ದೊಡ್ಡಪ್ಪನ ಹೆಣದ ಮುಂದೆ ದೊಡ್ಡಮ್ಮ ಒಬ್ಬರೇ ಕೂತು ದುಃಖಿಸುತ್ತಿದ್ದರು, ಅವರನ್ನು ನೋಡಿಕೊಳ್ಳಲು ಹೇಳಿದ್ದ ಸೀನಿಯರ್ ವಿಧವೆಯೊಬ್ಬರು ದೊಡ್ಡಮ್ಮನ ಪಕ್ಕದಲ್ಲಿ ಕೂತವರು ಆಮೇಲೆ ನಾಪತ್ತೆಯಾದರು, ಮುಂದೇನಾಯಿತು ಕತೆಗಾರ ಕೆ. ಸತ್ಯನಾರಾಯಣ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಆವಾಗ, ನಾವು ಅಂದರೆ ಚಿಕ್ಕಪ್ಪ-ದೊಡ್ಡಪ್ಪ, ಅವರ ಮಕ್ಕಳು, ಎಲ್ಲರೂ ಒಟ್ಟಿಗೇ ವಾಸಿಸುತ್ತಿದ್ದೆವು. ಹಾಗೇ ಒಂದು ಸಂಜೆಯ ಹೊತ್ತಿನಲ್ಲಿ ನಮ್ಮ ದೊಡ್ಡಪ್ಪ ತೀರಿಹೋದರು. ಸೂರ್ಯಾಸ್ತಕ್ಕೆ ಮುಂಚೆ ದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ರಾತ್ರಿಯೆಲ್ಲಾ ಮನೆಯಲ್ಲೇ ದೇಹವನ್ನು ಇಟ್ಟುಕೊಳ್ಳಬೇಕಾಯಿತು. ನಮ್ಮ ದೊಡ್ಡಮ್ಮ ಪಾಪ, ಹೆಣದ ಮುಂದೆಯೇ ಕುಳಿತು ಜೋರಾಗಿ ಅಳುತ್ತಿದ್ದರು. ತಲೆ ಚಚ್ಚಿಕೊಳ್ಳಲು, ತಾಳಿ ಕೂಡ ಕಿತ್ತೆಸೆಯಲು ಪ್ರಾರಂಭಿಸಿದರು. ಈಗ ಬೇಡ, ಇದಕ್ಕಿನ್ನೂ ಸಮಯವಿದೆ ಅಂತ ಹೇಳಿ ಸಮಾಧಾನ ಪಡಿಸಬೇಕಾಯಿತು.
ನಮ್ಮ ದೊಡ್ಡಮ್ಮನನ್ನು ನೋಡಿಕೊಳ್ಳಲು ಸುಮಾರು ಇಪ್ಪತ್ತು ವರ್ಷಗಳ ಸೀನಿಯಾರಿಟಿ ಇರುವ ವಿಧವೆಯನ್ನು ಒಪ್ಪಿಸಿ, ನೀವು ಅವರ ಜೊತೆಯೇ ಇರಿ ಎಂದು ಕೇಳಿಕೊಂಡೆವು. ಅವರೂ ಒಪ್ಪಿಕೊಂಡರು. ತುಂಬಾ ದಣಿದಿದ್ದ ನಾನು ಪಕ್ಕದ ಕೋಣೆಗೆ ಹೋಗಿ ಮಲಗಿದೆ. ಏನೋ ಭಯವಾದಂತಾಗಿ ಎದ್ದು ಕೋಣೆಯಿಂದ ಹೊರಬಂದೆ. ನೋಡಿದರೆ, ಸೀನಿಯರ್ ವಿಧವೆ ನಮ್ಮ ದೊಡ್ಡಮ್ಮ ಒಬ್ಬರನ್ನೇ ಹೆಣದ ಹತ್ತಿರ ಬಿಟ್ಟು ಹಜಾರಕ್ಕೆ ಬಂದು ವಾಷ್ ಬೇಸಿನ್ ಹತ್ತಿರ ನಿಂಡುಕೊಂಡು ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುತ್ತಾ, ಸೆರಗು ಸರಿಪಡಿಸಿಕೊಳ್ತಾ ಇದ್ದಾರೆ! ನನಗೆ ರೇಗಿ ಹೋಯಿತು. ಆದರೆ, ಹಿರಿಯರು, ಬೈಯ್ಯುವ ಹಾಗಿಲ್ಲ.
ಗದರಿಸುವ ಧ್ವನಿಯಲ್ಲಿ ಅಯ್ಯೋ ಯಾಕೆ ಹೀಗೆ ಮಾಡಿದಿರಿ. ದೊಡ್ಡಮ್ಮ ಒಬ್ಬರನ್ನೇ ಏಕೆ ಹೆಣದ ಮುಂದೆ ಒಂಟಿಯಾಗಿ ಬಿಟ್ಟಿರಿ. ಅವರಿಗೆ ಹೆದರಿಕೆ ಆಗೋಲ್ಲವೇ? ಎಂದು ಬಡಬಡಿಸಿದೆ. ಸೀನಿಯರ್ ವಿಧವೆ ಆರಾಮವಾಗಿ ಯಾಕೆ ಇಷ್ಟು ಗಾಬರಿ ಬೀಳ್ತೀರಿ. ನಿಮ್ಮ ದೊಡ್ಡಮ್ಮ ಏನು ಹೆದರಿಕೊಳ್ಳೋಲ್ಲ ಎಂದರು. ಅವರ ಜೊತೆ ಒಳಗೆ ಹೋಗಿ ನೋಡಿದರೆ, ನಮ್ಮ ದೊಡ್ಡಮ್ಮ ಹೆಣದ ಪಕ್ಕದಲ್ಲೇ ಕುಳಿತು, ಒಂದೊಂದಾಗಿ ಶುಂಠಿ ಪೆಪ್ಪರ್‌ಮಿಂಟ್ ತಿನ್ನುತ್ತಿದ್ದರು. ನಮ್ಮ ದೊಡ್ಡಪ್ಪನಿಗೆ ನರ್ಸಿಂಗ್ ಹೋಂನಲ್ಲಿ ಔಷಧಿ ಕುಡಿಸುವಾಗ ಅಸಹ್ಯ ಆಗದಿರಲೆಂದು ಒಂದು ಶುಂಠಿ ಪೆಪ್ಪರ್‌ಮಿಂಟ್ ಬಾಕ್ಸ್ ತಂದು ದೊಡ್ಡಮ್ಮನ ಹತ್ತಿರವೇ ಬಿಟ್ಟು, ಔಷಧಿ ಕುಡಿಸಿದ ಮೇಲೆ ಒಂದೊಂದು ಪೆಪ್ಪರ್‌ಮಿಂಟ್ ಕೊಡಿ ಎಂದು ಹೇಳಿದ್ದೆವು. ಈಗ ದೊಡ್ಡಮ್ಮ ಉಳಿದ ಶುಂಠಿ ಪೆಪ್ಪರ್‌ಮಿಂಟನ್ನು ತಿನ್ನುತ್ತಿದ್ದರು. ನಾನು ಸೀನಿಯರ್ ವಿಧವೆಯ ಮುಖ ನೋಡಿದಾಗ, ಅವರು ಹೇಳಿದರು:
ನನಗೂ ಅಷ್ಟೇ, ನಮ್ಮವರು ಹೋದ ಮೊದಲ ತಿಂಗಳಲ್ಲಿಯೇ ನಾನು ಮುಟ್ಟಾದಾಗ ಆಗುತ್ತಿದ್ದ ಗಾಬರಿ, ವಿಪರೀತ ರಕ್ತಸ್ರಾವ ಎಲ್ಲ ನಿಂತು ಸರಿಹೋಯಿತು. ರಕ್ತದ ಒತ್ತಡದ ಸಮಸ್ಯೆ, ನಿದ್ರಾಹೀನತೆ ಕೂಡ ಕಡಿಮೆ ಆಯಿತು.
*****
ಹೌದು, ಆಕೆಯ ಗಂಡ ತೀರಿಹೋದ ಮೇಲೆ ಅವರು ಆರೋಗ್ಯವಾಗಿ, ದಷ್ಟಪುಷ್ಟವಾಗಿ ಯಾರಿಗೂ ತೊಂದರೆ ಕೊಡದೆ ಬದುಕುತ್ತಿದ್ದರು. ಅದಕ್ಕೇ ನಮ್ಮ ಹಿರಿಯರು ಹೇಳಿದ್ದು, ಕಥೆಗಿಂತ ಕಥಾ ಸಂದರ್ಭವೇ ಮುಖ್ಯವೆಂದು!
- ಕೆ. ಸತ್ಯನಾರಾಯಣ
