ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಸುಮಾರು ೧೪೫ ಕಿಲೋಮೀಟರ್ ದೂರದಲ್ಲಿ ಸೋಮನಾಥಪುರದ ಕೇಶವ ದೇವಾಲಯ ಸಿಗುವುದು ಅಲ್ಲಿನ ಪ್ರಶಾಂತವಾದ ವಾತಾವರಣ. ಅಲ್ಲಿಯ ಮಹಿಮೆಯ ಕುರಿತು ಕವಿಯತ್ರಿ ಸಂಧ್ಯಾ ಟಿ ಅವರು ಲೇಖನ ಹಾಗೂ ಕವನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಭಗವಂತನು ಕೊಟ್ಟ ಈ ಸಾಧನ ಶರೀರವೇ ಒಂದು ದೇವಾಲಯ. ಪರಮಾತ್ಮನು ಇದರಲ್ಲಿ ಬಿಂಬನಾಗಿರುವನು. ನಾವೆಲ್ಲ ಪ್ರತಿಬಿಂಬರು. ವಾಯುದೇವರ ಅವತಾರತ್ರಯರಾದ ಹನುಮ,ಭೀಮ, ಮಧ್ವಾಚಾರ್ಯರು.
ಹನುಮಂತ ದೇವರಿಗೆ ಮಾತರಿಶ್ವ, ಮುಖ್ಯ ಪ್ರಾಣ ಎಂದೂ ಹೆಸರು.ಏಕೆಂದರೆ ಒಂದು ಘಳಿಗೆಯೂ ಬಿಡದೆ ಶ್ವಾಸೋಚ್ಛ್ವಾಸಗಳನ್ನು ಬೇಸರಿಸದೆ ಮಾಡುವರು ಮುಖ್ಯಪ್ರಾಣದೇವರು. ಅಕ್ಷರ ಪ್ರತಿಪಾದ್ಯನಾದ ಪರಮಾತ್ಮನ ಪ್ರೀತಿಪಾತ್ರನು ನಮ್ಮನ್ನು ತಾಯಿಯಂತೆ ಸಲಹುವನು. ಕಾರಣ ಮಾತರಿಶ್ವ ಎಂದು ಹೆಸರು. ಭೀಮಸೇನ ಹರಿ ಸ್ಮರಣೆಯಿಂದಲೇ ಎಲ್ಲ ಕರ್ಮಗಳನ್ನು ಮಾಡಿದವನು. ಅಕ್ಷರಗಳಲ್ಲಿ ಜ್ಞಾನ ಶಕ್ತಿ, ಭಕ್ತಿ ತುಂಬಿ ಜಗತ್ತಿಗೆ ಅವುಗಳ ಮಹತ್ವ ವನ್ನು ತಿಳಿಸಿದವರು. ಇವರೆಲ್ಲ ಶ್ರೀ ಹರಿಯ ಆಜ್ಞೆಯನ್ನು ಪರಿಪಾಲಿಸುತ್ತ ಇವತ್ತಿಗೂ ಸರ್ವತ್ರದಲ್ಲಿ ನೆಲೆಸಿರುವರು. ಇವರೆಲ್ಲ ನಮ್ಮ ಶರೀರದಲ್ಲಿ ಇದ್ದಮೇಲೆ ಧರ್ಮ,ಅರ್ಥ,ಕಾಮ ಮೋಕ್ಷ ಈ ನಾಲ್ಕು ಪುರುಷಾರ್ಥಗಳಿಗೆ ದುರಾಸೆ ಮಾಡದೆ ಪರಮಾತ್ಮ ಕೊಟ್ಟ ಪುರುಷಾರ್ಥಗಳನ್ನು ಸಾಧನೆಗಾಗಿ ಉಪಯೋಗಿಸಿ ಈ ಶರೀರವನ್ನು ಸುಂದರವಾದ ಕಾಯಕಗಳಿಂದ ಗೋಡೆ ನಿರ್ಮಿಸಿ ದೇವರ ಆಧೀನದಲ್ಲಿಯೆ ಕೊಟ್ಟ ಸ್ವಾತಂತ್ರ್ಯ ಬಳಿಸಿ ಬದುಕನ್ನು ಸುಂದರವಾಗಿ ಮಾಡಿಕೊಳ್ಳಲು ಪ್ರಯತ್ನಿಸುವದೆ ಮಾನವೀಯತೆ.ಹೀಗೆ ಯಾಕೆ ಹೇಳಿದನೆಂದರೆ ಮೊನ್ನೆ ನಾವು ಸೋಮನಾಥಪುರ ಕೇಶವ ದೇವಸ್ಥಾನಕ್ಕೆ ಹೋಗಿದ್ವಿ. ಅಲ್ಲಿಯ ವಾತಾವರಣ ನೋಡಿ ಮನಸ್ಸು ತುಂಬಾ ಪ್ರಫುಲ್ಲ ವಾಗಿ ಈ ಯೋಚನೆಗಳು ಮನಸ್ಸಿನಲ್ಲಿ ಬಂದವು.ಈ ಅಕ್ಷರಸಮೂಹಗಳನ್ನು ಶಾಲಿನಿ ಪ್ರದೀಪ ಅವರಿಗೆ ಕಳಿಸುತ್ತೇನೆ.ಅವರು ನಿಮಗೆ ಸರಿಯಾಗಿ ತಿಳಿಸುತ್ತಾರೆ.

ಫೋಟೋ ಕೃಪೆ : ಗೂಗಲ್
ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಸುಮಾರು ೧೪೫ ಕಿಲೋಮೀಟರ್ ದೂರದಲ್ಲಿ ಸೋಮನಾಥಪುರ ಬರುವುದು. ಅಲ್ಲಿ ಕೇಶವ ದೇವಾಲಯ ಪ್ರಶಾಂತವಾದ ಸ್ಥಳ. ದೇವಾಲಯದ ಹೊರಗಡೆ ಆವರಣಕ್ಕೆ ಚಿಕ್ಕದಾದ ಗೇಟ ಇರುವುದು. ಒಳಗೆ ಹೋದ ತಕ್ಷಣ ದೊಡ್ಡದಾದ ಚಿಗುರೆಲೆಯ ಮರ. ಮಧ್ಯಾಹ್ನ ಎರಡು ಗಂಟೆಯ ಸಮಯ ಸುಂದರ ತಾಣ. ಆ ಮರವು ನೂರಾರು ಜನರಿಗೆ ನೆರಳನ್ನು ಒದಗಿಸುವ ಮರ. ಆ ಮರವನ್ನು ನೋಡಿದ ತಕ್ಷಣ ಈ ದೇವಾಲಯವನ್ನು ನಿರ್ಮಿಸಲು ಎಷ್ಟು ಜನರು ಸಹಾಯ ಮಾಡಿದ್ದಾರೋ ಅವರೆಲ್ಲರೂ ಯಾತ್ರಿಕನನ್ನು ಒಳಗೆ ಬನ್ನಿರಿ ಎಂದು ಕರೆದಂತೆ ಭಾಸವಾಯಿತು. ಸ್ವಲ್ಪ ಮುನ್ನಡೆದರೆ ಮತ್ತೊಂದು ದೊಡ್ಡದಾದ ಮರ ಎರಡು ಮರಗಳು ವಂಶಾವಳಿಯನ್ನು ತೋರಿಸುವ ವೃಕ್ಷಗಳಂತೆ ಇರುವುವು.
ಮುಂದುಗಡೆ ದೇವಾಲಯದ ದ್ವಾರ ಬಾಗಿಲು ಮುಂದೆ ಜಯ ವಿಜಯರು ಶಾಂತ ಚಿತ್ತದಿಂದ ನಿಂತಿರುವರು. ಮಹಾದ್ವಾರದಮೇಲೆ ಗೋಡೆಗಳ ಮೇಲೆ ಸುಂದರವಾದ ಸೂಕ್ಷ್ಮವಾದ ಕೆತ್ತನೆಯ ಕೃತಿಗಳನ್ನು ನೋಡಿದರೆ ನಾವು ಸಮಾಜದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ವಿಚಾರ ಬರುವದು.ಆ ವಿಚಾರ ದೊಂದಿಗೆ ಹೊಸ್ತಿಲು ದಾಟಿ ಒಳಗೆ ಹೋದರೆ ಎಡಗಡೆಗೆ ಚಪ್ಪಟೆಯಾದ ಕಲ್ಲಿನ ಶಾಸನ ಸಿಗುವುದು. ೨ರಿಂದ ೮ ಮೀಟರ ಇರಬಹುದು. ಸಾಮಾನ್ಯವಾಗಿ ಶಾಸನ ಮೇಲು ಭಾಗದಲ್ಲಿ ಕಮಾನಿನ ಆಕಾರದಲ್ಲಿ ದೇವಾಲಯದ ಮೂರು ಪ್ರಮುಖ ದೇವರ ಉಬ್ಬು ಚಿತ್ರ ಗಳನ್ನು ಕೆತ್ತಲಾಗಿದೆ.ಶಾಸನಗಳಲ್ಲಿ ನಾಲ್ಕು ವಿಚಾರಗಳನ್ನು ತಿಳಿಸಿರುವರು.ಎರಡು ಹೊಯ್ಸಳ ರಾಜ ಮೂರನೆ ನರಸಿಂಹನಿಗೆ ಸೇರಿದ್ದು. ಉಳಿದೆರಡು ಬಲ್ಲಾಳನ ಆಳ್ವಿಕೆಯ ಸಂಬಂಧಿಸಿದವಗಳಾಗಿವೆ. ಮೊದಲನೆಯ ಶಾಸನ ಹಳೆಗನ್ನಡ ಹಾಗೂ ಸಂಸ್ಕೃತ ಭಾಷೆಯಲ್ಲಿವೆ. ಉಳಿದವುಗಳು ಕನ್ನಡದಲ್ಲಿವೆ. ಕ್ರಿಸ್ತಿ ಶಕ ೧೨೬೮, ೧೨೭೬, ೧೩೦೦, ಕೊನೆಯದು ೧೩೨೬. ಇದರ ಮುಂದುಗಡೆ ಸ್ಮಾರಕವಿದೆ.

ಫೋಟೋ ಕೃಪೆ : ಗೂಗಲ್
(ವಿಶ್ವ ಪರಂಪರೆಯ ಸ್ಮಾರಕ ಹೊಯ್ಸಳ ದೇಗುಲಗಳ ಪವಿತ್ರ ಸಮುಚ್ಚಯ ಹೊಯ್ಸಳರ ಈ ಪವಿತ್ರ ಸ್ಮಾರಕಗಳನ್ನು ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರ್ಪಡಿಸಲಾಗಿದೆ.ವಿಶ್ವ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದ ಸಾಂಸ್ಕೃತಿಕ ಅಥವಾ ನೈಸರ್ಗಿಕ ಪರಂಪರೆಯ,೨೦೨೩ಸೆಪ್ಟಂಬರದ ಸಮಾವೇಶದಲ್ಲಿ ದಾಖಲಿಸಿರುವ ಈ ಸ್ಮಾರಕಗಳು ಎಲ್ಲಾ ಮಾನವೀಯತೆಯ ಪ್ರಯೋಜನಕ್ಕಾಗಿ ಸಂರಕ್ಷಣೆಗೆ ಆಹ೯ವಾದ ಸಾಂಸ್ಕೃತಿಕ ಅಥವಾ ನೈಸರ್ಗಿಕ ತಾಣವಾಗಿ ಅಸಾಧಾರಣ ಸಾರ್ವತ್ರಿಕ ಮೌಲ್ಯವನ್ನು ಧೃಡೀಕರಿಸುತ್ತವೆ.)
ಒಳಗಿನ ಪ್ರಾಕಾರದಲ್ಲಿ ಸುತ್ತಲೂ ಕಟ್ಟೆಯ ಆವರಣ ಅಲ್ಲಿ ಚಿಕ್ಕ ಚಿಕ್ಕ ಕೋಣೆ ಆರೇಳು ಕೋಣೆಗಳಲ್ಲಿ ಲಕ್ಷ್ಮೀ ದೇವಿ, ಸರಸ್ವತಿ, ವರಾಹ ದೇವರು ಭೂದೇವಿ, ನರಸಿಂಹ ಲಕ್ಷ್ಮೀ ದೇವಿ, ದುರ್ಗಾದೇವಿ ಗೊಮ್ಮಟೇಶ್ವರ,ಬುದ್ಧ ಹೀಗೆ ಮೂರ್ತಿಗಳಿವೆ.ಗರ್ಭಗುಡಿಯ ಮೆಟ್ಟಿಲು ಹತ್ತಿ ಹೊಸ್ತಿಲು ದಾಟಿದ ನಂತರ ಹಾಸುಕಲ್ಲಿನ ಮೇಲೆ ಚಿಕ್ಕ ಮುಖ್ಯಪ್ರಾಣದೇವರ ಕೈ ಮುಗಿದು ನಿಂತಿರುವ ಮೂರ್ತಿ.ಎದುರಗಡೆಗೆ ಕೇಶವ ದೇವರ ಮೂರ್ತಿ.ಪೂಜೆಯಿಲ್ಲ , ನೈವೇದ್ಯ ಇಲ್ಲ. ಹಾಸುಕಲ್ಲಿನ ಮೇಲಿದ್ದ ಹನುಮಂತ ದೇವರ ಹಾಗೂ ಕೇಶವ ದೇವರನ್ನು ನೋಡಿದಾಕ್ಷಣ ಆತ್ಮ ಪರಮಾತ್ಮನ ಸಂಹಿತೆಯ ಈ ದೇಹವು ಒಂದು ಮಂದಿರ ಎಂದು ವಿಚಾರಬರದೇ ಇರುವದಿಲ್ಲ. ಬಂದ ಭಕ್ತರ ಮಾತುಗಳನ್ನು,ಮನಸ್ಸಿನೊಳಗಿನ ವಿಚಾರಗಳನ್ನು ಆಲಿಸುತ್ತ ನಿನ್ನ ಯೋಗ್ಯತೆಗೆ ತಕ್ಕ ಫಲ ನೀಡುವೆ ಎಂದು ಅಭಯ ಕೊಡುತ್ತ ಪ್ರಸನ್ನ ವದನದಿಂದ ನಿಲಿ೯ಪ್ತನಾಗಿ ಪರಮಪುರುಷೋತ್ತಮನು ನಿಂತಿರುವನು.
ಒಂದು ಭಾಗದಲ್ಲಿ ಗೋಪಾಲ ಕೃಷ್ಣನು ಕೊಳಲು ಸಮೇತ ನಿಂತಿರುವ ಮೂರ್ತಿ. ಸುತ್ತಲೂ ಪೀಠದ ಮೇಲೆ ಅಕ್ಷರಗಳ ಪ್ರತೀಕವಾದ ಗೋವುಗಳ ಚಿತ್ರಕಲೆ. ಇದು ಭಕ್ತಿಯ ರಹಸ್ಯ. ಇನ್ನೊಂದು ಕಡೆಗೆ ನಾರಾಯಣನು (ಪೂತಾತ್ಮ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿ:) ಎನ್ನುವ ರೀತಿಯಲ್ಲಿ ಪ್ರಸನ್ನಾಗಿರುವನು. ಆ ಪರಿಸರದ ವಾತಾವರಣ ವೀಕ್ಷಿಸುತ್ತಿದ್ದರೆ ದೇವರ ವ್ಯಾಪ್ತಿ ಎಲ್ಲಿ, ಎಷ್ಟು ಕೇಳುವ ಹಾಗೆ ಇಲ್ಲ. (ಎಲ್ಲರೊಳು ತಾನಿಪ್ಪ ತನ್ನೊಳಗೆಲ್ಲರನು ಧರಿಸಿಹನು) ಶ್ರೀ ಜಗನ್ನಾಥದಾಸರ ಈ ಮಾತು ಅಕ್ಷರಶಃ ಸತ್ಯ. ಈದೇವಾಲಯವನ್ನು ನೋಡಿಕೊಳ್ಳಲು ಜನರಿರುವರು. ಅವರಲ್ಲಿ ಮಾಹಿತಿ ಪುಸ್ತಕ ವಿಚಾರಿಸಿದರೆ ಮೈಸೂರಲ್ಲಿ ಸಿಗುವುದು ಎಂದರು. ಈ ದೇವಾಲಯ ನೋಡಿದರೆ ಪಂಚಭೂತಗಳಾದ ಭೂಮಿ, ಜಲ, ಅಗ್ನಿ ವಾಯು, ಆಕಾಶ ಹಾಗೂ ಪಂಚಾಗ್ನಿಗಳಾದ ಜನನಿ, ಜನಕ, ಭೂ, ಜಲ, ಆಕಾಶ ಎಲ್ಲವೂ ನೆನಪಿಗೆ ಬರುವುದು. ಆದರೆ ಹೊರ ಜಗತ್ತಿನಲ್ಲಿ ಹಿರಣ್ಯಕಶಿಪುವಿನ ಆವೇಶದಿಂದ ಪರಮಾತ್ಮನ ಮರವು ಆಗಿದೆ ಎಂದು ಅನಿಸುತ್ತಿದೆ. ಯಾವ ಅಕ್ಷರದಲ್ಲಿ, ಜಾತಿ ಧರ್ಮದಲ್ಲಿ ದೋಷವಿಲ್ಲ. ದೋಷವಿದೆ ದಾನವನ ಆವೇಶವಿರುವ ಮಾನವನಲ್ಲಿ. ಜಾಹಿರಾತಗಾಗಿಯಾರ ಫೋಟೋ ಉಪಯೋಗಿಸದೆ ಕೃತಿಗಳಿಗೆ ತತ್ವವನ್ನು ಉಪಯೋಗಿಸಿ ಗುರು ಹಿರಿಯರಿಗೆ ಗೌರವ ಸೂಚಿಸಲು ಸಂದೇಶ ಕೊಡುತ್ತದೆ ಈ ದೇವಾಲಯ.
ಅನುಬಂಧ
ಪರಮಾತ್ಮನ ಶಯ್ಯೆ ಆದಿಶೇಷ
ಜೀವಾತ್ಮನ ಶಯ್ಯೆ ಕರ್ಮಶೇಷ
ಸತ್ಯ ಕರ್ಮ ಸಂಹಿತೆ ಸಂಬಂಧ
ನಿತ್ಯ ನೂತನ ಪರಿಮಿತಾನುಬಂಧ
ಪ್ರೀತಿ ನೀತಿಯ ಸಂಬಂಧದ ಕುರುಹು
ಭಕ್ತಿ ಶೃದ್ಧೆ ಬೇಕದಕೆ ಗುರುವು
ನುಡಿ ಶ್ರವಣ ಅಗ್ನಿ ಜಲ ಸಂಬಂಧ
ನಡೆ ನೀತಿ ತೀರ್ಥಯಾತ್ರೆ ಸಂಬಂಧ
ರುಚಿ ಶುಚಿ ರಸ ಜಲ ಸಂಬಂಧ
ಸೂಚಿಸುವ ಹರಿ ವಾಯು ಸಂಬಂಧ
ಶಾಸ್ತ್ರಬದ್ಧ ಯೋಚನೆಯೆ ಧ್ಯಾನ
ಅರ್ಥಬದ್ಧ ಕಾರ್ಯವೆ ಮಾನ್ಯ
ಸಾರ್ಥಕ ಪರಸುಖ ಮಹಾಪುಣ್ಯ
ಅಸ್ತ್ರವೆ ಕಾಣು ಅಶುಭ ಶೂನ್ಯ
ಎಂತಹ ಸುಂದರ ಅನುಬಂಧ
- ಸಂಧ್ಯಾ ಟಿ
