“ಸಮಸ್ತ ಅಕ್ಷರಬಂಧುಗಳಿಗೂ ಗುರು ಪೌರ್ಣಿಮೆಯ ಹಾರ್ದಿಕ ಶುಭಾಶಯಗಳು ಈ ಶುಭದಿನದಂದು ಇದು ಗುರುವಿಗೆ ಸಲ್ಲಿಸಿದ ಹೃದ್ಯಕವಿತೆ. ಅನಂತ ಭಕ್ತಿ ನಮನಗಳ ನಮ್ರಗೀತೆ. ಈ ಪವಿತ್ರದಿನದಂದು ಚಾತುರ್ಮಾಸ ವ್ರತ ಆರಂಭಿಸುತ್ತಿರುವ ನನ್ನ ಅತ್ಯಂತ ಪ್ರೀತಿಯ ಗುರುಗಳಾದ ಎಡನೀರು ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಪಾದ ಕಮಲಗಳಿಗೆ, ಅನಂತ ಅಭಿಮಾನ, ಆದರ, ಗೌರವಗಳೊಂದಿಗೆ ಅರ್ಪಿಸಿದ ನನ್ನೆದೆಯ ಪ್ರಾರ್ಥನೆಗಳ ಅಕ್ಷರ ಪ್ರಣತೆಯಿದು.” – ಪ್ರೀತ್ಯಾದರಗಳಿಂದ ಎ.ಎನ್.ರಮೇಶ್. ಗುಬ್ಬಿ.
ನಮಿಸುವೆನು ಶ್ರೀಸಚ್ಚಿದಾನಂದ ಗುರುವೆ
ಎಡನೀರು ಪೀಠದಿ ಕಂಗೊಳಿಪ ವಿಭುವೆ
ಕೇಶವರ ಕರಕಮಲ ಸಂಜಾತ ಗುರುವೆ
ಶ್ರೀಮಠವ ಬೆಳಗುತಲಿ ನಿಂತಿರುವ ಪ್ರಭುವೆ
ಹರಿಯುತಿಹ ಹೊನಲಿಗೂ ನಿಮ್ಮ ಧ್ಯಾನ
ಬೆಳಗುತಿಹ ಮುಗಿಲಿಗೂ ನಿಮ್ಮದೇ ಗಾನ
ಸುಳಿಯುತಿಹ ತಂಗಾಳಿಗೂ ನಿಮ್ಮ ಸ್ಮರಣ
ತರುಲತೆಯ ತುಂಬೆಲ್ಲ ನಿಮ್ಮದೇ ಕಿರಣ
ಪ್ರಜ್ವಲಿಸುತಿಹ ಪ್ರಭೆಯಲ್ಲಿ ನಿಮ್ಮ ಡಿಂಬ
ಜಪಿಸುತಿಹ ಕಂಬಕಂಬದಿ ನಿಮ್ಮದೇ ಬಿಂಬ
ಹರಿಹರರ ಮೊಗದಲ್ಲಿ ನಿಮ್ಮ ಸೊಬಗು
ಭಕುತರ ಕಂಗಳಲಿ ನಿಮ್ಮದೇ ಮಿನುಗು
ಗುರಿಯ ತೋರುತ ನಡೆಸಿರುವೆ ದಿನವು
ಅಡಿಗಡಿಗು ನೀಡಿರುವೆ ಸುಜ್ಞಾನದರಿವು
ಬೆಳಕ ಬೀರುತ ಹರಸುತಿದೆ ಆ ಕರವು
ಅನುಕ್ಷಣವು ತೊಡೆದಿದೆ ಕತ್ತಲಿನ ಹರಿವು
ಕಳೆಯುತಲಿ ಭವದ ಬಂಧನ ಗುರುವೆ
ಮುನ್ನಡೆಸು ಮುಕ್ತಿ ಪಥದಲಿ ಪ್ರಭುವೆ
ತೊಡೆಯುತಲಿ ಮೌಢ್ಯಜಾಡ್ಯಗಳ ಗುರುವೆ
ಆಧ್ಯಾತ್ಮದೊಲವಿಟ್ಟು ಅನುಗ್ರಹಿಸು ವಿಭುವೆ
ಸಾಂಗವಾಗಲಿ ಲೋಕ ಕಲ್ಯಾಣ ತಪವು
ದೇದೀಪ್ಯವಾಗಲಿ ಚಾತುರ್ಮಾಸ ವ್ರತವು
ಕಳೆಯಲಿ ಜಗದ ಕಷ್ಟ ಕಾರ್ಪಣ್ಯ ನೋವು
ಚಿರಂತನವಾಗಲಿ ಪ್ರತಿ ಮೊಗದಿ ನಗುವು.!
- ಎ.ಎನ್.ರಮೇಶ್.ಗುಬ್ಬಿ