‘ವಿವಸ್ತ್ರ ಎಂಬುದು ಬೆತ್ತಲೆಯೇ!? ಅರಿಯರು: ಯಾವ ಮೂರ್ತಿಗಳು’ ಕವಿ ಡಾ. ಆನಂದ್ ಋಗ್ವೇದಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನದ ಸಾಲುಗಳನ್ನು ತಪ್ಪದೆ ಓದಿ….
ಹೆಣ್ಣ ಬೆತ್ತಲೆ ನೋಡುವುದು
ದೇವಾನುದೇವತೆಗಳಿಗೂ ಬಿಡದ
ಆಸೆ!
ಬ್ರಹ್ಮ ವಿಷ್ಣು ಮಹೇಶ್ವರ ಎಂಬ
ತ್ರಿಮೂರ್ತಿಗಳು ಬೆತ್ತಲೆ ದರ್ಶನದ
ಬೇಡಿಕೆ ಇಟ್ಟಿದ್ದು:
ಮಹರ್ಷಿ ಅತ್ರಿಯ ಪತ್ನಿ
ದತ್ತ ದೂರ್ವಾಸರ ತಾಯಿ
ಅನಸೂಯೆಗೆ!
‘ಜಲಸಿ ದೈ ನೇಮ್ ಈಸ್ ವುಮೆನ್’
ಎಂದಿದ್ದ ಶೇಕ್ಸ್ಪಿಯರ್ ಮಹಾಶಯ
ಹಾಗೆ ಜಲಸಿ, ತುಸು ಆಲಸಿ ಅಲ್ಲದ
ಮಾನಿನಿ ಇರಬಹುದೇ?
ಪ್ರಶ್ನೆ ಶೇಕ್ಸ್ಪಿಯರನದಷ್ಟೇ ಅಲ್ಲ
ತ್ರಿಮೂರ್ತಿಗಳಾದಿ ದೇವಾನುದೇವತೆಗಳದ್ದು!
ಎಂದೇ ಬೆತ್ತಲೆ ದರ್ಶನದ ಬೇಡಿಕೆ
ಈಡೇರಿಕೆಗೆ ವಿವಸ್ತ್ರಗೊಳಿಸಿದ ಹೆಣ್ಣ
ಕೊರಳ ಕೆಳಗಿನ ಕಣಿವೆ
ಮುಖ ತಿರುಗಿಸಿ ನಿಂತ ಮಂದಾರ ಪರ್ವತ
ಶಿಖರಗಳ ಆಗ್ರ ಕೆಳಗೆ
ಪ್ರಶಸ್ಥ ಪ್ರಸ್ಥ ಭೂಮಿಯ ಸ-
ಪಾಟು ನಡುವಿನ ಕರುಳ ಬಳ್ಳಿಯ ಕುಳಿ
ಕಿರುಗೂದಲ ಕಿಬ್ಬೊಟ್ಟೆ ಕಟಿ
ಹಿಂದಿನ ಘನ ನುಣುಪು ದೇಗುಲದಗಂಬ-
-ದ್ವಯ ಮೊಣ ಗಂಟು ಮೀನು ಖಂಡ
ಎಲ್ಲಾ ಹೊತ್ತು ನಿಂತ ದಿವ್ಯ ಪಾದ!
ವಿಗ್ರಹ ಶಾಸ್ತ್ರದಂತೆ ಎಲ್ಲಾ ಹೆಣ್ಣುಗಳಿಗೂ
ಅವೇ ಅವೇ ಅವಯವ;
ಇರುಳು ಇನಿಯನಿಗಿತ್ತಿದ್ದು ಹಗಲು
ಮಡಿಲ ತನಯನಿಗೆ ಹಾಲೂಡಿದ್ದು
ಬೆತ್ತಲಗೊಳಿಸಲಾದೀತೇ ಆಕೆಯ
ಮನಮಂದಿರದ ಆಸೆ ಆಕಾಂಕ್ಷೆ ಕನಸು ಕಾಮನೆ!?
ಕಾರಿರುಳ ತುಂಬಿಕೊಂಡ ಆ ನಯನಂಗಳದಿ ಹೊಮ್ಮಿ ಬೆಳಕು, ಪಳಕ್ಕೆಂದ ಆ ಮೂಗುತಿಯ ಮಿಂಚ ಭಾಷೆ!
ಹೇಳದೇ ಉಳಿದ ಉಲಿಯ
ಕದಲದೇ ನಿಂತ ಕನಸ ಮನಸಾರೆ ಒಲಿದ ಹೆಸರ
ನವಮಾಸ ಹೊತ್ತು ಸಲಹುವ ಬಸಿರ ಮೂಲದ
ಉಸಿರ ಆಕೆಯೇ ಹೊರಹಾಕದೆ -ಬರೀ ವದಂತಿ
ಕಟ್ಟು ಕತೆ!
ವಿವಸ್ತ್ರ ಎಂಬುದು ಬೆತ್ತಲೆಯೇ!?
ಅರಿಯರು: ಯಾವ ಮೂರ್ತಿಗಳು
ಉಟ್ಟ ದಟ್ಟಿಯ ಸೆರಗೆಳೆದ ದುಷ್ಯಾಶನರು
ಮನಸಲ್ಲೆ ಮಂಡಿಗೆ ತಿನ್ನುವ ಯಾವುದೇ ಕೀಚಕರು
- ಡಾ. ಆನಂದ್ ಋಗ್ವೇದಿ, ಲೇಖಕರು, ಕವಿಗಳು
