ಅಮ್ಮನಿಗೆ ೨೦೧೫ ರಲ್ಲಿ ತೊಂಬತ್ತು ವರುಷಗಳು ತುಂಬಿದಾಗ ಅವಳ ಹುಟ್ಟುಹಬ್ಬವನ್ನು ಸ್ವಲ್ಪ ದೊಡ್ಡ ಮಟ್ಟದಲ್ಲಿ ಆಚರಿಸಿದ್ದೆವು. ಆದರೆ ಅಮ್ಮನಿಗೆ ಕಾಶಿ ನೋಡಬೇಕೆಂಬ ಆಸೆಯಿತು, ಅದರಂತೆ ಕಾಶಿಯಾತ್ರೆ ಮುಗಿದ ಮೇಲೆ ಅಮ್ಮ ಮೂರೇ ವರ್ಷಗಳಲ್ಲಿ ತೀರಿಕೊಂಡಳು. ಅಮ್ಮನ ಕುರಿತು ಗಿರಿಜಾ ಶಾಸ್ತ್ರಿ ಅವರು ಬರೆದ ಭಾವನಾತ್ಮಕ ಲೇಖನವನ್ನು ತಪ್ಪದೆ ಮುಂದೆ ಓದಿ…
ಅಮ್ಮನಿಗೆ ೨೦೧೫ ರಲ್ಲಿ ತೊಂಬತ್ತು ವರುಷಗಳು ತುಂಬಿದಾಗ ಅವಳ ಹುಟ್ಟು ಹಬ್ಬವನ್ನು ಸ್ವಲ್ಪ ದೊಡ್ಡ ಮಟ್ಟದಲ್ಲಿ ಆಚರಿಸಿದ್ದೆವು. ನಮ್ಮ ಬಂಧುಗಳು ಮತ್ತು ಸ್ನೇಹಿತರು ಅಮ್ಮನ ಬಗ್ಗೆ ಬರೆದ, ಬರೆಸಿದ ಲೇಖನಗಳನ್ನೆಲ್ಲಾ ಒಟ್ಟು ಸೇರಿಸಿ ಅವಳ ಕಸೂತಿ ಮುಂತಾದ ಫೋಟೋಗಳನ್ನೂ ಸೇರಿಸಿ ಅಮ್ಮನ ನೆನಪಿಗಾಗಿ ಒಂದು ಪುಸ್ತಕ ಸಂಪಾದಿಸಿದ್ದೆ. ಅದರ ಬಿಡುಗಡೆಗಾಗಿ ಪ್ರಸಿದ್ಧ ಕತೆಗಾರರಾದ ಕೆ.ಸತ್ಯನಾರಾಯಣ ಹಾಗೂ ಪುರಾತತ್ವಜ್ಞರಾದ ನಾಗರಾಜ ಶರ್ಮ ಅವರು ಅತಿಥಿಗಳಾಗಿ ಬಂದಿದ್ದರು. ಅಮ್ಮನಿಗೆ ಇಷ್ಟವಾದ ಪೂಜೆ ಮತ್ತು ನನ್ನ ಇಷ್ಟದಂತೆ ಸಾಮಾಜಿಕ ಕಾರ್ಯಕ್ರಮ ಎರಡೂ ಯಶಸ್ವಿಯಾಗಿ ನಡೆದಿದ್ದವು.
ಮಾರನೆಯ ದಿನವೇ ನಾನು ಮುಂಬಯಿಗೆ ಹೊರಟು ನಿಂತಾಗ ಹತ್ತಿರ ಬಂದ ಅಮ್ಮ “ನಾನು ಇನ್ನೊಮ್ಮೆ ಕಾಶಿ ನೋಡಬೇಕೆಂಬ ಆಸೆ ಕರೆದುಕೊಂಡು ಹೋಗ್ತೀಯಾ?” ೧೯೯೦ರಲ್ಲಿ ಅಮ್ಮನನ್ನು ಮೊದಲ ಸಲ ಕಾಶಿಗೆ ಕರೆದುಕೊಂಡು ಹೋಗಿದ್ದೆ. ಅಮ್ಮ ನಮ್ಮಲ್ಲಿಗೆ ಬಂದಾಗಲೆಲ್ಲಾ ಅವಳನ್ನು ಎಲ್ಲಿಗಾದರೂ ತೀರ್ಥಕ್ಷೇತ್ರಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಹೀಗೆ ಸುಮಾರು ೨೦-೨೫ ಕ್ಷೇತ್ರಗಳನ್ನು ಅಮ್ಮನ ಜೊತೆ ಸುತ್ತಿರುವೆ.

ಅಮ್ಮನಿಗೆ ವಯಸ್ಸಾಗಿದ್ದರಿಂದ ಕಾಶಿಗೆ ಹೋಗಬೇಕೆನ್ನುವ ಅವಳ ಆಸೆಯನ್ನು ಯಾರೂ ಗಂಭೀರವಾಗಿ ತೆಗೆದು ಕೊಳ್ಳಲಿಲ್ಲ. ಒಂದು ವರ್ಷ ಕಳೆಯಿತು. ಅಮ್ಮ ನಮ್ಮ ಮನೆಗೆ ಬಂದಿದ್ದಳು. ಕಾಶಿಗೆ ಹೋಗುವ ಮಾತು ತೆಗೆದಳು. ನಾನೊಬ್ಬಳೇ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಹಾಗಿರಲಿಲ್ಲ. ಅಣ್ಣ ,ತಮ್ಮ ,ಅಕ್ಕನನ್ನು ಕೇಳಬೇಕಿತ್ತು. ಯಾರಿಗೂ ಸ್ವತಃ ಕರೆದುಕೊಂಡು ಹೋಗುವ ಧೈರ್ಯವಾಗಲೀ, ಕಳುಹಿಸುವ ಮನಸ್ಸಾಗಲೀ ಇರಲಿಲ್ಲ. ಅಕಸ್ಮಾತ್ ಕರೆದುಕೊಂಡು ಹೋದವರಿಗೇ ಏನಾದರೂ ಆಗಿಬಿಟ್ಟರೆ !ಪರಸ್ಥಳದಲ್ಲಿ? ಎಂಬ ಆತಂಕವೂ ಇತ್ತು. ನನ್ನ ಸಹಾಯಕಿ ರಿಹಾನ ನನ್ನ ಆತಂಕವನ್ನು ಕಂಡು “ಏನೂ ಆಗುವುದಿಲ್ಲ …..ಭಗವಾನ್ ಹೈ ಅವನ ಮೇಲೆ ಭರವಸೆ ಇಟ್ಟು ಕರೆದುಕೊಂಡು ಹೋಗು” ಎಂದಳು. ಹೀಗೆ ನನ್ನನ್ನು ಉತ್ತೇಜಿಸಿದವಳು ಅವಳೊಬ್ಬಳೇ. ದೇವರಲ್ಲಿ ಸಂಪೂರ್ಣ ನಂಬಿಕೆ ಇಟ್ಟವರಿಗೆ ತಲ್ಲಣಗಳೇಕೋ !!ನನಗೆ ಅರ್ಥವಾಗುವುದಿಲ್ಲ. ಅಂದು ಮುಗ್ಧ ರಿಹಾನ ಪ್ರಪತ್ತಿ ಮಾರ್ಗದ ರೂಪಕವಾಗಿ ಕಂಡು ಬಿಟ್ಟಳು .
ರಘುನಾಥ್ ಅವರಿಗೆ ದೇವಸ್ಥಾನ, ತೀರ್ಥ ಯಾತ್ರೆಯಲ್ಲಿ ನಂಬಿಕೆಯಿಲ್ಲ. ಆದರೂ ನಮ್ಮ ಜೊತೆಗೆ ಬಂದರು. ಮುಂಬಯಿಯಿಂದ ನೇರ ವಾರಣಾಸಿಗೆ ಏರೋಪ್ಲೇನ್ ನಲ್ಲಿ ಬಂದಿಳಿದೆವು. ಬನಾರಸ್ ಹಿಂದೂ ವಿ.ವಿ.ಯಲ್ಲಿ ಭಾಷಾವಿಜ್ಞಾನದ ಪ್ರೊ.ರಾಜನಾಥ್ ಭಟ್ ಎಂಬ ನಮ್ಮ ಕಾಶ್ಮೀರಿ ಸ್ನೇಹಿತ ‘ಮುಮುಕ್ಷು ಧಾಮ್’ ಎಂಬ ಆಶ್ರಮದಲ್ಲಿ ನಮಗಾಗಿ ಎರಡು ಕೋಣೆಗಳನ್ನು ಕಾಯ್ದಿರಿಸಿದ್ದರು.
ಮಧ್ಯರಾತ್ರಿ ಎರಡೂವರೆ ಗಂಟೆಗೆ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ , ಪೂಜೆ ಇರುತ್ತದೆಂದೂ ಅದಕ್ಕಾಗಿ ರಾತ್ರಿ ಹನ್ನೆರೆಡು ಗಂಟೆಯಿಂದಲೇ ಸರತಿಯಲ್ಲಿ ನಿಲ್ಲಬೇಕೆಂದು ಗೊತ್ತಾಯಿತು. ಅಮ್ಮ ನಾನು ಒಂದು ಕೋಣೆಯಲ್ಲಿದ್ದೆವು. ರಘುನಾಥ್ ಅವರಿಗೆ, ಅವರು ಬರಬೇಕಾದ ಆವಶ್ಯಕತೆ ಇಲ್ಲವೆಂದೂ ನಾವಿಬ್ಬರೇ ಹೋಗುವುದಾಗಿಯೂ ಹೇಳಿಬಿಟ್ಟಿದ್ದೆ.
ಅಂದು ರಾತ್ರಿ ಅಮ್ಮ ಹಾಸಿಗೆಯ ಮೇಲೆ ಮಲಗಲಿಲ್ಲ. ಮಲಗಿದರೆ ದೇವಸ್ಥಾನಕ್ಕೆ ಹೋಗುವ ಮುನ್ನ ಮತ್ತೆ ಸ್ನಾನಮಾಡಬೇಕು! ಹೀಗಾಗಿ ನೆಲದ ಮೇಲೆ ಮಲಗಿದಳು. ಮಲಗಿದ್ದಳೇ ? ಸುಮ್ಮನೇ ಅಡ್ಡಾಗಿದ್ದಳು. ನನಗೂ ಕಣ್ಣು ಮುಚ್ಚಲು ಬಿಡಲಿಲ್ಲ. ಆತಂಕ , ಪರದಾಟ! ಗಳಿಗೆಗೊಮ್ಮೆ ಹನ್ನೆರೆಡು ಗಂಟೆ ಆಯ್ತಾ ಎಂದು ಕೇಳುತ್ತಿದ್ದಳು.

ಕೊನೆಗೆ ಹನ್ನೆರೆಡು ಗಂಟೆಗೆ ಒಂದು ಸೈಕಲ್ ರಿಕ್ಷಾ ಮಾಡಿಕೊಂಡು ದೇವಸ್ಥಾನದ ಬಳಿ ಬಂದಿಳಿದೆವು. ನಾನು ಬೇಡವೆಂದರೂ ರಘುನಾಥ್ ನಮ್ಮ ಜೊತೆ ಬಂದಿದ್ದರು. “ನಿನ್ನ ಕಾಶಿ ವಿಶ್ವನಾಥ ನನ್ನ ಕೈಯಲ್ಲಿ ಇನ್ನೇನು ಮಾಡಿಸ್ತಾನೋ” ಎಂದು ಕಿಚಾಯಿಸಿದ್ದರು. ನಾವು ಸರತಿಯಲ್ಲಿ ನಿಲ್ಲುವಾಗ ನಮ್ಮಮುಂದೆ ಯಾರೂ ಇರಲಿಲ್ಲ. ಅಮ್ಮನಿಗಂತೂ ಸದ್ಯ ಯಾರೂ ಇಲ್ಲ, ನಿರಾಳವಾಗಿ ಅಭಿಷೇಕ ಪೂಜೆ ನೋಡಬಹುದು ಎಂಬ ಖುಷಿ.
ಆದರೆ ಎರಡು ಗಂಟೆಯ ಹೊತ್ತಿಗೆ ಯಾರು ಯಾರೋ ಪ್ರಭಾವೀ ಮಹಾನುಭಾವರು ಬಂದು ನಮ್ಮ ಮುಂದೆಯೇ ಬೇರೊಂದು ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದರು. ಸಾಲು ಬೆಳೆಯುತ್ತಿತ್ತು. ದೇವಸ್ಥಾನದ ಬಾಗಿಲು ತರೆದಾಗ ನಮ್ಮ ಹಿಂದಿನವರೂ, ಮುಂದಿದ್ದವರೂ ಎಲ್ಲ ನುಗ್ಗಿ ಬಿಟ್ಟರು. ಅಮ್ಮನಿಗೆ ನಡೆಯುವುದೇ ಕಷ್ಟ ಇನ್ನು ಓಡುವುದೆಲ್ಲಿ?
ಒಳಗೆ ಹೋದಾಗ ಅಭಿಷೇಕ ಪ್ರಾರಂಭವಾಗಿತ್ತು. ಜನಜಂಗುಳಿ. ಅಮ್ಮ ಪರದಾಡಲು ಶುರುಮಾಡಿದರು. ನನಗೆ ಕಾಣುವುದಿಲ್ಲ ಸ್ವಲ್ಪ ಜಾಗಬಿಡಿ ಎಂದು ಕನ್ನಡದಲ್ಲೇ ಅಲವರಿದಳು. ಯಾರೋ ಕೆಲ ಮಹಿಳೆಯರು ಅಮ್ಮನ ಪರದಾಟ ನೋಡಿ ಜಾಗಬಿಟ್ಟು ಕೊಟ್ಟರು. ಪೂಜೆ ಪ್ರಾರಂಭವಾದಂತೆ ನೂಕು ನುಗ್ಗಲು ಅಧಿಕವಾಯಿತು. ಅಮ್ಮ ಹಿಂದಕ್ಕೆ ಅನಾಮತ್ತು ತಳ್ಳಲ್ಪಟ್ಟಳು. ಅಕ್ಷರಶಃ ರೋದಿಸುತ್ತಿದ್ದಳು. ಅಮ್ಮನಿಗೆ ‘ಮ್ಯಾಕ್ಯುಲರ್ ಡಿಜನರೇಷನ್ ‘ ಎಂಬ ಕಣ್ಣಿನ ತೊಂದರೆ ಇದ್ದುರಿಂದ ಸಮೀಪದ ವಸ್ತಗಳೂ ಸರಿಯಾಗಿ ಕಾಣುತ್ತಿರಲಿಲ್ಲ.
ಬಹಳ ಹಿಂದೆ ದೇವೀ ಉಪಾಸಕರಾದ ನನ್ನ ಗೆಳತಿಯೊಬ್ಬರು ‘ಅಮ್ಮಾ, ಇಲ್ಲಿಯವರೆಗೆ ನೀನು ಹೊರಗೆ ನೋಡಿದ್ದು ಸಾಕು ಇನ್ನು ಒಳಗೆ ನೋಡು, ಎಂದೇ ಆ ತಾಯಿ ನಿಮಗೆ ಆದೇಶ ಕೊಡುತ್ತಿದ್ದಾಳೆ ಚಿಂತಿಸ ಬೇಡಿ” ಎಂದಿದ್ದರು.
ಆದರೆ ಅಮ್ಮನಿಗೆ ಬಾಹ್ಯದ ಚಪಲ ತೀರಿರಲಿಲ್ಲ. ನೂಕು ನುಗ್ಗಲಿನಲ್ಲಿ ಅಮ್ಮನಿಗೆ ಏನಾದರೂ ಆದರೆ ಎಂದು ಅಮ್ಮನ ಕೈಯನ್ನು ಭದ್ರವಾಗಿ ಹಿಡಿದಿದ್ದೆ. ಅನಾಮತ್ತು ಹಿಂದಕ್ಕೆ ತಳ್ಳಿದುದರಿಂದ, ಏನೋ ಆವೇಶ ಬಂದಂತೆ, ನನ್ನ ಕೈ ಕಿತ್ತುಕೊಂಡು ಪ್ರಭಾವೀ ಅಧಿಕಾರಿಗಳು ಕುಳಿತಿದ್ದ ಸಾಲಿಗೆ ಮುನ್ನುಗ್ಗಿ ಗರ್ಭ ಗುಡಿಯ ಮುಂದೆ ನಿಂತುಬಿಟ್ಟಳು. ದೇವಾಲಯಗಳಿಗೆ ಹೋದಾಗಲೆಲ್ಲಾ ಅಮ್ಮ ಹೀಗೆ ಗರ್ಭಗುಡಿಯೊಳಗೆ ನುಗ್ಗಿ, ಅನೇಕ ಸಲ ಕರೆದುಕೊಂಡು ಹೋದವರಿಗೆ ಮುಜುಗರ ಮಾಡುತ್ತಿದ್ದುದು ಅವಳ ಕೊನೆಗಾಲದಲ್ಲಿನ ಸಾಮಾನ್ಯ ಸಂಗತಿಯಾಗಿತ್ತು.
ಅಲ್ಲಿಯೇ ಇದ್ದ ಪೊಲೀಸ್ ಅಮ್ಮನ ಗಲಾಟೆಯನ್ನು ಬಹಳ ಹೊತ್ತಿನಿಂದ ಗಮನಿಸುತ್ತಿದ್ದವನು , ಕೋಪದಿಂದ ಹೋಗಿ ಅಮ್ಮನ ರಟ್ಟೆ ಹಿಡಿದು ದರ ದರ ಎಳೆದು ನನ್ನ ಬಳಿಗೆ ತಂದು ಬಿಟ್ಟ. ನನಗೆ ದುಃಖ, ಅವಮಾನ ತಡೆಯಲಾಗಲಿಲ್ಲ. ಪೋಲೀಸನಿಗೆ ‘ಇಷ್ಟು ವಯಸ್ಸಾದವರ ಮೇಲೆ ಹೀಗೆ ಹಲ್ಲೆ ಮಾಡಿದೆಯಲ್ಲಾ? ಆಪ್ ಅಚ್ಛಾ ನಹೀ ಕಿಯಾ. ಭಗವಾನ್ ದೇಖಲೇಗಾ” ಎಂದು ಕೋಪದಿಂದ ಅವನ ಮೇಲೆ ಕೂಗಾಡಿದೆ. ” ಹೇ ಚುಪ್… ಚುಪ್… ಇನ್ನೊಂದು ಶಬ್ದ ಮಾತನಾಡಿದರೆ ಇಬ್ಬರನ್ನೂ ಒಳಗೆ ಹಾಕಬೇಕಾಗುತ್ತೆ” ಎಂದು ನನ್ನ ಮೇಲೆ ಗದರಿದ.
ಅಷ್ಟು ಹೊತ್ತಿಗೆ ಮಂಗಾಳರತಿ ಶುರುವಾಯಿತು, ಇದಕ್ಕಿದ್ದಂತೆ ಒಮ್ಮೆಲೆ ಢಮರು ,ಗಂಟೆಗಳು ಜೋರಾಗಿ ಬಡಿದುಕೊಳ್ಳ ತೊಡಗಿದವು. ಆ ನಾದಕ್ಕೆ ನನಗೆ ದುಃಖ ಉಮ್ಮಳಿಸಿ ಬಂತು. “ಅಯ್ಯೋ ನೀನೇ ಬಂದು ಕರೆದುಕೊಂಡು ಹೋದರೆ ಆ ಪೋಲೀಸ ಏನು ಮಾಡಲು ಸಾಧ್ಯ” ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಢಮರುಗದ ನಾದ ನನ್ನೊಳಗೂ ಬಾರಿಸ ತೊಡಗಿತ್ತು. ದೇವರನ್ನು ಹೊರಗೆ ಎಂದೂ ಅರಸದ ನಾನು ಅಂದು ಅಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಪಕ್ಕದಲ್ಲಿ ಅಮ್ಮ ಹತಾಶಳಾಗಿ ಕೈಮುಗಿದು ಕುರುಡಿಯಂತೆ ನಿಂತಿದ್ದಳು.
ಆ ಕ್ಷಣಕ್ಕೆ ಏನಾಯಿತೋ ಅದೇ ಪೋಲೀಸ ಬಂದು ಅಮ್ಮನ ಕೈಹಿಡಿದುಕೊಂಡು ಹೋಗಿ ಗರ್ಭಗುಡಿಯ ಎದುರಲ್ಲಿ ಎಲ್ಲರಿಗಿಂತ ಮುಂದೆ ನಿಲ್ಲಿಸಿದ. ಮಂಗಳಾರತಿಯನ್ನು ಕಣ್ಣುತುಂಬಾ ನೋಡಿದ ಖಷಿ ಅವಳ ಮುಖದಲ್ಲಿತ್ತು. ಎಲ್ಲಾ ಮುಗಿದ ಮೇಲೆ, ಅದೇ ಪೋಲೀಸ ಅಮ್ಮನ ಕೈಹಿಡಿದುಕೊಂಡು ಬಂದು ನನ್ನ ಬಳಿ ಬಿಟ್ಟು “ವಯಸ್ಸಾದವರನ್ನು ಹೀಗೆ ನೂಕು ನುಗ್ಗಲಿನಲ್ಲಿ ಕರೆದುಕೊಂಡು ಬರಬೇಡ” ಎಂದು ಲಾಠಿ ತೋರಿಸುತ್ತಾ ನನ್ನನ್ನು ಎಚ್ಚರಿಸಿದ.
ನಮ್ಮ ಚಪ್ಪಲಿ ಕಾಯುವ ನೆಪದಲ್ಲಿ ರಘುನಾಥ್ ದೇವಸ್ಥಾನನದ ಹೊರಗಡೆಯೇ ನಿಂತಿದ್ದರು. ಆಗ ಅಲ್ಲಿದ್ದ ಹೂವಿನಂಗಡಿಯವನು “ಇವರೇಕೆ ಒಳಗೆ ಹೋಗಲಿಲ್ಲ? ಭಗವಾನ್ ಪೆ ನಾರಾಝ್ ಹೈಂ ಕ್ಯಾ?” ಎಂದ. ಅವನಿಗೆ ಉತ್ತರ ಕೊಡಲಿಲ್ಲ. ಅದೇ, ಅಮ್ಮನ ಕೊನೆಯ ತೀರ್ಥಯಾತ್ರೆಯಾಯಿತು. ಅದಾದ ಮೂರೇ ವರ್ಷಗಳಿಗೆ ಅಮ್ಮ ತೀರಿಕೊಂಡಳು.
ಇಂದು ಅವಳ ವರ್ಷಾಂತಿಕ. ಇನ್ನು ಮೂರು ದಿನಗಳು ಅವಳ ನೆನಪಲ್ಲಿ ಕ್ರಿಯಾಕರ್ಮಗಳು ಬೆಂಗಳೂರಿನಲ್ಲಿ ನಡೆಯುತ್ತವೆ. ನನ್ನ ಒಳಗೆ ಅಮ್ಮನ ಸಾವಿರ ನೆನಪುಗಳಿವೆ. ಕೊನೆಗಾಲದಲ್ಲಿ ಅವಳ ಆಸೆಯನ್ನು ಪೂರೈಸಿರುವೆನೆಂಬ ಸಮಾಧಾನವಿದೆ.
- ಗಿರಿಜಾ ಶಾಸ್ತ್ರಿ
