ಮುರಿದ ಮನಸುಗಳ ಕೂಡಿಸು, ಭಾವದಲ್ಲಿ ಅನುಬಂಧ ಮೂಡಿಸು, ಮನದಲ್ಲಿ ಬಂಧುತ್ವದ ರಾಗ ಹಾಡಿಸು…ಡಾ. ಅಶೋಕ ಕುಮಾರ ಎಸ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಗು ಮುಖವ ಅರಳಿಸು
ಮನದ ಹುಸಿ ಕೋಪವ ಅಳಿಸು
ಅನುರಾಗದ ಅನುಬಂಧವ ಗಳಿಸು.
ಸ್ನೇಹದ ಹಸಿರು ಬಳ್ಳಿ ಬೆಳೆಸು
ಹೃದಯದಲ್ಲಿ ಪ್ರೀತಿ ಹೂವರಳಿಸು
ಮುಖದಲ್ಲಿ ಹೂನಗೆಯ ಕಂಗೊಳಿಸು.
ಜಗದಲ್ಲಿ ಹೆಸರುಳಿಸು
ಆತ್ಮ ವಿಶ್ವಾಸದ ಗೌರವ ಗಳಿಸು
ಹೃದಯದಲ್ಲಿ ಪ್ರೀತಿ ವಾತ್ಸಲ್ಯ ಉಳಿಸು.
ಮುರಿದ ಮನಸುಗಳ ಕೂಡಿಸು
ಭಾವದಲ್ಲಿ ಅನುಬಂಧ ಮೂಡಿಸು
ಮನದಲ್ಲಿ ಬಂಧುತ್ವದ ರಾಗ ಹಾಡಿಸು.
ಮುಖದಲ್ಲೇಕೆ ಮತ್ತೆ ಮುನಿಸು
ಮುಂಜಾವಿನಲ್ಲಿ ಬಿದ್ದಾಗ ಸವಿಗನಸು
ನಗು ಮುಖದಿ ನೀ ನನ್ನ ಮನವ ತಣಿಸು.
ಮನಸಿನಾಳವ ಶೋಧಿಸು
ಬದುಕಿನಲ್ಲಿ ಸಾಧನೆಯ ಏಣಿ ಕಟ್ಟಿಸು
ಹಸನಾದ ಮನದಲ್ಲಿ ನಸುನಗೆಯ ಮೂಡಿಸು.
ಬಾಳಲ್ಲಿ ಬೆಳಕು ಮೂಡಿಸು
ಕರುಳ ಬಳ್ಳಿಯಲ್ಲಿ ಹೂವು ಅರಳಿಸು
ನೊಂದವರ ಬದುಕಿಗೆ ನೆಮ್ಮದಿ ಕರುಣಿಸು.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ, ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ.
