ನನ್ನ ಗೆಳತಿ ಸ್ನೇಹಾ ನನ್ನ ಬದುಕಿಗೆ ಬೆಳಕಾಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ಕೋರನಾದಲ್ಲಿ ಕಳೆದುಕೊಂಡ ಕುಟುಂಬವನ್ನು ಸ್ನೇಹಾಳಿಂದ ಮತ್ತೆ ಸುಂದರ ಕುಟುಂಬವನ್ನು ಉಡುಗೊರೆಯಾಗಿ ಪಡೆದೆ ಎಂದು ಮೇಘನಾ ಸಂತೋಷದಿಂದ ನಕ್ಕಳು…ಕತೆಗಾರ್ತಿ ಶೋಭಾ ನಾರಾಯಣ ಹೆಗಡೆ ಅವರ ‘ವಸಂತಾಗಮನ’ ಕತೆಯನ್ನು ತಪ್ಪದೆ ಮುಂದೆ ಓದಿ…
‘ಯಾಕೆ?ಹೀಗೆ ಕುಳಿತಿದೀಯಾ… ಬೇಜಾರೇನೇ ಚಿನ್ನಮ್ಮ?’ ಅಂತ ಗೆಳತಿ ಸ್ನೇಹ ಬಂದು ನನ್ನ ಬುಜದ ಮೇಲೆ ಕೈ ಇಟ್ಟಾಗಲೇ ನನಗೆ ವಾಸ್ತವದ ಅರಿವು ಆಗಿದ್ದು. ಎಷ್ಟು ಹೊತ್ತು ಹಾಗೆ ಕೂತಿದ್ದೆನೋ ಪರಿವೆ ಇಲ್ಲದೆ..
ಯಾಕೋ ಚಿನ್ನು ಹೀಗೆ ಕುಳಿತಿದೀಯಾ? ಅವಳ ಅಕ್ಕರೆಯೇ ಅಂತಹುದು. ಥೇಟ್ ಅಮ್ಮನಂತೆಯೇ. ಅಳು ತಡೆಯದೇ ಸ್ನೇಹಾಳ ತಬ್ಬಿ, ಅತ್ತುಬಿಟ್ಟೆ. ‘ಏ ಚಿನ್ನಮ್ಮ… ಏಳೋ ಮೇಲೆ. ಯಾಕಿಷ್ಟು ಹತಾಶೆ ನಿನಗೆ ? ನಾನಿಲ್ವಾ ನಿನಗಾಗಿ, ತುಸು ಕೋಪದಿಂದ ನನ್ನ ಮೇಲೆ ಹಿಡಿದು ಕೂರಿಸಿಕೊಂಡಳು. ಇನ್ನು ಅತ್ತರೆ, ಪಾಪ, ಅವಳಿಗೆ ಬೇಜಾರು ಆಗುತ್ತೆ ಅಂತ ಸ್ವಲ್ಪ ನನ್ನ ನಾನೇ ಸಂತೈಸಿಕೊಂಡೆ. ಬೇಗ ಏಳು. ತಿಂಡಿ ರೆಡಿ ಮಾಡಿದೀನಿ.. ತಿನ್ನು ಬೇಗ. ನನಗೆ ಚೂರು ಇಲ್ಲೇ ಹತ್ತಿರದಲ್ಲಿ ಕೆಲಸ ಇದೆ. ಬೇಗ ಹೋಗಿ ಬರ್ತೀನಿ ಎಂದು ನನ್ನ ಸಮಾಧಾನ ಪಡಿಸಿ, ಸ್ನೇಹ ಹೊರಗೆ ಹೋಗಲು ರೆಡಿ ಆದಳು.
ಅವಳು ಮಾಡಿಟ್ಟ ತಿಂಡಿ ತಿಂದು ಬಿಸಿ ಬಿಸಿ ಟೀ ಕುಡಿದ ಮೇಲೆ ಚೂರು ನಿರಾಳ ಅನಿಸಿತು ಮನಕ್ಕೆ. ಆದರೂ ನನ್ನ ಭವಿಷ್ಯದ ಚಿಂತೆ ಭೂತದಂತೆ ಬೆನ್ನತ್ತಿ ಕಾಡುತ್ತಿತ್ತು. ಒಂತರಾ ಅನಾಥ ಭಾವ ಮನದಲ್ಲಿ. ಕಂಗಳು ತುಂಬಿ ಹರಿಯಿತು. ಮೊಬೈಲಿನ ಸ್ಕ್ರೀನ್ ನಲ್ಲಿ ಅಪ್ಪ – ಅಮ್ಮ ನಗುತ್ತಾ ನಿಂತಿದ್ರು, ಅಪ್ಪ, ಅಮ್ಮ ಅಂತ ಅವರನ್ನು ಕೈಯಿಂದ ಸವರಿ ಬಿಕ್ಕಿದೆ.
ಬದುಕು ಎಷ್ಟು ವಿಚಿತ್ರ ಅಲ್ವಾ?.ಯೋಚಿಸಿದರೂ ಉತ್ತರ ನಿಲುಕದು. ಹ್ಮ,ಅಪ್ಪ ಅಮ್ಮ, ಇದ್ದಿದ್ದರೆ ಬಡತನವೂ ಚಂದವೇ ಇರುತ್ತಿತ್ತು. ಓದು ತಲೆಗೆ ಹತ್ತದ ನನಗೆ ಸೌಂದರ್ಯ ಇದ್ದರೂ ಮದುವೆ ಸುಲಭವಾಗಿ ಕೂಡಿ ಬರುತ್ತಿರಲಿಲ್ಲ. ಬಡವರ ಮನೆ ಹೆಣ್ಣು ಮಕ್ಕಳಿಗೆ ಅದೃಷ್ಟ ಇರಬೇಕು ಅವಕ್ಕೆಲ್ಲ. ಈ ಹಾಳು ಕರೋನಾ ವೈರಸ್ ನನ್ನ ಅಪ್ಪ, ಅಮ್ಮನನ್ನು, ನುಂಗಿ ನೀರು ಕುಡಿಯಿತು. ಗಾರ್ಮೆಂಟ್ ಒಂದರಲ್ಲಿ ಹೇಗೋ ಕೆಲಸ ಸಿಕ್ಕಿತ್ತು. ಅದಕ್ಕೂ ಈ ವೈರಸ್ ಕಲ್ಲು ಹಾಕಿ, ಮನೆಯಲ್ಲಿ ಕೂಡುವಂತೆ ಮಾಡಿತ್ತು. ಅಪ್ಪ ಅಮ್ಮ ತೀರಿದ ಬಳಿಕ, ನನ್ನ ಚಿಕ್ಕಪ್ಪ, ಚಿಕ್ಕಮ್ಮ ದುಡ್ಡಿನ ಆಸೆಗೆ ಶ್ರೀಮಂತ ಕುಡುಕನಿಗೆ ನನ್ನ ಧಾರೆ ಎರೆದು ಸಾಗಿಸಲು ಹೊಂಚು ಹಾಕಿ ಕೂತಿದ್ದರು. ನನ್ನ ಮುದ್ದು ಗೆಳತಿ ಸ್ನೇಹ, ತನ್ನ ಮದುವೆಗೆ ಕರೆಯಲು ಮನೆಗೆ ಬರದೇ ಹೋಗಿದಿದ್ದರೆ. ನನ್ನ ಪಾಡು ನಾಯಿ ಪಾಡಾಗಿ ಇರುತ್ತಿತ್ತು. ವಿರೋಧ ಮಾಡುವ ಶಕ್ತಿ ಕೂಡ ನನ್ನಲ್ಲಿ ಇರಲಿಲ್ಲ. ಕಣ್ಣು ತುಂಬಿ ಅದರ ಪಾಡಿಗೆ ಕಣ್ಣೀರು ಹರಿಯುತ್ತಿತ್ತು. ಅಸಹಾಯಕ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬೇಡ. ಅಪ್ಪ ಅಮ್ಮ, ಇಲ್ಲ ಅಂದ್ರೂ ನನಗೆ ಅಣ್ಣಾ ಆಗಲಿ,ತಮ್ಮ ಆಗಲಿ ಇದ್ರೂ ಇವತ್ತು ನಾನಿಷ್ಟು ನತದೃಷ್ಟಳು ಆಗ್ತಿರಲಿಲ್ಲ. ಹೌದು, ಮನಸ್ಸಿಗೆ ಒಂದಿಷ್ಟು ಶಾಂತಿ ಬೇಕಾಗಿತ್ತು. ಅದಕ್ಕೆ ಗೆಳತಿ ಸ್ನೇಹ ಕರೆದ ತಕ್ಷಣ ಹೊರಟು ಬಂದುಬಿಟ್ಟೆ. ಅಷ್ಟು ರೋಸಿ ಹೋಗಿದೆ ನನ್ನ ಮನಸ್ಸು. ತುಂಬಾ ಅಳಬೇಕು ಅನಿಸಿ, ಮನಸ್ಸು ಹಗುರ ಆಗುವಷ್ಟು ಅತ್ತುಬಿಟ್ಟೆ.
ಏ ಮುದ್ದೂ, ಏಳೋ, ಯಾಕೋ ಹೀಗೇ ಇಲ್ಲಿ ಮಲಗಿದೀಯಾ? ಅಳುತ್ತಾ ಅಳುತ್ತಾ ಹಾಗೇ ನಿದ್ದೆ ಹೋಗಿದ್ದಾ, ಅಂತ ಕಕ್ಕುಲತೆಯಲ್ಲಿ ಕೇಳುತ್ತಾ ಸ್ನೇಹ ನನ್ನ ಎಚ್ಚರಿಸಿದಳು. ನಾನು ಗಡಬಡಿಸಿ ಎದ್ದೆ. ಇಲ್ನೋಡು, ಯಾರು ಬಂದಿದ್ದಾರೆ ಅಂತ. ನಿನ್ನ ಪರಿಚಯ ಮಾಡಿಸಬೇಕು ಅಂತಾ ನನ್ನ ವುಡ್ ಬಿ ನ ಕರೆದುಕೊಂಡು ಬಂದ್ರೆ,ಹೀಂಗಾ ನೀ ಇರೋದು..ಸ್ನೇಹ ಮುಖ ಊದಿಕೊಂಡು ಹೇಳಿದಾಗ,ನನ್ನ ಅವತಾರ ನೋಡಿ ಮುಜುಗರ ಆಯಿತು. ಬಂದೆ ಒಂದು ನಿಮಿಷ ಅಂತ ಒಳಗೆ ಹೋಗಿ,ಸ್ವಲ್ಪ ಪ್ರೆಷಪ್ ಆಗಿ ಬಂದೆ ಹೊರಗೆ.
ಮುದ್ದಮ್ಮ, ಇವರು ಸುಶಾಂತ್.. ನನ್ನ ಮದುವೆ ಆಗುವವರು.. ಅಂತ ಸ್ನೇಹ ಪರಿಚಯಿಸಿದಾಗ,ನಮಸ್ಕಾರ ಎಂದು ಕೈ ಮುಗಿದೆ.ಇವಳು ನನ್ನ ಮುದ್ದು ಗೆಳತಿ, ಬಾಲ್ಯ ಸ್ನೇಹಿತೆ , ಮೇಘನಾ. .ಈಗ ಸದ್ಯದ ಪರಿಸ್ಥಿತಿಯಲ್ಲಿ ನಾನೇ ಎಲ್ಲಾ ಅವಳಿಗೆ.ಅಪ್ಪ ಅಮ್ಮ ಇಬ್ಬರೂ ಕೋವಿಡ್ ನಿಂದ ಮೃತರಾದರು.ಅವಳ ಚಿಕ್ಕಮ್ಮ, ಚಿಕ್ಕಪ್ಪ ದುರಾಸೆಗೆ ಇವಳಿಗೆ ಬಲವಂತವಾಗಿ ಮದುವೆ ಮಾಡೋಕೆ ತಯಾರಿ ಮಾಡಿದ್ರು.ಅದಕ್ಕೆ ,ಇಲ್ಲಿಗೆ ಕರೆದುಕೊಂಡು ಬಂದೆ ಎಂದು ನನ್ನ ಪರಿಚಯಿಸಿದಳು.ಸುಶಾಂತ್ ನನ್ನ ಒಂದು ಸಲ ಪರಿಪೂರ್ಣವಾಗಿ ದೃಷ್ಟಿಸಿ,ಕೈ ಮುಗಿದರು.
ನನ್ನನ್ನೇ ದೃಷ್ಟಿಸಿ ನೋಡುವ ಸುಶಾಂತ್ ನ ವೈಖರಿ ನನಗೆ ಹಿಡಿಸಲಿಲ್ಲ. ಸ್ನೇಹ, ನೀವು ಮಾತಾಡ್ತಿರಿ.ನಾನು,ಟೀ ಮಾಡಿಕೊಂಡು ಬರ್ತೀನಿ ಅಂತ ಒಳ ಹೋದೆ.ಈಗ ಮತ್ತೊಂದು ಯೋಚನೆ ನನ್ನ ತಲೆ ಬಿಸಿ ಮಾಡತೊಡಗಿತು.ಸದ್ಯದಲ್ಲೇ ಸ್ನೇಹ ಮತ್ತೆ ಸುಶಾಂತ್ ಮದುವೆ ಆಗುವವರು. ಅವರ ಮದ್ಯೆ ನಾನು ತೊಡಕಾಗಬಾರದು.ಅವಳ ಮದುವೆ ಆದಮೇಲೆ ನನ್ನ ಬದುಕು ಹೇಗೋ.ಯಾಕೋ ನಾನೊಂತರಾ ಭೂಮಿಗೆ ಭಾರ ಎನಿಸಿ ಬಿಟ್ಟಿತು ಒಮ್ಮೆಲೇ.. ಚಹಾ ಉಕ್ಕಿ ಬರುವ ಸೂಚನೆ ಕಂಡಿದ್ದರಿಂದ,ಹಾಗೇ ಪಾತ್ರೆ ಹಿಡಿಯಲು ಹೋಗಿ ,ಕೈ ಒಮ್ಮೆ ಚುರ್ ಎಂದು ಸುಟ್ಟಿತು.ಈ ಜೀವನವೇ ಗೊಂದಲದಲ್ಲಿ ಬಿದ್ದು ಹೊರಳಾಡುತ್ತಿರುವಾಗ,ಆ ಸುಟ್ಟಿದ ಉರಿ,ಅಷ್ಟೇನೂ ಗಮನಕ್ಕೆ ಬಾರಲಿಲ್ಲ.
ಆಯ್ತಾ ಮುದ್ದು ಎನ್ನುವ ಸ್ನೇಹಾಳ ಕೂಗಿಗೆ ,ಬಂದೆ ಚಿನ್ನಿ ಅಂತ ಬೇಗ,ಬೇಗ ಟೀ ಗ್ಲಾಸಿಗೆ ಎರಸಿಕೊಂಡು ಹೊರನಡೆದೆ.ಅವರಿಬ್ಬರಿಗೂ ಟೀ ಕೊಟ್ಟು, ನಾನು ಒಳಗೆ ಬರಬೇಕು ಅನ್ನುವಷ್ಟರಲ್ಲಿ, ಇಲ್ಲೇ ನಮ್ಮ ಜೊತೆಯಲ್ಲಿ ಕೂರಿ ,ಪರ್ವಾಗಿಲ್ಲ ಎಂದರು ಸುಶಾಂತ್. ಅವರ ಮಾತಿಗೆ, ಸ್ನೇಹ.. ಕೂಡ ಧನಿಯಾದಾಗ,ಅನಿವಾರ್ಯದಿಂದ ಅಲ್ಲೇ ಮುದುಡಿ ಕುಳಿತೆ.ಪ್ರತೀಕ್ಷಣವೂ ಸುಶಾಂತ್ ದೃಷ್ಟಿ, ನನ್ನ ಮೇಲೆ ಇರುವುದು ಗಮನಕ್ಕೆ ಬಂದು,ಮತ್ತೂ ಇರಿಸುಮುರಿಸಾಯಿತು…ಅಂತೂ,ಇಂತೂ ಹೇಗೋ ಟೀ ಕುಡಿದು,ಅವರಿಬ್ಬರೂ ಟೀ ಕುಡಿದು ಇಟ್ಟ ಖಾಲಿ ಕಪ್ ತೆಗೆದುಕೊಂಡು ಒಳಗೋಡಿದೆ.ಅವಳು ಸ್ವಲ್ಪ ಹಾಗೇ.ತುಂಬಾ ಸಂಕೋಚ ಸ್ವಭಾವದವಳು ಎಂದು ಸ್ನೇಹ ಹೇಳುವುದು ಕೇಳಿಸಿತು.
ಹ್ಮ..ಮನಸ್ಸಿಗೆ ಒಂದಿಷ್ಟು ಶಾಂತಿ ಬೇಕಿತ್ತು. ಗೆಳತಿಯ ಸನಿಹದಲ್ಲೇ ಇದ್ದರೆ. ಚೂರು ನೆಮ್ಮದಿ ಎಂದು ಬಂದರೆ….ಇಲ್ಲಿ …. ಅಬ್ಬಾ, ಒಂದು ಬಾಂಡಲಿಯಿಂದ ಇನ್ನೊಂದು ಬಾಂಡಲಿಗೆ ಬೀಳುವ ಹಾಗಾಯಿತಾ ನನ್ನ ಬಾಳು. ಮತ್ತೆ ಕಣ್ಣು ಮಂಜಾಯಿತು. ಆದಾದರೂ ಬೇಕಿತ್ತು. ನನ್ನ ಕರ್ಮ ಎಂದು ಅನುಭವಿಸಿ ಬಿಡುತ್ತಿದ್ದೆ. ಇಲ್ಲಿ ಹಾಗಲ್ಲ, ನನ್ನ ಗೆಳತಿಯ ಬಾಳೂ ಇದೆ. ಅಲ್ಲೇ ಇದ್ದ ದೇವರ ಪಟಕ್ಕೆ ಕೈ ಮುಗಿದೆ. ನನ್ನಿಂದ, ನನ್ನ ಗೆಳತಿಯ ಬಾಳಿಗೆ ಯಾವ ಧಕ್ಕೆಯೂ ಆಗದಿರಲಿ ಅಂತ ಮತ್ತೆ ಸ್ನೇಹಳ ಕೂಗು, ಮುದ್ದು ಬಾರೋ… ಅವರು ಹೊರಟಿದಾರೆ ಅಂತ. ನಾನು ಎಷ್ಟು ದೂರ ಇರಬೇಕು ಅಂದರೂ, ಸಮಯ ಮತ್ತೆ ಮತ್ತೆ ನನ್ನನ್ನು ಬಾಣಲೆಗೆ ದೂಕುವಂತೆ ಮಾಡುತ್ತಿತ್ತು. ಮತ್ತೆ ಅನಿವಾರ್ಯ, ಬಂದೆ ಹೊರಗೆ. ನಿಮ್ಮ ಭೇಟಿ ತುಂಬಾ ಖುಷಿ ನೀಡಿತು. ಎವೆಯಿಕ್ಕದೇ ನನ್ನ ನೋಡಿ ನುಡಿದರು ಸುಶಾಂತ್. ತಲೆತಗ್ಗಿಸಿ ಕೈ ಮುಗಿದೆ. ಹೊರಟು ಹೋದರು. ಉಪ್! ನಿಟ್ಟುಸಿರು ಚೆಲ್ಲಿ ಕುಳಿತೆ.
ಸುಶಾಂತ್ ಹೋದ ಮೇಲೆ ‘ಹೇಗಿದೆ ಮುದ್ದು?… ನನ್ನ ಸೆಲೆಕ್ಷನ್’… ಅಂತ ಕಣ್ಣು ಮಿಟುಕಿಸಿದಳು ಸ್ನೇಹ. ಏನೂ ಅಂತ ಹೇಳಲಿ ನನ್ನ ಚಿನ್ನಮ್ಮ ಕೇಳಿದಾಗ ಗೊತ್ತಾಗದೇ, ತುಂಬಾ ಅದ್ಭುತ ಅಂದೆ. ತುಂಬಾ ಒಳ್ಳೆಯವರು ಕಣೋ. ಸ್ನೇಹ ಜೀವಿಗಳು. ಮನೆಯವರು ಕೂಡ ಅಷ್ಟೇ ಒಳ್ಳೆಯವರು ಅಂದಳು. ಹೌದಾ..ತುಂಬಾ ಖುಷಿ ಅಂದೆ. ಹೀಗೇ ಆಗಾಗ ಸುಶಾಂತ್ ಬಂದು ಹೋಗುತ್ತಿದ್ದರು. ಬಂದಾಗಲೆಲ್ಲ ನನ್ನ ಎವೆಯಿಕ್ಕದೇ ನೋಡುತ್ತಿದ್ದರು. ಹೌದು ಸುಶಾಂತ್ ತುಂಬಾ ಒಳ್ಳೆಯವರೇನೋ ನಿಜ. ಆದರೆ ನನ್ನ ಆ ರೀತಿ ನೋಡುವುದೇಕೆ? ಇದೇ ನನಗೆ ತುಂಬಾ ಗೊಂದಲಕ್ಕೆ ದೂಡಿತ್ತು. ಇದೊಂದು ಬಗೆಹರಿಯದ ಪ್ರಶ್ನೆ ಆಗಿತ್ತು. ಆಕಡೆ ಅನುಭವಿಸಲೂ ಆಗದೇ,ಸ್ನೇಹಳಲ್ಲಿ ಹೇಳಲೂ ಆಗದೇ ನನಗೆ ಜೀವ ಬಾಯಿಗೆ ಬಂದಂತೆ ಆಗುತ್ತಿತ್ತು.
ಸ್ನೇಹ ಬೆಳಿಗ್ಗೆಯೇ ಹೊರಗೆ ಹೋಗಿದ್ದಳು. ನಾನು ಎದ್ದು ಸ್ನಾನ , ಪೂಜೆ ಮುಗಿಸಿ ತಿಂಡಿ ತಿಂದು ಕೂತಿದ್ದೆ. ಕಾಲಿಂಗ್ ಬೆಲ್ ಆಯಿತು. ಬಹುಶಃ ಸ್ನೇಹಾಳೇ ಬಂದಿರಬೇಕು ಅಂದುಕೊಂಡು ಬಾಗಿಲು ತೆರೆದೆ. ನೋಡಿದರೆ ಸುಶಾಂತ್ ನಗುತ್ತಾ ನಿಂತಿದ್ರು. ನನಗೆ ಕೈಕಾಲು ನಡುಗಿತು ಒಮ್ಮೆ. ಸ್ನೇಹ ಬೇರೆ ಮನೆಯಲ್ಲಿ ಇಲ್ಲ. ಇವರು ನಾನು ಒಬ್ಬಳೇ ಇದ್ದಾಗ ಬರುವುದು ಅಷ್ಟೊಂದು ಒಳ್ಳೆಯದು ಅಲ್ಲ ಅಂತ ಅಂದುಕೊಂಡು, ಸ್ನೇಹ ಮನೆಯಲ್ಲಿ ಇಲ್ಲ ಅಂದೆ. ಗೊತ್ತು ಅಂತ ಹೇಳುತ್ತಾ, ನನ್ನ ಸರಿಸಿಕೊಂಡು ಒಳ ನಡೆದೇ ಬಿಟ್ಟರು. ನನಗೆ ಕೋಪ ಬಂದರೂ , ಸಾವರಿಸಿಕೊಂಡು, ‘ಪ್ಲೀಸ್… ನನ್ನ ಗೆಳತಿ ಬಂದಮೇಲೆ ಬನ್ನಿ ದಯವಿಟ್ಟು’.. ಅಂದೆ. ಅವರಿಗೆ ಕೈ ಮುಗಿಯುತ್ತ… ‘ಯಾಕೆ ಸ್ನೇಹ.. ಇಲ್ಲದಾಗ ನಾ ಬರಬಾರದಾ’… ಕೇಳಿದರು ನಗುತ್ತಲೇ. ನನಗೆ ನಖಶಿಖಾಂತ ಉರಿದು ಹೋಯಿತು. ‘ಪ್ಲೀಸ್ ಅರ್ಥ ಮಾಡ್ಕೊಳ್ಳಿ. ನನ್ನ ಸ್ನೇಹ, ಅವಳು ಅಪರಂಜಿ. ನಾಳೆ ದಿನ ಜನ ತಪ್ಪು ತಿಳಿದಕೊಂಡು, ಅವಳ ಬದುಕು ಹಾಳಾಗಬಾರದು’ ಅಂದೆ ಸ್ವಲ್ಪ ಕೋಪದಿಂದ. ‘ಹಹಹ ಜನ ನೂರು ಏನು, ಸಾವಿರ ಮಾತಾಡ್ತಾರೆ..ಅದಕ್ಕೆ ತಲೆಕೆಡಿಸಿಕೊಂಡರೆ ನಮ್ಮ ಬದುಕು ನಡೆಯುತ್ತಾ… ಅಂತ ನಗ್ತಾ ಹತ್ತಿರ ಬಂದು ನಿಂತರು. ನಿಜಕ್ಕೂ ನನಗೆ ಭಯನೇ ಆಗಿ ಹೋಯಿತು. ದೇವರನ್ನು ಮನಸಿನಲ್ಲಿ ನೆನೆದು ಕಾಪಾಡು ನನ್ನ ಭಗವಂತ ಅಂತ ಬೇಡಿಕೊಂಡೆ.
‘ಹತ್ತಿರ ಬಂದು ನಿಂತು, ಯಾಕೆ, ಅಷ್ಟು ಬೆವರುತ್ತಾ ನಿಂತಿದೀರ… ನಾನು ಬಂದಿದ್ದು, ನಿಮ್ಮನ್ನು ನನ್ನ ತಂಗಿಯಾಗಿ ದತ್ತು ತೆಗೆದುಕೊಳ್ಳಲು ನಿಮ್ಮ ಒಪ್ಪಿಗೆ ಪಡೆಯಲು ಅಂದರು. ನಿಜಕ್ಕೂ ನನಗೆ ಏನು ಹೇಳಬೇಕು ಅಂತಾ ತೋಚಲೇ ಇಲ್ಲ. ಅಷ್ಟರಲ್ಲಿ ಹೊರಗೆ ಹೋಗಿದ್ದ ಸ್ನೇಹ ಕೂಡ ಬಂದಿದ್ದಳು. ನನಗೆ ತಡೆಯಲಾರದಷ್ಟು ದುಃಖ ಒತ್ತರಿಸಿ ಬಂದಿತ್ತು. ಒಂದು ಕಡೆ ಸಂತೋಷ, ಇನ್ನೊಂದು ಕಡೆ ಸುಶಾಂತ್ ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದಕ್ಕೆ ಅಳುತ್ತಿದ್ದ ನನ್ನ ನೋಡಿ, ‘ಯಾಕೋ ಮುದ್ದು ..ಸುಶಾಂತ್ ನನಗೆ ಎಲ್ಲ ಹೇಳಿದಾರೆ ಕಣೋ. ನನ್ನ ಬಳಿ ಚರ್ಚೆ ಮಾಡಿದಾರೆ ..ನನಗಂತೂ ತುಂಬಾ ಖುಷಿ. ನೀ ಯಾವಾಗಲೂ ನನ್ನ ಜೊತೆಯಲ್ಲಿ ಇರಬಹುದು’ ಅಂತ ಅಂದಳು ಸ್ನೇಹ.
ಸುಶಾಂತ್ ನನ್ನ ಬಳಿ ಬಂದು ನೋಡಿ ಮೇಘನಾ, ನಿಮ್ಮ ಮೇಲಿನ ಅನುಕಂಪದಿಂದ ಈ ನಿರ್ಧಾರ ಅಲ್ಲ. ನನಗೂ ಒಬ್ಬ ಮುದ್ದು ತಂಗಿ ಇದ್ದಳು. ನಿಮ್ಮಷ್ಟೇ ವಯಸ್ಸು, ನೋಡಲೂ ಸರಿಸುಮಾರು ನಿಮ್ಮ ತರಹವೇ. ಈಗ ನಾಲ್ಕು ತಿಂಗಳ ಹಿಂದೆ ಅವಳನ್ನು ಕಳೆದುಕೊಂಡ್ವಿ, ಈ ಕರೋನಾ ಹೆಮ್ಮಾರಿಯಿಂದ. ನಿಮ್ಮ ನೋಡಿದ ಮೊದಲ ದಿನದಿಂದ ಕೂಡ ನಾನು, ನಿಮ್ಮೊಳಗೆ ನನ್ನ ತಂಗಿಯನ್ನು ಕಾಣ್ತಿದೀನಿ. ಸ್ನೇಹಾಳಲ್ಲಿ ಹೇಳಿದಾಗ ತುಂಬಾ ಖುಷಿ ಪಟ್ಟಳು. ಹೇಳು ಪುಟ್ಟ, ನಮ್ಮ ಮನೆಯ ಮಗಳಾಗಿ ಬರುವೆಯಾ? ಈ ಅಣ್ಣನಿಗೆ ಮುದ್ದು ತಂಗಿಯಾಗಿ ಬರುವೆಯಾ ಮುದ್ದಮ್ಮ ಅಂತ ಸುಶಾಂತ್ ಅಳುತ್ತಾ ನನ್ನ ತಲೆ ನೇವರಿಸುತ್ತಾ ಕೇಳಿದಾಗ.. ಅವರಲ್ಲಿ ನನ್ನ ಅಪ್ಪನ ಮಮತೆಯೇ ಕಂಡಂತೆ ಭಾಸವಾಯಿತು. ಸ್ನೇಹ ಕೂಡ, ಹೂ ಹೇಳೋ ಮುದ್ದಮ್ಮ, ಇವರಿಗೆ ತಂಗಿಯಾಗಿ, ನನ್ನ ಮುದ್ದು ನಾದಿನಿಯಾಗಿ ನನ್ನ ಮನೆ ನಂದಾದೀಪ ಆಗೋ … ಅಂತ, ಅವಳೂ ಅಳತೊಡಗಿದಳು. ಅವರಿಬ್ಬರ ಬೇಡಿಕೆಯನ್ನು ನಿರಾಕರಿಸಲು ಯಾವ ಕಾರಣವೂ ಇರಲಿಲ್ಲ. ಅವರಿಬ್ಬರ ಕೈ ಹಿಡಿದು ಹೂ ಎಂದೆ. ಇಬ್ಬರೂ ನನ್ನ ತಬ್ಬಿಕೊಂಡು ಅತ್ತರು. ಓ ಎಲ್ಲಾ ನೀವು ನೀವೇ ಡಿಸೈಡ್ ಮಾಡಿದರೆ ಮುಗೀತಾ?.ನಾವೂ ಇದೀವಿ…ಎನ್ನುವ ಧ್ವನಿ ಕೇಳಿ, ಬಾಗಿಲ ಕಡೆ ತಿರುಗಿ ನೋಡಿದರೆ,ಅಲ್ಲಿ ಸುಶಾಂತ್ ಅಣ್ಣನ ಅಪ್ಪ, ಅಮ್ಮ,ಮತ್ತೆ ಒಬ್ಬ ಸುಂದರ ಹುಡುಗ ನಿಂತಿದ್ರು.
ಅಪ್ಪ ನನ್ನ ಹತ್ತಿರ ಬಂದು ಮಗಳೇ, ನಾವೆಲ್ಲರೂ ಮೊದಲೇ ತೀರ್ಮಾನ ತಗೊಂಡಾಗಿದೆ. ಈಗ ನಿನ್ನ ಒಪ್ಪಿಗೆ ಸಿಕ್ಕಿದ್ದು ತುಂಬಾ ಖುಷಿ ನಮಗೆ. ಇವತ್ತಿನಿಂದ ನಮ್ಮ ಮನೆ ಮಗಳು ನೀನು. ನಿನ್ನ ಜವಾಬ್ದಾರಿ, ನಮ್ಮದು ಎಂದು ನನ್ನ ಆಶೀರ್ವದಿಸಿದರು. ಅಪ್ಪ ಎಂದು ತಬ್ಬಿಕೊಂಡೆ ಸಂಭ್ರಮದಿಂದ.ನಿಜಕ್ಕೂ ನನ್ನ ಚಿನ್ನಮ್ಮ, ನನ್ನ ಸ್ನೇಹ ..ನನಗೆ ಇಂತ ಒಂದು ಸುಂದರ ಕೌಟುಂಬಿಕ ಉಡುಗೊರೆ ಕೊಡುತ್ತಾಳೆ ಎಂಬ ನೀರೀಕ್ಷೆಯ ಸುಳಿವೂ ಇರಲಿಲ್ಲ ನನಗೆ. ಅಮ್ಮ ಕೂಡ ಖುಷಿಯಿಂದ ತಬ್ಬಿಕೊಂಡು ಮತ್ತೆ ನಮ್ಮ ಮಗಳು ನಮಗೆ ನಿನ್ನ ರೂಪದಲ್ಲಿ ಸಿಕ್ಕಿದಳು..ಆನಂದ ಭಾಷ್ಪ ಸುರಿಸುತ್ತಾ ನನ್ನ ಎದೆಗಾನಿಸಿಕೊಂಡರು…ನಿಜಕ್ಕೂ ಸಂತಸವಾಯಿತು. ಯಾರೂ ಇಲ್ಲದ ದಿಕ್ಕಿಲ್ಲದ ಅನಾಥೆಗೆ ಸುಂದರ ಕುಟುಂಬ ಸಿಕ್ಕಿತ್ತು.. ಇದೇ ಖುಷಿಯಲ್ಲಿ ಇನ್ನೊಂದು ಡಬಲ್ ಖುಷಿ ಇದೆ ಕೇಳಿ ಅಂದ ಅಣ್ಣಾ. ಎಲ್ಲರೂ ಅವನ ಕಡೆ ತಿರುಗಿ ನೋಡಿದೆವು. ಅಣ್ಣಾ, ಅಪ್ಪ ಅಮ್ಮನ ಜೊತೆಯಲ್ಲಿ ಬಂದ ಸುಂದರ ಹುಡುಗನ ಹೆಗಲ ಮೇಲೆ ಕೈ ಹಾಕಿ, ಮೇಘನಾ ಈ ಹುಡುಗ ನಿನ್ನ ಒಪ್ಪಿದಾನೆ. ನಿನಗೆ ಒಪ್ಪಿಗೆಯಾ?…ಇವನು ನನ್ನ ಅತ್ತೆಯ ಮಗ, ವಸಂತ್ ಅಂತ. ಈಗ ನಿನಗೂ ಅವರು ಅತ್ತೆ. ಅಂದ್ರೆ ಇವ ನಿನಗೆ ಸಹೋದರತ್ತೆಯ ಮಗ’ ಅಂತ ಹೇಳಿ ನನ್ನ ಕಡೆ ಕಣ್ಣು ಮಿಟುಕಿಸಿದ. ನಾನು ನಾಚಿ ನೀರಾಗಿ ಸ್ನೇಹಳ ಕಡೆ ನೋಡಿದೆಎಲ್ಲರೂ ಜೋರಾಗಿ ಕಿರುಚಿದರು. “ಮೌನಂ ಸಮ್ಮತಿ ಲಕ್ಷಣಂ” ಅಂತ. ತಲೆ ತಗ್ಗಿಸಿ ನಿಂತೆ. ಸ್ನೇಹ ನನ್ನ ಬಳಿ ಬಂದು ‘ಮುದ್ದಮ್ಮ, ಕೊನೆಗೂ ನನ್ನ ಮುದ್ದು ನಾದಿನಿಯ ಬಾಳಲ್ಲಿ ವಸಂತಾಗಮನ ಆಯಿತು’ ಅಂತ ನಕ್ಕು ಕೆನ್ನೆ ಗಿಲ್ಲಿದಳು…ಹ್ಮ ಸರಿ, ಎರಡು ಜೋಡಿಯದೂ ಒಂದೇ ದಿನ, ಒಂದೇ ಮುಹೂರ್ತದಲ್ಲಿ ವಾಲಗ ಊದಿಸಿ ಬಿಡೋಣ. ಅಣ್ಣಾ ತಂಗಿಯ ಮದುವೆ ಒಂದೇ ಮುಹೂರ್ತದಲ್ಲಿ ಆಗಲಿ.. ಎಂದು ಅಪ್ಪ ಅಮ್ಮ ನುಡಿದಾಗ, ನಾವಿಬ್ಬರೂ ಗೆಳತಿಯರು ನಾಚಿ ನೀರಾಗಿ ನಿಂತೆವು. ನಮ್ಮ ಜೋಡಿಯನ್ನು ಓರೆಗಣ್ಣಿನಲೇ ದಿಟ್ಟಿಸುತ್ತಾ…
- ಶೋಭಾ ನಾರಾಯಣ ಹೆಗಡೆ – ಶಿರಸಿ.
