ಮಕ್ಕಳನ್ನು ಮೊದಲ ಸಲ ಶಾಲೆಗೆ ಕಳುಹಿಸುವ ಮುನ್ನ ಕೆಲವು ಸಲಹೆ ಸೂಚನೆಗಳನ್ನು ಅನುಸರಿಸಿದರೆ ಎದುರಾಗುವ ಕಷ್ಟಗಳು ಬೆಣ್ಣೆಯಂತೆ ಕರಗಿ ಹೋಗಬಹುದು.ಶಿಕ್ಷಕಿ,ಲೇಖಕಿ ಸೌಮ್ಯ ಸನತ್ ಅವರ ಈ ಲೇಖನವನ್ನು ತಪ್ಪದೆ ಮುಂದೆ ಓದಿ…
ತಾನೇ ಇಟ್ಟ ತತ್ತಿಗೆ ಕಾವು ಕೊಟ್ಟು, ಮರಿ ಮಾಡಿ, ಕಾಳು ತಿನ್ನಿಸಿದ ಅಮ್ಮ ಹಕ್ಕಿಗೆ ಗೊತ್ತೇ ಇರುತ್ತದೆ ಅಲ್ಲವೇ ರಕ್ಕೆ ಬಲಿತ ನಂತರ ಮರಿಹಕ್ಕಿಗಳು ಗೂಡು ಬಿಟ್ಟು ಹಾರಿ ಹೋಗುವ ಸಂಗತಿ. ಹಾಗೆಯೇ ಪ್ರತಿ ಮಗುವು ಪೋಷಕರ ಮುದ್ದು ಮುಚ್ಚಟೆಯಲ್ಲಿ ಬೆಳೆದು ಬಂದಿದ್ದರೂ ನಾಲ್ಕೈದು ವರ್ಷವಾಗುತ್ತಲೇ ಶಾಲೆಗೆ ಹೋಗುವ ಅನಿವಾರ್ಯ ಬಂದೇ ಬರುತ್ತದೆ. ಇದು ಮಕ್ಕಳ ಹಾಗೂ ಪೋಷಕರ ಜೀವನದಲ್ಲಿ ಮುಖ್ಯ ಮೈಲಿಗಲ್ಲು ಹೌದು.
ಜೂನ್ ಮಾಸದಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಬೆಚ್ಚಗಿನ ಮನೆ, ಅಪ್ಪ ಅಮ್ಮನನ್ನು ಬಿಟ್ಟು ಶಾಲೆ ಹೋಗುವುದೆಂದರೆ ಹಲವು ಮಕ್ಕಳಿಗೆ ದುಃಖವೇ ಬಂದು ಬಿಡುತ್ತದೆ. ಅದರಲ್ಲೂ ಮೊದಲ ಬಾರಿಗೆ ವಿದ್ಯಾದೇಗುಲಕ್ಕೆ ಅಡಿ ಇಡುವ ಮಕ್ಕಳು ಹಾಗೂ ಪೋಷಕರಿಗೂ ಇದೊಂದು ಭಾವಾನಾತ್ಮಕ ಘಟ್ಟವೇ ಸರಿ.
ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರು ಎಂಬುದು ಅಕ್ಷರಶಃ ಅನುಭವದ ಮಾತು. ಮಗು ತನ್ನ ಮೊದಲ ದಿನಗಳನ್ನು ಕಳೆಯುವುದು ಮನೆಯಲ್ಲಿ, ತಾಯಿಯ ಆರೈಕೆಯಲ್ಲಿ. ಮನೆ ಮಗುವಿಗೆ ಸುರಕ್ಷತೆಯನ್ನು ಒದಗಿಸಿದರೆ, ತಾಯಿ ಮಗು ಮನೆಯಿಂದ ಹೊರಗೆ ಕಾಲಿಡುವ ಮೊದಲು, ಮಗುವಿನ ಆರೈಕೆ, ಮಗುವಿಗೆ ಮಾತು ಕಲಿಸುತ್ತಾಳೆ.
ಮೊದಲನೇಯ ಸಲ ಮನೆಯ, ಮನೆಯವರ ಬೆಚ್ಚಗಿನ ಪರಿಚಿತ ವಲಯದಿಂದ ಹೊಸದಾದ ಅಪರಿಚಿತ ಶಾಲೆಯ ಆವರಣಕ್ಕೆ ತೆರಳುವಾಗ ಉತ್ಸಾಹದ ಬುಗ್ಗೆಗಳಂತಿರುವ ಮಕ್ಕಳಲ್ಲಿ
ಕುತೂಹಲ, ಖುಷಿ,ಎಷ್ಟು ಇರುತ್ತದೋ ಅಷ್ಟೆ ವ್ಯಕ್ತ, ಅವ್ಯಕ್ತ ಭಯ, ಅಳುಕು, ಗೊಂದಲ ಆತಂಕ ಕೂಡ ಈ ಪುಟ್ಟ ಮನಗಳಲ್ಲಿ ಇರಬಹುದು. ಈ ಗೊಂದಲ, ಆತಂಕ, ಚಿಂತೆ ಪೋಷಕರನ್ನೂ ಕಾಡಬಹುದು. ಭಯದಿಂದ ಶಾಲೆಗೆ ಹೋಗಲು ಗಲಾಟೆ ಮಾಡಬಹುದು ಮಕ್ಕಳನ್ನು ಶಾಲೆಗೆ ಕಳುಹಿಸದೇ ಮನೆಯಲ್ಲಿಯೇ ಉಳಿಸಿಕೊಳ್ಳಲು ಆದೀತೆ?. ಶಾಲೆಗೆ ಕಳುಹಿಸುವ ಅನಿವಾರ್ಯವಲ್ಲವೇ? ಮಕ್ಕಳನ್ನು ಮೊದಲ ಸಲ ಶಾಲೆಗೆ ಕಳುಹಿಸುವ ಮುನ್ನ ಕೆಲವು ಸಲಹೆ ಸೂಚನೆಗಳನ್ನು ಅನುಸರಿಸಿದರೆ ಎದುರಾಗುವ ಕಷ್ಟಗಳು ಬೆಣ್ಣೆಯಂತೆ ಕರಗಿ ಹೋಗಬಹುದು.

ಒಮ್ಮೆ ಪಾಲಿಸಿ ನೋಡಿ.
* ಮೊದಲನೆಯದಾಗಿ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಪಾಲಕರು ಕಡ್ಡಾಯವಾಗಿ ಶಾಲೆ ವಾತಾವರಣ, ಶಿಕ್ಷಕ ವರ್ಗ, ಮೂಲಸೌಕರ್ಯಗಳು, ಪಠ್ಯೇತರ ಚಟುವಟಿಕೆಗೆ ಇರುವ ಅವಕಾಶಗಳು ಮೊದಲಾದ ಅಂಶಗಳನ್ನು ಗಮನಿಸಬೇಕು.
* ಮಗು ಹೋಗಲಿರುವ ಶಾಲೆ, ಕುಳಿತುಕೊಳ್ಳುವ ಕೊಠಡಿ, ಆಡುವ ಮೈದಾನವನ್ನು ಶಾಲೆಗೆ ಹೋಗುವ ಮುನ್ನ ಮಗುವಿನೊಂದಿಗೆ ಹೋಗಿ ನೋಡಿ ಬಂದು ಆ ಹೊಸ ವಾತಾವರಣವನ್ನು ಮಗುವಿಗೆ ಪರಿಚಯಿಸಬೇಕು .
* ಶಾಲೆಯ ಬಗ್ಗೆ, ಶಿಕ್ಷಕರ ಬಗ್ಗೆ, ಸಿಗಲಿರುವ ಪುಟ್ಟ ಗೆಳೆಯರ ಬಗ್ಗೆ , ಕಲಿಯುವ ಹೊಸ ಪಾಠ, ಆಟಗಳ ಬಗ್ಗೆ ಸದಾ ಸಕಾರಾತ್ಮಕವಾಗಿ ಮಾತನಾಡಿ, ಮಕ್ಕಳನ್ನು ಹುರಿದುಂಬಿಸಬೇಕು .
* ಶಾಲೆಗೆ ಸೇರಿಸುವ ಮುನ್ನ ಪೋಷಕರು ತಮ್ಮ ಮಗುವಿಗೆ ಕಲಿಸಬೇಕಾದ ಮೂಲಭೂತ ಅಂಶ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ. ಮಕ್ಕಳಿಗೆ ಮೊದಲು ಮನೆಯಲ್ಲಿ ಸ್ವಚ್ಚವಾಗಿರಲು ಕಲಿಸಬೇಕು. ಅದನ್ನು ಕೂಡಾ ಶಾಲೆಯಲ್ಲಿ ಮುಂದುವರೆಸುವಂತೆ ಮಗುವಿಗೆ ತಿಳಿ ಹೇಳಬೇಕು. ಏಕೆಂದರೆ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳ ಜೊತೆ ನಿಮ್ಮ ಮಗು ಕಲಿಯಬೇಕಾಗಿರುತ್ತದೆ. ನಿಮ್ಮ ಮಗು ಸ್ವಚ್ಛತೆಯಿಂದ ಇರದೆ ಹೋದರೆ ಇನ್ನಿತರ ಮಕ್ಕಳು ನಿಮ್ಮ ಮಗುವಿನ ಮೇಲೆ ಅಸಹ್ಯ ಭಾವನೆ ಮೂಡುವ ಸಾಧ್ಯತೆಗಳು ಹೆಚ್ಚಿರುತ್ತದೆ.
* ಶಾಲೆಯ ಬಗ್ಗೆ ಒಳ್ಳೆಯ ಸಕಾರಾತ್ಮಕ(ಪಾಸಿಟಿವ್) ಕಥೆಗಳನ್ನು ಓದಿ ಹೇಳುತ್ತಾ ಬರಬೇಕು. ಶಾಲೆಯಲ್ಲಿ ತಂದೆ ತಾಯಿಯ ಆರೈಕೆ ಸಹಾಯವಿಲ್ಲದೇ ಇರಬೇಕಾಗಿ ಬರುವ ಸಂದರ್ಭದಲ್ಲಿ ಬೇಕಾಗುವ ಜೀವನ ಕಲೆಗಳನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಸುತ್ತಾ ಬರಬೇಕು. ಉದಾಹರಣೆಗೆ ಕೈ ಬಾಯಿ ತೊಳೆದುಕೊಳ್ಳುವುದು, ಕರವಸ್ತ್ರ ಬಳಸುವುದು, ಶೌಚಾಲಯಕ್ಕೆ ಹೋಗಿ ಬರುವುದು, ಶುಚಿತ್ವ ಕಾಪಾಡಿಕೊಳ್ಳುವುದು, ಊಟದ ಡಬ್ಬಿ, ನೀರಿನ ಬಾಟಲಿಯನ್ನು ತೆಗೆಯುವುದು, ಊಟದ ಬುತ್ತಿಯನ್ನು ಖಾಲಿ ಮಾಡಿ ತರುವುದು, ಶಾಲೆಯ ಚೀಲವನ್ನು ಜೋಡಿಸಿಟ್ಟುಕೊಂಡು, ವಸ್ತುಗಳನ್ನು ಜೋಪಾನವಾಗಿ ಪ್ರತಿ ದಿನವೂ ವಾಪಸ್ ತರುವುದು, ಇತರ ಮಕ್ಕಳ ವಸ್ತುಗಳನ್ನು ತರದೇ ಇರುವುದು ಇತರೆ ಕಲೆಗಳನ್ನು ಅಭ್ಯಾಸ ಮಾಡಿಸಿ ಕಳುಹಿಸಿದರೆ ಮಕ್ಕಳಲ್ಲೂ ಆತ್ಮವಿಶ್ವಾಸ ಮೂಡುತ್ತದೆ.
* ಮಕ್ಕಳಿಗೆ ಶಾಲೆಯಲ್ಲಿ ಏನೇ ತೊಂದರೆಯಾದರೂ ಯಾರನ್ನಾದರೂ ಸಹಾಯ ಕೇಳಿ ಪಡೆಯುವಂತೆ ತರಬೇತಿ ನೀಡಬೇಕು. ತಮ್ಮ ಹೆಸರು, ತಂದೆ ತಾಯಿಯ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಕಲಿಸಿ, ಶಾಲೆಗೆ ಕಳುಹಿಸಿದರೆ ಮಕ್ಕಳಿಗೂ ಧೈರ್ಯ ಬರುತ್ತದೆ.
* ಸರಿಯಾದ ಸಮಯದಲ್ಲಿ ಮಕ್ಕಳಿಗೆ ನಿದ್ರೆ, ಆಹಾರ, ಆಟ, ಆರಾಮ, ವಿರಾಮ, ನಿದ್ರೆ, ಮನರಂಜನೆ ಎಲ್ಲ ಸಿಗುವಂತೆ ಮನೆಯಲ್ಲಿಯೇ ಒಂದು ಶಿಸ್ತಿನ ತಳಹದಿ ಇದ್ದರೆ ಮಕ್ಕಳು ಶಾಲೆಯ ಶಿಸ್ತಿಗೂ ಹೊಂದಿಕೊಳ್ಳಲು ಸುಲಭವಾಗುತ್ತದೆ.
* ಮಾನವ ಸಂಘ ಜೀವಿ ಮಗುವಿಗೆ ಚಿಕ್ಕನಿಂದಲೇ ಸ್ನೇಹಿತರ ಜೊತೆ ಸಹಪಾಠಿಗಳ ಜೊತೆ ಬೆರೆಯುವುದನ್ನ ಕಲಿಸಬೇಕು.ಇದು ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಶಾಲೆಯಲ್ಲಿ ಸಹಾಪಾಠಿಗಳೊಂದಿಗೆ ಬೆರೆತು ಆಡುವುದು, ಅಭ್ಯಾಸ ಮಾಡುವುದನ್ನು ಕಲಿಸಿ. ಇತರರೊಂದಿಗೆ ಜಗಳವಾಡುವುದು ತಪ್ಪು ಎಂದು ಮಗುವಿಗೆ ತಿಳಿ ಹೇಳಬೇಕು .
* ಶಾಲೆಗೆ ಹೋಗಿ ಬರುವ ಮಕ್ಕಳು ಸುಸ್ತಾಗಿ, ಸಿಟ್ಟಾಗಿಯೂ ಇರುವ ಸಾಧ್ಯತೆ ಇರುತ್ತದೆ. ಬೇರೆ ಮಕ್ಕಳಿಂದ ಯಾವುದಾದರೂ ಸೋಂಕು, ಸೀನು, ಹೇನು ಹೊತ್ತುಕೊಂಡು ಬರುವ ಸಂಭವವೂ ಅಧಿಕವೇ. ಆಗೆಲ್ಲ ಪೋಷಕರು ತಾಳ್ಮೆಗೆಡದೇ ಸಂಯಮದಿಂದ ಶಾಲೆ, ಶಿಕ್ಷಕರನ್ನು ದೂರದೇ ಪರಿಸ್ಥಿತಿಯನ್ನು ನಿಭಾಯಿಸಲು ಕಲಿತುಕೊಳ್ಳಬೇಕು. ಬೇರೆ ಪೋಷಕರೊಂದಿಗೆ, ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಬೇಕು.
* ಶಾಲೆಯಿಂದ ಮಕ್ಕಳು ಬಂದೊಡನೆ ಈ ದಿನ ಶಾಲೆಯಲ್ಲಿ ಏನೇನು ಮಾಡಿದೆ, ನಿನ್ನ ಗೆಳೆಯರು ಏನು ಹೇಳಿದರು, ಇತ್ಯಾದಿಗಳನ್ನೆಲ್ಲ ಮಾತಾಡಿಸಿದಾಗ , ಬೆಳಗ್ಗೆಯಿಂದ ಅಪ್ಪ, ಅಮ್ಮನನ್ನು ಬಿಟ್ಟಿದ್ದ ಅವರಿಗೆ ತುಂಬಾ ಸಂತೋಷವಾಗುತ್ತದೆ.
* ಸಾಧ್ಯವಾದಷ್ಟು ಮಟ್ಟಿಗೆ ಒಳ್ಳೆಯ ಆರೋಗ್ಯಕರ ಆಹಾರ ಕೊಡುವುದು ಅಂದರೆ ಯಾವಾಗಲೂ ಹಣ್ಣು ತರಕಾರಿಗಳು , ಸಲಾಡ್ ಗಳು ಅಂತ ಅಲ್ಲ ಬದಲಿಗೆ, ಕರಿದ ಪದಾರ್ಥಗಳನ್ನು ಕಡಿಮೆ ಮಾಡುವುದು ಹಾಗೂ ನಮ್ಮ ಸಾಂಪ್ರದಾಯಿಕ ಆಹಾರಗಳನ್ನು ಹೆಚ್ಚಿಗೆ ಕೊಡುವುದು ರೂಢಿ ಮಾಡಬೇಕು.
* ಮಕ್ಕಳ ಮೊಬೈಲ್ ಹಾಗೂ ಟಿವಿ ಬಳಕೆಯನ್ನು ಕಡಿಮೆ ಮಾಡಿಸುವುದು ಇದು ತಾಂತ್ರಿಕ ಯುಗ ಮೊಬೈಲ್ , ಲಾಪ್ ಟಾಪ್ ಇವೆಲ್ಲ ಇಲ್ಲದೆ ಜೀವನವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಾವು ತಂತ್ರಜ್ಞಾನದ ಮೇಲೆ ಅವಲಂಬಿತರಾಗಿದ್ದೇವೆ ಮಕ್ಕಳಿಗೆ ಮೊಬೈಲ್ ಉಪಯೋಗಿಸುವುದು ಹೇಳಿಕೊಡಬೇಕಾಗಿಲ್ಲ ನಮಗಿಂತ ಅವರಿಗೆ ಮೊಬೈಲ್ ಉಪಯೋಗಿಸುವುದು ಚೆನ್ನಾಗಿ ಗೊತ್ತಿರುತ್ತದೆ.. ಹಾಗಾಗಿ ನಾವು ಒಂದು ದಿನಕ್ಕೆ ಇಷ್ಟು ನಿಮಿಷ ಎಂದು ಫಿಕ್ಸ್ ಮಾಡಿ, ಕ್ರಮೇಣ ಕಡಿಮೆ ಮಾಡಿಸಬಹುದು.
* ಹೊರಾಂಗಣ ಆಟಗಳಿಗೆ ಆದ್ಯತೆ ಕೊಡುವುದು. ಆದಷ್ಟು ಮಟ್ಟಿಗೆ ಮಕ್ಕಳಿಗೆ ಹೊರಗಡೆ ಆಟಕ್ಕೆ ಕಳಿಸುವುದು ಹಾಗೂ ನಮ್ಮ ಜೊತೆಯಲ್ಲಿ ಪಾರ್ಕ್, ಉದ್ಯಾನ, ವಾಕಿಂಗ್ ಗೆ ಕರೆದುಕೊಂಡು ಹೋಗುವುದು.
* ಮನೆಯಲ್ಲಿ ತಂದೆ-ತಾಯಿ ಆದರ್ಶ ಜೀವನ ನಡೆಸಿ ತೋರಿದರೆ ಮಕ್ಕಳೂ ಅದನ್ನೇ ಅನುಸರಿಸುವರು. ಮಕ್ಕಳ ನಿರ್ಮಲ ಮನಕ್ಕೆ ಉತ್ತಮ ವಾತಾವರಣ ನೀಡಿ ಒಳ್ಳೆಯ ನಡೆ-ನುಡಿಯ ಬೀಜ ಬಿತ್ತಿದರೆ ಮಾತ್ರ ಆ ಗುಣ ಹೆಮ್ಮರವಾಗಿ ಬೆಳೆದು ಆತ ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗುವನು. ಹಾಗಾಗಿ ವ್ಯಕ್ತಿತ್ವ ರೂಪುಗೊಳ್ಳಲು ಮನೆಯೇ ಮೂಲ ತಾಣ.
ಪ್ರತಿ ಮನೆಯ ಮರಿ ಹಕ್ಕಿಗೂ ಶಾಲೆಯೆಂಬ ಬಾನು ಬೇಕು ಸ್ವಚ್ಛಂದವಾಗಿ ಹಾರಲು. ಆ ಬಾನಿಗೂ ಬೇಕು ಈ ಮರಿ ಹಕ್ಕಿಗಳ ಹಾರಾಟ, ಕಲರವ. ತಮ್ಮದೇ ಆದ ಸೋಜಿಗವನ್ನು ಜಗದೊಡನೆ ಹಂಚಿಕೊಳ್ಳಲು ಪೋಷಕರು ಇಡಬೇಕಾದ ಮೊದಲ ಹೆಜ್ಜೆ ಇದುವೇ ಅಲ್ಲವೇ.
- ಸೌಮ್ಯ ಸನತ್
