ಶ್ರೀಯುತ ಹೆಚ್.ಎಸ್.ವೆಂಕಟೇಶಮೂರ್ತಿಯವರು ರಚಿಸಿದ ಭಾವಗೀತೆ “ಆ ಕಪ್ಪು ಹುಡುಗಿ” ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
“ಆ ಕಪ್ಪು ಹುಡುಗಿ”
ಆ ನೀಲಿ ಕೊಳವನ್ನು ಪ್ರೀತಿಸುವೆ ನಾನು
ಅಲ್ಲೆ ಕಂಡಳು ನನಗೆ ಆ ಕಪ್ಪು ಹುಡುಗಿ ।। ಪಲ್ಲವಿ ।।
ಆ ಹೊನ್ನೆ ಮರವನ್ನು ಪ್ರೀತಿಸುವೆ ನಾನು
ಅಲ್ಲೆ ನಲಿದಾಡಿತ್ತು ಆ ಕಪ್ಪು ಹುಡುಗಿ ।। ೧ ।।
ಆ ಮುರುಕು ಮಂಟಪವ ಪ್ರೀತಿಸುವೆ ನಾನು
ಅಲ್ಲೆ ಒಲಿದಿತ್ತು ನನ್ನ ಆ ಕಪ್ಪು ಹುಡುಗಿ ।। ೨ ।।
ಆ ದೇವಕಣಿಗೆಲೆಯ ಪ್ರೀತಿಸುವೆ ನಾನು
ಅಲ್ಲೆ ಮಲಗಿದ್ದಾಳೆ ಆ ಕಪ್ಪು ಹುಡುಗಿ ।। ೩ ।।
ಶ್ರೀಯುತ ಹೆಚ್.ಎಸ್.ವಿ.ಯವರು ಅನೇಕ ಭಾವಗೀತೆಗಳನ್ನು ರಚಿಸಿದ್ದಾರೆ. ಅದರಲ್ಲಿ ನನಗೆ ಇಷ್ಟವಾದ ಕೃತಿಗಳಲ್ಲಿ “ಆ ಕಪ್ಪು ಹುಡುಗಿ” ಕೂಡ ಒಂದು. ಇದು ನನ್ನ ಗಮನ ಸೆಳಯಲು ಮುಖ್ಯ ಕಾರಣ ಅದರ ಸರಳ ರಚನೆ. ಇದೊಂದು ‘ಕವಿಮನ’ ಅರಿಯುವ ಪ್ರಯತ್ನ.
ಮೊದಲಿಗೆ ಶೀರ್ಷಿಕೆಯೇ “ಆ ಕಪ್ಪು ಹುಡುಗಿ” ಎಂದಿದೆ. “ಆ” ಹುಡುಗಿ ಎಂದರೆ, ಕವಿಯ ಮನಸ್ಸಿರುವ ಒಂದು ನಿರ್ದಿಷ್ಟ ಹುಡುಗಿ. ಆ ನಿರ್ದಿಷ್ಟ ಹುಡುಗಿಯ ಬಣ್ಣ “ಕಪ್ಪು” ಎಂದು ಮೊದಲಿಗೆ ಅರ್ಥಮಾಡಿಕೊಳ್ಳಬಹುದು. ಇಲ್ಲಿ ಗಮನ ಸೆಳೆಯುವುದು ಸೌಂದರ್ಯವೆಂದರೆ ಬಿಳಿಪಿನ ಮೈ ಚರ್ಮವೆಂದು ಸಾಮಾನ್ಯವಾಗಿ ಅನೇಕರು ಅಂದುಕೊಂಡಿರುವ ಸಮಯದಲ್ಲಿ ಕವಿ ‘ಕಪ್ಪು’ ಬಣ್ಣದ ಹುಡುಗಿಯ ಬಗ್ಗೆ ಹೇಳಲು ಹೊರಟಿರುವುದು ಗಮನ ಸೆಳೆಯುತ್ತದೆ.

ಆ ನೀಲಿ ಕೊಳವನ್ನು ಪ್ರೀತಿಸುವೆ ನಾನು
ಅಲ್ಲೆ ಕಂಡಳು ನನಗೆ ಆ ಕಪ್ಪು ಹುಡುಗಿ ।। ಪಲ್ಲವಿ ।।
ಪಲ್ಲವಿಯಲ್ಲಿ ಬರುವ ಮೊದಲ ಸಾಲನ್ನು ನೋಡೋಣ. ಇಲ್ಲಿ ಕೊಳ ಎಂದರೆ ಕೆರೆ ಎಂದುಕೊಳ್ಳಬಹುದು. ಈ ಕೊಳ ಶುದ್ಧವಾಗಿದ್ದರೆ, ಆ ಕೊಳದಲ್ಲಿ ಆಕಾಶದ ನೀಲಿ ಬಣ್ಣ ಪ್ರತಿಫಲಿಸಿ ಇಡೀ ಕೊಳವೇ ನೀಲಿ ಕೊಳದ ತರಹ ಕಾಣುತ್ತದೆ. ಇಲ್ಲಿ ಆಕಾಶ ಕೂಡ ಯಾವುದೇ ಮೋಡಗಳಿಲ್ಲದೆ ಶುದ್ಧ ನೀಲಿ ಬಣ್ಣವನ್ನು ತಳೆದಿರುತ್ತದೆ. ಆ ಕಪ್ಪು ಹುಡುಗಿ ಅಲ್ಲೇ ಕಂಡಿರುವುದರಿಂದ, ಆ ನೀಲಿ ಕೊಳವನ್ನು ಪ್ರೀತಿಸುತ್ತೇನೆ ಎಂದು ಕವಿ ಹೇಳಿರುವುದು ಮೊದಲ ನೋಟಕ್ಕೆ ಕಂಡುಬರುತ್ತದೆ. ಮೊದಲಿಗೆ ನಮ್ಮ ಪ್ರೀತಿ ಪಾತ್ರರು ಕಂಡ ಸ್ಥಳವನ್ನು ನೆನಪಿಟ್ಟುಕೊಂಡು ಆ ಸ್ಥಳದ ಬಗ್ಗೆ ಪ್ರೀತಿ ಇಟ್ಟುಕೊಳ್ಳುವುದು ಸಾಮಾನ್ಯ. ಆದರೆ ಇನ್ನೊಮ್ಮೆ ನೋಡಿದರೆ, ಕವಿ ಆ ಶುದ್ಧವಾದ ಕೊಳದಲ್ಲಿ ಆಕೆಯನ್ನು ನೋಡಿದ್ದಾರೆ. ಅಂದರೆ ಆಕೆ ಕೂಡ ಅಷ್ಟೇ ಶುದ್ಧ ಎಂದು ಹೇಳಲು ಈ ರೂಪಕ ಬಳಿಸಿದ್ದಾರೆ. ಆಕೆ ಹೊರಗೆ ಕಪ್ಪಾದರೂ ಒಳಗೆ ಶುದ್ಧ ಎಂದು ಹೇಳಿರುವುದು ಇಲ್ಲಿ ಕಾಣುತ್ತದೆ.
ಆ ಹೊನ್ನೆ ಮರವನ್ನು ಪ್ರೀತಿಸುವೆ ನಾನು
ಅಲ್ಲೆ ನಲಿದಾಡಿತ್ತು ಆ ಕಪ್ಪು ಹುಡುಗಿ ।। ೧ ।।
ಹೊನ್ನೆ ಮರ ಸಾಮಾನ್ಯವಾಗಿ ವಸಂತ ಮಾಸದಲ್ಲಿ ಹೊಸ ಚಿಗುರು ಬಂದು, ನಂತರ ಜೂನ್-ಆಗಸ್ಟ್ ತಿಂಗಳಲ್ಲಿ ಸುವಾಸಿತ ಹಳದಿಯ ಹೂಗೊಂಚಲುಗಳಿಂದ ಕೂಡಿರುತ್ತವೆ. ಆ ಜಾಗದಲ್ಲಿ ಆ ಹುಡುಗಿ ನಲಿದಾಡಿತ್ತು ಎಂದಿದ್ದಾರೆ. ಸಾಮಾನ್ಯವಾಗಿ ಅನೇಕ ಕವಿಗಳು “ಹೊಂಗೆ” ಮರವನ್ನು ತಮ್ಮ ಕವನಗಳಲ್ಲಿ ಬಳಸಿಕೊಂಡಿರುವುದು ನಾವು ನೋಡಿದ್ದೇವೆ. ಆದರೆ ಈ ಕವನದಲ್ಲಿ “ಹೊನ್ನೆ” ಮರವನ್ನು ಬಳಸಿರುವುದರ ವಿಶೇಷವೇನು ನೋಡೋಣ. ಸಾಮಾನ್ಯವಾಗಿ ಬೀಟೆ ಮರವನ್ನು ಮನೆಯ ಮೊದಲ ಬಾಗಿಲಿಗೆ ಉಪಯೋಗಿಸುತ್ತಾರೆ. ಒಳಗಡೆ ಬಾಗಿಲುಗಳಿಗೆ ಹೊನ್ನೆ ಮರವನ್ನು ಉಪಯೋಗಿಸುತ್ತಾರೆ. ಮನೆಯ ಒಳಗಡೆ ಬಾಗಿಲು ಎಂದರೆ ಮನದ ಒಳಗೆ ಬಂದು ನಲಿದಾಡಿದ್ದಾಳೆ ಎಂದು ಅರ್ಥ ಮಾಡಿಕೊಳ್ಳಬಹುದು.

ಖ್ಯಾತ ಕವಿ ಎಚ್ ಎಸ್ ವಿ ಅವರ ಜೊತೆಗೆ ಕವಿಯತ್ರಿ ಲಾವಣ್ಯ ಪ್ರಭಾ
ಆ ಮುರುಕು ಮಂಟಪವ ಪ್ರೀತಿಸುವೆ ನಾನು
ಅಲ್ಲೆ ಒಲಿದಿತ್ತು ನನ್ನ ಆ ಕಪ್ಪು ಹುಡುಗಿ ।। ೨ ।।
ಮುರುಕು ಮಂಟಪಕ್ಕೆ ಸಾಮಾನ್ಯವಾಗಿ ಊರಿಗೆ ಬಂದ ಭಿಕ್ಷುಕ, ಬಡವ, ಭೈರಾಗಿ ಈ ತರಹ ಇರುವಂತ ಜಾಗವೆಂದು ಅನೇಕ ಕಥೆಗಳಲ್ಲಿ ಬಂದಿರುವುದನ್ನು ನಾವು ನೋಡಿದ್ದೇವೆ. ಆದರೆ ಈ ಜಾಗದಲ್ಲಿ ಆ ಹುಡುಗಿ ಒಲಿದಿದ್ದಾಳೆ ಎಂದು ಕವಿ ಹೇಳಿದ್ದಾರೆ. ಸಾಮಾನ್ಯನಾದ ‘ನನಗೂ’ ಆಕೆ ಒಲಿದಿದ್ದಾಳೆ ಎಂದು ಕವಿ ಹೇಳಿದ್ದಾರೆ. ಇಲ್ಲಿ ಪ್ರಥಮ ಬಾರಿಗೆ ಕವಿ ‘ನನ್ನ’ ಹುಡುಗಿ ಎಂದಿದ್ದಾರೆ. ಇದು ಗಮನಾರ್ಹ.
ಆ ದೇವಕಣಿಗೆಲೆಯ ಪ್ರೀತಿಸುವೆ ನಾನು
ಅಲ್ಲೆ ಮಲಗಿದ್ದಾಳೆ ಆ ಕಪ್ಪು ಹುಡುಗಿ ।। ೩ ।।
ದೇವಕಣಿಗಿಲೆ ಹಳದಿ ಮಿಶ್ರಿತ ಬಿಳಿ ಹೂ. ಅಲ್ಲೇ ಆ ಹುಡುಗಿ ಮಲಗಿದ್ದಾಳೆ ಎಂದು ಕವಿ ಹೇಳಿದ್ದಾರೆ. ಇದು ಸಾಮಾನ್ಯ ಕಣಗಿಲೆ ಆಗಿರದೆ ದೇವ ಕಣಗಿಲೆ. ಆ ದೇವ ಕಣಗಿಲೆಯನ್ನು ಆಕೆಗೆ ಅರ್ಪಿಸಿದ್ದಾರೆ ಎಂದು ಕೊಳ್ಳಬಹುದು. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಹೊನ್ನೆ ಮರದ ಹೂ ಕೂಡ ಹಳದಿ. ಇದು ದೇವಕಣಿಗಲೆ ಹೂವಿನ ಬಣ್ಣದ ಹತ್ತಿರವಿದ್ದು, ಹಾಗಾಗಿ ಸಾಮ್ಯತೆ ಸಾಧಿಸಿರುವುದು ಕಾಣುತ್ತದೆ.

ಖ್ಯಾತ ಕವಿ ಎಚ್ ಎಸ್ ವಿ ಅವರ ಜೊತೆಗೆ ಖ್ಯಾತ ಪತ್ರಕರ್ತರಾದ ಶ್ರೀಧರ್ ಮೂರ್ತಿ
ಭಾವಗೀತೆಯು ವೈಯುಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಕಿರುಕವನ ಎಂದು ಸಾಮಾನ್ಯವಾಗಿ ಹೇಳುತ್ತಾರೆ. ಈ ಕವನದಲ್ಲಿ ಕವಿ ಆ ಹುಡುಗಿಯ ಬಗೆಗಿನ ಒಂದಿಷ್ಟು ವೈಯಕ್ತಿಕ ಭಾವನೆಗಳನ್ನು ಪ್ರೀತಿಸುವೆ, ನಲಿದಾಡಿತ್ತು, ಒಲಿದಿತ್ತು, ಮಲಗಿದ್ದಾಳೆ ಮುಂತಾದ ಪದಗಳಿಂದ ವ್ಯಕ್ತಪಡಿಸಿದ್ದಾರೆ. ಈ ಕವನದಲ್ಲಿ ಮೊದಲಿಗೆ ‘ಕಂಡಳು’ ಅಂದರೆ ‘ನೋಡಿದೆ’ ಎನ್ನುವಾಗ ಭಾವವೊಂದು ಉದಯಿಸಿದಂತೆ ಕಾಣುತ್ತದೆ. ‘ನಲಿದಾಡಿದಳು’, ‘ಒಲಿದಳು’ ಪದಗಳು ಭಾವಗಳು ಹರಳುಗೊಂಡು, ಹೊಳೆಯುತ್ತಾ ಇರುವುದನ್ನು ಕಾಣಬಹುದು. ನಂತರ ‘ಮಲಗಿದ್ದಳು’ ಎನ್ನುವಾಗ ಭಾವಗಳು ಮಡುಗಟ್ಟಿದಂತೆ ಕಾಣುತ್ತದೆ.
ಮೇಲುನೋಟಕ್ಕೆ ಇದೊಂದು ಕಿರು ಕವನವೆಂದುಕೊಂಡರೂ, ಜೀವನದ ಅನೇಕ ಸ್ಥಿತಿಗಳನ್ನು ಅಥವಾ ಹಂತಗಳನ್ನು ಹಾಯ್ದು ಹೋಗಿರುವುದನ್ನು ‘ಕಂಡಳು’, ನಲಿದಾಡಿದಳು’, ‘ಒಲಿದಿತ್ತು’, ‘ಮಲಗಿದ್ದಾಳೆ’ ಪದಗಳು ಸೂಚಿಸುತ್ತವೆ. ಹಾಗಾಗಿ ಈ ಕವನಕ್ಕೆ ಧೀರ್ಘಕವನದ ಮನೋಧರ್ಮ ಕೂಡ ಇದೆ. ಅಲ್ಪದಲ್ಲಿ ಕಲ್ಪವನ್ನು ಕೆತ್ತಿರುವುದನ್ನು ನಾವಿಲ್ಲಿ ಕಾಣಬಹುದು.
ಭಾವಗೀತೆಯ ಮತ್ತೊಂದು ಲಕ್ಷಣ ಅದು ಹಾಡಲು ಬರುವಂತಿರಬೇಕು. ಮೈಸೂರು ಅನಂತಸ್ವಾಮಿಯವರು ಸಂಗೀತ ಸಂಯೋಜನೆ ಮಾಡಿ ಈ ಕವನ ಹಾಡಿರುವುದು ಯೂಟ್ಯೂಬಿನಲ್ಲಿ ಲಭ್ಯವಿದೆ. ಅತ್ಯಂತ ಸುಶ್ರಾವ್ಯವಾಗಿ ಹಾಡಿದ್ದಾರೆ.
ಈ ಗೀತೆಯಲ್ಲಿ ಇಬ್ಬರು ಪಾತ್ರಧಾರಿಗಳು ಇದ್ದಾರೆ. ಮೊದಲನೇಯ ಪಾತ್ರ ಕವಿ. ಎರಡನೇ ಪಾತ್ರ ಕೇಳುಗ. ಆದರೆ ಕೇಳುಗ ಕೇವಲ ಕೇಳಿಸಿಕೊಳ್ಳುವುದು ಮಾತ್ರ , ಕೇಳುಗ ಇಲ್ಲಿ ಮಾತನಾಡುವುದಿಲ್ಲ.
ಆದರೆ ‘ಆ ಕಪ್ಪು ಹುಡುಗಿ’ ಯಾರು ಎಂಬ ಪ್ರಶ್ನೆಗೆ ಉತ್ತರ ನೇರವಾಗಿ ಸಿಗುವುದಿಲ್ಲ. ಇಲ್ಲಿ ಕವಿಯ ಮನೋಧರ್ಮ ತಿಳಿಯಲು ಬಹುಶಃ ಕವಿಯ ಇನ್ನಿತರ ಕೆಲವು ಕವನಗಳನ್ನಾದರೂ ನೋಡಬೇಕು ಅನಿಸಿತು. ಆಗ ಇವರ ಬಹು ಜನಪ್ರಿಯವಾದ ಒಂದು ಭಾವ ಗೀತೆ ನೆನಪಾಯಿತು.
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗು ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು ||
ಕವಿ ರಚಿಸಿದ ಈ ರೀತಿಯ ಕವನಗಳಲ್ಲಿ ರಾಧೆಯ ಮೂಲಕ ಕೃಷ್ಣನ ತಲುಪುವ ಪ್ರಯತ್ನ ಮಾಡಿದಂತೆ ಮತ್ತು ಅವರಿಬ್ಬರ ಪ್ರೀತಿಗೆ ಪ್ರಾಮುಖ್ಯತೆ ಕೊಟ್ಟ ಹಾಗೆ ಕಾಣುತ್ತದೆ. ರಾಧಾಕೃಷ್ಣರ ಪ್ರೀತಿ ಜಗಜ್ಜನಿತ. ಅವರಿಬ್ಬರೂ ಒಬ್ಬರ ಬಿಟ್ಟು ಇನ್ನೊಬ್ಬರಿಲ್ಲ. ಹಾಗಾಗಿ ಈ ಕವನದಲ್ಲಿ ಬರುವ “ಕಪ್ಪು” ಪದ ಮೇಘ ಶ್ಯಾಮನಾದ ಕೃಷ್ಣನ ಬಣ್ಣವೆಂದುಕೊಳ್ಳಬಹುದು. ಹಾಗಾದರೆ “ಹುಡುಗಿ” ಪದ ರಾಧೆಗೆ ಎಂದುಕೊಂಡಂತೆ ಆಗುತ್ತದೆ. ರಾಧೆ ಇದ್ದಲ್ಲಿ ಕೃಷ್ಣ ಇರುತ್ತಾನೆ. ಹಾಗಾಗಿ “ಆ ಕಪ್ಪು ಹುಡುಗಿ” ಕೃಷ್ಣನನ್ನು ತನ್ನೊಳಗೇ ಇಟ್ಟುಕೊಂಡಿರುವ ರಾಧೆ ಎಂದುಗೊಂಡಂತೆ ಆಯಿತು.
ಈ ಮೇಲಿನ ಭಾವನೆ ಇಟ್ಟುಕೊಂಡು ಮತ್ತೊಮ್ಮೆ ಕವನ ಓದಿದರೆ ಆ ನೀಲಿ ಕೊಳದ ಬಳಿ ಕಾಣುವ ಕಪ್ಪು ಹುಡುಗಿ ನೀರು (ಸಮುದ್ರ ), ಭೂಮಿ, ಆಕಾಶ ಎಂದು ಎಲ್ಲಾ ಕಡೆ ವ್ಯಾಪಿಸಿರುವ ರಾಧೆಯ ಜೊತೆ ಇರುವ ಕೃಷ್ಣನ ಬಗ್ಗೆ ಸೂಚ್ಯವಾಗಿ ಹೇಳಿದಂತೆ ಕಾಣಿಸುತ್ತದೆ. ದೇವರೇ ಕಾಣಿಸಿಕೊಂಡು, ಮನದಲ್ಲಿ ನಲಿದಾಡಿ, ಕುಚೇಲನ ಬಳಿಗೆ ಒಲಿದುಬಂದಂತೆ(ಮುರುಕು ಮಂಟಪ), ಬಂದು ಅಲ್ಲೇ ನೆಲೆ ನಿಂತಂತೆ ಕಾಣುತ್ತದೆ.
“ಈ ಕಪ್ಪು ಹುಡುಗಿ” ಪದಗಳಲ್ಲಿ ಇರುವ ಅಮೂರ್ತತೆಗೆ ಮೂರ್ತ ರೂಪಗಳನ್ನು ಕೊಡುವ ಶಕ್ತಿ ಈ ಕವನದ ಎರಡನೇಯ ಪಾತ್ರಧಾರಿಯಾದ ಕೇಳುಗನ ಯೋಚನೆಗಳ ಮೇಲೆ ಅವಲಂಬಿತವಾಗಿರುತ್ತದೆ. ಮೊದಲಿಗೆ ಸಾಮಾನ್ಯವಾಗಿವಾಗಿರುವ ಹುಡುಗಿಯೊಬ್ಬಳು ಕಂಡಳು, ಮನದಲ್ಲಿ ನಲಿದಾಡಿದಳು, ಒಲಿದಳು ಮತ್ತು ಈಗ ಮಲಗಿದ್ದಾಳೆ ಎಂದು ಕೊಳ್ಳುವುದರಿಂದ ಹಿಡಿದು ರಾಧೆ ಕೃಷ್ಣರವರೆಗೆ ರೂಪ ಕೊಡ ಬಹುದಾದರೆ, ಆ ಗೀತೆಯ ಶಕ್ತಿ ಅನಾವರಣವಾಗುತ್ತದೆ.
ಸುಮಾರು ಹತ್ತು, ಹನ್ನೆರಡು ವರ್ಷಗಳ ಹಿಂದೆ ‘ಈಟಿವಿ ‘ಯಲ್ಲಿ ಶ್ರೀಮತಿ ಅಪರ್ಣರವರು ‘ನನ್ನ ಹಾಡು ನನ್ನದು’ ಎಂಬ ಕಾರ್ಯಕ್ರಮ ಮಾಡುತ್ತಿದ್ದರು. ಆದರಲ್ಲಿ ಶ್ರೀಅನಂತಸ್ವಾಮಿಯವರ ಮಗ ಶ್ರೀರಾಜೂ ಅನಂತಸ್ವಾಮಿಯವರು ಈ ಹಾಡನ್ನು ಹೇಳುತ್ತಾ ‘ಅಲ್ಲೇ ನಲಿದಾಡಿತ್ತು’ ಸಾಲುಗಳನ್ನು ಹಾಡುವಾಗ ವಿವಿಧ ರೀತಿಯ ರಸಗಳನ್ನು ತೋರಿಸುತ್ತಾ, ಈ ಕವನದ ವಿಶೇಷತೆಯನ್ನು ತೋರಿಸಿದ್ದಾರೆ. “ಅಲ್ಲೇ ನಲಿದಾಡಿತ್ತು” ಎಂಬ ಎರಡು ಪದಗಳನ್ನು ಸಾಮಾನ್ಯವಾಗಿ ಹಾಡುವುದಕ್ಕೂ, “ಅಲ್ಲೇssss ನಲಿದಾಡಿತ್ತು” ಎಂದು ಹೇಳುವ ಪ್ರಯತ್ನ ಅಮೂರ್ತತೆಯನ್ನು ಮೂರ್ತರೂಪಕ್ಕೆ ಸಂಗೀತದ ಮೂಲಕ ಅಭಿವ್ಯಕ್ತಿಗೊಳಿಸುವ ಕ್ರಿಯೆ ಆಗಿದೆ.

ಖ್ಯಾತ ಕವಿ ಎಚ್ ಎಸ್ ವಿ ಅವರ ಜೊತೆಗೆ ಖ್ಯಾತ ನಾಟಕಕಾರ ಹೂಲಿಶೇಖರ್
ಈ ಕವನದಲ್ಲಿ ಪ್ರತಿಯೊಂದು ಪದವೂ ಅವರವರ ಭಾವಕ್ಕೆ ತಕ್ಕಂತೆ ವಿಸ್ತಾರಗೊಳ್ಳಲು ಸಾಧ್ಯವಿದೆ. “ಮಲಗಿದ್ದಾಳೆ” ಪದವು ಎಂದಿನಂತೆ ಸಾಮಾನ್ಯವಾಗಿ “ವಿಶ್ರಾಂತಿಗಾಗಿ ಮಲಗಿದ್ದಾಳೆ” ಎಂದುಕೊಳ್ಳಬಹುದು. ಅದರ ಹಿಂದಿನ ಪಲ್ಲವಿಯ ಪದಗಳಾದ “ಒಲಿದಳು” ಮತ್ತು “ನನ್ನ” ಪದಗಳು ಜೊತೆ ಸೇರಿಸಿಕೊಂಡು ನೋಡಿದಾಗ, ಅಲ್ಲಿ ಪ್ರೀತಿ ಪಾತ್ರರಲ್ಲಿ ಒಂದು ರೀತಿಯ “ಸ್ಥಿರತೆ” ಕಾಣಬಹುದು. ಅದನ್ನೇ ರಾಧೆ-ಕೃಷ್ಣರ ರೀತಿಯಲ್ಲಿ ನೋಡಿದರೆ, ಒಲಿದ ದೈವೀಕ ಪ್ರೀತಿ ಸಮಾದಿ ಸ್ಥಿತಿಯನ್ನು ತಲುಪಿದೆಯೆಂದು ಯೋಚಿಸಬಹುದು.
ಒಂದು ರೀತಿಯಲ್ಲಿ ನೋಡುವುದಾದರೆ, ಕವಿ ಸುಂದರವಾದ ತಿಳಿ ನೀರಿನ ಕೊಳದ ಮುಂದೆ ಕುಳಿತಿದ್ದಾರೆ. ಅವರ ಕಣ್ಣೆದುರು ನೀಲಿ ಕೊಳದಿಂದ ಒಂದಿಷ್ಟು ದೂರದಲ್ಲಿ ಹೊನ್ನೆ ಮರವಿದೆ. ಅಲ್ಲಿರುವ ಕೃಷ್ಣ, ಕೊಳದ ಬಳಿ ಇದ್ದ ರಾಧೆಯನ್ನು ನೋಡಿದ್ದಾನೆ. ಕೃಷ್ಣನ ಮನದೊಳಗೆ ಬಂದು ರಾಧೆ ಅಲ್ಲಿ ಸಂತೋಷದಿಂದ ನಲಿದಾಡಿದ್ದಾಳೆ, ಒಲವನ್ನು ತೋರಿದ್ದಾಳೆ, ನಂತರ ಅಲ್ಲೇ ನೆಲೆಗೊಂಡಿದ್ದಾಳೆ. ಈ ರಾಧೆ ಮತ್ತು ಕೃಷ್ಣನ ಪ್ರೀತಿಯ ಸನ್ನಿವೇಶವನ್ನು ಆರಾಧಿಸುವ ಕವಿ, ಭಕ್ತಿ ಪೂರ್ವಕವಾಗಿ ದೇವಕಣಿಗೆಲೆಯನ್ನು ಅವರಿಗೆ ಅರ್ಪಿಸಿದ್ದಾರೆ. ಇಲ್ಲಿ ಕೃಷ್ಣ ಮತ್ತು ರಾಧೆಯ ಸ್ಥಳವನ್ನು ಬದಲಾಯಿಸಿ ಕೂಡ ನೋಡಬಹುದು.
ಇನ್ನೊಂದು ರೀತಿಯಲ್ಲಿ ನೋಡಿದರೆ “ರಾಧೆಯ ಜೊತೆಗೆ ಬಂದ ನನ್ನ ಒಲವಿನ ಕೃಷ್ಣ ನನ್ನ ಮನದ ಮಂಟಪದಲ್ಲಿ ನೆಲೆನಿಂತನು” ಎಂದು ಕವನದ ಮೂಲಕ ಕವಿ ಹೇಳಿದಂತೆ ಇದೆ. ನನಗೆ ಈ ರೀತಿಯ ಕಲ್ಪನೆ ಬಹುಶಃ ಸರಿ ಇರಬಹುದೆಂದು ಅನಿಸಿತು.

ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರೊಂದಿಗೆ ಹೊಂಬಾಳೆಯ ಸ್ಥಾಪಕ ಅಧ್ಯಕ್ಷ ಎಚ್.ಫಲ್ಗುಣ ಹಾಗೂ ಗಾಯಕ ಶಿವಮೊಗ್ಗ ಸುಬ್ಬಣ್ಣ
ಈ ರೀತಿಯಲ್ಲಿ, ಈ ಕವನ ಶುದ್ಧತೆ, ಪ್ರೀತಿ, ನೆನೆಪು, ದೇವತೆ, ಭಕ್ತಿ ಮತ್ತು ಜೀವನದ ಅನಂತ ರೂಪಗಳ ಕುರಿತು ಶ್ರೀಯುತ ಹೆಚ್.ಎಸ್.ವೆಂಕಟೇಶಮೂರ್ತಿಯವರ ಅಂತರಂಗದಿಂದ ಹರಿದು ಬಂದಿರುವ ಭಾವಗೀತೆಯಾಗಿದೆ. ಓದುಗನ ಮನದೃಷ್ಟಿಯ ಮೇಲೆ ಅವಲಂಬಿತವಾಗಿರುವ ಈ ಕವನ, ತಾನೇ ತಾನಾಗಿ ಹಲವಾರು ಅರ್ಥಗಳನ್ನು ಪಡೆದುಕೊಳ್ಳುವ ಕವನವಾಗುತ್ತದೆ.
ಇಂತಹ ಅಧ್ಭುತ ಭಾವಗೀತೆಗಳನ್ನು ಕೊಟ್ಟ ಶ್ರೇಷ್ಠ ಕವಿಗೆ ಈ ಮೂಲಕ ನನ್ನ ನಮನಗಳು.
- ಎನ್.ವಿ.ರಘುರಾಂ – (ಸಮನ್ವಯ ಸಮತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಹೆಚ್ಟೆಸ್ವಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾಡಿದ ಪ್ರಸ್ತುತಿ)

Good ✅