದೈತಿ ಬಿಡಬ್ಯಾಡ್ರಿ ನೀವು ಜಲ್ಲ
ಕೆಂಪು ಮಂದಿ ಹಾಕ್ಯಾರು ದೇಶಕ್ಕ ದೊಡ್ಡ ಗುಲ್ಲ
ಕೈಯ ಹತಾರ ಕೊಡಬೇಕಂತ ಚುಚ್ಚಿ ಕಳೀಸ್ಯಾರ ಇಂದ
ಅಸ್ತ್ರ-ಶಸ್ತ್ರ ಹೊಂದ ಬ್ಯಾಡ್ರಿ ಯಾರ್ಯಾರೂ ತಾಬಾಕ ll
ಈ ಎರೆಡೂ ನಾಟಕಗಳನ್ನು ಶ್ರೀ ಹೂಲಿ ಶೇಖರ್ ಅವರು ನಲವತೈದು ವರ್ಷಗಳ ಹಿಂದೆಯೇ ರಚಿಸಿದ್ದು ಇಂತಹ ಜಾನಪದ ಶೈಲಿಯ ರಚನೆ ಎಲ್ಲರ ಮನಸನ್ನು ಸೂರೆಗೊಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಉತ್ತರ ಕರ್ನಾಟಕ ಜಾನಪದ ಶೈಲಿಯ ಪದಗಳ ಪರಿಚಯ ನನಗಾದ ಕಾರಣ ಮನದಲಿ ಧನ್ಯತಾಭಾವ ಮೂಡಿತು.
- ಹೆಚ್ ವಿ ಮೀನ – ಪತ್ತೇದಾರಿ, ಬೆಂಗಳೂರು.
