ಬಡಬಡಿಸಿ ರೆಕ್ಕೆಯನು ಓಲಾಡಿ ಬೀಳುತಿರೆ, ಹಿಡಿದು ಕಾಯುತಲಿದ್ದೆ ಧರೆಗೆ ಬೀಳದಲೆ… ಕವಿ ಅಪ್ಪಯ್ಯ ಯು ಅವರ ಲೇಖನಿಯಲ್ಲಿ ಅರಳಿದ ಸುಂದರವನ್ನು ತಪ್ಪದೆ ಮುಂದೆ ಓದಿ…
ಅತ್ತಿತ್ತ ಹುಡುಕಾಡಿ
ಸುತ್ತೆಲ್ಲ ತಡಕಾಡಿ
ಕಡ್ಡಿ ದಾರಗಳ
ಪೋಣಿಸಿದೆ ಓಡಾಡಿ /
ಮೊಟ್ಟೆಇಡಬೇಕೆಂದು
ಕಾವುಕೊಡಬೇಕೆಂದು
ಕಾಡಿನಲಿ ಶತ್ರುಗಳ
ಕಣ್ಣು ತಪ್ಪಿಸಲೆಂದು/
ಮೊಟ್ಟೆ ಇಟ್ಟರೆ ಸಾಕೆ
ಕಾವುಕೊಡುತಿರಬೇಕೆ
ಮೊಟ್ಟೆಕುಡಿಯಲು
ಬರುವ ಶತ್ರು ಇದೆ ಜೋಕೆ /
ತತ್ತಿ ಒಡೆಯಲು ಬೇಕು
ನನ್ನ ಮೈಯ್ಯ ಕಾವು
ನಾನಿಲ್ಲೆ ಮಲಗದಿರೆ
ಮರಿಗಳಿಗೆ ಸಾವು /
ಸತತ ತಪವನು ಮಾಡಿ
ಕಾವುಕೊಟ್ಟೆನು ದಿನವೂ
ಮುದ್ದು ಮರಿಗಳ ಕಂಡು
ಹಿಗ್ಗಿದೆನು ನೋಡಿ /
ದಿನದಿನವು ಆಹಾರ
ಹುಡುಕಿ ನಾ ತಂದಿತ್ತೆ
ಗಡಿಗಡಿಗೆ ಕೊಕ್ಕಿನಲಿ
ನೀರನಿತ್ತೆ /
ಬಡಬಡಿಸಿ ರೆಕ್ಕೆಯನು
ಓಲಾಡಿ ಬೀಳುತಿರೆ
ಹಿಡಿದು ಕಾಯುತಲಿದ್ದೆ
ಧರೆಗೆ ಬೀಳದಲೆ /
ಬಲಿಯುತಿದೆ ರೆಕ್ಕೆಗಳು
ಇಣುಕಿ ನೋಡಿತು ಹೊರಗೆ
ಹಾರಾಡುತಿದ್ದುವೆಲಾ
ಹಲವು ಹಕ್ಕಿಗಳು/
ನಾವ್ಯಾಕೆ ಗೂಡಿನೊಳು
ಬಂದಿಯಾಗಿರಬೇಕು
ಹಾರಾಡಿನೋಡುವೆವು
ಪ್ರಕೃತಿಯನ್ನು/
ಹಾರಾಡೊ ಹುಮ್ಮಸ್ಸು
ಜೋರಾಯಿತವುಗಳಿಗೆ
ಚಕಚಕನೆ ನೆಗೆದವಲಾ
ಗೂಡಿನಿಂದೊರಗೆ/
ಒಂದುದಿನ ಹಾರಿದವು
ಹೊರಳಿ ಗೂಡಿಗೆ ಬಂತು,
ಮರಳಿ ಹಾರಿದವೆಲ್ಲೊ
ಅಮ್ಮನೊಲವನು ಮರೆತು/
ಇಷ್ಟುದಿನ ತಪಗೈದು
ಅನ್ನ-ನೀರನು ಬಿಟ್ಟು
ಜೋಪಾನ ಮಾಡಿದುದು
ಕೈಜಾರಿಹೋಯ್ತು /
ಹಕ್ಕಿಹಾರಿತು ನೋಡು
ಗೂಡಬಿಟ್ಟು
ಇಷ್ಟುದಿನ ಸಾಕಿದಮ್ಮನನು
ದೂರವಿಟ್ಟು /
- ಅಪ್ಪಯ್ಯ ಯು – ಕಾಸರಗೋಡು
