‘ಟೋಬಿ’ ದಯಾನಂದ ಟಿ.ಕೆ ಅವರ ಕಥೆಯೊಂದನ್ನು ರಾಜ್ ಬಿ ಶೆಟ್ಟಿ ಡೆವಲಪ್ ಮಾಡಿ ಅದನ್ನು ಸಿನಿಮಾ ಮಾಡಿರುವ ಚಿತ್ರ. ಬಾಲ್ಯದ ಎಫೆಕ್ಟ್ ಮುಂದಿಟ್ಟುಕೊಂಡು ಮಾಡಿದಂತಹ ಸಿನಿಮಾ, ತಪ್ಪದೆ ಓದಿ ರಂಜಿತ್ ಕವಲಪಾರ ಅವರ ‘ಟೋಬಿ’ ಕುರಿತಾದ ಅಭಿಪ್ರಾಯ.
ಮಲಯಾಳಂ ಅಲ್ಲಿ ಇತ್ತೀಚೆಗೆ ಒಂದು ಸಿನಿಮಾ ನೋಡಿದ್ದೆ. ದ್ವಿಪಾತ್ರದಲ್ಲಿ ‘ಜೂಜು ಜಾರ್ಜ್’ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ಇರಟ್ಟ’ ಆ ಸಿನಿಮಾದ ಒಟ್ಟು ಮೊತ್ತ ಆಶಯ ನೋಡುವುದಾದರೆ ಬಾಲ್ಯದ ಮಹತ್ವವನ್ನು ಸಾರುತ್ತದೆ. ಬಾಲ್ಯ ಎಡವಿದರೆ ಅದು ಹೇಗೆ ಮನುಷ್ಯನನ್ನು ನಿರ್ದಯವಾಗಿ ರೂಪಿಸುತ್ತದೆ ಎನ್ನುವ ಸೂಕ್ಷ್ಮ ಎಳೆಯೊಂದನ್ನು ಇಟ್ಟುಕೊಂಡು ಆ ಸಿನಿಮಾ ನಿರ್ಮಾಣವಾಗಿದೆ. ಜೊತೆಗೆ ಕ್ರೈ ಸಸ್ಪೆನ್ಸ್ ಥ್ರಿಲ್ಲರ್ ಆ ಸಿನಿಮಾದ ಹೆಚ್ಚುಗಾರಿಕೆ, ಸಿನಿಮಾ ನ್ಯಾಚುರಲ್ ಆಗಿಯೂ ಇದೆ, ನಟನೆಯ ಮೂಲಕ ಸಿನಿಮಾ ಮತ್ತಷ್ಟು ಉತೃಷ್ಟ ಮಟ್ಟವನ್ನು ತಲುಪಲು ಸಾಧ್ಯವಾಗಿದೆ. ಕಥೆಯೂ ವೀಕ್ಷಕನ ಕುತೂಹಲವನ್ನು ಕೊನೆವರೆಗೂ ಹಿಡಿದಿಡುತ್ತದೆ.
‘ಟೋಬಿ’ ದಯಾನಂದ ಟಿ.ಕೆ ಅವರ ಕಥೆಯೊಂದನ್ನು ರಾಜ್ ಬಿ ಶೆಟ್ಟಿ ಡೆವಲಪ್ ಮಾಡಿ ಅದನ್ನು ಸಿನಿಮಾ ಮಾಡಿರುವ ಚಿತ್ರ. ಬಿಡುಗಡೆಯಾಗಿದೆ ನಾನು ನೋಡಿ ಕೊಂಡು ಬಂದೆ. ಇಲ್ಲೂ ಬಾಲ್ಯದ ಎಫೆಕ್ಟ್ ಮುಂದಿಟ್ಟುಕೊಂಡು ಸಿನಿಮಾವನ್ನು ರಚಿಸಲಾಗಿರುವುದರಿಂದ ನಾನು ಆರಂಭದಲ್ಲಿ ‘ಇರಟ್ಟ’ ಸಿನಿಮಾದ ಉದಾಹರಣೆ ಕೊಟ್ಟೆ. ‘ಉಳಿದವರು ಕಂಡಂತೆ’ ಸಿನಿಮಾದಿಂದ ಪ್ರೇರೇಪಿತರಾಗಿ ಸಿನಿ ಲೋಕಕ್ಕೆ ಬಂದೇ ಎಂದು ಹಲವು ಸಂದರ್ಶನಗಳಲ್ಲಿ ಸ್ವತಃ ರಾಜ್ ಅವರು ಹೇಳಿಕೊಂಡಿರುವುದರಿಂದ ಈ ಸಿನಿಮಾದಲ್ಲಿ ಅವರು ಕಥೆಯನ್ನು ಉಳಿದವರು ಕಂಡಂತೆ ಸಿನಿಮಾದ ಟೆಕ್ನಿಕ್ ನಂತೆ ಇತರ ಪಾತ್ರಗಳ ಮೂಲಕ ಹೇಳಿಸುತ್ತಾ ಹೋಗುತ್ತಾರೆ. ಈ ಟೆಕ್ನಿಕ್ ಮಲಯಾಳಂ ನ ‘ಚಟ್ಟಂಬಿ’ ಸಿನಿಮಾದಲ್ಲೂ ವರ್ಕೌಟ್ ಆಗಿದೆ.
ಟೋಬಿ ಪಾತ್ರವನ್ನು ರಾಜ್ ಬಿಟ್ಟರೆ ಮತ್ಯಾರೂ ನಿರ್ವಹಿಸಲು ಸಾಧ್ಯವಿಲ್ಲ ಅನ್ನುವಷ್ಟರ ಮಟ್ಟಿಗೆ ನಟಿಸಿ ಈ ಸಿನಿಮಾದಲ್ಲಿ ರಾಜ್ ಸೈ ಎನಿಸಿಕೊಂಡಿದ್ದಾರೆ. ಗರುಡಗಮನದ ಶಿವನ ಪಾತ್ರವನ್ನು ಕಂಡಿರುವ ನಮಗೆ ಅದರ ಮುಂದುವರೆದ ಭಾಗದಂತೆ ಟೋಬಿಯ ಪಾತ್ರ ಇಲ್ಲಿ ಭಾಸವಾಗುತ್ತದೆ.
ಫೋಟೋ ಕೃಪೆ : google
ಫಸ್ಟ್ ಆಫ್ ನಲ್ಲಿ ತಿಳಿ ಹಾಸ್ಯ ಇದೆ. ವಿಶೇಷ ಪಾತ್ರದಲ್ಲಿ ನಟಿ ಸಂಯುಕ್ತ ಹೊರ್ನಾಡ್ ಹೆಚ್ಚು ಗಮನ ಸೆಳೆಯುತ್ತಾಳೆ. ಟೋಬಿಯ ಬಾಲ್ಯ ಮತ್ತು ಯವ್ವನವನ್ನು ಇಲ್ಲಿ ಕಟ್ಟಿಕೊಡಲಾಗುತ್ತದೆ. ಬಾಲ್ಯದಲ್ಲೇ ಕೆಟ್ಟ ಜಗತ್ತನ್ನು ಕಂಡ ಪ್ರಭಾವಕ್ಕೆ ಆತನ ಪಾತ್ರ ಒರಟಾಗಿಯೇ ಪ್ರಾರಂಭ ಆಗುತ್ತದೆ. ಆದರೂ ಒರಟನಿಗೂ ಪ್ರೇಮಮೂಡಿಸಿ ಆತನಿಂದ ಒಂದಿಷ್ಟು ಹಾಸ್ಯವನ್ನೂ ಕಥೆ ಕಟ್ಟಿಕೊಡುತ್ತದೆ. ಸಿನಿಮಾ ಸ್ವಲ್ಪ ನಿಧಾನವಾಗಿಯೇ ಫಸ್ಟ್ ಆಫ್ ನಲ್ಲಿ ಮುಂದಕ್ಕೆ ಹೋಗುತ್ತದೆ.
ಹೆಣಕೊಯ್ಯುವ ರಂಗಾಯಣ ರಘುವನ್ನು ನಾವು ಸೂರಿ ಅವರ ನಿರ್ದೇಶನದ ‘ಇಂತಿ ನಿನ್ನ ಪ್ರೀತಿಯ’ ನಾನ್ಯಾರೂ ಸಿನಿಮಾದಲ್ಲಿ ಕಂಡಿದ್ದೇವೆ. ಅಲ್ಲೂ ಪಾತ್ರ ಮೂಗ ಹಾಗೂ ಈ ಸಿನಿಮಾದಲ್ಲೂ ಮುಖ್ಯ ಭೂಮಿಕೆಯ ಪಾತ್ರದ ವೃತ್ತಿಯೂ ಅದೇ ಹಾಗೂ ಆತನೂ ಮೂಗನೇ ಆದರೇ ಇಲ್ಲಿ ವ್ಯಕ್ತಿತ್ವ, ಕಥೆ ಬೇರೇ ಇದೆ.
ಸೆಕೆಂಡ್ ಆಫ್ ನಲ್ಲಿ ಟೋಬಿಯ ಮಗಳ ಪಾತ್ರ ಸಿನಿಮಾದುದ್ದಕ್ಕೂ ಗಟ್ಟಿ ಸ್ಥಾನ ಗಿಟ್ಟಿಸಿಕೊಳ್ಳುತ್ತಲೇ ಹೋಗುತ್ತದೆ ಚೈತ್ರ ಆಚಾರ್ ಅವರು ತಮ್ಮ ಸಾಮರ್ಥ್ಯವನ್ನು ಇಲ್ಲಿ ಸಂಪೂರ್ಣ ಸಾಭೀತು ಮಾಡಿದ್ದಾರೆ. ಸೆಕೆಂಡ್ ಆಫ್ ನಲ್ಲಿ ಬರುವ ಟ್ವಿಸ್ಟ್ ಚೆನ್ನಾಗಿ ವರ್ಕೌಟ್ ಆಗಿದೆಯಾದರೂ ನಾನು ಊಹಿಸಿದಂತೆ ಸಿನಿಮಾ ಸಾಗಿತ್ತು.
ಸಿನಿಮಾದಲ್ಲಿ ಫೈಟ್ ಸ್ವೀಕ್ವೆನ್ಸ್ ಸ್ವಲ್ಪ ಅನ್ ನ್ಯಾಚುರಲ್ ಅನ್ನಿಸಿದರೂ ಮನರಂಜನೆ ದೃಷ್ಟಿಯಿಂದ ನೋಡುವುದಾದರೆ ಮಜ ಕೊಡುತ್ತದೆ. ಭಾವನಾತ್ಮಕ ಗಟ್ಟಬಂದಾಗ ರಾಜ್ ಬಿ ಶೆಟ್ಟಿ ಚಚ್ಚಿ ಬಿಸಾಕುವಂತೆ ನಟಿಸಿದ್ದಾರೆ. ರೌಧ್ರವಾಗೂ ಆತ ಹುಬ್ಬೇರಿಸುವಂತಹಾ ನಟ. ನಗಿಸಲೂ ಆತ ಸೈ. ರಾಜ್ ಒಬ್ಬ ಕಂಪ್ಲೀಟ್ ನಟ ಎಂದು ಈ ಸಿನಿಮಾದ ಮೂಲಕ ಮತ್ತೊಮ್ಮೆ ಸಾಭೀತು ಮಾಡಿದ್ದಾರೆ.
ಫೋಟೋ ಕೃಪೆ : google
ಕನ್ನಡದಲ್ಲಿ ಇಂತಹಾ ಕಥೆಗಳು ತೀರ ವಿರಳ ಇದೊಂದು ತರಹಾ ಪ್ರಯೋಗಕ್ಕೆ ಒಡ್ಡುವ ಸಿನಿಮಾ ಹಾಗಾಗಿ ಕನ್ನಡ ಸಿನಿಮಾ ಮಾತ್ರ ನೋಡುವ ವೀಕ್ಷಕರಿಗೆ ಹೊಸ ಅನುಭವ ಆಗುವ ಎಲ್ಲಾ ಸಾಧ್ಯತೆ ಇಲ್ಲಿ ಇದೆ. ಮಲಯಾಳಂನಲ್ಲಿ ಇಂತಹಾ ಸಿನಿಮಾಗಳು ಈಗೀಗ ಹೆಚ್ಚು ಹೆಚ್ಚು ಬರುತ್ತಿವೆ. ರಾಜ್ ಬಿ ಶೆಟ್ಟಿಗೆ ಸಹನಟರೆಲ್ಲರೂ ಉತ್ತಮ ಸಾಥ್ ಕೊಟ್ಟಿದ್ದಾರೆ.
ಕ್ಲೈಮಾಕ್ಸ್ ಅಲ್ಲಿ ಮಾರಿ ದರ್ಶನವನ್ನೂ ರಾಜ್ ಚೆನ್ನಾಗಿಯೇ ಕೊಟ್ಟಿದ್ದಾರೆ. ಈ ಸಿನಿಮಾದ ಕಥೆ ವಿಶಾಲವಾಗಿದ್ದು ನೋಡುಗನೊಳಗೆ ಬೆಳೆಯಬಲ್ಲ ಕಥೆ ಇದು. ಸಿನಿಮಾ ನೋಡಿದ ಮೇಲೂ ಕಥೆಯಲ್ಲಿ ರಾಜ್ ಹೇಳಲು ಹೊರಟಿರುವ ಸಂಗತಿಗಳು ನಮ್ಮೊಳಗೆ ಯೋಚನೆಗೆ ಹಚ್ಚಿ ಬೆಳೆಯುತ್ತಲೇ ಹೋಗುತ್ತದೆ.
ರಾಜ್ ಬಿ.ಶೆಟ್ಟಿ ಅವರ ಮೇಲಿನ ನಿರೀಕ್ಷೆ ಸಿಕ್ಕಾಪಟ್ಟೆ ಹೆಚ್ಚು ಆಗಿರುವುದರಿಂದಲೋ ಏನೋ ನನಗೆ ಯಾಕೋ ಇನ್ನೂ ಏನೋ ಬೇಕಿತ್ತು ಸಿನಿಮಾದಲ್ಲಿ ಅಂತ ಅನ್ನಿಸಿದ್ದು ನಿಜ. ಏನು ಬೇಕಿತ್ತು? ಅಂತ ನೀವು ಕೇಳಿದರೆ ಥಟ್ ಅಂತ ನನಗೂ ಉತ್ತರಿಸಲು ಆಗುವುದಿಲ್ಲ.
ಮತ್ತೆ ಪೊಲೀಸ್ ಎಂದರೆ ನಮಗೆ ಕಿಶೋರ್ ನೆನಪಾಗುವುದರಿಂದಲೋ ಏನೋ ಇಲ್ಲಿ ಬರುವ ಠಾಣಾಧಿಕಾರಿ ಪಾತ್ರವನ್ನು ಇನ್ನೂ ಸ್ವಲ್ಪ ಗಂಭೀರವಾಗಿ ತೋರಿಸಬಹುದಿತ್ತು ಅಂತ ನನಗೆ ಅನ್ನಿಸಿತು.
ನಟ ಗೋಪಲ ಕೃಷ್ಣ ದೇಶಪಾಂಡೆ ಅವರು ಎಂದಿನಂತೆ ಇಷ್ಟ ಆದರು.
ಫೋಟೋ ಕೃಪೆ : google
ಅಂದ್ಹಾಗೆ : ನನ್ನ ಆತ್ಮೀಯರಾದ Vikram Shetty (ಖ್ಯಾತ ಜಾದೂಗಾರ್) ಅವರು ಮಡಿಕೇರಿಯ ಚರ್ಚ್ ಸೈಡಿನಲ್ಲಿ ಮೊನ್ನೆದಿನ ಒಟ್ಟಿಗೇ ಕೂತು ಗಂಟೆಗಟ್ಟಲೆ ಚರ್ಚಿಸಿ ಎಣ್ಣೆ ಹೊಡೆಯುವಾಗಲೂ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ವಿಚಾರ ನನಗೆ ಹೇಳೇ ಇರಲಿಲ್ಲ.
- ರಂಜಿತ್ ಕವಲಪಾರ