ಉಪೇಂದ್ರ ಅವರ ನಿರ್ದೇಶನದ UI ಸಿನಿಮಾ ಅರ್ಥಾಗೊಲ್ಲ, ಬುದ್ದಿವಂತರಿಗಲ್ಲ..ಈ ಎಲ್ಲ ಪೀಠಿಕೆಗಳು ಸಿನಿಮಾ ನೋಡಿದ್ಮೇಲೆ ಗೊತ್ತಾಗುತ್ತೆ. ಬುದ್ದಿವಂತರು ತಮಗೆ ಏನು ಬೇಕು ಅದನ್ನು ಪಡ್ಕೊಂಡು ಮುಂದೆ ಹೋಗ್ತಿದ್ರೆ, ದಡ್ಡರು ಮಾತ್ರ ಜಾತಿ,ಧರ್ಮ, ರೀಲ್ಸ್ ಅನ್ಕೊಂಡು ತನ್ನ ಸಮಯವನ್ನೆಲ್ಲ ಹಾಳು ಮಾಡ್ಕೊಂಡು ಕೂತಿದ್ದಾನೆ ಅಂತ ಈ ಸಿನಿಮಾದಲ್ಲಿ ಉಪ್ಪಿ ಎಷ್ಟು ಚನ್ನಾಗಿ ತಿವಿದು ಹೇಳ್ತಾರೆ ಅಂದ್ರೆ ಅದನ್ನ ನೋಡಿದ್ಮೇಲೂ ನಮ್ಮಲ್ಲಿ ಯಾವುದೇ ಬದಲಾವಣೆ ಆಗೋಲ್ಲ ,ಅಷ್ಟೇಯಾ….
ಉಪೇಂದ್ರ ಅವರ ಒಂದು ಸಿನಿಮಾದಲ್ಲಿ ಹೇಳ್ತಾರೆ “ಬುದ್ದಿವಂತರಿಗೆ ಮಾತ್ರ”…ಈ ಸಿನಿಮಾ ಅರ್ಥ ಆಗುತ್ತೆ ಅಂತ. ಇನ್ನೂ ಸಿನಿಮಾ UI (universal intelligence) ದಲ್ಲಿ ಹೇಳ್ತಾರೆ “ನೀವು ಬುದ್ದಿವಂತರಾದರೆ ಈಗಲೇ ಚಿತ್ರಮಂದಿರದಿಂದ ಎದ್ದು ಹೋಗಿ”…, ಜೊತೆಗೆ ಪಂಗನಾಮ ಹಾಕಿದ ಚಿತ್ರ ಕೂಡಾ ತೋರಸ್ತಾರೆ.ಇವುಗಳ ಹಿಂದೆ ಉಪೇಂದ್ರ ಅವರ ಉದ್ದೇಶವೇನು?…ಪ್ರೇಕ್ಷಕರು ತಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಪರೀಕ್ಷಿಸಲು ಹೀಗೆಲ್ಲಾ ಪೀಠಿಕೆ ಹಾಕಿದ್ರಾ ?… ಅದು ಗೊತ್ತಿಲ್ಲ… ಆದ್ರೆ ನನ್ನ ದಡ್ಡಿ ಎಂದರೂ ಪರವಾಗಿಲ್ಲ UI ಸಿನಿಮಾವನ್ನು ಗಟ್ಟಿಯಾಗಿ ಕೂತು ಸಿನಿಮಾವನ್ನು ಪೂರ್ತಿಯಾಗಿ ನೋಡಿಯೇ ಬಂದೆ.
ಚಿತ್ರಮಂದಿರದಿಂದ ಹೊರಗೆ ಬಂದ ಮೇಲೆ, ಸಿನಿಮಾ ಅರ್ಥ ಆಯ್ತಾ?… ಅರ್ಥ ಆಗಿಲ್ವಾ?…ಅನ್ನೋ ಹಲವಾರು ಗೊಂದಲ, ಪ್ರಶ್ನೆಗಳು ಸಾಕಷ್ಟು ಜನರ ಬಾಯಿಂದ ಬಂತು. ಈ ಸಿನಿಮಾ ಅರ್ಥ ಆಗೋಲ್ಲ ಅನ್ನೋದು ಸುಳ್ಳು.ಆದರೆ ಅರ್ಥವಾಗಿಲ್ಲದಂತೆ ನಟಿಸಬಹುದು ಅಷ್ಟೇ. ಯಾಕೆಂದರೆ ಉಪೇಂದ್ರ ಅವರ ಆಲೋಚನೆ ನೇರವಾಗಿದೆ. ಇಂದಿನ ಕೊಳಕು ರಾಜಕೀಯ, ವೈದ್ಯಕೀಯ ಮಾಫಿಯಾ, ಮೈನಿಂಗ್ ಮಾಫಿಯಾ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಜನರಿಗೆ ಉತ್ತಮ ಸಂದೇಶವನ್ನು ಕೊಡುವ ಉದ್ದೇಶದಿಂದ ಹೆಣೆದಂತಹ ಉತ್ತಮ ಸಿನಿಮಾ UI.
ಸಿನಿಮಾ ಆಡೆಮ್ ಮತ್ತು ಇವ ಬಿಳಿಯರ ಪ್ರೀತಿಯಿಂದ ಶುರುವಾಗಿ ನಮ್ಮಲ್ಲಿನ ಅತಿಯಾದ ಆಸೆಯಿಂದ ಕೊನೆಗೆ ಪ್ರಕೃತಿ ಮಾತೆಯನ್ನೇ ಅತ್ಯಾಚಾರ ಮಾಡುವಷ್ಟು ಕ್ರೂರ ಮನಸ್ಸುಗಳ ಮಧ್ಯೆ ನಾವು ಬದುಕುತ್ತಿದ್ದೇವೆ ಎಂದಾಗ ಇಲ್ಲಿ ನಗಬೇಕು,ಅಳಬೇಕೋ ಅಥವಾ ಚಪ್ಪಾಳೆ ಹೊಡೆಯಬೇಕೋ ಗೊತ್ತಾಗುವುದಿಲ್ಲ, ಗೊಂದಲ ಆಗೋದು ಇಲ್ಲಿ, ಸಿನಿಮಾ ನೋಡಿದ ಮೇಲಲ್ಲ .

ಬಸವಣ್ಣ, ಬುದ್ಧ ಹೀಗೆ ದೊಡ್ಡ ಮಹಾನ್ ವ್ಯಕ್ತಿಗಳು ಈ ಭೂಮಿ ಮೇಲೆ ಹುಟ್ಟಿ ಸಮಾಜದ ಒಳತಿಗಾಗಿ ಸಾಕಷ್ಟು ಉಪದೇಶಗಳನ್ನು ಮಾಡಿದರು, ಆದರೆ ನಮ್ಮಲ್ಲಿ ಯಾರೇ ಹುಟ್ಟಿ ಬಂದರು ಜಾತಿ, ಧರ್ಮದ ಹೋರಾಟಗಳು ನಿರ್ಮೂಲನೆ ಆಗಲೂ ಸಾಧ್ಯವೇ ಇಲ್ಲಾ. ಇದು ತಪ್ಪು ಎಂದವನ ಮೇಲೆ ಕಲ್ಲೇಟು ಬೀಳುವುದು ಖಚಿತ. ಹೀಗೆ ಹಲವಾರು ಕರಾಳ ಮುಖಗಳ ಪರಿಚಯ ಮಾಡುತ್ತಾ, ಕೊನೆಗೆ ನಮ್ಮ ನೆಮ್ಮದಿ, ಪ್ರೀತಿಯ ಬದುಕನ್ನು ಅನವಶ್ಯಕವಾಗಿ ಮೈಮೇಲೆ ಹಾಕಿಕೊಂಡು ಸೋಶಿಯಲ್ ಮೀಡಿಯಾ ಅದು ಇದು ಅಂತೆಲ್ಲಾ ಕಳೆದುಕೊಳ್ಳುತ್ತಿದ್ದೇವೆ, ಕೊನೆಗೆ ಈ ಭೂಮಿಯ ಮೇಲೆ ಉಳಿಯುವುದು ಮನುಷ್ಯ ಮನುಷ್ಯರನ್ನೇ ಕಿತ್ತು ತಿನ್ನುವಷ್ಟು ಆಕ್ರೋಶ, ಕ್ರೋಧ ಮಾತ್ರ.
ಉಪ್ಪಿ ಅವರು ಸಿನಿಮಾದ ಮೂಲಕ ಅಥವಾ ರಾಜಕೀಯ ಮೂಲಕ ಸಮಾಜದ ಅಂಕುಡೊಂಕನ್ನು ತಿದ್ದಲು ಹೊರಟ ಧೀಮಂತ ನಟ ಎಂದರೆ ತಪ್ಪಾಗಲಾರದು. ಮೂರ್ಖ ಜನರಿಗೆ ಬುದ್ದಿ ಹೇಳಲು ಹೊರಟ ಉಪ್ಪಿಯವರಿಗೆ ಇದರಿಂದ ತೊಂದರೆಯಾಗದಿರಲಿ ಎನ್ನುವುದೇ ನನ್ನ ಕಾಳಜಿ.
ಸಿನಿಮಾದ ಪರಿಕಲ್ಪನೆ, ಉಡುಪು ವಿನ್ಯಾಸ, ಬೆಳಕು, ಕತೆ, ನಿರ್ದೇಶನ ನೋಡಿದಾಗ ಅನಿಸಿದ್ದು ಆ ಪುಟ್ಟ ತಲೆ ಸಾಮಾನ್ಯದಲ್ಲ. ಉಪ್ಪಿಯವರು ಎಷ್ಟೋವರ್ಷದ ನಂತರ ಅದೇ ಗಮತ್, ಅದೇ ಆರ್ಭಟದೊಂದಿಗೆ ಮತ್ತೆ ವಾಪಾಸ್ ಆಗಿದ್ದಾರೆ… ಉಪ್ಪಿ ಅವರು ಪಕ್ಕಾ ಮಾಸ್ಟರ್ ಪೀಸ್… ಅವರಂತಹ ಕ್ರಿಯಾಶೀಲತೆ ಇರುವ ಇನ್ನೊಬ್ಬ ನಿರ್ದೇಶಕ ಬರಲು ಸಾಧ್ಯವೇ ಇಲ್ಲಾ. ಪ್ಯಾನ್ ಇಂಡಿಯಾ ಭರಾಟೆಯ ಮಧ್ಯೆ UI ಗಮನ ಸೆಳೆಯುತ್ತಿದೆ ಎಂದರೆ ಅದು ಸಿನಿಮಾದ ವಿಭಿನ್ನ ಕತೆ,ಕ್ರಿಯಾಶೀಲತೆ.
ಸಿನಿಮಾದ ಮೇಲೆ ನನ್ನ ದೃಷ್ಠಿ ಫೋಕಸ್ ಆಗಿದಷ್ಟೇ ಅಲ್ಲ, ಐ ಲೈಕ್ ಉಪ್ಪಿ….ಐ ಲೈಕ್ ಇಟ್… ಐ ಲೈಕ್ ಇಟ್…
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
