ನಿನ್ನ ಬೇಡುವ ಮನ ಪ್ರೀತಿಯ ಅರ್ಜಿಯೊಂದನ್ನು ಸಲ್ಲಿಸಿತು…ಕವಿಯತ್ರಿ ದೇವಿಕಾ ಎಸ್ ರಾಜ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಿನ್ನ ಸೇರುವ ತವಕಕ್ಕೆ
ತಡೆಯಾಜ್ಞೆ ತಂದವರು ಯಾರು
ಎಂದು ನನಗೂ ತಿಳಿಯದು;
ಆದರೆ ಆದೇಶ ಮಾತ್ರ
ಇನ್ನೂ ಜಾರಿಯಲ್ಲಿದೆ.
ಸಹಿಯಿಲ್ಲ, ದಿನಾಂಕವಿಲ್ಲ,
ಕಾರಣಗಳಿಗೆ ವಿಳಾಸವಿಲ್ಲ—
ಇಲ್ಲಿ ಪ್ರಶ್ನೆ ಕೇಳುವುದೇ
ಮತ್ತೊಂದು ದೊಡ್ಡ ಅಪರಾಧ.
ನಿನ್ನ ಬೇಡುವ ಮನ
ಪ್ರೀತಿಯ ಅರ್ಜಿಯೊಂದನ್ನು ಸಲ್ಲಿಸಿತು;
ಯಾವ ಕಚೇರಿಯಲ್ಲಿ ಅದು ಕಣ್ಮರೆಯಾಯಿತೋ,
ಯಾವ ಮೇಜಿನ ಕೆಳಗೆ ಮೌನವಾಯಿತೋ
ಯಾರಿಗೂ ತಿಳಿಯದು.
ಪ್ರತಿದಿನ ನಾನು
ಕಾಣದ ನ್ಯಾಯಾಲಯಕ್ಕೆ ಹಾಜರಾಗುತ್ತೇನೆ;
ಅಲ್ಲಿ
ನನ್ನ ಮೌನವೇ ಸಾಕ್ಷಿ,
ನನ್ನ ಬಯಕೆಯೇ ಆರೋಪಪಟ್ಟಿ.
ನಿನ್ನ ಸೇರುವುದೆಂದರೆ
ಮೋಕ್ಷದ ಹಾದಿಯಲ್ಲ—
ಅದು ‘ನಾನು’ ಎಂಬ ಅಸ್ತಿತ್ವವನ್ನೇ
ಅಳಿಸುವ
ತೀರ್ಪು ಬಾರದ
ನಿರಂತರ ವಿಚಾರಣೆ…
- ದೇವಿಕಾ ಎಸ್ ರಾಜ್
