‘ನನ್ನ ದೇಹ’ ಕವನ – ಮೇಗರವಳ್ಳಿ ರಮೇಶ್

ನನ್ನದೇ ಆದ ಈ ದೇಹದ ಭಾಷೆ ನನಗೇ ಅರ್ಥವಾಗುವುದಿಲ್ಲ. ಯಾವ ಅಂಗಾಂಗಳೂ ನನ್ನ ಹಿಡಿತದಲ್ಲಿರುವುದಿಲ್ಲ!…ಮೇಗರವಳ್ಳಿ ರಮೇಶ್ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ನನ್ನ ಹುಟ್ಟಿನಿಂದಲೇ ನನ್ನದಾಗಿರುವ
ಈ ದೇಹವನ್ನು ನಾನು ಚೆನ್ನಾಗಿಯೇ ಅರಿತಿದ್ದೇನೆ ಅಂದುಕೊಂಡಿದ್ದೇನೆ
ಆದರೂ ಕೆಲವೊಮ್ಮೆ, ಉದಾಹರಣೆಗೆ
ಯಾರಾದರೂ ಸುಂದರ ಸ್ತ್ರೀ ನನ್ನ ಸ್ಪರ್ಷಿಸಿದಾಗ ಇದ್ದಕಿದ್ದಂತೆ
ನನ್ನ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುತ್ತದೆ
ನನ್ನ ಹೃದಯದ ವೀಣೆ ಝೇಂಕರಿಸ ತೊಡಗುತ್ತದೆ
ನನ್ನದೇ ಆದ ಈ ದೇಹದ ಭಾಷೆ ನನಗೇ ಅರ್ಥವಾಗುವುದಿಲ್ಲ.

ಕೆಲವೊಮ್ಮೆ ಅದು ಮಾತಾಡುತ್ತದೆ ತನ್ನದೇ ಭಾಷೆಯಲ್ಲಿ
ಆಗ ನನ್ನ ದೇಹ ನನ್ನದಾಗಿರುವುದಿಲ್ಲ.
ನನ್ನದೇ ಆದಈ ಕೈಗಳು ನನ್ನದಾಗಿರುವುದಿಲ್ಲ
ನನ್ನದೇ ಆದ ಈ ಕಾಲುಗಳು ನನ್ನದಾಗಿರುವುದಿಲ್ಲ
ನನ್ನದೇ ಆದ ತುಟಿಗಳು ನನ್ನದಾಗಿರುವುದಿಲ್ಲ
ನನ್ನದೇಆದ ಕಣ್ಣುಗಳು ನನ್ನದಾಗಿರುವುದಿಲ್ಲ
ಯಾವ ಅಂಗಾಂಗಳೂ ನನ್ನ ಹಿಡಿತದಲ್ಲಿರುವುದಿಲ್ಲ!

ಯಾಕೆ ಹೀಗೆ ನನ್ನ ಆದೇಶವಿಲ್ಲದೇ
ನನ್ನ ಹೃದಯದ ವೀಣೆ ಝೇಂಕರಿಸುವುದು
ನನ್ನ ನರನಾಡಿಗಳಲ್ಲಿ ವಿದ್ಯುತ್ ಪ್ರವಹಿಸುವುದು?
ನನ್ನ ಪ್ರಿಯತಮೆಯ ಸ್ಪರ್ಷ ಎಬ್ಬಿಸುವುದು ನನ್ನನ್ನು
ನನ್ನ ಬಾಲ್ಯದ ನಿದ್ದೆಯಿಂದ
ನನ್ನೊಳಗಿನ ಕಡಲು ಭೊರ್ಗರೆಯುವುದು ಉಬ್ಬರದಿಂದ
ನನ್ನ ರಕ್ತ ಮಾಂಸಗಳಲ್ಲಿ ತುಂಬುವುದು
ಅವಳ ಸುಗಂಧ.

ಯಾರು ಹೀಗೆ ನನ್ನ ದೇಹವನ್ನು
ನನ್ನಿಂದ ಬೇರ್ಪಡಿಸಿ ಆಡಿಸುವವರು?
ಯಾರು ಈ ಪ್ರಶಾಂತ ಸಂಜೆ
ತುಂಗೆಯೊಡಲಿನ ರಾಮ ಮಂಟಪದಲ್ಲಿ ಕುಳಿತ
ನನ್ನನ್ನು ಸಂಪೂರ್ಣವಾಗಿ ಆವರಿಸುವವರು?
ಯಾರು ಹೀಗೆ ಹಾರುವ ಬೆಳ್ಳಕ್ಕಿಗಳ ಮೇಲೆ ಕೂರಿಸಿ
ದೂರ ದೂರಕ್ಕೆ ಹಾರಿಸುವವರು?


  • ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading