ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯಲ್ಲಿ “ಬೆಳ್ಳಿಯ ಅಂಕಣ”ದ ಮೇಲೆ ಈ ಶಿವಲಿಂಗವನ್ನು ಇರಿಸಲಾಗಿದ್ದು, ಅದನ್ನು ದರ್ಶನ ಮಾಡಿದರೆ ಮಾತ್ರ ಮೋಕ್ಷ ಲಭಿಸುವುದು ಎಂಬ ಮಾತಿದೆ. ವಿಶ್ವನಾಥನ ಸನ್ನಿಧಿ ಒಂದು ನೋಟವನ್ನು ಲೇಖಕ ಮೂಲಕ ಹಿಡಿದಿಟ್ಟಿದ್ದಾರೆ ಡಾ ಪ್ರಕಾಶ ಬಾರ್ಕಿ ಅವರು, ಮುಂದೆ ಓದಿ…
ಆಧ್ಯಾತ್ಮಿಕ ರಾಜ್ಯಧಾನಿ ಕಾಶಿ “ಶಿವನ ನಗರ” ಎಂದೇ ಪ್ರಸಿದ್ಧಿ. ಕಾರಣ ಸ್ವತಃ ಶಿವನೇ ಇಲ್ಲಿ ನೆಲೆಸಿದ್ದನಂತೆ.
ಕಾಶಿ ಎಂದರೇ ಶಿವ, ಕಾಶಿ ಎಂದರೇ ಗಂಗೆ, ಕಾಶಿ ಎಂದರೆ ಮೋಕ್ಷ, ಕಾಶಿ ಹಿಂದೂಗಳ ಪವಿತ್ರ ನಗರ ಮತ್ತು ಹೆಮ್ಮೆ.

ಫೋಟೋ ಕೃಪೆ : Times Of India
ಕಾಲಭೈರವ, ದುರ್ಗೆ (ದುರ್ಗಾ ಕುಂಡ, Monkey temple), ಸಂಕಟಮೋಚನ ಹನುಮಾನ್, ತುಳಸಿದಾಸ, ದೊಡ್ಡ ಗಣೇಶ, ಶಿವಪುರಿ ಪಾಂಡವ ದೇವಸ್ಥಾನ ಮುಂತಾದವು ಹೊರತುಪಡಿಸಿದರೆ ಎಲ್ಲೆಲ್ಲೂ ಶಿವನ ಪ್ರತಿರೂಪ.. ಅಪರೂಪದ ಶಿವಲಿಂಗಗಳ ಆವಾಸ. ಇಲ್ಲಿನ ಪ್ರತಿ ಕಲ್ಲು ಬಂಡೆಯು ಶಂಕರನ ಪ್ರತಿರೂಪವೇ. ಶಿವನ ಸಖ್ಯದಲ್ಲಿ ಹರಿಯುವ ಗಂಗೆ. ಅಪರೂಪದ ಪವಿತ್ರ ಕ್ಷೇತ್ರ ಕಾಶಿ.
ಹಿಂದೂ, ಮುಸ್ಲಿಂ, ಬೌದ್ಧ ಸಮುದಾಯದವರಿಗೂ ಕಾಶಿ ಪವಿತ್ರ ನಗರ.
ಕಾಶಿ “ವಿಶ್ವನಾಥನ” ಮಂದಿರ ಹೋಗುವ ಮೊದಲು ಕಡ್ಡಾಯವಾಗಿ ಪೋಲಿಸರಿಂದ ಸಂಪೂರ್ಣ ತಪಾಸಣೆಗೆ ಒಳಗಾಗಲೇ ಬೇಕು. ವಿಶ್ವನಾಥ ಗಲ್ಲಿಯಲ್ಲಂತೂ ಹಿಂಡು ಹಿಂಡಾಗಿರುವ ಪೋಲಿಸ ಪಡೆಯ ಕಣ್ಗಾವಲು ಒಂದೆಡೆಯಾದರೆ ಇನ್ನೊಂದೆಡೆ ಹೂ ಹಣ್ಣು ಮಾರುವ ಅಂಗಡಿಯ ದಲ್ಲಾಳಿಗಳ ಜಗ್ಗಾಟ ಮತ್ತು “ನೇರ ದರ್ಶನ ಮಾಡಿಸುವೆ ಬನ್ನಿ” ಎನ್ನುವ ಹಗಲುಗಳ್ಳರ ಲೋಲುಪತೆ.
ಕಾಲ ಭೈರವ ದೇವಸ್ಥಾನ ರಸ್ತೆಯಿಂದಲೂ ನೇರವಾಗಿ ಮತ್ತು “ದಶಾಶ್ವಮೇಧ ಘಾಟ್” ಹೋಗುವ ರಸ್ತೆಯ ಇಕ್ಕೆಲದಿಂದಲೂ “ದೇವಸ್ಥಾನ” ಪ್ರವೇಶಿಸಬಹುದು. ಹೇಗೆ ನಡೆದರೂ ಕೊನೆಗೆ ಸೇರುವ ಸಾಲು ಒಂದೇ.

ಫೋಟೋ ಕೃಪೆ : varanasi guru
ಕಾಶಿ ವಿಶ್ವನಾಥ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಈ ಪವಿತ್ರ ದೇವಸ್ಥಾನಕ್ಕೆ ಭೇಟಿ ನೀಡಿ, ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಮೋಕ್ಷ ಪಡೆಯಬಹುದೆಂದು ಆಳವಾಗಿ ನಂಬಲಾಗಿದೆ. ಕಾಶಿಯಲ್ಲಿ ಇರುವ ಅತ್ಯಂತ ಸುಂದರ ಹಾಗೂ ಪವಿತ್ರ ದೇವಾಲಯಗಳಲ್ಲಿ ವಿಶ್ವನಾಥ ದೇವಾಲಯವೂ ಒಂದು.
ದೇವಸ್ಥಾನದ ಸುತ್ತ ಕಾಮಗಾರಿ ಬೃಹತ್ತಾಗಿ ತರಾತುರಿಯಲ್ಲಿ ನಡೆದ ದಿನಗಳವು, ಕೆಲವೇ ದಿನಗಳಲ್ಲಿ “ವಿಶ್ವನಾಥ ಕಾರಿಡಾರ್” ಯೋಜನೆ ಲೋಕಾರ್ಪಣೆಯಾಗುವ ಆಗುವ ತರಾತುರಿಯಲ್ಲಿತ್ತು. ಕಲ್ಲಿನ ಕಂಬ ಕೊರೆಯುವ ಮಷೀನುಗಳು ಕರ್ಕಶ ಧ್ವನಿ ಕಿವಿ ಕೊರೆಯುತ್ತಿದ್ದರೆ, ಮೂಗು ಕಣ್ಣಿಗಡುರುತ್ತಿದ್ದ ತೆಳು ಧೂಳಿನ ಘಾಟು. ಪಾದ ತಬ್ಬಿ ಬಿಡಲೊಪ್ಪದ ರಾಡಿಯಂತ ಸಿಮೆಂಟ್ ಸಹ. ಜಾರು ಬಂಡೆಯಂತಾದ ದೇವಸ್ಥಾನದ ಆವರಣ.
ಜನ ಸಂದಣಿ ಕ್ಷೀಣವಾಗಿದ್ಧ ಸಂಜೆಯದು. ಅಂತೂ ದೇವಸ್ಥಾನದ ಶಿವಲಿಂಗದ ಪೂಜೆ, ದಿವ್ಯ ದರ್ಶನ, ಶಿವನ ಅಪ್ಪುಗೆಯಂತ ಸ್ಪರ್ಶ ಮೈ ನರನಾಡಿಗಳಲ್ಲಿ ಚೈತನ್ಯ ತುಂಬಿತು. ಶಂಖ, ಜಾಗಟೆ, ಗಂಟೆಯ ಕಂಚಿನ ಕಂಠಗಳ ನಿನಾದದಲ್ಲಿ ತೇಲುತ್ತಿದ್ದ “ಓಂ ನಮಃ ಶಿವಾಯ” ಮಂತ್ರೋದ್ಘಾರ ದೇವಸ್ಥಾನ ಆವರಣದಲ್ಲಿ ಪ್ರತಿಧ್ವನಿಸುತ್ತಿದ್ದರೆ ಸ್ವತಃ ಶಿವನೇ ಧರೆಗಿಳಿದಂತ ಸನ್ನಿವೇಶವದು. ಆ ಕ್ಷಣಕ್ಕಾಗಿ ಹಲವು ದಿನಗಳಿಂದ ಹಂಬಲಿಸುತ್ತಲೆ ಚಡಪಡಿಸಿದ್ದು ಒಂದೇ ಏಟಿಗೆ ನೆನಪಿನ ಪುಟದಿಂದ ಅಳಿದು ಹೋಯಿತು. ಯೋಚನೆ, ಚಿಂತೆ, ಹಂಬಲಗಳು ಗಕ್ಕನೆ ನಿಂತು ಮರಗಟ್ಟಿಹೊದಂತೆನಿಸಿತು.
“ಆಗೇ ಚಲೋ.. ಚಲೋ ” ಎಂದು ಅವಸರಿಸುತ್ತಾ ಹಣೆ ತುಂಬಾ ಘಮ್ಮೇನ್ನುವ “ಗಂಧ ಸವರಿದ” ಅರ್ಚಕ. ಮನಸ್ಸಿಲ್ಲದೆ ದೇವಾಲಯ ಗರ್ಭಗುಡಿಯಿಂದ ಆವರಣಕ್ಕೆ ಬಂದೆ. ದೇವಸ್ಥಾನದ ಆವರಣದಲ್ಲಿ ಹದಿನೈದು ನಿಮಿಷ ಕುಳಿತು ಶಿವ ಮಂದಿರದತ್ತ ತದೇಕಚಿತ್ತದಿಂದ ದೃಷ್ಟಿ ನೆಟ್ಟು ಅವಲೋಕಿಸತೊಡಗಿದೆ.

ಫೋಟೋ ಕೃಪೆ : indiaMART
ಗಂಗಾ ನದಿಯ ಪಶ್ಚಿಮ ದಡದಲ್ಲಿನ ಈ ವಿಶ್ವನಾಥ ಮಂದಿರ ಪವಿತ್ರ ಜ್ಯೋತಿರ್ಲಿಂಗ. ದೇವಾಲಯದ ಗೋಪುರದ ಮೇಲೆ 800 ಕೆಜಿ ಚಿನ್ನವನ್ನ ಲೇಪನ ಮಾಡಲಾಗಿದೆ. ದೇವಾಲಯದ ಹೊರಭಾಗ ಸಂಕೀರ್ಣವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ. ದೈವಿಕ ಅಲೆ ಹೊರಸೂಸುವ ಕೆತ್ತನೆಗಳವು. ದೇವಾಲಯದಲ್ಲಿ ಕಾಲಬೈರವ, ವಿಷ್ಣು, ವಿರೂಪಾಕ್ಷ ಗೌರಿ, ವಿನಾಯಕ ಮತ್ತು ಅವಿಮುಕ್ತೇಶ್ವರ ಮುಂತಾದ ಹಲವು ಚಿಕ್ಕ ದೇವಾಲಯಗಳಿವೆ.
ದೇವಾಲಯದ ಮೇಲ್ಭಾಗದಲ್ಲಿ ಗೋಪುರಕ್ಕೆ “ಚಿನ್ನದ ಲೇಪನವಿದೆ”. ದೇವಸ್ಥಾನದೊಳಗೆ ಬೇಡಿಕೊಂಡಂತ ಬೇಡಿಕೆಗಳು ಗೋಪುರವನ್ನು ನೋಡಿದರೆ ಖಂಡಿತವಾಗಿ ಇಡೇರುತ್ತವೆ ಎಂಬುದು ಭಕ್ತರ ನಂಬಿಕೆ.
ಇಲ್ಲಿನ ಲಿಂಗವು ಸ್ವತಃ ಶಿವನ ಅಂತಿಮ ಪ್ರತಿರೂಪ. ಗರ್ಭಗುಡಿಯಲ್ಲಿ “ಬೆಳ್ಳಿಯ ಅಂಕಣ”ದ ಮೇಲೆ ಈ ಶಿವಲಿಂಗವನ್ನು ಇರಿಸಲಾಗಿದ್ದು, ಅದನ್ನು ದರ್ಶನ ಮಾಡಿದರೆ ಮಾತ್ರ ಮೋಕ್ಷ ಲಭಿಸುವುದು ಎಂಬ ಮಾತಿದೆ.
ಕಾಶಿ ವಿಶ್ವನಾಥ ದೇವಸ್ಥಾನ ಹಲವು ಬಾರಿ ಮೊಘಲರಿಂದ ದಾಳಿಗೆ ಒಳಪಟ್ಟು ಘಾಸಿಯಾಗಿದೆ. ತನ್ನ ಭವ್ಯತೆಯನ್ನು ಕಳೆದುಕೊಂಡು ಸಪ್ಪೆಯಾಗಿದೆ. ಔರಂಗಜೇಬ ಆಡಳಿತದಲ್ಲಿ “ಗ್ಯಾನವ್ಯಾಪಿ” ಮಸೀದಿಯೂ ತಲೆಯತ್ತಿತ್ತು. ಆಗ ಔರಂಗಜೇಬ ದೇವಾಲಯ ಉರುಳಿಸಲು ಆದೇಶ ನೀಡಿದ. ಕೂಡಲೇ ದೇವಾಲಯದ ಮುಖ್ಯ ಅರ್ಚಕರು ಶಿವಲಿಂಗವನ್ನು ಉಳಿಸುವ ಸಲುವಾಗಿ ಬಚ್ಚಿಡಲು ಶಿವಲಿಂಗದೊಂದಿಗೆ ಬಾವಿಗೆ ಹಾರಿದರಂತೆ. ಈಗಲೂ ಕೂಡಾ ಈ ಬಾವಿಯು ದೇವಾಲಯ ಹಾಗೂ ಮಸೀದಿಯ ಅವಶೇಷಗಳ ನಡುವೆ ಇದೆ. ಇದನ್ನು “ಗ್ಯಾನವಪಿ ಬಾವಿ” ಎಂದೇ ಕರೆಯಲಾಗುತ್ತೆ.
ಮೊಹಮ್ಮದ್ ಗೋರಿ ಕೊಳ್ಳೆ ಹೊಡೆದು, ಆದೇಶ ನೀಡಿದ ಮೇಲೆ ಸರಣಿ ದಾಳಿ ಆರಂಭಿಸಿದವನು ಕುತುಬುದ್ದೀನ್ ಐಬಕ್. ವಿಶ್ವನಾಥ ಮಂದಿರದ ಮೇಲೆ ಪದೆ ಪದೆ ದಾಳಿ ಮಾಡಿ ಸಂಸ್ಕೃತಿಯ ಮೂಲ ಚಿವುಟಲು ಯತ್ನಿಸಲಾಗಿದೆ. ನಂತರದಲ್ಲಿ ಹಲವು ಬಾರಿ ದೇವಾಲಯ ನೆಲಸಮಗೊಂಡು ಮತ್ತೇ ಪುನಃ ನಿರ್ಮಾಣಗೊಂಡು ತನ್ನ ಭವ್ಯತೆ ಮರಳಿ ಪಡೆದಿದೆ.
ಕೊನೆಯ ಬಾರಿಗೆ ಕಾಶಿ ವಿಶ್ವನಾಥ ದೇವಾಲಯ ಪುನರ್ನಿರ್ಮಿಸಿದ ಮಹಾತಾಯಿ “ಇಂಧೋರ್‌ನ ರಾಣಿ” “ಅಹಲ್ಯಾ ಬಾಯಿ ಹೋಳ್ಕರ್”. ಶಿವನು ರಾಣಿಯ ಕನಸಿನಲ್ಲಿ ಬಂದು ಸೂಚನೆ ಕೊಟ್ಟ ಎಂಬ ಪ್ರತೀತಿ ಇದೆ. ಅಧನ್ನು ಗಂಭೀರವಾಗಿ ಪರಿಗಣಿಸಿದ ರಾಣಿ, ಕಾಶಿಗೆ ಮುಂಚಿನ ವೈಭವವನ್ನು ಮರಳಿಸಬೇಕೆಂದು ನಿರ್ಧರಿಸಿ ದೇವಸ್ಥಾನ ಪುನರ್ನಿರ್ಮಾಣ ಬೃಹತ್ ಕಾರ್ಯ ಕೈಗೊಂಡಳು. ನಂತರ “ಇಂಧೋರ್‌ನ ಮಹಾರಾಜ ರಂಜಿತ್ ಸಿಂಗ್” ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್‌ನಷ್ಟು ಬಂಗಾರವನ್ನು ನೀಡಿದರು.

ಫೋಟೋ ಕೃಪೆ : deshkiaawaz.in
ಇದೀಗ “ಕಾಶಿ ವಿಶ್ವನಾಥ ಕಾರಿಡಾರ್” ಯೋಜನೆ ಭವ್ಯತೆ, ಮೆರುಗನ್ನು ಪುನಃ ಈನ್ನಷ್ಟೂ ಮರಳಿಸಿದೆ.
ಶಾಶ್ವತ ಗಂಗಾ ನದಿಯ ಸ್ವಚ್ಛತೆಗಾಗಿ ಕೇಂದ್ರ ಸರ್ಕಾರ “ನಮಾಮಿ ಗಂಗಾ” ಯೋಜನೆ ಜಾರಿಯಾಗಿದೆ.
ಹೀಗೆ ಕಾಲಕಾಲಕ್ಕೆ ತನ್ನ ಒಡಲೊಳಗೆ ಭವ್ಯತೆ, ಶ್ರೀಮಂತಿಕೆ, ಆಧ್ಯಾತ್ಮಿಕ ಅಲೆಗಳನ್ನು ತುಂಬಿಕೊಳ್ಳುತ್ತಲೆ ಸಾಗಿದ “ಪುರಾತನ ನಗರಿ”ಯ “ವಿಶ್ವನಾಥನ” ಸನ್ನಿಧಿ. ಅಷ್ಟು ಸುಲಭಕ್ಕೆ ನಾಶವಾಗದ ಧರ್ಮವಿದು ಎಂದು ಜಗತ್ತಿಗೆ ಸಾರಿ ಹೇಳುವಂತಿದೆ.
ಕೊನೆಗೆ ದೇವಸ್ಥಾನ ಪ್ರಾಂಗಣ ಬಿಟ್ಟು ಹೊರನಡೆಯುವ ವೇಳೆಗೆ ನಾನು ಅವಕ್ಕಾಗಿದ್ದು.. ಶಿವಲಿಂಗಕ್ಕೆ ತನ್ನ ಹಿಂಬದಿ ತೋರಿಸುತ್ತಾ ಮಲಗಿದ್ದ ಬೃಹತ್ ನಂದಿಯ ಮೂರ್ತಿ ನೋಡಿ. ಮೆಲ್ಲಗೆ ನಂದಿಯ ಮೈದಡವಿ ಕೇಳಬೇಕೆನಿಸು “ಹೀಗೆಕೆ ವಿರುದ್ಧ ದಿಕ್ಕಿನೆಡೆಗೆ ಕೂತಿದ್ದಿ ಮಾರಾಯಾ?” ಅಂತ. ನಂದಿಯ ದೃಷ್ಟಿ ನೆಟ್ಟ ದಿಕ್ಕಿನಡೆಗೆ ಕಣ್ಣು ಹಾಯಿಸಿದರೆ “ಮಸೀದಿ”ಯಿದೆ. ಇನ್ನಷ್ಟೂ ಗಾಬರಿಯಾದೆ.
“ಮೂಲ ಶಿವಲಿಂಗದೆಡೆಗೆ ದಿಟ್ಟಿಸುವ #ನಂದಿ ವಿಗ್ರಹ ಗಾಢ ಮೌನದಲ್ಲಿದೆ. ಕೊನೆಗೆ ನಂದಿಯ ಕಿವಿಯಲ್ಲಿ ” ಭೋಲೆನಾಥ ನಿನ್ನ ಸನ್ನಿಧಾನದಲ್ಲಿ ಹಾಜರಾಗಿದ್ದೀನಿ” (ಭೋಲೆನಾಥ ಮೈ ಆಪ್ಕೇ ಸನ್ನಿಧಾನ್ ಮೇ ಹಾಜರ್ ಹೂಂ..) ಎಂದು ಒಂದೇ ಉಸಿರಿಗೆ ಪಿಸುಗುಟ್ಟಿದೆ.
ಭಾರವಾದ ಮನಸ್ಸಿನೊಳಗೆ ನೂರು ಯೋಚನೆ.
ಜೈ ಭೋಲೆನಾಥ..
- ಕಾಶಿ ಅನುಭವ (ಭಾಗ೧)
- ಕಾಶಿ ಅನುಭವ (ಭಾಗ೨)
- ಕಾಶಿ ಅನುಭವ (ಭಾಗ೩ )
- ಕಾಶಿ ಅನುಭವ (ಭಾಗ೪)
- ಕಾಶಿ ಅನುಭವ (ಭಾಗ೫)
- ಕಾಶಿ ಅನುಭವ (ಭಾಗ ೬)
- ಕಾಶಿ ಅನುಭವ (ಭಾಗ ೭)
- ಕಾಶಿ ಅನುಭವ (ಭಾಗ ೮)
- ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.
