“ಅಲ್ರೀ … ಮೊದಲಿನಿಂದಲೂ ಕೆಲಸದವರನ್ನಿಟ್ಟುಕೊಂಡಿದ್ದರೆ ಅವರಿಗೆ ತಿಂಗಳಿಗೆ ಸಾವಿರ ಎರಡು ಸಾವಿರ ಕೊಡಬೇಕಿತ್ತು . ಆದ್ರೆ, ಎಲ್ಲ ನಾನೇ ಮಾಡಿಕೊಂಡು ಹೋಗ್ತಾ ಇದೀನಿ. ಈಗ ಮನೆಕೆಲಸದವ್ರಿಗೆ ಕೊಡಬೇಕಾಗಿದ್ದ ಅದೇ ದುಡ್ಡನ್ನು ನನ್ನ ಹೆಸರಲ್ಲಿ ಒಂದು ಆರ್. ಡಿ. ಮಾಡಿಸಿ ಪ್ರತೀ ತಿಂಗಳು ಹಾಕಿ ” ಎಂದು ಖಡಕ್ ಆದ ದನಿಯಲ್ಲಿಯೇ ಫ಼ರ್ಮಾನು ಹೊರಡಿಸುತ್ತಾ, ಅದೇನೆಲ್ಲಾ ಮನಸಲ್ಲಿತ್ತೋ ಒಮ್ಮೆಲೇ ಹೊರಹಾಕಿದಳು. ಹಿರಿಯೂರು ಪ್ರಕಾಶ್ ಅವರ ಲೇಖನವನ್ನವು ತಪ್ಪದೆ ಮುಂದೆ ಓದಿ…
ಮದುವೆಯಾಗಿ ಹೊಸ ಸಂಸಾರ ಹೂಡಿ, ವೃತ್ತಿ ವರ್ಗಾವಣೆ ಕಾರಣದಿಂದ ನಾವು ವಾಸವಾಗಿದ್ದ ಹಲವು ಊರುಗಳ ಪೈಕಿ ಎಲ್ಲೋ ಕೆಲವೆಡೆ ಮಾತ್ರ ಮನೆಕೆಲಸಕ್ಕೆ, ಮನೆ ಸ್ವಚ್ಛ ಮಾಡಲು ಅಂತ ನನ್ನಾಕೆ ಕೆಲಸದವರನ್ನು ಅವಲಂಬಿಸಿದ್ದುಂಟು. ವಿಶೇಷವಾಗಿ, ಮಕ್ಕಳು ಚಿಕ್ಕವರಾಗಿದ್ದಾಗ ಕೊಡಗಿನ ಸೋಮವಾರಪೇಟೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಮಾತ್ರ ಕಸ- ಮುಸುರೆ, ಬಟ್ಟೆ ತೊಳೆಯುವ ಮುಂತಾದ ಕೆಲಸಕ್ಕಾಗಿ ಮನೆ ಕೆಲಸದಾಕೆ ಬರುತ್ತಿದ್ದರು. ಆದರೆ ಎಂತಹಾ ಸಂದರ್ಭದಲ್ಲೂ ಅಡಿಗೆ ಮಾಡುವುದು ಹಾಗೂ ಅಡಿಗೆಮನೆ ಕೆಲಸದ ಜವಾಬ್ದಾರಿಯೆಲ್ಲಾ ಅಂದಿನಿಂದ ಇಂದಿಗೂ ನನ್ನ ಶ್ರೀಮತಿಯದೇ.
ನಮ್ಮ ಸಮಯಕ್ಕೆ ಸರಿಯಾಗಿ ಮನೆಕೆಲಸದ ಜನ ಸಿಗದಿರುವುದು, ಇವರ ಮನಸಿಗೆ ಒಪ್ಪುವ ಹಾಗೆ ಅಚ್ಚುಕಟ್ಟಾಗಿ ಕೆಲಸ ಮಾಡದಿರುವುದು ಅಥವಾ ಸಿಕ್ಕರೂ ಸಮಯಕ್ಕೆ ಸರಿಯಾಗಿ ಬಾರದಿರುವುದು ಇವೇ ಮೊದಲಾದ ಕಾರಣಗಳಿಂದ ಹಾಗೂ ನಮ್ಮ ನಮ್ಮ ಕೆಲಸ ನಾವು ಮಾಡಿಕೊಂಡರೆ ದೈಹಿಕ ಚಟುವಟಿಕೆಯೂ ಆದೀತೆಂಬ ಕಾರಣಕ್ಕೆ ನಮ್ಮ ಒಟ್ಟಾರೆ ಸಾಂಸಾರಿಕ ಬದುಕಿನಲ್ಲಿ ಹೆಚ್ಚುಕಡಿಮೆ ಮನೆ ಕೆಲಸದ ಜವಾಬ್ದಾರಿ ನನ್ನವಳದ್ದೇ ! ಆದರೂ ನನ್ನ ಬಿಡುವಿನ ಅವಧಿಯಲ್ಲಿ ನಾನೂ ಸಹಾ ಅವಳಿಗೆ ಮನೆಯಲ್ಲಿ ಸಣ್ಣ ಪುಟ್ಟ ಸಹಾಯ ಮಾಡುತ್ತಾ ಹೇಗೋ ಮ್ಯಾನೇಜ್ ಮಾಡಿಕೊಂಡೇ ಬಂದಿದ್ದೆವು.
ಆದರೆ ನಿಮಗೆ ಗೊತ್ತಿರಬಹುದು ! ಈ ಹೆಂಡತಿ ಎನ್ನುವ ಗೃಹಮಂತ್ರಿಯ ಮೂಡು ಯಾವಾಗ ಹೇಗೆಂದು ಯಾರೂ ಹೇಳೊಕಾಗೋಲ್ಲ. ಅದರಲ್ಲೂ ಮನೆ ಕೆಲಸಕ್ಕೆಂದು ಯಾರೂ ಸಿಗದಿದ್ದಾಗ , ಮನೆಕೆಲಸದಲ್ಲಿ ಗಂಡ ಮಕ್ಕಳು ಸಹಾಯ ಮಾಡುವವರಾಗಿರದೇ ಎಲ್ಲವನ್ನೂ ಹೆಚ್ಚಾಗಿ ತಾನೇ ಮಾಡಬೇಕಾಗಿ ಬಂದ ಸಂಧರ್ಭಗಳಲ್ಲಿ ಆಕೆಯ ಮೂಡು- ಕೋಡು ಸಕತ್ ಖರಾಬ್ ಆಗಿಯೇ ಇರೋದ್ರಲ್ಲಿ ಡೌಟೇ ಬೇಡ. ಒಮ್ಮೊಮ್ಮೆ ಎಲ್ಲಾ ಸಹಾಯ ಮಾಡಿದರೂ ಸಹಾ, ಅವಳೊಳಗಿನ ಯಾವುದೋ ಒಂದು ಸುಪ್ತ ಅಸಹನೆ ಸ್ಫೋಟಗೊಳ್ಳಲು ಇಂತಹದೇ ಕಾರಣ ಅಂತಾ ಬೇಕಾಗಿಲ್ಲ. ಅದರಲ್ಲೂ ಹೆಂಡತಿ ಕೆಲಸ ಮಾಡುವಾಗ ಗಂಡ ಅಥವಾ ಮಕ್ಕಳು ಆರಾಮಾಗಿ ಪೇಪರ್ರೋ ಮೊಬೈಲೋ ಹಿಡಿದು ಸುಮ್ಮನೇ ಕೂತಿದ್ದರಂತೂ ಅಲ್ಲಿಗೆ ಅವಳ ಆಕ್ರೋಶದ ಅಣೆಕಟ್ಟಿನ ಕ್ರಸ್ಟ್ ಗೇಟುಗಳೆಲ್ಲಾ ಓಪನ್ ಆಗಿ ಅದು ಹೈಪರ್ ಮಟ್ಟಕ್ಕೇರಿರುತ್ತೆ.
ಇದು ಇಂಟಿಂಟಿ ರಾಮಾಯಣಂ….!! ಹೈ ನಾ..?
ಈ ಎಲ್ಲಾ ಪುರಾಣದ ಪೀಠಿಕೆ ಈಗ್ಯಾಕೆ ಅಂತೀರಾ.!
ಇತ್ತೀಚೆಗೆ ಅಂತಹದೇ ಒಂದು ಇಂಟರೆಸ್ಟಿಂಗ್ ಸ್ಫೋಟ ಆಯ್ತು ನೋಡಿ. ! ಮೊನ್ನೆ ಎಂದಿನಂತೆ ಅದೂ ಇದೂ ಸಿಕ್ಕಾಪಟ್ಟೆ ಮನೆಕೆಲಸದಲ್ಲಿ ಬಿಜ಼ಿಯಾಗಿದ್ದ ನನ್ನಾಕೆಗೆ ಅವಳ ಕೆಲಸದ ಭಾರ ಕಡಿಮೆಯಾಗಲೆಂದು ಅಲ್ಪ ಸ್ವಲ್ಪ ಸಹಾಯ ಮಾಡುತ್ತಾ ” ಎಷ್ಟೆಲ್ಲಾ ಕೆಲಸ ಇದೆ ಅಲ್ಲವಾ…? ಎಷ್ಟು ಮಾಡಿದರೂ ಮುಗಿಯೋದೇ ಇಲ್ಲ “… ಎನ್ನುತ್ತಾ ಅವಳ ಬಗ್ಗೆ ಪ್ರಾಮಾಣಿಕ ಕಾಳಜಿ ತೋರುವ ಮಾತುಗಳನ್ನಾಡಿದೆ. ಅದಕ್ಕೆ ಅವಳು ” ಈ ಡೈಲಾಗೆಲ್ಲಾ ಏನೂ ಬೇಡ. ಅದರಿಂದ ನನ್ನ ಕೆಲಸದ ಭಾರ ಏನೂ ಕಡಿಮೆಯಾಗೋಲ್ಲ. ಈ ಸರಿಯಾದ ಕೆಲಸದವರು ಒಬ್ಬರೂ ಸಿಗೋಲ್ಲ. ಸಿಕ್ಕರೂ ಸ್ವಲ್ಪದಿನವೂ ಇರೋಲ್ಲ. ಮನೆ ಕೆಲಸದವರ ಸಹಾಯವಿಲ್ಲದೇ ನಾನೊಬ್ಬಳೇ ದುಡಿಯುತ್ತಲೇ ಬಂದಿದ್ದೇನೆ… ” ಎಂದು ಅಸಹನೆಯಿಂದಲೇ ಹೇಳಿದಳು.
ಅದಕ್ಕೆ….ಏನಿವಾಗ… ಎಂದೆ…
” ಅಲ್ರೀ….ಮೊದಲಿನಿಂದಲೂ ಕೆಲಸದವರನ್ನಿಟ್ಟು ಕೊಂಡಿದ್ದರೆ ಅವರಿಗೆ ತಿಂಗಳಿಗೆ ಸಾವಿರ ಎರಡು ಸಾವಿರ ಕೊಡಬೇಕಿತ್ತು . ಆದ್ರೆ, ಎಲ್ಲ ನಾನೇ ಮಾಡಿಕೊಂಡು ಹೋಗ್ತಾ ಇದೀನಿ. ಈಗ ಮನೆಕೆಲಸದವ್ರಿಗೆ ಕೊಡಬೇಕಾಗಿದ್ದ ಅದೇ ದುಡ್ಡನ್ನು ನನ್ನ ಹೆಸರಲ್ಲಿ ಒಂದು ಆರ್. ಡಿ. ಮಾಡಿಸಿ ಪ್ರತೀ ತಿಂಗಳು ಹಾಕಿ ” ಎಂದು ಖಡಕ್ ಆದ ದನಿಯಲ್ಲಿಯೇ ಫ಼ರ್ಮಾನು ಹೊರಡಿಸುತ್ತಾ, ಅದೇನೆಲ್ಲಾ ಮನಸಲ್ಲಿತ್ತೋ ಒಮ್ಮೆಲೇ ಹೊರಹಾಕಿದಳು.
ಅದಕ್ಕೆ ನಾನು “ಅಲ್ಲಮ್ಮಾ…. ನೀನು ಇಷ್ಟು ವರ್ಷ ಸುಮ್ಮನಿದ್ದು ಈ ಡಿಮ್ಯಾಂಡನ್ನು ಈಗ ಇಡುತ್ತಿದ್ದೀಯಲ್ಲ ? ನಾನು ಬ್ಯಾಂಕಲ್ಲಿದ್ದಾಗ , ಬರಬೇಕಾದ ಬೆನಿಫ಼ಿಟ್ಟೆಲ್ಲಾ ಸರಿಯಾಗಿ ತೆಗೆದುಕೊಳ್ಳದೇ ಬಿಟ್ಟು ಮಾಡಿಕೊಂಡ ಅದೇ ಮಹಾತಪ್ಪನ್ನು ಈಗ ನೀನು ಮಾಡ್ತಾ ಇದೀಯಾ!” ಎಂದು ನಗಾಡುತ್ತಾ ಹೇಳಿದೆ.
” ನಿಮ್ಮ ಬ್ಯಾಂಕಿನ ಕತೆ ಎಲ್ಲಾ ಗೊತ್ತಿಲ್ಲಾರೀ ! ಕೊನೇಪಕ್ಷ ಈ ತಿಂಗಳಿಂದನಾದ್ರೂ ನನ್ನ ಹೆಸರಲ್ಲಿ ದುಡ್ಡು ಹಾಕಿ. ಅದನ್ನೇನು ನಾನು ಷಾಪಿಂಗು ಅಂತ ಬಳಸೋಲ್ಲ. ಅದೇನಿದ್ರೂ ಮನೆ ಖರ್ಚಿಗೆ ಅಲ್ವಾ…? ಹೀಗೆ ಕೇಳಿದಾಗ , ” ಆಯ್ತು. ಆದರೆ ನಿನ್ನ ಕೆಲಸಕ್ಕೆ ಬೆಲೆ ಕಟ್ಟೋಕಾಗುತ್ತೇನಮ್ಮಾ… ಹೋಗ್ಲೀ ಎಷ್ಟು ಹಾಕಬೇಕು ಸಂಬಳ ಎಂದೆ?.
“ನೋಡ್ರೀ…ಈಗ ನೀವೇನೇ ನೈಸ್ ಮಾಡಿದರೂ ಈ ಸಾರಿ ನಾನು ಮರೆಯೋಲ್ಲ. ಎಷ್ಟಾದ್ರೂ ಆಯ್ತು , ಮೊದಲು ದುಡ್ಡು ಹಾಕಿ. ಈಗ ಕಸ ಹೊಡೆದು ಪಾತ್ರೆ ತೊಳೆದು ಬಟ್ಟೆ ಒಗೆಯುವ ಕೆಲಸಕ್ಕೆ ಅಂತಾನೇ ಮೂರು ಸಾವಿರಕ್ಕೆ ಕಡಿಮೆ ಯಾರೂ ಬರೋಲ್ಲ. ಜೊತೆಗೆ ಅಡಿಗೆ ಕೆಲಸ ಸೇರಿದ್ರೆ ಇನ್ನೂ ಜಾಸ್ತಿ .ಆದರೆ ಅಡಿಗೆ ಕೆಲಸಕ್ಕೆ ದುಡ್ಡು ಬೇಡ. ಮಿಕ್ಕಿದ್ದಕ್ಕೆ ಮೂರು ಸಾವಿರ ಹಾಕ್ರೀ.!
ಅವಳು ತನಗೆ ಕೆಲಸ ಹೆಚ್ಚಾಯ್ತು ಎನ್ನುವ ಸಿಟ್ಟಿನಿಂದ, ಅಸಹನೆಯಿಂದ ಈ ಬೇಡಿಕೆಯನ್ನು ತಮಾಷೆಯಾಗಿ ಇಟ್ಟಿದ್ದರೂ ನಾನು ಈ ಬಗ್ಗೆ ಬಹಳ ಹಿಂದೆಯೇ ಗಂಭೀರವಾಗಿ ಯೋಚಿಸಿ ನಿರ್ಧರಿಸಿದ್ದೆ.
ಹೀಗಾಗಿ ತಕ್ಷಣವೇ ನಾನು ಬ್ಯಾಂಕಿನಲ್ಲಿ ಅವಳ ಹೆಸರಲ್ಲಿ ಬಹಳ ಹಿಂದಿನಿಂದಲೂ ಇಟ್ಟಿರುವ ಠೇವಣಿಯ ಸರ್ಟಿಫಿಕೇಟ್ ಅನ್ನು ಅವಳ ಮುಂದೆ ಹಿಡಿದು ” ನೋಡಮ್ಮಾ ಇದು ನೀನು ದುಡಿದ ಹಣ. ಆದರೆ ಕೂಲಿಯೂ ಅಲ್ಲ ಸಂಬಳವೂ ಅಲ್ಲ. ನೀನು ನಮ್ಮೆಲ್ಲರಿಗೆ ಕೊಟ್ಟಿರುವ ಪ್ರೀತಿಗೆ, ಹಾಕಿರುವ ಊಟಕ್ಕೆ, ಮಕ್ಕಳನ್ನು ಬೆಳೆಸಿರುವ ಪರಿಗೆ ಎಷ್ಟು ಹಣ ಕೊಟ್ಟರೂ ಸಾಕಾಗೋಲ್ಲ ಅಸಲು, ಅದಕೆ ಬೆಲೆ ಕಟ್ಟಲಾಗೋಲ್ಲ . ಆದರೂ ಇದು ನಿನ್ನದೇ ಹಣ. ನೀನು ಹೊರಗಡೆ ಉದ್ಯೋಗಿಯಾಗಿದ್ದರೆ ಸಿಗುವಷ್ಟು ಅಲ್ಲದಿದ್ದರೂ ಒಂದು ಅಂದಾಜಿಗೆ ತಕ್ಕನಾಗಿದೆ. ಸೋ… ಹೆಮ್ಮೆಯಿಂದ ಇದನ್ನು ನೀನು ಪಡೆದು ” ಇದು ನಾನು ಸಂಪಾದಿಸಿದ ಹಣ ” ಎಂದೇ ಹೆಮ್ಮೆಯಿಂದ ಭಾವಿಸು ” ಎಂದೆ.
ಅವಳಿಗೆ ಅಚ್ಚರಿಯಿಂದ ಏನು ಹೇಳಬೇಕೋ ತಿಳಿಯಲಿಲ್ಲ. “ಅಲ್ಲಾರೀ ನಾನೇನೋ ತಮಾಷೆಗೆ ಹೇಳಿದ್ರೆ ನೀವು ನಿಜವಾಗಿಯೂ ನನ್ನ ಹೆಸರಿಗೆ ಹಣ ಇಟ್ಟಿದ್ದೀರಲ್ಲ..? ನಾನೇನು ಸಂಬಳಕ್ಕಾಗಿ ದುಡಿಯುವವಳಾ..?
ಈ ಹೆಂಗಸರನ್ನು ಅರ್ಥ ಮಾಡಿಕೊಳ್ಳೋದೇ ಕಷ್ಟ ಕಣ್ರೀ ! ಒಮ್ಮೆ ಹಂಗೂ ಅಂತಾರೆ ಇನ್ನೊಮ್ಮೆ ಹಿಂಗೂ ಅಂತಾರೆ. ಆಗ ಮತ್ತೊಮ್ಮೆ ಅವಳಿಗೆ ಸಮಾಧಾನ ಮಾಡಿ “ನಿನ್ನ ಶ್ರಮಕ್ಕೆ ತ್ಯಾಗಕ್ಕೆ ಏನು ಕೊಟ್ಟರೂ ಕಡಿಮೆಯೇ..! ಆದರೆ ಈ ಹಣ ನಿನ್ನದೇ ,ನೀನು ಗಳಿಸಿದ್ದೇ ಎಂಬ ಅತ್ಮ ವಿಶ್ವಾಸ ನಿನಗಿರಲಿ. ಅಷ್ಟು ಸಾಕು.” ಇನ್ನು ಮಾತು ಬೇಡ ಎಂದು ಅವಳ ಕೈಗೆ ಡಿಪಾಸಿಟ್ ರೆಸಿಟ್ ಇಟ್ಟು ನಮ್ಮ ” Some ವಾದ ” ನಿಲ್ಲಿಸಿದೆ.
ಗಂಡ ಸಂಪಾದಿಸುವ ಹಣ ಸಂಸಾರ ನಿರ್ವಹಣೆಗೇ ಅಲ್ಲವೇ , ಅದರಲ್ಲಿ ಗಂಡ ಹೆಂಡತಿ ಎಂಬ ಬೇಧವೇಕೆ..? ಎಂಬ ಮಾತು ನಿಜವಾದರೂ ಆಕೆಗೆ “ತಾನು ಕೇವಲ ಗೃಹಿಣಿ ಮಾತ್ರ, ತಾನೇನೂ ದುಡಿಯುತ್ತಿಲ್ಲ, ತನ್ನ ಖರ್ಚಿಗಾಗಿ ಗಂಡ ಅಥವಾ ಮಕ್ಕಳು ಹೀಗೆ ಮತ್ತೊಬ್ಬರನ್ನೇ ಆಶ್ರಯಿಸಬೇಕು ” ಎಂಬಿತ್ಯಾದಿ ಕೀಳರಿಮೆಯ ಭಾವ ಒಮ್ಮೊಮ್ಮೆ ಬೇಡವೆಂದರೂ ಕೆಲವು ಗೃಹಿಣಿಯರ ಮನದೊಳಕ್ಕೆ ಆಳವಾಗಿ ಇಳಿದಿರುತ್ತೆ. ಇದನ್ನು ಅವರು ಹೇಳಿಕೊಳ್ಳದಿದ್ದರೂ ಅರ್ಥಮಾಡಿಕೊಳ್ಳುವ ಮನಸ್ಸು ನಮಗಿರಬೇಕು.
ಏಕೆಂದರೆ, ಇದು ದುಡ್ಡು-ಕಾಸಿನ ವ್ಯವಹಾರದ ಲೆಕ್ಕಾಚಾರವಲ್ಲ…., ಬದಲಿಗೆ ಪ್ರೀತಿ-ಒಲುಮೆಗಳ ಸದಾಚಾರ.!
* ಮರೆಯುವ ಮುನ್ನ *
ಹೆಂಡತಿಯಾದವಳಿಗೆ ಗೃಹಿಣಿ, ಹೋಮ್ ಮೇಕರ್ರು, ಹೌಸ್ ವೈಫ಼ು, ಇತ್ಯಾದಿ ಪದನಾಮಗಳಿಂದ ಕರೆಯುತ್ತೇವೆ. ಆಕೆ ಗಂಡನಿಗಿಂತ ಹೆಚ್ಚಿಗೇ ಓದಿದ್ದರೂ, ಕೆಲಸ ಗಳಿಸುವ ಅರ್ಹತೆಯುಳ್ಳ ಪದವೀಧರೆಯಾಗಿದ್ದರೂ, ತಿಳಿವಳಿಕೆಯುಳ್ಳವಳಾಗಿದ್ದರೂ ಹೊರಗಿನಿಂದ ತಿಂಗಳ ಸಂಬಳ ಬರುವ ಕೆಲಸವಿಲ್ಲವೆಂದೂ ತಾನು ಬರೀ ಅಡಿಗೆ ಕೋಣೆಗೆ ಸೀಮಿತವಾಗಿರುವವಳೆಂದೂ ಒಮ್ಮೊಮ್ಮೆ ಬೇಸರವಾದಾಗ ಒಳಗೊಳಗೇ ಕೊರಗುವುದೂ ಉಂಟು . ಹೀಗಾಗಿ ಗೃಹಿಣಿಯಾದವಳ ಮನಸಲ್ಲಿ ತಾನು ಏನೂ ಸಂಪಾದಿಸುತ್ತಿಲ್ಲವೆಂಬ ಕೀಳರಿಮೆ , ಎಲ್ಲ ಖರ್ಚಿಗೂ ಗಂಡನ ಮೇಲೆ ಆಧಾರವಾಗಿರಬೇಕೆಂಬ ಭಾವನೆ ಬಾರದಂತೆ ನೋಡಿಕೊಳ್ಳುವುದರ ಜತೆಗೆ ತಾನು ಯಾರಿಗೂ ಕಡಿಮೆಯಿಲ್ಲವೆಂಬ ಆತ್ಮಸ್ಥೈರ್ಯ ಆಕೆಯಲ್ಲಿ ಮೂಡಿಸಬೇಕಾಗಿರುವುದು ಸಹಾ ಗಂಡಸರ ಜವಾಬ್ದಾರಿ ಮತ್ತು ಕರ್ತವ್ಯ .
Of course, ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಉದ್ಯೋಗದಲ್ಲಿರುವ ಪುರುಷರಿಗೆ ನಿವೃತ್ತಿ ಅಂತಾನಾದ್ರೂ ಇರುತ್ತೆ. ಅರವತ್ತರ ನಂತರ ಅವರು ಆರಾಮು. ಆದರೆ ಗೃಹಿಣಿಯಾದವಳ ವೃತ್ತಿಯಲ್ಲಿ ನಿವೃತ್ತಿಯೆಂಬ ಮಾತೇ ಇಲ್ಲ ! ಆಕೆ ಕೊನೆಯ ಉಸಿರಿರುವ ತನಕವೂ ಯಾವ ಪ್ರತಿಫಲವೂ ಬಯಸದೇ ನಿರಂತರವಾಗಿ ತನ್ನ ಕುಟುಂಬಕ್ಕಾಗಿ ಅದೇ ಕ್ಷಮತೆಯಿಂದಲೇ ದುಡಿಯುತ್ತಲೇ ಇರಬೇಕು….ಯಾರು ಹೊಗಳಲೀ…ತೆಗಳಲೀ...ಕೂಗಾಡಲೀ… !!
ಪ್ರೀತಿಯಿಂದ…..
- ಹಿರಿಯೂರು ಪ್ರಕಾಶ್
