ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ವಿಜಯಶ್ರೀ ಹಾಲಾಡಿ ಅವರ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಕೃತಿಯು ಗ್ರಾಮೀಣ ಬಡ ಜನರ ಬದುಕಿನ ಇಂದಿನ ಸಾಮಾಜಿಕ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕೃತಿಯ ಕುರಿತು ಶ್ರೀಪಾದ ಹೆಗಡೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಉಮ್ಮಲ್ತಿ ಗುಡಿಯ ಸಾಕ್ಷಿ
ಲೇಖಕರು : ವಿಜಯಶ್ರೀ ಹಾಲಾಡಿ
ಪ್ರಕಾರ : ಕತೆಗಳು
ವಿಜಯಶ್ರೀ ಹಾಲಾಡಿ ಪ್ರಸ್ತುತದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದ ಮೌಲಿಕ ಬರಹಗಾರ್ತಿ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರೂ ಹೌದು. ಫೇಸಬುಕ್ಕಿನಲ್ಲಿ ಅವರ ಅನೇಕ ಕವಿತೆಗಳನ್ನೂ ಮತ್ತು ಕೆಲವು ಬರಹಗಳನ್ನೂ ಬಿಡಿಯಾಗಿ ಓದಿ ಮೆಚ್ಚಿಕೊಂಡವ ನಾನು. “ಉಮ್ಮಲ್ತಿ ಗುಡಿಯ ಸಾಕ್ಷಿ” ಎಂಬ ಇತೀಚೆಗೆ ಪ್ರಕಟವಾದ ಅವರ ಮೊದಲ ಕತಾ ಸಂಕಲನವನ್ನು ಪುಸ್ತಕ ರೂಪದಲ್ಲಿ ಓದುವ ಅವಕಾಶ ದೊರೆಯಿತು. ಮಳೆ ಕೋಂಗಿಲ ಎಂಬ ಅವರದ್ದೇ ಪ್ರಕಾಶನ ಸಂಸ್ಥೆಯಿಂದ ಇತ್ತೀಚೆಗಷ್ಟೆ ಇದು ಪ್ರಕಟವಾಗಿದೆ.
ಕುಂದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ಬದುಕಿನ ಒಳತೋಟಿಯನ್ನು ಬಹುತೇಕವಾಗಿ ಶಿವರಾಮ ಕಾರಂತರ ಕಾದಂಬರಿಗಳ ಲೋಕದಿಂದ ಮತ್ತು ವೈದೇಹಿಯವರ ಕತೆಗಳಿಂದ ಈ ವರೆಗೆ ಸೃಜನಶೀಲ ಸಾಹಿತ್ಯದ ರೂಪದಲ್ಲಿ ನಾವು ಗ್ರಹಿಸಿದ್ದೇವೆ. ವಿಜಯಶ್ರೀಯವರ ಈ ಕಥಾ ಸಂಕಲನ ಅದರ ಮುಂದುವರಿಕೆಯಂತೆ ಕಂಡರೂ ಸಹ ಅದು ವಿಭಿನ್ನವಾಗಿದೆ. ಅವರು ಕಟ್ಟಿ ಕೊಡುವ ಲೋಕ ದುಡಿದುಣ್ಣುವ ಕೃಷಿ ಕಾರ್ಮಿಕರ ಬದುಕಿನ ಲೋಕ. ಕಾರಂತರ ಮತ್ತು ವೈದೇಹಿ ಸಾಹಿತ್ಯದಲ್ಲಿ ಕೇವಲ ಪೋಷಕ ಪಾತ್ರಗಳಾಗಿ ಅಲ್ಲಿಲ್ಲಿ ಇಂಥವರು ಬಂದಿರ ಬಹುದಾದರೂ ಅವರಿಬ್ಬರೂ ತೆರೆದಿಡುವ ಲೋಕ ಮೇಲು ಜಾತಿಯ ಬಡ ಮತ್ತು ಮಧ್ಯ ವರ್ಗದ ಬದುಕು. ಆದರೆ ವಿಜಯಶ್ರೀಯವರ ಕತೆಗಳಲ್ಲಿ ಈ ಜನ ಪೋಷಕ ಪಾತ್ರಧಾರಿಗಳು ಮತ್ತು ಕೆಳ ಜಾತಿಯ ಮತ್ತು ಬಡತನವನ್ನೇ ಹಾಸಿ ಹೊದೆವ ಜನ ಇಲ್ಲಿನ ಕತೆಗಳ ಜೀವ ಧಾರಿಗಳು. ಬಡತನ ಈ ಎಲ್ಲ ಕತೆಗಳ ಹಿನ್ನೆಲೆಯಾದರೂ ಒಬ್ಬ ಚಿತ್ರ ಕಲಾವಿದ ಭಿತ್ತಿಯನ್ನೇ ಆಧಾರವಾಗಿರಿಸಿ ಕೊಂಡು ರಚಿಸಿದ ಕೃತಿಗಳು ಭಿತ್ತಿಯನ್ನು ಮರೆಸಿ ಚಿತ್ರವನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಇಲ್ಲಿನ ಕತೆಗಳು ಅರಳಿವೆ. ಅಲ್ಲದೆ ಇಲ್ಲಿನ ಶ್ರದ್ಧಾ ಕೇಂದ್ರಗಳೂ ಪೂರ್ತಿಯಾಗಿ ಬೇರೆಯೆ.

ಕತಾ ಸಂಕಲನದ ಹೆಸರೇ ಸೂಚಿಸುವಂತೆ ದೈವ, ಭೂತಗಳು ಇಲ್ಲಿನ ಪಾತ್ರಗಳ ಮನೋ ಲೋಕವನ್ನು ಆವರಿಸಿವೆ. ವೈದಿಕ ಧಾರೆಯ ದೇವರುಗಳು ಈ ಲೋಕದ ಗಡಿಯ ಹೊರಗಿನವು. ಅವುಗಳ ಪ್ರಸ್ತಾಪವೇ ಬರುವುದಿಲ್ಲ ಹಾಗಾಗಿ ಇಲ್ಲಿನ ಸಾಂಸ್ಕೃತಿಕ ಲೋಕ ಕಾರಂತರದ್ದಕ್ಕಿಂತ ಮತ್ತು ವೈದೇಹಿಯವರದ್ದಕ್ಕಿಂತ ಪೂರ್ತಿಯಾಗಿ ಭಿನ್ನವಾಗಿದೆ. ಸರ್ವೇ ಸಾಮಾನ್ಯವಾದ ಬಡತನ ಇವರಿಬ್ಬರ ಕಥಾ ಲೋಕದಲ್ಲಿ ಕಾಣಿಸಿ ಕೊಂಡಿದ್ದರೂ ವಿಜಯಶ್ರೀಯವರ ಕಥಾನಕದಲ್ಲಿ ಪಾತ್ರಗಳ ಬಡತನದ ವಿರುದ್ಧದ ನಿರಂತರವಾದ ಹೋರಾಟ ಕೊನೆಗೊಳ್ಳುವುದೇ ಇಲ್ಲ. ಬಡತನವನ್ನು ಅನುಭವಿಸುತ್ತಲೇ ತಮ್ಮ ಮುಂದಿನ ಪೀಳಿಗೆಗೆ ಅದರ ಝಳ ಕಡಿಮೆಯಾಗುವ ದಿಸೆಯಲ್ಲಿ ಇಲ್ಲಿನ ಎಲ್ಲ ಪಾತ್ರಗಳ ನಡಿಗೆ. ಹಾಗಾಗಿ ಬಡತನ ಒಂದು ಸಾಮಾನ್ಯ ಸಂಗತಿಯಾಗಿ ಗೋಚರಿಸುತ್ತದೆ ಮತ್ತು ಅದನ್ನೇ ಕ್ಯಾನ್ವಾಸ್ ಆಗಿ ಬಳಸಿಕೊಂಡು ಮನುಷ್ಯ ಸಂಬಂಧಗಳ ವೈವಿಧ್ಯಮಯ ಕತೆಗಳು ತೆರೆದು ಕೊಳ್ಳುತ್ತವೆ.
ಇಲ್ಲಿನ ಎಲ್ಲ ಕತೆಗಳೂ ಹೆಣ್ಣಿನ ಕಣ್ಣಿನಿಂದ ಗ್ರಹಿಸಿ ಪರಿಭಾವಿಸಿದವುಗಳು; ಕೆಮ್ಮಣ್ಣು ಕತೆಯ ಹೊರತಾಗಿ. ಇಲ್ಲಿನ ಎಲ್ಲ ಹೆಣ್ಣುಗಳೂ ಗಟ್ಟಿಗಿತ್ತಿಯರು ಮತ್ತು ದುಡಿದು ಕುಟುಂಬವನ್ನು ಪೊರೆದು ಪೋಷಿಸುವವರು. ಬಹುತೇಕವಾಗಿ ಎಲ್ಲಾ ಕಥಾ ನಾಯಕಿಯರ ಗಂಡಂದಿರು ಹಪ್ಪು ಹಾಳು, ಯಾವ ಪ್ರಯೋಜನಕ್ಕೂ ಬಾರದವರು, ಕಡುಕರು ಮತ್ತು ಪತ್ನಿ ಹಿಂಸಕರು. ಒಮ್ಮೊಮ್ಮೆ ಈ ನೋಟ ಏಕ ಪಕ್ಷೀಯ ಅನ್ನಿಸುವಷ್ಟು ಅತಿಯಾದರೂ ಗ್ರಾಮೀಣ ಬಡ ಜನರ ಬದುಕಿನ ಇಂದಿನ ಸಾಮಾಜಿಕ ವಾಸ್ತವಕ್ಕೆ ಹಿಡಿದ ಕನ್ನಡಿಯೂ ಹೌದು ಎನಿಸುತ್ತದೆ ಕೂಡ. ಹೀಗಿದ್ದರೂ ಇಲ್ಲಿನ ಗಟ್ಟಿ ಗಿತ್ತಿಯರಿಗೆ ಹೊರಗಿನ ಗಂಡಸರ ಕೆಟ್ಟ ನೋಟದಿಂದ ಪಾರಾಗಲಿಕ್ಕೆ ಗಂಡ ಎನ್ನುವ ಪ್ರಾಣಿಯೊಬ್ಬ ಬೇಕೇ ಬೇಕು. ಗಂಡನಿದ್ದೂ ಅತ್ಯಾಚಾರಕ್ಕೊಳಗಾಗುವ ಅಪಾಯ ತಪ್ಪಿಲ್ಲದಿದ್ದರೂ, ಗಂಡನಿಲ್ಲದ ಪ್ರಾಯದ ಹೆಂಗಸಿನ ಪರಿಸ್ಥಿತಿ ಹೇಳ ತೀರದು. ಈ ಸಾಮಾಜಿಕ ವಾಸ್ತವದ ಕಟು ಸತ್ಯ ಈ ಕಥಾನಕದ ಉದ್ದಕ್ಕೂ ಹರಡಿ ಕೊಂಡಿದೆ.
ಅತ್ಯಾಚಾರಕ್ಕೊಳಗಾದ ಪ್ರಸ್ತಾಪ ಬರದ ಯಾವ ಕತೆಯೂ ಹದಿನಾಲ್ಕು ಕತೆಗಳ ಈ ಸಂಗ್ರಹದಲ್ಲಿ ಇಲ್ಲ. ಇಷ್ಟಿದ್ದೂ ಇಲ್ಲಿನ ಹೆಣ್ಣು ಪಾತ್ರಗಳ ತಾಯಿ ಕರುಳು ಎಲ್ಲರ ಹಿತಕ್ಕಾಗಿ ಮಿಡಿಯುತ್ತವೆ. ಹಾಗಾಗಿ ಮಾಮೂಲಿ ಪುರುಷ ದ್ವೇಷಿ ಸ್ತ್ರೀವಾದಿ ಕಥಾನಕವಾಗುವ ಅಪಾಯದಿಂದ ಇಲ್ಲಿನ ರಚನೆಗಳು ತಪ್ಪಿಸಿಕೊಂಡಿವೆ ಮಾತ್ರವಲ್ಲ ಅಪ್ಪಟ ಸೃಜನಶೀಲ ಕಲಾಕೃತಿಗಳಾಗಿ ಅರಳಿ ನಿಂತಿವೆ.

ಒಂದೇ ಪ್ರಾದೇಶಿಕ ಹಿನ್ನೆಲೆಯಲ್ಲಿ, ಒಂದೇ ರೀತಿಯ ಬಡತನದ ಭಿತ್ತಿಯಲ್ಲಿ ಏಕತಾನತೆ ಬರದಂತೆ ವೈವಿಧ್ಯಮಯ ವಸ್ತುಗಳನ್ನು ಇಟ್ಟುಕೊಂಡು ಇಲ್ಲಿನ ಕತೆಗಳು ರೂಪ ತಾಳಿವೆ. ಇಲ್ಲಿನ ಎಲ್ಲ ಕತೆಗಳಿಗೂ ನ್ಯಾಯ ಒದಗಿಸ ಬೇಕೆಂದರೆ ಎಲ್ಲವೂ ಉತ್ತಮ ರಚನೆಗಳೂ ಎಂದು ಹೇಳ ಬೇಕಾಗುತ್ತದೆ. ಉಮ್ಮಲ್ತಿ ಗುಡಿಯ ಸಾಕ್ಷಿ ಸ್ಪ್ಲಿಟ್ ಪರ್ಸನಾಲಿಟಿ ಹೊಂದಿದ ಬಾಗಿಯತ್ತೆಯದು ಒಂದು ಅಪರೂಪದ ವ್ಯಕ್ತಿತ್ವ; ಕಾಡುವಂಥದ್ದು. ಗರಡಿಬೆಟ್ಟಿನ ದೊಂದಿ ಬೆಳಕಲ್ಲಿ ಒಂದು ಅಪೂರ್ವವಾದ ಕಲಾಕೃತಿ ಮತ್ತು ಜ್ವಲಿಸುತ್ತಿರುವ ಕಂಟೆಂಪರಿ ಸಮಸ್ಯೆಯನ್ನು ವಸ್ತುವಾಗುಳ್ಳದ್ದು. ಮೊಬೈಲಿನಲ್ಲಿ ಹೆಣ್ಣು ಮಕ್ಕಳ ನಗ್ನ, ಅರೆ ನಗ್ನ ಚಿತ್ರ ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿ ಅವರ ಮಾನಹರಣ ಮಾಡುವ ವಿಷಯಕ್ಕೆ ಸಂಬಂಧಿಸಿದ್ದು. ಇದಕ್ಕೆ ಗಂಡಾಳ್ವಿಕೆಯ ಸಮಾಜ ಸಾಮಾಜಿಕವಾಗಿ ಮತ್ತು ಕಾನೂನಾತ್ಮಕವಾಗಿ ಸ್ಪಂದಿಸದಿದ್ದಾಗ ಸ್ವಾಭಿಮಾನಿ ಹೆಂಗಸರ ಗುಂಪೊಂದು ಕಂಡು ಕೊಳ್ಳುವ ಪರಿಹಾರ ಬಹು ದಿಟ್ಟತನದ್ದು ಮತ್ತು ಕ್ರಾಂತಿಕಾರಿಯಾದದ್ದು. ತುಂಬ ನಾಟಕೀಯವಾಗಿ ಮುಗಿಯುವ ಈ ಕತೆ ನವ ನವದುರ್ಗಿಯರನ್ನು ಸೃಷ್ಟಿಸುವ ಪರಿ ಅನನ್ಯವಾದದ್ದು ಮತ್ತು ಧ್ವನಿ ಪೂರ್ಣವಾದದ್ದು. ಇನ್ನು ಬುತ್ಯನ ಹೆಂಡತಿ ಬುಡ್ಡಿಬಾಯಿ ಪಡುವ ಸಂಕಟ ಮನಮಿಡಿಯುಂಥದ್ದು. ಕತೆ ಓದುತ್ತಿರುವಾಗ ಕಳೆದು ಹೋದ ಬುತ್ಯ ವಾಪಸು ಬಂದು ಕತೆ ಸುಖಾಂತ್ಯವಾಗಲಿ ಎಂದು ಮನ ಬಯಸದೇ ಇರದು, ಅಷ್ಟು ಮಾರ್ಮಿಕವಾಗಿ ಕತೆಯ ನಿರೂಪಣೆ ಇದೆ. ಹೀಗೆಯೆ ಇನ್ನೊಂದು ಮನೆ ಮಿಡಿವ ಕತೆ ಪಾರ್ತಿಚಿಕ್ಕಿಯದು. ದೇವಮ್ಮಕ್ಕ, ಮಾಣಿಕಿಬಾಯಿರದೂ ಮರೆಯಲಾರದ ವ್ಯಕ್ತಿತ್ವ. ಗೆಜ್ಜೆ ಕತೆ ಪುಟ್ಟದಾದರೂ ಕಲಾವಂತರ ಮನೆತನದಿಂದ ಬಂದ ಎರಡು ತಲೆ ಮಾರಿನ ಹೆಂಗಸರು ಕಳಂಕವನ್ನು ಕಳಚಿಕೊಳ್ಳುವ ಕತೆ. ಕೊರೊನಾ ಕಾಲದ ಮಾಹವಲಸೆಯಲ್ಲಿ ಬಸುರಿ ಹೆಣ್ಣು ಮಗಳೊಬ್ಬಳಿಗೆ ಒದಗಿ ಬಂದ ದಾರುಣ ಸನ್ನಿವೇಶವನ್ನು ಚಿತ್ರಿಸುವ ಮಹಾಪ್ರಸ್ಥಾನ ಕತೆಯೊಂದಿಗೆ ಪುಸ್ತಕ ಮುಗಿಯುತ್ತದೆ.
ಇಲ್ಲಿನ ಭಾಷೆ ಕಾವ್ಯಮಯವಾಗಿದೆ ಅಂದರೆ ಗದ್ಯ ಕಾವ್ಯದಂತಿದೆ. ವಿಪುಲವಾಗಿ ಬಳಕೆಯಾಗಿರುವ ಪ್ರಾದೇಶಿಕ ನುಡಿಗಟ್ಟುಗಳು, ಗಾದೆ ಮಾತುಗಳು ಭಾಷೆಯ ಸತ್ವವನ್ನು ಹೆಚ್ಚಿಸಿವೆ. ಎಲ್ಲಿಯೂ ಕಂಗ್ಲೀಶ್ ಬಳಸದ ಕನ್ನಡದ ಅಪ್ಪಟ ಆಡು ಮಾತಿನ ನುಡಿಗಟ್ಟಿನ ಸೊಗಸನ್ನು ನಾವು ಇಲ್ಲಿನ ಪ್ರತಿ ಪುಟದಲ್ಲಿಯೂ ಕಾಣ ಬಹುದಾಗಿದೆ. ಸಂಭಾಷಣೆಗೆ ಸಂಪೂರ್ಣವಾಗಿ ಕುಂದಾಪ್ರ ಭಾಷೆಯನ್ನು ಬಳಸಿದ್ದು ಕನ್ನಡ ಭಾಷೆಯ ವೈವಿಧ್ಯಮಯ ನುಡಿಗಟ್ಟಿನ ಸೊಗಸನ್ನು ಹೆಚ್ಚಿಸಿದೆ. ಮರಳಿ ಮಣ್ಣಿಗೆಯ ಪಾರೋತಿ, ಸರಸೋತಿ, ನಾಗವೇಣಿಯರಂತೆ, ವೈದೇಹಿಯವರ ಮರೆಯಲಾಗದ ಅಮ್ಮಚ್ಚಿ ಮತ್ತು ಇತರ ಪಾತ್ರಗಳಂತೆ ಅಮರರಾಗುವ ಪಾರ್ತಿಚಿಕ್ಕಿ, ಬಾಗಿಅತ್ತೆ, ಮಾಣಿಕಿಬಾಯಿ, ಬುಡ್ದಿಬಾಯಿಯವರನ್ನು ವಿಜಯಶ್ರೀಯವರು ಈ ಕತಾ ಸಂಕನದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಪುಸ್ತಕ ಕಳಿಸಿಕೊಟ್ಟು ಇಷ್ಟು ಒಳ್ಳೇಯ ಕತೆಗಳನ್ನು ಓದಿಸಿದ್ದಕ್ಕೆ ವಿಜಯಶ್ರೀ ನಿಮಗೆ ಧನ್ಯವಾದಗಳು.
ವಿಜಯಶ್ರೀ ಹಾಲಾಡಿಯವರ ಉಮ್ಮಲ್ತಿ ಗುಡಿಯ ಸಾಕ್ಷಿ ಕುರಿತು ಹಿಂದಿನ ಕೃತಿ ಪರಿಚಯ :
- ಶ್ರೀಪಾದ ಹೆಗಡೆ
