ಪತ್ರಿಕೆಗಳ ಮುಖಪುಟ ಟಿವಿ, ಧಾರಾವಾಹಿ, ಜಾಹಿರಾತಿನ ಕರಪತ್ರವಾಯಿತೋ ಅವತ್ತೇ ದಿನ ಪತ್ರಿಕೆ ಓದಲು ನಿಲ್ಲಿಸಿದೆ. ಅರುಣ್ ಪ್ರಸಾದ್ ಅವರು ದಿನಪತ್ರಿಕೆ ಓದುವುದನ್ನು ನಿಲ್ಲಿಸಿದ್ದು ಯಾಕೆ ಅನ್ನೋದನ್ನು ತಪ್ಪದೆ ಓದಿ…
ಬಾಲ್ಯದಲ್ಲಿ ನಾನು ಹುಟ್ಟುವಾಗಲೇ ನಮ್ಮ ಮನೆಗೆ ನಿತ್ಯ ಪ್ರಜಾವಾಣಿ ಪತ್ರಿಕೆ ನಿವೃತ್ತ ಯೋಧರಾದ ಹುಚ್ಚಾಚಾರ್ ಬಾಂಗ್ಲಾ ಯುದ್ಧದಲ್ಲಿ ಊನವಾಗಿದ್ದ ಕುಂಟು ಕಾಲಲ್ಲಿ ಕುಂಟುತ್ತಾ ನಮ್ಮ ಮನೆಗೆ ಮತ್ತು ಸಮೀಪದ ಎಸ್ ಆರ್ ಎಸ್ ಅಕ್ಕಿ ಗಿರಣಿಗೆ ತಪ್ಪದೇ ವಿತರಿಸುತ್ತಿದ್ದರು.
ವಾರ ಪತ್ರಿಕೆ ಸುಧಾ, ಪ್ರಜಾಮತ, ಮಾಸ ಪತ್ರಿಕೆ ಚಂದಮಾಮ , ಮಯೂರ, ತುಷಾರದಿಂದ ಪ್ರಾರಂಭವಾಗಿ ನನ್ನ ಯಜಮಾನಿಕೆಯಲ್ಲಿ ದಿನಪತ್ರಿಕೆ ಪ್ರಜಾವಾಣಿ ಜೊತೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವ ಕರ್ನಾಟಕ, ಇಂಗ್ಲೀಷ್ ಹಿಂದೂ- ಡೆಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ ಪ್ರೆಸ್, ಹಿಂದಿಯ ರಾಜಸ್ಥಾನ್ ಪತ್ರಿಕಾ, ವಾರಪತ್ರಿಕೆಗಳಾದ ಹಾಯ್ ಬೆಂಗಳೂರು, ಲಂಕೇಶ್, ಗೌರಿ ಲಂಕೇಶ್, ಅಗ್ನಿ ಹೀಗೆ ಅನೇಕ ಮಾಸ ಪತ್ರಿಕೆಗಳ ಜೊತೆ ಸ್ಥಳೀಯ ಪತ್ರಿಕೆಗಳು ನಾನು ತರಿಸುತ್ತಿದ್ದೆ ಮತ್ತು ಪೂರ್ತಿ ಓದಿದ ನಂತರವೇ ನನ್ನ ನಿತ್ಯದ ಕೆಲಸ ಎಂದು ಅಭ್ಯಾಸ ಆಗಿತ್ತು.
ನಂತರ ರಾಜ್ಯ ಪತ್ರಿಕೆಗಳು ಸ್ಥಳೀಯ ಪತ್ರಿಕೆಗಳ ಮೇಲೆ ಸ್ಪರ್ಧೆ ಮಾಡಿ ಸ್ಥಳೀಯ ಪತ್ರಿಕೆಗಳ ಅಸ್ತಿತ್ವ ಇಲ್ಲದಂತೆ ಮಾಡಿದವು. ಅಷ್ಟೆ ಅಲ್ಲ ಪತ್ರಿಕೆಗಳ ಮಾಲಿಕತ್ವ ಬಂಡವಾಳಿಶಾಹಿಗಳ ರಾಜಕಾರಣಿಗಳ ಕೈಗೆ ಹೋದ ಮೇಲೆ ಪತ್ರಕರ್ತರು ಸಂಪಾದಕರಿಗೆ ಇದ್ದಂತಹ ಮಾನ್ಯತೆ -ಘನತೆ ಎರೆಡೂ ಇಲ್ಲವಾಯಿತು. ಓದು ಬರಹ ಇಲ್ಲದ ರಾಜಕಾರಣಿಗಳು, ಸ್ವಾಮಿಗಳು ಅಂಕಣ ಪ್ರಕಟವಾಗುತ್ತಿದೆ. ಆದರೆ ಅದನ್ನು ಬರೆಯುವವರು? ಈ ರೀತಿ ಪತ್ರಿಕೆಗಳು ಹಣಕ್ಕಾಗಿ ಆತ್ಮವಂಚನೆ ಪ್ರಾರಂಭವಾಯಿತು. ಮುಖ ಪುಟ ಎಂಬ ಕಲ್ಪನೆ ಬದಲಾಯಿತು. ಸಿನಿಮಾ, ಟಿವಿ, ಧಾರಾವಾಹಿಗಳ ಜಾಹಿರಾತು ಫಲಕವಾಯಿತು.
ಫೋಟೋ ಕೃಪೆ :google
ವಾಸ್ತವ ಸುದ್ದಿ ನೀಡುವ ಜಾಗದಲ್ಲಿ ರಾಜಕೀಯ ಪ್ರೇರಿತ ಅವಾಸ್ತವ ಸುದ್ದಿ ವಿಜೃಂಬಿಸಲು ಪ್ರಾರಂಭವಾಯಿತು. ಪತ್ರಿಕೆಗಳೆ ಪ್ರಶಸ್ತಿ ನೀಡಲು ಶುರು ಮಾಡಿತು.
ತಾನು ಪ್ರಕಟಿಸಿದ್ದೆ ಸುದ್ದಿ, ಅದೇ ಸತ್ಯ ಎಂದು ಪತ್ರಿಕಾ ವಾಚಕರು ಒಪ್ಪಿಕೊಳ್ಳಲೇ ಬೇಕೆಂಬ ಒತ್ತಡ ಅನಿವಾರ್ಯವಾಗಿ ಪತ್ರಿಕೆ ವಾಚಕರ ಮೇಲೆ ಸರಿಯಲ್ಲ ಅನ್ನಿಸಲು ನನಗೆ ಪ್ರಾರಂಭವಾಗಿತ್ತು.
ನಿತ್ಯ ಮನೆ ಮಂದಿಯೆಲ್ಲ ಬೆಳಿಗ್ಗೆ 7 ರಿಂದ 10 ರ ತನಕ ಎಲ್ಲಾ ಪತ್ರಿಕೆ ಓದಿ ಮುಗಿಸಲು ದಿನದ ಅಮೂಲ್ಯ ಸಮಯ ಕಳೆಯುವಂತ ಅಡಿಕ್ಷನ್ ಆಗಿತ್ತು.
ಇದರ ಮಧ್ಯೆ ಪತ್ರಿಕಾ ವಿತರಣೆ ಮಾಡುವವರು ಕೆಲ ಪತ್ರಿಕೆ ಹಾಕುವುದಿಲ್ಲ, ಸಮಯ ಪಾಲಿಸುವುದಿಲ್ಲ ಎ೦ಬುದು ನನ್ನ ಬಿಪಿ ಹೆಚ್ಚಿಸುತ್ತಿತ್ತು, ವಾಕಿಂಗ್ ಮತ್ತು ವ್ಯಾಯಾಮ ತಪ್ಪಿಸುತ್ತಿತ್ತು, ವಾರ್ಷಿಕ ಸುಮಾರು ಲಾಡ್ಜ್ ಗೆ ತರಿಸುವ ಪತ್ರಿಕೆ ಸೇರಿ ಹತ್ತಿರ ಹತ್ತಿರ 50 ಸಾವಿರ ಹಣ ಬೇಕಾಗಿತ್ತು.
ಕಳೆದ ವರ್ಷ ಯಾವಾಗ ಎಲ್ಲಾ ಪತ್ರಿಕೆಗಳ ಮುಖಪುಟ ಟಿವಿ, ಧಾರಾವಾಹಿ, ಜಾಹಿರಾತಿನ ಕರಪತ್ರವಾಯಿತೋ ಅವತ್ತೇ ದಿನ ಪತ್ರಿಕೆ ಓದಲು ನಿಲ್ಲಿಸಿದೆ.
ಮನೆಗೆ ತರಿಸುವ ಎಲ್ಲಾ ಪತ್ರಿಕೆಗಳನ್ನು ನಿಲ್ಲಿಸಲು ತೀರ್ಮಾನಿಸಿ ಕಳೆದ ವರ್ಷ ಜುಲೈ೧,೨೦೨೨ ರಿಂದ ಎಲ್ಲಾ ಪತ್ರಿಕೆ ಓದುವ ಮತ್ತು ತರಿಸುವುದು ನಿಲ್ಲಿಸಿದೆ.
ಕನ್ನಡ ಪತ್ರಿಕಾ ದಿನಾಚರಣೆ ನಡೆಸಲು ಕಾರಣವಾದ ಮಂಗಳೂರು ಸಮಾಚಾರ ಪತ್ರಿಕೆ ಮಂಗಳೂರಿನ ಬಾಸೆಲ್ ಮಿಷನ್ ಸಂಸ್ಥೆ 1841 ರ ಜುಲೈ 1ರಂದು ಪ್ರಾರಂಬಿಸಿದ್ದು ಕಾರಣವಾದರೆ 2022 ಜುಲೈ 1 ನಾನು ಕನ್ನಡ ವೃತ್ತ ಪತ್ರಿಕೆ ಓದು ಮತ್ತು ಚಂದಾದಾರಿಕೆ ನಿಲ್ಲಿಸಿದ ದಿನವಾಗಿದೆ.
2006 ರ ನಂತರ ಚಿತ್ರಮಂದಿರದಲ್ಲಿ ಸಿನಿಮಾ ನೋಡಲಿಲ್ಲ, 2015 ರ ಅಕ್ಷಯ ತೃತೀಯ ದಿನದಿಂದ ಟಿವಿ ಮನೆಯಿಂದ ತೆಗೆದೆ. 2020 ರ ಶಿವರಾತ್ರಿಯಿಂದ ರಾತ್ರಿ ಊಟ ಬಿಟ್ಟಿದ್ದೇನೆ. ಇದೆಲ್ಲದರ ಜೊತೆ ಕಳೆದ 2022 ರ ಕನ್ನಡ ಪತ್ರಿಕಾ ದಿನಾಚರಣೆಯಿಂದ ವೃತ್ತಪತ್ರಿಕೆ ಓದುವುದು ನಿಲ್ಲಿಸಿದ್ದೇನೆ.
- ಅರುಣ್ ಪ್ರಸಾದ್