ಮನೋಹರ ಅಪ್ಪನಿಗೆ ಹೇಳದೆ ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿದ್ದ, ಇದರಿಂದ ಅವನ ಮನಸ್ಸಲ್ಲಿ ತಪ್ಪಿತಸ್ಥನ ಭಾವ ಕಾಡುತ್ತಿತ್ತು. ಇದನ್ನು ಅರಿತ ಅವನ ಹೆಂಡತಿ ಸೀದಾ ಮಾವನ ಮನೆಗೆ ಹೋದಳು, ಮುಂದೇನಾಯಿತು ಕತೆಗಾರ ಹರಿಹರ ಬಿ ಆರ್ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…
ಮನೋಹರ ಅಪ್ಪನ ಎದುರಿಗೆ ತಪ್ಪಿತಸ್ಥನ ಭಾವ ಹೊತ್ತು ‘ತಿರುಗಿ ಒಮ್ಮೆ ನೋಡಬಾರದೇ’ ಎಂದು ಅವನ ಮನ ಹಾತೊರೆಯುತ್ತಿತ್ತು. ಚಿಕ್ಕ ವಯಸ್ಸಿನಿಂದ ಕಚೇರಿಗೆ ಸೇರುವ ತನಕ ಅಪ್ಪ ಮಾಡಿದ್ದು ಬೇಕಾದಷ್ಟಿದೆ ಎಂದು ಈಗ ಅನ್ನಿಸತೊಡಗಿತು. ಬಯಸಿದ್ದನ್ನು ಕೊಡಿಸುತ್ತಿದ್ದ ಅಪ್ಪ, ಆದರೆ ಅಷ್ಟೇ ಗಂಭೀರ ಸ್ವಭಾವದವರು. ಅದು ಗರ್ವವೆಂದು ಹೇಳಲಾಗದೆ ಅವರ ಸ್ವಾಭಿಮಾನವಾಗಿತ್ತು. ಸೆಳೆತವಿತ್ತು. ಪ್ರೀತಿಯೂ ಇತ್ತು. ಮೌನದಲ್ಲಿಯೆ ತನ್ನೆಲ್ಲ ತಪ್ಪುಗಳನ್ನು ಹೇಳಿಕೊಂಡು ಅಪ್ಪನ ಸಾಂತ್ವನ ಮತ್ತು ಒಪ್ಪಿಗೆಗೆ ಕಣ್ಣುಗಳು ಹುಡುಕಾಡುತ್ತಿದ್ದವು.
ಮನೋಹರನು ಕಾಲೇಜಿನ ದಿನಗಳಲ್ಲಿ ಜಯಾಳನ್ನು ಪ್ರೀತಿಸಿದ್ದ. ಇಬ್ಬರೂ ಕಚೇರಿಗಳಲ್ಲಿ ಕೆಲಸಗಳನ್ನು ಗಿಟ್ಟಿಸಿಕೊಂಡ ಮೇಲೆ ಇಬ್ಬರೂ ಹೋಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಮಾಡಿಕೊಂಡು ಹಾಗೂ ಮನೆ ಮಾಡಿಕೊಂಡು ಬೇರೆಯಾಗಿಯೇ ಇರಲಿಚ್ಛಿಸಿದ ಮತ್ತು ಜಯಾಳಿಗೆ ಅದೇ ವಿಷಯವನ್ನು ತಿಳಿಸಿದ.
ಇದು ಜಯಾಳಿಗೆ ಸರಿಕಾಣಲಿಲ್ಲ. “ನಾನು ಯಾವಾಗಲೂ ನಿಮ್ಮ ಅಪ್ಪನನ್ನು ಪರಿಚಯಿಸಲು ಕೇಳುತ್ತಿದ್ದೆ. ಏಕೆ ಹಿಂಜರಿಯುತ್ತಿರುವಿರಿ?” ಎಂದು ಕೇಳಿ ದೊಡ್ಡ ರಾದ್ಧಾಂತ ಮಾಡಿ ಚೀರಾಡಿದಳು.
“ಇಲ್ಲ ನನಗೆ ಅಪ್ಪನ ಎದುರಿಗೆ ಹೇಳುವ ಧೈರ್ಯವಿಲ್ಲ. ಅವರಿಗೆ ಹೇಳಿದರೆ ಜಾತಿಯಾಧಾರದ ಮೇಲೆ ನೀನು ನನ್ನ ಕೈಗೆ ಸಿಗುವುದಿಲ್ಲ. ಅದಕ್ಕೇ ಈ ರೀತಿ ಮಾಡಿದೆ. ಆದರೆ ನ್ಯಾಯ ಸಮ್ಮತವಾಗಿಯೇ ಮಾಡುತ್ತಿರುವೆನಲ್ಲ. ನಿನ್ನ ಅಪ್ಪ ಅಮ್ಮನ ಬಳಿಯೂ ಒಪ್ಪಿಗೆ ಪಡೆದಿರುವೆನಲ್ಲ, ಮತ್ತಿನ್ನೇನು?” ಎಂದು ಕೇಳಿದ.
“ಒಂದು ಕೆಲಸ ಸಿಕ್ಕಿದಾಕ್ಷಣ ನೀವು ದೊಡ್ಡವರಾಗಿಬಿಟ್ಟರಾ? ನೀವು ಕೇಳಿ ಕೇಳಿದ್ದು ಕೊಡಿಸಿ, ನಿಮ್ಮ ಮದುವೆಗೆ ನಿಮ್ಮಪ್ಪ ಒಪ್ಪುವುದಿಲ್ಲವೇ? ಎಲ್ಲ ನಿಮ್ಮ ಭ್ರಮೆಯೊಳಗೆ ಸುಳಿದಾಡುವುದು ಬಿಟ್ಟು ಧೈರ್ಯದಿಂದ ಕೇಳಿದರೆ ಯಾವ ತಂದೆಗೆ ತನ್ನ ಮಗನ ಪ್ರತಾಪ ಇಷ್ಟವಾಗುವುದಿಲ್ಲ ಹೇಳಿ” ಎಂದು ಕೇಳಿದಾಗ ಅವನು ಭಯದಿಂದಲೇ ತತ್ತರಿಸಿದ. ಜೊತೆಗೆ ಜ್ವರವೂ ಬಂದುಬಿಟ್ಟಿತ್ತು.
ಮನೋಹರನ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವನಿಗೆ ತಿಳಿಸದೆ ಅವನು ಎಂದೋ ಕೊಟ್ಟಿದ್ದ ಅವನಪ್ಪನ ಜಂಗಮವಾಣಿ ಸಹಾಯದಿಂದ ತಾನೊಬ್ಬಳೇ ಮಾವಂದಿರ ಮನೆಗೆ ಹೋಗಿ, ತನ್ನನ್ನು ಪರಿಚಯಿಸಿಕೊಂಡಳು. ಅವರ ಕಾಲಿಗೆ ಬಿದ್ದು, ಅವರ ಮಗನ ಪರಿಸ್ಥಿತಿಯನ್ನು ಹೇಳಿಕೊಂಡು “ನನ್ನ ಮದುವೆಗೆ ನನ್ನ ಅಪ್ಪ ಅಮ್ಮಂದಿರೂ ಒಪ್ಪಿರುವರು. ನಿಮ್ಮ ಮಗನ ಗುಣವನ್ನು ಮೆಚ್ಚಿರುವರು. ನಿಮ್ಮ ಬಗ್ಗೆ ನನ್ನ ಭಾವಿಯವರು ಬೇಕಾದಷ್ಟು ಹೇಳಿ ಖುಷಿಯಾಗಿರುವರು. ಅವರಿಗೆ ನಿಮ್ಮ ಭಯವಿದೆ. ನಿಮ್ಮೊಂದಿಗೆ ಅಂತರ್ಜಾತಿಯಿಂದಾಗಿ ಮದುವೆಗೆ ಒಪ್ಪಿಗೆ ಸಿಗುತ್ತದೋ ಇಲ್ಲವೋ ಎಂದು ಹೆದರಿ ಈಗ ಜ್ವರದಿಂದ ನರಳುತ್ತಿದ್ದಾರೆ. ಹೇಗಾದರೂ ಮಾಡಿ ಅವನು ಸರಿಹೋಗುವಂತೆ ಮತ್ತು ಮದುವೆ ಮಾಡಿಕೊಡಿ” ಎಂದು ಪರಿಪರಿಯಾಗಿ ಗೋಳಾಡಿದಳು.
ಅವರಿಗೆ ‘ಸದ್ಯ ನನ್ನ ಮಗ ಸಿಕ್ಕಿದನಲ್ಲಾ’ ಎಂಬ ಖುಷಿಯೇ ಅವರ ಮುಖದಲ್ಲಿ ತಾಂಡವವಾಡುತ್ತಿತ್ತು. “ಸರಿ ನಡಿ ಅವನೆಲ್ಲಿರುವ ತೋರಿಸು. ಹೋಗಿ ಕರೆದುಕೊಂಡು ಈಗಲೇ ಅಸ್ಪತ್ರೆಗೆ ಸೇರಿಸೋಣ” ಎಂದರು.
“ಇಲ್ಲ ಮಾವ ಅದು ಯಾವ ಜ್ವರವೆಂದು ನನಗೆ ಗೊತ್ತು. ಆಸ್ಪತ್ರೆಗೆ ಸೇರಿಸುವಷ್ಟು ಗಂಭೀರವಾಗಿ ಏನಾಗಿಲ್ಲ. ಔಷಧಿ ಇಲ್ಲೇ ಸಿಗುತ್ತದೆಯೆಂದೇ ನೇರವಾಗಿ ನಿಮ್ಮಲ್ಲಿಗೆ ಬಂದಿರುವೆ. ನೀವು ಸ್ವಾಭಿಮಾನಿಗಳು. ನೀವು ಬರೋದು ಬೇಡ. ನಾನು ಹೋಗಿ ಕರೆದುಕೊಂಡು ಬರುತ್ತೇನೆ. ಮುಂದಿನದು ನಿಮಗೆ ಬಿಟ್ಟಿದ್ದು”
“ಸರಿಯಮ್ಮ ಆಯ್ತು. ನೀನು ಹೇಳಿದ್ದು ಸರಿಯಾಗಿದೆಯಮ್ಮ” ಎಂದು ನುಡಿದು ಕರೆದುಕೊಂಡು ಬರಲು ಹೇಳಿದ್ದರು.
“ಪ್ರೀತಿಯಲ್ಲಿ ಬಿದ್ದವನೇ, ನಿನ್ನ ಸಂಗಾತಿ ಸಿಕ್ಕ ಮೇಲೆ ನಾನೀಗ ಬೇರೆಯವನು ಅಂತ ಅಂದುಕೊಂಡು ಬಿಟ್ಟೆಯೇನೋ ಮಗನೇ. ನಿನ್ನ ಹೆಂಡತಿಯಾಗುವವಳು ದಿಟ್ಟೆ. ಅವಳು ಯಾರು? ಅವಳ ಗುರಿ ಏನು? ಅನ್ನೋದನ್ನ ತಿಳಿಸಿಬಿಟ್ಟಳವಳು. ನಿನ್ನ ಆಯ್ಕೆ ಸರಿಯಾಗಿಯೇ ಇದೆ” ಎಂದು ನುಡಿದರು.
ಮನೋಹರ ಜೀವನದಲ್ಲಿ ಇದೇ ಮೊದಲ ಬಾರಿ ಅಳತೊಡಗಿದ. “ಅಪ್ಪ ನಿಮ್ಮನ್ನು ಕಂಡರೆ ನನಗಿಂತ ಹೆಚ್ಚಾಗಿ ಇವಳಿಗೆ ಇಷ್ಟವಾದಿರಿ. ನಿಮ್ಮ ಬಗ್ಗೆ ಪ್ರೀತಿಸುವಂತೆ ಗೌರವಿಸುವಂತೆ ಮಾಡಿ ನನ್ನ ಕಣ್ತೆರೆಸಿದವಳು” ಎಂದು ಹೇಳುತ್ತ ಎಂದೂ ನಮಸ್ಕರಿಸದವ ಸಾಷ್ಟಾಂಗ ಮಾಡಿದ್ದ.
- ಹರಿಹರ ಬಿ ಆರ್ – ಅಕ್ಷಂತಲ ಬರಹ, ಬೆಂಗಳೂರು.
