ಒಬ್ಬ ಪತ್ರಕರ್ತ ಮನಸ್ಸು ಮಾಡಿದರೆ ಇಡೀ ಸಮಾಜವನ್ನೇ ಬದಲಾಯಿಸಬಹುದು ಅಂತಾರೆ. ಆದರೆ ಇಲ್ಲಿ ಒಬ್ಬ ಯೂಟ್ಯೂಬರ್ ಸಮಾಜದಲ್ಲಿ ಸ್ವಾಸ್ಥ್ಯ ಹರಡುವ ಕೆಲಸ ಮಾಡಿದ್ದಾರೆ. ಮೊನ್ನೆ ವಿಕಾಸ್ ಗೌಡರವರ ಯೂಟ್ಯೂಬ್ ವಾಹಿನಿಯಲ್ಲಿ ಹರಿಬಿಟ್ಟ ವಿಡಿಯೋವನ್ನು ವೀಕ್ಷಿಸಿ ನಿಜಕ್ಕೂ ಚಕಿತನಾದೆ. ಅದೆಷ್ಟು ಗುಂಡಿಗೆ ಇದೆ ಈ ಮನುಷ್ಯನಲ್ಲಿ ಎನ್ನಿಸಿತು. ಈ ವಿಡಿಯೋ ಯಾವುದರ ಕುರಿತು ನಿತಿನ್ ಅಂಕೋಲಾ ಅವರು ಬರೆದ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ಆ ದಿನ ಗುಡುಗು ಮಿಂಚಿನಿಂದ ಹೊರಗಡೆ ಜೋರು ಮಳೆ ಸುರಿಯುತ್ತಿತ್ತು. ಗಂಟೆ ಸರಿಯಾಗಿ ರಾತ್ರಿ ಹತ್ತು ಮೂವತ್ತು. ನಿರಂತರವಾಗಿ ಹನ್ನೆರಡು ತಾಸುಗಳ ಕಾಲ 520 ಕಿಲೋ ಮೀಟರ್ ಊರಿನಿಂದ ಪ್ರಯಾಣ ಮಾಡಿ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ ತಲುಪಿದ್ದ ನನಗೆ ಆಯಾಸ ಉಲ್ಭಣಿಸಿ ಜೀವ ಹಿಂಡುತ್ತಿತ್ತು. ಸಾಲದ್ದಕ್ಕೆ ಮೊಬೈಲ್ ಚಾರ್ಜ್ ಬೇರೆ 3% ಮಾತ್ರ.ಅದನ್ನು ನೋಡಿ “ಅಯ್ಯೋ ಯಾವಾಗ ಸ್ವಿಚ್ ಆಫ್ ಆಗಿಬಿಡುತ್ತೋ” ಎಂಬ ಭಯದ ಜೊತೆಗೆ ಅಸಹನೀಯ ಭಾವ. ಎಡಗೈಯಲ್ಲಿ ಮೂರು ಬ್ಯಾಗು, ಬಲಗೈಯಲ್ಲಿ ಎರಡು ಬ್ಯಾಗು, ಒಂದು ದೊಡ್ಡ ಟ್ರಾಲಿ ಜೊತೆಗೆ ಹೆಗಲಿಗೆ ದಾಖಲೆ ಪತ್ರಗಳು ತುಂಬಿದ ಬ್ಯಾಗು. ಇವನ್ನೆಲ್ಲ ಹೊತ್ತುಕೊಂಡು ಜೆಪಿ ನಗರದಲ್ಲಿ ನನ್ನ ಸಹೋದರ ವಾಸವಿದ್ದ ಕೋಣೆಗೆ ತೆರಳಬೇಕಿತ್ತು. ಮನಸ್ಸಿನಲ್ಲಿ ರಾಕಿಂಗ್ ಸ್ಟಾರ್ ಯಶ್ ವೀಕೆಂಡ್ ವಿತ್ ರಮೇಶ್ ನಲ್ಲಿ ಆ ರಾತ್ರಿ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ ಕಹಿ ಅನುಭವಗಳನ್ನು ಬಿಚ್ಚಿಟ್ಟ ಒಂದೊಂದೇ ಮಾತುಗಳು ನೆನಪಾಗಿ ಮನಸ್ಸಿನಲ್ಲಿ ಹಾದು ಹೋಗ್ತಾ ಇತ್ತು. ಯಾವಾಗ ಹೋಗಿ ತಲುಪ್ತಿನಿ?? ಎಂಬ ನಿರಾಶದಾಯಕ ಬೇಗೆ. ಅದು ಹಾಗೇನೇ ತಾಳ್ಮೆ ಇಲ್ಲದೆ ಇರೋ ವ್ಯಕ್ತಿಗಳ ಮನಸ್ಥಿತಿ ಹಾಗೆ ಚಡಪಡಿಸುತ್ತಾನೆ ಇರತ್ತೆ. ನನಗೂ ಕೆಲವೊಂದು ವಿಷಯದಲ್ಲಿ ಸಹನೆ ಇಲ್ಲ. ಆ ವಿಷಯ ಬೇರೆ ಬಿಡಿ. ಆ ಹೊತ್ತಿಗೆ ಎಲ್ಲವನ್ನು ಹೊತ್ತು ಮೆಜೆಸ್ಟಿಕ್ ಸ್ಕಾಯ್ ವಾಕ್ ನಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾರೋ ಓರ್ವ ಮಹಿಳೆ
“ಸರ್ ನನ್ನ ಫೋನ್ ಪೇ ಕ್ಯೂಆರ್ ಕೋಡ್ ಸ್ಕ್ಯಾನರ್ ಸ್ವಲ್ಪ ವರ್ಕ್ ಆಗ್ತಿಲ್ಲ ದಯವಿಟ್ಟು ಮಾತ್ರ ನೋಡಿ” ಎಂದು ವಿನಮ್ರತೆಯಿಂದ ಕೋರಿಕೊಂಡಳು. ನನಗೆ ಇವಳ್ ಯಾರಪ್ಪ ಇಷ್ಟು ಹೊತ್ತಿನಲ್ಲಿ ಇಲ್ಲಿ ನಿಂತುಕೊಂಡಿದ್ದಾಳೆ? ಹೊರಗಡೆ ಬೇರೆ ಜೋರು ಮಳೆ ಸುರಿತಾ ಇದೆ ಇಷ್ಟೊತ್ತಿನಲ್ಲಿ ಫೋನ್ ಪೇ ಸಮಸ್ಯೆ ಆಗಿದೆ ಅಂತ ಅಪರಿಚಿತರನ್ನ ಕೇಳ್ತಾ ಇದ್ದಾಳೆ? ಅದನ್ನು ಕೂತು ಮನೆಯಲ್ಲೇ ಬಗೆಹರಿಸ್ಕೋಬಹುದಲ್ವಾ?? ಈ ಬಗೆಯ ಸಂಶಯಾಸ್ಪದ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹುಟ್ಟಿ ಭಯದಿಂದ ಕೂಡಿದ ಉತ್ಸುಕತೆಗೆ ಎಡೆ ಮಾಡಿಕೊಟ್ಟಿತು. ಒಂದೆಡೆ ಆಯಾಸ, ಇನ್ನೊಂದೆಡೆ ವಿಪರೀತ ಹೊಟ್ಟೆ ಹಸಿವು, ಮತ್ತೊಂದೆಡೆ ಭಾರವಾದ ಲಗೇಜ್ ಗಳು, ಮಗದೊಂದು ಕಡೆ ಜೋರಾಗಿ ಸುರಿತಿರೋ ಮಳೆ, ಅಪರಿಚಿತ ಸ್ಥಳದಲ್ಲಿ ಅಪರಿಚಿತ ಊರಿನಲ್ಲಿ ಏಕಾಂಗಿತನ, ಎಲ್ಲಿ ಬಸ್ ಹತ್ತಿ ಹೋಗಬೇಕು? ಅನ್ನೋದೇ ಗೊತ್ತಿಲ್ಲ.. ಎಲ್ಲಿ ಮೆಟ್ರೋ ನಿಲ್ದಾಣ ಇದೇ ಅನ್ನೋದೇ ಗೊತ್ತಿಲ್ಲ… ಅದರ ಮಧ್ಯದಲ್ಲಿ ಇವಳು ಬೇರೆ…ಈ ಎಲ್ಲಾ ಉದ್ವಿಗ್ನತೆಯ ಮಧ್ಯದಲ್ಲಿ ಆಕೆಯ ಕೋರಿಕೆಯನ್ನು ನಾನು
“ಇಲ್ಲ ಬೇರೆ ಯಾರತ್ರನಾದ್ರೂ ಕೇಳಿ ಹೋಗಿ ” ಎಂದು ಗದರಿ ತಿರಸ್ಕರಿಸಿದೆ. ಆಕೆ ನೋಡೋದಕ್ಕೆ ಪತಿವ್ರತೆಯಂತೆ ಕಾಣೋ ಉನ್ನತ ಶಿಕ್ಷಣ ಪಡೆದ ವಿದ್ಯಾವಂತೆಯ ತರಾನೇ ಇದ್ದಳು. ವಯಸ್ಸು ಅಂದಾಜು 40ರಿಂದ 45ರ ಮಧ್ಯ ಇರಬಹುದು. ಲಕ್ಷಣವಾಗಿ ಸೀರೆ ಉಟ್ಟಿದ್ಲು. ಕೊರಳಲ್ಲಿ ಮಂಗಳಸೂತ್ರ, ಹೆಗಲಿಗೊಂದು ವ್ಯಾನಿಟಿ ಬ್ಯಾಗ್. ತಲೆಗೆ ಹೂ ಮುಡಿದಿದ್ಲು.ಹಣೆಗೆ ಲಕ್ಷಣವಾಗಿ ಕುಂಕುಮದ ಜೊತೆಗೆ ಸಿಂದೂರವಿತ್ತು. ಕಣ್ಣಿಗೆ ಕಾಡಿಗೆ ಹಚ್ಚಿದ್ಲು.

“ಸರ್ ನಾನು ಅರ್ಜೆಂಟಾಗಿ ಮನೆಗೆ ಹೋಗ್ಬೇಕು, ಕೈಯ್ಯಲ್ಲಿ ಬೇರೆ ಹಣ ಇಲ್ಲ, ಫೋನ್ ಪೆ ನಲ್ಲಿ ಕ್ಯಾಶ್ ಇದೆ ಫೋನ್ ಪೇ ವರ್ಕ್ ಆಗ್ತಾ ಇಲ್ಲ”ಎಂದು ಮುಖ ಗಂಟಿಕ್ಕಿ ಭಾವುಕತೆಯ ನೋಟ ಬೀರಿದಳು.
“ಓ ಹೌದಾ ಕೊಡಿ, ನಾನು ನೋಡ್ತೀನಿ “ಎಂದು ಆಕೆಯ ಮೊಬೈಲ್ ಕೇಳಿ ಪಡೆದು ಪರಿಶೀಲಿಸಲು ಪ್ರಾರಂಭಿಸಿದೆ. ನಾನು ಏನು ಸಮಸ್ಯೆ ಆಗಿದೆ ಅಂತ ಗಮನಿಸುತ್ತಿರಬೇಕಾದರೆ “ಏನೋ ನಿನಗೆ ಮದುವೆ ಆಗಿಲ್ವಾ?? ” ಎಂದು ಅಸಂಬದ್ಧ ಪ್ರಶ್ನೆಯನ್ನು ಇಟ್ಟಳು.
” ಇಲ್ಲ” ಎಂದು ತಲೆಯಲ್ಲಾಡಿಸಿದೆ. ಮನಸ್ಸಲ್ಲಿ ಅದೇನೋ ನಿರ್ಲಿಪ್ತ ಭಾವ. ಈಕೆ ಏನೋ ಉಲ್ಟಾ ಹೊಡಿತಿದ್ದಾಳೆ ಅನ್ನೋ ಸಂಶಯ.ಏಕೆಂದರೆ ಆಕೆ ಮೊಬೈಲ್ನಲ್ಲಿ ಫೋನ್ ಪೇ ಸರಿಯಾಗಿಯೇ ಕೆಲಸ ಮಾಡುತ್ತಿತ್ತು.
“ಗರ್ಲ್ ಫ್ರೆಂಡ್ ಇದ್ದಾಳ? ” ಎಂದು ಹೆಗಲ ಮೇಲೆ ಕೈ ಹಾಕಿ ಅದುಮಿದಳು.
” ರೀ ತೆಗಿರಿ ಕೈ.. ನಿಮಗ್ಯಾಕೆ ಬೇಕು ಅವೆಲ್ಲ? ತಗೋಳಿ ನಿಮ್ಮ ಮೊಬೈಲ್ ಸರಿಯಾಗಿ ಇದೆ ” ಎಂದು ಜೋರು ಧ್ವನಿ ಮಾಡಿ ಮೊಬೈಲ್ ಆಕೆಯ ಕೈಗೆ ಕೊಟ್ಟೆ..
“ಏನಿಲ್ಲ ರಾಜಾ.. ತಾಸಿಗೆ ತ್ರೀ ಹಂಡ್ರೆಡ್ ಬರ್ತೀಯಾ ಇಲ್ಲೇ ರೈಲ್ವೆ ಸ್ಟೇಷನ್ ಹಿಂದೆನೇ ರೂಮ್ ” ಎಂದು ಹಲ್ಲು ಕಚ್ಚುತ್ತಾ ತುಂಬಿದ ಮಾದಕತೆಯ ನೋಟ ಬೀರಿದಳು. ಎಲ್ಲಿಂದ ಬಂತು ಕೋಪ ಉಕ್ಕಿ ಬಂತೇನೋ?? ಜೋರಾಗಿ ಬಾಯಿಗೆ ಬಂದಂತೆ ಬೈಯ್ಯಲಾರಂಭಿಸಿದೆ. ಇದಕ್ಕೆ ಅಧಿಕವಾಗಿ ಕಾಲಲ್ಲಿರುವ ಚಪ್ಪಲಿ ಕೂಡ ಕೈಗೆ ಬಂದುಬಿಡ್ತು. ನನ್ನ ರೌದ್ರಾವತಾರ ನೋಡಿ ಹೆದರಿಕೆಯಿಂದ ಆಕೆ ಅಭಿಮುಖವಾಗಿ ವಿರುದ್ಧ ದಿಕ್ಕಿನಿಂದ ಪಟ ಪಟನೆ ಹೆಜ್ಜೆ ಹಾಕಲಾರಂಭಿಸಿದಳು.
“ಥೂ… ಕಚಡಾಗಳು ದುಡುಕೊಂಡ್ ತಿನ್ನಕ್ ಆಗಲ್ಲ. ಇಲ್ಲಿ ಹಲ್ ಕಟ್ ಕೆಲಸ ಮಾಡ್ತಾರೆ” ಮತ್ತೊಮ್ಮೆ ಜೋರಾಗಿ ಗದರಿದೆ. ನನ್ನ ಅಟ್ಟಹಾಸ ನೋಡಿ ಆಕೆ ಹಿಂದಿನಿಂದ ದಿಟ್ಟಿಸುತ್ತ ಅದೇ ದಿಕ್ಕಿನಲ್ಲಿ ನಡೆದು ಮರೆಯಾದಳು.
ನನಗೆ ಇತ್ತ ಕಡೆ ಫೋನ್ ಕರೆ ಬಂತು. ಯಾರದ್ದೆಂದು ತೆರೆದು ನೋಡಿದಾಗ ನನ್ನ ಅಣ್ಣ ಕರೆ ಮಾಡಿದ್ದ “ಏಯ್ ಇಷ್ಟು ಹೊತ್ತ ಬರೋಕೆ? ಅಲ್ಲೇನ್ ಮಾಡ್ತಾ ಇದ್ದೀಯಾ? ಓಲಾ ಬುಕ್ ಮಾಡಿ ಪಟ್ಟಂತ ಬಂದ್ಬಿಡು, ಎಷ್ಟೇ ದುಡ್ಡು ಖರ್ಚಾಗ್ಲಿ? ಅಪ್ಪಿ ತಪ್ಪಿ ಮೆಜೆಸ್ಟಿಕ್ ನಲ್ಲಿ ಇಳಿಬೇಡ ಮಾರಾಯ. ಅಲ್ಲಿ ಮಂಗಳಮುಖಿಯರು ಮೊಬೈಲ್ ಕಿತ್ಕೋತಾರೆ, ಸೆಕ್ಶುವಲಿ ಹರಾಜ್ ಮೆಂಟ್ ಮಾಡ್ತಾರೆ”
“ಅಣ್ಣ ನಾನು ಮೆಜೆಸ್ಟಿಕ್ ನಲ್ಲೆ ಇದ್ದೇನೆ ಈಗ ಬರ್ತೀನಿ”
“ಅಯ್ಯೋ ಮಾರಾಯ! ಅಲ್ಲಿ ಯಾಕೋ ಇಷ್ಟೊತ್ತಿಗೆ ಇಳಿದುಕೊಂಡೆ?? ಯಶವಂತಪುರದಲ್ಲಿ ಇಳಿಬಹುದಿತ್ತು ನೀನು. ನೈಟ್ ಟೈಮ್ ಮೆಜೆಸ್ಟಿಕ್ ಸೇಫ್ ಅಲ್ವೋ… ಬೇಗ ಬಂದು ಬಿಡು” ಎಂದು ಗಂಟಲು ಗಂಟಿಕ್ಕಿ ನಿರ್ಣಾಯಕವಾಗಿ ಹೇಳಿ ಕರೆ ಕಡಿತಗೊಳಿಸಿದ.
ಮೊಬೈಲ್ ಚಾರ್ಜ್ ಬೇರೆ ಒಂದು ಪರ್ಸೆಂಟ್ ಗೆ ಬಂದು ನಿಂತಿತ್ತು. ಒತ್ತಡ ಜಾಸ್ತಿಯಾಯಿತು. ದೇವರನ್ನ ನೆನೆದು ಓಲಾ ಕ್ಯಾಬ್ ಬುಕ್ ಮಾಡಿದೆ. ಹಣೆಬರಹ ಚೆನ್ನಾಗಿತ್ತು. ಫೋನ್ ಕರೆ ಮಾಡಿ ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣದ ಮುಖ್ಯ ದ್ವಾರದ ಮುಂದೆ ನಿಂತಿರಿ ಎಂದ ಆಟೋರಿಕ್ಷಾ ಚಾಲಕ, ಎರಡೇ ಎರಡು ನಿಮಿಷಗಳಲ್ಲಿ ನಾನಿದ್ದಲ್ಲಿ ಬಂದು ತಲುಪಿದ್ದ. ಓಟಿಪಿ ಹೇಳಿದ ಒಂದೇ ನಿಮಿಷಕ್ಕೆ ಮೊಬೈಲ್ ಸ್ವಿಚ್ ಆಫ್ ಆಗಿಬಿಡ್ತು. ಈಜಿಕೊಂಡು ದಡ ಸೇರಿದನೆಂಬ ಭಾವದಿಂದ ನೆಮ್ಮದಿ ಮನಸಲ್ಲಿ ಮನೆ ಮಾಡಿತು. ಕೊಳಕು ಕೊಂಡಿಯಿಂದ ಹೊರಬಂದನಲ್ಲ ಎಂದು ತೃಪ್ತಿಯಾಯಿತು. ಅಂತಿಮವಾಗಿ 11:20ಕ್ಕೆ ಮನೆ ಸೇರಿಕೊಂಡಿದ್ದೆ. ಏಕೆಂದರೆ ಈ ಅನುಭವ ನನಗೆ ಹೊಸದು. ಬೆಂಗಳೂರಿಗೆ ಈ ಮೊದಲೇ ಹತ್ತಕ್ಕೂ ಅಧಿಕ ಬಾರಿ ಬಂದಿದ್ದರೂ ಇಂತಹ ಅಸಹ್ಯ ಅನುಭವ ನೆನಸಿಕೊಂಡಾಗ ಹೇಯವಾಗಿ ಮನಸ್ಸಿಗೆ ಮಂಕು ಕವಿಯುತಿತ್ತು. ಏಕೆ ಈ ವಿಷಯ ಹೇಳ್ತಾ ಇದೀನಿ ಅಂತ ಅಂದ್ರೆ? ಈ ಘಟನೆ ನನ್ನ ಜೀವನದಲ್ಲಿ ಮಾತ್ರ ಅಲ್ಲ? ನನ್ನಂತಹ ಸಾವಿರಾರು ವ್ಯಕ್ತಿಗಳ ಬದುಕಿನಲ್ಲಿ ನಡೆದಿದೆ. ಕೆಲವರು ಹೇಳ್ಕೋತಾರೆ. ಇನ್ನು ಕೆಲವರು ಮರ್ಯಾದೆ ವಿಷಯ ಅಂತ ಸುಮ್ನಾಗ್ತಾರೆ..
ಅದೆಷ್ಟೋ ಅಮಾಯಕರು ಈ ವೇಶ್ಯೆ ದಲ್ಲಾಳಿಗಳ ಆಮಿಷಕ್ಕೆ ಬಲಿಯಾಗಿದ್ದಾರೆ. ಅದರಲ್ಲಿ ಯುವ ತಲೆಮಾರಿನವರೇ ಜಾಸ್ತಿ. ಬೆಳಿಗ್ಗೆ 10:00 ದಾಟಿದ್ರೆ ಸಾಕು ಅಲ್ಲಿ ನಿಂತಂತಹ ಸಾರ್ವಜನಿಕರಿಗೆ ತಾವಾಗಿಯೇ ಯಾವುದೋ ವಿಷಯಕ್ಕೆ ಮಾತನಾಡಿಸಿ ಕೊನೆಗೆ ಮಂಚದ ಆಸೆ ತೋರಿಸಿ ಚೌಕಾಸಿ ಮಾಡೋದು, ಇವರ ದಿನ ನಿತ್ಯದ ಕಸುಬು. ಅಷ್ಟಕ್ಕೂ ಕೈಲಾಗದೆ ಇರೋ ಅಂಗವಿಕಲರು ಈ ಮಹಾನಗರಿಯಲ್ಲಿ ಝೋಮ್ಯಾಟೋ, ಸ್ವಿಗ್ಗಿ ಡೆಲಿವರಿ ಮಾಡ್ಕೊಂಡು ಜೀವನ ನಡೆಸುತ್ತಿದ್ದಾರೆ. ಅಡಿಯಿಂದ ಮುಡಿವರೆಗೂ ಎಲ್ಲಾ ನೆಟ್ಟಗಿರೋ ಇವರು ಯಾಕೆ ಈ ತರ?? ಸೆಕ್ಸ್ ಅನ್ನೋದು ಶುದ್ಧ ನಾಗರೀಕರ ಜೀವನದಲ್ಲಿ ಒಂದು ಭಾಗವಷ್ಟೇ. It is one of the part of life ಅಷ್ಟೇನೆ.
ಬದುಕೋದಕೋಸ್ಕರ ಒಳ್ಳೆಯ ದಾರಿಯನ್ನೇ ಕಂಡುಕೊಂಡಿರುತ್ತಾರೆ. ಆದರೆ ಇವರುಗಳು ಬದುಕೋಕ್ಕೋಸ್ಕರ ಸೆಕ್ಸ್ ದಂಧೆಯನ್ನು ತಮ್ಮದಾಗಿಸಿಕೊಂಡು ತಮ್ಮ ಜೀವನ ಊರು ಬಾಗಿಲು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾರ್ವಜನಿಕರ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಅಷ್ಟಕ್ಕೂ ಅಷ್ಟು ಧೈರ್ಯವಾಗಿ ಎಲ್ಲರ ಮುಂದೆ ನಿಸ್ಸಂದೇಹವಾಗಿ ಕೇಳುವ ಇವರಿಗೆ ಯಾವ ಮಟ್ಟದ ಧೈರ್ಯ ಅಂತ? ಇವರ ಹಿನ್ನೆಲೆ ಅಷ್ಟೊಂದು ಬಲವಾಗಿದೆಯಾ? ದಶಕಗಳಿಂದ ಈ ಕೆಲಸ ಮಾಡಿಕೊಂಡು ಬರ್ತಾ ಇದ್ದಾರೆ ಅಲ್ಲ?? ಏಕೆ ಸರ್ಕಾರ ಇವರ ಮೇಲೆ ಕ್ರಮ ಇನ್ನೂ ತನಕ ಕಠಿಣ ಕ್ರಮ ಕೈಗೊಂಡಿಲ್ಲ?? ರಾತ್ರಿಯಾಗುತ್ತಲೇ ಮಂಗಳಮುಖಿಯರು ನಡೆಸುವಂತಹ ದೌರ್ಜನ್ಯದ ಒಂದೊಂದು ಕಥೆ ಕೇಳಿದರೆ?ಅಯ್ಯಯೋ! ಇವರ ದೌರ್ಜನ್ಯದಿಂದ ತತ್ತರಿಸಿ ಹೋದ ಕೆಲವರ ಬದುಕಿಗೆ ಮರೆಯದಂತಹ ಕಪ್ಪುಚುಕ್ಕೆಗಳಾಗಿ ಬಿಟ್ಟಿವೆ. ಕೆಲವೊಂದು ಅಸಹ್ಯ ಸತ್ಯಕಥೆಗಳು ರವಿ ಬೆಳಗೆರೆಯವರ ಕ್ರೈಮ್ ಡೈರಿಯಲ್ಲಿ ಕೇಳಿದ್ದು ಇನ್ನು ಜ್ಞಾಪಕ ಇದೆ.

ಎಳೆ ಯುವಕರ ಮಾರ್ಮಾಂಗಕ್ಕೆ ಕೈ ಹಾಕೋದು. ಅವರ ಮೊಬೈಲ್ ಕಿತ್ಕೊಳ್ಳೋದು. ಅವರ ಬ್ಯಾಗ್ ದೋಚೋದು. ಚಾಕು ತೋರಿಸಿ ಕೊಲೆ ಮಾಡ್ಬಿಡ್ತೀನಿ ನಾನಿದ್ದಲ್ಲಿ ಬಾ ಅಂತ ಬೆದರಿಕೆ ಹಾಕೋದು. ಅಬ್ಬಬ್ಬಾ! ಇಷ್ಟೊಂದು ಧೈರ್ಯ ಇವರಿಗೆ ಹೇಗೆ?? ಈ ತರ ವಾತಾವರಣ ಇದ್ದಾಗ ಏನು ಅರಿಯದ ದೂರದ ಊರುಗಳಿಂದ ದೂರದ ರಾಜ್ಯಗಳಿಂದ ಬರುವ ಅಮಾಯಕರ ಗತಿ ಏನು ಹಾಗಾದ್ರೆ?? ಬೆಂಗಳೂರಿನಲ್ಲಿ ನೆಲೆಸಿರೋರಿಗೆ ಇವರ ಪಾಪಿ ಕೃತ್ಯ ಪುರಾಣ ಎಲ್ಲವೂ ತುಂಬಾ ಚೆನ್ನಾಗಿ ತಿಳಿದಿರುತ್ತದೆ. ಅವರೊಡನೆ ಹೇಗೆ ವರ್ತಿಸಬೇಕು? ಮೆಜೆಸ್ಟಿಕ್ ಗೆ ಬಂದ್ರೆ ಎಲ್ಲಿಗೆ ಹೋಗಬೇಕು? ಎಲ್ಲಿಗೆ ಹೋಗಬಾರದು ಅನ್ನೋದು ಅವರಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಆದರೆ ಪ್ರೀತಿಯ ಕುಟುಂಬವನ್ನು ಬಿಟ್ಟು ಪ್ರೀತಿಯ ಹುಟ್ಟೂರನ್ನು ಬಿಟ್ಟು ಜೀವನ ಕಟ್ಕೊಬೇಕು ಅಂತ ಬರೋ ಜನರ ಗತಿ ಏನು ಹಾಗಿದ್ದರೆ?? ಈ ಲಜ್ಜೆಗೆಟ್ಟವರ ಕಪಿಮುಷ್ಟಿಗೆ ಸಿಕ್ಕಿಹಾಕಿಕೊಳ್ಳೋದಕ್ಕ??ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಬೆಂಗಳೂರಿನಲ್ಲಿ ಜೀವನ ಮಾಡೋಕೆ ಬರುವವರ ಬುದ್ಧಿಮಟ್ಟ ಒಂದೇ ರೀತಿಯಾಗಿ ಇರೋದಿಲ್ಲ. ಕೆಲವರು ಧೈರ್ಯವಂತರು, ಕೆಲವರು ಸೂಕ್ಷ್ಮಜೀವಿಗಳು, ಕೆಲವರು ರಣಹೇಡಿಗಳು, ಕೆಲವರು ಭಯಪೀಡಿತರು. ಅಲ್ಲಾ ಅಷ್ಟಕ್ಕೂ ಇವರಿಗೆ ಒಳಗಿಂದ ಒಳಗೇನೇ ದೊಡ್ಡ ದೊಡ್ಡ ಕೈ ಸಂಪರ್ಕ ಇದೆನಾ?? ಕೆಲವರು ಬದುಕದೊಕ್ಕೋಸ್ಕರ ದಿನದ 15 ಗಂಟೆಯೂ ದುಡಿಯುತ್ತಾರೆ.
ಬಿಹಾರದಿಂದ ಉತ್ತರ ಪ್ರದೇಶದಿಂದ ಮಧ್ಯಪ್ರದೇಶದಿಂದ ಗುಜರಾತ್ ನಿಂದ ಕೇರಳದಿಂದ ತಮಿಳುನಾಡಿನಿಂದ ಮಹಾರಾಷ್ಟ್ರದಿಂದ…ಇತ್ಯಾದಿ ಅಷ್ಟೇ ಏಕೆ?? ಕರ್ನಾಟಕದ ದೂರದ ಹಳ್ಳಿಯ ಮೂಲೆ ಮೂಲೆಗಳಿಂದ ಬರುವ ಅಸಹಾಯಕರು ಈ ಮಾಯಾನಗರಿಗೆ ಬಂದು ಈ ಮೆಜೆಸ್ಟಿಕ್ ನಲ್ಲಿ ಇಳಿದು ಲಗೇಜ್ ಸಮೇತ ಈ ಸ್ಕಾಯ್ ವಾಕ್ ನಲ್ಲಿ ನಡೆದುಕೊಂಡು ಬಂದರೆ ಅಂಗಿಯ ಕೊರಳು ಪಟ್ಟಿ ಹಿಡಿದು ಪ್ರಶ್ನಿಸೋದು?ಅಷ್ಟಕ್ಕೂ ಕಾನೂನು ಯಾಕೆ ಕೈ ಕಟ್ಟಿ ಕೂತಿದೆ? ಇವರ ಈ ಮಾನಸಿಕ ಕಿರುಕುಳ ದಿನದಿಂದ ದಿನಕ್ಕೆ ಅತಿರೇಕವಾಗಿತ್ತು. ಇವರಿಗೆ ನೇರ ನಿಷ್ಠುರವಾಗಿ ಪ್ರಶ್ನಿಸುವ ಧೈರ್ಯ ಯಾರಿಗೂ ಇರ್ಲಿಲ್ವಾ? ಅಥವಾ ಪ್ರಶ್ನಿಸೋಕೆ ಹೋದರೆ ನಾವೇ ಯಮನ ಪಾದ ಸೇರಿಕೊಳ್ಳುತ್ತೇವೆ ಎಂಬ ಭಯವಿತ್ತಾ? ನನಗಂತೂ ಗೊತ್ತಿಲ್ಲ ಆದರೆ ಒಂದಂತೂ ನಿಜ.
ಒಬ್ಬ ಪತ್ರಕರ್ತ ಮನಸ್ಸು ಮಾಡಿದರೆ ಇಡೀ ಸಮಾಜವನ್ನೇ ಬದಲಾಯಿಸಬಹುದು ಅಂತಾರೆ. ಆದರೆ ಇಲ್ಲಿ ಒಬ್ಬ ಯೂಟ್ಯೂಬರ್ ಸಮಾಜದಲ್ಲಿ ಸ್ವಾಸ್ಥ್ಯ ಹರಡುವ ಕೆಲಸ ಮಾಡಿದ್ದಾರೆ. ಅಷ್ಟಕ್ಕೂ ಈ ಕೆಲಸ ಮಾಡಬೇಕಾದಂತಹ ವ್ಯಕ್ತಿಗಳೇ ಕೈ ಕೊಟ್ಕೊಂಡು ಸುಮ್ನೆ ಕೂತಿದ್ದಾರೆ. ಈ ಸಮಾಜಕ್ಕೆ ಅಂಟಿಕೊಂಡಿರುವ ಕ್ಯಾನ್ಸರ್ ಗಳನ್ನ ಕಿತ್ತು ಹಾಕೋದಕ್ಕೆ ಎದೆಯುಬ್ಬಿಸಿ ನಿಂತಿದ್ದು ಎಂತವರಿಗೂ ಹೋರಾಟದ ಕಿಚ್ಚು ಮೂಡಿಸುತ್ತದೆ. ಮೊನ್ನೆ ವಿಕಾಸ್ ಗೌಡರವರ ಯೂಟ್ಯೂಬ್ ವಾಹಿನಿಯಲ್ಲಿ ಹರಿಬಿಟ್ಟ ವಿಡಿಯೋವನ್ನು ವೀಕ್ಷಿಸಿ ನಿಜಕ್ಕೂ ಚಕಿತನಾದೆ. ಅದೆಷ್ಟು ಗುಂಡಿಗೆ ಇದೆ ಈ ಮನುಷ್ಯನಲ್ಲಿ?? hats off you brother ನಿಮ್ಮ ಧೈರ್ಯಕ್ಕೆ ತಲೆಬಾಗಲೇಬೇಕು.ಇವರ ಈ ಅತಿರೇಕದ ವರ್ತನೆ ದಿನದಿಂದ ದಿನಕ್ಕೆ ಉತ್ತುಂಗಕೇರುತ್ತಿದ್ದರು ಈ ತಲೆಹಿಡುಕ ಕೆಲಸ ಮಾಡುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದರೂ ಯಾವ ಒಬ್ಬ ವ್ಯಕ್ತಿಯು ನೇರ ನಿಷ್ಠುರವಾಗಿ ಪ್ರಶ್ನಿಸಿರಲಿಲ್ಲ. ನಮಗೇಕೆ ಬೇಕು ಊರಿನ ಉಸಾಬರಿ?? ಹಾದಿ ಮೇಲೆ ಹೋಗೋ ಜಗಳ ಎದೆ ಮೇಲೆ ತಗೊಳಕ್ಕಾಗತ್ತಾ ಎಂದು ಮೂದಲಿಸುವವರೆ ಜಾಸ್ತಿ.ಈ ಒಂದು ವಿಡಿಯೋದಿಂದ ವಿಕಾಸ್ ಗೌಡರ ಮೇಲೆ ಗೌರವ ನೂರ್ಮಡಿಯಾಯಿತು.ನಾನು ಇವರ ಕಾಯಂ ವೀಕ್ಷಕ.ಒಂದುವರೆ ವರ್ಷದಿಂದ ಇವರ ವಾಹಿನಿಗೆ ಚಂದಾದಾರನಾಗಿದ್ದೇನೆ.ಈ ವಿಕಾಸ್ ಕ್ಯಾಮೆರಾ ಹಿಡಿದುಕೊಂಡು ಮೆಜೆಸ್ಟಿಕ್ ನ ಸ್ಕಾಯ್ ವಾಕ್ ನಲ್ಲಿ ನಿಂತುಕೊಂಡಿದ್ದ ಈ ಮೂರುಬಿಟ್ಟ ಕಿಡಿಗೇಡಿಗಳಿಗೆ ಅತ್ಯಂತ ಧೈರ್ಯದಿಂದಲೇ “ಯಾಕೆ ಈ ತರ ಜನರಿಗೆ ತೊಂದರೆ ಕೊಡ್ತೀರಾ? ಬದುಕೋದಕ್ಕೆ ಇದು ಒಂದೇ ದಾರಿನಾ ನಿಮಗೆ ಇರೋದು” ಎಂದು ಮೊದಲಾದ ಪ್ರಶ್ನೆಯನ್ನು ಕೇಳಲಾರಂಬಿಸಿದರು.ಅದಕ್ಕೂ ಸಹ ಕೆಲವರ ಪ್ರತ್ಯುತ್ತರ ಧಿಮಾಕಿನ ಲಹರಿಯಿಂದಲೇ ಕೂಡಿತ್ತು.ದೇಹವನ್ನೇ ಮಾರಿಕೊಂಡು ಸಾರ್ವಜನಿಕ ಶೌಚಾಲಯಗಳಾದ ಇವರುಗಳು ಇನ್ನೇನು ಮಾತನಾಡುತ್ತಾರೆ ಹೇಳಿ?ಅವರ ಮಾತು ಅವರ ನಡವಳಿಕೆ ಅವಿವೇಕದಂದಲೇ ಕೂಡಿರುತ್ತದೆ.ವಿಕಾಸ್ ಗೌಡ ಅವರು ಕ್ಯಾಮೆರಾ ಹಿಡ್ಕೊಂಡು ಧೈರ್ಯಶಾಲಿಯಾಗಿ ಪ್ರಶ್ನೆ ಮಾಡಲು ಶುರು ಮಾಡಿದಾಗ ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರು ಇವರ ಜೊತೆಗೆ ಒಂದಾದರು.
ಒಗ್ಗಟ್ಟಿನಿಂದ ಸಾರ್ವಜನಿಕರೆಲ್ಲರೂ ಸೇರಿ ಪ್ರಶ್ನೆ ಕೇಳೋಕೆ ಶುರು ಮಾಡಿದಾಗ ಕ್ಯಾಮರಾದಲ್ಲಿ ಎಲ್ಲಿ ತಮ್ಮ ಮುಖ ಚಿತ್ರೀಕರಣ ಆಗುತ್ತದೊ ಎಂಬ ಭಯದಲ್ಲಿ ಮುಖವನ್ನು ಸೀರೆಯ ಸೆರಗಿನಿಂದ ಮರೆಮಾಚಿಕೊಂಡು ಹಾಗು ಇನ್ನೂ ಕೆಲವರು ತಮ್ಮ ವ್ಯಾನಿಟಿ ಬ್ಯಾಗ್ ನಿಂದ ಮರೆಮಾಚಿಕೊಂಡು ಆ ಸ್ಥಳದಿಂದ ಕ್ಷಣಾರ್ಧದಲ್ಲಿ ಪಲಾಯನ ಗೈದರು.ಅಷ್ಟಕ್ಕೂ ಆ ಜಾಗದ ಪರಿಧಿಯೊಳಗೆ ಒಂದು ಸಿಸಿ ಕ್ಯಾಮೆರಾ ಕೂಡ ಇಲ್ಲ?? ಸರ್ಕಾರ ಖಡಕ್ ನಿಯಮಾವಳಿ ಇವರುಗಳ ವಿಷಯದಲ್ಲಿ ಜಾರಿಗೆ ತಂದರೆ ನೆಮ್ಮದಿಯಾಗಿ ಸಾರ್ವಜನಿಕರು ಓಡಾಡಬಹುದು.
ಈ ಮೆಜೆಸ್ಟಿಕ್ ರಾಜಧಾನಿಯ ಹೃದಯ ಭಾಗ. ಬೆಂಗಳೂರಿನ ಯಾವುದೇ ಸ್ಥಳಕ್ಕೆ ತೆರಳಬೇಕೆಂದರೆ ಇಲ್ಲಿ ಬಸ್ ಸೌಲಭ್ಯವಿದೆ. ಆದರೆ ಸಂಜೆ ಏಳು ಗಂಟೆ ಕಳೆದ ನಂತರ ಕರಾಳ ಜಗತ್ತಾಗಿ ಬದಲಾಗತ್ತೆ. ಇದಕ್ಕೆ ಕೊನೆ ಯಾವಾಗ? ದಶಕಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಈ ವಿಷಯ ಸರ್ವೇ ಸಾಮಾನ್ಯವಾಗಿ ತಿಳಿದಿದೆ. ಬೆಂಗಳೂರಿಗೆ ಬದುಕನ್ನು ಕಟ್ಟಿಕೊಳ್ಳಲು ದೂರದ ಊರಿನಿಂದ ಬರುವ ಜನರಿಗೆ ಬೆಂಗಳೂರಿನ ಪೂರ್ವಾಪರವೆ ತಿಳಿದಿರುವುದಿಲ್ಲ. ಗಾಳಿಮಾತನ್ನು ಕೇಳಿದ ಸೂಕ್ಷ್ಮಮತಿಗಳಿಗಂತೂ ಆ ಜಾಗಕ್ಕೆ ಕಾಲಿಡೋದಕ್ಕೆ ಹೇಳತೀರದ ಅಂಜಿಕೆ.ಹೀಗಿದ್ದಾಗ ನಾಳೆ ದಿವಸಕ್ಕೆ ನಗರಕ್ಕೆ ಬರುವ ಅಪರಿಚಿತರಿಗೆ ಜೀವಭಯ ಎದುರಾದರೆ ಅದಕ್ಕೆ ಹೊಣೆ ಯಾರು?
- ನಿತಿನ್ ಅಂಕೋಲಾ
