ವಿದ್ಯಾ ಅರಮನೆಯವರ ಕವಿತೆ ಸಣ್ಣ ಕಥೆಗಳು ಲೇಖನಗಳು ಮಯೂರ, ಮಂಗಳ, ಮಾನಸ, ಪ್ರೇರಣ, ಓ ಮನಸೇ ಹಾಯ್ ಬೆಂಗಳೂರು ಮುಂತಾದ ಕನ್ನಡ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಸಾಹಿತ್ಯಲೋಕದ ಕುರಿತು ಕವಿ ನಾರಾಯಣಸ್ವಾಮಿ (ನಾನಿ) ಅವರು ಓದುಗರಿಗೆ ಪರಿಚಯ ಮಾಡಿದ್ದಾರೆ, ತಪ್ಪದೆ ಮುಂದೆ ಓದಿ…
ಕನ್ನಡ ಸಾಹಿತ್ಯವೇ ಹಾಗೇ ಓದು ಬರಹವನ್ನು ಪ್ರೀತಿಸುವ ಮನಸ್ಸುಗಳನ್ನು ತನ್ನೊಳಗೆ ಸೆಳೆದುಕೊಂಡು ಅಲ್ಲಿ ಕನ್ನಡದ ಅಕ್ಷರ ಲೋಕವನ್ನು ಸೃಷ್ಟಿಸಿ, ಪದಗಳೊಂದಿಗೆ ಲಾಸ್ಯವಾಡುತ್ತಾ, ಪ್ರಬುದ್ದತೆಯ ಬರಹಗಳತ್ತ ಬರಹಗಾರರನ್ನು ಕೊಂಡೊಯ್ಯುವಂತಹ ಒಂದು ಮಾಂತ್ರಿಕ ಶಕ್ತಿ ಕನ್ನಡದ ಪದಗಳಿಗೆ ಇದೆ. ಕನ್ನಡ ಸಾಹಿತ್ಯಲೋಕದಲ್ಲಿ ಇತ್ತೀಚೆಗೆ ಕನ್ನಡದಲ್ಲಿ ಬರೆಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ, ಸಾಹಿತ್ಯದಲ್ಲಿ ಬರವಣಿಗೆಯನ್ನು ಒಂದು ಪ್ರವೃತ್ತಿಯಾಗಿಸಿಕೊಂಡು ಬರೆಯಲು ಪ್ರಾರಂಭಿಸಿದ್ದಾರೆ. ಅದರೆ ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ಬರೆದವರು ವಿರಳ. ಆರನೇ ತರಗತಿಯಲ್ಲಿ ಕಥೆ ಬರೆದು, ಶಿಕ್ಷಕರಿಂದ ಮೆಚ್ಚುಗೆ ಪಡೆದು ನಂತರ ಕಥೆ, ಕಾದಂಬರಿ, ಕವಿತೆಯನ್ನು ಬರೆಯುತ್ತಾ, ಶಿಕ್ಷಕಿಯಾಗಿ ಮಕ್ಕಳಿಗೆ ಕನ್ನಡ ಪದಗಳನ್ನು ಕಲಿಸುತ್ತಾ, ಕನ್ನಡ ಸಾಹಿತ್ಯವನ್ನೆ ಉಸಿರಾಗಿಸಿಕೊಂಡು ಬರವಣಿಗೆಯಲ್ಲಿ ತೊಡಗಿರುವ ಲೇಖಕಿಯೇ ಶ್ರೀಮತಿ ವಿದ್ಯಾ ಅರಮನೆ.

ಶ್ರೀಮತಿ ವಿದ್ಯಾ ಎಚ್.ಜಿ ರವರು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿಯಲ್ಲಿ ಗಂಗಾಧರಯ್ಯ ಮತ್ತು ನಾಗರತ್ನಮ್ಮ ಇವರ ದ್ವೀತಿಯ ಪುತ್ರಿಯಾಗಿ ೧೦-೦೪-೧೯೮೪ ರಲ್ಲಿ ಜನಿಸಿದರು. ತಮ್ಮ ಬಾಲ್ಯದ ಶಿಕ್ಷಣವನ್ನು ಅರಮನೆ ಹೊನ್ನಮಾಚನಹಳ್ಳಿಯಲ್ಲಿಯ ಸಕಾ೯ರಿ ಶಾಲೆಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಸಿದ್ದಾಥ೯ ಪ್ರೌಢಶಾಲೆ ತುಮಕೂರು ಇಲ್ಲಿ ಸೇರಿ ಕನ್ನಡ ಪಠ್ಯದ ಓದು ಬರಹದಲ್ಲಿ ಸದಾ ಮುಂದಿದ್ದು, ಶಿಕ್ಷಕರ ಅಚ್ಚುಮೆಚ್ಚಿನ ವಿಧ್ಯಾರ್ಥಿಯಾಗಿದ್ದರು. ನಂತರ ಪದವಿಪೂರ್ವ ಶಿಕ್ಷಣವನ್ನು ಎಂಪ್ರೆಸ್ ಕಾಲೇಜಿನಲ್ಲಿ ಪೂರೈಸಿ, ಪದವಿಯನ್ನು ಕನಾ೯ಟಕ ಮುಕ್ತ ವಿಶ್ವವಿದ್ಯಾಲಯ ಪಡೆದು, ಬೆಂಗಳೂರಿನ ಶಿಕ್ಷಕರ ತರಭೇತಿ ವಿದ್ಯಾಸಂಸ್ಥೆಯಲ್ಲಿ ತರಭೇತಿಯನ್ನು ಮುಗಿಸಿ ತುಮಕೂರು ಜಿಲ್ಲೆಯ, ಶಿರಾ ತಾಲ್ಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಇವರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು ಇಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದಿದ್ದಾರೆ.

ಶ್ರೀಮತಿ ವಿದ್ಯಾ ಎಚ್ ಜಿ ಇವರು ವಿದ್ಯಾ ಅರಮನೆ ಎಂಬ ಕಾವ್ಯನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಹವ್ಯಾಸಗಳು ಮನಸ್ಸನ್ನು ಪರಿಪೂರ್ಣವಾಗಿಸುವ ಆತ್ಮಅನುಸಂಧಾನ ಮಾಡುವ ಆಧ್ಯಾತ್ಮಿಕ ಅಧ್ಯಯನ ಮತ್ತು ಚಿಂತನೆಯಲ್ಲಿ ತೊಡಗಿಸಿಕೊಂಡಿರುವುದು ಮತ್ತು .ಹಳ್ಳಿಯ ಪರಿಸರದೊಂದಿಗೆ ಮೂಕ ಪ್ರಾಣಿಗಳೊಂದಿಗೆ ಒಡನಾಟ.
ಬಾಲ್ಯದ ದಿನಗಳಲ್ಲಿ ಮನೆಗೆ ಬರುತ್ತಿದ್ದ ಕನ್ನಡ ಪ್ರಭ ಪತ್ರಿಕೆಯಲ್ಲಿ ಬರುತ್ತಿದ್ದ ಕೌಂಡಿನ್ಯರ ಕಥೆಗಳನ್ನು ಇವರ ತಾಯಿ ಇಷ್ಟು ಓದುತ್ತಿದ್ದನ್ನು ಗಮನಿಸಿ ತಾನು ಕೂಡ ಕಥೆ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡರು. ನಂತರ ಶಾಲಾ ಮಟ್ಟದಿಂದಲೇ ಬರೆಯುವ ಗೀಳನ್ನು ಹೆಚ್ಚಿಸಿಕೊಂಡು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಬರೆಯುತ್ತಾ, ಸಿನಿಮಾಗಳಿಗೆ ಸಾವಿರ ಹಾಡುಗಳನ್ನು ಬರೆಯಬೇಕು ಎಂಬ ಕನಸನೊತ್ತು ಸಾಹಿತ್ಯದಲ್ಲಿ ತೊಡಗಿಕೊಂಡ ಶ್ರೀಮತಿ ವಿದ್ಯಾ ಅರಮನೆಯವರು ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ನಾಲ್ಕು ಆಲ್ಬಂ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಯುವ ಸಂಗೀತ ನಿರ್ದೇಶಕ ಅಜಯ್ ರಾಮ್ ಕನ್ನಡಿಗ ಇವರಿಂದ ‘ಬೃಂದಾವನ ದರ್ಶನ’ ಎಂಬ ರಾಘವೇಂದ್ರ ಸ್ವಾಮಿಯವರನ್ನು ಕುರಿತ ಭಕ್ತಿಗೀತೆಗಳನ್ನು ಬರೆದಿದ್ದು ಅವು ಧ್ವನಿಮುದ್ರಿಕೆಯಾಗಿ ಬಿಡುಗಡೆಗೊಂಡಿವೆ.
ಮೈಸೂರು ಪುಸ್ತಕಯಾನ ಪ್ರಕಾಶನ ನಡೆಸಿದ ಕಾದಂಬರಿ ಸ್ಪರ್ಧೆಯಲ್ಲಿ ವಿಜೇತಗೊಂಡು ಪ್ರಕಟಣೆಗೊಂಡ ‘ಹುತ್ತದ ನೆರಳು’ ಇವರು ಬರೆದ ಪ್ರಥಮ ಕಾದಂಬರಿಯಾಗಿದ್ದು 2012 ರಲ್ಲಿ ಪ್ರಕಟವಾಗಿದೆ.
ಐ.ಬಿ.ಎಚ್. ಪ್ರಕಾಶನದಿಂದ ‘ ಮುಸ್ಸಂಜೆ ಪ್ರೇಮ ಪ್ರಸಂಗ’ ಎಂಬ ಕಥಾಸಂಕಲನ, ಭಾವಸಿಂಚನಾ ಪ್ರಕಾಶನದಿಂದ ‘ಅರಳುವ ಹೂವುಗಳು’ ಮಕ್ಕಳ ಕಾವ್ಯ ಸಂಕಲನ, “ಸುಖ ಇಲ್ಲಿ ಮಾರಾಟಕ್ಕಿದೆ” ಸಣ್ಣ ಕಥೆಗಳ ಸಂಕಲನಗಳನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿ ಓದುಗರ ಮನದಲ್ಲಿ ಕನ್ನಡ ಪ್ರಬುದ್ಧ ಲೇಖಕಿಯಾಗಿ ಗುರುತಿಸಿಕೊಂಡು ಸಾಹಿತ್ಯದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಶ್ರೀಮತಿ ವಿದ್ಯಾ ಅರಮನೆಯವರ ಕವಿತೆ ಸಣ್ಣ ಕಥೆಗಳು ಲೇಖನಗಳು ಮಯೂರ, ಮಂಗಳ, ಮಾನಸ, ಪ್ರೇರಣ, ಓ ಮನಸೇ ಹಾಯ್ ಬೆಂಗಳೂರು ಮುಂತಾದ ಕನ್ನಡ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇನ್ನೂ ಪ್ರಕಟವಾಗುತ್ತಲೇ ಇವೆ..
ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಸಿರಿಧಾನ್ಯ ಕವಿಗೋಷ್ಠಿಯಲ್ಲಿ ಕವಿತೆ ಮತ್ತು ವಾಚನಕ್ಕೆ ಪ್ರಶಸ್ತಿ ಪಡೆದ ಇವರು ರಾಜ್ಯಮಟ್ಟದ ಬಹಳಷ್ಟು ಕವಿಗೋಷ್ಠಿಗಳಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ.
ಇವರ ಕನ್ನಡದ ಭಾಷಾಭಿಮಾನ ಕನ್ನಡದಲ್ಲಿ ಬರೆಯುವ ವಿದ್ವತ್ಪೂರ್ಣ ಬರಹವನ್ನು ಮತ್ತು ಸಾಹಿತ್ಯದ ಸೇವೆಯನ್ನು ಮೆಚ್ಚಿ ಹಲವಾರು ಸಂಘಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಇವರ ‘ಅರಳುವ ಹೂವುಗಳು’ ಕೃತಿಗೆ ಕ.ಸಾ.ಪ ದತ್ತಿ ಪ್ರಶಸ್ತಿ ದೊರೆತಿದೆ. ನಾಡಧ್ವನಿ ಪತ್ರಿಕಾ ಬಳಗವು ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗಾಗಿ ‘ಆದರ್ಶ ಶಿಕ್ಷಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
ಈಗ ಶ್ರೀಮತಿ ವಿದ್ಯಾ ಅರಮನೆಯವರು ತಮ್ಮ ಮಗಳ ಹೆಸರಿನಲ್ಲಿ ಅರ್ವಿ ಪ್ರಕಾಶನ ಆರಂಭಿಸಿ ಅದರಡಿಯಲ್ಲಿ ನಾನು ಅದೇ( ಕಾವ್ಯ ಸಂಕಲನ) ಚಿಟ್ಟೆ ಗೊಂಬೆ (ಮಕ್ಕಳ ಪದ್ಯಗಳು) ಕಾಯದ ಹಕ್ಕಿ (ಕಾದಂಬರಿ) ಎಂಬ ಕೃತಿಗಳನ್ನು ಹೊರತರುವ ಪ್ರಯತ್ನದ ಹಾದಿಯಲ್ಲಿ ಸಾಗುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಕಾದಂಬರಿ ಮತ್ತು ಕಥಾಸಂಕಲನದ ಬಿಡುಗಡೆಗೆ ಸಿದ್ದತೆಯಲ್ಲಿ ತೊಡಗಿರುವ ಶ್ರೀಮತಿ ವಿದ್ಯಾ ಅರಮನೆ ರವರಿಗೆ ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ, ಇನ್ನಷ್ಟು ಕೃತಿಗಳನ್ನು ಹೊರತರಲಿ ಮತ್ತು ತಾವು ಬರೆಯುವ ಬರಹಗಳು ಮಹಿಳೆಯರ ಬದುಕಿನ ತಲ್ಲಣಗಳಾಗಿರಲಿ ಬರಹವು ಕಾವ್ಯ ಸಂವೇದನೆಯನು ಚಿಂತಿಸುವ ಕೃತಿಗಳಾಗಲಿ, ಕನ್ನಡ ಸಾಹಿತ್ಯದ ಬರವಣಿಗೆಯಿಂದ ಅವರಿಗೆ ಗೌರವ ಪ್ರಶಸ್ತಿ ಪುರಸ್ಕಾರಗಳು ಸಿಗಲಿ ಎಂದು ಆಶಿಸುವೆ ಶುಭವಾಗಲಿ.
ಹಿಂದಿನ ಸಂಚಿಕೆಗಳು :
- ಕನ್ನಡ ಸಾಹಿತ್ಯ ಲೋಕದಲ್ಲಿ ಅರಳುತ್ತಿರುವ ಸುಮಾ
- ಮಾಲೂರಿನ ಉದಯೋನ್ಮುಖ ಲೇಖಕಿ ಸುಮಂಗಳ ಮೂರ್ತಿ
- ಭಾವನೆಗಳ ಮಹಾಪೂರವೇ ಮನೋವಾರಧಿ
- ನಾರಾಯಣಸ್ವಾಮಿ (ನಾನಿ) – ವಕೀಲರು ಮತ್ತು ಲೇಖಕರು, ಬಂಡಹಟ್ಟಿ ಮಾಸ್ತಿ ಮಾಲೂರು ತಾಲ್ಲೂಕು.
