ಧೃವನಿಗೆ ಕಾಡಿನೊಳಕ್ಕೆ ಕರೆದೊಯ್ಯಲು ಶುರು ಮಾಡಿದಾಗ ಭಯವಾಯಿತು, ಕೂಡಲೆ ಜೇಬಲ್ಲಿ ಚಾಕು ಹುಡುಕಿದ, ಅವನ ಜೇಬಲ್ಲಿ ಚಾಕುವಿತ್ತು, ಸಮಾಧಾನವಾದ, ಮುಂದೆ ಧೃವ ಕತೆ ಏನಾಯಿತು?…ವಿಕಾಸ್. ಫ್. ಮಡಿವಾಳರ ಅವರು ‘ಆ ರಾತ್ರಿ’ ಕತೆಯನ್ನು ತಪ್ಪದೆ ಮುಂದೆ ಓದಿ…
ಸಿದ್ದು ಧೃವನಿಗೆ ಬನ್ನಿ ಹೋಗೋಣ… ಅಂತ ಸನ್ನೆ ಮಾಡಿದ. ಇಬ್ಬರು ಆರ. ಎಕ್ಸ್ ಬೈಕ್ ಹತ್ತಿದರು. ಮಳೆಗಾಲದ ಸಮಯ ಸಿದ್ದು ಧೃವನನ್ನು ದುರ್ಗದ ಬೈಲಿಗೆ ಕರೆದುಕೊಂಡು ಹೋದ. “ತಪ್ಪು ತಿಳಿಬ್ಯಾಡ್ರಿ ಅಣ್ಣ, ಮಳೆಗೆ ಗಾಡಿ ಹೊಡೆಯಾಕ ಆಗ್ತಾ ಇಲ್ಲ. ಅದ್ಕೆ ಸ್ವಲ್ಪ ಟಾನಿಕ್ ತಗೋತೇನ್ರಿ.” ಅಂದ. ಉತ್ತರ ಕರ್ನಾಟಕದ ಭಾಷೆಯಲ್ಲಿ ಟಾನಿಕ್ ಅಂದರೆ ಮದ್ಯ ಅಂತ ಅರ್ಥ. “ಇಲ್ಲೆ ಚೂರು ಮುಂದೆ ಹೋದ್ರೆ ನಾಕೋಡ್ ಸಾವಜಿ ಖಾನಾವಳಿ ಸಿಗುತ್ತೆ. ಅಲ್ಲಿ ಕುರಿ ಊಟ ಚಲೋ ಕೊಡ್ತಾರೆ. ನೀವು ಊಟ ಮಾಡ್ರಿ. ನಾನು ಸ್ವಲ್ಪ ಟಾನಿಕ್ ತೊಗೊಂಡು ಬರ್ತೇನಿ ” ಅಂತ ಹೇಳಿ ಧೃವನನ್ನು ಸಾವಜಿ ಹೋಟೆಲ್ ಹತ್ತಿರ ಇಳಿಸಿದ.
ಧೃವನಿಗೆ ಹಸಿವಿರಲಿಲ್ಲ. ಅದರಲ್ಲೂ ಸಂಜೆ ಆದ ಘಟನೆಗಳಿಂದ ತಲೆ ಕೆಟ್ಟಿತ್ತು. ಅಲ್ಲೆ ಹತ್ತಿರದ ಹಣ್ಣಿನ ಅಂಗಡಿಯಲ್ಲಿ ಫ್ರೂಟ್ ಜ್ಯೂಸು ಆರ್ಡರ್ ಮಾಡಿ ಮೊಬೈಲ್ ಎತ್ತಿದ. ಬರಿ 3% ಚಾರ್ಜ್ ಇತ್ತು. ಏನು ಮಾಡಬೇಕೆಂದು ತಿಳಿಯದೆ ಪಚ್ಚುವಿಗೆ DAN-7-5-18 ಅಂತ ಮೆಸೇಜ್ ಕಳಿಸಿ ಸಿದ್ದುವಿಗೆ ಕಾಯತೊಡಗಿದ.

ಸ್ವಲ್ಪ ಹೊತ್ತಿನ ನಂತರ ಸಿದ್ದು ಬಂದು ಧೃವನನ್ನು ಕಿತ್ತೂರು ರಾಣಿ ಸರ್ಕಲ್ ಕಡೆ ಕರೆದುಕೊಂಡು ಹೋದ. ಮುಂದೆ ಹೊಸೂರು, ಉಣಕಲ್ ಮಾರ್ಗವಾಗಿ ನವನಗರದ ಕಡೆ ಗಾಡಿ ಹೊರಟಿತು. ರಾತ್ರಿ 9 ಗಂಟೆ ಆದ ಕಾರಣ ಟ್ರಾಫಿಕ್ ಅಷ್ಟೇನು ಇರಲಿಲ್ಲ.
“ಹೌದು… ಶಶಿ ಸಾಹೇಬರು ನಿಮಗೆ ಹೇಗೆ ಪರಿಚಯ ” ಧೃವ ಕೇಳಿದ.
“ನಾನು ಶಿಗ್ಗಾವಿಯಲ್ಲಿ ಬಿ.ಎ ಓದುತ್ತಾ ಇದ್ದೆ. ಆಗ ಶಶಿ ಸಾಹೇಬ್ರು ನಮ್ಮೂರಿಗೆ ಬಂದಿದ್ರು. ಅವಾಗೆಲ್ಲ ನಮ್ಮ ಕಡೆ ವಿದ್ಯಾರ್ಥಿಗಳಿಗೆ ಅಷ್ಟೇನು ಸವಲತ್ತುಗಳು ಇರಲಿಲ್ಲ. ಬಸ್ಸು ಪ್ರಾಬ್ಲಮ್, ಹಾಸ್ಟೆಲ್ ನಲ್ಲಿ ಕಳಪೆ ಊಟ, ಸೀನಿಯರ್ಸ್ ಗಳ ಕಾಟ ತುಂಬಾ ಪ್ರಾಬ್ಲಮ್ ಗಳು ಇದ್ದವು. ಶಶಿ ಸಾಹೇಬರು ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರೆ ನಮ್ಮೂರಲ್ಲಿ ಹೋರಾಟ ಮಾಡಿ ಸಹಾಯ ಮಾಡಿದ್ರು. ಬಂಕಾಪುರದಲ್ಲಿ ನಡೆದ ಸ್ಟೂಡೆಂಟ್ ಸ್ಟ್ರೈಕ್ನಲ್ಲಿ ನೀವು ಶಶಿ ಸಾಹೇಬರ ಜೊತೆ ಬಂದಿದ್ರಿ. ಆಗ್ಲೇ ನಾನು ನಿಮ್ಮನ್ನ ಮೊದಲು ನೋಡಿದ್ದು. ಶಶಿ ಸಾಹೇಬರು ತುಂಬಾ ಧೈರ್ಯವಂತರು. ನಮ್ಮಂತ ಸಾವಿರಾರು ವಿದ್ಯಾರ್ಥಿಗಳಿಗೆ ಉಪಕಾರ ಮಾಡಿದರೆ.” ಅಂತ ಹೇಳಿದ.
ಬಂಕಾಪುರದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ರೋಡ ದಾಟುವಾಗ ಬಸ್ ತಾಗಿ ಅಪಘಾತವಾಗಿತ್ತು. ಬಸ್ಸಿನ ಡ್ರೈವರ್ ಕುಡಿದು ಚಲಾಯಿಸುತ್ತಿದ್ದ, ನಿಯಂತ್ರಣ ತಪ್ಪಿ ಹುಡುಗನ ಬಲಿ ತಗೆದುಕೊಂಡಿದ್ದ. ಅದಕ್ಕಾಗಿ ವಿದ್ಯಾರ್ಥಿಗಳೆಲ್ಲ ಕೂಡಿ ಹೋರಾಟ ನಡೆಸಿದ್ರು. ಶಶಿ ಸ್ಟ್ರೈಕಿನ ಮುಂದಾಳತ್ವ ವಹಿಸಿದ್ದ. ಶಶಿಯ ಬಗ್ಗೆ ಒಳ್ಳೆಯದನ್ನು ಮಾತಾಡಲು ಉರಿಗೊಬ್ಬರು ಸಿಗುತ್ತಾರೆ ಅಂತ ಧೃವನಿಗೆ ಅರಿವಾಗಿತ್ತು.
ಫೋಟೋ ಕೃಪೆ : google
ಮಳೆ ಜಿನುಗುತ್ತಾ ಇತ್ತು. ಚಳಿಗೆ ಮೈ ನಡಗುತ್ತಾ ಇತ್ತು. ಸಿದ್ದು ಗಾಡಿಯ ವೇಗ ಹೆಚ್ಚಿಸಿದ. ನವಲೂರು ದಾಟಿ ಸತ್ತೂರಿನ ಧರ್ಮಸ್ಥಳದ ಆಸ್ಪತ್ರೆ ಬಂತು. ಆಸ್ಪತ್ರೆಯಿಂದ ಚೂರು ಮುಂದೆ ಹೋದ ಕೂಡಲೆ ಸಿದ್ದು ಗಾಡಿಯನ್ನು ಎಡಕ್ಕೆ ಕಾಡಿನೊಳಗೆ ತಿರುಗಿಸಿದ.
ಕಾಡಿನೊಳಕ್ಕೆ ಯಾಕೆ ಕರ್ಕೊಂಡು ಹೋಗ್ತಾ ಇದ್ದಾರೆ ಅಂತ ಧೃವನಿಗೆ ಸಂಶಯವಾಯಿತು. ಕೂಡಲೆ ಜೇಬಲ್ಲಿ ಚಾಕು ಇದಿಯಾ ಇಲ್ವಾ ಅಂತ ಚೆಕ್ ಮಾಡಿದ. ಚಾಕು ಜೇಬಲ್ಲಿದ್ದ ಕಾರಣ ಸ್ವಲ್ಪ ಸಮಾಧಾನವಾಯ್ತು. ಕತ್ತಲ ಕಾಡಿನಲ್ಲಿ ಬೈಕಿನ ಹೆಡ್ ಲೈಟ್ ಒಂದೆ ಆಸರೆಯಾಗಿತ್ತು. ಎಡಕ್ಕೆ ಬಲಕ್ಕೆ ಹೊಳ್ಳುತ್ತ ಗಾಡಿ ಅಲ್ಲೆ ಪಾಳು ಬಿದ್ದ ಕಟ್ಟಡದ ಮುಂದೆ ನಿಂತಿತು. ಕಟ್ಟಡದಿಂದ ಮೂರು ಜನ ಹೊರಗೆ ಬರುತ್ತಿರುವುದು ದೃವ ಗಮನಿಸಿದ. 50-55 ವರ್ಷದ ವೃದ್ಧ ಬೀಡಿ ಎಳೆಯುತ್ತ ಹೊರಗೆ ಬಂದು ದೃವನಿಗೆ ನಮಸ್ಕರಿಸಿದ. ಅವನ ಹಿಂದೆ ಇಬ್ಬರು ಅಜಾನುಬಹು ವ್ಯಕ್ತಿಗಳಿದ್ದರು. ದೊಡ್ಡ ಗಾತ್ರದ ಮೀಸೆ ಗಡ್ಡ ಹೊಂದಿದ ಆ ವೃದ್ಧನನ್ನು ನೋಡಿ ದೃವನಿಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಸಿದ್ದು ದೃವನಿಗೆ ಕಟ್ಟಡದ ಒಳಗಡೆ ಹೋಗುವಂತೆ ಹೇಳಿದ.
- ವಿಕಾಸ್. ಫ್. ಮಡಿವಾಳರ