ಬರಹಗಾರರು ಸಿಕ್ಕುತ್ತಾರೆ ಆದರೆ ಅನಕೃ ಅಂತಹ ಬರಹಗಾರರು ಸಿಗುವುದಿಲ್ಲ, ಸ್ನೇಹಿತರು ಸಿಕ್ಕುತ್ತಾರೆ ಆದರೆ ಅನಕೃ ಅಂತಹ ನಿರಪೇಕ್ಷ ಸ್ವಭಾವದ ಸ್ನೇಹಿತರು ಸಿಗುವುದಿಲ್ಲ, ಮಾರ್ಗದರ್ಶಿ ಸಿಕ್ಕುತ್ತಾರೆ ಆದರೆ ಅನಕೃ ಅಂತಹ ಹಿತಚಿಂತಕ ಮಾರ್ಗದರ್ಶಿ ಸಿಕ್ಕುವುದಿಲ್ಲ. ಅಭಿಮಾನಿಗಳೂ ಸಿಕ್ಕುತ್ತಾರೆ ಆದರೆ ಅನಕೃ ಅಂತಹ ಕನ್ನಡದ ಅಭಿಮಾನಿ ಸಿಕ್ಕುವುದಿಲ್ಲ. ಅನಕೃ ಸದಾ ಸರ್ವದಾ ಅವಿಸ್ಮರಣೀಯರು ಎಂದು ಖ್ಯಾತ ಸಾಹಿತಿಗಳಾದ ಪಾಟೀಲ್ ಪುಟ್ಟಪ್ಪನವರು ಹೇಳಿದ ಮಾತಿದು.
ಅನಕೃ
ಜನನ: 9_5_1908
ಮರಣ: 8_7_1971
“ನನ್ನ ಈ ದೇಹ ಜರ್ಝರಿತವಾಗಿದೆ, ಇಲ್ಲಿಯೇ ಬಿಟ್ಟು ಹೋಗುತ್ತೇನೆ ಇದನ್ನು ಸರಿ ಮಾಡಿ ವಾಪಸ್ ಕೊಡುತ್ತೀರಾ” ಎಂದು ಕೇಳಿದ್ದು ಮಲ್ಲಾಡಿಹಳ್ಳಿ ಶ್ರೀಗಳನ್ನು. “ಶ್ರೀಗಳು ಕೂಡ ಅಲ್ಲದೆ ಮತ್ತೇನು, ಈ ದೇಹ ನಿಮ್ಮದು ಮಾತ್ರ ಅಲ್ಲ, ಜನಗಳಿಗೆ ಸೇರಿದ್ದು, ಸರಿ ಮಾಡಿ ಕೊಡುತ್ತೇವೆ, ಬಿಟ್ಟು ಹೋಗಿ” ಎಂದಿದ್ದರಂತೆ. ಆದರೇ ಅದು ಆಗುವ ಮೊದಲೇ ದೇಹವನ್ನೇ ತ್ಯಜಿಸಿ ಹೋಗಿದ್ದು ಮತ್ಯಾರೂ ಅಲ್ಲ, ಕನ್ನಡ ಕಾದಂಬರಿ ಲೋಕದ ಸಾರ್ವಭೌಮ, ಕನ್ನಡದ ಕಿಂದರಿಜೋಗಿ, ಕನ್ನಡದ ಕಟ್ಟಾಳು ಎಂದೇ ಹೆಸರಾದವರು, ನೂರಕ್ಕೂ ಹೆಚ್ಚಿನ ಕಾದಂಬರಿಯನ್ನು ರಚಿಸಿದವರು, ಕನ್ನಡದ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ವರು, ಕನ್ನಡಕ್ಕೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಲು ರಾಜ್ಯಾದ್ಯಂತ ಸುತ್ತಾಡಿದವರು, ಸುಮಾರು 80,000 ಪುಟಗಳಿಗೆ ಮೀರಿ ಬರೆದವರು, ಬರೆದದ್ದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಓತಪ್ರೇತವಾಗಿ ಭಾಷಣ ಮಾಡಿದವರು, “ನನ್ನಂಥವರು ಕನ್ನಡಕ್ಕೆ ಅನೇಕರು ಇದ್ದಾರೆ, ಆದರೆ ನನಗಿರುವುದು ಒಂದೇ ಕನ್ನಡ” ಎಂದು ಕನ್ನಡಾಭಿಮಾನ ಮೆರೆದವರು. ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಘಂಟೆಗಟ್ಟಲೆ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೇ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಭಾಷಣ ಮಾಡಬಲ್ಲವರಾಗಿದ್ದವರು, ಅವರೇ ನಮ್ಮ #ಅನಕೃ, ಅರಕಲಗೂಡು ನರಸಿಂಹರಾವ್ ಕೃಷ್ಣರಾವ್ ಅವರು.
ಅನಕೃ ಅವರು ತಮ್ಮ 63ನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಅವರ ಸಾವಿಗೆ ಅವರ ದುಶ್ಚಟಗಳು ಕಾರಣ ಎಂದು ಹೇಳುತ್ತಾರಾದರೂ ಅವರು ಕನ್ನಡ ಪರ ಕೆಲಸಗಳಿಗಾಗಿ ರಾಜ್ಯಾದ್ಯಂತ ಸುತ್ತಿದ್ದೂ ಕೂಡ ದೇಹ ಹಾಳಾಗಲು ಕಾರಣವಾಗಿತ್ತು ಎನ್ನುವುದೇನೂ ಸುಳ್ಳಲ್ಲ.

ಅನಕೃ ಹುಟ್ಟಿದ್ದು 9_5_1908ರಲ್ಲಿ, ನರಸಿಂಗರಾವ್ ಹಾಗೂ ಅನ್ನಪೂರ್ಣಮ್ಮ ದಂಪತಿಗಳ ಮಗನಾಗಿ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಣ ಕೋಲಾರದಲ್ಲಿ ಹಾಗೂ ಪ್ರೌಢಶಾಲಾ ಶಿಕ್ಷಣ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುವಾಗಲೇ ಶಾಂತಿನಿಕೇತನಕ್ಕೆ ಹೋಗಿ ಬಂದಿದ್ದರು.
ಪಠ್ಯ ಪುಸ್ತಕಗಳ ಗಣಿತ ಹಾಗೂ ಭೂಗೋಳ ಕಬ್ಬಿಣದ ಕಡಲೆಯಾಗಿದ್ದ ಇವರಿಗೆ ಕನ್ನಡ ಹಾಗೂ ಇಂಗ್ಲೀಷ್ ಕಥೆ ಕಾದಂಬರಿಗಳೆಂದರೆ ಪಂಚ ಪ್ರಾಣ. Sslc ಯಲ್ಲಿ ಒಮ್ಮೆ ನಪಾಸಾಗಿದ್ದ ಅನಕೃ ಅವರು ಮತ್ತೊಮ್ಮೆ ಬರೆದು ಪಾಸಾಗಿದ್ದರು. ಮುಂದೆ ಎಂಟ್ರೆನ್ಸ್ ತರಗತಿಗೆ ಸೇರಿದ ಅವರು ಸಾರ್ವಜನಿಕ ಗ್ರಥಾಲಯಗಳಿಗೆ ನಿತ್ಯವೂ ಹೋಗಿ ತಮ್ಮಿಷ್ಟದ ವಿಷಯಗಳ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರು. ಕಾಲೇಜು ವಿದ್ಯಾಭ್ಯಾಸವನ್ನು ಪಡೆಯದ ಅನಕೃ ಮೈಸೂರಿಗೆ ಹೋದಾಗಲೆಲ್ಲ ತಮ್ಮ ಅಣ್ಣನವರ ಜೊತೆಯಲ್ಲಿ ಬಿಎಂಶ್ರೀ ಅವರ ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಹಾಗೆಯೇ ಅರಮನೆಯ ಸಂಗೀತ ಕಾರ್ಯಕ್ರಮಗಳಿಗೆ ತಪ್ಪದೆ ಹೋಗುತ್ತಿದ್ದರು.
1931 ರಲ್ಲಿ ಹೈದರಾಬಾದ್ ನ ಪ್ರೊಫೆಸರ್ ಕೃಷ್ಣಸ್ವಾಮಿ ಅವರ ಮಗಳು ವಿಶಾಲಾಕ್ಷಿ ಅವರೊಡನೆ ವಿವಾಹವಾಯಿತು. ಪತ್ನಿಗೆ ವಸಂತಾದೇವಿ ಎಂದು ಮರು ನಾಮಕರಣ ಮಾಡಿದರು. ಆಕೆ ಕೂಡ ಕೆಲವು ಕಾದಂಬರಿಗಳನ್ನು ರಚಿಸಿದ್ದಾರೆ.
ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನಕೃ ಅವರು ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವ ವಾಣಿ ಪತ್ರಿಕೆಗಳನ್ನು ನಡೆಸಿದರು. ಬಿಎಂಶ್ರೀ ಅವರ ಕಾಲದಲ್ಲಿ “ಕನ್ನಡ ನುಡಿ”ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.
ಸಂಯುಕ್ತ ಕ್ರಾಂತಿದಳ ಎನ್ನುವ ಹೆಸರಿನಲ್ಲಿ ಸಮಾನ ಮನಸ್ಕರನ್ನೂ ಸೇರಿಸಿಕೊಂಡು ಪರಭಾಷಿಕರಿಂದ ಕನ್ನಡಿಗರಿಗೆ ಆಗುತ್ತಿದ್ದ ತೊಂದರೆಗಳನ್ನು ತಡೆಯುವ ಸಲುವಾಗಿ ಹೋರಾಡುತ್ತಿದ್ದರು. ಕನ್ನಡ ಚಳುವಳಿ ನೇತಾರರಾಗಿ “ರಾಮಮೂರ್ತಿ”ಅವರೊಡನೆ ಸೇರಿ ಕನ್ನಡಿಗರಲ್ಲಿ ಜನ ಜಾಗೃತಿ ಮೂಡಿಸಿ ಕನ್ನಡಾಭಿಮಾನ ಬೆಳಸಿದರು.
ಮೈಸೂರು ವಶ್ವವಿದ್ಯಾನಿಲಯ 1970ರಲ್ಲಿ ಗೌರವ ಡಾಕ್ಟರಟ್ ನೀಡಿ ಸನ್ಮಾನಿಸಿತ್ತು. ಸಾಹಿತ್ಯ ಪರಿಷತ್ತು 1960 ರಲ್ಲಿ ಮಣಿಪಾಲ್ ನಲ್ಲಿ ನಡೆದ 42ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು.
ನಿರ್ದಾಕ್ಷಿಣ್ಯ ಸ್ವಭಾವದ ಅನಕೃ ಯಾರನ್ನು ಕಾರಣವಿಲ್ಲದೆ ಹೊಗಳುವುದು, ತೆಗಳುವುದು ಮಾಡುತ್ತಿರಲಿಲ್ಲ. ಇವರು ಸಾಹಿತ್ಯದಲ್ಲಿ ಹೆಸರು ಮಾಡಿದ್ದರಿಂದ, ಇವರು ಊರಿಗೆ ಬರುತ್ತಾರೆ ಎಂದರೆ ಇವರನ್ನು ನೋಡಲು ಅಕ್ಕ ಪಕ್ಕದ ಊರುಗಳಿಂದ ಜನ ಬರುತ್ತಿದ್ದರು. ಇವರ ಭಾಷಣ ಕೇಳಲು ಜನ ಕಿಕ್ಕಿರಿದು ಸೇರುತ್ತಿದ್ದರು. ಅವರ ಭಾಷಣಗಳಲ್ಲಿ ಅಧ್ಯಯನ, ಕನ್ನಡ ನಾಡು ನುಡಿಯ ಮೇಲಿನ ಅಭಿಮಾನ ಪ್ರೇಮ ಎಲ್ಲವೂ ಮೇಳೈಸಿರುತ್ತಿತ್ತು.
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸಭೆಯೊಂದರಲ್ಲಿ “ನಾನು ತಮಿಳು ಕನ್ನಡಿಗ, ಮಿರ್ಜಾ ಇಸ್ಮಾಯಿಲ್ಲರು ಮುಸ್ಲಿಂ ಕನ್ನಡಿಗರು, ಅನಕೃ ಅಚ್ಚ ಕನ್ನಡಿಗರು ” ಎಂದರಂತೆ. ಇದೇ ಮಾಸ್ತಿಯವರನ್ನು ಕುರಿತು ಒಮ್ಮೆ ಸಭೆ ಒಂದರಲ್ಲಿ ಮೂರೂವರೆ ಘಂಟೆ ನಿರರ್ಗಳವಾಗಿ ಮಾತನಾಡಿದ್ದರು ಅನಕೃ. ನಂತರ ಅದೆಷ್ಟೋ ದಿನಗಳ ವರೆಗೆ ಮಾಸ್ತಿಯವರು ಇವರು ನನ್ನನ್ನು ಕುರಿತು ಮೂರೂವರೆ ಘಂಟೆ ಮಾತನಾಡಿದ್ದಾರೆ ಎಂದು, ಒಂದಿಷ್ಟು ಆಶ್ಚರ್ಯದಿಂದ, ಒಂದಿಷ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ಎಂದು ಅನಕೃ ಅವರೇ ಹೇಳಿದ್ದಾರೆ.
ಚದುರಂಗರು ತಾವು ಬರೆದ ಮೊದಲ ಕಥಾಸಂಕಲನದ ಹಸ್ತಪ್ರತಿಯನ್ನು ಖ್ಯಾತ ಸಾಹಿತಿ ಒಬ್ಬರಿಗೆ ಕೊಟ್ಟು ಮುನ್ನುಡಿ ಬರೆದು ಕೊಡಲು ಕೇಳಿದರಂತೆ, ಆದರೆ ಅವರು ನನಗೆ ಅಷ್ಟೊಂದು ಸಮಯವೂ ಇಲ್ಲ , ತಾಳ್ಮೆಯೂ ಇಲ್ಲ ತೆಗೆದುಕೊಂಡು ಹೋಗಿ ಎಂದರಂತೆ. ಆಗ ಚದುರಂಗರು ಅನಕೃ ಅವರ ಹತ್ತಿರ ಹೋಗಿ ಕೊಟ್ಟಿದ್ದಾರೆ. ಅದನ್ನು ಓದಿದ ಅನಕೃ ಚದುರಂಗರ ಬರವಣಿಗೆಯನ್ನು ಹೊಗಳಿ, ಬೆನ್ನುತಟ್ಟಿ ಮುನ್ನುಡಿ ಬರೆದು ಕೊಟ್ಟಿದ್ದರಂತೆ. ಅಂದು ಅನಕೃ ಅವರೂ ಖ್ಯಾತ ಸಾಹಿತಿಗಳಂತೆ ಮಾಡಿದ್ದರೆ, ಚದುರಂಗರ ಸಾಹಿತ್ಯ ಕನ್ನಡಿಗರಿಗೆ ಸಿಗುತ್ತಿರಲಿಲ್ಲವೇನೋ.
ಕ್ಯಾಲಿಫೋರ್ನಿಯಾದಲ್ಲಿ ಓದಿ ಕನ್ನಡ ಪತ್ರಿಕೋದ್ಯಮವನ್ನ ಶ್ರೀಮಂತ ಗೊಳಿಸಿದ ಪಾಪು ಅರ್ಥಾತ್ ಪಾಟೀಲ್ ಪುಟ್ಟಪ್ಪನವರು ಅನಕೃ ಕುರಿತು ಹೇಳಿದ ಮಾತುಗಳು ಇವು. ಬರಹಗಾರರು ಸಿಕ್ಕುತ್ತಾರೆ ಆದರೆ ಅನಕೃ ಅಂತಹ ಬರಹಗಾರರು ಸಿಗುವುದಿಲ್ಲ, ಸ್ನೇಹಿತರು ಸಿಕ್ಕುತ್ತಾರೆ ಆದರೆ ಅನಕೃ ಅಂತಹ ನಿರಪೇಕ್ಷ ಸ್ವಭಾವದ ಸ್ನೇಹಿತರು ಸಿಗುವುದಿಲ್ಲ, ಮಾರ್ಗದರ್ಶಿ ಸಿಕ್ಕುತ್ತಾರೆ ಆದರೆ ಅನಕೃ ಅಂತಹ ಹಿತಚಿಂತಕ ಮಾರ್ಗದರ್ಶಿ ಸಿಕ್ಕುವುದಿಲ್ಲ. ಅಭಿಮಾನಿಗಳೂ ಸಿಕ್ಕುತ್ತಾರೆ ಆದರೆ ಅನಕೃ ಅಂತಹ ಕನ್ನಡದ ಅಭಿಮಾನಿ ಸಿಕ್ಕುವುದಿಲ್ಲ. ಅನಕೃ ಸದಾ ಸರ್ವದಾ ಅವಿಸ್ಮರಣೀಯರು ಎಂದು ಹೇಳಿದ್ದಾರೆ.

ಫೋಟೋ ಕೃಪೆ : google
ಇವರ ಕನ್ನಡ ಪರ ಹೋರಾಟದ ಫಲವಾಗಿ ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದಲ್ಲಿ ಪ್ರಥಮ ಬಾರಿಗೆ ೧೯೬೩ರಲ್ಲಿ ಜಿ..ವಿ. ಆಯ್ಯರ್ ಅವರ ನಿರ್ದೇಶನದ ಕನ್ನಡ ಚಲನಚಿತ್ರ “ಬಂಗಾರಿ” ಪ್ರದರ್ಶನ ಆಗಿದ್ದು. “ತುಂಬಿದ ಕೊಡ” ಎನ್ನುವ ಚಿತ್ರದಲ್ಲಿ ಅನಕೃ ಅವರು ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಆಗೆಲ್ಲ ಹಾಡುಗಾರಿಕೆಗೆ ಬೇರೆ ಬೇರೆ ರಾಜ್ಯಗಳಿಂದ ಸಂಗೀತಗಾರರನ್ನು ಕರೆಸುವ ವಾಡಿಕೆ ಇತ್ತು. ಅದನ್ನು ಬದಲಾಯಿಸಿ ಕನ್ನಡಿಗರಿಂದ ಹಾಡಿಸುವಂತೆ ಒತ್ತಾಯ ಮಾಡಿದ್ದು, ಹಾಗೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿ ಅದ ಹೆಗ್ಗಳಿಕೆ ಕೂಡ ಅನಕೃ ಅವರದ್ದು. ಇದೆ ವಿಷಯಕ್ಕಾಗಿ ಸ್ವಂತ ಅಣ್ಣನನ್ನೆ ಎದುರು ಹಾಕಿಕೊಂಡಿದ್ದರು ಇವರು.
ಅನಕೃ ಅವರು ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ ಎಂದು ಖ್ಯಾತ ಕಾದಂಬರಿಕಾರ ನಿರಂಜನ ಅವರು ಹೇಳಿದ್ದಾರೆ.
ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡಲ್ಲೇ ಬರೆದು, ಕನ್ನಡಕ್ಕಾಗಿ ಹೋರಾಡಿ, ಕನ್ನಡವನ್ನೇ ಉಸಿರಾಡುತ್ತಿದ್ದ ಅನಕೃ ಅವರ ಉಸಿರು ನಿಂತದ್ದು ಅವರ 63ನೆಯ ವಯಸ್ಸಿನಲ್ಲಿ 8_7_1971 ರಂದು. ಅಂದು ಕರ್ನಾಟಕದ ಬಹುಭಾಗದಲ್ಲಿ ಸ್ವಯಂ ಘೋಷಿತ ಬಂದ್ ಆಚರಿಸಿ, ಅಂತಿಮ ಗೌರವ ಸಲ್ಲಿಸಿತ್ತು. ಇವರ ಪಾರ್ಥಿವ ಶರೀರ ನೋಡಲು ಬಂದಿದ್ದ ಜನಸಾಗರವನ್ನು ಕಂಡ ಜೆ.ಪಿ.ರಾಜರತ್ನಂ ಅವರು “ಇಂಥ ಅಂತಿಮ ಗೌರವ ಕರ್ನಾಟಕದಲ್ಲಿ ಯಾರಿಗೂ _ಯಾವ ಸಾಹಿತಿಗೂ ಸಿಗಲಿಲ್ಲ. ಇಂಥ ಗೌರವಯುತ ಸಾವು ಸಿಗುವುದಾದರೆ ಯಾವ ಸಾಹಿತಿಯೂ ಸಾಯಲು ಸಿದ್ದವಾಗಬಹುದು” ಎಂದು ಮಾರ್ಮಿಕವಾಗಿ ನುಡಿದಿದ್ದರು ಎನ್ನಲಾಗಿದೆ.
ಅನಕೃ ಸಾಹಿತ್ಯ ಲೋಕದ ನಕ್ಷತ್ರ. ಅವರು ನಮ್ಮನ್ನು ಆಗಲಿ 53 ವರ್ಷಗಳೇ ಆದರೂ ಅವರ ಕೃತಿಗಳನ್ನು ಇಂದಿಗೂ ಜನತೆ ಓದುತ್ತಿದ್ದಾರೆ, ಅವರ ಪುಸ್ತಕಗಳು ಮತ್ತೆ ಮತ್ತೆ ಮುದ್ರಣ ಆಗುತ್ತಿವೆ ಎಂದರೆ ಇದಕ್ಕೆಲ್ಲ ಆ ಮಹಾನ್ ಚೇತನದ ಬರವಣಿಗೆಯ ಶಕ್ತಿಯೇ ಕಾರಣ. ಕಾರಣ ಏನೇ ಇರಲಿ ಅನಕೃ ಅವರು ಅಷ್ಟು ಬೇಗನೇ ನಮ್ಮನ್ನು ಅಗಲಬಾರದಿತ್ತು. ಇನ್ನಷ್ಟು ವರ್ಷ ಅವರು ಬದುಕಿದ್ದರೆ ಕನ್ನಡತಾಯಿಯ ಪ್ರಭೆ ಭೂಮಂಡಲದಲ್ಲಿ ಇನ್ನಷ್ಟು ಹೆಚ್ಚು ರಾರಾಜಿಸುತ್ತಿತ್ತು ಅನ್ನುವುದು ಮಾತ್ರ ಸತ್ಯ.
- ವಸಂತ ಗಣೇಶ್
