ಮತ್ತೆ ಮತ್ತೆ ಕಾಡುವ ತನಗವೆಂಬ ಪತಂಗ

ಕವಿ ವೀರೇಶ. ಬ. ಕುರಿ ಸೋಂಪೂರ ಅವರ ಕವನ ಸಂಕಲನ ಹಾಗೂ ಅವರ ಕಿರು ಪರಿಚಯವನ್ನು ಮತ್ತೊಬ್ಬ ಕವಿ ನಾರಾಯಣಸ್ವಾಮಿ.ವಿ (ನಾನಿ) ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ಪುಟಕ್ಕಂಟಿದ ಪತಂಗ
ಪ್ರಕಾರ : ಕಾವ್ಯ ಸಂಕಲನ
ಲೇಖಕರು : ವೀರೇಶ .ಬ.ಕುರಿ ಸೋಂಪೂರ
ಪ್ರಕಾಶಕರು : ಗಾನವಿ ಪ್ರಕಾಶನ ಸೋಂಪುರ
ಬೆಲೆ: 180.00

ನನ್ನ ವಿಧ್ಯಾಭ್ಯಾಸ ದಿನಗಳಿಂದ ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ಮತ್ತು ಅದರೊಳಗಿನ ಕಾವ್ಯ ಪ್ರಕಾರಗಳನ್ನು ಗಮನಿಸುತ್ತಾ, ಯೋಚಿಯುತ್ತಾ, ಬಂದರೆ ಕನ್ನಡ ಸಾಹಿತ್ಯದಲ್ಲಿ ಮೊದಲು ಕವಿತೆ, ಕಾವ್ಯ, ಚುಟುಕುಗಳು ಅಷ್ಟೇ ಇದ್ದವು ಎಂಬುದು ನನ್ನ ವೈಯಕ್ತಿಕ ತಿಳುವಳಿಕೆ. ನಂತರದ ದಿನಗಳಲ್ಲಿ ಬಂದ ಖಂಡಕಾವ್ಯ, ಗದ್ಯಕಾವ್ಯ, ಪ್ರಾಸ ಬದ್ದ ಕವಿತೆಗಳು, ಕಾವ್ಯ ಛಂದಸ್ಸಿನ ಕಾವ್ಯವನ್ನು ನಾವು ಓದತೊಡಗಿದವು ತದನಂತರದಲ್ಲಿ ಬಂದ ಬಂಡಾಯ ಸಾಹಿತ್ಯ ಒಂದು ವಿಶಿಷ್ಟ ಪ್ರಕಾರದ ಕಾವ್ಯವಾಯಿತು. ಈ ಕವಿತೆಗಳ ಸಾಲುಗಳಲ್ಲಿ ಪ್ರಾಸದಾಯಕ ಪದಗಳಿಗೆ, ಸಾಲುಗಳಿಗೆ ತಿಲಾಂಜಲಿಯನ್ನು ಇಟ್ಟು ಹೊಸ ಪ್ರಕಾರದಲ್ಲಿ ಕವಿತೆಗಳು ರಚನೆಯಾದವು. ನಂತರದ ದಿನಗಳಲ್ಲಿ ಪಾಶ್ಚಿಮಾತ್ಯ ಕಾವ್ಯ ಪ್ರಕಾರವಾದ ಗಜಲ್ ಕಾವ್ಯ ಕನ್ನಡ ಸಾಹಿತ್ಯದಲ್ಲಿ ಬೇರು ಬಿಟ್ಟು ನೆಲೆಯೂರ ತೊಡಗಿತು. ಇತ್ತೀಚಿಗೆ ಬಹಳಷ್ಟು ಜನ ಯುವ ಕವಿಗಳು/ಕವಯಿತ್ರಿಯರು ಗಜಲ್ ಬರವಣಿಗೆಯಲ್ಲಿ ತೊಡಗಿದ್ದಾರೆ. ಗಜಲ್ ಕಾವ್ಯ ಇಂದು ಕನ್ನಡ ಸಾಹಿತ್ಯಲೋಕದಲ್ಲಿ ಬಹುಮುಖ್ಯ ಪ್ರಕಾರವಾಗಿ ಹೊರಹೊಮ್ಮಿದೆ. ಇತ್ತೀಚಿನ ವರುಷಗಳಲ್ಲಿ ಹಾಯ್ಕು, ರುಬಾಯಿ, ಟಂಕಾ, ತನಗ, ಎಂಬ ಪಾಶ್ಚಿಮಾತ್ಯ ಕಾವ್ಯ ಪ್ರಕಾರಗಳು ಕೂಡ ಕನ್ನಡದ ಸಾಹಿತ್ಯವನ್ನು ಸೇರಿಕೊಂಡಿವೆ. ಕನ್ನಡದ ಬಹಳಷ್ಟು ಕವಿಗಳು ಕವಯಿತ್ರಿಯವರು ತನಗ ಕಾವ್ಯದ ನಿಯಮಗಳನ್ನು ಅರಿತು ತಿಳಿದು ಸೊಗಸಾಗಿ ತನಗ ಕವಿತೆ ಬರೆಯಲು ತೊಡಗಿದ್ದಾರೆ.

ತನಗ ಕನ್ನಡ ಸಾಹಿತ್ಯಲೋಕದಲ್ಲಿ ಒಂದು ವಿಶಿಷ್ಟವಾದ ಕಾವ್ಯ, ನನ್ನ ವೈಯಕ್ತಿಕ ಅಭಿಪ್ರಾಯದಂತೆ ಈ ಕಾವ್ಯದ ಪ್ರಕಾರವನ್ನು ನಾನು ಕೇಳಿದ್ದು ಓದಿದ್ದು ಕಳೆದ ವರುಷವಷ್ಟೆ. ಮುಖಪುಟದಲ್ಲಿ ಕೆಲವು ಕವಿಗಳು ಬರೆದ ಒಂದೆರಡು ಕವಿತೆಗಳನ್ನು ಓದಿದರೂ ಇದು ಚುಟುಕು ಕಾವ್ಯ ಇರಬಹುದು ಅಂತ ಆ ಕಾವ್ಯದ ಜೋಲೀಗೆ ಹೋಗದೇ ಸಮ್ಮನಾಗಿದ್ದೆ.

ಕಳೆದ ವಾರ ಮುಖಪುಟದ ಆತ್ಮೀಯ ಸ್ನೇಹಿತರು, ವಿಶಿಷ್ಟ ಪ್ರಕಾರದ ಕಾವ್ಯ ಪ್ರಕಾರಗಳನ್ನು ಬರೆದು ಮೈಗೂಡಿಕೊಂಡಿರುವ ಶಿಕ್ಷಕರು ಆದ ವೀರೇಶ .ಬ.ಕುರಿ ಸೋಂಪೂರ ಇವರು ಪುಟಕ್ಕಂಟಿದ ಪತಂಗ ಎಂಬ ಪುಸ್ತಕವನ್ನು ಬೆಂಗಳೂರಿನ ನನ್ನ ವಿಳಾಸಕ್ಕೆ ಕಳುಹಿಸಿದ್ದರು. ನಾನು ಅವರಿಗೆ ವಾಟ್ಸಪ್ ಮೂಲಕ ಸರ್ ಪುಸ್ತಕ ಬಂದಿದೆ ಓದುವೆ ಅದರೆ ನಿಮ್ಮ ಪುಸ್ತಕವನ್ನು ಪರಿಚಯ ಮಾಡುವುದು ಕಷ್ಟ ಎಕೆಂದರೆ ತನಗ ಕಾವ್ಯ ಪ್ರಕಾರದ ಬಗ್ಗೆ ನನಗೆ ತಿಳಿದಿಲ್ಲ ನಮ್ಮ ಕನ್ನಡದ ಕವಿತೆಗಳನ್ನು ಬರೆಯುವ ರೀತಿಯಲ್ಲಿ ಊಹಿಸಿಕೊಂಡು ಬರೆದರೆ ತಪ್ಪ‍ಾಗಬಹುದು ಅಂದಾಗ ಕವಿಗಳು ಕೆಲವೊಂದು ಮಾಹಿತಿಗಳನ್ನು ಮತ್ತು ಪತ್ರಿಕೆಯಲ್ಲಿ ಬಂದ ಮಾಹಿತಿಯನ್ನು ಕಳುಹಿಸಿದರು.

ತನಗ ಕವಿತೆಗಳ ಮಾಹಿತಿಯು ದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಮತ್ತು ಪುಟಕ್ಕಂಟಿದ ಪತಂಗ ಪುಸ್ತಕದಲ್ಲಿ ದೊರೆತ ಮಾಹಿತಿಯಾಗಿದೆ. ತನಗ ಫಿಲಿಪೈನ್ಸ್ ದೇಶದ ಕಾವ್ಯ ಪ್ರಕಾರ, ಈ ಕಾವ್ಯ ಪ್ರಕಾರಕ್ಕೂ ಜಪಾನಿನ ಹೈಕು ವಿಗೂ ಕೆಲವು ಹೋಲಿಕೆಗಳಿವೆ. ಹೈಕು ಮೂರು ಸಾಲಿನ ಕವಿತೆ, ತನಗ ನಾಲ್ಕು ಸಾಲಿನ ಸಾಲುಗಳ ಕವಿತೆ. ಪ್ರತಿ ಸಾಲು ಎಳು ಪದಗಳಿಂದ ಕೂಡಿರುತ್ತದೆ. ಈ ಕಾವ್ಯ ಪರಂಪರೆ ಅಂತ್ಯಪ್ರಾಸವುಳ್ಳ ಕವಿತೆ, ವಿವಿಧ ವಿನ್ಯಾಸಗಳಿಗೆ ಆಸ್ಪದವಿದೆ ಇಲ್ಲಿ ಲಯ ಮತ್ತು ಸಿಲಬಲ್ ಮನಗಳು ಇರುವುದರಿಂದ ಕವಿಯ ಸಾಮರ್ಥ್ಯವನ್ನು ಓರಗೆ ಹಚ್ಚುತ್ತವೆ. ಕವಿತೆಗಳನ್ನು ಕುಶಲತೆಯಿಂದ ಒಳಾಥ೯ವನು ತುಂಬಿಸಿ ಬರೆಯುವ ಕವಿತೆಯಾಗಿದೆ.

ವೀರೇಶ .ಬ.ಕುರಿ ಸೋಂಪೂರ ಯವರು ಬರೆದಿರುವ ‘ಪುಟಕ್ಕಂಟಿದ ಪತಂಗ’ ತನಗ ಸಂಕಲನವನ್ನು ಪರಿಚಯ ಮಾಡುವುದಕ್ಕಿಂತ ಮೊದಲು ಕವಿ ಪರಿಚಯವನ್ನು ನೋಡೋಣ.

ಪುಟಕ್ಕಂಟಿದ ಪತಂಗ ಕವಿ ವೀರೇಶ .ಬ.ಕುರಿ ಸೋಂಪೂರ

ವೀರೇಶ ಕುರಿ ರವರು ಶ್ರೀ ಬಸಪ್ಪ ಕುರಿ ಮತ್ತು ಶ್ರೀಮತಿ ಪಾರವ್ವ ಕುರಿ ದಂಪತಿಗಳ ಮಗನಾಗಿ ಕುಕನೂರು ತಾಲ್ಲೂಕು ಕೊಪ್ಪಳ ಜಿಲ್ಲೆಯ ಸೋಂಪೂರ ಗ್ರಾಮದಲ್ಲಿ ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವು ಶ್ರೀ ಶರಣಬಸವೇಶ್ವರ ಹೈಸ್ಕೂಲ್ ಸೋಂಪೂರದಲ್ಲಿ ನಡೆಯಿತು. ನಂತರ ಪದವಿಪೂಣ೯ ಶಿಕ್ಷಣ ಶ್ರೀ ಜಗದ್ಗುರು ಅನ್ನದಾನೀಶ್ವರ ಪದವಿಪೂರ್ವ ಮಹಾ ವಿದ್ಯಾಲಯ, ಮುಂಡರಗಿ ನಡೆಯಿತು. ಈ ಕಾಲೇಜು ಶ್ರೀ ಮಠದ ಕಾಲೇಜು ಆಗಿದ್ದರಿಂದ ಮಠದ ವಸತಿ ನಿಲಯದಲ್ಲಿ ಊಟ ಮತ್ತು ವಾಸ್ತವ್ಯದೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದರು ಹಾಗೂ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಕೊಪ್ಪಳದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಗೆ ಡಿ ಇಡಿ ಶಿಕ್ಷಣಕ್ಕಾಗಿ ಸೇರಿಕೊಂಡರು. ಶ್ರೀ ಗವಿಸಿದ್ದೇಶ್ವರ ಮಠದಲ ಉಚಿತ ಪ್ರಸಾದ ಮತ್ತು ವಸತಿ ನಿಲಯದ ಆಶ್ರಯದೊಂದಿಗೆ ಮುಗಿಸಿದರು. ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಇಲ್ಲಿಂದ ಪಡೆದು,ಮಾನಸ ಗಂಗೋತ್ರಿ, ಮೈಸೂರಿನಲ್ಲಿ ದೂರ ಶಿಕ್ಷಣದ ಮೂಲಕ ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ತನ್ನದಾಗಿಸಿಕೊಂಡರು.

ವೃತ್ತಿಯಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕರಾಗಿರುವ ವೀರೇಶ್ ಬ ಕುರಿ ಸೋಂಪೂರ ರವರು ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರಾಗಿ ಹಿರೇವಡ್ರಕಲ್, ಯಲಬುರ್ಗಾ ತಾಲೂಕು ಇಲ್ಲಿ ಕಾಯ೯ವನ್ನು ನಿವ೯ಹಿಸುತ್ತಿದ್ದಾರೆ. ಶಿಕ್ಷಕರಾಗಿ ನೇಮಕವಾಗುವುದಕ್ಕೂ ಮುಂಚೆ N.E.K.R.T.C ಯಲ್ಲಿ ನಿರ್ವಾಹಕರಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಎಸ್.ಡಿ.ಎ. ಕಾರ್ಯ ನಿವ೯ಹಿಸಿದ್ದಾರೆ.

ವೀರೇಶ್ ಬ ಕುರಿ ಸೋಂಪೂರ ರವರ ಹವ್ಯಾಸಗಳು ಆಧುನಿಕ ವಚನಗಳ ರಚನೆ, ಕವಿತೆ, ಚುಟುಕುಗಳು ಮತ್ತು ಮಕ್ಕಳ ಗೀತೆಗಳ ರಚನೆ. ಇವರ ಸಾಹಿತ್ಯ ರಚನೆಗೆ ಪ್ರೇರಣೆಯಾದ ವಿಷಯಗಳು ಬಸವಾದಿ ಶರಣರ ವಚನಗಳಲ್ಲಿ ಮೌಲಿಕ ಸಂದೇಶಗಳ ಪ್ರೇರಣೆ ಮತ್ತು ಸಮಾಜದ ಕೆಲ ಸ್ಥಾಪಿತ ಪಟ್ಟಭದ್ರ ಹಿತಾಸಕ್ತಿಗಳಿಂದ ಎದುರಿಸಿದ ಅನ್ಯಾಯ ಅವಮಾನ, ನೋವು, ಅಸಡ್ಡೆ, ತಿರಸ್ಕಾರಗಳು ಹಾಗೂ ಜೀವನದಲ್ಲಿ ಕಂಡುಂಡ ನೋವು ನಲಿವುಗಳ ಸಾಹಿತ್ಯ ರಚನೆಯಲ್ಲಿ ತೊಡಗಿದರು.

ವೀರೇಶ್ ಬ ಕುರಿ ಸೋಂಪೂರ ಇವರ ಪ್ರಕಟಿತ ಕೃತಿಗಳು :

೧) ವಚನ ಜ್ಯೋತಿ – ಆಧುನಿಕ ವಚನಗಳ ಸಂಕಲನ.
೨)ಮಿಠಾಯಿ ಮಾಮ- ಮಕ್ಕಳ ಕವನ ಸಂಕಲನ.
೩) ನೆಲದ ಮೇಲಣ ನಕ್ಷತ್ರಗಳು (ವ್ಯಕ್ತಿ ಚಿತ್ರಣ ಕವನ ಸಂಕಲನ)
೪) ಪುಟಕ್ಕಂಟಿದ ಪತಂಗ (ತನಗ ಸಂಕಲನ)

ನಾನು ಮುಖಪುಟದಲ್ಲಿ ಗಮನಿಸಿದಂತೆ ವೀರೇಶ. ಬ. ಕುರಿ ಸೋಂಪೂರ ರವರು ಕಡಿಮೆ ಸಮಯದಲ್ಲಿ ಹೆಚ್ಚಿನ ಕೃತಿಗಳನ್ನು ಬರೆದು ಪ್ರಕಟಿಸಿದವರು. ಲೇಖಕ ಬರಹಗಾರ ತಾನು ಪ್ರಕಟಿಸಿದ ಕೃತಿಯನ್ನು ಉಚಿತವಾಗಿ ಕಳಿಸುವೆ ಓದಿ ಎಂದು ಕೇಳಿಕೊಂಡರು ಕೂಡ ಓದುಗರು ವಿಳಾಸ ಕಳಿಸದೇ ಇರುವ ಈ ಕಾಲಮಾನದಲ್ಲಿ ತಾನು ಬರೆದ ಕೃತಿಗಳನ್ನೆಲ್ಲಾ ಬಹಳಷ್ಟು ಜನ ಓದುಗರಿಗೆ ತಲುಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಓದುಗ ತಾನು ಪಡೆದ ಪುಸ್ತಕಕ್ಕೆ ಹಣ ಕೊಡದಿದ್ದರು ಪರವಾಗಿಲ್ಲ ಆಕೃತಿಯ ಬಗ್ಗೆ ನಾಲ್ಕು ಸಾಲು ಬರೆದರೆ ಅದೆ ಓದುಗನಿಗೆ ಬಹುದೊಡ್ಡ ಬಹುಮಾನ.

ಬಕ್ರೀದ್ ರಜೆ ಇದ್ದುದರಿಂದ ತನಗಗಳ ನಿಯಮಗಳ ಬಗ್ಗೆ ಗೊತ್ತಿಲ್ಲದ ನಾನು, ಶಾಂತವಾದ ಮನಸ್ಸಿನಿಂದ ತನಗ ಕವಿತೆಗಳ ಬಗ್ಗೆ ತಿಳಿಯುವ ಕಾತುರದಿಂದ ಈ ಪುಟಕ್ಕಂಟಿದ ಪತಂಗ ಪುಸ್ತಕವನ್ನು ಕೈಗೆತ್ತಿಕೊಂಡೇ ಇಡೀ ಲೋಕದ ಜ್ಞಾನ ಸಮಾಜದಲ್ಲಿ ಪ್ರಸ್ತುತ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಹಾಗುಹೋಗುಗಳನ್ನು ಎಳು ಪದಗಳ ನಾಲ್ಕು ಸಾಲುಗಳ ತನಗಗಳಲ್ಲಿ ಬಹಳಷ್ಟು ಸೊಗಸಾಗಿ ಬರೆದಿದ್ದಾರೆ.  ಕನ್ನಡ ಸಾಹಿತ್ಯಲೋಕದಲ್ಲಿಯೇ ಎರಡನೇ ತನಗ ಕವಿತೆಗಳ ಸಂಕಲನ ಈ ಕೃತಿಯಾದ ಪುಟಕ್ಕಂಟಿದ ಪತಂಗ ಪುಸ್ತಕ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳುವ ಕೃತಿಯಾಗಿದೆ.

ಕವಿಗಳಾದ ವೀರೇಶ .ಬ.ಕುರಿ ಸೋಂಪೂರ ಇವರು ಈ ಕೃತಿಯನ್ನು ತನ್ನ ಅತ್ತೆ ಮಾವನವರಿಗೆ ಅಪ೯ಣೆ ಮಾಡಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಕನ್ನಡ ಸಾಹಿತ್ಯಲೋಕಕ್ಕೆ ತನಗವೆಂಬ ಕಾವ್ಯವನ್ನು ಗೋವಿಂದ ಹೆಗಡೆ ಪರಿಚಯಿಸಿದರೂ, ತನಗ ಕವಿತೆಗಳ ಮೊದಲ ಕೃತಿಯನ್ನು ಹೊರತಂದ ಸಿದ್ದಲಿಂಗಪ್ಪ ಬೀಳಗಿ ಹುನಗುಂದರವರು.

16ನೇ ಶತಮಾನಕ್ಕಿಂತ ಹಿಂದಿನ ಮತ್ತು ಮೌಖಿಕ ಪರಂಪರೆ ಹಿನ್ನೆಲೆಯ ಫಿಲಿಪೈನ್ಸ್ ನ ಸಂಪ್ರದಾಯದ ಟ್ಯಾಗ್ಲೋಗ್ ಭಾಷೆಯಲ್ಲಿ ರಚನೆಗೊಂಡ ತನಗ ಎಳು ಉಚ್ಚಾರಾಂಶಗಳ ನಾಲ್ಕು ಸಾಲಿನ ಶೀರ್ಷಿಕೆ ಇಲ್ಲದೆ ಬರೆಯುವ ಕಾವ್ಯ ಪ್ರಕಾರವಾಗಿದೆ. ಪ್ರತಿ ಸಾಲಿನ ಕೊನೆಯಲ್ಲಿ ಪ್ರಾಸ ಇರುವುದಾದರೂ ಅನಿವಾರ್ಯವಲ್ಲ. ನಿಗಧಿತ ಅಕ್ಷರಗಳಲ್ಲಿ ವಸ್ತುವೊಂದನ್ನು ಓದುಗನೆದರು ಅನಾವರಣಗೊಳಿಸುವುದು. ಸವಾಲಿನ ಕೆಲಸವಾದರೂ ಧ್ಯಾನಸ್ಥ ಬರಹಗಾರರು ಮಾತ್ರ ಇದರಲ್ಲಿ ಯಶಸ್ವಿಯಾಗುತ್ತಾರೆ ಎಂದು ಸಿದ್ದಲಿಂಗಪ್ಪ ಬೀಳಗಿ ಬರಹಗಾರರು ಹುನಗುಂದ ಇವರು ಮುನ್ನುಡಿಯಲ್ಲಿ ಬರೆದಿದ್ದಾರೆ.

ಹೋರಾಟದಿಂದಲೇ ಬದುಕು ಕಟ್ಟಿಕೊಂಡ ವೀರೇಶ ಬ ಕುರಿ ಸೋಂಪೂರ ಇವರು ಸ್ವಪ್ರಯತ್ನದಿಂದಲೇ ಮೇಲೆ ಬಂದವರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಎಲ್ಲಾ ಪ್ರಕಾರಗಳನ್ನು ಬರೆಯುತ್ತಾ ಪುಟಕ್ಕಂಟಿದ ಪತಂಗಯೆಂಬ ಈ ಕೃತಿಯಲ್ಲಿ ಕನ್ನಡ ನಾಡು, ಭಾವೈಕ್ಯತೆ, ದೇಶ ಪ್ರೇಮ ಪ್ರಕೃತಿ ಧಮ೯ ಮೊಬೈಲ್ ಸಿನಿಮಾ ನಟರು ಕ್ರಿಕೆಟ್‌ ಆಟಗಾರರು ಈ ಎಲ್ಲಾ ವಿಷಯಗಳಲ್ಲೂ ಕೂಡ ತನಗ ಕವಿತೆಗಳು ರಚನೆಗೊಂಡಿವೆ. ವೀರೇಶ ಕುರಿ ದಣಿವರಿಯದ ಬರಹಗಾರರು ಇವರಿಂದ ಇನ್ನೂ ಅನೇಕ ಮೌಲಿಕ ಕೃತಿಗಳು ಹೊರಬರಲಿ ಎಂದು ಹಾರೈಸಿದ್ದಾರೆ.

ಬೆನ್ನುಡಿಯನ್ನು ಬರೆದವರು ಸವದತ್ತಿಯ ಲೇಖಕರು ವಿಮರ್ಶಕರು ಆದ ಡಾ॥ ವೈ ಎಂ ಯಾಕೊಳ್ಳಿರವರು ಈ ಕೃತಿಯಲ್ಲಿನ ತನಗಗಳನ್ನು ಓದಿದರೆ ಈ ಕವಿಯ ಶಕ್ತಿ ಅರಿವಿಗೆ ಬರುತ್ತದೆ. ವೀರೇಶ ಅದ್ಬುತ ಕಾವ್ಯ ಪ್ರತಿಭೆ ಎನ್ನುವುದಕ್ಕೆ ಈ ಸಂಕಲನದಲ್ಲಿರುವ ಕವಿತೆಗಳೇ ಸಾಕ್ಷಿಯೆಂದಿದ್ದಾರೆ.

ಪುಟಕ್ಕಂಟಿದ ಪತಂಗ ತನಗ ಸಂಕಲನವನ್ನು ಕೈಗೆತ್ತಿಕೊಂಡರೆ ಒಂದು ಕ್ಷಣವೂ ನಿಲ್ಲಿಸದೇ ತದೇಕ ಚಿತ್ತದಲ್ಲಿ ಓದಿಸಿಕೊಂಡು ಹೋಗುತ್ತದೆ. ಕಾರಣ ಆ ಕೃತಿಯಲ್ಲಿನ ಬಳಸಿರುವ ವೈವಿಧ್ಯಮಯ ಪದಗಳು ವಿವಿಧಾಥ೯ಗಳನ್ನು ನೀಡುತ್ತಾ ಕೆಲವೇ ಸಾಲುಗಳಲ್ಲಿ ಧೀಘ೯ವಾದ ಅಥ೯ವನ್ನು ನೀಡುತ್ತವೆ. ನಾನು ಇಲ್ಲಿ ಕೆಲವು ತನಗಳನ್ನು ಪರಿಚಯ ಮಾಡಿರುವೆ.

ಕನ್ನಡದ ಕಾವ್ಯಕ್ಕೆ
ನವೀನ ಈ ತನಗ
ಚಿಕ್ಕದಾದರೂ ಕೂಡ
ಚುಕ್ಕಿ ಚಂದ್ರಮರಾಂಗ

ಈ ತನಗ ಕವಿತೆಯಲ್ಲಿಯೇ ಕವಿಗಳು ಹೇಳಿದ್ದಾರೆ ಕನ್ನಡದ ಸಾಹಿತ್ಯಲೋಕಕ್ಕೆ ನವೀನವಾದ ಕಾವ್ಯ ಈ ತನಗ,ಈ ತನಗ ಚಿಕ್ಕದಾದರೂ ಕೂಡ ವಿಶಿಷ್ಟವಾದ ಸಾಹಿತ್ಯವನ್ನು ಹೊಂದಿದ್ದೆ ಚುಕ್ಕಿ ಚಂದ್ರಮರಂತೆ ತಣ್ಣನೆಯ ರಾತ್ರಿಯಲ್ಲಿ ತಂಪಾದ ಬೆಳಕನ್ನು ಹೊರಚೆಲ್ಲುತ್ತದೆ ಅಂತ ನಾಲ್ಕು ಸಾಲಿನ ಕವಿತೆಯನ್ನು ಹೊಸ ಓದುಗರಿಗೆ ಅಥ೯ವಾದಂತೆ ಬರೆದಿದ್ದಾರೆ.

ತನಗದ ಮಳೆಯು
ಸುರಿಯುತಿದೆ ಜೋರು
ಮನದಲಿ ಪುಳಕ
ಖುಷಿಯ ಕಾರುಬಾರು

ಈ ತನಗದ ಆಶಯ ತನವೆಂಬ ಕಾವ್ಯದ ಮಳೆಯು ಇತ್ತೀಚಿಗೆ ಕನ್ನಡದ ಕಾವ್ಯಲೋಕದಲ್ಲಿ ಬಲು ಜೋರಾಗಿ ಸುರಿಯುತಿದೆ ಕವಿಯ ಮನದಲ್ಲಿ ಪುಳಕವಾಗಿ ಮನಸ್ಸಿನಲ್ಲಿ ಖುಷಿಯ ಕಾರುಬಾರು ಜೋರಾಗಿದೆ ಎಂದು ಹೇಳಿ ಖುಷಿ ಪಡುತ್ತಾರೆ.

ಎಳು ಎಳು ಅಕ್ಷರ
ಪ್ರತೀ ನಾಲ್ಕು ಸಾಲಲ್ಲಿ
ತನಗದ ಕಡೆಗೆ
ನಮ್ಮ ಮನ ವಾಲಲಿ

ಈ ಕವಿತೆಯಲ್ಲಿ ಕವಿಯು ತನಗದ ನೀತಿನಿಯಮಗಳನ್ನು ನಾಲ್ಕು ಸಾಲುಗಳಲ್ಲೆ ಹೇಳಲು ಹೊರಟಿದ್ದಾರೆ. ತನಗ ಬರೆಯುವ ಕವಿಗಳು ಈ ಸಣ್ಣ ಕವಿತೆಯನ್ನು ಮನನ ಮಾಡಿಕೊಂಡರೆ ಸಾಲು ತನಗವನ್ನು ಬರೆಯಬಹುದು. ಈ ತನಗದ ಮೊದಲ ನಿಯಮವೇ ಒಂದು ಸಾಲಿನಲ್ಲಿ ಎಳು ಅಕ್ಷರಗಳು ಇರಬೇಕು. ಅದು ನಾಲ್ಕು ಸಾಲುಗಳಿಂದ ಕೂಡಿರಬೇಕು ಇದೊಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿದೆ. ಬರಹಗಾರರ ಮನವು ತನಗ ಬರೆಯುವ ಕಡೆ ವಾಲಲಿ ಹೊಸ ತನಗದ ಲೋಕವೊಂದು ಸೃಷ್ಟಿಸಲಿ ಎಂದು ಬಯಸುತ್ತಿದ್ದಾರೆ ಕವಿಗಳು

ಕನ್ನಡದ ಮಣ್ಣಿಗೆ
ಹೊಸತು ಈ ತನಗ
ಮನವನು ಸೆಳೆದು

ಇಷ್ಟವಾಯ್ತು ನನಗ ಈ ತನಗ ಎಂಬ ಕಾವ್ಯ ಪ್ರಕಾರ ಕನ್ನಡ ಸಾಹಿತ್ಯಕ್ಕೆ ಹೊಸತಾದ ಬರಹದ ಪ್ರಕಾರ ಈ ಹೊರದೇಶದ ತನಗ ಕಾವ್ಯಪ್ರಕಾರ ನನ್ನ ಮನವನ್ನು ಸೆಳೆಯಿತು ಮತ್ತು ನನಗೆ ಬಹಳಷ್ಟು ಇಷ್ಟವಾದ ಕಾವ್ಯ ಎಂದು ಕವಿಗಳು ಖುಷಿಯನ್ನು ವ್ಯಕ್ತಪಡಿಸುತ್ತಾರೆ.

ಫಿಲಿಪ್ಪೈನ್ಸ್ ಮೂಲದ
ತನಗಕ್ಕೆ ನಮಾಮಿ
ನಮ್ಮಲ್ಲಿಯೂ ಆಗಲಿ
ತನಗದ ಸುನಾಮಿ

ಈ ತನಗವೆಂಬ ಕಾವ್ಯದ ಮೂಲ ಫಿಲಿಪೈನ್ಸ್ ಈ ಕಾವ್ಯಕೆ ನಮಸ್ಕಾರ ಹೇಳಿ ನನ್ನ ಕನ್ನಡ ಸಾಹಿತ್ಯಕ್ಕೆ ಬರಮಾಡಿಕೊಳ್ಳೋಣ ನನ್ನ ಸಾಹಿತ್ಯದಲ್ಲೂ ಕೂಡ ತನಗದ ಸುನಾಮಿ ಆಗಲಿ ಎಂದು ಕವಿಗಳು ತನ್ನ ಆಶಯವನ್ನು ವ್ಯಕ್ತಪಡಿಸುತ್ತಾರೆ.

ಕಾವ್ಯ ಕೋವಿಯಾಗಲಿ
ಕೇಡು ಸಂಹರಿಸಲು
ಕಾವ್ಯ ಜ್ಯೋತಿಯಾಗಲಿ
ಈ ನಾಡ ಬೆಳಗಲು.

ಕೆಲವ ನಾಲ್ಕು ಸಾಲಿನ ತನಗದ ಪದಗಳಲ್ಲಿ ಕವಿಗಳು ವಿಶೇಷ ಅಥ೯ ಬರುವಂತಹ ನಮ್ಮ ಸಮಾಜವನ್ನು ಬರವಣಿಗೆಯಿಂದ ತಿದ್ದಬಹುದು. ಬರಹಕ್ಕೆ ತನ್ನದೆ ಶಕ್ತಿಯಿದೆ. ಬರಹ ದೇಶಗಳ ಆಡಳಿತದ ಚುಕ್ಕಾಣಿಯನ್ನು ಬದಲಾಯಿಸಿದ ಉದಾಹರಣೆಯಿದೆ. ಬರಹದಿಂದಲೇ ಕ್ರಾಂತಿ ಶಾಂತಿ ನೆಲೆಸಿದೆ. ಇಂತಹದ ಬರಹದ ಕಾವ್ಯ ಬಂದೂಕು ಆಗಲಿ ಈ ಜನರ ಮನಕ್ಕೆ ಅಂಟಿಕೊಂಡಿರುವ ಕೇಡನ್ನು ಸಂಹಾರ ಮಾಡಲು, ಅದೇರೀತಿ ಕಾವ್ಯವು ಹಣತೆಯಂತೆ ನಂದಾದೀಪವಾಗಿ ಉರಿಯುತಿರಲಿ ನಮ್ಮ ನಾಡು ಬೆಳಗಲು ಅಂತ ಬಹು ಸೊಗಸಾಗಿ ತನಗವನ್ನು ರಚಿಸಿ ಓದುಗರ ಮನಸೆಳೆಯಲು ಕವಿಗಳು ಯಶಸ್ವಿಯಾಗಿದ್ದಾರೆ.

ದೇವರ ಹೆಸರಲ್ಲಿ
ಬಹು ಜೋರು ವ್ಯಾಪಾರ
ಜೀವರ ಶೋಷಿಸುವ
ಅತೀ ದೊಡ್ಡ ಹುನ್ನಾರ

ಈ ಮೇಲಿನ ತನಗದಲ್ಲಿ ಭಾರತ ದೇಶದಲ್ಲಿ ದೇವರ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಮೋಸ ಬಡಜನರನ್ನು ದೇವರನ್ನು ತೋರಿಸಿ ಅನಕ್ಷರಸ್ಥ ಜನರ ಮನದಲ್ಲಿ ಮೂಢನಂಬಿಕೆಗಳನ್ನು ಭಿತ್ತಿ ಅವರಿಗೆ ದೇವರ ಬಗ್ಗೆ ಸುಳ್ಳು ಮಾತುಗಳು ನಂಬಿಕೆಗಳನ್ನು ಹುಟ್ಟಿಸಿ ಅವರನ್ನು ಮರಳು ಮಾಡಿ ಬಹು ಜೋರಾಗಿ ವ್ಯಾಪಾರ ಮಾಡುತ್ತಿದ್ದಾರೆ ಇದು ಜನರನ್ನು ಶೋಷಿಸುವ ಅತಿದೊಡ್ಡ ಹುನ್ನಾರವೆಂದು ಜನರ ಮನಸ್ಥಿತಿಯ ಬಗ್ಗೆ ಬಹಳಷ್ಟು ಮಾಮಿ೯ಕವಾಗಿ ತನಗವನ್ನು ರಚನೆ ಮಾಡಿದ್ದಾರೆ.

ಎಷ್ಟು ಕೋಟಿ ಕೊಟ್ಟರೂ
ಮತ್ತೆ ಸಿಗದು ಬಾಲ್ಯ
ಮುತ್ತು ರತ್ನಕ್ಕಿಂತಲೂ
ಬಾಲ್ಯವದು ಅಮೂಲ್ಯ

ಓದುಗರ ಪ್ರೋತ್ಸಾಹ
ಸಾಹಿತಿಗೆ ಉತ್ಸಾಹ
ಬೇಕಿಲ್ಲ ಇದಕ್ಕಿಂತ
ಮತ್ಯಾವ ಪುರಸ್ಕಾರ

ಈ ತನಗದಲ್ಲಿ ಕವಿಗಳು ಒಂದು ನಿಜವನ್ನು ಹೇಳುತ್ತಾರೆ. ಕವಿ ಕಥೆಗಾರ ಲೇಖಕ ತಾನು ಬರೆದ ಬರಹಕ್ಕೆ ಓದುಗರ ಪ್ರೋತ್ಸಾಹ ಮುಖ್ಯ ತನ್ನ ಬರಹವನ್ನು ಓದಿದ ಓದುಗ ಆ ಕೃತಿಯ ಬಗ್ಗೆ ಕಾವ್ಯದ ಬಗ್ಗೆ ಕಥೆಯ ಬಗ್ಗೆ ನಾಲ್ಕು ಹೇಳಿ ಬರೆದು ಪ್ರೋತ್ಸಾಹ ಕೊಟ್ಟರೆ ಸಾಕು ಅದಕ್ಕಿಂತ ಕವಿಗೆ ಮತ್ಯಾವ ಪ್ರಶಸ್ತಿ ಪುರಸ್ಕಾರಗಳು ಬೇಕಿಲ್ಲ ಅಂತ ಹೇಳಿದ್ದಾರೆ.

ಬಸವನ ಸಂದೇಶ
ತಲೆಗೆ ಹೋಗಲಿಲ್ಲ
ಜಾತಿ ಮತದ ಜೊಂಡು
ಇನ್ನೂ ತೊಲಗಲಿಲ್ಲ!

ಅತಿ ದೊಡ್ಡ ಆಯುಧ
ನಮ್ಮೆಲ್ಲರ ನಾಲಿಗೆ
ತಪ್ಪಾಗಿ ಬೆಳಸಲು
ಕುತ್ತು ನಮ್ಮ ಪಾಲಿಗೆ!

ಕಟ್ಟಿದ ಮನೆ ಒಮ್ಮೆ
ಬೀಳದೆ ಇರಗಣ್ಣ
ಹುಟ್ಟಿದ ಜೀವರಿಗೆ
ಸಾವು ನಿಶ್ಚಿತವಣ್ಣ

ದೇವರ ಹರಸುತ್ತಾ
ಆಲೆದವರೆ ಹೆಚ್ಚು
ಆಡಂಬರದ ಭಕ್ತಿ
ಕೆಲವರಿಗೆ ಹುಚ್ಚು

ಬೆಂಕಿಗೂ ಬೆಳಕಿಗೂ
ಬಹುದೊಡ್ಡ ವ್ಯತ್ಯಾಸ
ಬೆಂಕಿಯು ಅಟ್ಟಹಾಸ

ಬೆಳಕು ಮಂದಹಾಸ. ಇಂತಹ ನೂರಾರು ತನಗಗಳು ಈ ಕೃತಿಯಲ್ಲಿವೆ. ಸಮಾಜದ ಬಗ್ಗೆ, ದೇವರ ಬಗ್ಗೆ, ಕವಿಗಳ ಬಗ್ಗೆ ಪ್ರಶಸ್ತಿಗಳ ಬಗ್ಗೆ, ಸಿನಿಮಾ ನಟರ ಬಗ್ಗೆ ಸ್ವಾಮೀಜಿಗಳ ಬಗ್ಗೆ ಕ್ರಿಕೆಟಿಗರ ಬಗ್ಗೆ ಹತ್ತಾರು ತನಗಗಳನ್ನು ರಚನೆ ಮಾಡಿದ್ದಾರೆ. ಒಂದು ಆತಂಕದಿಂದಲೇ ಈ ಪುಸ್ತಕವನ್ನು ಕೈಗೆತ್ತಿಕೊಂಡೆ ಅದರೆ ನನ್ನ ಓದಿನ್ನು ನಿಲ್ಲಿಸದೆ ಕೊನೆಯವರೆಗೂ ಸೆಳೆದುಕೊಂಡು ಹೋದವು ಈ ಕೃತಿಯಲ್ಲಿನ ನೂರಾರು ತನಗಗಳು. ಇದು ತನಗ ಕಾವ್ಯದ ಕೃತಿಯಾದ್ದರಿಂದ ಈ ಕೃತಿಯಲ್ಲಿ ಓದುಗರಿಗೆ ಅದರ ನೀತಿನಿಯಮಗಳನ್ನು ಕ್ರೂಢಿಕರಿಸಿ ವಿಸ್ತಾರವಾಗಿ ಲೇಖಕರು ತಿಳಿಸಿದ್ದರೆ ಹೊಸ ಹೊಸ ಲೇಖಕರು ತನಗದ ಕಾವ್ಯವನ್ನು ಬರೆಯಲು ಸಹಕಾರಿಯಾಗುತ್ತಿತ್ತು ಅಂತ ನನ್ನ ವೈಯಕ್ತಿಕ ಭಾವನೆ.

ಈ ಕವನ ಸಂಕಲನ ಎಲ್ಲಾ ತನಗಗಳನ್ನು ವಿವರಿಸುತ್ತಾ ಹೋದರೆ ಓದುಗ ಮನದಲ್ಲಿ ಈ ಕೃತಿಯ ಬಗ್ಗೆ ಕುತೂಹಲ ಕಳೆದು ಹೋಗಬಹುದು ಅದರಿಂದ ಕೆಲವೊಂದು ಕವಿತೆಗಳ ಸಾಲುಗಳನ್ನು ಅಷ್ಟೇ ಪರಿಚಯಿಸಿದ್ದೇನೆ

ದಯವಿಟ್ಟು ಬರಹಗಾರರು ಓದುಗ ಪ್ರಿಯರು ಎಲ್ಲಾರೂ ಪುಟಕ್ಕಂಟಿದ ಪತಂಗ ಈ ತನಗ ಸಂಕಲನವನ್ನು ಕೊಂಡು ಓದಿ ಲೇಖಕರಿಗೆ ಪ್ರೋತ್ಸಾಹ ಮಾಡುವಿರೆಂದು ಬಯಸುವೆ. ಈ ಕೃತಿಯನ್ನು ಓದಿದಾಗ ನಿಮಗೆ ಸಮಯ ವ್ಯಥ೯ವಾಯಿತು ಅನ್ನೋ ಭಾವನೆ ಖಂಡಿತವಾಗಿಯೂ ಮೂಡುವುದಿಲ್ಲ. ಹೊಸತೊಂದು ಪುಸ್ತಕವನ್ನು ಓದಿದ ಅನುಭವ ಖುಷಿಯಂತು ಖಂಡಿತವಾಗಿಯೂ ಆಗುತ್ತದೆ ಅಂತ ನನ್ನ ಭಾವನೆ.

ಆತ್ಮೀಯವಾಗಿ ಪುಸ್ತಕವನ್ನು ಕೊಟ್ಟು, ತಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು ಕವಿಗಳೇ. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.


  • ನಾರಾಯಣಸ್ವಾಮಿ .ವಿ, ಮಾಸ್ತಿ ಕೋಲಾರ ಜಿಲ್ಲೆ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW