ಮಾನಸ….ಇದು ಮನಸಿನ ಮಾತು (ಭಾಗ-೭)

ಮನೆಗೆ ಎರಡನೆಯ ಮಗು ಬಂದ್ಮೇಲೆ ಮೊದಲನೆಯ ಮಗುವಿನಲ್ಲಿ ಸಾಕಷ್ಟು ಬದಲಾವಣೆಯಾಯಿತು. ತುಂಬಾ ಪ್ರೀತಿಸುತ್ತಿದ್ದ ಅಪ್ಪ ಅಮ್ಮ ಇದ್ದಕ್ಕಿದ್ದಂತೆ ಬದಲಾದ ಅನುಭವ ಆ ಮಗುವಿಗೆ, ಆ ಮಗು ಸತ್ತು ಹೋಗಲಿ ಎನ್ನುವಷ್ಟು ಮನಸ್ಸು ಆ ಮಗುವಿನಲ್ಲಿ ಬೆಳೆದು ಹೋಗಿತ್ತು. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ಇದೊಂದು ಸತ್ಯ ಘಟನೆ…ತಪ್ಪದೆ ಓದಿ…

ಇಂದಿನ ಅಂಕಣದಲ್ಲಿ ಒಂದು ಕೇಸಿಗೆ ಸಂಬಂಧಪಟ್ಟ ಹಾಗೆ ಒಂದು ಸತ್ಯ ಘಟನೆ ಹೇಳುತ್ತೇನೆ.

ಎರಡು ವರ್ಷಗಳ ಹಿಂದೆ ಒಂದು ಹೆಣ್ಣು ಮಗು ಅದರ ತಂದೆ ತಾಯಿ ಜೊತೆ ನಮ್ಮಲ್ಲಿಗೆ ಬಂದಾಗ, ಮಗು ಸಹಜ ಸ್ಥಿತಿಯಲ್ಲಿ ಇರಲಿಲ್ಲ, ನೋಡಿದ ಕೂಡಲೆ ತಿಳಿಯುತಿತ್ತು ಅದಕ್ಕೆ ಏನೋ ಸಮಸ್ಯೆ ಇದೆ ಎಂದು. ಆ ಮಗು ತಲೆಕೂದಲು ಕಿತ್ತುಕೊಂಡು,ಕೂದಲು ಇಲ್ಲದೆ ಕೆಲವು ಕಡೆ ಬುರುಡೆ ಕಾಣುತಿತ್ತು. ಭಯದ ನೋಟದಿಂದ ಸುತ್ತಲೂ ನೋಡುತಿತ್ತು. ಕೆಲವು ಪ್ರಶ್ನೋತ್ತರಗಳಿಗೆ ಅದರ ತಾಯಿಯನ್ನು ಅಲ್ಲೇ ಕುಳಿತು ಕೊಳ್ಳಲು ಹೇಳಿ ಮಗುವನ್ನು ತಂದೆ ಜೊತೆ ಹೊರಗಡೆ ಕಳುಹಿಸಿದೆವು.

ತಾಯಿ ಹೇಳಲು ಶುರು ಮಾಡಿದರು ನಾಲ್ಕೈದು ತಿಂಗಳಿಂದ ವಿಚಿತ್ರವಾಗಿ ಆಡುತಿದ್ದಾಳೆ, ಒಬ್ಬಳೇ ಕೂರುವುದು, ಅಳುವುದು, ಉಗುರು ಕಚ್ಚುವದು, ಕೂದಲು ಕಿತ್ತುಕೊಳ್ಳುವುದು, ಭಯ ಪಡುವುದು, ಶಾಲೆಗೆ ಹೋಗಲು ನಿರಾಕರಿಸುವುದು ಹೀಗೆ ಅದರ ವರ್ತನೆಯನ್ನು ಹೇಳತೊಡಗಿದರು.

ಮುಂಚೆ ತುಂಬಾ ಚೂಟಿಯಾಗಿದ್ದಳು, ಎಲ್ಲರೊಡನೆ ನಗು ನಗುತ್ತಾ ಆಡಿಕೊಂಡಿದ್ದಳು, ನಮಗೆ ಮತ್ತೊಂದು ಗಂಡು ಮಗುವಾಯಿತು. ನಂತರವೂ ಅವಳನ್ನು ಸಹ ಚೆನ್ನಾಗಿಯೇ ನೋಡಿಕೊಂಡೆವು ಆದರೆ ಗಂಡು ಮಗು ಸತ್ತು ಹೋಯಿತು. ನಂತರ ಅವಳ ವರ್ತನೆ ನಿಜಕ್ಕೂ ನಮಗೆ ಗಾಬರಿ ಹಾಗು ಬೇಸರ ತಂದಿದೆ, ಮುಂದೆ ಅವಳ ಭವಿಷ್ಯ ನೆನೆಸಿಕೊಂಡರೇ ಭಯವಾಯುಗುತ್ತದೆ ಎಂದು ಹೇಳಿ ಅಳುತ್ತಾ ಕುಳಿತರು.

ಸಮಯ ಆಗಿದ್ದರಿಂದ ಅವರು ಹೊರಡಬೇಕಾಗಿತ್ತು, ಎರಡು ದಿನ ಆದಮೇಲೆ ಬರಲು ತಿಳಿಸಿದೆವು. ಎರಡು ದಿನಗಳವರೆಗೆ ಏನಾಗಿರಬಹುದೆಂದು ನಾವು ಸಹ ಮಾತುಕತೆ ನಡೆಸಿದೆವು. ಎರಡು ದಿನದ ನಂತರ ಮತ್ತೆ ಆ ಕುಟುಂಬ ಸಮಾಲೋಚನೆಗೆ ಬಂದಾಗ ಪ್ರಶ್ನೋತ್ತರಗಳು ನಡೆದವು. ಮಗುವಿನ ತಂದೆಯನ್ನು ಪ್ರತ್ಯೇಕವಾಗಿ ಕರೆದು ವಿಚಾರಿಸಿದಾಗ ಅವರೂ ಸಹ ಅವರ ಹೆಂಡತಿ ಹೇಳಿದಂತೆ ಹೇಳಿದರು. ನಂತರ ಮಗುವನ್ನು ಪ್ರತ್ಯೇಕವಾಗಿ ಮಾತನಾಡಿಸಲು ಕೇಳಿದಾಗ ಆ ಮಗು ಮೊದಮೊದಲು ಭಯದಿಂದ ಕುಳಿತಿತ್ತು. ಅದಕ್ಕೆ ರಮಿಸಿ ಭಯಪಡಬೇಡ ಇಲ್ಲಿ ಯಾರೂ ಬಯ್ಯಲ್ಲ ಹೊಡಿಯಲ್ಲ ಏನು ಹೇಳು ಎಂದು ಕೇಳಿದಾಗ…..

ಆ ಹೆಣ್ಣು ಮಗು ನಮ್ಮ ಮನೆಗೆ ತಮ್ಮ ಬಂದಿದ್ದು ನನಗೆ ಇಷ್ಟ ಆಗಲಿಲ್ಲ. ನನಗೆ ಅಪ್ಪ ಅಮ್ಮ ತುಂಬಾ ಪ್ರೀತಿ ಮಾಡುತಿದ್ದರು ಆದರೆ ತಮ್ಮ ಹುಟ್ಟಿದ ಮೇಲೆ ನನ್ನ ಗಮನಿಸುವುದು ಕಡಿಮೆಯಾಯಿತು. ಅಮ್ಮ ಸದಾ ಮಗುವಿನ ಬಳಿಯೇ ಇರುತಿದ್ದರು. ನಾನು ಶಾಲೆಯಿಂದ ಮನೆಗೆ ಬರುವುದರೊಳಗೆ ನನ್ನ ತಮ್ಮ ಸತ್ತು ಹೋಗಿರಬೇಕು ಎಂದು ದಿನಾ ಇದೇ ರೀತಿ ಯೋಚಿಸುತಿದ್ದೆ, ಒಂದು ತಿಂಗಳ ನಂತರ ಎಂದಿನಂತೆ ಶಾಲೆಯಿಂದ ಮನೆಗೆ ಹಿಂತಿರುಗಿದಾಗ ನನ್ನ ತಮ್ಮ ಸತ್ತು ಹೋಗಿತ್ತು. ನನಗೆ ಭಯ ಶುರು ಆಯಿತು ನನ್ನಿಂದ ತಮ್ಮ ಸತ್ತು ಹೋದ ಎಂದು ಹೇಳಿ ಭಯದಿಂದ ಅಳುತ್ತಾ ಕುಳಿತಳು.

ನಾವು ಆದಷ್ಟು ಆ ಮಗುವಿಗೆ ಸಮಾಧಾನ ಹೇಳಿ ನಿನ್ನಿಂದ ಅಲ್ಲ. ಮಗುವಿಗೆ ಹುಷಾರಿರಲಿಲ್ಲ. ಹಾಗಾಗಿ ಸತ್ತು ಹೋಯಿತು, ನೀನು ಹಾಗೆ ಭಯಪಡಬಾರದು ಜಾಣೆ ಮಗು ನೀನು ಎಂದು ಹುರಿದುಂಬಿಸಿ ಕಳಿಸಿದೆವು.

ಮರುದಿನ ಮತ್ತೆ ಆ ದಂಪತಿಗಳನ್ನು ಕರೆಸಿ ಈ ಕೇಸನ್ನು ನಾವು ತತ್ಸಂಬಂಧವಾದ ತಜ್ಞರ ಬಳಿ ಹೋಗಲು ತಿಳಿಸಿದೆವು. ಅಲ್ಲಿ ಅವರು ಕೌನ್ಸಲಿಂಗ್ ಕೊಡುವಷ್ಟು ಪ್ರೌಢಿಮೆ ಆ ಮಗುವಿಗೆ ಇಲ್ಲದಿರುವುದರಿಂದ ಅದರ ತಂದೆ-ತಾಯಿಗೆ ಕರೆದು ಮಗುವನ್ನು ಆದಷ್ಟು ಸಂತೋಷದಿಂದ ಇಡಲು ಪ್ರಯತ್ನಿಸಬೇಕು ಮತ್ತು ನೀನು ಮಾಡಿದ್ದು ತಪ್ಪಲ್ಲ ಆ ಮಗು ಒಂದು ಕಾಯಿಲೆಯಿಂದ ಸತ್ತಿದ್ದು ನಿನ್ನದೇನು ಅದರಲ್ಲಿ ತಪ್ಪಿಲ್ಲ ಎಂದು ಅದಕ್ಕೆ ಮನದಟ್ಟಾಗುವಂತೆ ಅದರ ಪರವಾಗಿ ನಿಂತು ಹೇಳುತ್ತಿರಬೇಕು ಸದಾ ಖುಷಿಯಿಂದ ಇರುವಂತೆ ಮಗುವಿನ ಜೊತೆ ಆಟಗಳನ್ನು ಆಡುತ್ತಾ ಎಲ್ಲದಕ್ಕೂ ಹಿಂದಿನದು ಮರೆಯುವಂತೆ ಮಾಡಬೇಕು. ಹೊರಾಂಗಣ ಆಟಗಳಲ್ಲಿ ಪ್ರೋತ್ಸಾಹಕೊಟ್ಟು ಪ್ರಕೃತಿಯೊಂದಿಗಿನ ಒಡನಾಟದಲ್ಲಿ ಮಗು ಬೇಳೆಯತೊಡಗಿದಾಗ ಅದು ಕ್ರಮೇಣ ಆ ಘಟನೆ ಮರೆಯುತ್ತದೆ ಎಂದು ಹೇಳಿ ಕಳುಹಿಸಿದರು.

ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading