‘ಜೈಲರ್’ ಕಮರ್ಶಿಯಲ್ ಸಿನಿಮಾವಾಗಿದ್ದು, ಕಮರ್ಶಿಯಲ್ ಸಿನಿಮಾ ನನ್ನನ್ನು ಕೆಲವೊಂದು ಕಡೆ ತುಂಬಾನೇ ಇಂಪ್ರೆಸ್ ಮಾಡಿತು. ಸಿನಿಮಾದಲ್ಲಿ ಶಿವಣ್ಣ ಹಾಗು ಕಿಶೋರ್ ಕುರಿತು ಪತ್ರಕರ್ತ ರಂಜಿತ್ ಕವಲಪಾರ ಅವರು ಬರೆದಿರುವ ‘ಜೈಲರ್’ ವಿಮರ್ಶೆಯನ್ನು ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ…
ನನಗೆ ಸಿನಿಮಾ ಅಂದರೆ ಬೆರಗು, ಅಚ್ಚರಿ. ಸಿನಿಮಾಗಳನ್ನು ನೋಡಿ ಮೈಮರೆಯುವವನು ನಾನು. ಈಗಷ್ಟೇ ನೆಲ್ಸನ್ ನಿರ್ದೇಶನದ ‘ಜೈಲರ್’ ಸಿನಿಮಾ ನೋಡಿದೆ. ಅವರದೇ ನಿರ್ದೇಶನದ ವಿಜಯ್ ನಟನೆಯ ಬೀಸ್ಟ್ ಸಿನಿಮಾ ನೋಡಿ ಬಹಳಾ ನಿರಾಸೆಗೊಂಡಿದ್ದೆ. ನನ್ನನ್ನು ಕಮರ್ಶಿಯಲ್ ಸಿನಿಮಾಗಳಿಗಿಂತಲೂ ರಿಯಾಲಿಸ್ಟಿಕ್ ಸಿನಿಮಾಗಳು ಹೆಚ್ಚು ಇಂಪ್ರೆಸ್ ಮಾಡುತ್ತದೆ. ಅಲ್ಲಿ ಪಾತ್ರಗಳಿಗೆ ಹೆಚ್ಚು ಮಹತ್ವವಿರುತ್ತದೆ ಹಾಗೂ ನ್ಯಾಚುರಲ್ ಅನ್ನಿಸುವಂತದ್ದು ನಮ್ಮ ನಡುವಿನ ಬದುಕು ಅನ್ನಿಸಿ ಆಪ್ತವಾಗುತ್ತದೆ. ಅಗ್ನಿ ಶ್ರೀಧರ್ ಅವರ ಕಥೆ ಆಧರಿತ ಆ ದಿನಗಳು, ಎದೆಗಾರಿಕೆ ಸಿನಿಮಾಗಳು ಇಷ್ಟ ಆದಷ್ಟು ನನಗೆ ಅವರದೇ ಹೆಡ್ ಬುಷ್ ಇಷ್ಟ ಆಗದೇ ಇರಲೂ ಇದೇ ಕಾರಣ ಇರಬಹುದು.
ಇಂದು ನಾನು ನೋಡಿದ್ದು ಪಕ್ಕಾ ಕಮರ್ಶಿಯಲ್ ಸಿನಿಮಾ. ಕಮರ್ಶಿಯಲ್ ಸಿನಿಮಾ ಎಂದರೆ ಕೊಂಚ ದೂರ ಸರಿಯುವ ನನ್ನಂತಹ ನೋಡುಗನನ್ನು ಹಿಡಿದಿಡುವುದು ಬಹಳಾ ಪ್ರಯಾಸದ ಕೆಲಸ. ಯಾಕೆಂದರೆ ಅಸಾಮಾನ್ಯ ವಿಚಾರಗಳು ಎದುರಾದಾಗ (ಉದಾ: ಕೈಯಿಂದಲೇ ಬುಲ್ಡೋಜರ್ ಕೈಯನ್ನು ಮುರಿಯುವಂತೆ ಮಾಡುವ ದೃಶ್ಯಗಳು) ಸೀಟಿನಿಂದ ಎದ್ದು ಹೋಗೋಣ ಅನ್ನಿಸಲು ಶುರುವಾಗುತ್ತದೆ. ಅದೇ ದರ್ಶನ್ ನಟನೆಯ ನನ್ನ ಪ್ರೀತಿಯ ರಾಮು ಸಿನಿಮಾ ನೋಡುವಾಗಲೆಲ್ಲಾ ನನ್ನ ಕಣ್ಣಿಂದ ಕಣ್ಣೀರು ಧಾರಕಾರವಾಗಿ ಸುರಿಯುತ್ತದೆ.
ಕಮರ್ಶಿಯಲ್ ಸಿನಿಮಾ ಕೂಡ ಕಮಾಲ್ ಮಾಡುವಂತೆ ನನ್ನನ್ನು ಕೆಲವೊಂದು ಇಂಪ್ರೆಸ್ ಮಾಡಿದೆ ಇಲ್ಲಾ ಅಂತೇನೂ ಅಲ್ಲ. ಅದರ ಸಾಲಿನಲ್ಲಿ ಜೈಲರ್ ಕೂಡ ನಿಲ್ಲುತ್ತದೆ. ನಾನು ರಜನಿಕಾಂತ್ ಅವರ ಡೈ ಹಾರ್ಡ್ ಫ್ಯಾನ್ ಅಲ್ಲ. ನನಗೆ ಶಿವಣ್ಣ, ಮೋಹನ್ ಲಾಲ್ ಸಿಕ್ಕಾಪಟ್ಟೆ ಇಷ್ಟ ಆಗುವ ನಟರು. ನಿಮಗೆ ಶಿವಣ್ಣ ಎಂದರೆ ಜೋಗಿ ನೆನಪಾಗಬಹುದು ನನಗೆ ಸೂರಿ ಅವರ ನಿರ್ದೇಶನದ ‘ಕಡ್ಡಿ ಪುಡಿ’ ಸಿನಿಮಾ ಕಣ್ಣಿಗೆ ಬರುತ್ತದೆ. ಸೂರಿ ಅವರು ನಟರ ಅಂತರಾಳಕ್ಕೆ ಕೈಹಾಕಿ ಅವರಿಂದ ಕೆಲಸ ತೆಗೆದುಕೊಳ್ಳುವ ನಿರ್ದೇಶಕ. ಅವರ ನಿರ್ದೇಶನದಲ್ಲೂ ನಿರಾಯಾಸವಾಗಿ ನಟಿಸಲು ನಿಜವಾದ ನಟರಿಗೆ ಮಾತ್ರ ಸಾಧ್ಯ. ಇನ್ನು ಮೋಹನ್ ಲಾಲ್ ವಿಚಾರಕ್ಕೆ ಬರುವುದಾದರೆ ಆ ಮನುಷ್ಯ ಅದೆಷ್ಟು ಬಾರಿ ನನ್ನ ಮನಸ್ಸನ್ನು ಗೆದ್ದಿದ್ದಾರೆ ಎಂದು ಹೇಳಲು ಸಾಧ್ಯವೇ ಆಗುವುದಿಲ್ಲ. ‘ಸ್ಪಡಿಗಂ’ ಸಿನಿಮಾದ ಆಡು ತೋಮನೂ ದೃಶ್ಯಂ ನಾ ಜಾರ್ಜ್ ಕುಟ್ಟಿಯೂ ನನ್ನನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಫೋಟೋ ಕೃಪೆ : google
ಜೈಲರ್ ಸಿನಿಮಾಕ್ಕೆ ಬರುತ್ತೇನೆ. ಈ ಹಿಂದೆ ನನ್ನನ್ನು ಬಹಳಾ ನಿರಾಸೆ ಮಾಡಿದ ನೆಲ್ಸನ್ ಇದರಲ್ಲಿ ನನ್ನನ್ನು ಇಂಪ್ರೆಸ್ ಮಾಡಬಹುದು ಅನ್ನುವ ಯಾವುದೇ ಪೂರ್ವ ಆಲೋಚನೆ ಇಲ್ಲದೆ ಸಿನಿಮಾ ಹಾಲನ್ನು ನಾನು ಪತ್ರಕರ್ತನಿಗಿರಬೇಕಾದ ಸಣ್ಣ ಸಂಶಯ ಇಟ್ಟುಕೊಂಡೆ ಹೋಗಿದ್ದೆ.
ಸಿನಿಮಾ ಶುರುವಿನಲ್ಲಿ ಸ್ವಲ್ಪ ಸ್ಲೋ ಆಯಿತೇನೋ ಅನ್ನಿಸುವ ಹಂತದಲ್ಲೇ ತನ್ನ ವೇಗವನ್ನು ಹೆಚ್ಚಿಸುತ್ತಾ ಹೋಗಿ ಇಂಟರ್ವಲ್ ಹಂತದಲ್ಲಿಯೇ ರಜನಿ ಅವರು ನಟನೆಯಿಂದ ಇಂಪ್ರೆಸ್ ಮಾಡಿ ಬಿಟ್ಟರು. ಕಣ್ಣಾ… ಅನ್ನುವ ಎಂದಿನ ಶೈಲಿನ ಡೈಲಾಗ್ ಹೇಳಿ ಚಪ್ಪಾಳೆ ಹೊಡೆಸಿಕೊಳ್ಳುತ್ತಿದ್ದ ರಜನಿಕಾಂತ್ ಅವರಿಂದ ನೆಲ್ಸನ್ ನಟನೆಯ ಮೂಲಕ ಮಾತನಾಡಿಸಿ ಯಶಸ್ವಿಯಾಗಿದ್ದಾರೆ ಎಂದು ಅನ್ನಿಸಲು ಶುರುವಾಗಿತ್ತು. ರಮ್ಯ ಕೃಷ್ಣ ಥೇಟ್ ಗೃಹಿಣಿಯಾಗಿ ಸಿನಿಮಾದುದ್ದಕ್ಕೂ ಸೈಲೆಂಟ್ ಪಾತ್ರವಹಿಸಿ ಪಾತ್ರಕ್ಕೆ ಇಷ್ಟೇ ಸಾಕು ಅನ್ನುವಂತೆ ಕಾಣಿಸಿದರು. ಹೀರೋಹಿಸಮ್ ಅನ್ನು ಕೊಂಚ ಸರಿಸಿ ರಜನಿ ಇಲ್ಲಿ ಪ್ರೌಢಿಮೆ ಮೆರೆದಿರುವುದು ವಿಶೇಷ.
ಇನ್ನು ಅಗತ್ಯಕ್ಕೆ ತಕ್ಕಂತೆ ಬಂದು ಹೋಗುವ ಮೋಹನ್ ಲಾಲ್ ಹಾಗೂ ಶಿವಣ್ಣ ಅವರ ಎಂಟ್ರಿಯಂತೂ ಮೈರೋಮಾಂಚನ ಮಾಡುವಂತದ್ದು. ಯೋಗಿ ಬಾಬು ಬಹಳಾ ಮಜಕೊಡುವ ಕಲಾವಿದ. ಇದರಲ್ಲು ಅವರಿಂದ ಸಿಕ್ಕಾಪಟ್ಟೆ ಮಜ ಸಿಗುತ್ತದೆ. ಇನ್ನು ಮಲಯಾಳಂ ಸಿನಿ ಲೋಕದ ರಾಕ್ಷಸ ನಟ ವಿನಾಯಾಗನ್ ಅವರು ತಮ್ಮ ನಟನೆಯಿಂದಲೇ ಈ ಸಿನಿಮಾದುದ್ದಕ್ಕೂ ತಮ್ಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡುವುದೇ ಇಲ್ಲ. ತಮನ್ನ ಸ್ವಲ್ಪ ಗುಂಡಾಗಿದ್ದರೂ ಇನ್ನೂ ಅಟ್ರಾಕ್ಟಿವ್ ಆಗಿಯೇ ಕಾಣಿಸುತ್ತಾರೆ ನನಗೆ ಝಿರೋ ಫಿಗರ್ ಹುಡುಗಿಯರಿಗಿಂತ ಮೈಕೈ ತುಂಬಿಕೊಂಡು ಆರೋಗ್ಯವಾಗಿ ಕಾಣಿಸುವ ಹುಡಿಗಿಯರು ಇಷ್ಟವೂ ಹೌದು. ತಮನ್ನ ಮಾದಕವಾಗಿಯೂ ಕಾಣಿಸುತ್ತಾಳೆ. ಹಾಗಾಗಿ ತುಂಬಾ ಇಷ್ಟ ಆಗುತ್ತಾಳೆ. ಅವಳು ನಿಜಕ್ಕೂ ಚಂದದ ನಟಿ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ಸಿನಿಮಾದಲ್ಲಿ ನಿರ್ವಹಿಸುವ ನಟಿಯೂ ಹೌದು. ಕಥೆ ವಿಚಾರಕ್ಕೆ ಬರುವುದಾದರೆ ಬೆರಗಾಗುವಂತಹಾ ಟ್ವಿಸ್ಟ್ ಏನೂ ಇಲ್ಲದಿದ್ದರು. ಅನಿರುದ್ಧನ ಬಿ.ಜಿ.ಎಂ ಮ್ಯೂಸಿಕ್ ಆಗಾಗ್ಗೆ ರೋಮ ನಿಮಿರುವಂತೆ ಮಾಡುತ್ತದೆ.
ಫೋಟೋ ಕೃಪೆ : goog;e
ಒಂದು ಆಕ್ಷನ್ ಸ್ವೀಕ್ವೆನ್ಸ್ ಅಲ್ಲಿ ಯೋಧನಂತೆ ಬರುವ ಕಿಶೋರ್ ಕುರಿತು ಯಾಕೆ ಯಾರೂ ಮಾತನಾಡುತ್ತಿಲ್ಲ ಎಂದು ನನಗೆ ಅಚ್ಚರಿಯಿದೆ. ಕಿಶೋರ್ ದುನಿಯಾದಲ್ಲೇ ಕಮಾಲ್ ಮಾಡಿದ ನಟ. ತಮ್ಮ ನಟನೆಯಿಂದ ಕಮಾಲ್ ಮಾಡುತ್ತಲೇ ಇರುವ ನಟ ತಮಿಳಿನ ಆಡುಕಾಲಂ ಸಿನಿಮಾದಲ್ಲಿ ಕಿಶೋರ್ ಮತ್ತೆ ನಟ ಧನುಶ್ ಅವರ ಫೈಟ್ ಸೀನ್ ಒಂದಿದೆ. ಸಾಧ್ಯವಾದರೆ ನೋಡಿ. ಅವರ ನ್ಯಾಚುರಲ್ ನಟನೆಗೆ ಆ ಫೈಟ್ ಸೀನ್ ಕೂಡ ಒಂದು ಉದಾಹರಣೆ. ಅವರು ನಾಲ್ಕೈದು ನಿಮಿಷ ಸಿನಿಮಾದಲ್ಲಿ ಕಂಡರು. ಇಂತಹಾ ಒಟ್ಟು ಮೊತ್ತ ಒಳ್ಳೆಯ ಸಿನಿಮಾದಲ್ಲಿ ಅವರು ಭಾಗವಹಿಸಿರುವುದು ನನಗೆ ಖುಷಿ.
ಒಂದು ಕುಳ್ಳಿಗಿನ ಕ್ಯಾರೆಕ್ಟರ್ ಒಂದನ್ನು ತಮಿಳಿನ ವಿಕ್ರಂ ಸಿನಿಮಾದಲ್ಲಿ ನೋಡಿ ಬಹುವಾಗಿ ಮೆಚ್ಚಿದ್ದೆ. ಆ ನಟ ಈ ಸಿನಿಮಾದಲ್ಲೂ ನನಗೆ ಅಷ್ಟೇ ಮೆಚ್ಚುಗೆ ಆದ. ಒಟ್ಟು ಮೊತ್ತ ಒಂದೊಳ್ಳೆ ಕಮರ್ಶಿಯಲ್ ಸಿನಿಮಾ ಇದು. ನೆಲ್ಸನ್ ಹಾಗೂ ರಜನಿಕಾಂತ್ ಅವರಿಗೆ ಇದು ರೀ ಸ್ಟಾರ್ಟ್….. ನೀವು ಧೈರ್ಯವಾಗಿ ಥಿಯೇಟರ್ ನಲ್ಲಿ ಸಿನಿಮಾ ನೋಡಬಹುದು. ಈ ಸಿನಿಮಾದ ಕ್ಲೈಮ್ಯಾಕ್ಸ್ ಅಲ್ಲಿ ಹೀರೋ ಗೆಲ್ಲುತ್ತಾನೆ ಎಂದಿನಂತೆ ಒಳ್ಳೆತನವೂ ಗೆಲ್ಲುತ್ತದೆ.
- ರಂಜಿತ್ ಕವಲಪಾರ