ಲೇಖಕಿ ತೇಜಸ್ವಿನಿ ಹೆಗಡೆ ಅವರ ಅಡುಗೆಮನೆ

ಲೇಖಕಿ ತೇಜಸ್ವಿನಿ ಹೆಗಡೆ ಅವರ ಅಡುಗೆಮನೆ ವಿಷೇಶತೆಯೆನೆಂದರೆ ಎಲ್ಲರ ಮನೆಯಲ್ಲಿಯೂ ಅಡುಗೆ ಕಟ್ಟೆ ಮೇಲಿದ್ದರೆ, ಅವರ ಮನೆಯಲ್ಲಿ ಅಡುಗೆ ಕಟ್ಟೆ ಕೆಳಗಡೆ ಇದೆ. ಈ ರೀತಿ ಅಡುಗೆ ಮನೆ ವಿನ್ಯಾಸ ಮಾಡುವುದರಿಂದ ಮಹಿಳೆಯರಲ್ಲಿ ಕಾಡುವ ಮಂಡಿನೋವಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು…

ನನ್ನ ಹೊಸ ಮನೆಯ ಅಡುಗೆಮನೆಯ ವಿಶಿಷ್ಟ ಜೋಡಣೆಯನ್ನು ನೋಡ ಬಯಸಿದ್ದರಿಂದ ಅದರ ಚಿತ್ರಗಳನ್ನು ವಿವರಣೆ ಸಮೇತ ಹಾಕುತ್ತಿದ್ದೇನೆ. ಇದರ ಉದ್ದೇಶ, ನಿಂತು ಅಡುಗೆ ಮಾಡಲು ಅಸಾಧ್ಯವಾದವರು ಇಂಥದ್ದೊಂದು ಸಾಧ್ಯತೆಯ ಬಗ್ಗೆ ಅರಿತುಕೊಳ್ಳಲೆಂಬುದೇ ಆಗಿದೆ. ಅಲ್ಲದೇ, ಹಳೆಯ ಕಾಲದಲ್ಲೂ ಇಂಥದ್ದೇ ಮಾದರಿಯಿತ್ತು.. ಫಿಸಿಯೋ ಥೆರಪಿಸ್ಟ್ಸ್ ಕೂಡ ಸ್ವಸ್ಥರಾಗಿದ್ದವರೂ ಬಹು ಕಾಲ ನಿಂತು ಅಡುಗೆ ಮಾಡುವುದು ಒಳ್ಳೆಯದಲ್ಲ ಆರೋಗ್ಯಕ್ಕೆ ಎಂದೇ ಹೇಳುತ್ತಾರೆ. ಅದಕ್ಕೆಂದೇ ಬಹುಶಃ ಹಿಂದೆ ಕುಳಿತಡಿಗೆಯೇ ಮಾಡುತ್ತಿದ್ದರು!
ಇದು ನನ್ನ ಅಡಿಗೆ ಕಟ್ಟೆ.. ಸ್ಟೂಲ್ ಇದೆಯಲ್ಲಾ .. ಅದರ ಮೇಲೆ ಕುಳಿತು ಅಡುಗೆ ಮಾಡುತ್ತೇನೆ.. ಒಮ್ಮೊಮ್ಮೆ ಸೀದಾ ಕಟ್ಟೆಯ ಮೇಲೇ ಕುಳಿತು ಒಲೆಯನ್ನು ನನ್ನತ್ತ ತಿರುಗಿಸಿಕೊಂಡು ಮಾಡುವುದೂ ಇದೆ. ಒಲೆಯ ಪೈಪ್ ಬಹಳ ಉದ್ದವಿಟ್ಟುಕೊಂಡು ಸಿಕ್ಕಿಸಿಕೊಂಡಿರುವೆ. ಬೇಕಾದಾಗ ಸಡಿಲಗೊಳಿಸಿಕೊಂಡು ಎಷ್ಟು ದೂರದವರೆಗೂ ಎಳೆದುಕೊಳ್ಳಲು ಸಹಕಾರಿಯಾಗುವಂತೆ. ಅಲ್ಲಿರುವ ಎಲ್ಲಾ ಸಾಮಾನುಗಳೂ ನನಗೆ ಸಿಗುವಂತಿವೆ. ಅಲ್ಲೇ ಪಕ್ಕದಲ್ಲಿ ಕೆಳಗೆ ಸಿಂಕ್ ಇದೆ.

ಈ ಚಿತ್ರದಲ್ಲಿ ಫ್ರಿಜ್ ಇದೆ. ಅದರ ಬಾಗಿಲು ಕಿಚನ್ ಎಂತ್ರೆನ್ಸ್ ಅಭಿಮುಖವಾಗಿಟ್ಟುಕೊಂಡಿರುವೆ.. ಕಾರಣ.. ವ್ಹೀಲ್ ಚೇರಿನಲ್ಲಿ ಸೀದಾ ಬಂದೂ ಬಾಗಿಲು ತೆಗೆದು ಬೇಕಾದ್ದನ್ನು ಪಡೆಯುವಂತೆ ಇಲ್ಲಾ ಕುಳಿತಿರುವಾಗಲೂ ಸ್ಟೂಲ್ ನಿಂದಲೇ ಬಾಗಿಲು ತೆಗೆದುಕೊಳ್ಳುವಂತೇ.. ಸದ್ಯಲ್ಲೇ ಅಂಥದ್ದೇ ಮರದ ಪುಟ್ಟ ಸ್ಟೂಲ್ ಮಾಡಿಸಿ ಅದ ಕಾಲ್ಗಳಿಗೆ ಪುಟ್ಟ ವ್ಹೀಲ್ಸ್ ಹಾಕಿಕೊಂಡು ಕಿಚ ಸುತ್ತಾ ಕುಳಿತಲ್ಲೇ ತಿರುಗುವಂತೇ ಮಾಡಿಸಿಕೊಳ್ಳಬೇಕೆಂದಿರುವೆ. ಆಫೀಸ್ ಚೇರ್ನಂತೇ. ಅದು ಎತ್ತರವಾಗುತ್ತದೆ.. ಜಾಗ ಬಹಳ ತಿನ್ನುತ್ತದೆ.. ಎಕ್ಸ್‍ಪೆನ್ಸಿವ್ ಕೂಡ. ಅದೇ ಇಂಥಾ ಪುಟ್ಟ ಸ್ಟೂಲ್ ಸಕಲ ರೀತಿಯಲ್ಲೂ ಅನುಕೂಲಕರ. ಯಾರೂ ಬಳಸಬಹುದು. ಉಳಿತಾಯವೂ ಕೂಡ.. ವ್ಹೀಲ್ ಹಾಕಿಸಿಕೊಂಡರೆ ಆಯಿತು ಕೆಳಗೆ.
ಇದು ಪಕ್ಕದಲ್ಲೇ ಇರುವ ತುಸು ಎತ್ತರದ ಅಡುಗೆ ಕಟ್ಟೆ. ಆದರೆ ಅದರ ಕೆಳಗೆ ಇರುವುದೆಲ್ಲಾ ಕಪಾಟುಗಳು.. ನನಗೆ ಸಿಗುವ ರೀತಿಯಲ್ಲಿವೆ. ಮೇಲಿನ ಕಟ್ಟೆಯಲ್ಲಿ ಬಾಸ್ಕೆಟ್ ಇಡುವೆ.. ವ್ಹೀಲ್‍ಚೇರಿನಲ್ಲಿ ಬಂದಾಗ ಸಿಗುವಂತೆ. ಒಮ್ಮೊಮ್ಮೆ ಅಮ್ಮ ಅಡುಗೆ ಅಲ್ಲೂ ಒಂದು ಸಿಂಕ್ ಇದೆ.. ಕೆಳಗೆ ಬಗ್ಗಲು ತೊಂದರೆ ಆಗುವವರಿಗೆ ಮೇಲೆಯೇ ಕೈ ತೊಳೆಯಲೆಂದು ಒಂದು ಪುಟ್ಟ ಸಿಂಕ್.

ಸಿಂಕ್ ತುಂಬಾ ತಳಮಟ್ಟದಲ್ಲಿದೆ.. ಅಡುಗೆ ಕಟ್ಟೆಯನ್ನು ನಾನು ತೊಳೆದರೂ ನೀರೆಲ್ಲಾ ಅದರೊಳಗೇ ಬೀಳುವಂತಿದೆ. ಅದರ ಮೇಲೆಯೇ ಸೌಟು, ಚಮಚಗಳನ್ನು ತೂಗುಹಾಕುವ ಸ್ಟ್ಯಾಂಡ್. ಸಿಂಕ್ ಪೈಪ್ ಕೂಡ ಅದಕ್ಕೆ ಪೂರಕವಾಗಿ ಬೇಕಾದಂತೆ ಹಾಕಿಕೊಂಡಿರುವೆ. ನೆನಪಿರಲಿ.. ಇದೂ ಅಷ್ಟು ಎಕ್ಸ್‌ಪೆನ್ಸಿವ್ ಅಲ್ಲಾ. ಇದು ಕುಡಿವ ನೀರಿನ ಫ್ಲಿಲ್ಟರ್. ಇದೂ ತಗ್ಗಿನಲ್ಲಿದೆ. ಇದರ ನೀರು ಹೊರಗೆ ಹೋಗಲು ಪೈಪ್ ಕೂಡ ಕೆಳಗಿರಿಸಲಾಗಿದೆ. ಕಟ್ಟೆಯ ಮೇಲೆ ಕುಳಿತರೆ ಸರಾಗವಾಗಿ ನೀರು ಸಿಗುವುದು.ಫ್ರಿಜ್ ಪಕ್ಕದಲ್ಲೇ ಒಂದು ಪುಟ್ಟ ಕಪಾಟು. ನನಗೇ ಸಿಗುವಷ್ಟು ಎತ್ತರದಲ್ಲಿದೆ. ಬೇಕಾದ ರೀತಿಯಲ್ಲಿ ಡಿಸೈನ್ ಮಾಡಿಸಿ ಮಾಡಿಕೊಂಡಿದ್ದು.

 

ಅಡುಗೆ ಮನೆಯ ಪಕ್ಕದಲ್ಲೇ ಪುಟ್ಟ ಸ್ಟೋರೇಜ್, ಹಾಗೆಯೇ ಅತ್ತ ಕಡೆ (ಮಿಶನ್ನಿಗೆ ಅಭಿಮುಖವಾಗಿದೆ.. ಇಲ್ಲಿ ಸ್ಪಷ್ಟವಾಗಿ ಕಾಣುತ್ತಿಲ್ಲ..) ಕುಳಿತೇ ಪಾತ್ರೆ, ಸಣ್ಣ ಪುಟ್ಟ ಬಟ್ಟೆ ತೊಳೆಯುವ ಜಾಗ ಮತ್ತು ವಾಶಿಂಗ್ ಮೆಶಿನ್ ಇಟ್ಟಿದ್ದೇವೆ. ನಾನೇ ಬಟ್ಟೆಗಳನ್ನು ಕೆಳಗೇ ಕುಳಿತೂ ತೊಳೆಯಬಹುದು.. ಇಲ್ಲಾ ಮಿಶಿನ್ನಿಗೆ ಹಾಕಿ ತೊಳೆಯಲೂಬಹುದು. ಇನ್ನು ಬಹು ಮುಖ್ಯವಾಗಿ ಅಲ್ಲಿ ಹಾಲಿನಲ್ಲಿ ಚೌಕಾಕಾರದ ಬಾಗಿಲು ಕಾಣಿಸುವುದೇ? ಅದೇ ಲಿಫ್ಟ್ ಬಾಗಿಲು. ಕಡಿಮೆ ವೆಚ್ಚದಲ್ಲಿ ಬೇಸಿಕ್ ಸೆಟ್ಟಿಂಗ್ಸ್ ಮೂಲಕ ಸ್ಪೆಶಲ್ ಆಗಿ ಚೆನ್ನೈನಿಂದ ಜನ ಕರೆಸಿ ಡಿಸೈನ್ ಮಾಡಿಸಿದ್ದು. ಮಾಮೂಲಿ ಲಿಪ್ಟ್ ಆದರೆ ತುಂಬಾ ಖರ್ಚಾಗುವುದು.

ಇದಿಷ್ಟು ನನ್ನ ಪುಟ್ಟ ಅಡುಗೆಮನೆ. ನಮ್ಮದು ೩೦*೪೦ ಕಾರ್ನರ್ ಸೈಟ್. ಅದರೊಳಗೇ ಸಾಕಷ್ಟು ವಿಶಾಲವಾಗಿ.. ಸರಾಗವಾಗಿ ವ್ಹೀಲ್‍ಚೇರ್ ತಿರುಗುವಂತೇ, ಜೊತೆಗೇ ನನಗೆ ಬೇಕಾದ ರೀತಿಯಲ್ಲಿ.. ಕೈಯಳತೆಗೆ ಎಟಕುವ ರೀತಿಯಲ್ಲಿ ಆದಷ್ಟು ಡಿಸೈನ್ ಮಾಡಿಸಿಕೊಂಡಿದ್ದು. ಬದುಕಲು ಬೇಕಾಗುವ ಅನುಕೂಲಕ್ಕೆ ಪ್ರಧಾನ ಆದ್ಯತೆ ನೀಡಿದ್ದೇವೆಯೇ ಹೊರತು ಯಾವುದೇ ರೀತಿಯ ದುಬಾರಿ ಇಂಟೀರಿಯರಿಗಲ್ಲ. ಈ ಚಿತ್ರಗಳಿಂದ, ವಿವರಣೆಯಿಂದ ಯಾರೋ ಒಬ್ಬರಿಗೆ ಅನುಕೂಲವಾದರೂ ಅದೇ ಸಂತೋಷ. ಹೆಚ್ಚಿನ ಮಾಹಿತಿಗೆ ನನಗೆ ಮೈಲ್ ಮಾಡಬಹುದು. ಪ್ರಾಮಾಣಿಕ, ನೈಜ ಮೈಲ್‍ಗಳಿಗೆ ಖಂಡಿತ ಉತ್ತರಿಸುವೆ..


  •  ತೇಜಸ್ವಿನಿ ಹೆಗಡೆ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW