ವಿಪರೀತ ಖ್ಯಾತಿ , ಜನಪ್ರಿಯತೆ ಗಳಿಸಿದ ಆಟಗಾರ ಅದನ್ನು ಉಳಿಸಿಕೊಳ್ಳುವುದರಲ್ಲಿ ವಿಫಲನಾಗಿ ಬಿಟ್ಟರೆ ಆತನನ್ನು ಕಡೆಗಣಿಸಿ ಕಮರಿಗೆ ತಳ್ಳಿ ಆತನ ಆತ್ಮವಿಶ್ವಾಸ ಕುಂದುವ ಹಾಗೆ ಮಾಡುವುದೂ ಇದೇ ಜಾಲತಾಣಗಳು, ಮಾಧ್ಯಮಗಳು, ಟ್ರೋಲಿಗರು ಎಂಬುದನ್ನು ಸೂರ್ಯವಂಶಿಮರೆಯಬಾರದು. ಲೇಖಕ ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
೧೪ ರ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿಯ ಶತಕದ ಸಾಧನೆ ಆತನ ಕಿರಿವಯಸ್ಸಿನ ಕಾರಣಕ್ಕಾಗಿ ಮಾತ್ರವಲ್ಲದೆ ಆತನ ಆತ್ಮವಿಶ್ವಾಸದ ನಿರ್ಭಿಡೆಯ ಹೊಡಿ ಬಡಿ ಆಟದ ಸೊಗಸಿನಿಂದಲೂ ಆಗಿದೆ. ಎಲ್ಲರ ಮನ ಗೆದ್ದಿರುವ ಪ್ರೌಢಶಾಲಾ ವಿದ್ಯಾರ್ಥಿ ಕ್ರಿಕೆಟ್ ಅಂಕಣದಲ್ಲಿ ವಿಜೃಂಭಿಸಿದ್ದಾನೆ. ರಾತ್ರೋರಾತ್ರಿ ರಾಯಲ್ ಆಗಿ ಮಿಂಚಿದ್ದಾನೆ. ೨೦೦+ ರನ್ನುಗಳನ್ನು ಬಲಾಢ್ಯ ತಂಡದ ವಿರುದ್ಧ ಸೆಣಸುವ ಕೆಚ್ಚು, ವೀರಾವೇಶದ ಕಿಚ್ಚು ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿದೆ. ೨೦- ೨೦ ಓವರ್ ಗಳ ಐ.ಪಿ.ಎಲ್ ನಲ್ಲಿ ೨೦೦ + ರನ್ ಗಳ ಚೇಸಿಂಗ್ ನಲ್ಲಿ ಈತನ ಪರಾಕ್ರಮ ನಿಜಕ್ಕೂ ಮುಕ್ತಕಂಠ ದಿಂದ ಪ್ರಶಂಸೆಗೆ ಅರ್ಹ. ಕ್ರಿಕೆಟ್ ಅಂಕಣದಲ್ಲಿ ಈ ಹುಡುಗ ಬಹಳ ಆಡಿದ ಅನುಭವವಿದ್ದರೂ ಸಹ ೨೦-೨೦, ಐ.ಪಿ. ಎಲ್ ನಲ್ಲಿ ಈತನ ಅನುಭವ ಎಳೆತನದ್ದು. ವೀಲ್ ಚೇರ್ ನಿಂದ ಎದ್ದು ರಾಹುಲ್ ದ್ರಾವಿಡ್ ಅವರಂಥ ಆಟಗಾರ ಸಂಭ್ರಮಿಸುವಂತಹ ಆಟ, ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು, ಮಾಲೀಕರು ಜೊತೆಗೆ ವೈಭವ್ ಸೂರ್ಯ ವಂಶಿಯ ತಾಯಿ ತಂದೆಗಳ ಕಣ್ಣುಗಳಲ್ಲಿ ಹರಿದಾಡಿದ ಮಿಂಚು ಸಹಜವಾದದ್ದು. ತನ್ನ ಈ ಸಾಧನೆಗೆ ತಾಯಿ ತಂದೆಯ ತ್ಯಾಗವೇ ಕಾರಣ ಎಂದಿದ್ದಾನೆ ವೈಭವ್.
ಸೂರ್ಯವಂಶಿಯು ತಾಯಿ ತನ್ನ ಕ್ರೀಡಾ ಜೀವನದ ಪ್ರಗತಿಗಾಗಿ ಕೇವಲ ೩ ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಿದ್ದ ರು ಎಂಬ ಅಂಶ ನಿಜವಾಗಿ ಸೂರ್ಯವಂಶಿಯ ಸಾಧನೆ ಕೀರ್ತಿಯ ಹಿಂದಿನ ಶಕ್ತಿಯನ್ನು ಬಯಲು ಮಾಡಿದೆ. ಕೆಲವರು ವೈಭವ್ ಸೂರ್ಯವಂಶಿಯ ಪ್ರತಿಭೆ, ಬ್ಯಾಟ್ ಬೀಸುವ ಎದೆಗಾರಿಕೆಯನ್ನು ಮೊದಲು ಗುರುತಿಸಿದ್ದು ರಾಹುಲ್ ದ್ರಾವಿಡ್ ಎಂದೂ ಇನ್ನೂ ಕೆಲವರು ಇಲ್ಲ ,ಅದರ ಶ್ರೇಯ ವಿ.ವಿ.ಎಸ್.ಲಕ್ಷ್ಮಣ್ ಅವರಿಗೆ ಸಲ್ಲಬೇಕು ಎಂದು ಅಂದವರಿದ್ದಾರೆ.ಇಲ್ಲಿನ ಪ್ರಶ್ನೆ ಇದಲ್ಲವೇ ಅಲ್ಲ. ವೈಭವ್ ಸೂರ್ಯವಂಶಿಯ ಕ್ರಿಕೆಟ್ ಬದುಕಿನ ಅದ್ಭುತ ಇನ್ನಿಂಗ್ಸ್ ನ ಝಲಕ್ ಆತ ಹಿಂದಿನ ಪಂದ್ಯದಲ್ಲೂ ತೋರಿಸಿ, ಔಟಾಗಿ ಪೆವಿಲಿಯನ್ ಗೆ ತೆರಳುವಾಗ ಕಣ್ಣೀರು ತುಂಬಿಕೊಂಡು ಹೋದ. ಇಲ್ಲಿ ದ್ರಾವಿಡ್, ಲಕ್ಷ್ಮಣ್ , ಸೂರ್ಯವಂಶಿಯ ಕೋಚ್ ಯಾರೇ ಆತನನ್ನು ಮುನ್ನೆಲೆಗೆ, ಕ್ರಿಕೆಟ್ ಜಗತ್ತಿಗೆ ಪರಿಚಯಿಸಿರಲಿ ಮುಖ್ಯವಾಗುವುದು ಆತ ಅದನ್ನು ಸದುಪಯೋಗ ಪಡಿಸಿಕೊಂಡಿದ್ದಕ್ಕೆ. ಏಕೆಂದರೆ ಒಂದೇ ಒಂದು ಕ್ಷಣ ಎರಡು ಮೂರು ಪಂದ್ಯಗಳಲ್ಲಿ ಸೂರ್ಯವಂಶಿ ವಿಫಲ ಆಗಿದಿದ್ದರೆ ಇವತ್ತಿನ ವೇಗದ ಜೀವನದಲ್ಲಿ ಈತನೂ ಪ್ರವಾಹದೋಪಾದಿಯ ಈಜು ಸಾಗರದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ.ಆದರೆ ತನ್ನ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ತಾನು ಇವತ್ತು ಚೆನ್ನಾಗಿ ಆಟ ಆಡುತ್ತೇನೆ ಎಂಬ ಧೈರ್ಯದ ಮಾತುಗಳನ್ನು ಹೇಳಿದನಲ್ಲ ಅದೇ ಮೊದಲ ಗೆಲುವು.ಅದೂ ದ್ರಾವಿಡ್ ತರಹದ ಶ್ರೇಷ್ಠ ಬ್ಯಾಟ್ಸ್ ಮನ್ ಮುಂದೆ ಹೀಗೆ ಹೇಳುವುದಕ್ಕೆ ಬೆಟ್ಟದಷ್ಟು ಛಲ , ಸ್ಥೈರ್ಯ ಇರಬೇಕು.

ಫೋಟೋ ಕೃಪೆ : ಅಂತರ್ಜಾಲ
ವೈಭವದ ಈ ಆಟಕ್ಕೆ ಸೂರ್ಯವಂಶಿ ಹೀರೋ ಆಗಿದ್ದಾನೆ. ಅರ್ಹ, ಪ್ರತಿಭಾವಂತನ ಈ ಆಟಕ್ಕೆ ದೇಶಾದ್ಯಂತ ಆಟಗಾರರು ಇವನನ್ನು ಹೊಗಳಿದ್ದಾರೆ. ಸಾಮಾಜಿಕ ಜಾಲತಾಣಗಳು, ಅಕ್ಷರ, ದೃಶ್ಯ ಶ್ರಾವ್ಯ ಮಾಧ್ಯಮಗಳಲ್ಲಿ ವೈಭವ್ ಸೂರ್ಯವಂಶಿಯ ಗುಣಗಾನ ಬಹಳ ಬಹಳ ವಿಸ್ತಾರವಾಗಿ ಆಗುತ್ತಿದೆ.ಈ ಎಲ್ಲಾ ಸ್ತುತಿಗಳಿಗೂ ವೈಭವ್ ಸೂರ್ಯವಂಶಿ ನೂರಕ್ಕೆ ನೂರರಷ್ಟು ಯೋಗ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಜೊತೆಗೆ ತಾನು ವಿಶ್ವಶ್ರೇಷ್ಠ ಬೌಲರ್ ಗಳನ್ನು ಎದುರಿಸುವಾಗ ಅವರ ಖ್ಯಾತಿಯನ್ನು ಗಮನಿಸಿ ಆಡುವುದಿಲ್ಲ, ಬಾಲ್ ಹೇಗೆ ಬರುತ್ತದೆ ಎನ್ನುವು ದನ್ನು ಆಧರಿಸಿ ಆಡುತ್ತಾ, ತನ್ನ ಹೊಡೆತಗಳನ್ನು ಎಂಜಾಯ್ ಮಾಡುತ್ತೇನೆ ಎಂಬ ಸೂರ್ಯವಂಶಿಯ ಮಾತು ಬಹಳ ಗಮನಾರ್ಹ ಮತ್ತು ಸಕಾರಾತ್ಮಕ ಆಲೋಚನೆ.
ವೈಭವ್ ಸೂರ್ಯವಂಶಿ ಈಗ ಎಲ್ಲರ ಗಮನಸೆಳೆದಿದ್ದಾನೆ. ಆದರೆ ಕ್ರಿಕೆಟ್ ನಲ್ಲೇ ಆಗಲಿ ಯಾವುದರಲ್ಲೇ ಆಗಲಿ form is temporary, Class is permanent” ಎಂಬ ಮಾತು ಸತ್ಯ. ಅಭೂತಪೂರ್ವ ಯಶಸ್ಸು ಹೆಸರು, ಖ್ಯಾತಿ ಈ ಹುಡುಗನಿಗೆ ಇಷ್ಟು ಕಿರಿಯ ವಯಸ್ಸಿಗೇ ಸಿಕ್ಕಿದೆ. ಆದರೆ ಒಂದು ವೇಳೆ ೩-೪ ಪಂದ್ಯಗಳಲ್ಲಿ ಆತ ವಿಫಲನಾದ ಎಂದಿಟ್ಟುಕೊಳ್ಳೋಣ, ಆಗ ಇದೇ ಸಾಮಾಜಿಕ ಜಾಲತಾಣ ಗಳು, ಮಾಧ್ಯಮಗಳು ಯಾವ ರೀತಿ ಇಂದು ಆತನನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ದು ಎತ್ತರದಲ್ಲಿ ಹೋಲಿಸಿ ದ್ದಾರೋ ಅದೇ ಜಾಲತಾಣಗಳು, ಮಾಧ್ಯಮಗಳು ಈತನ ನ್ನು ಈತ ವೈಫಲ್ಯ ಕಂಡರೆ ಪ್ರಪಾತಕ್ಕೆ ನೂಕಿಬಿಡುವ ಅಪಾಯಗಳು ಇದ್ದೇ ಇದೆ. ಆದ್ದರಿಂದಲೇ” Public memory is very short ” ಎನ್ನುತ್ತೇವೆ.
ಏಕೆಂದರೆ ಯಾವುದೇ ಆಟಗಾರ ನಿರಂತರವಾಗಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಅದು ಸಚಿನ್ ತೆಂಡೂಲ್ಕರ್ ಇರಬಹುದು, ಮರಡೋನಾ ಇರಬಹುದು ಇದು ಸತ್ಯ.ಆದರೆ ವಿಪರೀತ ಖ್ಯಾತಿ , ಜನಪ್ರಿಯತೆ ಗಳಿಸಿದ ಆಟಗಾರ ಅದನ್ನು ಉಳಿಸಿಕೊಳ್ಳುವುದರಲ್ಲಿ ವಿಫಲನಾಗಿ ಬಿಟ್ಟರೆ ಆತನನ್ನು ಕಡೆಗಣಿಸಿ ಕಮರಿಗೆ ತಳ್ಳಿ ಆತನ ಆತ್ಮವಿಶ್ವಾಸ ಕುಂದುವ ಹಾಗೆ ಮಾಡುವುದೂ ಇದೇ ಜಾಲತಾಣಗಳು, ಮಾಧ್ಯಮಗಳು, ಟ್ರೋಲಿಗರು ಎಂಬುದನ್ನು ಸೂರ್ಯವಂಶಿಮರೆಯಬಾರದು. ಹಿಂದೆ ಪಾಲ್ ವಾಲ್ ತತಿ ಎಂಬ ಆಟಗಾರ ಅದ್ಭುತ ಆಟವಾಡಿ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ೬೩ ಎಸೆತಗಳಲ್ಲಿ ೧೨೦* , ರನ್ ಹೊಡೆದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಲು ಕಾರಣನಾದ ಪಾಲ್ ಚಂದ್ರಶೇಖರ್ ವಾಲ್ ತತಿ (ಕಣ್ಣಿಗೆ ಪೆಟ್ಟು ತಿಂದು ಅವರ ಕ್ರೀಡಾಬದುಕು ಮುಗಿಯಿತು) ಅನಂತರದ ಪಂದ್ಯಗಳಲ್ಲಿ ಹೆಚ್ಚಿನ ಸಾಧನೆ, ಗುರುತು ಮೂಡಿಸಲಾಗದೆ ನಿಧಾನವಾಗಿ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಿಂದ ದೂರವಾ ದರು. ಅತುಲ್ ಬೆಡಾದೆ ಎಂಬ ಸಿಕ್ಸರ್ ಶೂರ, ಆತ ಸಿಕ್ಸರ್ ಹೊಡೆಯುತ್ತಿದ್ದ ಲೀಲಾಜಾಲ ಆಟ ಎಲ್ಲರಿಗೂ ಖುಷಿ ಕೊಡುತ್ತಿತ್ತು. ಅಮೆಯ್ ಖುರೇಸಿಯಾ ಎಂಬ ಆಟಗಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡಿದ್ದು ಬೆರಳೆಣಿಕೆಯ ಪಂದ್ಯಗಳಲ್ಲಿ. ಒಂದು ಎರಡು ಪಂದ್ಯಗಳಲ್ಲಿ ರಾರಾಜಿಸಿದ ಖುರೇಸಿಯಾ ಆನಂತರ ಅದೇ ಫಾರ್ಮ್ ಮತ್ತು ಚಾರ್ಮ್ ಉಳಿಸಿಕೊಳ್ಳಲು ವಿಫಲರಾದರು. ಹೀರೋಗಳಾಗಿದ್ದ ವಾಲ್ ತತಿ, ಅತುಲ್ ಬೆಡಾದೆ, ಖುರೇಸಿಯಾ ಅವರ ಅತ್ಯಲ್ಪ ಅವಧಿಯ ವಿಜೃಂಭಣೆ ಬಂದಷ್ಟೇ ವೇಗವಾಗಿ ಮೂಲೆ ಸರಿದು ಕಣ್ಮರೆ – ಮಣ್ಮರೆಯಾಗಿಹೋಯಿತು. ಇದು ಸಿನಿಮಾ ನಟ ನಟಿ, ಕ್ರಿಕೆಟಿಗರೆಲ್ಲರಿಗೂ ಇರಬೇಕಾದ ಗಟ್ಟಿ ಎಚ್ಚರ.

ಫೋಟೋ ಕೃಪೆ : ಅಂತರ್ಜಾಲ
ಈ ದಿಢೀರ್ ಖ್ಯಾತಿ fan following ನ ಓಘಕ್ಕೆ ಮರುಳಾಗದಂತೆ ವೈಭವ್ ಸೂರ್ಯವಂಶಿಯ ಆಟ- ವ್ಯಕ್ತಿತ್ವ ರೂಪುಗೊಳ್ಳಬೇಕು. ಇದರೊಟ್ಟಿಗೆ ಆತ ತನ್ನದೇ ಆದ ಸ್ವಂತಿಕೆಯ ಹೊಡೆತಗಳನ್ನು ಅಭ್ಯಾಸ ಮಾಡಿ ಪರಿಣಿತಿ ಹೊಂದಬೇಕು.ಅದೇ ನಿಜವಾದ ಸಾಧನೆ ಮತ್ತು ಸ್ವತಂತ್ರ ,ಅನನ್ಯ ಅಸ್ಮಿತೆ.ಒಂದು ಹಂತದ ಅನುಕರಣೆ ಎಲ್ಲರಲ್ಲೂ ಇದ್ದೇ ಇರುತ್ತದೆ. ವಿ.ವಿ.ಎಸ್. ಲಕ್ಷ್ಮಣ್ ಅವರ placements ಅಜ಼ರುದ್ದೀನ್ ಅವರ ಆಟದ ಶೈಲಿಯನ್ನು ನೆನಪಿಸುತ್ತದೆ, ಜೋಶ್ ಹೇಜ಼ಲ್ ವುಡ್ ನ ಬೌಲಿಂಗ್ ಮ್ಯಾಕ್ ಗ್ರಾತ್ ಅವರ ಬೌಲಿಂಗ್ ಶೈಲಿಯನ್ನು , ವಿಧಾನ ವನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತದೆ.
ಅನುಕರಣೆ ತಪ್ಪಲ್ಲ, ಆದರೆ copy cat ಆಗಬಾರದು. ಅನುಕರಣೆಯ ನಂತರ ಸ್ವಂತಿಕೆಯ ಅನುಸರಣೆ ಬಹಳ ಮುಖ್ಯ. ಎಸ್.ಜಾನಕಿ, ಪಿ.ಸುಶೀಲ ಅವರಿಗೆಲ್ಲ ಮೊದಲು ಲತಾ ಮಂಗೇಶ್ಕರ್ ಅವರ ದನಿಯೇ ಅನುಕರಣೆಯ ಹಾದಿಯಾಗಿತ್ತು.ಇದನ್ನು ಸ್ವತಃ ಅವರುಗಳೇ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳಿಯೂ ಇದ್ದಾರೆ. ಆದರೆ ಮುಂದೆ ಎಸ್.ಜಾನಕಿ, ಪಿ.ಸುಶೀಲ ಅವರು ತಮವಮತನದ ದನಿ, ಬನಿಯನ್ನು ರೂಪಿಸಿಕೊಂಡು ಮಾಡಿದ ಸಾಧನೆಗಳೇ ಅವರ ಚಿರಕಾಲದ ಅಸ್ತಿತ್ವಕ್ಕೆ ಮೂಲ ಕಾರಣ. ಹಿಂದಿ ಚಿತ್ರರಂಗದ ಸವ್ಯಸಾಚಿ
ಕಿಶೋರ್ ಕುಮಾರ್ ಅವರು ಮೊದಲು ಕೆ.ಎಲ್.ಸೈಗಲ್ ಅವರ ಹಾಡಿನ ಶೈಲಿಯನ್ನೇ ಅನುಕರಿಸುತ್ತಿದ್ದು ನಂತರ ಸ್ವಂತ ಹಾದಿಯ ಸಾಧಕರಾದರು.
ರೋನು ಮಂಡಲ್ ಭಿಕ್ಷೆ ಬೇಡುತ್ತಿದ್ದ, ಆದರೆ ಸೊಗಸಾದ ಕಂಠ ಹೊಂದಿದ್ದ ಗಾಯಕಿ. ಈಕೆ ಹಿಮೇಶ್ ರೇಶ್ಮಿಯಾ ಅವರ ಸಂಗೀತ ಸಂಯೋಜನೆಯಲ್ಲಿ ತೇರಿ ಮೇರಿ ತೇರಿ ಮೇರಿ … ಹಾಡನ್ನು ಹಾಡಿ ಇನ್ನಿಲ್ಲದ ಜನಪ್ರಿಯತೆ ಖ್ಯಾತಿಯನ್ನು ಸಂಪಾದಿಸಿದರು.ಆಗ ಲತಾ ಮಂಗೇಶ್ಕರ್ ಅವರು ಹೇಳಿದ ಮಾತುಗಳು ಗಮನಾರ್ಹ ಮತ್ತು ಸೂತ್ರಪ್ರಾಯವಾದುದು. ರೋನು ಬಹುತ್ ಅಚ್ಛಾ ಗಾತೀ ಹೈ, ಲೇಕಿನ್ ಶಾಯದ್ ಮೇರೀ ಯಾ ಕಿಸೀ ಔರ್ ಕಾ ನಕಲ್ ನಹೀ ಕರ್ನಾ” ಎಂದಿದ್ದರು. ಲತಾ ಮಂಗೇಶ್ಕರ್ ಅವರ ಅದ್ಭುತವಾದ ಈ ಮಾತುಗಳನ್ನು ಆಡಿಕೊಂಡವರು, ಈಕೆ ಹೊಸಬರನ್ನು ಹೀಗೆ ಪ್ರೋತ್ಸಾಹಿಸುವುದೇ? ಇವರದ್ದು self dominant ಮನಸ್ಥಿತಿ” ಎಂದೆಲ್ಲಾ ಲೇವಡಿ ಮಾಡಿದರು. ಈಗ ರೋನು ಮಂಡಲ್ ತನ್ನ ಜಂಬ ಹುಂಬತನಗಳಿಂದ ಮತ್ತೆ ಯಥಾಸ್ಥಾನಕ್ಕೆ ಮರಳಿದ್ದಾರೆ.ಇದೊಂದು ರೀತಿ ಅಲ್ಪನಿಗೆ ಐಶ್ವರ್ಯ ಬಂದರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದಂಥ ಗರ್ವದ ಉತ್ತುಂಗ.
ಆಶಾ ಭೋಂಸ್ಲೆ ಅವರು ಸಹ ಒಂದು ರಿಯಾಲಿಟಿ ಸರಣಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ಅವರ ಮುಂದೆಯೇ ಸೀತಾ ಔರ್ ಗೀತಾ ಚಿತ್ರದ ಇಂದಿಗೂ ಹೆಸರುವಾಸಿಯಾಗಿರುವ ಹವಾ ಕೆ ಸಾತ್ ಸಾತ್… ಹಾಡಿದಾಗ, ಆ ಪುಟ್ಟ ಹುಡುಗಿಯ ಗಾಯನವನ್ನು ಮನಸಾರೆ ಮೆಚ್ಚಿ, ಆ ಹುಡುಗಿಯನ್ನು ಕರೆದು ತಾವೇ ಎರಡು ಜಡೆ ಹಾಕಿ ” ನನ್ನ ದನಿ, ಲತಾ ದೀದಿ ದನಿ ಯಾವುದನ್ನೂ ನಕಲು ಮಾಡಬೇಡ, ನಿನ್ನ ಸ್ವಂತ ಧ್ವನಿಯನ್ನು ರೂಢಿಸಿಕೋ ” ಎಂದು ಪ್ರೀತಿಯ ಸಲಹೆ- ಸೂಚನೆ ನೀಡಿ ಆಶೀರ್ವಾದ ಮಾಡಿದರು. ಅಲ್ಲೂ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಅಕ್ಕ ತಂಗಿ ಹೀಗೇ, ಬೆಳೆಯುವವರನ್ನು ಉತ್ತೇಜಿಸುವ ಬದಲಿಗೆ ತಮ್ಮ ಜಂಬದ ಮಾತುಗಳನ್ನಾಡುತ್ತಾರೆ ” ಎಂಬ ಮಾತುಗಳು ,ಟೀಕೆಗಳು ಬಂದವು. ಸ್ವಂತಿಕೆ ,ಸ್ವೋಪಜ್ಞತೆಯ ಸಲಹೆ, ಹಿತನುಡಿ ಗಳನ್ನು ಹೇಳಿದರೆ ತಪ್ಪೇ. ಅದೂ ಹಾಗೆ ಹೇಳಿರುವುದು ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ ಅವರಂಥ ಮಹಾನ್ ಗಾಯಕಿಯರು. ಇದು ಆಶೀರ್ವಾದ ಮತ್ತು ಹಾರೈಕೆಯ ಸದುದ್ದೇಶದಿಂದ ಅಲ್ವೇ ಹೇಳಿರುವಂಥದ್ದು. ಇದನ್ನು ಅರಗಿಸಿಕೊಳ್ಳದವರಿಗೆ ಲತಾ ಮಂಗೇಶ್ಕರ್ ಹೇಳಿದರೂ, ಆಶಾ ಭೋಂಸ್ಲೆ ಅವರು ಹೇಳಿದರೂ ಅದು ಅಹಂಕಾರ, ಮತ್ಸರದ ನುಡಿಗಳಾಗಿಯೇ ಕೇಳುತ್ತದೆ. ಕಾಮಾಲೆ ಕಣ್ಣು ಗಳಿಗೆ ಕಾಣೋದೆಲ್ಲವೂ ಹಳದಿ ಎಂಬ ಹಾಗೆ.
ವೈಭವ್ ಸೂರ್ಯವಂಶಿ ಸಹ ಯಾರನ್ನೂ ಬೇಕಾದರೂ ತನ್ನ ರೋಲ್ ಮಾಡಲ್ ಆಗಿ ಸ್ವೀಕರಿಸಲಿ, ಆದರೆ ಮುಂದೆ ಹಾದಿ ಸಾಗಿದಂತೆಲ್ಲ ಮಾಗಿ ಮಾಗಿ ತನ್ನತನದ ಶೈಲಿಯನ್ನು ರೂಢಿಸಿಕೊಂಡು ಖ್ಯಾತಿ, ಜನಪ್ರಿಯತೆಯ ಬೀಸಿನಲ್ಲಿ ಕಳೆದುಹೋಗದಿರಲಿ. ತನ್ನ ಪಾಡಿಗೆ ತಾನು ಆಟದತ್ತ, ಅದನ್ನು ಸುಧಾರಿಸಿಕೊಳ್ಳುವ ನಿರಂತರ ಅಭ್ಯಾಸ, ಪರಿಶ್ರಮ, ಪ್ರಯತ್ನಗಳ ಮೂಲಕ ತನ್ನ ಆಟದಲ್ಲಿ ಪ್ರಬುದ್ಧತೆ ಸಾಧಿಸಲಿ. ಆಗ ವೈಭವ್ ಸೂರ್ಯವಂಶಿಯ ಆಟ ದೀರ್ಘಕಾಲೀನ ಅವಧಿಯ ಸ್ವತ್ತಾಗುತ್ತದೆ. ಅಪ್ಪಿತಪ್ಪಿಯೂ ಈಗ ಬಂದಿರುವ ಖ್ಯಾತಿ, ಹೆಸರುಗಳ ಅಲೆಯಲ್ಲಿ ಕೊಚ್ಚಿಕೊಂಡು ಹೋಗುವ ಹಾಗಾಗದಿರಲಿ.
ಸರ್.ವಿವಿಯನ್ ರಿಚರ್ಡ್ಸ್ , ಕಪಿಲ್ ದೇವ್, , ಸಚಿನ್ ತೆಂಡೂಲ್ಕರ್, ಎ.ಬಿ.ಡಿ.ವಿಲಿಯರ್ಸ್ ಅವರಂತೆ ಕ್ರಿಕೆಟ್ ಜಗತ್ತಿನಲ್ಲಿ ಒಂದು ದಿನದ ಪಂದ್ಯಗಳು, ಟೆಸ್ಟ್ ಕ್ರಿಕೆಟ್ ೨೦-೨೦ ಎಲ್ಲಾ ಮಾದರಿಯ ಪಂದ್ಯಗಳಲ್ಲೂ ಸಹ ವೈಭವ್ ಸೂರ್ಯವಂಶಿಯ ವೈಭವ ಹೀಗೆ ಸಮಚಿತ್ತ ಸಮಪಿತ್ತದ ಸಮತೋಲನದ ಏಕಾಗ್ರತೆಯನ್ನು ಹೊಂದಲಿ. ಆಗ ಈತನ ಕ್ರಿಕೆಟ್ ಜೀವನ ಹಸನಾಗಿ ಉಜ್ವಲವಾಗಿ ಶೋಭಿಸುವುದ ರಲ್ಲಿ ಯಾವ ಸಂದೇಹವೂ ಉಳಿಯುವುದಿಲ್ಲ. ಅಲ್ಲವೇ.
- ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್ – ಕೋಲಾರ.
