ರಂಜಿತ್ ಕವಲಪಾರ ಅವರ ‘ಸಣ್ಣಪುಟ್ಟ ಸಂಗತಿಗಳು’ ಅಂಕಣದಲ್ಲಿನ ‘ಅವರು ಹಾಗೆ ಹೋದವರ ಪತ್ತೆಯೇ ಇಲ್ಲ’ ಕ್ಕೆ ಕೊಡಗಿನ ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶ ಚಂದ್ರ ಅವರು ಬರೆದು ಕಳುಹಿಸಿದ ಪ್ರತಿಕ್ರಿಯೆಯನ್ನು ತಪ್ಪದೆ ಮುಂದೆ ಓದಿ…
‘ಆಕೃತಿ’ಯಲ್ಲಿ ಪ್ರಕಟವಾಗಿರುವ ‘ರಂಜಿತ್ ಕವಲಪಾರ’ ಅವರ ‘ಸಣ್ಣಪುಟ್ಟ ಸಂಗತಿಗಳ’ ಬಗ್ಗೆ ನಾಲ್ಕು ಮಾತು ಬರೆಯಬೇಕೆನ್ನಿಸಿತು.
ಆತ್ಮ ಸಂಗಾತಿಯಂತೆ ಮುಖದ ಮೇಲಿನ ಗುಳ್ಳೆಯನ್ನು ಪರಿಗಣಿಸುವ ನೀವು, ಅಮ್ಮನಂತೆಯೇ ಸಂತೈಸುವ ಮಾತೃ ಹೃದಯಿ.ತನ್ನ ಬಳಿ ಸಿಗುವ ನೆಮ್ಮದಿಗಾಗಿ ನಿಮ್ಮನ್ನು ಭೇಟಿಯಾಗಲು ಬರುತ್ತಿದ್ದ ಆ ವಯಸ್ಕರು ತಮ್ಮ ಅಂತರಂಗವನ್ನು ಇಷ್ಟು ಕಿರಿಯ ವಯಸ್ಸಿನ ನಿಮ್ಮಲ್ಲಿ ತೋಡಿಕೊಳ್ಳುತ್ತಿದ್ದರೆ ನೀವು ಅಂತಹವರ ವಿಶ್ವಾಸಕ್ಕೆ ಪಾತ್ರರಾಗಲು ಬೆಳೆದ ಎತ್ತರ ಅಚ್ಚರಿ ಹುಟ್ಟಿಸುತ್ತದೆ.ಇಂದಿನ ಯುವಪೀಳಿಗೆ ವೃದ್ಧರನ್ನು ಕಂಡರೇ ಮೂಗುಮುರಿಯುವ ಮನಸ್ಥಿತಿಯಲ್ಲಿರುವಾಗ, ಅವರಿಗೆ ನೆರವಾಗುವ ನಿಮ್ಮ ಔದಾರ್ಯ ಓದುಗರ ಮನವನ್ನು ಆರ್ದ್ರಗೊಳಿಸುತ್ತದೆ.
ತನ್ನ ಊಟವನ್ನು ತಾನೇ ಸಂಪಾದಿಸಬೇಕೆಂದು ತುಡಿಯುವ ಅಂತಹವರಿಗೇ ತಮ್ಮ ಕುಟುಂಬದಲ್ಲಿ ಆಶ್ರಯ ನಿರಾಕರಿಸಿ ವೃದ್ಧಾಶ್ರಮದ ಕಡೆಗೆ ಸಾಗಹಾಕಲು ಮನಸ್ಸು ಮಾಡುವುದು ವ್ಯವಸ್ಥೆಯ ಒಂದು ವ್ಯಂಗ್ಯವೇ ಸರಿ.
ತೀರಾ ಚಿಂತನೆಗೆ ಒಡ್ಡುವ ವೃದ್ಧರ ಪರಿಸ್ಥಿತಿ ನಿಜಕ್ಕೂ ನನ್ನ ಮನಸ್ಸನ್ನು ದ್ರವಿಸಿತು.
‘ಎಷ್ಟು ಹಿರಿಯ ಜೀವಗಳು ಎಷ್ಟು ಮನೆಗಳಲಿ
ಎನಿತು ಪಾಡು ಪಡುತಿರುವರೋ
ನೆಲೆಯಿಲ್ಲದ ಹತಾಶೆಯಲಿ
ಬದುಕಿಯೂ ಸಾಯುತಿರುವರೋ..’
ವಾಸ್ತವದ ವ್ಯಂಗ್ಯ ಇದು!
ಯಾವ ವೃದ್ಧರನ್ನು ನೋಡಿದರೂ ಅಂತಃಕರಣ ತೋರಿಸಬೇಕೆನ್ನಿಸುವ ಲೇಖನ ಇದು ರಂಜಿತ್ ! ನಿಮ್ಮಲೇಖನ ಇನ್ನಷ್ಟು ಪ್ರಖರವಾಗಿ,ಬರವಣಿಗೆಯ ಶಕ್ತಿಯ ಪ್ರವರ್ಧಮಾನವಾಗಲಿ ಎಂದು ಹಾರೈಸುವೆ..
- ಶಿವದೇವಿ ಅವನೀಶಚಂದ್ರ