ಪ್ರತಿಲಿಪಿಯಲ್ಲಿ ದ್ವಿತೀಯ ಸ್ಥಾನ ಪಡೆದ ರಮ್ಯ ಎಸ್ ಅವರ ‘ತತ್ತ್ವಮಸಿ’ ಕಾದಂಬರಿಯ ಕುರಿತು ಹನಿ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು : ತತ್ತ್ವಮಸಿ
ಲೇಖಕಿ : ರಮ್ಯ ಎಸ್
ಪ್ರಕಾರ : ಕಾದಂಬರಿ
ಲೇಖಕರು : ರಮ್ಯ ಎಸ್
ಖರೀದಿಗಾಗಿ : 9482747346
ತತ್ತ್ವಮಸಿ “ಅದೆಲ್ಲವೂ ನೀನೇ ಆಗಿರುವೆ” ಎಂಬ ಅರ್ಥದ ಪದ. ನನ್ನ ನೆಚ್ಚಿನ ಲೇಖಕಿ ರಮ್ಯ ಎಸ್. ಅವರ ಕಥೆಯ ಶೀರ್ಷಿಕೆಗಳೇ ನನಗೆ ಮೊದಲ ಆಕರ್ಷಣೆ. ವಿಭಿನ್ನವಾದ ಕಥೆಯ ಹೆಸರುಗಳು ಕಥೆಯ ಮೇಲೆ ಅಪಾರ ಕುತೂಹಲ ಮೂಡುವಂತೆ ಮಾಡುತ್ತದೆ. ಹಾಗೆಯೇ ಆ ಕುತೂಹಲ ತಣಿಸುವಂತೆ ಕಥೆಯೂ ಮೂಡಿ ಬರುತ್ತದೆ. ಪ್ರತಿಲಿಪಿ ಆಯೋಜಿಸಿದ್ದ ಸೂಪರ್ ಸಾಹಿತಿ ಅವಾರ್ಡ್ಸ್ ೪ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಪ್ರತಿಲಿಪಿಯ ಕಡೆಯಿಂದಲೇ ಮುದ್ರಣಗೊಂಡ ಕೃತಿ ತತ್ತ್ವಮಸಿ ಇವರ ಮೂರನೇ ಪುಸ್ತಕ ಮತ್ತು ಎರಡನೇ ಕಾದಂಬರಿ.
ಕಥಾ ನಾಯಕಿ ಅಶ್ರಿತಾ ಸಂಶೋಧನೆಯ ಸುತ್ತ ಸುತ್ತುವ ಕಥೆಯಲ್ಲಿ ಒಂದೆಡೆ ವಿಕಾಸ್ ಕಥಾ ನಾಯಕ ಆಗಿರಬಹುದು ಎಂಬ ಭಾವ ದೃಢವಾಗುವ ವೇಳೆಗೆ ಆಶ್ರಿತ ಬಾಳಲ್ಲಿ ಅವಿನಾಶ್ ಅನ್ನೋ ಹೊಸ ವ್ಯಕ್ತಿಯ ಆಗಮನ ಕಥಾ ನಾಯಕ ಇನ್ನೊಬ್ಬನಿದ್ದಾನೆ ಅನ್ನೋ ತಿರುವಿಗೆ ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಶುರುವಾಗುವ ಆಶ್ರಿತಾ ಕೆಟ್ಟ ಕನಸಿನ ಕೊನೆಯೇ ಕಥೆಯ ತಾತ್ಕಾಲಿಕ ಅಂತ್ಯ ಮತ್ತು ಕಥೆ ಇನ್ನೊಂದು ಭಾಗ ಬರೋದಿದೆ ಅನ್ನೋದರ ಸೂಚನೆ ಸಹ.

ಆಶ್ರಿತ ಅನ್ನೋ ಪಾತ್ರದ ಮೂಲಕ ಲೇಖಕರು ಒಂದಷ್ಟು ವಿಚಾರಗಳ ಬಗ್ಗೆ ಜ್ಞಾನ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಹೆಣ್ಣು ಮಕ್ಕಳ ಜೀವನ ಶೈಲಿಯ ಮೇಲೆ ನಿಯಂತ್ರಣ ಹೇರುತ್ತಾ, ಮಗಳನ್ನು ಹೆಚ್ಚೇ ಮುಚ್ಚಟೆಯಾಗಿ ಸಾಕುತ್ತಾರೆ. ಎಷ್ಟೇ ನಿರ್ಬಂಧ ಹೇರಿದರೂ ಪ್ರಯತ್ನಿಸುತ್ತಾರೆ ಅನ್ನಿಸಿದರೂ ತಾಯಿ ಯಾವಾಗಲೂ ಮಗಳ ಒಳಿತಿಗೆ ಸರಿಯಾಗಿಯೇ ಯೋಚಿಸುತ್ತಾಳೆ ಎನ್ನುವುದು ಕಥೆಯಲ್ಲಿ ಪದೇ ಪದೇ ಸಾಬೀತಾಗುತ್ತದೆ.
ಇನ್ನು ನೀವು ಈ ಕಾದಂಬರಿ ಓದಿದ್ರೆ ಕೇವಲ ಒಂದು ಒಳ್ಳೆಯ ಕಥೆಯನ್ನು ಮಾತ್ರವೇ ಓದಿದ ಅನುಭವ ಸಿಗುವುದಿಲ್ಲ. ಇಲ್ಲಿ ವಿಜ್ಞಾನದ ಅನೇಕ ವಿಷಯಗಳ ಪ್ರಸ್ತುತಿ ಇದೆ. ಗಿಡಗಳಿಂದ ತೆಗೆಯುವ ಡಿಎನ್ಎ ಎಕ್ಸ್ಟ್ರಾಕ್ಷನ್ ಬಗ್ಗೆ, ಅರಿಶಿನದ ರಾಸಾಯನಿಕ ಉಪಯೋಗದ ಬಗ್ಗೆ, ಕರ್ಕ್ಯುಮಿನ್ ಅನ್ನು ಮಾಡುವ ವಿಧಾನ, ಅಸಿಸ್ಟೆಂಟ್ ವಿಜ್ಞಾನಿ ಆಗಿ ಆಯ್ಕೆ ಆಗುವ ವಿಧಾನ, ಪಿ ಎಚ್ ಡಿ ಮಾಡಲು ಇರುವ ವಿವಿಧ ಹಂತಗಳ ವಿವರ, ಹೀಗೆ ಇನ್ನಷ್ಟು ಬಹಳವೇ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಂಡ ತೃಪ್ತಿ ಸಿಗುತ್ತದೆ. ವಿಜ್ಞಾನ ವಿದ್ಯಾರ್ಥಿ ಅಲ್ಲದಿದ್ದರೂ ವಿಜ್ಞಾನದ ಬಗ್ಗೆ ಆಸಕ್ತಿ ಮೂಡುವ ಹಾಗೆ ಮಾಡುವ ಸಾಮರ್ಥ್ಯ ರಮ್ಯಾ ಅವರ ಬರವಣಿಗೆಗೆ ಇದೆ.
ಪ್ರತಿ ಕ್ಷೇತ್ರದಲ್ಲೂ ನಡೆಯುವ ವೈಯಕ್ತಿಕ ಅಥವಾ ಸ್ವಾರ್ಥ ರಾಜಕೀಯ ಅಎನ್ನುವುದು ಪ್ರತಿಭಾವಂತರ ಸಾಧನೆಗೆ ಅಡ್ಡ ಬರುವ ಹಾಗೆ ಸಂಶೋಧನಾ ಕ್ಷೇತ್ರದಲ್ಲಿಯೂ ನಡೆಯುವ ವಂಚನೆ ಹೇಗೆ ಪ್ರತಿಭಾವಂತೆಯ ಬೆಳವಣಿಗೆಯನ್ನು ಕುಗ್ಗಿಸುತ್ತದೆ ಅನ್ನೋದಕ್ಕೆ ಈ ಕಥೆ ಒಂದು ನಿದರ್ಶನ ಅಂದ್ರೆ ತಪ್ಪಾಗಲಾರದು.

ಕಥೆಯಲ್ಲಿ ಆಶ್ರಿತ ಅನ್ನೋ ಪಾತ್ರದ ಮೂಲಕ ಒಬ್ಬ ಮುಗ್ಧ ಹೆಣ್ಣು ಮಗಳನ್ನು ನೋಡಬಹುದು. ಅಷ್ಟೇ ಅಲ್ಲದೆ ಅದೇ ಪಾತ್ರದಲ್ಲೇ ಒಬ್ಬ ಅಸಾಮಾನ್ಯ ಬುದ್ಧಿವಂತ ವಿದ್ಯಾರ್ಥಿನಿ, ಪ್ರಾಮಾಣಿಕ ಶಿಷ್ಯೆ, ಒಳ್ಳೆಯ ಮನೋಭಾವದ ಸಹೋದ್ಯೋಗಿ, ಉತ್ತಮ ಗೆಳತಿ, ಭಾವನಾತ್ಮಕ ಸಹೋದರಿ, ಪತಿಯ ಉನ್ನತಿಗಾಗಿ ಶ್ರಮಿಸುವ ಪತ್ನಿ, ಪ್ರೌಢ ತಾಯಿ, ಸಾಮಾಜಿಕ ಸಲಹೆಗಾರ್ತಿ ಹೀಗೆ ಒಬ್ಬ ವ್ಯಕ್ತಿಯ ವಿವಿಧ ವ್ಯಕ್ತಿತ್ವಗಳ ಪರಿಚಯ ಆಗುತ್ತದೆ. ಒಬ್ಬ ವ್ಯಕ್ತಿ ಇಷ್ಟೆಲ್ಲಾ ಗುಣಗಳನ್ನು ಹೊಂದಲು ಸಾಧ್ಯವೇ ಎನ್ನುವ ಕುತೂಹಲ ಮೂಡಿದರೆ, ಅದನ್ನು ತಣಿಸಿಕೊಳ್ಳಲು ತತ್ತ್ವಮಸಿ ಎನ್ನುವ ಕಾದಂಬರಿಯನ್ನು ಓದಲೇಬೇಕು.
ಪೋಷಕ ಪಾತ್ರದಲ್ಲಿರುವ ವಿದ್ಯಾ ಗುರು ಪ್ರಸಾದ್ ಕುಟುಂಬ ಮತ್ತು ಗೆಳೆಯರು, ವಿಕಾಸ್ ಮತ್ತವನ ಕುಟುಂಬ – ಕೊಡಗು ಜೀವನ, ಅವಿನಾಶ್ ಬಳಗ, ಸಂಸ್ಥೆಯ ಸಹೋದ್ಯೋಗಿಗಳು, ಗುರುಗಳು, ವೈದ್ಯರು, ಎಲ್ಲರೂ ಕಥೆಯ ಘನತೆ ಹೆಚ್ಚಿಸಿದ್ದಾರೆ. ನೀವು ಪುಸ್ತಕ ಕೊಂಡರೆ ಒಂದೊಳ್ಳೆಯ ಕಥೆ ಸಿಕ್ಕಿದ ಸಮಾಧಾನ ಮತ್ತು ಒಂದಷ್ಟು ಜ್ಞಾನ ವೃದ್ಧಿ ಆಗೋದರಲ್ಲಿ ಅನುಮಾನವೇ ಇಲ್ಲ.
ನೋಡೋಕೆ ಹೋದರೆ ಪುಸ್ತಕದ ಗಾತ್ರದ ಜೊತೆ ಅದರಲ್ಲಿನ ಭಾವಗಳು ಕೂಡ ಸ್ಥೂಲವಾಗಿವೆ. ಹಾಗಂತ ಓದುವ ತುಡಿತ ಇದ್ದವರಿಗೆ ಅದು ಅಡ್ಡಿಯಾಗಲ್ಲ ಬಿಡಿ. ಒಂದೇ ಕಥೆಯಲ್ಲಿ ಬಹಳಷ್ಟು ಉಪಯುಕ್ತ ವಿಷಯ ತಿಳಿಸಲು ಹೊರಟಾಗ ಅದು ಅನಿವಾರ್ಯವೇ ಸರಿ. ಪುಸ್ತಕವನ್ನು ಒಮ್ಮೆ ಓದಿ ರಮ್ಯಾ ಅವರಿಗೆ ನಿಮ್ಮ ಪ್ರೋತ್ಸಾಹ ಕೊಡಿ.
ರಮ್ಯಾ ಅವರ ಕೃತಿಗಳು :
- ನೇರಳೆ ಅಂಚು ಗಿಣಿಹಸಿರು ಸೀರೆ (ಕಥಾ ಸಂಕಲನ)
- ಪ್ರತ್ಯುತ್ಕ್ರಮ – ಮೌನಾಯುದ್ಧ (ಕಾದಂಬರಿ)
- ತತ್ತ್ವ ಮಸಿ (ಕಾದಂಬರಿ)
- ಹನಿ
