ಹುಲಿಯುಗುರು ಪಜೀತಿ !! – ಡಾ.ಎನ್.ಬಿ.ಶ್ರೀಧರ

ಹುಲಿಯುಗುರನ್ನು ಯಾಕೆ ಧರಿಸುತ್ತಿದ್ದಾರೆ? ಇದರ ಲಾಭ ನಷ್ಟಗಳೇನು? ಮೂಢನಂಬಿಕೆಯ ಪಾಲೆಷ್ಟು? ಇದರ ಬಗ್ಗೆ ಡಾ.ಎನ್.ಬಿ.ಶ್ರೀಧರ ಅವರು ಬರೆದಿರುವ ಒಂದು ಚಿಂತನ ಲೇಖನ ತಪ್ಪದೆ ಮುಂದೆ ಓದಿ…

“ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ” ಎಂಬ ಗಾದೆ ಇದೆ. ಸಣ್ಣ ಪ್ರಯತ್ನದಲ್ಲಿ ಆಗುವ ಕಾರ್ಯವನ್ನು ಭಾರಿ ಪ್ರಯತ್ನ ಹಾಕಿ ಪಡೆಯುವುದಕ್ಕೆ ಅಥವಾ ಸಣ್ಣ ಪ್ರಯತ್ನದಲ್ಲಿ ಆಗುವುದನ್ನು ಭಾರಿ ಪ್ರಯತ್ನ ಹಾಕಿ ಪಡೆಯುವುದನ್ನು ಈ ಗಾದೆಯ ಮೂಲಕ ಹೇಳುತ್ತಾರೆ. ಈಗ ಆಗುತ್ತಿರುವುದೂ ಅದೇ. ಹುಲಿಯನ್ನು ಶಿಕಾರಿ ಮಾಡುವವರನ್ನು ಹಿಡಿದು ತುರಗಕ್ಕೆ ಅಟ್ಟುವ ಬದಲು ಅದರ ಉಗುರು ಧರಿಸಿರುವವರನ್ನು ಹಿಡಿಯಲು ಪ್ರಯತ್ನಗಳಾಗುತ್ತಿವೆ. ಅದ್ಯಾಕೆ ಆ ಇಲಾಖೆಯವರು ಎಡವಟ್ಟು ಮಾಡಿಕೊಂಡರೋ ಗೊತ್ತಿಲ್ಲ. ಬಿಗ್ಬಾಸ್ ಮನೆಗೆ ಹೋದ ಸೆಲೆಬ್ರಿಟಿಯಾಗುತ್ತಿರುವ ವರ್ತೂರು ಸಂತೋಷ್ ಹಿಡಿದು ಲಾಕ್ ಮಾಡಿದ್ದೇ ತಡ, ಚುರುಕಾದ ಸಾಮಾಜಿಕ ಜಾಲತಾಣಿಗರು ಹುಲಿಯುಗುರು ಧರಿಸಿ ಫೋಸ್ ಕೊಟ್ಟವರ ಫೋಟೋಗಳನ್ನೆಲ್ಲಾ ಇದ್ದಬದ್ದಲ್ಲಿ ಕಳಿಸಿ “ಹಾಕಿ ಇವರೆನ್ನಾಲ್ಲಾ ಲಾಕಪ್ಪಿಗೆ” ಎಂದು ಬೊಬ್ಬಿಡುತ್ತಿದ್ದಾರೆ. ಇದನ್ನು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಅವರಿಗೆಲ್ಲಾ ನೋಟೀಸ್ ನೀಡಿ ನೀವು ಧರಿಸಿದ್ದು ಹುಲಿಯುಗುರೆ? ಎಂದು ಕೇಳುತ್ತಿದ್ದಾರೆ. ಅವರೆಲ್ಲಾ ಅವರು ಧರಿಸಿದ್ದು ಒರಿಜಿನಲ್ ಹುಲಿಯುಗುರು ಎಂದು ಹೇಳಿಯಾರೆ? ಒಳಕ್ಕೆ ಹೋಗಲು ಯಾರಿಗೆ ಇಷ್ಟ?.


ಫೋಟೋ ಕೃಪೆ :google

ಮಂತ್ರಿಮಾಗದರೆಲ್ಲಾ “ಹೆ.. ಹೆ.. ಅದೆಲ್ಲಾ ಒರಿಜಿನಲ್ ಹುಲಿಯುಗುರಲ್ಲ, ಪ್ಲಾಸ್ಟಿಕ್ ಉಗುರು” ಎಂದು ತಪ್ಪಿಸಿಕೊಳ್ಳುತ್ತಿದ್ದರೆ, ಪಬ್ಲಿಕ್ ಟಿವಿ ರಂಗಣ್ಣ “ಎಂಥಾ ಕಾಲ ಬಂತು ಕಣ್ರೀ, ಬಂಗಾರ ಅಥವಾ ಬೆಳ್ಳಿಯ ಉಗುರನ್ನಾದರೂ ಮಾಡಿಸಿ ಮಕ್ಕಳೀಗೆ ಹಾಕಲಾರದಷ್ಟು ದಿಕ್ಕೆಟ್ಟುಹೋದರಾ ?” ಎಂದು ಸಿರಿವಂತರನ್ನೆಲ್ಲಾ ಎಂದು ಕಾಲೆಳೆಯುತ್ತಿದ್ದಾರೆ. ಹಿಂದುಗಳೆಲ್ಲಾ “ಏನ್ರಿ, ಇಲಾಖೆಗೆ ದೇವಸ್ಥಾನದ ಭಟ್ಟರುಗಳನ್ನು ಕೇಸಿನಲ್ಲಿ ಫಿಟ್ ಮಾಡ್ತಿರಲ್ಲಾ, ಸಾಬರು ದರ್ಗಾದಲ್ಲಿ ನವಿಲುಗರಿಯ ಚಾಮರ ಹಿಡಿತಾರಲ್ಲಾ, ಅವ್ರನ್ ತಂದು ಲಾಕಪ್ಪಿಗೆ ಹಾಕ್ರಿ” ಎಂದು ಚಾಲೆಂಜ್ ಮಾಡುತ್ತಿದ್ದಾರೆ. ವ್ಯಂಗ್ಯಚಿತ್ರಗಾರರೆಲ್ಲಾ ತರಹೆವಾರಿ ವ್ಯಂಗ್ಯ ಚಿತ್ರ ಬರೆದು ಅಣಕಿಸುತಿದ್ದಾರೆ. ಪರಿಸರವಾದಿಗಳು, ವನ್ಯಜೀವಿ ಪ್ರಿಯರು ಕೆಂಡಾಮಂಡಲರಾಗಿದ್ದಾರೆ. ಹಾಗಿದ್ದರೆ ಆ ಇಲಾಖೆ “ಉಗುರಿನಲ್ಲಿ ಹೋಗುವುದನ್ನು ಮಾಡಲು ಕೊಡಲಿ ಹಿಡಿಯಿತೇ? ಇದೆಲ್ಲಾ ಒಂದಿಷ್ಟು ದಿನದ ಮಟ್ಟಿಗೆ ಸುದ್ಧಿಯಾಗಿ ಕ್ರಮೇಣ ಜನಮಾನಸದಿಂದ ಮರೆಯಾಗುತ್ತದೆ.

ಹಾಗಿದ್ದರೆ ಯಾಕೆ ಈ ಹುಲಿಯುಗುರು ಧರಿಸುತ್ತಿದ್ದಾರೆ? ಇದರ ಲಾಭ ನಷ್ಟಗಳೇನು? ಮೂಢನಂಬಿಕೆಯ ಪಾಲೆಷ್ಟು? ತಿಳಿಯೋಣ.

ಹುಲಿಯ ವಿಕಾಸ ಸುಮಾರು ೨೦ ಲಕ್ಷ ವರ್ಷಗಳ ಹಿಂದೆ ಆಗಿರಬಹುದು. ನಮ್ಮ ವಿಕಾಸ ಆಗಿದ್ದು ಸುಮಾರು ಸುಮಾರು ೩ ಲಕ್ಷ ವರ್ಷಗಳ ಹಿಂದೆ. ಭಾರತದಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು ಸುಮಾರು ೨೦ ಸಾವಿರ ವರ್ಷಗಳ ಹಿಂದೆ. ಹುಲಿ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಅತ್ಯಂತ ದೊಡ್ಡದು ಮತ್ತು ಅದರ ತೂಕ ಸುಮಾರು ೩೦೦ ಕಿಲೊ ಮತ್ತು ೩.೩ ಮೀಟರ್ ಉದ್ದ. ಇವು ಸುಮಾರು ೧೬ ಅಡಿ ಅಗಲ ಮತ್ತ್ ೪ ಅಡಿ ಎತ್ತರವನ್ನು ಜಿಗಿಯುತ್ತವೆ. ಹುಲಿಗಳು ನೀರನ್ನು ಸದಾ ಇಷ್ಟಪಡುತ್ತಿದ್ದು ವೇಗದ ಈಜುಗಾರಗಳು ಮತ್ತು ನಿಶಾಚರಿ ಜೀವಿಗಳು. ಹುಲಿಗಳು ಒಂಟಿಯಾಗಿರಲು ಇಷ್ಟಪಡುತ್ತವೆ. ಬಂಗಾಳ ಹುಲಿ, ಸೈಬೀರಿಯನ್ ಹುಲಿ, ಸುಮಾತ್ರಾನ್ ಹುಲಿ, ಮಲಯನ್ ಹುಲಿ ಇತ್ಯಾದಿ ಅನೇಕ ಹುಲಿಯ ವಿಧಗಳಿವೆ. ಹುಲಿಗಳ ಗರ್ಭಾವಸ್ಥೆ 103 ದಿನ, ಆಯಸ್ಸು 14-18 ವರ್ಷ, ಒಂದು ಸಲಕ್ಕೆ ಹಾಕುವ ಮರಿಗಳ ಸಂಖ್ಯೆ 3-4, ಎರಡು ಸೂಲುಗಳ ನಡುವಿನ ಅಂತರ 2.5 ವರ್ಷಗಳು, ಮರಿಗಳು ಗೂಡಿನಿಂದ ಹೊರಬರುವುದು 8 ವಾರಗಳು, ಮರಿಗಳು ಸ್ವತಂತ್ರವಾಗುವುದು 2 ವರ್ಷ ವಯಸ್ಸಿನಲ್ಲಿ.

ಫೋಟೋ ಕೃಪೆ :google

ಉಗುರು ಮನುಷ್ಯನೂ ಸೇರಿದಂತೆ ಅನೇಕ ಪ್ರಾಣಿಗಳಿಗೆ ಇರುವ ಅಂಗ. ಉಗುರು ಇಲ್ಲದಿದ್ದರೆ ಹಿಡಿತ ಇರಲ್ಲ. ಮಾಂಸಾಹಾರಿ ಪ್ರಾಣಿಗಳಿಗೆ ಉಗುರು ಬೇಟೆಯನ್ನು ಹಿಡಿದು ಕೊಲ್ಲಲು ಉಗುರು ಬೇಕೇ ಬೇಕು. ಹುಲಿ, ಚಿರತೆ ಮತ್ತು ಸಿಂಹಗಳಂತ ಮಾಂಸಾಹಾರಿ ಪ್ರಾಣಿಗಳಿಗೆ ಕಡವೆ, ಕಾಡುಕೋಣ, ಜಿಂಕೆಯಂತ ಪ್ರಾಣಿಗಳನ್ನು ಬೇಟೆಯಾಡಿ ಮತ್ತು ಚಿರತೆಗೆ ಇವುಗಳ ಅಗಾದ ತೂಕದೊಂದಿಗೆ ಮರ ಹತ್ತಿ ತಿನ್ನಲು ಉಗುರು ಬೇಕೇ ಬೇಕು.ಹುಲಿ, ಸಿಂಹ ಚಿರತೆಯಂತ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಿಗೆ ಮ್ರದುವಾದ ಚೀಲದಂತ ಅಂಗದೊಳಗೆ ಹಿಂದೆಳೆದುಕೊಳ್ಳಬಲ್ಲ ಪಂಜಾ ಉಗುರು ಇದೆ. ಇದರಿಂದ ಅವುಗಳ ಉಗುರು ಎಂದೂ ನಾಯಿ ನರಿಗಳ ಉಗುರುಗಳು ಭೂಮಿಗೆ ತಿಕ್ಕಿ ಸವೆಯುವಂತೆ ಮೊನಚು ಕಳೆದುಕೊಳ್ಳಲ್ಲ. ಕಾರಣ ಅವುಗಳಿಗೆ ಉಗುರಿಲ್ಲ ಎಂದರೆ ಬದುಕಿಲ್ಲ. ಉಗುರಿನ ಅಡಿ ನರ ಸಂಚಯ ಇರುತ್ತದೆ. ಒಂದು ಹಂತಕ್ಕೆ ಬೆಳೆದು ಮುಂಚಾಚಿರುವ ಉಗುರಿಗೆ ನರಸಂಚಯ ಇರುವುದಿಲ್ಲ. ಕಾರಣ ಬೆಳೆದ ಉಗುರನ್ನು ತುಂಡರಿಸಿದರೆ ನೋವಾಗುವುದಿಲ್ಲ. ಆದರೆ “ಅಂತ” ಚಿತ್ರದಲ್ಲಿ ಕನ್ವರ್ ಲಾಲ್ ನಾಯಕ ಅಮರ್‍‍ನ ಉಗುರನ್ನು ಇಕ್ಕಳದಿಂದ ಕಿತ್ತು ತೆಗೆದು “ಕುತ್ತೇ, ಕನ್ವರ್ ಲಾಲ್ ಬೊಲೊ” ಎಂದು ಚಿತ್ರಹಿಂಸೆ ನೀಡಿದ್ದು ಆ ಕಾಲಕ್ಕೆ ಹಿಂಸೆಯ ಪರಮಾವಧಿ ಎನಿಸಿ ಸೆನ್ಸಾರ್ ಮಂಡಳಿಯ ಕಣ್ಣು ಕುಕ್ಕಿತ್ತು. ಹೆಣ್ಣುಮಕ್ಕಳಿಗೆ ಇದು ಸೌಂದರ್ಯಕ್ಕಾಗಿ ಸಹಸ್ರಾನುಕೋಟಿ ನೇಲ್ ಪಾಲಿಷ್ ಹಚ್ಚಿಕೊಂಡು ಮೆರೆದಾಡಲು ಇರುವ ಸೌಂದರ್ಯದ ಅಂಗವಾಗಿದ್ದರೆ ಶೋಕಿಗಾಗಿ ಅಥವಾ ಗಿನ್ನಿಸ್ ದಾಖಲೆಗಾಗಿ ಮೀಟರುಗಳಷ್ಟು ಉಗುರು ಬಿಡುವ ಜನರೂ ಇದ್ದಾರೆ.

ಮನುಷ್ಯನ ಉಗುರು ದಿನವೊಂದಕ್ಕೆ ೦.೦೩೩ ಮಿಲಿ ಮೀಟರ್ ಅಥವಾ ತಿಂಗಳಿಗೆ ೩ ಮಿಲಿ ಮೀಟರ್ ಬೆಳೆಯುತ್ತದೆ. ಅಂದರೆ ೧ ಮೀಟರ್ ಬೆಳೆಯಲು ಉಗುರಿಗೆ ಸುಮಾರು ೨೮ ವರ್ಷಗಳೇ ಬೇಕು. ಋಷಿಮುನಿಗಳಿಗೆ ಗಡ್ಡಮೀಸೆ ಬೆಳೆಯುವುದನ್ನು ತೋರ‍ಿಸಲಾಗಿದೆಯೇ ಹೊರತು ಉದ್ದುದ್ದಕ್ಕೆ ಉಗುರು ಬೆಳೆದ ಋಷಿಗಳು ಕಾಣಸಿಗಲ್ಲ. ಉಗುರು ಕೆರಾಟಿನ್ ಎಂಬ ಅಂಗಾಂಶದಿಂದ ರಚಿಸಲ್ಪಟ್ಟಿದೆ. ಇವು ಚರ್ಮದ ಮುಂದುವರೆದ ಅಂಗಾಂಶಗಳು. ಕೂದಲು ಸಹ ಚರ್ಮಕ್ಕೆ ಅಂಟಿಕೊಂಡ ಒಂದು ಅಂಗಾಂಶ. ಉಗುರು ಚಪ್ಪಟೆ ಆಕಾರದ ಕೆರಾಟಿನ್ ಪ್ಲೇಟ್ ಹೊಂದಿದೆ. ಹುಲಿಯ ಉಗುರು ಅತ್ಯಂತ ಶಕ್ತಿಶಾಲಿ. ಬೆಕ್ಕುಗಳಂತೆ ಹುಲಿಗಳಿಗೂ ಸಹ ಅವುಗಳ ಉಗುರುಗಳನ್ನು ಮುಟ್ಟುವುದು ಒಂದಿಷ್ಟೂ ಇಷ್ಟವಾಗುವುದಿಲ್ಲ.

ಫೋಟೋ ಕೃಪೆ :google

ಅಮೇರಿಕಾದಲ್ಲಿ ೪೫೦೦ ವರ್ಷಗಳಷ್ಟು ಹಿಂದಿನ ಮಹಿಳೆಯ ಅಸ್ಥಿಪಂಜರದ ಜೊತೆ ಹುಲಿಯುಗುರು ಕಾಣಿಸಿಕೊಂಡಿತ್ತು. ಭಾರತದಲ್ಲಿ ಶಿವಾಜಿ ಮಹಾರಾಜ ಶತ್ರುವನ್ನು ಹುಲಿಯುಗುರು ಧರಿಸಿ ಅದರಿಂದ ಸೀಳಿ ಕೊಂದ ಎಂಬ ಬಗ್ಗೆ ಪ್ರತೀತಿ ಇದೆ.ಟಿಪ್ಪು ಸಹ ಹುಲಿಯನ್ನು ಕೊಂದು ಪ್ರಸಿದ್ಧನಾದ. ಜಿಮ್ ಕಾರ್ಬೆಟ್ ಬ್ರಿಟೀಷ್ ಹುಲಿ ಬೇಟೆಗಾರ ಸಹ ಹುಲಿಯುಗುರುಗಳ ಬಗ್ಗೆ ವಿಪರೀತ ಆಸಕ್ತಿ ಹೊಂದಿದ್ದ ಎನ್ನಲಾಗುತ್ತಿದೆ.

ಹುಲಿಯ ಉಗುರು ಮತ್ತು ಗಿಡುಗನ ಉಗುರು ಬಹುತೇಕ ಸಮ ಶಕ್ತಿಶಾಲಿಯಾದವು. ಹುಲಿಯುಗುರು ಅದರ ಅಸ್ಥಿಪಂಜರದ ೫೦ ಕ್ಕೂ ಹೆಚ್ಚುಪಟ್ಟು ಗಟ್ಟಿ. ಅಸ್ಥಿಪಂಜರದ ಎಲುಬಿಗೆ ಸಹ ಇದು ಗೀರುಗೆರೆ ಮೂಡಿಸಬಹುದು. ಕಾಲಕಾಲಕ್ಕೆ ಉಗುರು ಸವೆದಂತೆ ಹೊಸ ಪದರ ಬೆಳೆಯುತ್ತಾ ಇರುತ್ತದೆ. ಕೆಳಭಾಗ ಕಡಿಮೆ ವೇಗದಲ್ಲಿ ಬೆಳೆದರೆ ಮೇಲ್ಬಾಗ ಜಾಸ್ತಿ ವೇಗದಲ್ಲಿ ಬೆಳೆಯುತ್ತದೆ. ಇದರಿಂದ ಉಗುರು ಬಾಗಿದ ಆಕೃತಿ ಹೊಂದಿದೆ. ಮರ ಇತ್ಯಾದಿಗಳನ್ನು ಆಗಾಗ ಪರಚುವುದು ಅವುಗಳ ವಲಯ ಗುರುತಿನ ಲಕ್ಷಣ. ಅವು ಉಗುರು ಜಾಸ್ತಿ ಚೂಪಾದರೆ ಅವುಗಳನ್ನು ಮೊಂಡುಗೊಳಿಸಿಕೊಳ್ಳುತ್ತವೆ ಮತ್ತು ಹೊರಗಿನ ಹಳೆಯ ಕವಚವನ್ನ್ ಕಳಚಿಕೊಳ್ಳೂತ್ತವೆ. ಸಾಮಾನ್ಯವಾಗಿ ಹುಲಿ ಬೇಟೆಯಾಡುವಾಗ ಈ ಚೂಪಾದ ಉಗುರುಗಳನ್ನು ಬೇಟೆಯ ಚರ್ಮದೊಳಗೆ ಆಳವಾಗಿ ಇಳಿಸಿ ನಂತರ ಅದರ ಕುತ್ತಿಗೆಗೆ ಬಾಯಿ ಹಾಕಿ ಅದರ ಮುಖ್ಯ ರಕ್ತನಾಳ ಮತ್ತು ಗಂಟಲನ್ನು ಸೀಳುತ್ತದೆ. ಹುಲಿ ಎಂದೂ ಇಲಿಯಂತ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುವದಿಲ್ಲ. ಅದರ ಆಕಾರ ಮತ್ತು ಗಾತ್ರಕ್ಕೆ ಸಮನಾದ ಕಾಡುಕೋಣ, ಕಡಿವೆ ಅಥವಾ ಚಿಕ್ಕದಾದ ಜಿಂಕೆ,ಸಾರಂಗ ಇತ್ಯಾದಿಗಳನ್ನು ಬೇಟೆಯಾಡುತ್ತದೆ. ಸಾಮಾನ್ಯವಾಗಿ ಹುಲಿ ಅದು ಮಾಂಸಾಹಾರಿ ಪ್ರಾಣಿಗಳನ್ನು ಬೇಟೆಯಾಡುವುದಿಲ್ಲ. ಆದರೆ ಆಫ್ರಿಕದಲ್ಲಿರುವ ಹುಲಿಗಳು ನೀರಿನಲ್ಲಿನ ಮೊಸಳೆಗಳನ್ನು ಮತ್ತು ಸೀಳುನಾಯಿಗಳನ್ನು ಬೇಟೆಯಾಡಿ ತಿನ್ನುತ್ತವೆ.

ಫೋಟೋ ಕೃಪೆ :google

ಅನೇಕ ದೇಶಗಳಲ್ಲಿ ಹುಲಿಯುಗುರು ಧರಿಸುವುದು ಶೌರ್ಯದ ಸಂಕೇತವಾಗಿದ್ದು ಇದೊಂದು ಶ್ರೇಣೀಕರಣದ ಕುರುಹು. ಶ್ರೀಮಂತರ ಶೋಕಿ ಮತ್ತು ಅಹಂಕಾರದ ಸಂಕೇತ. ಸಿಂಹಕ್ಕೂ ಸಹ ಉಗುರು ಇದ್ದರೂ ಸಹ ಹುಲಿಯ ಉಗುರು ಧರಿಸುವುದು ಒಂದು ತರ ಬಲಶಾಲಿತನವನ್ನು ತೋರಿಸುವ ಸಂಕೇತವಾಗಿ ಮಾರ್ಪಟ್ಟಿದೆ.

ಮಾಂತ್ರಿಕರು ಇದನ್ನು ದುಷ್ಟಶಕ್ತಿಯನ್ನು ದೂರಮಾಡುವ ವಿಜಯದ ಮತ್ತು ಧೈರ್ಯತರುವ ಸಾಧನ ಎಂದು ಬಿಂಬಿಸಿದ್ದಾರೆ. ಹುಲಿಯ ಚರ್ಮದ ಮೇಲೆ ಕುಳಿತು ತಪಸ್ಸು ಮಾಡಿದರೆ ತಪಸ್ಸು ಬೇಗ ಸಿದ್ಧಿಸುತ್ತದೆ ಎಂದು ನಂಬಿಕೆ ಇದೆ. ಕಾರಣ ಅನೇಕ ದೇವಸ್ಥಾನಗಳಲ್ಲಿ, ಮಠಗಳಲ್ಲಿ ಬಹಳ ಹಿಂದಿನಿಂದಲೂ ಸಹ ಈ ಪರಂಪರೆ ಇದೆ. ಪಾರಂಪರಿಕ ವಿಧಿಗಳಿಗೆ ವೈಜ್ಞಾನಿಕ ಕಾರಣವನ್ನು ಹುಡುಕಬಾರದೆಂಬ ಅಲಿಖಿತ ನಿಯಮ ಇದಕ್ಕೂ ಅನ್ವಯವಾಗುತ್ತದೆ.

ವನ್ಯಜೀವಿ ರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಹುಲಿಗಳ ನಕಲಿ ಉಗುರುಗಳನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಪ್ರಪಂಚದಲ್ಲಿ ಹಬ್ಬಿದೆ. ಇದನ್ನು ಗುರುತಿಸಲೆಂದೇ ಹೈದರಾಬಾದಿನ ವನ್ಯಜೀವಿ ಸಂಶೋಧನಾ ಸಂಸ್ಥೆಯಂತ ಅನೇಕ ಸಂಸ್ಥೆಗಳಿವೆ.

ಇಷ್ಟೆಲ್ಲಾ ಮಾಡಿ ಹುಲಿಯುಗುರು ಧರಿಸಿ ಸಾಧಿಸುವುದೇನು? ಏನೂ ಇಲ್ಲ. ಸುಮ್ಮನೆ ಕಾನೂನನ್ನು ಮೈಮೇಲೆಳೆದುಕೊಂಡು ತೊಂದರೆ ಅನುಭವಿಸುವ ಒಂದು ಪರಿ ಅಷ್ಟೆ.


  • ಡಾ.ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW