ಪಶುವೈದ್ಯನಿಗೆ ಎದುರಾಗುವ ಅಪಾಯಗಳು (ಭಾಗ೧)



ರಾತ್ರಿ- ಹಗಲು, ಮಳೆ – ಚಳಿ ಎನ್ನದೆ ಪಶುಗಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಪಶುವೈದ್ಯ ಡಾ.ಯುವರಾಜ ಹೆಗಡೆ ಅವರು ತಮ್ಮ ಉದ್ಯೋಗದಲ್ಲಿ ಎದುರಾಗುವ ಸಂಕಷ್ಟಗಳನ್ನು ಲೇಖನದ ಮೂಲಕ ಓದುಗರ ಮುಂದೆ ಒಂದೊಂದಾಗಿ ಬಿಚ್ಚಿಟ್ಟಿದ್ದಾರೆ. ಈ ಲೇಖನ ಓದಿದ ಮೇಲೆ ಪಶುವೈದ್ಯರ ಮೇಲೆ ಗೌರವ ಹೆಚ್ಚಾಗುವುದಂತೂ ಖಂಡಿತ.ತಪ್ಪದೆ ಓದಿ…

– ಕಾಡಿದ ”ಬ್ರುಸೆಲ್ಲಾ” ಮಾರಿ

ಇಲಾಖೆಗೆ ಸೇರಿ ಎರಡು ವರ್ಷಗಳು ಕಳೆದಿತ್ತು. ಏನನ್ನೋ ಸಾಧಿಸುವ ಛಲ , ಹುರುಪು, ತಾರುಣ್ಯ , ಪ್ರಾಮಾಣಿಕತೆ ಎಲ್ಲವೂ ತುಳುಕುತ್ತಿದ್ದ ಕಾಲ. ಕೃಷಿ ವಿಜ್ಞಾನ ಕೇಂದ್ರ ಹಾಸನ ಮತ್ತು ಶಿರಸಿಯಲ್ಲಿ ತಲಾ ಒಂದು ವರ್ಷ ತಾತ್ಕಾಲಿಕ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ 2006 ರಲ್ಲಿ ತೀರ್ಥಹಳ್ಳಿಯ ದೇವಂಗಿಯಲ್ಲಿ #ಸರ್ಕಾರಿ_ಪಶುವೈದ್ಯರಾಗಿ ಕರ್ತವ್ಯಕ್ಕೆ ಹಾಜರಾಗಿದ್ದೆ. ವಿವಾಹವೂ ಆಗಿರಲಿಲ್ಲ, ಹೆಚ್ಚಿನ ಜವಾಬ್ದಾರಿಗಳೇನೂ ಇಲ್ಲದ ಆ ವಯಸ್ಸಿನಲ್ಲಿ ನನ್ನಿಷ್ಟವಾದ ವೃತ್ತಿಯನ್ನು ತುಂಬಾ ಆಸಕ್ತಿ ಹಾಗೂ ಶ್ರಮವಹಿಸಿ ಮಾಡುತ್ತಿದ್ದೆ. ಆಸಕ್ತಿ ಎಷ್ಟಿತ್ತೆಂದರೆ, ಬೆಳಗ್ಗೆ 7.30 ಕ್ಕೆ ಪಶುಚಿಕಿತ್ಸಾಲಯದ ಬಾಗಿಲು ತೆರೆಯುತ್ತಿದ್ದದ್ದು, “ಇವರ್‍ಯಾರೋ ಹೊಸ ಡಾಕ್ಟ್ರು ಬೆಳಗ್ಗೆ ಇಬ್ಬನಿ ಆರುವುದಕ್ಕೂ ಮುಂಚೆಯೇ ಬಂದಿರ್‍ತಾರೆ ಮಾರಾಯ” ಎಂದು ಕುತೂಹಲದಿಂದ ಮಾತನಾಡಿಕೊಳ್ಳುತ್ತಿದ್ದದ್ದು ಇದಕ್ಕೆ ಸಾಕ್ಷಿಯಾಗಿತ್ತು.ಆದರೆ ಅದೇಕೋ ನನ್ನ ಆರೋಗ್ಯ ಮಾತ್ರ ಏರುಪೇರಾದಂತಹ ಅನುಭವ.

ನಾಲ್ಕು ವರ್ಷಗಳಿಂದ ಬಿಟ್ಟು ಬಿಟ್ಟು ಕಾಡಲಾರಂಬಿಸಿದ ಜ್ವರ, ಹಿಂದಲೆ ನೋವು, ಬೆಳಗ್ಗೆ ಎದ್ದೊಡನೆ ಮೈಯಲ್ಲಿ ಕಂಪನದ ಅನುಭವ, ಒಮ್ಮೆಲೇ ಹಣೆಯಲ್ಲಿ ಬೆವರಿನ ಹನಿಗಳು ಮೂಡಿ ಜ್ವರ ಇಳಿಯುತ್ತಿತ್ತು. ರಾತ್ರಿ ಚೆನ್ನಾಗಿ ನಿದ್ರಿಸಿದ್ದರೂ ಮುಂಜಾನೆ ಎದ್ದಾಗ ನಿದ್ದೆಯೇ ಮಾಡಿಲ್ಲವೆನ್ನುವಷ್ಟು ಆಯಾಸ, ತೂಕದಲ್ಲಿ ಗಣನೀಯ ಇಳಿಕೆ ಕಂಡು ನಿತ್ರಾಣನಾಗಿದ್ದೆ. ತೀರ್ಥಹಳ್ಳಿಯಲ್ಲಿ ಪರಿಚಯವಿದ್ದ ಅನೇಕ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆದೆ. ಅನೇಕ ವಿಧವಾದ ರಕ್ತ ಪರೀಕ್ಷೆ ನಡೆಸಲ್ಪಟ್ಟವು. ಬಿಟ್ಟು ಬಿಟ್ಟು ಕಾಡುವ ಜ್ವರ ಎಂದೊಡನೆ ಸಾಮಾನ್ಯವಾಗಿ ವೈದ್ಯರು ಟೈಫಾಯ್ಡ್, ಮಲೇರಿಯಾ, ಡೆಂಗ್ಯೂ, ಫೈಲೇರಿಯಾದಂತಹ ಕಾಯಿಲೆಗಳನ್ನು ಅನುಮಾನಿಸುವುದು ಸಹಜ. ಅದರೆ ಪ್ರಯೋಗಾಲಯದ ವರದಿಯಲ್ಲಿ ಅದ್ಯಾವುದೂ ಅಲ್ಲ. ವೈದ್ಯರು ತಿಳಿಸಿದಂತೆ ಸುಸ್ತು ಕಡಿಮೆ ಮಾಡಲು ಒಂದಷ್ಟು ಟಾನಿಕ್ ಗಳು, ಮಾತ್ರೆಗಳನ್ನು ತಿಂದದ್ದಾಯಿತು. ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಮಂಡಿ ಮತ್ತು ಸೊಂಟದ ಮೂಳೆಗಳು ಮತ್ತಷ್ಟು ದುರ್ಬಲವಾಗತೊಡಗಿ ನಡೆದಾಡುವಾಗ ‘ಕರಕ್’ ಎಂಬ ಶಬ್ದ ಬರಲಾರಂಬಿಸಿತು. ಇನ್ನು ನನ್ನಿಂದ ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ ಬಂದಿದ್ದೆ. ಆದರೆ ತನ್ನೊಳಗಿದ್ದ ಹುರುಪು ಮಾತ್ರ ಇವೆಲ್ಲವನ್ನು ನಿರ್ಲಕ್ಷಿಸಿ ಮೈತುಂಬಾ ಕೆಲಸ ಅಂಟಿಸಿಕೊಂಡು ರಾತ್ರಿ 10 ಗಂಟೆಗೆ ಮನೆ ಸೇರುತ್ತಿದ್ದೆ.

ಫೋಟೋ ಕೃಪೆ : https://infonet-biovision.org/

ಅದೊಂದು ದಿನ ಕರ್ನಾಟಕ ಪಶುವೈದ್ಯಕೀಯ ಸಂಘ, ಶಿವಮೊಗ್ಗದವರು ಉಪ ನಿರ್ದೇಶಕರ ಕಛೇರಿಯಲ್ಲಿ “#ಬ್ರುಸೆಲ್ಲಾ” ಸೋಂಕಿನ ಕುರಿತು ತಾಂತ್ರಿಕ ಕಾರ್ಯಗಾರವನ್ನು ಹಮ್ಮಿಕೊಂಡು, ಅಂದು ಭಾಗವಹಿಸಿದ ಜಿಲ್ಲೆಯ ಎಲ್ಲಾ ಪಶುವೈದ್ಯರ ರಕ್ತದ ಮಾದರಿಗಳನ್ನು ಪಡೆದು ಬ್ರುಸೆಲ್ಲಾ ಪರೀಕ್ಷೆಗೆ ಒಳಪಡಿಸಿದರು. ಎರಡು ದಿನಗಳ ನಂತರ ಸಂಘದ ಪದಾಧಿಕಾರಿಗಳಾಗಿದ್ದ ಡಾ. ನಾಗರಾಜ ಕೆ.ಎಂ (ಈಗಿನ ತೀರ್ಥಹಳ್ಳಿ ತಾಲ್ಲೂಕಿನ ಮುಖ್ಯಪಶುವೈದ್ಯಾಧಿಕಾರಿಗಳು) ರವರಿಂದ ದೂರವಾಣಿ ಕರೆ ನನ್ನನ್ನು ಸಂಪರ್ಕಿಸಿತು. “ ಡಾ. ಯುವರಾಜ್, ನೀವು ಬ್ರುಸೆಲ್ಲಾ ಪಾಸಿಟಿವ್” ನಮ್ಮ ಜಿಲ್ಲೆಯ 60 ಪಶುವೈದ್ಯರಲ್ಲಿ ಇಬ್ಬರು ಪಾಸಿಟಿವ್ ಬಂದಿದ್ದು ಅದರಲ್ಲಿ ನೀವೂ ಒಬ್ಬರು. ಹೆದರಬೇಡಿ , ಸೂಕ್ತ ಚಿಕಿತ್ಸೆ ಲಭ್ಯವಿದೆ. ಅನುಭವಸ್ಥ ವೈದ್ಯರನ್ನು ಸಂಪರ್ಕಿಸಿ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜಿನ #ಮೈಕ್ರೋಬಯಾಲಜಿ ಪ್ರಾಧ್ಯಾಪಕರಾಗಿರುವ ಡಾ. ಶ್ರೀಕೃಷ್ಣ ಇಸ್ಲೂರ್ ಅವರನ್ನು ಸಂಪರ್ಕಿಸಿ ಎಂದು ಸಮಾಧಾನ ಹೇಳಿದರು.

ನನಗೆ ಆರಂಭದಲ್ಲಿ ಆಘಾತವಾಯಿತಾದರೂ, ನಾನು ನಾಲ್ಕು ವರ್ಷಗಳ ಕಾಲ ಅನುಭವಿಸಿದ ಸಮಸ್ಯೆಗೆ ಕಾರಣವೇನೆಂದು ಪ್ರಯೋಗಾಲಯದ ವರದಿಯಲ್ಲಿ ಧೃಡಪಟ್ಟಿತ್ತು. ಹೌದು, ನನಗೆ ಪ್ರಾಣಿಜನ್ಯ (ಪ್ರಾಣಿಗಳಿಂದ ಮನುಷ್ಯನಿಗೆ ಭಾದಿಸುವ ಸೋಂಕು) ರೋಗವಾದ ”ಬ್ರುಸೆಲ್ಲಾ”ಮಾರಿ ತಗಲಿ ಸುಮಾರು 4 ವರ್ಷಗಳೇ ಕಳೆದಿತ್ತು. ಈ ಕಾಯಿಲೆಯು ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಅಪರೂಪಕ್ಕೆ ವನ್ಯ ಜೀವಿಗಳಲ್ಲೂ ಕಂಡು ಬರುವುದಿದ್ದು ಅವುಗಳಲ್ಲಿ ಗರ್ಭದರಿಸಿದ ಆರು ತಿಂಗಳ ನಂತರ ಗರ್ಭಪಾತ, ಕಂದು ಹಾಕಿದ ಪ್ರಾಣಿಗಳಲ್ಲಿ ಸತ್ತೆ (ಕಸ , ಮಾಸ ) ಬೀಳದಿರುವುದು, ಆರ್ಥರೈಟಿಸ್ ನಂತಹ ಸಮಸ್ಯೆಗಳು ಕಂಡು ಬರುತ್ತದೆ. ಹಾಲಿನ ಮುಖಾಂತರವೂ ರೋಗಾಣುಗಳು ಸೃಜಿಸಲ್ಪಟ್ಟು ಕಾಯಿಸದೇ ಕುಡಿದ ಹಸಿ ಹಾಲಿನಿಂದ ರೋಗ ಪ್ರಸಾರವಾಗುತ್ತದೆ.
ಗರ್ಭಪಾತವಾಗಿ ಸತ್ತೆ/ಕಸ ( placenta) ಬೀಳದಿರುವಾಗ ಅಥವಾ ಬ್ರುಸೆಲ್ಲಾ ಸೋಂಕಿಗೊಳಗಾಗಿ ಗರ್ಭದಲ್ಲಿಯೇ ಕರುಗಳು ಮೃತಪಟ್ಟಾಗ ಪಶುವೈದ್ಯರು ಚಿಕಿತ್ಸೆ ನೀಡಿ ಅದನ್ನು ಹೊರತೆಗೆಯುವ ಸಂದರ್ಭಗಳಲ್ಲಿ ರೋಗಗ್ರಸ್ಥ ಹಸುವಿನ ಸತ್ತೆಯು ಆಕಸ್ಮಿಕವಾಗಿ ನಮ್ಮ ಚರ್ಮಕ್ಕೆ ಸ್ಪರ್ಷಿಸಲ್ಪಟ್ಟು ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಗಳು ನಮ್ಮ ಶರೀರವನ್ನು ತಲುಪುತ್ತವೆ.

ಫೋಟೋ ಕೃಪೆ : gri.najah.edu

ಹಾಗೆಯೇ ಕುಳಿತವನು ತನಗೆ ಎಲ್ಲಿ ಈ ಸೋಂಕು ತಗುಲಿರಬಹುದೆಂದು ಯೋಚಿಸಲಾರಂಬಿಸಿದೆ. ಹಾಸನದಲ್ಲಿ ಒಮ್ಮೆ ಕುರಿಯೊಂದು ಮರಿ ಹಾಕಲಾರದೆ ಗರ್ಭದಲ್ಲಿ ಮರಿ ಮೃತಪಟ್ಟಾಗ ಅನಿವಾರ್ಯಾವಾಗಿ ಸಿಸೇರಿಯನ್ ಗೆ ಒಳಪಡಿಸಿದ್ದು, ಆ ಕುರಿಗೆ ನಂತರದ ಗರ್ಭಾವಸ್ಥೆಯಲ್ಲಿಯೂ ಅದಕ್ಕೆ ಗರ್ಭಪಾತವಾಗಿದ್ದು ನೆನಪಾಯಿತು. ಬಹುಶಃ ಅದು ಬ್ರುಸೆಲ್ಲಾ ಸೋಂಕಿತ ಕುರಿ.ಅದನ್ನು ನಿರ್ವಹಿಸುವಾಗ ನನಗೆ ಸೋಂಕು ತಗಲಿ, ಆ ದಿನಗಳಿಂದಲೂ ನನಗೆ ನಿಧಾನವಾಗಿ ಲಕ್ಷಣಗಳು ಕಾಣುತ್ತಾ ಮುಂದುವರೆದಿತ್ತು. ವಿಷಯ ತಿಳಿದ ನಂತರ ಇನ್ನು ತಡ ಮಾಡುವಂತಿರಲಿಲ್ಲ. #ತೀರ್ಥಹಳ್ಳಿಯ ಮೇಳಿಗೆ ನರ್ಸಿಂಗ್ ಹೋಂ ನ ವೈದ್ಯರಾದ ಡಾ. ಸತ್ಯನಾರಾಯಣ ಅವರನ್ನು ಬೇಟಿಯಾಗಿ, ನನ್ನ ವರದಿಯನ್ನು ತೋರಿಸಿ ಚರ್ಚಿಸಿದೆ. ಅವರು 45 ದಿನಗಳ ಚಿಕಿತ್ಸಾ ಪಟ್ಟಿಯನ್ನು ನೀಡಿದರು. ನನ್ನ ಸಮಾದಾನಕ್ಕಾಗಿ ಹಿರಿಯರಾದ ಡಾ.ನಾರಾಯಣ ಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರೂ ಕೂಡ ಚಿಕಿತ್ಸಾ ವಿವರಗಳನ್ನು ಪರಿಶೀಲಿಸಿ ದೈರ್ಯ ನೀಡಿದರು. ಸುದೀರ್ಘ 45 ದಿನಗಳ ಆಂಟಿಬಯೋಟಿಕ್ ಸೇವಿಸುವಾಗ ನಾನು ಪಟ್ಟ ಯಾತನೆ ಅಷ್ಟಿಷ್ಟಲ್ಲ. ಬಾಯಿಯ ಸಿಪ್ಪೆ ಸುಲಿಯಲಾರಂಭಿಸಿತು. ಆಹಾರವೇ ರುಚಿಸುತ್ತಿರಲಿಲ್ಲ, ಬಹಳ ನಿತ್ರಾಣನಾಗಿ ಬದುಕುವ ಅನಿವಾರ್ಯತೆಯಲ್ಲಿ ಮಾತ್ರೆಗಳನ್ನು ಸೇವಿಸಲಾರಂಬಿಸಿದೆ. ಚಿಕಿತ್ಸೆ ಪ್ರಾರಂಭವಾದ ಎರಡು ವಾರಗಳಲ್ಲಿ ರೋಗಲಕ್ಷಣಗಳು ಕಡಿಮೆಯಾದವು. ಆದರೆ ಸಮಸ್ಯೆ ಅಷ್ಟಕ್ಕೇ ಬಗೆ ಹರಿಯಲಿಲ್ಲ, ದೀರ್ಘಕಾಲದ ಬ್ರುಸೆಲ್ಲಾ ಸೋಂಕು ಮನುಷ್ಯರಲ್ಲಿ ಸಂತಾನಹೀನತೆ (sterility ) ಉಂಟು ಮಾಡುವ ಸಾದ್ಯತೆ ಇರುತ್ತದೆ. ಆಗಿನ್ನೂ ವಿವಾಹವಾಗಿರದ ನಾನು ನಂತರದ ಸಾಧಕ ಬಾಧಕಗಳ ಕುರಿತು ಈಗಲೇ ನಿರ್ಧರಿಸಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ. ಅದಕ್ಕಾಗಿ ಶಿವಮೊಗ್ಗ, ಮಣಿಪಾಲದ ಪ್ರತಿಷ್ಠಿತ ವೈದ್ಯರನ್ನು ಭೇಟಿಯಾದೆ. ಅಲ್ಲಿ ನನ್ನನ್ನು ಪರಿಶೀಲಿಸಿದ ವೈದ್ಯರು “ನಿಮಗಾಗಿರುವ ಸೋಂಕು ತೀವ್ರಸ್ವರೂಪಕ್ಕೆ ತಿರುಗಿಲ್ಲವಾದ್ದರಿಂದ ಅಂತಹ ಗಂಭೀರ ಸಮಸ್ಯೆಗಳು ಆಗಲಾರದು” ಎಂದು ಖಾತ್ರಿ ಪಡಿಸಿದರು.



ಪ್ರಾಣಿಗಳ ಪ್ರಸವ ನಿರ್ವಹಿಸುವಾಗ, ಜಾನುವಾರುಗಳ ಸತ್ತೆ (placenta) ತೆಗೆಯುವಾಗ, ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ರಕ್ಷಣೆಗಾಗಿ ಗ್ಲೌಸ್ ಮತ್ತಿತರ ಪರಿಕರಗಳನ್ನು ಬಳಸುವುದಿಲ್ಲವೇ? ಎಂಬ ಸಂಶಯ ನಿಮ್ಮನ್ನು ಸಹಜವಾಗಿ ಕಾಡುತ್ತದೆ. ಖಂಡಿತವಾಗಿ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ಅನುಸರಿಸುತ್ತೇವೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸೋಂಕು ನಮ್ಮ ರಕ್ಷಣಾ ವ್ಯಾಪ್ತಿಯನ್ನು ಬೇದಿಸಿ ಬಳ ನುಸುಳಿ ಬಿಡುತ್ತದೆ.ಹಾಗೆಂದ ಮಾತ್ರಕ್ಕೆ ಅವುಗಳನ್ನು ನಿರ್ವಹಿಸುವ ಎಲ್ಲಾ ಪಶುವೈದ್ಯರಿಗೂ ಸೋಂಕು ಬಂದೇ ಬಿಡುತ್ತದೆ ಎನ್ನಲಾರೆ, ಅವೆಲ್ಲವೂ ಆಕಸ್ಮಿಕ ಮತ್ತು ನಮ್ಮ ಹಣೆ ಬರಹ ಎನ್ನಬಹುದು ಅಷ್ಟೇ.

ಅಂತೂ ನನ್ನ ವೃತ್ತಿ ಬದುಕಿನಲ್ಲಿ ಅತ್ಯಂತ ಕ್ಲಿಷ್ಟಕರ ಸನ್ನಿವೊಂದು ಎದುರಾಗಿ ಸೂಕ್ತ ಚಿಕಿತ್ಸೆಯಿಂದ ಹೊರಬಂದೆ. ಅಂದು ನನಗಾಗಿರುವ ಸಮಸ್ಯೆಯನ್ನು ಪತ್ತೆ ಹಚ್ಚಲು ಸಹಕರಿಸಿದ ಪಶು ವೈದ್ಯಕೀಯ ಸಂಘ, #ಶಿವಮೊಗ್ಗ ಹಾಗೂ ಚಿಕಿತ್ಸೆ ನೀಡಿ ಗುಣಪಡಿಸಿದ ವೈದ್ಯರುಗಳಿಗೆ ಮತ್ತು ನನಗೆ ಬೆಂಬಲವಾಗಿ ನಿಂತ ಸಮಸ್ತ ಪಶುವೈದ್ಯ ಬಳಗಕ್ಕೆ ಚಿರಋಣಿಯಾಗಿರುತ್ತೇನೆ . ಇಂತಹ ಸಮಸ್ಯೆಗಳನ್ನು ಎದುರಿಸಿರುವ ಅನೇಕ ಪಶುವೈದ್ಯರು ಸಾರ್ವಜನಿಕವಾಗಿ ಹಂಚಿಕೊಳ್ಳಲು ಹಿಂಜರಿಯಲು ಕಾರಣವೇನೆಂಬುದನ್ನು ಈ ಘಟನೆಯನ್ನು ಓದಿದವರಿಗೆ ಈಗಾಗಲೇ ತಿಳಿದಿರುತ್ತದೆ ಎಂದು ಭಾವಿಸುವೆ . ಆದರೆ ನಮ್ಮ ವೃತ್ತಿ ಜೀವನದಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳು ಮತ್ತು ಅಪಾಯಗಳನ್ನು ಸಾರ್ವಜನಿಕರ ಮುಂದಿಡುವ ಸಲುವಾಗಿ ಬಿಚ್ಚು ಮನಸ್ಸಿನಿಂದ, ನನಗೆ ವೈಯಕ್ತಿಕವಾಗಿ ಎದುರಾದ ಸಮಸ್ಯೆಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿರುತ್ತೇನೆ.

  • ಮುಂದಿನ ಲೇಖನ – ಆಲ್ಸೇಷಿಯನ್ ಶ್ವಾನಕ್ಕೆ ಚಿಕಿತ್ಸೆ ನೀಡುವಾಗ ನಡೆದ ಅನಿರೀಕ್ಷಿತ ದಾಳಿ.

  • ಡಾ.ಯುವರಾಜ ಹೆಗಡೆ (ಪಶುವೈದ್ಯರು,ವೈದಕೀಯ ಬರಹಗಾರರು) ತೀರ್ಥಹಳ್ಳಿ.

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW