ಭಾರತೀಯರ ಮನೆ-ಮನಗಳಿಗೆ ಕ್ರಿಕೆಟ್ ಗೀಳು ಹತ್ತಿಸಿದ ಆ ಒಂದು ಕ್ರಿಕೆಟ್ ಪಂದ್ಯ. ಆಗಷ್ಟೇ ಏಕದಿನ ಪಂದ್ಯಗಳಲ್ಲಿ ಅಂಬೆಗಾಲಿಡುತ್ತಿರುವ ಮತ್ತು ಟೆಸ್ಟ್ ಮ್ಯಾಚ್ ಗುಂಗಿನ ಆಮೆ ಸಂತತಿಯ ತಂಡವನ್ನು ಸ್ಟಾರ್ ಮಾಡಿದ ಮತ್ತು ಜಯದ ರೋಮಾಂಚನ ಜಗವಿಡೀ ಪಸರಿಸಿದ ಕಪಿಲ್ ನಿಜಕ್ಕೂ ಸೂಪರ್ ಸ್ಟಾರ್. ಮುಂದೆ ಓದಿ ಮುಷ್ತಾಕ್ ಹೆನ್ನಾಬೈಲ್ ಅವರ ಲೇಖನಿಯಲ್ಲಿ 1983 ರ ವಿಶ್ವಕಪ್…
1983 ರ ವಿಶ್ವಕಪ್ ನ ಇಂಗ್ಲೆಂಡಿನ ಟ್ರೆಂಟ್ ಬ್ರಿಜ್ ವೆಲ್ ನಲ್ಲಿ ನಡೆದ ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ, ಅದೆಲ್ಲಿಂದ ಬಂದರೋ ಆ ತಂಡದ ಕೆವಿನ್ ಕುರ್ರನ್ ಮತ್ತು ಪೀಟರ್ ರಾಸನ್ ಎಂಬ ಬೌಲರ್ ಗಳು, ನೋಡನೋಡುತ್ತಿದ್ದಂತೆಯೇ ಭಾರತೀಯ ತಂಡದ ತಲೆಯನ್ನೇ ಹಾರಿಸಿಬಿಟ್ಟಿದ್ದರು.
ವಾರಗಟ್ಟಲೆ, ನಿಂತ ಗಾರ್ಡ್ ಮೇಲೆ ಕದಲದೆ, ಪ್ರೇಕ್ಷಕರು ಅದೇನೇ ಗೇಲಿ-ವ್ಯಂಗ್ಯ ಮಾಡಿದರೂ, ತನಗಲ್ಲ ಅದು ಅಂಪಾಯರ್ ಗೆ ಎಂಬಂತೆ ನಿರ್ಲಿಪ್ತನಾಗಿ ಆಡುವ ಗವಾಸ್ಕರ್ ಮತ್ತು ಆತುರಗೆಟ್ಟ ಆಂಜನೇಯನ ಪ್ರತಿರೂಪ ಕೆ. ಶ್ರೀಕಾಂತ್ ಅನುಕ್ರಮವಾಗಿ ಶೂನ್ಯ ಸುತ್ತಿ ಪೆವಿಲಿಯನ್ ನಲ್ಲಿ ನಾಯಕ ಕಪಿಲ್ ದೇವ್ ಕಣ್ಣು ತಪ್ಪಿಸಿಕೊಂಡು ತಲೆತಗ್ಗಿಸಿ ಕೂತಿದ್ದರು. ಕಪಿಲ್ ಇವರನ್ನು ದುರುಗುಟ್ಟಿ ನೋಡುತ್ತಿರುವಾಗಲೇ, ಮೊಹಿಂದರ್ ಅಮರನಾಥ್ ಮತ್ತು ಸಂದೀಪ್ ಪಾಟೀಲ್ ಒಂದಂಕಿ ಲಾಟರಿ ನಂಬರ್ ಸ್ಕೋರ್ ಬೋರ್ಡ್ ಮೇಲೆ ಮೂಡಿಸಿ,ಆರಂಭಿಕ ಶೂನ್ಯವೀರರ ಬೆನ್ನ ಹಿಂದೆ ಬಂದು ಕೂತರು. ಏನಾಗುತ್ತಿದೆ ಎಂದು ಎಲ್ಲರೂ ಗರಬಡಿದವರಂತೆ ಗೊಡೆಗೊರಗಿ ನಿಂತಿರುವಾಗ, ಆಗಷ್ಟೇ ಹೋದ ಯಶಪಾಲ್ ಶರ್ಮ ಕೂಡ ಹೋಗಿಯೇ ಇಲ್ಲ ಎಂಬಂತೆ ಶೂನ್ಯದೊಂದಿಗೆ ಮೌನವಾಗಿ ಬಂದು ಮೂಲೆ ಸೇರಿದ. ಅಲ್ಲಿಗೆ 17 ರನ್ನಿಗೆ ಭಾರತದ 5 ವಿಕೆಟ್ ಪತನ..ನಾಯಕ ಕಪಿಲ್ ದೇವ್ ಖಡಕ್ ಪೋಲಿಸ್ ಅಧಿಕಾರಿಯ ಸ್ಟೈಲಿನ ವ್ಯಕ್ತಿ..”ಏ ಕ್ಯಾ ಕರ್ ರಹೇ ಹೋ,ಕುಛ್ ತೋ ಸೋಚೋ” ಎಂದು ಒಮ್ಮೆಗೆ ಅಬ್ಬರಿಸಿ, ಹೆಲ್ಮೆಟ್ ಎಳೆದುಕೊಂಡು, ಸಿಟ್ಟಿನೊಂದಿಗೆ ವೇಗವಾಗಿ ಹೆಜ್ಜೆ ಹಾಕುತ್ತಾ ಪಿಚ್ ಹತ್ತಿರ ತಲುಪಿದ..ಪಿಚ್ ನ ಬಳಿ, ಇಂಗ್ಲೆಂಡಿನ ಮುಂಜಾವಿನ ವಿಪರೀತ ಚಳಿ ಮತ್ತು ಕಣ್ಣೆದುರಿನ ಭಯಾನಕ ಪೆವಿಲಿಯನ್ ಪೆರೇಡ್ ನೋಡಿ ನಡುಗುತ್ತಾ, ಹತಾಶೆಯಿಂದ ಏಕಾಂಗಿಯಾಗಿ ನಿಂತಿದ್ದ ಭಾರತದ ಬೌಲರ್ ಬಿಳಿಯ ರೋಜರ್ ಬಿನ್ನಿ, ತನ್ನ ಬ್ರಿಟಿಷ್ ಉಚ್ಚಾರದಲ್ಲಿ ಏನೇನೋ ಬಡಬಡಿಸುತ್ತಿದ್ದ. ಒಂದಕ್ಷರ ಹಿಂದಿ ಬಾರದ ಬಿನ್ನಿಗೆ ಸುಮ್ಮನೆ ಸ್ವಲ್ಪ ಹೊತ್ತು ತಾಳ್ಮೆಯಿಂದ ನಿಲ್ಲುವಂತೆ ಅರೆಬರೆ ಇಂಗ್ಲೀಷಿನಲ್ಲಿ ಕಪಿಲ್ ಸೂಚಿಸಿದ. ಬಾಲಂಗೋಚಿಗಳಾದ ಬಿನ್ನಿ, ಮದನ್ ಲಾಲ್ , ಸಯ್ಯದ್ ಕಿರ್ಮಾನಿ ಜೊತೆಗೂಡಿ 175 ರನ್ ಭಾರಿಸಿ ಕಪಿಲ್ ದೇವ್ ಆ ಪಂದ್ಯವನ್ನು ಅದು ಹೇಗೋ ಗೆಲ್ಲುವಂತೆ ಮಾಡಿಬಿಟ್ಟ. ಆಮೇಲೆ ಕೆಲ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ದಾಟಿ ಫೈನಲ್ ನ ಲಾರ್ಡ್ಸ್ ನ ರಣಕಣಕ್ಕೆ ಲಗ್ಗೆಯಿಟ್ಟಿತು ಭಾರತೀಯ ತಂಡ..

ಫೋಟೋ ಕೃಪೆ : NDTV news (ರೋಜರ್ ಬಿನ್ನಿ)
ಭಾರತೀಯ ಕ್ರಿಕೆಟ್ ಪ್ರೇಮಿಗಳು ಯಾವ ಕಾಲಕ್ಕೂ ಮರೆಯಲಾರದ ಮಹಾ ಪಂದ್ಯವದು. ಪ್ರತ್ಯಕ್ಷ ನೋಡಿದವರು, ವೀಕ್ಷಕ ವಿವರಣೆ ಕೇಳಿದವರು ಮಾತ್ರವಲ್ಲ. ಆ ಪಂದ್ಯ ನಡೆಯುವ ಕಾಲಮಾನವು ತಮ್ಮ ಬದುಕಿನ ಕಾಲಮಾನವೆನ್ನುವುದೂ ಕ್ರಿಕೆಟ್ ಪ್ರೀಯರಿಗೆಲ್ಲ ಹೆಮ್ಮೆಯ ವಿಚಾರವಾಗಬಲ್ಲಷ್ಟು ಸ್ಮರಣೀಯ ಆ ಐತಿಹಾಸಿಕ ಫೈನಲ್ ಪಂದ್ಯ. ಪಂದ್ಯ ಆರಂಭವಾಗುವ ಒಂದು ಗಂಟೆಯ ಮುಂಚೆ ಲಾರ್ಡ್ಸ್ ಪೆವಿಲಿಯನ್ ನಲ್ಲಿ ನಾಯಕ ಕಪಿಲ್ ದೇವ್ ಅದೇನೇನೋ ಲೆಕ್ಕಾಚಾರ ಹಾಕುತ್ತಾ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿದ್ದ.
ಪೆವಿಲಿಯನ್ ನ ಇನ್ನೊಂದು ಪಾರ್ಶ್ವದಲ್ಲಿದ್ದ ವಿಂಡೀಸ್ ಪೆವಿಲಿಯನ್ ನಲ್ಲಿ, ಡೆಸ್ಮಂಡ್ ಹೇಯ್ನ್ಸ್,ಗಾರ್ಡನ್ ಗ್ರಿನಿಜ್,ವಿವ್ ರಿಚರ್ಡ್ಸನ್, ಲ್ಯಾರಿ ಗೋಮ್ಸ್ ಸೇರಿದಂತೆ ಎಲ್ಲರೂ ಕಪಿಲ್ ನತ್ತ ನೋಡುತ್ತಾ, ಗುಸುಗುಸು ಮಾತನಾಡುತ್ತಾ, ಅದೇನನ್ನೋ ಹೇಳುತ್ತಾ ಅವರೊಳಗೇ ನಗುತ್ತಿದ್ದರು. ಆಗಾಗ ನಾಯಕ ಕ್ಲೈವ್ ಲಾಯ್ಡ್ ಕೂಡ ಆ ಗುಂಪಿನ ಹತ್ತಿರ ಬಂದು ಸಣ್ಣಗೆ ನಕ್ಕು ಹೋಗುತ್ತಿದ್ದ. ಆತ ಅದಾಗಲೇ ಸತತ 3 ನೇ ವಿಶ್ವಕಪ್ ಎತ್ತುವ ಸಂಭ್ರಮದ ಗಳಿಗೆಯ ಕ್ಷಣಗಣನೆಯಲ್ಲಿದ್ದ.

ಫೋಟೋ ಕೃಪೆ : stabroeknews ಕ್ಲೈವ್ ಲಾಯ್ಡ್
ಕಪಿಲ್ ಏಕಾಂಗಿಯಾಗಿ ಏನೋ ಆಲೋಚಿಸುತ್ತಾ, ಗವಾಸ್ಕರ್ ಹತ್ತಿರ ಸ್ವಲ್ಪ ಹೊತ್ತು ಮಾತನಾಡಿ, ಏನೋ ದೃಢವಾಗಿ ನಿರ್ಧರಿಸಿ ನಿಂತಿರುವಾಗ, ಬೌಂಡರಿ ಗೆರೆಯ ಬಳಿ ಯಾರೋ ‘ಪಾಜಿ’ ಎಂದರು. ಕರೆದವನು ಪಾಕಿಸ್ತಾನಿ ಮೂಲದ ಲಾರ್ಡ್ಸ್ ಮೈದಾನದ ಸಿಬ್ಬಂದಿಯಾಗಿದ್ದ. ಪಿಚ್ ನ ಮೇಲೆ ವಿಪರೀತ ಹುಲ್ಲು ಬೆಳೆದಿದೆ, ನೋಡಿದ್ದೀರಾ? ಎಂದು ಕಪಿಲ್ ಗೆ ಕೇಳಿದ. ಇದನ್ನು ಕೇಳುತ್ತಿದ್ದಂತೆ ಕಪಿಲ್ ಗೆ ತುಂಬ ಸಿಟ್ಟು ಬಂದಿತು. ಟಾಸ್ ಹಾಕಲು ಹೋಗಿ ನೋಡಿದಾಗ, ಆ ಸಿಬ್ಬಂದಿ ಹೇಳಿದ ಮಾತು ಸತ್ಯವಾಗಿತ್ತು. ಪಿಚ್ ಮೇಲಿನ ಹುಲ್ಲು ವೇಗದ ಸ್ವಿಂಗ್ ಬೌಲರ್ ಗಳಿಗೆ ತುಂಬ ಅನುಕೂಲಕರ ಮತ್ತು ಬ್ಯಾಟ್ಸ್‌ಮನ್ ಗಳಿಗೆ ಅಪಾಯಕಾರಿ.
ವಿಂಡೀಸರಿಗೆ ಅನುಕೂಲವಾಗಿ ಪಿಚ್ ಇರುವುದು ಕಪಿಲ್ ಸಿಟ್ಟಿಗೆ ಕಾರಣವಾಗಿತ್ತು. ಅದರಲ್ಲೂ ಈ ಪಿಚ್ ನ ಮೇಲೆ, ವಿಂಡೀಸ್ ನ ಜೊಯೆಲ್ ಗಾರ್ನರ್, ಆ್ಯಂಡಿ ರಾಬರ್ಟ್ಸ್ ,ಮಾಲ್ಕಮ್ ಮಾರ್ಷಲ್ ರಂತಹ ರಣಘಾತಕ ವೇಗಿಗಳು ಭಾರತೀಯ ಬ್ಯಾಟ್ಸ್‌ಮನ್ ಗಳ ಮಹಾ ಮಾರಣಹೋಮವನ್ನೇ ನಡೆಸಬಲ್ಲರು ಎಂಬುದು ಕಪಿಲ್ ಗೆ ಗೊತ್ತಾಗಿತ್ತು. ಟಾಸ್ ಬೇರೆ ಸೋತು ಭಾರತಕ್ಕೆ ಬ್ಯಾಟಿಂಗ್ ಮಾಡುವಂತೆ ವಿಂಡೀಸ್ ಆಹ್ವಾನಿಸಿದಾಗ, ಒಮ್ಮೆಗೆ ಕಪಿಲ್ ಕಂಪಿಸಿಬಿಟ್ಟ. ಈಗ ಉಳಿದಿರುವುದು ಒಂದೇ ದಾರಿ, ಮೊದಲ ಅರ್ಧ-ಒಂದು ಗಂಟೆಯವರೆಗೆ ಯಾ 15-20 ಓವರ್ ವರೆಗೆ ಈ ಘಾತಕ ವೇಗಿಗಳಿಗೆ ಎದೆಯೊಡ್ಡಿ, ಸ್ಥಿರವಾಗಿ ನಿಂತು ಹುಲ್ಲಿನ ಪರಿಣಾಮ ಕಡಿಮೆ ಮಾಡಿಸುವುದು. ಅದಕ್ಕಾಗಿ,1975 ರ ವಿಶ್ವಕಪ್ ನ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಒಂದಿಡೀ 60 ಓವರ್ ಗಳವರೆಗೆ ಆಡಿ, ಬರೀ 36 ರನ್ ಗಳಿಸಿ,ಯಾವತ್ತೂ ಗಡಿಬಿಡಿ ಮೈಗೆ ಒಳ್ಳೆಯದಲ್ಲ ಎಂದು ಇತರರಿಗೆ ಬುದ್ಧಿವಾದ ಹೇಳಿದ್ದ ಗವಾಸ್ಕರ್ ಗೆ ಆ ಜವಾಬ್ದಾರಿ ನೀಡಿ, ಆದಷ್ಟು ಸ್ಟ್ರೈಕರ್ ತುದಿಯಲ್ಲಿ ಗವಾಸ್ಕರ್ ಇರುವ ಹಾಗೆ ನೋಡಿಕೊಳ್ಳುವಂತೆ ಚಂಚಲ ಮನಸ್ಸಿನ ಶ್ರೀಕಾಂತ್ ಗೆ ಕಟ್ಟುನಿಟ್ಟಾಗಿ ಕಪಿಲ್ ಸೂಚಿಸಿದ. ಆರಂಭದ ಈ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳದಿದ್ದರೆ ಉಳಿಗಾಲವಿಲ್ಲ ಎನ್ನುವುದು ಕಪಿಲ್ ಗೆ ಗೊತ್ತಿತ್ತು. ಜಿಂಬಾಬ್ವೆ ಎದುರು ಹೀಗೆ ಆದದ್ದು..

ಫೋಟೋ ಕೃಪೆ : padhyavani ಸುನೀಲ್ ಗವಾಸ್ಕರ್
ಈಗಂತೂ ಎದುರಿಗಿರುವುದು ಬಲಾಢ್ಯ ವೆಸ್ಟ್ ಇಂಡೀಸ್ ಬೇರೆ. ಆದರೆ ಗವಾಸ್ಕರ್ ಮಾತ್ರ ಕಪಿಲ್ ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಯಾಗಿಸಿದ. ಎರಡೇ ರನ್ನಿಗೆ ಹೊರಹೋಗುತ್ತಿದ್ದ ಬಾಲ್ ಕೆಣಕಿ ಆ್ಯಂಡಿ ರಾಬರ್ಟ್ ಗೆ ಬಲಿಯಾದ. ಕಪಿಲ್ ಗವಾಸ್ಕರ್ ಗೆ ಹೇಳಿದ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದು ಮಾತ್ರ ,ಒನ್ ಡೌನ್ ಆಗಿ ಬಂದ ಮೊಹಿಂದರ್ ಅಮರ್ ನಾಥ್. ಅಕ್ಷರಶಃ ಅಮರ್ ನಾಥ್ ಮತ್ತು ಶ್ರೀಕಾಂತ್ 20 ಓವರ್ ವಿಂಡೀಸ್ ಬೌಲರ್ ಗಳಿಗೆ ರನ್ನಿಂಗ್ ಪ್ರ್ಯಾಕ್ಟೀಸ್ ಮಾಡಿಸಿದರು. ಬೌಂಡರಿ ಗೆರೆಯ ಹತ್ತಿರದಿಂದ ಓಡಿ ಬರುತ್ತಿದ್ದ ಬೌಲರ್ ಗಳು, ತಮ್ಮ ಎಸೆತಗಳು ಸೀದಾ ಕೀಪರ್ ಡ್ಯೂಜಾನ್ ಕೈಸೇರುತ್ತಿದ್ದುದನ್ನು ಹತಾಶರಾಗಿ ನೋಡಬೇಕಾಗಿತ್ತು. ಅದು ಹೇಗೋ ಶ್ರೀಕಾಂತ್ , ಮೊಹಿಂದರ್, ಮದನ್ ಲಾಲ್, ಬಿನ್ನಿ, ಕಿರ್ಮಾನಿ ಸೇರಿ ತಂಡದ ಮೊತ್ತವನ್ನು 183 ರನ್ನವರೆಗೆ ತಲುಪಿಸಿದರು. 60 ಓವರ್ ನಲ್ಲಿ ಅದೇನು ಲೆಕ್ಕವೇ ಅಲ್ಲ ಎಂದು ಪೆವಿಲಿಯನ್ ಗೆ ಮರಳುವಾಗ ವಿಂಡೀಸರು ನಿರಾಳರಾಗಿದ್ದರು. ಇನ್ನೇನು, ಒಂದೆರಡು ಗಂಟೆಗಳ ನಂತರ ಈ ಸಣ್ಣ ಸ್ಕೋರ್ ಹೊಡೆದು, ಲಾರ್ಡ್ಸ್ ಬಾಲ್ಕನಿ ಮೇಲೆ ಕಪ್ ಹಿಡಿದು ಕುಣಿಯುವ ಅವರ ತವಕಕ್ಕೆ ಇದ್ಯಾವುದೂ ತಡೆಯಾಗಲಿಲ್ಲ.. ಭಾರತೀಯ ಅಭಿಮಾನಿಗಳು ಮತ್ತು ತಂಡವೂ ಕೂಡ ಗೆಲುವು ಸಾಧ್ಯವಿಲ್ಲ, ಫೈನಲ್ ನಲ್ಲಿ ಆಡುತ್ತಿರುವುದೇ ಸಾಧನೆ ಎಂದೇ ಭಾವಿಸಿದ್ದರು. ಫೀಲ್ಡಿಂಗ್ ನಲ್ಲಿ, ಡೊಳ್ಳು ಹೊಟ್ಟೆಯ ಸ್ವಲ್ಪವೂ ಬಗ್ಗದ ಯಶಪಾಲ್ ಶರ್ಮ, ಬಾಲ್ ಸ್ವಲ್ಪ ಮೇಲೆ ಹಾರಿದರೂ ಆಕಾಶ ನೋಡುವ ಕುಳ್ಳ ಗವಾಸ್ಕರ್, ಮೈದಾನದಲ್ಲಿ ತುಸು ಹೆಚ್ಚೇ ನಖರಾ ಮಾಡುವ ಶ್ರೀಕಾಂತ್, ಪರಮ ಕೋಪಿಷ್ಟ ಮದನ್ ಲಾಲ್, ತನ್ನದೇ ಪ್ರತ್ಯೇಕ ಲೆಕ್ಕಾಚಾರ ಹಾಕುವ ಮೊಹಿಂದರ್ ಅಮರನಾಥ್, ಇಂಗ್ಲೀಷ್ ಬಿಟ್ಟು ಬೇರೆ ಭಾಷೆ ಬಾರದ ರೋಜರ್ ಬಿನ್ನಿ, ಉದಾಸೀನವೇ ಮೈವೆತ್ತಂತಿದ್ದ ಬಲ್ವಿಂದರ್ ಸಂಧುರಂತಹವರನ್ನು ಕಟ್ಟಿಕೊಂಡು, ಈ ಸಣ್ಣ ಸ್ಕೋರ್ ಉಳಿಸುವುದು ಕಪಿಲ್ ಗೆ ಅಸಾಧ್ಯ ಎಂಬುದು ಕಪಿಲ್ ಹೊರತುಪಡಿಸಿ ಎಲ್ಲರ ಆಲೋಚನೆಯಾಗಿತ್ತು. ಆದರೆ ಕಪಿಲ್ ಯೋಚನೆ- ಯೋಜನೆ ಬೇರೆಯೇ ಆಗಿತ್ತು..

ಫೋಟೋ ಕೃಪೆ : padhyavani ಮದನ್ ಲಾಲ್
ಇತಿಹಾಸ ಸೃಷ್ಟಿಸಲು ಅಂಗಣಕ್ಕಿಳಿಯಿತು ಕಪಿಲ್ ತಂಡ, ಆರಂಭದಲ್ಲೇ ಬಲ್ವಿಂದರ್ ಸಂಧುವಿನ ಆಡಲಸಾಧ್ಯ ಇನ್ ಸ್ವಿಂಗ್ ಎಸೆತಕ್ಕೆ ಗಾರ್ಡನ್ ಗ್ರಿನಿಜ್ ಆಫ್ ಸ್ಟಂಪ್ ಹಾರಿಸಿಕೊಂಡ. ಮದನ್ ಲಾಲ್ ಡೆಸ್ಮಂಡ್ ಹೇಯ್ನ್ಸ್ ನ ಹೆಡೆಮುರಿ ಕಟ್ಟಿದ. ಇದಕ್ಕೆ ವಿಂಡೀಸ್ ಪೆವಿಲಿಯನ್ ನೊಳಗೆ ಲಾಯ್ಡ್ ಅಷ್ಟೇನೂ ತಲೆಕೆಡಿಸಿಕೊಳ್ಳಲಿಲ್ಲ. ಅವರಿಬ್ಬರೂ ಪಂದ್ಯ ಬೇಗ ಮುಗಿಸಲು ಹವಣಿಸಿ ಕಪಿಲ್ ಹಣೆದ ಬಲೆಗೆ ಬಿದ್ದಿದ್ದರು. ಅಂಗಣದಲ್ಲಿ ರಣದೈತ್ಯ ವಿವಿಯನ್ ರಿಚರ್ಡ್ಸ್ ಇದ್ದ..ಅದೆಂತಹ ನಿಖರ ಯಾರ್ಕರನ್ನೂ ಕೂಡ ಅದು ಹೇಗೋ ಎಳೆದುಕೊಂಡು ಚಚ್ಚಿಬಿಡುವ ಸಾಮರ್ಥ್ಯದವ ಅಂವ. ಔಟಾಗಿ ಬಂದ ಹೇಯ್ನ್ಸ್ ಕೂಡ ಪ್ಯಾಡ್ ಕಳಚಿಟ್ಟು ಆರಾಮವಾಗಿ ಬಂದು ಕೂತ..ಅದಾಗಲೇ ಹೇಯ್ನ್ಸ್ ನನ್ನು ಕಣ್ಣೆದುರೇ ಉರುಳಿಸಿ ಸಂಭ್ರಮಾಚರಣೆ ಮಾಡಿದ್ದ ಮದನ್ ಲಾಲ್ ನ ಮೂರು ಓವರ್ ಗೆ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಿ ರಿಚರ್ಡ್ಸ್ ವಿಕಾರವಾಗಿ ಬೌಲರ್ ನನ್ನು ನೋಡಿ ನಗುತ್ತಿದ್ದ. ಮದನ್ ಗೆ ಚಚ್ಚುತ್ತಿರುವುದನ್ನು ನೋಡಿ, ಕಪಿಲ್ ಬದಲಾವಣೆ ಬಯಸಿ, ಈಗ ಸ್ವಲ್ಪ ವಿಶ್ರಾಂತಿ ಕೊಟ್ಟು, ನಾಲ್ಕು ಓವರ್ ಗಳ ನಂತರ ಮತ್ತೊಂದು ತುದಿಯಿಂದ ಮದನ್ ಗೆ ಬೌಲಿಂಗ್ ಮಾಡಿಸುವ ನಿರ್ಣಯ ತೆಗೆದುಕೊಂಡ..
ಆದರೆ ಮದನ್ ಲಾಲ್ ಪಟ್ಟುಬಿಡದೆ, ತಾನು ರಿಚರ್ಡ್ಸ್ ನನ್ನು ಹೇಗಾದರೂ ಮಾಡಿ ಪೆವಿಲಿಯನ್ ದಾರಿ ತೋರಿಸಬೇಕು..ತನ್ನನ್ನು ಬಹಳ ವ್ಯಂಗ್ಯ ಮಾಡುತ್ತಿದ್ದಾನೆ, ಒಂದೇ ಒಂದು ಓವರ್ ಕೊಡು ಎಂದು ಕಪಿಲ್ ಗೆ ಒತ್ತಾಯ ಮಾಡಿ ಬಾಲ್ ತೆಗೆದುಕೊಂಡ.
ಇವರಿಬ್ಬರ ದೀರ್ಘ ಸಂಭಾಷಣೆಯನ್ನು ಪಿಚ್ ಮಧ್ಯೆ ನಿಂತು ಲ್ಯಾರಿ ಗೋಮ್ಸ್ ನೊಂದಿಗೆ ಗಮನಿಸಿದ ರಿಚರ್ಡ್ಸ್, ಆ ಓವರ್ ನಲ್ಲಿ ಮತ್ತಷ್ಟು ಪ್ರಹಾರಕ್ಕೆ ಸಿದ್ಧನಾದ. ಮದನ್ ಲಾಲ್ ನನ್ನು ಕಾಡಬೇಕೆಂಬ ನಿರ್ಧಾರಕ್ಕೆ ಬಂದ. ಸೋಲಿನ ಸಣ್ಣ ಸುಳಿವೂ ಕೂಡ ಆ ಹೊತ್ತಿಗೆ ರಿಚರ್ಡ್ಸ್ ಗೆ ಇರಲಿಲ್ಲ. ಮದನ್ ಲಾಲ್ ಹಾಕಿದ ಶಾರ್ಟ್ ಆಫ್ ಲೆಂಗ್ತ್ ಬಾಲೊಂದನ್ನು ಸಿಕ್ಸರ್ ಅಟ್ಟುವ ಪ್ರಯತ್ನ ಮಾಡಿ ಅದು ಆಕಾಶಕ್ಕೆ ಚಿಮ್ಮಿತು. ಇಡೀ ಕ್ರೀಡಾಂಗಣದ ಪ್ರೇಕ್ಷಕರು ಎದ್ದು ನಿಂತು ಆಕಾಶ ನೋಡಿದರು. ಅದು ಅಕ್ಷರಶಃ ಬಾಲ್ ಅಲ್ಲ ವಿಶ್ವಕಪ್ಪೇ ಮೇಲೆ ಹಾರಿದ್ದಾಗಿತ್ತು. ರಿಚರ್ಡ್ಸ್ ಒಮ್ಮೆ ಆಕಾಶವನ್ನು ಇನ್ನೊಮ್ಮೆ ಕಪಿಲ್ ನನ್ನೇ ನೋಡುತ್ತಿದ್ದ. ಚಿಮ್ಮಿದ ಬಾಲ್ ಕೆಳಮುಖವಾಗಿ ಬರುತ್ತಿರುವಾಗ ಭಾರತದ ಎಲ್ಲಾ ಫೀಲ್ಡರ್ ಗಳು ಓಡಿಬಂದು ಬೌಲರ್ ಮದನ್ ಲಾಲ್ ನನ್ನು ಸುತ್ತುವರಿದು ನಿಂತರು. ಮದನ್ ಲಾಲ್ ಒಮ್ಮೆಯೂ ಕಣ್ಣ ರೆಪ್ಪೆ ಮುಚ್ಚದೆ ಮೇಲೆ ಕೆಳಗೆ ನೋಡುತ್ತಿದ್ದ. ಅ ಕ್ಯಾಚ್ ಹಿಡಿದರೆ ಭಾರತದ ಈ ವೀರಗಾಥೆ. ಜಗತ್ತಿನ ಅಂತ್ಯದವರೆಗೆ ಸ್ಮರಿಸಲ್ಪಡುವುದು,ಹಿಡಿಯದಿದ್ದರೆ ಮತ್ತದೇ ಕ್ಲೈವ್ ಲಾಯ್ಡ್ ಟ್ರೋಫಿ ಹಿಡಿಯುವುದು. ಇದು ಎಲ್ಲರಿಗೂ ಗೊತ್ತಿತ್ತು.

ಫೋಟೋ ಕೃಪೆ :cricmash ಕೀಪರ್ ಸೈಯ್ಯದ್ ಕಿರ್ಮಾನಿ
ಅಂಪಾಯರ್ ಡಿಕಿಬರ್ಡ್ ಕೂಡ ಬಾನಿನತ್ತ ದೃಷ್ಟಿ ನೆಟ್ಟವನು ಸ್ವಲ್ಪವೂ ನೋಟ ಬದಲಿಸಲಿಲ್ಲ. ಇಡೀ ಅಂಗಣದಲ್ಲಿ ಸಂಚಲನ, ಅಲ್ಲೋಲಕಲ್ಲೋಲ ಸೃಷ್ಟಿಯಾಯಿತು. ಕೀಪರ್ ಕಿರ್ಮಾನಿಗೂ ಬಾಲ್ ಲ್ಯಾಂಡ್ ಆಗುವ ಸ್ಠಳ ಮತ್ತು ಯಾರು ತೆಗೆದುಕೊಳ್ಳಬೇಕೆಂಬ ಬಗ್ಗೆ ಗೊಂದಲ. ಕಿರ್ಮಾನಿ ಮದನ್ ನತ್ತ ನೋಡಿದ..ಶಾರ್ಟ್ ಮಿಡಾಫ್ ನಲ್ಲಿ ನಿಂತಿದ್ದ ಶ್ರೀಕಾಂತ್ ಗೆ ಮಾತೇ ಹೊರಬರುತ್ತಿಲ್ಲ..ಗವಾಸ್ಕರ್ ಕಿರ್ಮಾನಿಯ ಬೆನ್ನು ಹಿಡಿದು ನಿಂತ. ಸಂಧು ಅದಾಗಲೇ ಮಿಡಾಫ್ ನಿಂದ ಓಡಿ ಬಂದು ಪಿಚ್ ಹತ್ತಿರ ತಲುಪಿದ್ದ. ಡೀಪ್ ಮಿಡ್ ವಿಕೆಟ್ ನಲ್ಲಿ ನಿಂತಿದ್ದ ಯಶಪಾಲ್ ಶರ್ಮ ಕ್ಯಾಚ್ ಹಿಡಿಯಲು ಓಡಿ ಬರಲು ಆರಂಭಿಸಿದ..ಶಾರ್ಟ್ ಮಿಡಾನ್ ನಲ್ಲಿ ನಿಂತಿದ್ದ ಕಪಿಲ್ ಗೂ ಮತ್ತು ಯಶಪಾಲ್ ಶರ್ಮಾಗೂ ಸಮಾನ ಅಂತರದ ದೂರದಲ್ಲಿ ಮತ್ತು ಅವರಿಬ್ಬರ ಮಧ್ಯೆ ಬಾಲ್ ಲ್ಯಾಂಡ್ ಆಗುವುದನ್ನು ನಿಖರವಾಗಿ ಗಮನಿಸಿದ ಬೌಲರ್ ಮದನ್ ಲಾಲ್, ಫೈನ್ ಪೊಸಿಷನ್ ನಲ್ಲಿದ್ದು ಓಡಿ ಬರುತ್ತಿದ್ದ, ಬಾಲ್ ಹಿಡಿದೇ ಗೊತ್ತಿಲ್ಲದ ಯಶಪಾಲ್ ಶರ್ಮನನ್ನು ಮುಂದೆ ಬರದಂತೆ ಜೋರಾಗಿ ಕೂಗಿ ನಿಲ್ಲಿಸಿದ. ಗವಾಸ್ಕರ್ ಕೂಡ ನಿಲ್ಲುವಂತೆ ಬೊಬ್ಬೆ ಹಾಕಿದ. ಹಿಂದೆ ಓಡುತ್ತಿದ್ದ ಕಪಿಲ್ ಗೆ ‘ತುಮ್ಹಾರಾ ಕ್ಯಾಚ್ ಕ್ಯಾಪ್ಟನ್ ‘ಎಂದುದು ಕೂಗಿದ. ಮದನ್ ಕೂಗಿಗೆ ಶ್ರೀಕಾಂತ್ ದನಿಗೂಡಿಸಿದ. ಬಾಲ್ ಮೇಲೆ ಹಾರಿದಾಗಲೇ, ಕಪಿಲ್ ಬಾಲ್ ಮೇಲೆ ನೆಟ್ಟ ಕಣ್ಣು ತೆಗೆದಿರಲಿಲ್ಲ. ಕಿರ್ಮಾನಿಯ ಕಾಲ್ ಸ್ಪಷ್ಟವಿರಲಿಲ್ಲ. ಇಡೀ ತಂಡ ಗೊಂದಲದಲ್ಲಿತ್ತು. ಲ್ಯಾಂಡಿಂಗ್ ಕೂಡ ಅನುಮಾನವಿತ್ತು. ಹಿಂದೆ ಓಡಬೇಕಿತ್ತು. ಬಾಲ್ ಮೇಲಿನಿಂದ ಕೆಳಗೆ ಬರುತ್ತಿರುವಾಗ ಇಡೀ ಸ್ಟೇಡಿಯಂ ನಲ್ಲಿ ಶೂನ್ಯಮೌನ..ವೀಕ್ಷಕ ವಿವರಣೆಕಾರರು, ಟಿವಿ ಸ್ಕ್ರೀನ್ ಮೇಲಿಂದ ದೃಷ್ಟಿ ಸರಿಸಿ ನೇರ ಅಂಗಣ ನೋಡುತ್ತಾ ನಿಂತುಬಿಟ್ಟರು.
ಮದನ್ ಮತ್ತು ಕಪಿಲ್ ಗೆ ಆ ಕ್ಯಾಚ್ ನ ಮೌಲ್ಯದ ಅರಿವಿತ್ತು. ಹಿಂದಕ್ಕೆ ಓಡಿ ಕಪಿಲ್ ಆ ಅನುಗಾಲ ಸ್ಮರಣಯೋಗ್ಯ ಅಮೋಘ ಕ್ಯಾಚ್ ಹಿಡಿದಾಗ ಇಡೀ ಲಾರ್ಡ್ಸ್ ಕ್ರೀಡಾಂಗಣದ ಚಿತ್ರಣವೇ ಬದಲಾಯಿತು. ಸಾಗರವೇ ಉಕ್ಕಿ ಹರಿದಂತೆ ಹರ್ಷದ ಅಲೆಗಳು ಎದ್ದವು. ಸಂತಸದ ಸುನಾಮಿ ಹರಿಯಿತು. ಕ್ಲೈವ್ ಲಾಯ್ಧ್ ಮುಖ ಬಿಳಿಚಿಕೊಂಡಿತು. ವಿಂಡೀಸ್ ಪಾಳಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ರಿಚರ್ಡ್ಸ್ ಗೆ ಆಕಾಶವೇ ಕಳಚಿಬಿದ್ದ ಅನುಭವವಾಯಿತು. ಅಪಾಯದ ಸೂಚನೆ ಲಭಿಸತೊಡಗಿ ಲಾಯ್ಡ್ ಅಂಗಣಕ್ಕಿಳಿಯುತ್ತಿದ್ದಂತೆ ಗಾರ್ಡನ್ ಗ್ರಿನಿಜ್ ಮತ್ತು ಆಗಷ್ಟೇ ಬಂದ ರಿಚರ್ಡ್ಸ್ ಪೆವಿಲಿಯನ್ ನಲ್ಲಿ ಕೀಪರ್ ಡ್ಯೂಜಾನ್ ನನ್ನು ಪಕ್ಕಕ್ಕೆ ಕರೆದು ಸುದೀರ್ಘ ಮಾತುಕತೆ ನಡೆಸಿದರು. ಅವರ ಮಾತಿಗೆ ಡ್ಯೂಜಾನ್ ತಲೆಯಲ್ಲಾಡಿಸುತ್ತಿದ್ದ ಬಿಟ್ಟರೆ ಅತ್ತ ಮೈದಾನದಲ್ಲಿ ಕಪಿಲ್ ನನ್ನೇ ನೋಡುತ್ತಿದ್ದ. ಅಂಗಣದಲ್ಲಿ ಲಾಯ್ಡ್ ಮತ್ತು ಗೋಮ್ಸ್ ಗೆ ಕಪಿಲ್ ಆಕ್ರಮಣಕಾರಿ ಫಿಲ್ಡಿಂಗ್ ಸೆಟ್ ಮಾಡುತ್ತಿದ್ದ.
ಅತ್ತ ರಿಚರ್ಡ್ಸ್ ಅವಸಾನ ಕಂಡು ಬೆಚ್ಚಿಬಿದ್ದ ಕ್ಲೈವ್ ಲಾಯ್ಡ್ ಹೋಗಿ ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದಷ್ಟೆ, ಎದುರುಗಡೆ ಲ್ಯಾರಿ ಗೋಮ್ಸ್ ಕೂಡ, ಮದಿಸಿದ ಆನೆಯಂತೆ ಮುನ್ನುಗ್ಗುತ್ತಿದ್ದ ಮದನ್ ಲಾಲ್ ಗೆ ಬಲಿಯಾದ..ಲಾಯ್ಡ್ ಒಮ್ಮೆಗೆ ನಡುಗಿದ. ಬಾರ್ಬಡೋಸ್, ಆ್ಯಂಟಿಗುವಾ, ಗಯಾನಾ, ಕೊಲ್ಕತ್ತಾ , ಮುಂಬೈಗಳಲ್ಲಿ ಈ ಹಿಂದೆ ಕಾಣುತ್ತಿದ್ದ ಭಾರತ ತಂಡ ಇದಲ್ಲವೆಂಬುದು ಆತನಿಗೆ ಮನದಟ್ಟಾಗಿತ್ತು. ಸಾಲದೆಂಬಂತೆ ಓವರ್ ಮಧ್ಯದ ವಿರಾಮದ ಹೊತ್ತಿನಲ್ಲಿ ಮದನ್ ಲಾಲ್ ಮತ್ತು ಗವಾಸ್ಕರ್ ಲಾಯ್ಡ್ ನನ್ನು ನೋಡುತ್ತಲೇ ಅದೇನೋ ರಣತಂತ್ರ ಹಣೆಯುತ್ತಿದ್ದರು. ಇದನ್ನು ಲಾಯ್ಡ್ ಗಮನಿಸಿದ. ಇಡೀ ಭಾರತೀಯ ತಂಡ ತನ್ನನ್ನು ಹೇಗಾದರೂ ಮಾಡಿ ಬಲಿ ಪಡೆಯುವ ಅತುರದಲ್ಲಿದೆ, ಒಂದೊಮ್ಮೆ ಹಾಗಾದರೆ 3 ನೇ ವಿಶ್ವಕಪ್ ಎತ್ತುವ ಕನಸು ಖಂಡಿತ ನುಚ್ಚುನೂರಾಗಲಿದೆ. ಭಾರತ ತಂಡಕ್ಕೆ ಸೋತೆವು ಅಂತಾದರೆ ಈ ಹಿಂದಿನ ಎರಡು ವಿಶ್ವಕಪ್ ಗೆದ್ದ ಹಿರಿಮೆಗಿಂತ ಹೆಚ್ಚು ಅವಮಾನಕ್ಕೊಳಗಾಲಿದ್ದೇವೆ ಎಂಬ ಭಯ ಲಾಯ್ಡ್ ಗೆ ಕಾಡಲಾರಂಭಿಸಿತು. ಪೆವಿಲಿಯನ್ ನತ್ತ ದಯನೀಯ ನೋಟ ಬೀರಿದ,ಅಲ್ಲಿ ಬೌಲರ್ ಆ್ಯಂಡಿ ರಾಬರ್ಟ್ಸ್ ಪ್ಯಾಡ್ ಕಟ್ಟಲು ಸಿದ್ಧನಾಗಿದ್ದ. ಉಳಿದವರೆಲ್ಲರ ಮುಖಗಳು ಭಯ ಮತ್ತು ಆತಂಕದಿಂದ ಬಾಡಿಹೋಗಿದ್ದವು. ತನ್ನ ಸುದೀರ್ಘವಾದ ಸಾಧಕ ಕ್ರಿಕೆಟ್ ಬಾಳ್ವೆಯಲ್ಲಿ, ಲಾಯ್ಡ್ ಗೆ ಭಯವೆಂಬ ಶಬ್ದದ ಅರ್ಥ ಅಂದೇ ತಿಳಿದದ್ದು. ಕಣ್ಣೆದುರು ನಡೆದ ಅನಿರೀಕ್ಷಿತ ಪತನ, ಪೆವಿಲಿಯನ್ ನಲ್ಲಿ ಬೌಲರ್ ಗಳು ಪ್ಯಾಡ್ ಕಟ್ಟುತ್ತಿರುವ ವಿಲಕ್ಷಣ ನೋಟ ಮತ್ತು ಸ್ಕೋರ್ ಬೋರ್ಡ್ ನಲ್ಲಿ 50 ಚಿಲ್ಲರೆ ರನ್ ಕಂಡು ಲಯ ಕಳೆದುಕೊಂಡ ಲಾಯ್ಡ್ , ತಲೆಕೆಟ್ಟು ಹೊಡೆದ ಹೊಡೆತ ಸೀದಾ ಕಪಿಲ್ ಬೊಗಸೆ ಸೇರಿತು. 76 ರನ್ನಿಗೆ ಅರ್ಧ ವಿಂಡೀಸ್ ತಂಡ ಪೆವಿಲಿಯನ್ ಸೇರಿತು..ಅಂಗಣದಲ್ಲಿ ಕಪಿಲ್ ಬಳಗದ ಅಬ್ಬರಕ್ಕೆ ನಂತರ ಸ್ವಲ್ಪ ಕೀಪರ್ ಜೆಫ್ ಡ್ಯೂಜಾನ್ ಪ್ರತಿರೋಧ ತೋರಿದ ಬಿಟ್ಟರೆ, ಉಳಿದವರು ರೋಡ್ ರೋಲರ್ ಕೆಳಗೆ ಸಿಕ್ಕ ನಿಂಬೆ ಹಣ್ಣಿನಂತೆ ಅಪ್ಪಚ್ಚಿಯಾದರು..ಇಡೀ ವಿಶ್ವ, ವಿಂಡೀಸ್ ಹೊರತಾದ ವಿಶ್ವಚಾಂಪಿಯನ್ ತಂಡವನ್ನು ಬಯಸುತ್ತಿತ್ತು. ಅದಕ್ಕೆ ತಕ್ಕಂತೆ ಭಾರತ ವಿಶ್ವಚಾಂಪಿಯನ್ ಆಯಿತು..ಯಾವುದೇ ಹೆಸರಿಸಬಲ್ಲ ಏಕದಿನ ಕ್ರಿಕೆಟ್ ನ ಸ್ಟಾರ್ ಆಟಗಾರರಿಲ್ಲದಿದ್ದರೂ ಕಪಿಲ್ ಕೂಟದ ಅತ್ಯಂತ ದುರ್ಬಲ ತಂಡವನ್ನು ಸ್ಟಾರ್ ಆಗಿಸಿದ.
ಆಸ್ಟ್ರೇಲಿಯಾ ಇಂಗ್ಲೆಂಡ್ ನಂತಹ ಶತಮಾನದ ಕ್ರಿಕೆಟ್ ಅನುಭವ ಹೊಂದಿದ ತಂಡದಿಂದಲೂ ಸಾಧ್ಯವಾಗದ್ದನ್ನು ಭಾರತೀಯ ತಂಡ ಮಾಡಿ ತೋರಿಸಿತು. ಲಾರ್ಡ್ಸ್ ಬಾಲ್ಕನಿ ಮೇಲೆ ಕಪಿಲ್ ಟ್ರೋಫಿ ಹಿಡಿದ ಚಿತ್ರ ಭಾರತದ ಮನೆ-ಮನಗಳಿಗೆ ತಲುಪಿತು. ಯಾವುದೇ ಆಟವನ್ನು ಬರೀ ಮಕ್ಕಳಾಟಿಕೆ ಎಂದು ತಿಳಿಯುತ್ತಿದ್ದ ಬಹುತೇಕ ದೇಶವಾಸಿಗಳು ಕ್ರಿಕೆಟ್ ನ್ನು ಗಂಭೀರವಾಗಿ ಪರಿಗಣಿಸತೊಡಗಿದರು. ಕಪಿಲ್ ದೇವ್, ಭಾರತೀಯರ ಪಾಲಿನ ಚಲನಚಿತ್ರ ಮತ್ತು ರಾಜಕೀಯದ ಹೊರತಾದ ಕ್ಷೇತ್ರದ ದೇಶದ ಮೊದಲ ಹೀರೋ ಆದ. ಅಲ್ಲಲ್ಲಿ ಧ್ಯಾನ್ ಚಂದ್ ನ ಹಾಕಿಯ ಮಾತಿತ್ತಾದರೂ ಅದು ಕೆಲವೇ ರಾಜ್ಯಗಳಿಗೆ ಸೀಮಿತವಾಗಿತ್ತು. ಕಪಿಲ್ ಗೆ ಮಾತ್ರ ಅಂತರರಾಷ್ಟ್ರೀಯ ಮನ್ನಣೆ ದೊರೆಯಿತು. ಈ ಗೆಲುವಿನ ನಂತರ ಭಾರತದ ಖಾಲಿ ಮೈದಾನಗಳಲ್ಲಿ, ಗದ್ದೆ,ಬಯಲುಗಳಲ್ಲಿ ವ್ಯಾಪಕವಾಗಿ ಜನ ಕೈಯಲ್ಲಿ ಮಾಡಿದ ಬ್ಯಾಟುಗಳು ಮತ್ತು ರಬ್ಬರ್- ಟೆನ್ನಿಸ್ ಬಾಲುಗಳಲ್ಲಿ ಆಡುತ್ತಾ ಕಂಡುಬಂದರು. ಗಲ್ಲಿಗಲ್ಲಿಗಳಲ್ಲಿ ಬ್ಯಾಟಿಂಗ್ ಬೌಲಿಂಗ್ ಅನುಕರಣೆ ಮಾಡುತ್ತಾ ತಮ್ಮನ್ನು ತಾವು”ಅಬ್ ಬ್ಯಾಟಿಂಗ್ ಕೆ ಲಿಯೆ ಕಪಿಲ್ ದೇವ್ ಆ ರಹೇ ಹೈ, ಕಪಿಲ್ ದೇವ್ ನೇ ಶಾಂದಾರ್ ಕ್ಯಾಚ್ ಪಕಡಾ, ಕಪಿಲ್ ದೇವ್ ನೇ ವಿಕೆಟ್ ಕೋ ಉಡಾ ದಿಯಾ” ಎನ್ನತೊಡಗಿದರು. ಎಲ್ಲಿಯವರೆಗೆ ಕಪಿಲ್ ಕ್ರೇಜ್ ಹುಟ್ಟಿಕೊಂಡಿತೆಂದರೆ, 5 ಪೈಸೆ ನಾಣ್ಯ ಮೇಲಕ್ಕೆ ಹಾರಿಸಿ”ಕಪಿಲ್ ದೇವ್ ನೇ ಟಾಸ್ ಜೀತಾ,ಔರ್ ಪೆಹಲೆ ಬ್ಯಾಟಿಂಗ್ ಕಾ ಫೈಸಲಾ ಕಿಯಾ” ಎಂದು ತಾವೇ ಹೇಳುತ್ತಾ ತಾವೇ ಬ್ಯಾಟ್ ಹಿಡಿದುಕೊಂಡು ಬರುತ್ತಿದ್ದರು.

ಫೋಟೋ ಕೃಪೆ : m.jagranjosh 1983 ರ ವಿಶ್ವಕಪ್ ಗೆದ್ದ ಕ್ಷಣ
ಆಡುತ್ತಿದ್ದವರನ್ನು ನೋಡಲು ಆಡದವರು ಬಂದು ಸೇರತೋಡಗಿದರು. 1983 ರ #ವಿಶ್ವಕಪ್ ನ ಗೆಲುವು ಮತ್ತು ಆಟ ಭಾರತದ ಸಾಮಾಜಿಕ ಚಿತ್ರಣವನ್ನೇ ಬದಲಿಸಿತು. ಯಾರೇನೇ ಹೇಳಲಿ ಕ್ರೀಡೆಯಲ್ಲಿ ಭಾರತದ ಮಟ್ಟಿಗೆ ಕಪಿಲ್ ದೇವ್ ಮೂಡಿಸಿದ ಸಂಚಲನವನ್ನು ಕ್ರಿಕೆಟ್ ಸೇರಿದಂತೆ ಬೇರಾವ ಕ್ರೀಡೆಯಲ್ಲಿಯೂ ಯಾರೂ ಮೂಡಿಸಲಿಲ್ಲ. ಯಾವುದೇ ವಿಶ್ವಕಪ್ ನ ಫೈನಲ್ ನಲ್ಲಿ ಆಡಿದ ಯಾವುದೇ ದೇಶದ ತಂಡ 1983 ರ ಭಾರತ ತಂಡದಷ್ಟು ದುರ್ಬಲವಾಗಿರಲಿಲ್ಲ. ಎದುರಾಳಿ ತಂಡದಲ್ಲಿ ಇದ್ದ ಹನ್ನೊಂದು ಆಟಗಾರರೂ ಏಕದಿನದ ಸ್ಟಾರ್ ಆಟಗಾರರು. ಭಾರತ ತಂಡದಲ್ಲಿ ಕಪಿಲ್ ಬಿಟ್ಟರೆ ಬಾಕಿ ಮೂರ್ನಾಲ್ಕು ಜನ ಟೆಸ್ಟನಲ್ಲಿ ಮಾತ್ರ ಆ ಕಾಲಕ್ಕೆ ಸ್ವಲ್ಪಮಟ್ಟಿಗೆ ಹೆಸರು ಮಾಡಿದ್ದರು. ಅಂತಹ, ಆಗಷ್ಟೇ ಏಕದಿನ ಪಂದ್ಯಗಳಲ್ಲಿ ಅಂಬೆಗಾಲಿಡುತ್ತಿರುವ ಮತ್ತು ಟೆಸ್ಟ್ ಮ್ಯಾಚ್ ಗುಂಗಿನ ಆಮೆ ಸಂತತಿಯ ತಂಡವನ್ನು ಸ್ಟಾರ್ ಮಾಡಿದ ಮತ್ತು ಜಯದ ರೋಮಾಂಚನ ಜಗವಿಡೀ ಪಸರಿಸಿದ ಕಪಿಲ್ ನಿಜಕ್ಕೂ ಸೂಪರ್ ಸ್ಟಾರ್..ಇಂದು ಕ್ರಿಕೆಟ್ ಭಾರತದ ಉಸಿರಾಗಿದ್ದರೆ, ಆ ಉಸಿರಿನಲ್ಲಿ ಕಪಿಲ್ ಹೆಸರು ಹಚ್ಚಹಸುರಾಗಿರಬೇಕು..
- ಮುಷ್ತಾಕ್ ಹೆನ್ನಾಬೈಲ್ (ಚಿಂತನಕರಾರು, ಲೇಖಕರು) ಕುಂದಾಪುರ
