ಸಿನಿಮಾ ಹೆಚ್ಚಾದಂತೆ ವೃತ್ತಿ ನಾಟಕಗಳು,ಹವ್ಯಾಸಿ ನಾಟಕಗಳು ಕಮ್ಮಿಯಾಗುತ್ತಾ ಹೋಯಿತು. ಅದರಲ್ಲಿಯೂ ಮೊಬೈಲ್ ಪ್ರಪಂಚದಲ್ಲಿ ಮಕ್ಕಳಿಗೆ ನಾಟಕದತ್ತ ಒಲವು ಮೂಡಿಸುವುದು ದೊಡ್ಡ ಸಾಹಸವೇ ಆಗಿದೆ. ಇಂತಹ ವಾತಾವರಣದಲ್ಲಿ ಮಕ್ಕಳಿಂದ ಪ್ರದರ್ಶನವಾದ ‘ಪ್ರಚಂಡ ರಾವಣ’ ಪ್ರೇಕ್ಷಕರನ್ನು ಬೆರಗು ಗೊಳಿಸಿತು.
“ಆಗ ತಾನೇ ಮದುವೆಯಾಗಿತ್ತು. ನಮ್ಮ ಯಜಮಾನ್ರು “ಪ್ರಚಂಡ ರಾವಣ” ನಾಟಕದಲ್ಲಿ ರಾವಣನ ಪಾತ್ರ ಮಾಡ್ತಿದ್ದಾರೆ ಅಂದಾಗ ಅತ್ಯಂತ ಖುಷಿಯಿಂದ ನಾಟಕ ನೋಡಲು ರಂಗಮಂದಿರಕ್ಕೆ ಓಡೋಡಿ ಹೋಗಿ ಮುಂದಿನ ಸೀಟ್ ನಲ್ಲಿ ಕೂತೆ. ಯಾವಾಗ ನಾಟಕ ಶುರುವಾಯ್ತೋ ರಾವಣನ ಪಾತ್ರದಲ್ಲಿ ನಮ್ಮ ಯಜಮಾನ್ರ ವ್ಯಂಗ್ಯ ನಗು, ಆರ್ಭಟ, ಸಿಟ್ಟು ನೋಡಿ ಭಯವಾಗಿ ನಿಧಾನಕ್ಕೆ ಎದ್ದು ಹಿಂದಿನ ಸೀಟಿಗೆ ಹೋಗಿ ಕೂತೆ”…ಈ ಮಾತನ್ನು ನಗುತ್ತಾ ಹೇಳಿದ್ದು ಮತ್ಯಾರು ಅಲ್ಲ ನಟ ಭಯಂಕರ, ಕಂಚಿನ ಕಂಠಧಾರಿ, ವಜ್ರದಂತೆ ಮಿನುಗಿದ ಖಳನಾಯಕ ವಜ್ರಮುನಿ ಅವರ ಧರ್ಮಪತ್ನಿ ಲಕ್ಷ್ಮಿ ವಜ್ರಮುನಿ ಅಮ್ಮನವರು.

ವಜ್ರಮುನಿ ಅವರ 80 ನೆಯ ವರ್ಷದ ಹುಟ್ಟುಹಬ್ಬ ಸುಸಂದರ್ಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ವಜ್ರಮುನಿ ಅಭಿಮಾನಿ ಬಳಗ ಮತ್ತು ಅವರ ಕುಟುಂಬದವರೆಲ್ಲ ಸೇರಿ ವಜ್ರಮುನಿ ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಅಂದು ವಜ್ರಮುನಿಯವರ ಹುಟ್ಟುಹಬ್ಬವಷ್ಟೇ ಆಗಿರಲಿಲ್ಲ, ಸುಮಾರು ವರ್ಷಗಳ ನಂತರ ಅದೇ ‘ಪ್ರಚಂಡ ರಾವಣ’ ನಾಟಕದ ಪ್ರದರ್ಶನವಿತ್ತು, ಈ ಬಾರಿ ರಾವಣನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಅವರ ಹದಿನಾರು ವರ್ಷದ ಮೊಮ್ಮಗ ಆಕರ್ಷ ವಜ್ರಮುನಿ.

ವಜ್ರಮುನಿ ಅವರು ಖಳನಾಯಕರಾಗಿ ಹಲವಾರು ಸಿನಿಮಾಗಳಲ್ಲಿ ಮಿಂಚಿದ ಮಹಾನ್ ಕಲಾವಿದರು. ಅವರ ಪಾತ್ರವನ್ನು ಇನ್ನೊಬ್ಬರು ಮಾಡಬೇಕು ಎಂದರೆ ಗಂಡೆದೆ ಬೇಕು. ಅವರಿಗೆ ಅವರೇ ಸಾಟಿಯಾಗಿದ್ದರು. ಹೀಗಿರುವಾಗ ಅವರು ನಟಿಸಿದ ‘ಪ್ರಚಂಡ ರಾವಣ’ದಲ್ಲಿ ಅವರ ಮೊಮ್ಮಗ ಆಕರ್ಷ ರಾವಣನ ಪಾತ್ರಕ್ಕೆ ಬಣ್ಣ ಹಚ್ಚುತ್ತಾನೆ ಎಂದರೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿತ್ತು. ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಆದರೆ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಸೀತೆ “ಪರ ನಾರಿ ಚೋರ್ ರಾವಣ”….ಎಂದಾಗ ಅವಳನ್ನೇ ದುರುಗುಟ್ಟಿ ವ್ಯಂಗ್ಯವಾಗಿ ರಾವಣನ ಪಾತ್ರದಲ್ಲಿದ್ದ ಆಕರ್ಷ ನಕ್ಕಾಗ ಸಾಕ್ಷಾತ್ ವಜ್ರಮುನಿ ಅವರನ್ನೇ ಕಂಡಂತಾಯಿತು. ಸಂಭಾಷಣೆಯಲ್ಲಿನ ಏರಿಳಿತ, ಪಾತ್ರಕ್ಕೆ ಬೇಕಾದ ಗತ್ತು ಆ 16 ವರ್ಷದ ಆಕರ್ಷನಲ್ಲಿ ನೋಡಿದಾಗ ಇಡೀ ಕಲಾಕ್ಷೇತ್ರವೇ ಚಪ್ಪಾಳೆ , ಶಿಳ್ಳೆಗಳಿಂದ ತುಂಬಿ ಹೋಯಿತು.

ಕಣಗಾಲ್ ಪ್ರಭಾಕರ ಶಾಸ್ತ್ರಿ ರಚನೆಯ ‘ಪ್ರಚಂಡ ರಾವಣ’ ಪ್ರೇಕ್ಷಕರನ್ನು ಎರಡೂವರೆ ತಾಸು ಒಂದೆಡೆ ಹಿಡಿದಿಟ್ಟಿತ್ತು ಎಂದರೆ ನಾಟಕದಲ್ಲಿನ ಕತೆ, ಸಂಭಾಷಣೆ, ಹಾಡುಗಳು ಕೂಡಾ ಮುಖ್ಯ ಕಾರಣ. ಈ ನಾಟಕದಲ್ಲಿ ಸೀತಾದೇವಿ ರಾವಣನ ಮಗಳು ಎನ್ನುವ ಸತ್ಯವನ್ನು ತೋರಿಸಲಾಗಿದೆ. ಈ ವಿಷಯ ಈ ಮೊದಲು ನನಗೂ ತಿಳಿದಿರಲಿಲ್ಲ. ದೃಶ್ಯವನ್ನು ನೋಡಿ ಆಶ್ಚರ್ಯವಾಯಿತು.
ಮೊಬೈಲ್, ಲ್ಯಾಪ್ ಟಾಪ್ ಪ್ರಪಂಚದಲ್ಲಿ ಕಂಪನಿ ನಾಟಕದ ಸೊಬಗನ್ನು ನೋಡುವ ಅವಕಾಶವನ್ನು ರಂಗಶ್ರೀ ಕಲಾಸಂಸ್ಥೆ ಪ್ರೇಕ್ಷಕರಿಗೆ ಮಾಡಿಕೊಟ್ಟದ್ದು ನಿಜಕ್ಕೂ ಮೆಚ್ಚುವಂತದ್ದು. ಅದರಲ್ಲಿಯೂ ಗ್ಯಾಜೆಟ್ ಯುಗದಲ್ಲಿ ಇಂದಿನ ಯುವ ಪೀಳಿಯಿಂದ ಅತ್ಯುದ್ಭುತವಾದ ಪೌರಾಣಿಕ ನಾಟಕವನ್ನು ಒಂದು ದೊಡ್ಡ ವೇದಿಕೆಯಲ್ಲಿ ತಪ್ಪಿಲ್ಲದೆ, ಹಾಡಿನ ಮೂಲಕ ಸಂಭಾಷಣೆಯನ್ನು ಸೊಗಸಾಗಿ ಪ್ರಸ್ತುತ ಪಡಿಸುತ್ತಾರೆ ಎಂದರೆ ಆ ಮಕ್ಕಳು ಸಾಮಾನ್ಯದವರಲ್ಲ ಅವರೆಲ್ಲ ಪ್ರಚಂಡ ಮಕ್ಕಳೇ ಎಂದರೆ ತಪ್ಪಲ್ಲ. ರೀಲ್ಸ್, ಸೆಲ್ಫಿ ಎನ್ನುವ ಗೀಳಿನ ಮಧ್ಯೆ ರಾವಣ, ಮoಡೋಧರಿ, ವಿಭಿಷಣ, ರಾಮ, ಸೀತೆ, ಹನುಮಂತ, ರಾಕ್ಷಸರ ಪಾತ್ರಗಳನ್ನು ನೋಡುವಾಗ ಕಣ್ಣುಗಳಲ್ಲಿ ಅಚ್ಚರಿ ಇತ್ತು, ಮನಸ್ಸಲ್ಲಿ ಭಕ್ತಿ ಭಾವವಿತ್ತು. ಮಕ್ಕಳು ಬಳ್ಳಿಯಂತೆ, ಅವರನ್ನು ಯಾವ ಕಡೆ ವಾಲಿಸುತ್ತೇವೆಯೋ ಅತ್ತ ಕಡೆ ಬಾಗುತ್ತಾರೆ ಎನ್ನುವುದಕ್ಕೆ ಈ ಪ್ರಚಂಡ ರಾವಣ ಸಾಕ್ಷಿಯಾಗಿತ್ತು. ಮಕ್ಕಳು ಪಾತ್ರಕ್ಕೆ ಜೀವ ತುಂಬಿದ್ದರು.
ನಾಟಕದಲ್ಲಿನ ಬೆಳಕಿನ ವಿನ್ಯಾಸ, ರಂಗ ಸಜ್ಜಿಕೆ, ಹಾಡು ಎಲ್ಲವೂ ನೋಡುವಾಗ ಎರಡೂವರೆ ತಾಸು ನಾಟಕ ನೋಡಿದೆ ಎನ್ನಿಸಲಿಲ್ಲ, ಒಂದು ಒಳ್ಳೆ ಪೌರಾಣಿಕ ಸಿನಿಮಾ ನೋಡಿದ ಅನುಭವವಾಯಿತು. ಈ ನಾಟಕಕ್ಕೆ ಖ್ಯಾತ ಪತ್ರಕರ್ತ ಗಣೇಶ ಕಾಸರಗೋಡು, ನಟ ಶರತ್ ಲೋಹಿತಾಶ್ವ, ಡಿಂಗ್ರಿ ನಾಗರಾಜ್ , ಗಿರಿಜಾ ಲೋಕೇಶ, ವಿ ಮನೋಹರ್ ಸೇರಿದಂತೆ ಸಾಕಷ್ಟು ಜನ ಗಣ್ಯರು ಸಾಕ್ಷಿಯಾಗಿದ್ದರು.
‘ಪ್ರಚಂಡ ರಾವಣ’ ನಾಟಕದ ಮೂಲಕ ಆಕರ್ಷ ತಾತನ ಪಡಿಯಚ್ಚಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಭವಿಷ್ಯತ್ತಿನ ಭರವಸೆಯ ನಟನಾಗಿ ಸದ್ಯದಲ್ಲಿ ಸಿನಿಮಾಕ್ಷೇತ್ರಕ್ಕೆ ಬರಲಿದ್ದು, ಆಕರ್ಷ ಮೇಲೆ ವಜ್ರಮುನಿ ಅವರ ಅಭಿಮಾನಿಗಳ ಪ್ರೀತಿ, ಆಶೀರ್ವಾದವಿರಲಿ ಮತ್ತು ಮಕ್ಕಳಿಂದ ಸಿದ್ದವಾದ ಇಂತಹ ಪುರಾಣಿಕ ನಾಟಕಗಳು ಇನ್ನಷ್ಟು ಮಕ್ಕಳಿಗೆ ತಲುಪಬೇಕೆಂದರೆ ಈ ನಾಟಕ ಕಲಾಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ರಂಗಮಂದಿರದಲ್ಲಿಯೂ ಪ್ರದರ್ಶನವಾಗಬೇಕು ಎನ್ನುವುದು ನನ್ನ ಅನಿಸಿಕೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ
