ವೀರಪ್ಪನ್ ಸಾವಿನ ಸುತ್ತ – ಮುಷ್ತಾಕ್ ಹೆನ್ನಾಬೈಲ್..



ಬದುಕಿನ ಅನ್ಯೂನತೆ ಮಾನವ ವ್ಯೂಹಾತ್ಮಕತೆಗೆ ಅಷ್ಟು ಸುಲಭದಲ್ಲಿ ನಿಲುಕದು.. ವೀರಪ್ಪನ್ ಸಾವು ಇದಕ್ಕೊಂದು ನಿದರ್ಶನ. ಮುಷ್ತಾಕ್ ಹೆನ್ನಾಬೈಲ್ ಅವರ ಲೇಖನಿಯಲ್ಲಿ ವೀರಪ್ಪನ ದಂತಕತೆ. ಮುಂದೆ ಓದಿ…

ಸಾರ್ವಕಾಲಿಕ ಜಗತ್ತು ಕಂಡ ಅತೀ ಚಾಣಾಕ್ಷ ಅಪರಾಧಿ ವೀರಪ್ಪನ್. ಸುತ್ತಲೂ ಮೂರು ರಾಜ್ಯಗಳಿಂದ ಸುತ್ತುವರಿದಿದ್ದರೂ, ಸರಿಸುಮಾರು 3 ದಶಕಗಳ ಕಾಲ ಅರಣ್ಯದೊಳಗಿಂದ ಸೇನೆ, ಅದೆಷ್ಟೋ ಮುಖ್ಯಮಂತ್ರಿಗಳು, ಮಂತ್ರಿಗಳು, ಪೋಲಿಸ್- ಅರಣ್ಯಾಧಿಕಾರಿಗಳಿಗೆ ನಡುಕ ಹುಟ್ಟಿಸಿ ಅಟ್ಟಹಾಸ ಮೆರೆದವನು. ಸುತ್ತಮುತ್ತಲಿನ ಗ್ರಾಮದ ಜನರನ್ನು ಮಾತ್ರವಲ್ಲ, ಕಾಡಿನ ಪ್ರಾಣಿ-ಪಕ್ಷಿಗಳನ್ನು ಕೂಡ ತನ್ನ ಪರವಿರುವಂತೆ ನೋಡಿಕೊಂಡವನು.

ಫೋಟೋ ಕೃಪೆ : postosat

ಮನುಷ್ಯರ ತಲೆಯನ್ನು ಕಂಡರೆ ಮಾತ್ರ ಕೂಗುವ ವಿಶೇಷ ಪಕ್ಷಿಗಳ ಇರುವಿಕೆಯನ್ನು ಪತ್ತೆಹಚ್ಚಿ, ಆ ಹಕ್ಕಿಗಳು ಹೆಚ್ಚಿರುವ ಭಾಗಗಳಲ್ಲಿ ತನ್ನ ಅಡಗುದಾಣ ಮಾಡಿಕೊಂಡು ಪಕ್ಷಿಗಳ ಕಾವಲಿನಲ್ಲಿ ಅದೆಷ್ಟೋ ವರ್ಷ ಅಪರಾಧ ಲೋಕವನ್ನು ವೀರಪ್ಪನ್ ಆಳಿದ. ತನಗಿಷ್ಟವಾದ ಪ್ರಾಣಿಯ ಮಾಂಸವನ್ನು, ಅದೇ ಪ್ರಾಣಿಯ ಧ್ವನಿಯನ್ನು ಅನುಕರಿಸಿ ತನ್ನಲ್ಲಿಗೆ ಬರಮಾಡಿಸಿಕೊಂಡು, ಹೊಡೆದು ಕೊಂದು ಭಕ್ಷಿಸುವ, ಈ ಭೂಮಿಯ ಮೇಲಿನ ವಿಶಿಷ್ಟ ಮಾನವ ಈ ವೀರಪ್ಪನ್.

ನೂರಾರು ಜನರನ್ನು,ಸಾವಿರಾರು ಆನೆಗಳನ್ನು ಕೊಂದು, ಲಕ್ಷಾಂತರ ಬೆಲೆಬಾಳುವ ಗಂಧದ ಮರಗಳನ್ನು ಕಡಿದ, ಇವನ ಉಪಟಳ ಅಧಿಕವಾದಾಗ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು, ತಮ್ಮ ರಾಜ್ಯದಲ್ಲೇ ಅತ್ಯಂತ ದಕ್ಷ, ಚಾಣಾಕ್ಷ , ಅದೆಂತಹ ಅಪರಾಧಿಗಳ ಎದೆಯಲ್ಲೂ ನಡುಕ ಹುಟ್ಟಿಸುವ ಸಾಮರ್ಥ್ಯದ ಅಧಿಕಾರಿಗಳನ್ನೇ ನೇಮಿಸಿ, ವಿಶೇಷ ಕಾರ್ಯಪಡೆಯನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಿತ್ತು.ತಮಿಳುನಾಡಿನ ಸಂಜಯ್ ಅರೋರಾ, ವಾಲ್ಟರ್ ದೇವಾರಾಂ, ಮೋಹನ್ ನವಾಜ್, ಹುಸೇನ್ ರೇನೂ ಸಾಮಾನ್ಯ ಅಧಿಕಾರಿಗಳಲ್ಲ. ಸೇವಾ ಬದುಕಿನುದ್ದಕ್ಕೂ ತಮ್ಮ ಇಲಾಖೆಯಲ್ಲಿ ಇಡೀ ತಮಿಳುನಾಡು ಹೆಮ್ಮೆಪಡುವಂತೆ ಮಾಡಿದವರು. ಕರ್ನಾಟಕದ ಕಡೆ ಮಿಲಿಟರಿ ಹಿನ್ನಲೆಯ ಕೆ.ಯು. ಶೆಟ್ಟಿ, ಮಡಿಯಾಳ್, ಹರಿಕೃಷ್ಣ, ಶಕೀಲ್ ಆಹ್ಮದ್, ಶಂಕರ್ ಬಿದರಿ, ಅಶೋಕ್ ಕುಮಾರ್ , ಮಂದಪ್ಪ, ಕೆಂಪಯ್ಯ , ಜಿ.ಎ ಬಾವ, ಗೋಪಾಲ್ ಹೊಸೂರ್, ನಾಗರಾಜ್, ಜ್ಯೋತಿ ಪ್ರಕಾಶ್ ಮಿರ್ಜಿ, ಕರ್ನಾಟಕ ಪೋಲಿಸ್ ನ ದಿಟ್ಟ, ಧೈರ್ಯವಂತ, ಸಾಧಕ ಅಧಿಕಾರಿಗಳು. ಆದರೆ ಇವರಾರಿಗೂ ವೀರಪ್ಪನ್ ಹಿಡಿಯುವುದು ಬಿಡಿ, ಅವನ ಮುಖ ನೋಡುವ ಅವಕಾಶ ಕೂಡ ಸಿಗಲಿಲ್ಲ..ಇದ್ದುದರಲ್ಲೇ ಅರಣ್ಯಾಧಿಕಾರಿ ಶ್ರೀನಿವಾಸ್ ಇವನನ್ನು ಒಮ್ಮೆ ಬಂಧಿಸಿದಾಗ ಬೂದಿಪಡಗ ಗೆಸ್ಟ್ ಹೌಸ್ ನಲ್ಲಿ ಮುಖ ನೋಡಿದ್ದು ಬಿಟ್ಟರೆ, ತದನಂತರ ಈ ಪಾತಕಿ ಯಾರ ಕಣ್ಣಿಗೂ ಬೀಳಲಿಲ್ಲ.ಆದರೆ ವೀರಪ್ಪನ್ ಮಾತ್ರ ಕಾಡಿನ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಇವರೆಲ್ಲರನ್ನು ಹತ್ತಿರದಿಂದ ನೋಡಿದ್ದಾನೆ. ಅವನ ಕಾಡಿನ ವ್ಯಾಪ್ತಿಯಲ್ಲಿ ಬರುವ ಮೂರು ಪೋಲಿಸ್ ಸ್ಟೇಷನ್ ಗಳು ಮತ್ತು ಎಸ್ ಟಿ ಎಪ್ ಕ್ಯಾಂಪ್ ಗಳಲ್ಲಿ ಸಿಬ್ಬಂದಿ ನಿಕ್ಕರ್ ಬದಲಿಸಿದರೂ, ಅದರ ಕಲರ್ ಮಾತ್ರವಲ್ಲದೇ, ಹಾಕಿದವನ ಹೆಸರೂ ಕೂಡ ಕೆಲವೇ ಗಂಟೆಗಳಲ್ಲಿ ವೀರಪ್ಪನ್ ಕಿವಿಗೆ ತಲುಪುತ್ತಿತ್ತು. ಗ್ರಾಮದ ಜನರಿಂದ ಕೂಡಿದ, ಅಂತಹ ಮಾಹಿತಿಗಳಿರುವ ಗುಪ್ತಚರ ವ್ಯವಸ್ಥೆವೀರಪ್ಪನ್ ಗಿತ್ತು. ಬೆಳಗಾದರೆ ಸಾಕು, ದನ ಮೇಯಿಸುತ್ತಾ ವೀರಪ್ಪನ್ ಮಾಹಿತಿದಾರರು ಪೋಲಿಸ್ ಸ್ಟೇಷನ್ ಮತ್ತು ಎಸ್ ಟಿ ಎಫ್ ಕ್ಯಾಂಪ್ ಮುಂದೆ ಬಂದು ನಿಂತು, ಸಿಬ್ಬಂದಿಗಳ ವಿಶ್ವಾಸಗಳಿಸಿ ಎಲ್ಲ ಮಾಹಿತಿಗಳನ್ನು ಪಡೆದು, ವೀರಪ್ಪನ್ ಗೆ ತಲುಪಿಸುತ್ತಿದ್ದರು.

(ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ) ಫೋಟೋ ಕೃಪೆ : new indian express

ಕರ್ನಾಟಕದಲ್ಲಿ #ವೀರಪ್ಪನ್ ಹಾವಳಿ ವಿಪರೀತವಿದ್ದ ಕಾಲದಲ್ಲಿ ವೀರಪ್ಪನ್ ಹಿಡಿಯಲು ಭಾರತ-ಬರ್ಮಾ ಗಡಿಯಲ್ಲಿದ್ದ ಗಡಿ ಭದ್ರತಾ ಪಡೆಯನ್ನು ಕರೆಸಿಕೊಳ್ಳಲಾಯಿತು. ಅದೊಂದು ದಿನ ಕರ್ನಾಟಕದ ಗಡಿಭಾಗದ ಕಾಡಿನೊಳಗಿನ ಸ್ಠಳವೊಂದರಲ್ಲಿ ಭದ್ರತಾಪಡೆ ಕೋಟೆಯಂತೆ ವೀರಪ್ಪನ್ ತಂಡವನ್ನು ನಾಲ್ಕು ದಿಕ್ಕಿನಿಂದ ಸುತ್ತುವರಿಯಿತು. ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿಯು ಸೇರಿದಂತೆ ತಂಡದ ಎಲ್ಲರೂ ಓಡಿದರು. ಜೀವಮಾನವೀಡಿ ವೀರಪ್ಪನ್ ನನ್ನು ಅಂಟಿಕೊಂಡೇ ಇರುತ್ತಿದ್ದ ಸೇತುಕುಳಿ ಗೋವಿಂದನ್ ಮತ್ತು ಚಂದ್ರಗೌಂಡರ್ ಓಡಿದವರು ಮತ್ತೆ ಹಿಂದಿರುಗಿ ಬಂದು ಅದೆಷ್ಟೇ ಹುಡುಕಿದರೂ ವೀರಪ್ಪನ್ ಮಾತ್ರ ಸಿಗಲಿಲ್ಲ. ವೀರಪ್ಪನ್ ಬಂಡೆಯೊಂದರ ಕೆಳಭಾಗದಲ್ಲಿ ತರಗೆಲೆಗಳನ್ನು ಮೈಮೇಲೆ ಮುಚ್ಚಿಕೊಂಡು ಅಲ್ಲೇ ಮಲಗಿಬಿಟ್ಟಿದ್ದ. ಬಂಡೆಯ ಮೇಲಿಂದ ಬಿಎಸ್ ಎಫ್ ಅಧಿಕಾರಿ ಬಿಂದ್ರನ್ ರ ಇಡೀ ದೇಹ ನೇರವಾಗಿ ವೀರಪ್ಪನ್ ಗೆ ಕಾಣುತ್ತಿತ್ತು. ಬರುತ್ತಿದ್ದ ಕೋಪದಲ್ಲಿ ಕೈಯಲ್ಲಿದ್ದ ಎಕೆ 47 ನಿಂದ ಗುಂಡು ಹಾರಿಸಬೇಕೆನಿಸಿದರೂ, ಒಂದೊಮ್ಮೆ ಗುಂಡು ಹಾರಿದರೆ ಇರುವಿಕೆಯ ಅರಿವಾಗಬಹುದೆಂದು ತಿಳಿದು, ಸತತ ಮೂರು ಗಂಟೆಗಳ ಕಾಲ ತರಗೆಲೆಯ ರಾಶಿಯೊಳಗೇ ಮಲಗಿದ. ಹುಡುಕಿ ಹುಡುಕಿ ಸುಸ್ತಾದ ಬಿಂದ್ರನ್ ” ಏ ಆದ್ಮಿ ನಹೀ ಶಾಯದ್ ಭೂತ್ ಹೋಗಾ, ಇದರ್ ಹೀ ಥಾ, ಕಿದರ್ ಗಯಾ ಸಾಲಾ” ಎಂದು ಕೊನೆಯ ಹುಡುಕಾಟದ ಭಾಗವಾಗಿ ಆಕಾಶ ನೋಡಿ ” ಉದರ್ ಭಿ ನಹೀ, ಚಲೋ” ಎಂದು, ಬಂಡೆ ಇಳಿದು ಸೀದಾ ತನ್ನ ಪಡೆಯೊಂದಿಗೆ ಹೋದವರು, ಮತ್ತೆಂದೂ ಕಾಡಿನ ಬಳಿ ಸುಳಿಯಲಿಲ್ಲ. ಮಾತ್ರವಲ್ಲ, ೩೦ – ೩೫ ವರ್ಷಗಳ ನಂತರ ಆತ ಸಹಜವಾಗಿ ಸತ್ತು ಡೆಡ್ ಬಾಡಿ ಸಿಕ್ಕರೆ, ಅದನ್ನೇ ನೋಡಿ ಸಂತೋಷಪಡಬೇಕು ಬಿಟ್ಟರೆ, ಜೀವಂತವಿರುವವರೆಗೆ ಆ ದುರ್ಗಮ ಕಾಡಿನಲ್ಲಿ ಆತನೆಂದಿಗೂ ಸಿಗಲಾರ ಎಂದು ಅಣಿಮುತ್ರು ಉದುರಿಸಿ ಹೋದರು.

ಫೋಟೋ ಕೃಪೆ : public tv ಮಹದೇಶ್ವರ ಬೆಟ್ಟ

ಮುಖ್ಯಮಂತ್ರಿಯಾಗಿದ್ದ ಜೆ ಹೆಚ್ ಪಟೇಲ್ ಕೂಡ ಮಹದೇಶ್ವರ ಬೆಟ್ಟದ ಮೇಲಿನಿಂದ ಕಾಡನ್ನು ಒಮ್ಮೆ ನೋಡಿ” ವೀರಪ್ಪನ್ ಬಿಡಿ, ನಾನೇ ಈ ಕಾಡು ಸೇರಿಕೊಂಡ್ರು ಯಾರೂ ಹಿಡಿಯಲಾಗದು” ಎಂದು, ವೀರಪ್ಪನ್ ತಂಡವನ್ನು ಸಂಹಾರ ಮಾಡುತ್ತಿದ್ದ ರಾಜ್ಯ ಕಂಡ ಪರಮ ಖಡಕ್ ಪೋಲಿಸ್ ಅಧಿಕಾರಿ ಶಂಕರ ಮಹಾದೇವ ಬಿದರಿಯವರನ್ನು ಬೆಂಗಳೂರಿಗೆ ಕರೆಸಿಕೊಂಡರು. ಸೇನೆಯೇ ಬಂದು ಏನೂ ಮಾಡಲಾಗದೇ ಹೋದದ್ದನ್ನು ಕಂಡ ಪೋಲಿಸರೂ ದಂಗಾಗಿಹೋದರು. ದಶಕಗಳಿಂದ ಕರ್ನಾಟಕ- ತಮಿಳುನಾಡಿನ ಅದೆಷ್ಟೋ ಧೀರ ಅಧಿಕಾರಿ-ಸಿಬ್ಬಂದಿಗಳನ್ನು ವೀರಪ್ಪನ್ ಕ್ರೂರವಾಗಿ ಕೊಂದ..ರಾಮಾಪುರ ಪೋಲಿಸ್ ಸ್ಟೇಷನ್ ಗೇ ದಾಳಿ ಮಾಡಿ ಮಲಗಿದ್ದ ಪೋಲಿಸರನ್ನು ಕೊಂದ..ಶಂಕರ್ ಬಿದರಿ, ಇವನ ನೂರಕ್ಕಿಂತಲೂ ಹೆಚ್ಚಿದ್ದ ತಂಡವನ್ನು ಆರಕ್ಕೆ ಇಳಿಸಿದರು ಬಿಟ್ಟರೆ, ವೀರಪ್ಪನ್ ಮಾತ್ರ ಇವರ ಕೈಗೆ ಸಿಗಲೇ ಇಲ್ಲ..

(ಶಂಕರ ಮಹಾದೇವ ಬಿದರಿ) ಫೋಟೋ ಕೃಪೆ : vijayakarnataka

ಎಂಟು ಅಡಿ ಎತ್ತರದ ಪರಮ ದೈತ್ಯ ತಮಿಳುನಾಡು ಎಸ್ಟಿಎಫ್ ಚೀಫ್ ಗೋಪಾಲಕೃಷ್ಣನನ್ನು, ‘ಲೇ ಆಡುಕಳ್ಳ ತಾಕತ್ತಿದ್ದರೆ ಬಾರೋ’ ಎಂದು ಕೆಣಕಿ ಸೊರಕಾಯ್ ಮಡು ಎಂಬಲ್ಲಿ, ತನ್ನಲ್ಲಿಗೇ ಕರೆಸಿಕೊಂಡು ಬಾಂಬ್ ಮೂಲಕ ಪೋಲಿಸ್ ವ್ಯಾನ್ ಸಹಿತ ಆಕಾಶದೆತ್ತರಕ್ಕೆ ಹಾರಿಸಿ, ಜೀವನಪರ್ಯಂತ ಅಂಗವಿಕಲರಾಗಿ ವ್ಹೀಲ್ ಚೇರ್ ಮೇಲೆ ಬದುಕುವಂತೆ ಮಾಡಿದ..ಸದಾ ಬುದ್ಧಿವಾದ ಹೇಳುತ್ತಿದ್ದ, ಸಮಾಜಮುಖಿ ಪರಮ ಸಾತ್ವಿಕ, ರೇಂಜರ್ ಶ್ರೀನಿವಾಸರನ್ನು ತನ್ನ ತಮ್ಮ ಅರ್ಜುನನ್ ಮೂಲಕ ಪುಸಲಾಯಿಸಿ, ತನ್ನಲಿಗೇ ಕರೆಸಿಕೊಂಡು ಕೊಂದ..ಮೈಸೂರು ಎಸ್ಪಿ ಹರಿಕೃಷ್ಣ ಮತ್ತು ಸಬ್ ಇನ್ಸಪೆಕ್ಟರ್ ಶಕೀಲ್ ಆಹ್ಮದ್ ರ ಬಲೆಗೆ ಬಿದ್ದ ಎನ್ನುವಷ್ಟರಲ್ಲಿ ಅವರಿಂದ ತಪ್ಪಿಸಿಕೊಂಡು, ಹೊಂಚುಹಾಕಿ, ಕಮಲಾ ನಾಯ್ಕ್ ಎಂಬ ಮಾಹಿತಿದಾರನ ಮೂಲಕ ಅವರನ್ನೂ ತನ್ನಲ್ಲಿಗೇ ಕರೆಸಿಕೊಂಡು ಕೊಂದುಬಿಟ್ಟ. ಮಹದೇಶ್ವರ ಬೆಟ್ಟದ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಗೋಪಾಲ್ ಹೊಸೂರ್ ಮೇಲೆ ಮಾರಣಾಂತಿಕ ದಾಳಿ ನಡೆಸಿದ..ಡಾ.ರಾಜ್ ಕುಮಾರ್ ರನ್ನು 108 ದಿನಗಳ ಕಾಲ ಕಾಡಿನಲ್ಲಿ ಇನ್ನಿಲ್ಲದಂತೆ ಕಾಡಿದ..ಮಾಜಿ ಸಚಿವ ನಾಗಪ್ಪರನ್ನು ಕೊಂದೇ ಬಿಟ್ಟ. ಇಡೀ ಜಗತ್ತು ಈ ಪಾತಕಿಯ ರಂಪಾಟ ನೋಡಿ ದೇಶವನ್ನು ಅಪಹಾಸ್ಯ ಮಾಡಿತು. ಇವನ ಪಾತಕಗಳನ್ನು ಜಗದ್ವಿಖ್ಯಾತ ಸುದ್ದಿಸಂಸ್ಥೆ ಬಿಬಿಸಿ ಪ್ರಸಾರ ಮಾಡತೊಡಗಿತು. ಕಾಡೊಳಗಿನ ಕಳ್ಳನನ್ನು ಹಿಡಿಯಲಾಗದೇ ದೇಶ-ರಾಜ್ಯ ಕಂಗಾಲಾಗಿದ್ದು ಕಂಡು ವೈರಿ ರಾಷ್ಟ ಚೀನಾದ ಪತ್ರಿಕೆಗಳು ವ್ಯಂಗ್ಯವಾಡಿದವು..ದೇಶ ಮಾತ್ರವಲ್ಲದೇ,ಎರಡೂ ರಾಜ್ಯಗಳು ಬಹುಕಾಲ ತಲೆತಗ್ಗಿಸುವಂತೆ ಮಾಡಿದ ಮಹಾ ಅಪರಾಧಿ ವೀರಪ್ಪನ್.. ಇವನನ್ನು ಹಿಡಿಯಲು ಜಗತ್ತಿನ ಅತೀ ಚಾಣಾಕ್ಷ ಪೋಲಿಸ್ ಸಂಸ್ಥೆಯಾದ ಸ್ಕಾಟ್ಲ್ಯಾಂಡ್ ಯಾರ್ಡ್ ಪೋಲಿಸ್ ನವರ ಸಲಹೆಯನ್ನೂ ಪಡೆಯಲಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಲ್ಲಿ ಭಾರತದ ರಕ್ಷಣಾ ತಜ್ಞರು ಅಮೇರಿಕಾದ ಗುಪ್ತಚರ ಸಂಸ್ಥೆ ಸಿ ಐ ಎ ಯೊಂದಿಗೂ ಚರ್ಚೆ ನಡೆಸಿದ್ದರು. ಇಡೀ ಪ್ರಪಂಚದ ರಕ್ಷಣಾವ್ಯೂಹದ ವ್ಯಾಪ್ತಿಯನ್ನು ಮೀರಿ ವೀರಪ್ಪನ್ ಬೆಳೆದಿದ್ದ..ಯಾರ ಊಹೆಗೂ ನಿಲುಕದ ವೀರಪ್ಪನ್ ಅಕ್ಷರಶಃ ಅನುದಿನವೂ ಅಟ್ಟಹಾಸ ಮೆರೆಯುತ್ತಿದ್ದ..

(ವೀರಪ್ಪನ್ ಹಾರಿಸಿದ ಪೊಲೀಸ್ ಜೀಪಿನ ದೃಶ್ಯ)  ಫೋಟೋ ಕೃಪೆ : Times of india

ಆಗಿನ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರನ್ನು ಕಂಡಕಂಡಲ್ಲಿ ವಾಚಾಮಗೋಚರ ಬೈಯುತ್ತಿದ್ದ..ತಲೈವಾರ್ ಕರುಣಾನಿಧಿಯನ್ನು ಅಷ್ಟೇ ಹೊಗಳುತ್ತಿದ್ದ. ಗಡಿಭಾಗದ ರಾಜಕಾರಣದಲ್ಲಿ ಕರುಣಾನಿಧಿಯ ಡಿಎಂಕೆ ಮೇಲುಗೈ ಸಾಧಿಸುವಂತೆ ವೀರಪ್ಪನ್ ನೋಡಿಕೊಳ್ಳುತ್ತಿದ್ದ. ಭಾರತದ ರಾಜಕಾರಣಿಗಳಲ್ಲೇ ಜಯಲಲಿತಾ ವಿಪರೀತ ಸ್ವಾಭಿಮಾನಿ ರಾಜಕಾರಣಿ..ವೀರಪ್ಪನ್ ನ ಅನುದಿನದ ಅಪಮಾನಗಳಿಂದ ಆಕ್ರೋಶಗೊಂಡಿದ್ದಳಾಕೆ. ಆದರೆ ವೀರಪ್ಪನ್ ಹಿಡಿಯಲು ಅದೆಷ್ಟೋ ಪ್ರಯತ್ನ ಮಾಡಿ ಅವರು ವಿಫಲರಾಗಿದ್ದರು. ಕೊನೆಯ ಪ್ರಯತ್ನವಾಗಿ ತಮಿಳುನಾಡು ಪೋಲಿಸಿನ ಟಫ್ ಅಧಿಕಾರಿ ವಿಜಯ್ ಕುಮಾರ್ ರನ್ನು ವಿಶೇಷ ಕಾರ್ಯಪಡೆಗೆ ನೇಮಿಸಿ, ಏನಾದರೂ ಮಾಡಿ ವೀರಪ್ಪನ್ ನನ್ನು ಮುಗಿಸುವಂತೆ ಮತ್ತು ಅದಕ್ಕಾಗಿ ನೇರ ತನ್ನ ಸಂಪರ್ಕದಲ್ಲೇ ಇದ್ದು ಬೇಕಾದ್ದನು ಪಡೆದುಕೊಳ್ಳುವಂತೆ ಸೂಚಿಸಿದಳು..ನೇಮಕಗೊಂಡ ವಿಜಯ್ ಕುಮಾರ್ ನೇರ ಮಹದೇಶ್ವರ ಬೆಟ್ಟಕ್ಕೆ ಬಂದು ಇಡೀ ಬೆಟ್ಟವನ್ನು ನೋಡುತ್ತಾ ಒಮ್ಮೆಗೆ ನಿಟ್ಟುಸಿರು ಬಿಟ್ಟರು. 30 ವರ್ಷಗಳಿಂದ ಈ ಕಾಡು ಅದೆಂಥ ಪಾತಕಿಗೆ ಆಶ್ರಯ ನೀಡಿತು? ಎಂಬ ಪ್ರಶ್ನೆ-ವಿಷಾದ ಎರಡೂ ಅವರ ಮನದಲ್ಲಿ ಮೂಡಿತು. ಜೊತೆಗಿದ್ದ ತಮಿಳುನಾಡು ಪೋಲಿಸಿನ ಪರಮ ದಕ್ಷ, ಚಾಣಾಕ್ಷ ಅಧಿಕಾರಿಗಳಾದ ಕಣ್ಣನ್ ಮತ್ತು ಹುಸೇನ್ ಮೌನವಾಗಿ ಬೆಟ್ಟವನ್ನೇ ನೋಡತ್ತಾ ನಿಂತರು. ಅದೊಂದು ದಿನ ಮಹದೇಶ್ವರ ಬೆಟ್ಟದ ಕರ್ನಾಟಕ ವಿಶೇಷಪಡೆಯ ಕ್ಯಾಂಪ್ ನಲ್ಲಿ ಬಹುಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಯೊಬ್ಬರ ಬೀಳ್ಕೊಡುಗೆ ಸಮಾರಂಭಕ್ಕೆ ವಿಜಯ್ ಕುಮಾರ್ ಹೋಗಿದ್ದರು. ಅಲ್ಲೇ ಪಕ್ಕದಲ್ಲಿ ಕೂತಿದ್ದ ಕರ್ನಾಟಕ ಪೋಲಿಸ್ ಸಿಬ್ಬಂದಿಯೊಬ್ಬರು ” ಪಾಪ, ಈ ವ್ಯಕ್ತಿ ಅದೆಷ್ಟು ವರ್ಷಗಳಿಂದ ಈ ಕಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದವರು ಸಾರ್. ಸೇವೆ ಸಲ್ಲಿಸುತ್ತಾ ಇವರ ಕೂದಲು ಬೆಳ್ಳಗಾಯಿತು, ಕಣ್ಣು ಮಂಜಾಯಿತು ಬಿಟ್ಟರೆ ವೀರಪ್ಪನ್ ನ ಕೂದಲು ಕೊಂಕಿಸಲು ಯಾರಿಂದಲೂ ಆಗಲಿಲ್ಲ. ಇವತ್ತು ನಿರಾಶರಾಗಿ ವೃತ್ತಿ ಬದುಕಿಗೆ ವಿದಾಯ ಹೇಳುವಂತಾಯಿತು. ನೀವು ಏನೇ ಹೇಳಿ ಸಾರ್, ಕಾಡೊಳಗೆ ವೀರಪ್ಪನ್ ನನ್ನು ಏನೂ ಮಾಡಲಾಗದು. ಆತನನ್ನು ಕೊಲ್ಲಬೇಕಿದ್ದರೆ ಆತ ಕಾಡುಬಿಟ್ಟು ಹೊರಬರುವಂತೆ ಮಾಡಬೇಕು” ಎಂದು ವಿಜಯ್ ಕುಮಾರ್ ಗೆ ಹೇಳಿದರು..ಇದನ್ನು ಕೇಳಿದ ವಿಜಯ್ ಕುಮಾರ್ ಕರ್ನಾಟಕದ ಆ ಪೋಲಿಸ್ ಸಿಬ್ಬಂದಿಯನ್ನು ಒಮ್ಮೆಗೆ ಆಶ್ಚರ್ಯದಿಂದ ನೋಡಿದರು..ಆ ಸಿಬ್ಬಂದಿ ಹೇಳಿದ ಮಾತು ಅವರನ್ನು ಅಷ್ಟು ಆಕರ್ಷಿಸಿತು ಮತ್ತು ಸತ್ಯವೆನಿಸಿತು. ಇದೇ ಮಾತು ವೀರಪ್ಪನ್ ನ ಸಾವಿಗೆ ವೇದಿಕೆ ನಿರ್ಮಿಸಲು ಸಹಕಾರಿಯಾಯಿತು. ವಿಜಯ್ ಕುಮಾರ್ ಮಾಹಿತಿದಾರರ ಮೂಲಕ ವೀರಪ್ಪನ್ ಗೆ ಕಣ್ಣಿನ ಸಮಸ್ಯೆಯಿರುವುದು ಮತ್ತು ಜಾಫ್ನಾದ ಎಲ್ ಟಿ ಟಿ ಇ ಸಂಪರ್ಕಿಸಲು ಹವಣಿಸುತ್ತಿರುವುದರ ಖಚಿತ ಮಾಹಿತಿ ಪಡೆದು ಆತನನ್ನು ಕಾಡಿನಿಂದ ಹೊರತರುವ ಕಾರ್ಯಕ್ಕೆ ಸಿದ್ದರಾದರು..ತಮಿಳುನಾಡು ಪೋಲಿಸಿನ ಗಟ್ಟಿಗುಂಡಿಗೆಯ ಇನ್ಸ್ ಪೆಕ್ಟರ್ ವೆಲ್ಲದೊರೈ ನೇರ ವೀರಪ್ಪನ್ ಎದುರು ನಿಂತು ತಾನು ಎಲ್ ಟಿ ಟಿ ಇ ಕಡೆಯವನೆಂದು ನಂಬಿಸಿದರು..ಬಹುಕಾಲದ ಅವನ ಅಭಿಮಾನದ ಸಂಕೇತವಾದ ಮೀಸೆಯನ್ನು ಅವನ ಅಡಗುದಾಣದಲ್ಲೇ, ಅವನ ಕೈಯಿಂದಲೇ ತೆಗೆಸಿದರು ವೆಲ್ಲದೊರೈ. ಪೋಲಿಸರೇ ಕಳುಹಿಸಿದ ಶರವಣನ್ ಎಂಬ ಪೋಲಿಸ್ ಚಾಲಕನೇ ಇದ್ದ ಅಂಬ್ಯುಲೆನ್ಸ್ ನಲ್ಲಿ ಪೋಲಿಸರೇ ಬಿರಿಯಾನಿ ತಿನ್ನಿಸುತ್ತಾ, ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಎಂಬಲ್ಲಿ ವಿಜಯ್ ಕುಮಾರ್ ಇರುವಲ್ಲಿಗೆ ರಾತ್ರಿಯ ಹೊತ್ತಿನಲ್ಲಿ ವೀರಪ್ಪನ್ ನನ್ನು ಕರೆದುಕೊಂಡು ಬಂದರು.

(ವಿಜಯ್ ಕುಮಾರ್ ) ಫೋಟೋ ಕೃಪೆ : keralakaumudi

ಅಂಬ್ಯುಲೆನ್ಸ್ ನಲ್ಲಿ ವೀರಪ್ಪನ್ ಬರುತ್ತಿರುವ ವಿಚಾರ ವಿಜಯ್ ಕುಮಾರ್ ಬಿಟ್ಟರೆ, ಅವರ ನಂಬಿಗಸ್ಥ ಅಧಿಕಾರಿಗಳಾದ ಕಣ್ಣನ್ ಮತ್ತು ಹುಸೇನ್ ರಿಗೆ ಮಾತ್ರವೇ ಗೊತ್ತಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ನೂರಕ್ಕೂ ಹೆಚ್ವಿನ ಸಿಬ್ಬಂದಿಗೆ ವೀರಪ್ಪನ್ ಸಾಯುವವರೆಗೂ ಬರುತ್ತಿರುವ ಅಂಬ್ಯುಲೆನ್ ನೊಳಗಿರುವುದು ವೀರಪ್ಪನ್ ಎಂಬುದು ಗೊತ್ತೇ ಇರಲಿಲ್ಲ..ಕಾರ್ಯಾಚರಣೆಯಲ್ಲಿ ಅಷ್ಟು ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿತ್ತು. ಅಂಬ್ಯುಲೆನ್ ಚಾಲಕ ಶರವಣನ್ ಗೆ ಆತ ಚಲಾಯಿಸುವ ವಾಹನದೊಳಗೆ ಬಂದು ಕೂರುತ್ತಿರುವುದು ವೀರಪ್ಪನ್ ಮತ್ತು ಆತನ ತಂಡವೆಂದು ಕೆಲವೇ ಗಂಟೆಗಳ ಮುಂಚೆಯಷ್ಟೆ ತಿಳಿಸಲಾಗಿತ್ತು. ಆಗ ಶರವಣನ್ ಅಕ್ಷರಶಃ ಬೆವೆತಿದ್ದ. ಪಾಪರಪಟ್ಥಿಯ ಅಂಗನವಾಡಿ ಕಟ್ಟಡದ ಮುಂದಿನ ರೋಡ್ ನಲ್ಲಿ ವಿಜಯ್ ಕುಮಾರ್ ಮಾರ್ಕ್ ಮಾಡಿದ ಜಾಗದಲ್ಲಿ ಅಂಬ್ಯುಲೆನ್ಸ್ ನ ನಾಲ್ಕು ಚಕ್ರಗಳು ಇರುವಂತೆ ಶರವಣನ್ ನೋಡಿಕೊಂಡ..ಅಷ್ಟು ನಿಖರ ಯೋಜನೆ ವಿಜಯ್ ಕುಮಾರ್ ದ್ದಾಗಿತ್ತು. ಅಗೋಚರ ಚಕ್ರವ್ಯೂಹದಂತೆ ನಿಂತಿದ್ದ, ಅಂಬ್ಯುಲೆನ್ಸ್ ಮೇಲೆ ಗುಂಡು ಹಾರಿಸುತ್ತಿರುವವರಿಗೂ ಯಾರಿಗೆ ಹಾರಿಸುತ್ತಿರುವುದು ಎಂದು ತಿಳಿದಿರಲಿಲ್ಲ. ಅವರು ಕೇವಲ ತಮಿಳುನಾಡಿನ ದಕ್ಷ ಪೋಲಿಸ್ ಅಧಿಕಾರಿಯ ಆದೇಶವನ್ನಷ್ಟೇ ಪಾಲಿಸುತ್ತಿದ್ದರು. ಗುಂಡಿನ ಹಾರಾಟ ಮುಗಿದು, ಅಧಿಕಾರಿ ಹುಸೇನ್ ಅಂಬ್ಯುಲೆನ್ ಹತ್ತಿರ ಹೋಗಿ ಎಲ್ಲರೂ ಸತ್ತಿದ್ದಾರೆ ಎಂದು ವಿಜಯ್ ಕುಮಾರ್ ಗೆ ಸನ್ನೆ ಮಾಡಿದರು. ಹುಸೇನ್ ಸನ್ನೆಯನ್ನು ನೋಡಿ, ಅಂಬ್ಯಲೆನ್ಸ್ ನಿಂದ ಹಾರಿಹೋಗಿ ಮರದ ಮರೆಯಲ್ಲಿ ನಿಂತ ಡ್ರೈವರ್ ಶರವಣನ್ ಮತ್ತು ಇನ್ಸಪೆಕ್ಟರ್ ವೆಲ್ಲದೊರೈ ಛಂಗನೇ ಹಾರಿ ಹುಸೇನರತ್ತ ಬಂದರು..ತಮಿಳುನಾಡು ಪೋಲಿಸಿನ ಹಿರಿಯ ಅಧಿಕಾರಿ ಹುಸೇನ್, ಜೀವದ ಹಂಗು ತೊರೆದು ಕಾರ್ಯಾಚರಣೆಯಲ್ಲಿ ಭಾಗಿಯಾದ ಅವರಿಬ್ಬರನ್ನು ಆಲಂಗಿಸಿಕೊಂಡರು. ವೀರಪ್ಪನ್ ನೊಂದಿಗಿನ ಅವರ ಅಂಬ್ಯುಲೆನ್ಸ್ ಪ್ರಯಾಣದ ಸಣ್ಣ ಯಡವಟ್ಟೂ ಅವರನ್ನು ಯಮಪುರಿಗೆ ಅಟ್ಟುತಿತ್ತು. ವಾಹನ ಬರುವ ದಾರಿಯೂದ್ಧಕ್ಕೂ, ಅಲ್ಲಲ್ಲಿ ವಾಹನ ಸಾಗಿದ ವಿಷಯ ತಿಳಿಸಲು ವೈಯರ್ ಲೆಸ್ ಸಿಬ್ಬಂದಿಗಳನ್ಬು ವಿಜಯ್ ಕುಮಾರ್ ನಿಯೋಜಿಸಿದ್ದರು. ಬರುವ ಹಾದಿಯಲ್ಲಿ ದಾರಿ ತಪ್ಪಿಸಿ ಬೇರೆ ದಾರಿಯಲ್ಲಿ ಅಂಬ್ಯುಲೆನ್ಸ್ ಚಲಿಸದಂತೆ ಮಾಡಲು ಡಿ ಎಸ್ ಪಿ ತಿರು ಮತ್ತು ಇನ್ಸಪೆಕ್ಟರ್ ಮೋಹನ್ ನವಾಜ್ ನೇತೃತ್ವದ ತಂಡಗಳನ್ನು ನಿಯೋಜಿಸಲಾಗಿತ್ತು. ಅಂಬ್ಯುಲೆನ್ಸ್, ವಿಜಯ್ ಕುಮಾರ್ ಸೂಚಿಸಿದ ಜಾಗದಲ್ಲಿ ನಿಲ್ಲುವಾಗ ಈ ಎಲ್ಲಾ ತಂಡಗಳು ಅಂಬ್ಯುಲೆನ್ಸನ್ನು ಬಂದು ಸುತ್ತುವರಿಯಬೇಕಿತ್ತು..ಈ ಹೊತ್ತಿನಲ್ಲಿ ಸ್ವಲ್ಪ ಏರುಪೇರಾದರೂ ಶರವಣನ್ ಮತ್ತು ವೆಲ್ಲದೊರೈರ ಮೇಲೆ ವೀರಪ್ಪನ್ ತಂಡ ಮೊದಲು ದಾಳಿ ಮಾಡುತ್ತಿತ್ತು.




ಇನ್ಸಪೆಕ್ಟರ್ ವೆಲ್ಲದೊರೈ ರಣಸಾಹಸಿ, ಎಲ್ಲಕ್ಕೂ ಸಿದ್ಧವಾಗಿಯೇ ಬಂದಿದ್ದರು..25 ವರ್ಷಗಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾಪಡೆ, ಕರ್ನಾಟಕ,ತಮಿಳುನಾಡು ಪೋಲಿಸರು ಭಾಗಿಯಾದರೂ, ಯಾರೂ ವೀರಪ್ಪನ್ ಎದುರು ಹೋಗಿರಲಿಲ್ಲ. ಆದರೆ ವೆಲ್ಲದೊರೈ ಹಲವಾರು ಬಾರಿ ವೀರಪ್ಪನ್ ಅಡಗುದಾಣಕ್ಕೆ ಹೋಗಿ, ಅವನೊಂದಿಗೇ ತಿಂದುಂಡು ಮಲಗಿ ಬಂದವರು. ಸಾವು ವೆಲ್ಲದೊರೈ ರೂಪದಲ್ಲಿ ತನ್ನ ಅಡಗುದಾಣಕ್ಕೆ ಬಂದಿರುವುದು ವೀರಪ್ಪನ್ ಗೆ ಗೊತ್ತೇ ಇರಲಿಲ್ಲ. ತನ್ನ ಮೃತ್ಯುವಿನ ಹೆಗಲ ಮೇಲೆ ಕೈಹಾಕಿಕೊಂಡು ವೀರಪ್ಪನ್ ತಿರುಗುತ್ತಿದ್ದ. ಆ ರಣಚಾಣಾಕ್ಷ ಪಾತಕಿ ಅಕ್ಷರಶಃ ಮೈಮರೆತಿದ್ದ. ಪಾಪರಪಟ್ಟಿಯ ಆ ಕಾರ್ಯಾಚರಣೆಯ ಅಂತಿಮ ಹೊತ್ತಿನಲ್ಲಿ, ಯೋಜನೆಯ ಭಾಗದಂತೆ ಅಂಬ್ಯುಲೆನ್ಸ್ ನಿಂದ ತನ್ನ ಪ್ರೀಯರೂ, ಸಾಹಸಿಗಳೂ ಆದ ಈ ಎರಡು ಸಿಬ್ಬಂದಿಗಳು ಹೊರಹಾರಿದಾಗ ಅಂಗನವಾಡಿ ಕಟ್ಟಡದ ಮೇಲಿದ್ದ ವಿಜಯ್ ಕುಮಾರ್ ನಿಟ್ಟುಸಿರು ಬಿಟ್ಟರು. ತಮ್ಮ ಪ್ರಾಣ ಪಣಕ್ಕಿಟ್ಟು ಅಂಬ್ಯುಲೆನ್ಸ್ ನಲ್ಲಿ ವೀರಪ್ಪನ್ ನನ್ನು ಕರೆದುಕೊಂಡು ಬರುತ್ತಿದ್ದ ಈ ಎರಡು ಜೀವಗಳ ಸುರಕ್ಷತೆಯು ವೀರಪ್ಪನ್ ಹತ್ಯೆಗಿಂತ ಹೆಚ್ಚು ಅವಶ್ಯವಾಗಿತ್ತು. ಅಂಬ್ಯುಲೆನ್ಸ್ ಒಳಗೆ ವೀರಪ್ಪನ್ ಸಹಚರ ಸೇತುಕುಳಿ ಗೋವಿಂದನ್ ವೆಲ್ಲದೊರೈಯನ್ನೇ ಗಮನಿಸುತ್ತಿದ್ದ. ವೀರಪ್ಪನ್ ನಿರಾಳನಾಗಿದ್ದ. ಉಳಿದವರು ಅಪರೂಪಕ್ಕೆ ಸಿಕ್ಕ ಬಿರಿಯಾನಿಯ ಗುಂಗಿನಲ್ಲೇ ಇದ್ದರು. ಪಾತಕಿಯ ಪ್ರಯಾಣ ಪಾಪರಪಟ್ಟಿ ತಲುಪಿದಾಗ ಪಾಪದ ಕೊಡವೂ ಒಮ್ಮೆ ಭಾರ ತಾಳಲಾರದೆ ಕೊಡವಿಕೊಂಡಿತು. ಯೋಜನೆಯಂತೆ ಎದುರಿಗೆ ನಿಂತಿದ್ದ ಲಾರಿಯ ಹಿಂದೆ ಅಂಬ್ಯುಲೆನ್ಸ್ ನಿಂತಿತು. ಶರವಣನ್ ಮತ್ತು ವೆಲ್ಲದೊರೈ ವಾಹನ ನಿಲ್ಲುವ ಮುಂಚೆಯೇ ಹಾರಿದ್ದರು. ಅಂಬ್ಯುಲೆನ್ಸ್ ನ ಮುಂದಿನ ಎರಡೂ ಬಾಗಿಲುಗಳು ತೆರೆದೇ ಇದ್ದವು. ವಿಜಯ್ ಕುಮಾರ್ ಮತ್ತು ಕಣ್ಣನ್ ಕಟ್ಟಡ ಮೇಲೆ ನಿಂತು ಕಾರ್ಯಾಚರಣೆಯನ್ನು ನಿರ್ದೇಶಿಸುತ್ತಿದ್ದರು..ಅಂಬ್ಯುಲೆನ್ಸ್ ಹಿಂದಿನಿಂದ ತಿರು ಮತ್ತು ಮೋಹನ್ ನವಾಜ್ ತಂಡಗಳು ಬಂದು ಸೇರಿಕೊಂಡವು. ಇಡೀ ಅಂಬ್ಯುಲೆನ್ಸ್ ಸರ್ವಕೋನದಿಂದಲೂ ಸುತ್ತುವರಿಯಲ್ಪಟ್ಟಿತು. ಹುಸೇನ್ ರ ತಂಡ ರಸ್ತೆಯ ಮೇಲೆ ಸನಿಹದ ಕಾರ್ಯಾಚರಣೆಗೆ ನಿಯೋಜಿತವಾಗಿತ್ತು. ಕಾರ್ಯಾಚರಣೆ ನಡೆಯುತ್ತಿರುವಾಗ ಒಮ್ಮೆಗೆ ಗುಂಡು ಹಾರಿಸುವುದನ್ನು ನಿಲ್ಲಿಸುವಂತೆ ವಿಜಯ್ ಕುಮಾರ್ ಆದೇಶಿಸಿದರು..ಮರದ ಮರೆಯಿಂದ ಹುಸೇನ್ ಮೆಲ್ಲನೆ ಅಂಬ್ಯುಲೆನ್ಸ್ ನತ್ತ ಹೆಜ್ಜೆಯಿಟ್ಟರು..ಹುಸೇನ್ ಅಂಬ್ಯುಲೆನ್ಸ್ ನತ್ತ ಧಾವಿಸುತ್ತಿರುವುದು ನೋಡಿ ವಿಜಯ್ ಕುಮಾರ್ ಹುಸೇನ್ ಗೆ ನಿಲ್ಲುವಂತೆ ಕೂಗಿದರು. ಯಾವ ಕಾರಣಕ್ಕೂ ತನ್ನ ಪಡೆಯ ಒಬ್ಬರ ರಕ್ತವೂ ಹರಿಯಬಾರದು ಎಂಬುದು ವಿಜಯ್ ಕುಮಾರ್ ಬಯಕೆಯಾಗಿತ್ತು. ಆಮೇಲಿನ ಗುಂಡುಗಳ ಸುರಿಮಳೆಯಲ್ಲಿ ವೀರಪ್ಪನ್ ಮತ್ತು ತಂಡದವರ ದೇಹ ಛಿದ್ರ ಛಿದ್ರವಾಯಿತು.

ಫೋಟೋ ಕೃಪೆ : swarajya

ದಶಕಗಳ ಕಾಲದ ವೀರಪ್ಪನ್ ರಂಪಾಟ ಎಷ್ಟು ಅವಮಾನಕಾರಿಯಾಗಿತ್ತೋ, ಅವನನ್ನು ಕೊಂದ ಯೋಜನೆ ಅದಕ್ಕಿಂತಲೂ ಹೆಚ್ಚಿನ ಅಭಿಮಾನಕರವಾಗಿತ್ತು..ಜಗತ್ತಿನ ಯಾವ ವ್ಯವಸ್ಥೆಯ ತಂತ್ರಕ್ಕೂ ಅದು ನಿಲುಕದ್ದಾಗಿತ್ತು.ಅದೆಷ್ಟೋ ಅಧಿಕಾರಿಗಳು, ವಿರೋಧಿಗಳನ್ನು ತನ್ನಲ್ಲಿಗೇ ಕರೆಸಿಕೊಂಡು ಕೊಲ್ಲುತ್ತಿದ್ದ ವೀರಪ್ಪನ್ ನನ್ನು, ವಿಜಯ್ ಕುಮಾರ್ ತಮ್ಮಲ್ಲಿಗೆ ಕರೆಸಿಕೊಂಡು ಮುಗಿಸಿದರು. ಕಾಡಿನೊಳಗಡೆ ವ್ಯೂಹ ರಚಿಸಿಕೊಂಡು ಮರೆಯುತ್ತಿದ್ದ ವೀರಪ್ಪನ್ ಬದುಕಿನ ಅನೂಹ್ಯ ತಂತ್ರಕ್ಕೆ ಬಲಿಯಾದ..ಅದೆಂಥ ವ್ಯೂಹಾತ್ಮಕತೆಗೂ ಒಂದು ಪ್ರತಿವ್ಯೂಹ ಇದ್ದೇ ಇರುತ್ತದೆ ಎಂಬ ಅರಿವು ಮೂಡುವ ಮುಂಚೆಯೇ ವೀರಪ್ಪನ್ ಇಹಲೋಕ ತ್ಯಜಿಸಿದ..ಜಗತ್ತಿನ ಯಾವ ಶಕ್ತಿ-ಯುಕ್ತಿಯ ವ್ಯಾಪ್ತಿಗೂ ನಿಲುಕದೆ ಅಟ್ಟಹಾಸ ಮೆರೆಯುತ್ತಿದ್ದವನು, ಕರ್ನಾಟಕದ ಸಾಮಾನ್ಯ ಪೋಲಿಸ್ ಪೇದೆಯ ಯುಕ್ತಿಪೂರ್ಣವಾದ ಸಲಹೆಗೆ ಬಲಿಯಾದ..ಈ ಪೇದೆಯ ಯುಕ್ತಿಯೇ ವಿಜಯ್ ಕುಮಾರ್ ಗೆ ಶಕ್ತಿಯಾಗಿ ಎರಡೂ ರಾಜ್ಯಗಳ ದಶಕಗಳ ಕಾಲದ ಗಂಡಾಂತರ ತೊಲಗುವಂತಾಯಿತು..


  • ಮುಷ್ತಾಕ್ ಹೆನ್ನಾಬೈಲ್ , ಕುಂದಾಪುರ

5 1 vote
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW