ಅವರು ಹಾಗೆ ಹೋದವರ ಪತ್ತೆಯೇ ಇಲ್ಲ

ಅವರು ನಡೆಯುತ್ತಿದ್ದವರು ಧುತ್ತನೆ ನಿಂತು, ನನ್ನನ್ನು ಕರುಣೆಯಿಂದ ನೋಡಿದರು. ಹಾಗೆ ನೋಡುವಾಗ ಅವರ ಕಂಗಳಲ್ಲಿ ಸಣ್ಣಗೆ ನೀರು ತುಂಬಿಕೊಂಡಿತ್ತು, ದುಃಖ ಅವರ ಗಂಟಲಲ್ಲಿ ಸಿಲುಕಿಕೊಂಡಿತ್ತು. ಏನಾಯ್ತು? ಎನ್ನುವಂತೆ ಅವರ ಕೈಯನ್ನು ನನ್ನ ಕೈಗಳಿಗೆ ತೆಗೆದುಕೊಂಡು ಸಣ್ಣಗೆ ಅದುಮಿದೆ. ಮುಂದೇನಾಯಿತು ರಂಜಿತ್ ಕವಲಪಾರ ಅವರ ಅಂಕಣವನ್ನು ತಪ್ಪದೆ ಮುಂದೆ ಓದಿ…

ಅವರು ಹಾಗೆ ಹೋದವರು ಫೋನೂ‌ ಮಾಡಲಿಲ್ಲ. ಮರಳಿ ಬರಲೂ ಇಲ್ಲ. ಹಾಗೆ ಅವರು ಕೊನೆಯ ಬಾರಿ ನನ್ನನ್ನು ನೋಡಲು ಬಂದಾಗ ಅವರ ಬಲ ಕೆನ್ನೆಯ ಮೇಲಿದ್ದ ಸಣ್ಣ ಗಾತ್ರದ ಮೊಡವೆಯಂತಹ ಗುಳ್ಳೆ ಇರಲಿಲ್ಲ. ಬದಲಿಗೆ ಅಲ್ಲಿ ಹೊಲಿಗೆ ಹಾಕಿದಂತೆ, ಸಣ್ಣದೊಂದು ಗಾಯದ ಗುರುತು ಇತ್ತು. ಆ ಗಾಯ ಇನ್ನೂ ಹಸಿಯಾಗಿಯೇ ಇತ್ತು‌. ಇದೇನಾಯ್ತು? ಎಂದು ಕೇಳಿದ್ದಕ್ಕೆ, ಮೊಡವೆಯನ್ನು ಕಳೆದವಾರ ಮಡಿಕೇರಿಯ ಸರಕಾರಿ ಆಸ್ಪತ್ರೆಯವರು ತೆಗೆದರು ಎಂದರು. ಹಾಗೆ ಅವರು ಹೇಳುವಾಗ ಎಂದಿನಂತೆ ಅವರ ಕಂಗಳು ಹೊಳೆಯುತ್ತಿರಲಿಲ್ಲ. ಅವರ ಹಣೆಯ ಮೇಲೆ ಸದಾ ಪ್ರಜ್ವಲಿಸುತ್ತಿದ್ದ ಜ್ಞಾನದ ಗೆರೆಗಳು ಕಾಣೆಯಾಗಿದ್ದವು. ನಿಶ್ಕಲ್ಮಶ ಹಾಗು ನೆಮ್ಮದಿಯ ನಗು ಅವರಲ್ಲಿ ಇರಲಿಲ್ಲ‌. ಬದಲಿಗೆ ಆತಂಕ, ಚಿಂತೆ, ವಿಪರೀತ ಭಯ ಅವರಲ್ಲಿ ಕಾಣಿಸುತ್ತಿತ್ತು. ಕಂಗಳೂ ಅಷ್ಟೇ ತಿಳಿಯಾಗಿರಲಿಲ್ಲ. ಇದೇನಾಯ್ತು? ಎಂದು ನಾನು ಅವರಲ್ಲಿ ಕೇಳುವ ಮುನ್ನ ಈ ಹಿಂದೆ ಅವರಲ್ಲಿದ್ದ ನಿರಾತಂಕ, ತೇಜಸ್ಸು, ಆಕರ್ಷಣೆ, ಹೊಳೆಯುವ ಕಂಗಳು, ಆ ನಗು, ಆತ್ಮವಿಶ್ವಾಸಗಳನ್ನು ನೆನಪುಮಾಡಿಕೊಂಡೆ. ನಂತರ ಏನಾಯ್ತು? ಎಂದು. ಅವರಲ್ಲಿ ಮೆಲು ಧ್ವನಿಯಲ್ಲಿ ಕೇಳಿದೆ. ಸಾಮಾಜಿಕ ಅಶಾಂತಿ, ಕಲಹ, ಕ್ರೌರ್ಯಗಳ ಕುರಿತು ಸದಾ ಚಿಂತಿಸುತ್ತಿದ್ದ ಇವರಿಗೆ ಸ್ವಕಾರ್ಯಗಳ ಕುರಿತು ಚಿಂತಿಸುವ ಅವಕಾಶವೇ ಇರಲಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇದ್ದವರು ಇವರು.

ಶ್ರಮ ಜೀವಿ, ಸನ್ಯಾಸಿ, ನಿರುಪದ್ರವಿ, ಪರಮ ದೈವ ಭಕ್ತರಾಗಿದ್ದ ಇವರು ಅಂಧವಿಶ್ವಾಸಿ ಆಗಿರಲಿಲ್ಲ. ಆದರೇ ಇವರಿಗೂ ದೇವರಿಗೂ ಇರುವ ನಿಕಟ ಹಾಗು ಸ್ಪಷ್ಟ ಒಡನಾಟದಿಂದಾಗಿ ಹಲವು ಪವಾಡಗಳನ್ನೂ ಎದುರು ಕುಳಿತವರ ಮನಸ್ಸನ್ನೂ ಇವರು ಲೀಲಾ ಜಾಲವಾಗಿ ಬಲ್ಲವರಾಗಿದ್ದರು. ಅವರ ಕೆಲಸವನ್ನು ಅವರೇ ಮಾಡಬೇಕು, ಅವರ ಆಹಾರವನ್ನೂ ಅವರೇ ಸಂಪಾದಿಸಬೇಕು, ಅವರ ಕರ್ಮಗಳನ್ನು ಅವರೇ ಅನುಭವಿಸಬೇಕು ಎಂದು ಅವರು ಆಗಾಗ್ಗೆ ನನಗೂ ಹೇಳುತ್ತಿದ್ದರು. ಹಾಗೆ ಹೇಳುವಾಗಲೂ ಅವರ ಮುಖ ಫಳಫಳನೆ ಹೊಳೆಯುತ್ತಿತ್ತು. ಈಗ ನೋಡಿದರೆ ಸಪ್ಪೆ ಸಪ್ಪೆಯಾಗಿ ಬಂದು ನನ್ನ ಎದುರಿಗೆ ಕುಳಿತು ನನ್ನನ್ನು ಚಿಂತೆಗೀಡು ಮಾಡುತ್ತಿದ್ದಾರೆ. ಬಹುಶಃ ಬಹುಕಾಲದಿಂದ ಅವರ ಆತ್ಮ ಸಂಗಾತಿಯಂತೆ ತಮ್ಮ ಮುಖದ ಭಾಗವೇ ಆಗಿದ್ದ ಅವರ ಕೆನ್ನೆಯ ಮೇಲಿನ ಆ ಮೊಡವೆಯಂತಹ ಗುಳ್ಳೆಯನ್ನು ಕಳೆದುಕೊಂಡ ನೋವಿಗೆ ಹೀಗೆ ಆಗಿರಬಹುದು ಎಂದು ಊಹಿಸಿದ ನಾನು,’ಅದು ಹಾಗಲ್ಲ ಹಿರಿಯರೇ ಅನವಶ್ಯಕವಾಗಿ ಕಡಲು ತನ್ನೊಳಗೆ ಏನನ್ನೂ ಬಿಟ್ಟು ಕೊಳ್ಳುವುದಿಲ್ಲ ನೋಡಿ, ನೀವು ಸಾಗರದಂತವರು ಆ ಗುಳ್ಳೆ ನಿಮ್ಮ ಮೊಗದ ಮೇಲೆ ಅನವಶ್ಯಕವಾಗಿ ಬಹುಕಾಲದಿಂದ ಇತ್ತು‌. ಈಗ ಅದು ಇಲ್ಲದೇ ಆಗಿರುವುದಕ್ಕೆ ನೀವು ಇಷ್ಟೆಲ್ಲಾ ಚಿಂತಿಸುವ ಅಗತ್ಯವಿಲ್ಲ’ ಎಂದು ಸಮಾಧಾನ ಮಾಡಲು ಹೋಗಿದ್ದೆ. ಅಸಲಿಗೆ ಅವರ ಆ ಸಂಕಟದ ಸ್ಥಿತಿಗೆ ಆ ಗುಳ್ಳೆ ಕಾರಣವೇ‌ ಆಗಿರಲಿಲ್ಲ ಎಂದು ಮತ್ತೆ ತಿಳಿಯಿತು. ಹುಳುಕಾದ ಹಲ್ಲು ಕೀಳಿಸಲು, ರೇಡಿಯೋ ರಿಪೇರಿ ಮಾಡಿಸಲು, ತಮ್ಮ ಪಿ.ಎಫ್ ಹಣ ಬಂದಿದೆಯೇ ಎಂದು ನೋಡಲು ಮಾತ್ರ ಮಡಿಕೇರಿಗೆ ಬರುವ ಇವರು ಹಾಗೆ ಬಂದಾಗಲೆಲ್ಲ ನನ್ನನ್ನೂ ಹುಡುಕಿಕೊಂಡು ಬರುತ್ತಿದ್ದರು. ಹಾಗೆ ಬರುವಾಗ ನಗು ನಗುತ್ತಲೇ ಬಂದು, ಉಭಯಕುಶಲೋಪರಿ ಮಾತನಾಡಿ, ಸಮಾಜದ ಕುರಿತಂತೆ, ಮನುಷ್ಯರ ಕುರಿತಂತೆ ಅವರಿಗಿದ್ದ ಸಿಟ್ಟನ್ನು ನನ್ನೊಡನೆ ಚರ್ಚಿಸಿ ಹೋಗುತ್ತಿದ್ದರು. ನಾನು ಬರೆಯುವ ವಿಚಾರವೂ ತಿಳಿದಿದ್ದ ಅವರು. ಅವರ ಮೆಚ್ಚಿನ ಲೇಖಕ ಕೇಂದ್ರ ಸಾಹಿತ್ಯ ‌ಅಕಾಡೆಮಿ ಪ್ರಶಸ್ತಿ ವಿಜೇತ ಶ್ರೀಯುತ ದೇವುಡು ನರಸಿಂಹಶಾಸ್ತ್ರಿ ಅವರನ್ನೂ ಅವರ ‘ಮಹಾಕ್ಷತ್ರಿಯ’ ಕೃತಿಯನ್ನೂ ಗುಣಗಾನ ಮಾಡಿ “ದೇವುಡು ಅವರು ಬರಿಯ ಲೇಖಕರಾಗಿರಲಿಲ್ಲ. ಅವರೊಬ್ಬರು ಆಧ್ಯಾತ್ಮಿಕ ಸಾಧಕರೂ ಆಗಿದ್ದರು. ನೀನು ಈಗ ಬರಿಯ ಬರಹಗಾರ ಮಾತ್ರ. ನಿನಗೆ ನಲವತ್ತು ವರ್ಷಗಳು ಸಂದನಂತರ ನಿನ್ನ ಆಸಕ್ತಿಯೂ ಬೆಳಕಿನೆಡೆಗೆ ಹರಿಯುತ್ತದೆ. ಆಗ ನಿನಗೆ ವಿಶ್ವದರ್ಶನ ಆಗುತ್ತದೆ. ಅದಾದನಂತರ ನೀನು ಬರೆಯುವ ಪ್ರತಿಯೊಂದು ಅಕ್ಷರ ಕೂಡ ಜಗತ್ಪ್ರಸಿದ್ಧವಾಗುತ್ತದೆ. ನೀನೂ ದೇವುಡು ಮಹಾಶಯನಂತೆ ದೊಡ್ಡ ಲೇಖಕ ಆಗುತ್ತೀಯ ನೋಡುತ್ತಿರು” ಎಂದು ನನ್ನ ಭವಿಷ್ಯವನ್ನೂ ಹೇಳಿ ಹೋಗುತ್ತಿದ್ದರು. ಅವರು ಆಧ್ಯಾತ್ಮವನ್ನು ‘ಬೆಳಕು’ ಎಂದು ಆಗಾಗ್ಗೆ ಹೇಳುತ್ತಿದ್ದರು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)

ಹಾಗೆಲ್ಲ ಲವಲವಿಕೆಯಿಂದ ಮಾತನಾಡುತ್ತಿದ್ದ ಅವರು ಈಗ ನೋಡಿದರೆ ಬಹಳಾ ಡಲ್ ಆಗಿ, ಏನು ಹೇಳಬೇಕು ಎಂದು ತಿಳಿಯದಂತೆ ಕುಳಿತು ಬಿಟ್ಟಿದ್ದರು. ‘ಅಲ್ಲ ಇವರೇ ರೇಡಿಯೋ ರಿಪೇರಿ ಆಗಿತ್ತಾ?’ ‘ಇಲ್ಲ’ ಎಂದು ತಲೆ ಆಡಿಸಿದರು. “ಹಲ್ಲಿಗೇನಾದರೂ ತೊಂದರೆ ಆಯಿತೇ?” ಅದಕ್ಕೂ ಇಲ್ಲಾ ಎಂದರು. ‘ ನಿಮ್ಮ‌ ಪಿ.ಎಫ್ ಹಣದ ವಿಚಾರಕ್ಕೆ ಏನಾದರೂ ಸಂಬಂಧಿಸಿದ ಕೆಲಸ ಇತ್ತೇ?’ ಎಂದು ಕೇಳಿದರೆ. ಅದಕ್ಕೂ ಇಲ್ಲ ಎನ್ನುವ ಉತ್ತರ ಆ ಕಡೆಯಿಂದ ಬಂತು. ಈ ಕಾರಣಗಳಲ್ಲದೇ ಬೇರೇ ಏನೋ ಕಾರಣಕ್ಕೆ ಅವರು ಮಡಿಕೇರಿವರೆಗೂ ಬಂದಿದ್ದಾರೆ ಎಂದರೇ ಅದು‌ ಏನೋ ದೊಡ್ಡ ಕಾರಣವೇ ಇರಬೇಕು ಎಂದು ನಾನು ಮನಸ್ಸಿನಲ್ಲಿಯೇ ಲೆಕ್ಕಾಚಾರ ಹಾಕಿಕೊಂಡು. ಹಾಗಾದರೆ ಮತ್ತೇನು? ಅನ್ನುವಂತೆ ಅವರನ್ನೇ ನೋಡುತ್ತಾ ಕೆಲಕಾಲ ಕುಳಿತು ಬಿಟ್ಟೆ. ‘ಸರಿ ನಡೆಯಿರಿ’ ಎಂದು ಅವರನ್ನು ಅಲ್ಲಿಂದ ಎಬ್ಬಿಸಿಕೊಂಡು, ಟೀ ಮತ್ತು ಸಿಗರೇಟು ಸಿಗುವ ಅಂಗಡಿಯೊಂದಕ್ಕೆ ಹೋಗಿ ಅವರಿಗೊಂದು ಸಿಗರೇಟನ್ನು ಟೀ ಅನ್ನೂ ಆರ್ಡರ್ ಮಾಡಿ, ನಾನೊಂದು ಕಾಫಿಗೆ ಹೇಳಿದೆ. ಅಪರೂಪಕ್ಕೆ ಸಿಗರೇಟು ಸೇದುವ ಇವರಿಗೆ ಬೀಡಿ ಎಂದರೆ ಪಂಚಪ್ರಾಣ. ಈ ಸಿಗರೇಟು ರೈತರಿಗೆ ಮಾರಕ ಅನ್ನುವ ಇವರು. ಬೀಡಿ ಅಪ್ಪಟ ದೇಶಿಯ ಉತ್ಪನ್ನ ಹಾಗೂ ರೈತಮಿತ್ರ ಎಂದು ನನ್ನ ಬಳಿ ಆಗಾಗ್ಗೆ ಹೇಳುತ್ತಿರುತ್ತಾರೆ. ಆದರೇ ಅಪರೂಪಕ್ಕೆ ಹೀಗೆ ಒಂದೊಂದು ಸಿಗರೇಟು ಸೇದುವ ಕುರಿತು ಅವರಿಗೇನೂ ಬೇಸರ ಇರಲಿಲ್ಲ.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)

ಹಾಗೆ ಸಿಗರೇಟನ್ನು ಸೇದಿ, ಟೀ‌ ಕುಡಿದ ಅವರು ಮರಳಿ ನನ್ನ ಆಫೀಸಿನತ್ತ ಮುಖ ಮಾಡಿ ನಡೆಯ ತೊಡಗಿದರು. ಅಂಗಡಿಯವನಿಗೆ ಹಣಕೊಟ್ಟು ನಾನೂ ಅವರ ಜೊತೆಗೆ ಹೆಜ್ಜೆಹಾಕತೊಡಗಿದೆ.‌ ಹಾಗೆ ನಡೆಯುತ್ತಿದ್ದವರು ಧುತ್ತನೆ ನಿಂತು, ನನ್ನನ್ನು ಕರುಣೆಯಿಂದ ನೋಡಿದರು. ಹಾಗೆ ನೋಡುವಾಗ ಅವರ ಕಂಗಳಲ್ಲಿ ಸಣ್ಣಗೆ ನೀರು ತುಂಬಿಕೊಂಡಿತ್ತು, ದುಃಖ ಅವರ ಗಂಟಲಲ್ಲಿ ಸಿಲುಕಿಕೊಂಡಿತ್ತು. ಏನಾಯ್ತು? ಎನ್ನುವಂತೆ ಅವರ ಕೈಯನ್ನು ನನ್ನ ಕೈಗಳಿಗೆ ತೆಗೆದುಕೊಂಡು ಸಣ್ಣಗೆ ಅದುಮಿದೆ.

ಬಾಲ್ಯಕಾಲದಿಂದಲೂ ಊರೂರು ಅಲೆಯುತ್ತಾ ನಿಯತ್ತಿನಿಂದ ಕೆಲಸ ಮಾಡುತ್ತಾ, ನಿಷ್ಠೆಯಿಂದ ದೇವರನ್ನು ಸ್ಮರಿಸುತ್ತಾ ಬದುಕಿದ ಈ ಹಿರಿಯರಿಗೆ ಆಧ್ಯಾತ್ಮಿಕ ಒಲವು ಸಣ್ಣ ಪ್ರಾಯದಿಂದಲೇ ಇತ್ತು. ಮದುವೆ, ಸಂಸಾರ, ಲೌಕಿಕ ಜೀವನದಿಂದ ದೂರವೇ ಉಳಿದ ಇವರು ತಮ್ಮ ನಿವೃತ್ತಿಯ ನಂತರ ಕೊಡಗಿನ ಅವರ ಪುರಾತನ ಮನೆಯಲ್ಲಿ ಬಂದು ನೆಲೆಸಿದ್ದರು. ಆ ಮನೆಯಲ್ಲಿ ಯಾರೂ ಇರಲಿಲ್ಲ. ಮನೆಯಲ್ಲಿದ್ದ ಕೆಲವರು‌ ತೀರಿ ಹೋಗಿದ್ದರೆ ಹಲವರು ಊರು ಬಿಟ್ಟು, ಪರ ಊರು ಸೇರಿದ್ದರು. ಹೀಗೆ ಕಾಡು ತುಂಬಿಕೊಂಡು, ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಮನೆಗೆ ಇವರು ಬಂದು‌. ಕಾಡು ಕಡೆದು, ಬೆಳಕು ಮಾಡಿ, ಬೀಳುವ ಸ್ಥಿತಿಯಲ್ಲಿದ್ದ ಮನೆಯನ್ನು ಬೀಳದಂತೆ ಮಾಡಿ ಕೆಲ ವರ್ಷಗಳ ಹಿಂದಷ್ಟೇ ಇವರು ಅಲ್ಲಿ ವಾಸಿಸತೊಡಗಿದ್ದರು. ಈಗ‌ ಇವರ ಕುಟುಂಬದವರಿಗೆ ಒಂದು ತಲೆನೋವು ಶುರುವಾಗಿತ್ತು. ಮದುವೆ ಆಗದ, ವಯಸ್ಸಾದ ಇವರು ಮುಂದೊಂದು ದಿನ ಅನಾರೋಗ್ಯಕ್ಕೆ ಗುರಿಯಾದರೆ ಯಾರು ನೋಡಿಕೊಳ್ಳುವುದು ಎಂದು ಅವರ ಒಡಹುಟ್ಟಿದವರಿಗೂ ತಲೆ ಬಿಸಿ ಶುರುವಾಗಿತ್ತು. ಆರೋಗ್ಯವಾಗಿ ತಮ್ಮ‌ ಕೆಲಸ ತಾವು ಮಾಡಿಕೊಂಡು ಲವಲವಿಕೆಯಿಂದ ಇದ್ದ ಇವರಿಗೆ ಆ ಕುರಿತು ಯೋಚನೆಯೂ ಇರಲಿಲ್ಲ. ಆದರೇ ದಿಢೀರನೆ ಮೊನ್ನೆದಿನ ಅವರಿಗೆ ಕರೆಯೊಂದು ಬಂದು, ಈ ಕುರಿತ ಅವರ ಸಂಬಂಧಿಗಳ ಚಿಂತೆಯನ್ನು ಯಾರೋ ಇವರಿಗೆ ಹೇಳಿಬಿಟ್ಟಿದ್ದಾರೆ. ಜೊತೆಗೆ ಯಾವುದಾದರೂ ಅನಾಥಾಶ್ರಮವನ್ನು ಈಗಲೇ ಹೋಗಿ ಸೇರಿಕೊಳ್ಳುವಂತೆ ಸಲಹೆಯನ್ನೂ ಅವರು ನೀಡಿದ್ದಾರೆ. ಈ ಕುರಿತು ಎರಡು ರಾತ್ರಿ ಎರಡು ಹಗಲು ಯೋಚಿಸಿದ ಇವರು ನಿದ್ರೆಗೆಟ್ಟು, ಚಿಂತಿಸಿ, ಕೊನೆಗೆ ಏನು ಮಾಡುವುದು ಎಂದು ಗೊತ್ತಾಗದೇ ನನ್ನ ಬಳಿ ಬಂದು ಹೀಗೆ ಸಪ್ಪೆ ಮುಖಮಾಡಿ ನಿಂತಿದ್ದರು.

ಸಾಂದರ್ಭಿಕ ಚಿತ್ರ (ಫೋಟೋ ಕೃಪೆ : google)

ಇದು ಹೀಗೆಲ್ಲಾ ಆಗುತ್ತದೆ ಎಂದು ಮೊದಲೇ ಊಹಿಸಿದ್ದ ನಾನು ಅವರ ಕೊನೆಯ ದಿನಗಳಲ್ಲಿ ಸಹಕಾರ ಆಗಬಹುದು ಎಂದು ಅವರನ್ನು ನಾನು ಮಡಿಕೇರಿಯ ವೃದ್ಧಾಶ್ರಮಕ್ಕೆ ಬಹಳಾ ಹಿಂದೆಯೇ ಭೇಟಿ ಮಾಡಿಸಿ, ಅಲ್ಲಿನ ಜೀವನ ದರ್ಶನ ಮಾಡಿಸಿದ್ದೆ. ಅವರ ಚಿಂತೆಯನ್ನು ಅರ್ಥಮಾಡಿಕೊಂಡ ನಾನು ಅದೇ ವೃದ್ಧಾಶ್ರಮದ ವ್ಯವಸ್ಥಾಪಕರನ್ನು ನನ್ನ ಆಫೀಸಿಗೆ ಕೂಡಲೇ ಬರುವಂತೆ ಹೇಳಿ. “ನೀವು ಯಾವುದೇ ಕ್ಷಣದಲ್ಲೂ ನಮ್ಮ ಆಶ್ರಮಕ್ಕೆ ಬರಬಹುದು.‌ ಈಗಲೇ ನೀವು ಬರುವುದಾದರೆ ನಿಮಗೆ ನಮ್ಮ ಬ್ರಾಂಚಿನ ಬೇರೆ ವೃದ್ಧಾಶ್ರಮದಲ್ಲಿ ಸಣ್ಣ ಉದ್ಯೋಗಕ್ಕೂ ವ್ಯವಸ್ಥೆ ಮಾಡಿ ಕೊಡುತ್ತೇವೆ” ಎಂದು ಹೇಳಿಸಿದೆ. ಎಲ್ಲವನ್ನೂ ಕೇಳಿಸಿಕೊಂಡ ಅವರು ಅಲ್ಲಿಂದ ಹೊರಟರು. ಹಾಗೆ ಹೊರಡುವಾಗಲೂ ಅವರ ಮುಖದಲ್ಲಿ ಆತಂಕ, ಚಿಂತೆ, ದುಗುಡ‌ ಎಲ್ಲವೂ ಹಾಗೇ ಇತ್ತು. ಹಾಗೆ‌ ಅವರು ಹೋಗಿ ತಿಂಗಳು ಕಳೆಯುತ್ತಾ ಬಂತು. ಅವರ ಪತ್ತೆಯೇ ಇಲ್ಲ.

ಈ ಲೇಖನವನ್ನು ನಾನು ಇಲ್ಲಿಗೆ ಮುಗಿಸಿ, ಅವರಿಗೊಂದು‌ ಕರೆ ಮಾಡಿ ಮನುಷ್ಯರ ಕ್ರೌರ್ಯದ ಕುರಿತು ಒಂದಿಷ್ಟು ಚರ್ಚಿಸಬೇಕು ಅಂದುಕೊಂಡಿರುವೆ.

‘ಸಣ್ಣ ಪುಟ್ಟ ಸಂಗತಿಗಳು’ ಅಂಕಣದ ಹಳೆಯ ಸಂಚಿಕೆಗಳು :


  • ರಂಜಿತ್ ಕವಲಪಾರ – ಕೊಡಗಿನ ಉತ್ಸಾಹಿ ಬರಹಗಾರ. 

2 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW